ಇಪ್ಪತ್ತರ ಹೂಡಿಕೆ ತುಂಬಿಸುವುದು ಅರವತ್ತರಲ್ಲಿ ಕುಡಿಕೆ!

ಹಣಕ್ಲಾಸು-262

-ರಂಗಸ್ವಾಮಿ ಮೂಕನಹಳ್ಳಿ 

Published: 03rd June 2021 12:09 AM  |   Last Updated: 03rd June 2021 12:09 AM   |  A+A-


Investment (file pic)

ಉಳಿಕೆ (ಸಂಗ್ರಹ ಚಿತ್ರ)

Posted By : Srinivas Rao BV
Source : Online Desk

ಶಾಲೆ, ಕಾಲೇಜು ದಿನಗಳಲ್ಲಿ ಪೋಷಕರು ಖರ್ಚಿಗೆಂದು ಕೊಡುವ ಸಣ್ಣ ಹಣದಲ್ಲಿ, ಆಗೊಮ್ಮೆ-ಈಗೊಮ್ಮೆ ಕಾಲೇಜು ತಪ್ಪಿಸಿ ಸಿನೆಮಾ ನೋಡುವುದು, ಇಷ್ಟವಾದ ಹೋಟೆಲ್ನಲ್ಲಿ ಬೇಕೆನಿಸಿದ ತಿಂಡಿ ತಿನ್ನುವುದು ಬಿಟ್ಟು ಬೇರೇನೂ ಮಾಡಲಾಗದು. ಸ್ವಲ್ಪ ಹೆಚ್ಚು ಹಣವನ್ನ ತರುವ ಹುಡುಗನಿಗೆ ಹೆಚ್ಚು ಸ್ನೇಹಿತರು. ಆ ದಿನಗಳೇ ಹಾಗೆ, ಮುಂದಿನ ಬದುಕಿನಲ್ಲಿ ಅದನ್ನ ನೆನೆಸಿಕೊಂಡಾಗೆಲ್ಲಾ ಮನಸ್ಸಿಗೆ ಮುದ ನೀಡುವ ಇಂತಹ ಘಟನೆಗಳನ್ನ ಕಟ್ಟಿಕೊಳ್ಳಬೇಕು. ಕೊನೆತನಕ ನಮ್ಮ ಮಸ್ತಕದಲ್ಲಿ ಉಳಿಯುವುದು ಹೆಚ್ಚು ದುಡ್ಡಿಲ್ಲದೆ ಸಣ್ಣ ವಿಷಯದಲ್ಲಿ ಖುಷಿಕಂಡ ವಿಷಯಗಳು ಮಾತ್ರ. ಇಲ್ಲಿಯ ತನಕ ಎಲ್ಲವೂ ಸರಿಯೇ, ಆದರೆ ಕಾಲೇಜು ದಾಟಿ, ಕ್ಯಾಂಪಸ್ ನಲ್ಲಿ ನೌಕರಿ ಗಿಟ್ಟಿಸಿಕೊಳ್ಳುವ ಬಹಳಷ್ಟು ಮಕ್ಕಳು ನಂತರದ ದಿನಗಳ ಮೇಲೆ ಹಿಡಿತ ಹೊಂದದೆ ಇರುವುದು ಮುಂದಿನ ಆರ್ಥಿಕ ಭವಿಷ್ಯವನ್ನ ಮಂಕಾಗಿಸುತ್ತವೆ.

ಶಾಲೆ, ಕಾಲೇಜು ದಿನಗಳಲ್ಲಿ ಅನುಭವಿಸಲಾಗದ ಎಷ್ಟೋ ಕನಸುಗಳನ್ನ ಜೀವಿಸಲು ಶುರು ಮಾಡುತ್ತಾರೆ. ಕೈಗೆ ಸಂಬಳ ಬರುತ್ತಿರುತ್ತದೆ, ಇದರ ಜೊತೆಗೆ ಅಪ್ಪ ಅಮ್ಮ ಆರ್ಥಿಕವಾಗಿ ಒಂದಷ್ಟು ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿದ್ದು, ಮಕ್ಕಳ ಹಣವನ್ನ ಕೇಳದಿದ್ದರೆ ಮುಗಿಯಿತು. ಆ ವಯಸ್ಸೇ ಅಂತಹದು, ಅದಕ್ಕೆ ನಾಳಿನ ಚಿಂತೆ ಇರುವುದಿಲ್ಲ. ಇವುಗಳ ಜೊತೆಗೆ ಇತ್ತೀಚಿಗೆ ಹೆಚ್ಚಾಗುತ್ತಿರುವ ಫಿಲಾಸಫಿ 'ಇರುವುದೊಂದು ಬದುಕು, ಅದನ್ನ ಇಚ್ಛೆ ಬಂದಂತೆ ಬದುಕ ಬೇಕು' ಎನ್ನುವುದು. ಬದುಕಿನಲ್ಲಿ ಒಂದು ಹಂತದ ನಂತರ ಈ ಫಿಲಾಸಫಿ ಓಕೆ ಆದರೆ ಬೆಳೆಯುವ ಹಂತದಲ್ಲಿ ಇವುಗಳು ಅಷ್ಟು ಸರಿಯಲ್ಲ ಎಂದೇ ನನ್ನ ಭಾವನೆ, ಇರಲಿ.

ಒಟ್ಟಿನಲ್ಲಿ ಜೀವನವನ್ನ ಆದಷ್ಟೂ ಬದುಕಿಬಿಡಬೇಕು ಎನ್ನುವ ಧಾವಂತಕ್ಕೆ ಇಂದಿನ 'ಹೊಸ ತಲೆಮಾರಿನ' ಮಕ್ಕಳು ಬಿದ್ದಿವೆ. ತಿನ್ನು, ಕುಣಿ, ಸುತ್ತಾಡು... ಇಂದಷ್ಟೇ ನಮ್ಮದು, ನಾಳೆಯ ಕಂಡವರಾರು? ಎನ್ನುವ ಸಿದ್ಧಾಂತದ ಕೂಸುಗಳಿಗೆ ಸತ್ಯದ ದರ್ಶನ ಆಗುವುದು ಮದುವೆಯ ನಂತರ, ಒಂದರ ಹಿಂದೆ ಒಂದು ಜವಾಬ್ದಾರಿಗಳು ಬಂದು ಹೆಗಲನ್ನ ಏರತೊಡಗುತ್ತವೆ. ಒತ್ತಡ ಸಂಗ್ರಹವಾಗುತ್ತಾ ಹೋದಂತೆಲ್ಲಾ ಖಾಯಿಲೆಗಳು ಕೂಡ ಜೊತೆಯಾಗುತ್ತವೆ, ಅನುವಂಶೀಯತೆ ಕೂಡ ಒಂದಷ್ಟು ದೇಣಿಗೆಯನ್ನ ನೀಡುತ್ತದೆ. ನಲವತ್ತು, ಐವತ್ತರ ವೇಳೆಗೆ ಮುಂದಿನ ಸಾವಾಲುಗಳನ್ನ ನೆನೆದು ಬದುಕೇ ಬೇಡ ಎನ್ನುವ ಸ್ಥಿತಿಗೆ ಮನುಷ್ಯ ತಲುಪುತ್ತಾನೆ. ಎಲ್ಲವನ್ನ ಅಲ್ಲದಿದ್ದರೂ ಒಂದಷ್ಟು ಸಮಸ್ಯೆಗಳನ್ನ ಇಪ್ಪತ್ತರ ಹರೆಯದಲ್ಲೇ ಗಳಿಕೆಯ ಜೊತೆಗೆ ಉಳಿಕೆ ಮತ್ತು ಹೂಡಿಕೆಯ ಬಗ್ಗೆ ಕೂಡ ಗಮನ ನೀಡುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದಿತ್ತು. ನೆನಪಿರಲಿ ಇಪ್ಪತ್ತರಲ್ಲಿ ಹೂಡಿಕೆ ಶುರು ಮಾಡಿದರೆ ಹೆಚ್ಚು ಸಂಪತ್ತು ಸೃಷ್ಟಿಸಿಕೊಳ್ಳಬಹುದು.

ಹೀಗೆ ಗಳಿಕೆಯ ಜೀವನದ ಪ್ರಾಥಮಿಕ ಹಂತದಲ್ಲಿ ಉಳಿಸುವುದು, ಹೂಡಿಕೆ ಮಾಡುವುದರ ಬಹು ಮುಖ್ಯ ಪ್ರಯೋಜನಗಳನ್ನ ಪಟ್ಟಿ ಮಾಡೋಣ.

  1. ಜಗತ್ತಿನ ಎಲ್ಲಾ ವೇಳೆಯೂ ನಿಮ್ಮ ಬಳಿಯಿದೆ: ಇಪ್ಪತ್ತರ ಆಜುಬಾಜಿನ ಹುಡುಗ/ಹುಡುಗಿ ಹತ್ತು ಸಾವಿರ ರೂಪಾಯಿಯನ್ನ ಹೂಡಿಕೆ ಮಾಡಿದ್ದರೆ ಮತ್ತು ವಾರ್ಷಿಕ ಅತ್ಯಂತ ಕಡಿಮೆ ಗಳಿಕೆಯನ್ನ ಅಂದರೆ 5 ಪ್ರತಿಶತದಂತೆ ಗಳಿಸಿದರೂ 60 ರ ವಯಸ್ಸಿಗೆ ಅದು ಎಪ್ಪತ್ತು ಸಾವಿರವಾಗಿರುತ್ತದೆ. ಇದೆ ಹೂಡಿಕೆಯನ್ನ 3೦ ರ ಹರಯದಲ್ಲಿ ಮಾಡಿದರೆ 6೦ ನೇ ವಯಸ್ಸಿಗೆ 43 ಸಾವಿರದ ಆಸುಪಾಸು ಸಿಗುತ್ತದೆ, ಕೆಲವರು 4೦ ರ ಹರಯದಲ್ಲಿ ಇದೆ ಹೂಡಿಕೆಯನ್ನ ಮಾಡುತ್ತಾರೆ, ಅಂತಹವರಿಗೆ 6೦ ನೇ ವಯಸ್ಸಿನಲ್ಲಿ ಸಿಕ್ಕುವುದು ಕೇವಲ 26 ಸಾವಿರ ರೂಪಾಯಿ ಮಾತ್ರ. ಇದು ಚಕ್ರಬಡ್ಡಿಯ ಮ್ಯಾಜಿಕ್ ಅಥವಾ ಮಹತ್ವ. ಬೇಗ ಶುರು ಮಾಡುವುದರಿಂದ ಜೀವನದ ಸಂಧ್ಯೆಗೆ ಬೇಕಾದ ಹಣವನ್ನ ನೀವು ಶೇಖರಿಸಿಡಬಹುದು. ಇಪ್ಪತರಲ್ಲಿ ಇರುವ ನಿಮ್ಮ ಉಳಿಸುವ ಸಾಮರ್ಥ್ಯ 3೦ ರಲ್ಲಿ ಕುಸಿತ ಕಾಣುತ್ತದೆ, 4೦ ಕ್ಕೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿರುತ್ತದೆ. ಹೀಗಾಗಿ ಕೆಲಸಕ್ಕೆ ಸೇರಿದ ಆರಂಭದಲ್ಲಿ ಉಳಿಕೆ-ಹೂಡಿಕೆ ಶುರು ಮಾಡಬೇಕು. ಇಲ್ಲಿ ಇಪ್ಪತ್ತು ಎನ್ನುವುದು ಸಾಂಕೇತಿಕ, ಅದನ್ನ ಕೆಲಸಕ್ಕೆ ಸೇರಿದ ಪ್ರಥಮ ದಿನದಿಂದ ಎಂದು ಓದಿಕೊಳ್ಳಿ. ಹಣವೂ ಕೂಡ ಅಷ್ಟೇ, ಇದರ ಆಧಾರದ ಮೇಲೆ ನಿಮ್ಮಿಷ್ಟದ ಮೊತ್ತಕ್ಕೆ ಲೆಕ್ಕಹಾಕಿಕೊಳ್ಳಿ.
  2. ಹೆಚ್ಚು ಅಪಾಯ ತೆಗೆದುಕೊಳ್ಳುವ ಕ್ಷಮತೆ ನಿಮ್ಮಲ್ಲಿರುತ್ತದೆ: ನೀವು ಒಂಟಿಯಾಗಿದ್ದಾಗ ಸಿನೆಮಾಗೆ ಹೋಗಬೇಕು ಎನ್ನುವ ಒಂದು ಸಣ್ಣ ಬಯಕೆಯಿಂದ ಹಿಡಿದು ಎಲ್ಲವನ್ನೂ ತಕ್ಷಣ ಕಾರ್ಯರೂಪಕ್ಕೆ ತರಬಹುದು. ಇದೆ ಮಾತನ್ನ ಮದುವೆ ಮತ್ತು ಮಕ್ಕಳು ಆದ ನಂತರ ಹೇಳಲಾಗುವುದಿಲ್ಲ. ಸಣ್ಣ ನಿರ್ಧಾರಕ್ಕೂ ಹತ್ತು ಬಾರಿ ಯೋಚಿಸಬೇಕಾಗುವ ಮಟ್ಟಕ್ಕೆ ಬದುಕು ಬದಲಾಗಿ ಹೋಗಿರುತ್ತದೆ. ಇದು ಕೇವಲ ಕುಟುಂಬದ ನಿರ್ಧಾರಕ್ಕೆ ಸೀಮಿತವಲ್ಲ, ಹೂಡಿಕೆಯ ನಿರ್ಧಾರಕ್ಕೂ ಇದು ಅನ್ವಯವಾಗುತ್ತದೆ. ಹೆಚ್ಚು ರಿಸ್ಕ್ ಅಥವಾ ಅಪಾಯವಿರುವ ಹೂಡಿಕೆಯ ಮೇಲೆ ನೀವು ಹಣವನ್ನ ಸಣ್ಣ ವಯಸ್ಸಿನಲ್ಲಿ ಮಾಡಬಹುದು, ಈ ಸಮಯದಲ್ಲಿ ಹೆಚ್ಚಿನ ಜವಾಬ್ದಾರಿ ಇರದಿರುವುದು ಮತ್ತು ಮನಸ್ಸಿನಲ್ಲಿ ಹೆಚ್ಚಾಗಿರುವ 'ಜೋಷ್' ಇದಕ್ಕೆ ಕಾರಣ. ಕೌಟುಂಬಿಕ ಜವಾಬ್ದಾರಿ ಹೆಚ್ಚಾದಂತೆಲ್ಲ ಮನುಷ್ಯ 'ರಿಸ್ಕ್' ತೆಗೆದುಕೊಳ್ಳುವುದನ್ನ ಬಿಟ್ಟೇ ಬಿಡುತ್ತಾನೆ. ಅಲ್ಲೇನಿದ್ದರೂ ಕುಟುಂಬದ ರಕ್ಷಣೆ, ಪೋಷಣೆ ಮಾತ್ರ ಪ್ರಾಮುಖ್ಯತೆ ವಹಿಸುತ್ತದೆ. ಹೀಗಾಗಿ ಕೆಲಸಕ್ಕೆ ಸೇರಿದ ಪ್ರಥಮ ನಾಲ್ಕೈದು ವರ್ಷ 'ವೆಲ್ತ್ ಕ್ರಿಯೇಷನ್' ಬಗ್ಗೆ ಗಮನ ನೀಡುವುದು, ಮುಂದಿನ ಬದುಕಿನ ದೃಢತೆಗೆ ರಹದಾರಿ.
  3. ಕಲಿಯುವ ಉತ್ಸಾಹ ಇನ್ನೂ ಉಳಿದಿಕೊಂಡಿರುತ್ತದೆ: ಗಮನಿಸಿ ನನ್ನೆಲ್ಲಾ ಲೇಖನದಲ್ಲೂ ಒಂದು ಸಾಮಾನ್ಯ ವಿಷಯವನ್ನ ನಾನು ಹೇಳುತ್ತಾ ಬಂದಿದ್ದೇನೆ. ಯಾರೇ ಸಲಹೆ ನೀಡಲಿ ಅದನ್ನ ಸ್ವೀಕರಿಸಿ. ಕೊನೆಗೆ ಅದನ್ನ ಪರಿಶೀಲಿಸಿ ಹೂಡಿಕೆಯ ನಿರ್ಧಾರ ಮಾತ್ರ ನಿಮ್ಮದಾಗಿರಲಿ ಎನ್ನುವುದು ಆ ಮಾತು. ಕಾಲೇಜಿನಿಂದ ಹೊರಬಂದು ಕೆಲಸಕ್ಕೆ ಸೇರಿದ ಹುಡುಗ/ಹುಡುಗಿಯರಲ್ಲಿ ಇನ್ನು ಕಲಿಕೆಯ ಕಿಚ್ಚು ಆರಿರುವುದಿಲ್ಲ. ವಿತ್ತ ಜಗತ್ತಿನ ಆಗು-ಹೋಗುಗಳನ್ನ ಒಂದಷ್ಟು ಅಧ್ಯಯನ ಮಾಡಿ, ಸರಿಯಾದ ಹೂಡಿಕೆ ಮಾಡಿದರೆ ಸಾಕಷ್ಟು ಸಂಪತ್ತು ಸೃಷ್ಟಿಸಿಕೊಳ್ಳಬಹುದು. ಕಾಲೇಜಿನಿಂದ ಹೊರಬಂದು ಐದಾರು ವರ್ಷ ಕಲಿಕೆಯಿಂದ ದೂರವಾದವರು ಅಥವಾ ಮತ್ತೆ ಕಲಿಕೆಯಲ್ಲಿ ಇಚ್ಛೆ ಇಲ್ಲದವರು ಹೆಚ್ಚಿನ ಬದಲಾವಣೆ ಇಲ್ಲದ ನೀರವ ಜೀವನವನ್ನ ನಡೆಸಲು ಸಿದ್ಧರಿರಬೇಕು. ಇವತ್ತಿನ ಜಗತ್ತು ಶೀಘ್ರ ಗತಿಯಲ್ಲಿ ಬದಲಾವಣೆಯನ್ನ ಕಾಣುತ್ತಿದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಂಡವರು ಮಾತ್ರ ಮೇಲ್ಮಟ್ಟಕ್ಕೆ ಏರಬಹುದು. ಸದಾ ಕಲಿಕೆಯ ಮನಸ್ಥಿತಿ ಹೊಂದಿರುವುದು ಬಹಳ ಮುಖ್ಯ. ಹೀಗಾಗಿ ಕಾಲೇಜು ಮುಗಿದ ತಕ್ಷಣ ಕೆಲಸ ಸಿಕ್ಕಿತು, ಇನ್ನು ಓದುವ ಕಷ್ಟವಿಲ್ಲ ಎನ್ನುವ ಮನೋಭಾವ ಮುಳ್ಳಾದೀತು ಎಚ್ಚರ. ಇಂದಿನ ಜಗತ್ತಿನಲ್ಲಿ ಬಲಿಷ್ಠವಾದವುಗಳ ಉಳಿವು ಎನ್ನುವ ಮಾತಿನ ಜೊತೆಗೆ ವೇಗವಾಗಿ ಪರಿಸ್ಥಿತಿಗೆ ಅಡಾಪ್ಟ್ ಆಗುವುದು ಕೂಡ ಅಷ್ಟೇ ಮುಖ್ಯ.
  4. ತಂತ್ರಜ್ಞಾನದ ಅರಿವು ಹೆಚ್ಚಿನ ಬಲವನ್ನ ನೀಡುತ್ತದೆ: ಇವತ್ತಿನ ಹುಡುಗ/ಹುಡುಗಿಯರಿಗೆ ಇರುವ ಅತ್ಯಂತ ದೊಡ್ಡ ಲಾಭ ತಂತ್ರಜ್ಞಾನ. ಇದನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಇದು ಪೂರಕ, ಇಲ್ಲವೇ ಮಾರಕ. ಹಿಂದೆ ಷೇರು ಖರೀದಿ ಅಥವಾ ಅವುಗಳ ಬಗ್ಗೆ ಮಾಹಿತಿ ಇತ್ಯಾದಿಗಳನ್ನ ಪಡೆಯುವುದು ಬಹಳ ಕಷ್ಟದ ಕೆಲಸವಾಗಿತ್ತು. ಮಾಡುವ ಕೆಲಸದ ಮಧ್ಯೆ ಇವುಗಳಿಗೆ ಸಮಯ ಮೀಸಲಿಡುವುದು ಕಷ್ಟವಾಗಿತ್ತು. ಈಗಿನ ಯುವಜನತೆಗೆ ಈ ಟೆಕ್ನಾಲಜಿ ನೀರು ಕುಡಿದಷ್ಟು ಸುಲಭ. ಷೇರು ಅಥವಾ ಷೇರು ಮಾರುಕಟ್ಟೆಯ ಬಗೆಗಿನ ಎಲ್ಲಾ ಮಾಹಿತಿಗಳನ್ನ ಕೆಲಸದ ಮಧ್ಯದ ಕಾಫಿ ಅಥವಾ ತಿಂಡಿ ಬ್ರೇಕ್ ನಲ್ಲಿ ಪಡೆದುಕೊಳ್ಳಬಹುದು. ಮುಖ್ಯವಾಗಿ ಸಮಯವನ್ನ ಹೇಗೆ ಉಪಯೋಗಿಸಿಕೊಳ್ಳುವಿರಿ ಎನ್ನುವುದು ಮುಖ್ಯ. ಕಲಿಕೆ ಮತ್ತು ಹೂಡಿಕೆಗೆ ಸಮಯವನ್ನ ನೀಡಿದರೆ ಬದುಕು ಹಸನಾಗುತ್ತದೆ. ಅದೇ ಸಮಯವನ್ನ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ ನಲ್ಲಿ ಕೂಡ ಕಳೆದು ವ್ಯಯ ಮಾಡಬಹುದು. ಆಯ್ಕೆ ನಿಮ್ಮದು.
  5. ಸಣ್ಣ ಗೆಲುವು ಹೆಚ್ಚಿನ ಸಾಧನೆಗೆ ಅಡಿಪಾಯ: ಚಿಕ್ಕ ವಯಸ್ಸಿನಲ್ಲಿ ಒಂದಷ್ಟು ಸಂಪತ್ತು ಸೃಷ್ಟಿ ಮಾಡಿಕೊಂಡರೆ ಅದು ಆತ್ಮವಿಶ್ವಾಸವನ್ನ ದ್ವಿಗುಣಗೊಳಿಸುತ್ತದೆ. ಆ ಮಾರ್ಗದಲ್ಲಿ ಆಗಲೇ ಸಾಕಷ್ಟು ಎತ್ತರವನ್ನ ಏರಿರುವ ವ್ಯಕ್ತಿಗಳು ಕಾಣಲು ಶುರುವಾಗುತ್ತದೆ. ಅಯ್ಯೋ ನನ್ನ ಸಾಧನೆ ಏನೂ ಅಲ್ಲ, ಮಾಡುವುದಕ್ಕೆ ಬಹಳಷ್ಟಿದೆ ಎನ್ನುವ ಮನೋಭಾವ ಬಂದರೆ ಅಲ್ಲಿಗೆ ಅರ್ಧ ಯುದ್ಧ ಗೆದ್ದಂತೆ! ಹೌದು ನಮಗಿಂತ ಮೇಲ್ಮಟ್ಟದ ವ್ಯಕ್ತಿಗಳನ್ನ ನೋಡಿ ನಾವು ಕರುಬಬೇಕಾಗಿಲ್ಲ ಅಥವಾ ಕೇವಲ ನಮಗಿಂತ ಕೆಳಗಿರುವರನ್ನ ನೋಡಿ ನಾವೇನೋ ಸಾಧನೆ ಮಾಡಿದ್ದೇವೆ ಎಂದು ಬೀಗಬೇಕಿಲ್ಲ. ನಮ್ಮ ಮಾರ್ಗದಲ್ಲಿ ನಾವು ಸ್ಥಿರವಾಗಿ ನಡೆಯುತ್ತಾ ಹೋದರೆ ಸಾಕು ನಾವಂದುಕೊಂಡ ತಾಣವನ್ನ ಕಷ್ಟವಿಲ್ಲದೆ ತಲುಪಬಹುದು.
  6. ಉತ್ತಮ ಹಣಕಾಸು ಅಭ್ಯಾಸಗಳನ್ನ ಜೀವನದ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಕಲಿಯಲಾಗದು: ಜಗತ್ತಿನಲ್ಲಿ ಎಷ್ಟೇ ಒಳ್ಳೆಯದಿದ್ದರೂ ಅದನ್ನ ನಮ್ಮದಾಗಿಸಿಕೊಳ್ಳಲು ವಯಸ್ಸು ಕೂಡ ನಮ್ಮ ಜೊತೆಗಿರಬೇಕು. ಈ ಮಾತಿಗೆ ವಿನಾಯತಿ ಇಲ್ಲವೆಂದಲ್ಲ, ಆದರೆ ಬದುಕಿನ ಪ್ರಾಥಮಿಕ ಹಂತದಲ್ಲಿ ಒಳ್ಳೆಯ ಅಥವಾ ಕೆಟ್ಟ ಯಾವುದೇ ಅಭ್ಯಾಸವಿರಲಿ ಬಹಳ ಬೇಗ ಅದು ಜೀವನ ಶೈಲಿಯಾಗಿ ಬದಲಾಗುತ್ತದೆ. ಹೀಗಾಗಿ ಮೇಲೆ ಹೇಳಿದ ಎಲ್ಲಾ ಉತ್ತಮ ಅಭ್ಯಾಸಗಳನ್ನ ಜೀವನದ ಭಾಗವಾಗಿ ಮಾಡಿಕೊಳ್ಳುವುದಕ್ಕೆ ಕೂಡ ಕೆಲಸಕ್ಕೆ ಸೇರಿದ ತಕ್ಷಣದ ದಿನಗಳು ಪ್ರಶಸ್ತವಾಗಿವೆ.

ಕೊನೆಮಾತು: ಜೀವನ ಇರುವುದು ಮೂರು ದಿನ, ಇದರ ಜೊತೆಗೆ ಇಂದಿನ ದಿನದಲ್ಲಿ ಎಷ್ಟೊಂದು ಅನಿಶ್ಚಿತತೆ ತುಂಬಿದೆ. ಇವುಗಳ ಮಧ್ಯೆ ನಮಗೇನೂ ಆಗದೆ ಬದುಕಿದ್ದರೂ ನಲವತ್ತರ ಆಜುಬಾಜಿನಲ್ಲಿ ಬಿಪಿ, ಶುಗರ್ ತಪ್ಪಿಸಲಾದೀತೆ? ನೀವು ಹೇಳಿದಂತೆ ಚಿಕ್ಕ ವಯಸ್ಸಿನಲ್ಲಿ ಕೂಡ ಮೋಜು, ಮಜಾ ಮಾಡದೆ, ಕಾಣದ ನಾಳೆಗೆ ಅಷ್ಟೊಂದು ಕೂಡಿಡುವ ಅವಶ್ಯಕತೆಯೇನು? ಎನ್ನುವ ಪ್ರಶ್ನೆ ಬಹಳ ಜನ ಓದುಗರ ಮನಸ್ಸಿನಲ್ಲಿ ಮೂಡಿರಲಿಕ್ಕೆ ಸಾಕು. ಹೌದು ನಿಮ್ಮ ಮಾತನ್ನ ಪೂರ್ಣವಾಗಿ ಅಲ್ಲಗಳೆಯುವುದಿಲ್ಲ. ಪೂರ್ಣವಾಗಿ ದುಡಿದ ಹಣವನ್ನ ಪೋಲು ಮಾಡುವುದು ಎಷ್ಟು ತಪ್ಪೋ, ಎಲ್ಲವನ್ನೂ ನಾಳೆಯ ಹೆಸರಿನಲ್ಲಿ ಕೂಡಿಡುವುದು ಕೂಡ ಅಷ್ಟೇ ತಪ್ಪು. ಮನುಷ್ಯ ಮೊದಲು ತಾನು ಖುಷಿಯನ್ನ ಕಂಡುಕೊಳ್ಳಬೇಕು. ಆತ ಖುಷಿಯಾಗಿರದೆ ತನ್ನ ಸುತ್ತಮುತ್ತಲಿನ ಇತರರನ್ನ ಹೇಗೆ ತಾನೇ ಖುಷಿಯಾಗಿಡಲು ಸಾಧ್ಯ?. ಸಂಬಳದ ಎಷ್ಟು ಪ್ರತಿಶತ ಉಳಿಸಬೇಕು ಎಂದು ನಾನು ಹೇಳುವುದಿಲ್ಲ, ಆದರೆ ನನ್ನದಲ್ಲ ಎಂದು ಒಂದಷ್ಟು ಹಣವನ್ನ ತೆಗೆದಿರಿಸಿ ಮಿಕ್ಕದ್ದು ಖರ್ಚು ಮಾಡುವುದು ಒಳಿತು. ಖರ್ಚು ಮಾಡಿ ಉಳಿದದ್ದು ಉಳಿಸುತ್ತೇನೆ ಎನ್ನುವುದು ಒಳ್ಳೆಯದಲ್ಲ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp