ಭಾರತದ ಆರ್ಥಿಕತೆಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿರುವ ಹಣದುಬ್ಬರ!

ಹಣಕ್ಲಾಸು-263

-ರಂಗಸ್ವಾಮಿ ಮೂಕನಹಳ್ಳಿ 

Published: 10th June 2021 12:00 AM  |   Last Updated: 09th June 2021 11:41 PM   |  A+A-


inflation

ಹಣದುಬ್ಬರ

Posted By : Srinivas Rao BV
Source : Online Desk

ಭಾರತದಂತಹ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶದಲ್ಲಿ ಏನೇ ಮಾಡಿದರೂ ಅದರಿಂದ ಲಾಭ ಪಡೆಯುವರ ಸಂಖ್ಯೆ ಮತ್ತು ನಷ್ಟ ಹೊಂದುವರ ಸಂಖ್ಯೆ ಕೂಡ ದೊಡ್ಡದಾಗೇ ಇರುತ್ತದೆ. 

ಸಮಾಜದ ಒಂದು ವರ್ಗ ಸರಕಾರದ ನಿರ್ಧಾರ ಯಾವುದೇ ಇರಲಿ ಅದರಿಂದ ತೊಂದರೆಗೆ ಒಳಾಗುತ್ತದೆ. ಇನ್ನೊಂದು ವರ್ಗ ಅದೇ ನಿರ್ಧಾರದಿಂದ ಖುಷಿ ಪಡುತ್ತದೆ. ದೇಶದ ಎಲ್ಲಾ ಜನತೆಗೂ ಏಕ ಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟ ಸಾಧ್ಯ. ಸದ್ಯಕ್ಕೆ ಇಳಿಮುಖವಾಗಿರುವ ಬ್ಯಾಂಕ್ ಇಂಟರೆಸ್ಟ್ ರೇಟ್ ಅದಕ್ಕೊಂದು ಅತ್ಯುತ್ತಮ ಉದಾಹರಣೆ. 2014ರಲ್ಲಿ ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಸಮಯದಲ್ಲಿ ಇದ್ದ ರೆಪೋ ರೇಟ್ 8 ಪ್ರತಿಶತ. ಅಂದಿನಿಂದ ರೆಪೋ ರೇಟ್ ಕುಸಿತ ಕಾಣಲು ಶುರುವಾಗಿ 4 ಪ್ರತಿಶತ ಕಂಡಿತು. ಹೀಗೆ ಬಡ್ಡಿ ದರ ಹೆಚ್ಚು ಕಡಿಮೆಯಾಗುವುದರಿಂದ ಏನಾಗುತ್ತದೆ? ಎನ್ನುವುದನ್ನ ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ಹೀಗೆ ಬಡ್ಡಿ ದರ ಹೆಚ್ಚು-ಕಡಿಮೆ ಯಾಗಲು ಕಾರಣವಾದ ಹಣದುಬ್ಬರ ಎಂದರೇನು ಮತ್ತು ರೆಪೋ ರೇಟ್ ಎಂದರೇನು ಎನ್ನುವುದನ್ನ ಕೂಡ ತಿಳಿದುಕೊಂಡರೆ ಬಡ್ಡಿ ದರದ ಏರುಪೇರಾಟದ ಲಾಭ ನಷ್ಟಗಳ ಅರಿಯಲು ಸಹಾಯಕವಾಗುತ್ತದೆ.

ಹಣದುಬ್ಬರ ಅಥವಾ ಜನ ಸಾಮಾನ್ಯನ ಭಾಷೆಯಲ್ಲಿ ಇನ್ಫ್ಲೇಶನ್ ಎಂದರೆ ವಸ್ತುವಿನ ಬೆಲೆಯಲ್ಲಿ ಸತತ ಏರಿಕೆ ಕಾಣುವುದು. ಅಂದರೆ ಉದಾಹರಣೆ ನೋಡಿ ವರ್ಷದ ಹಿಂದೆ ಒಂದು ಕೆಜಿ ಅಕ್ಕಿಯ ಬೆಲೆ ನಲವತ್ತು ರೂಪಾಯಿ ಆದರೆ ಅದೇ ಅಕ್ಕಿಯನ್ನ ಇಂದು ಕೊಳ್ಳಲು ಹೋದರೆ ನಲವತ್ತೈದು ರೂಪಾಯಿ. ಹೀಗೆ ವಸ್ತುವಿನ ಬೆಲೆ ಸಮಯದಿಂದ ಸಮಯಕ್ಕೆ ಏರುಗತಿ ಕಂಡರೆ ಅದನ್ನ ಹಣದುಬ್ಬರ ಎನ್ನುತ್ತೇವೆ. ಇದಕ್ಕೆ ವಿರುದ್ಧವಾಗಿ ವಸ್ತುವಿನ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಂಡರೆ ಅದನ್ನ ಡಿಫ್ಲೇಷನ್ ಎನ್ನುತ್ತೇವೆ. ಗಮನಿಸಿ ಬೆಲೆಯೇರಿಕೆ ಅಥವಾ ಇಳಿಕೆ ಎನ್ನುವುದು ಮನುಷ್ಯನ ದೇಹದಲ್ಲಿ ಸಕ್ಕರೆ ಅಂಶ ಇದ್ದಂತೆ. ಅತ್ಯಂತ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಇದನ್ನ ಒಂದು ಹಂತದಲ್ಲಿ ಹಿಡಿತದಲ್ಲಿ ಇಡುವ ಅವಶ್ಯಕತೆಯಿದೆ. ಹೀಗೆ ಸಮಾಜದಲ್ಲಿ ವಸ್ತುಗಳ ಬೆಲೆ ತೀರಾ ಏರುಪೇರಾಗದಂತೆ ತಡೆಯಲು ಆರ್ ಬಿಐ ಬಳಸುವ ಅಸ್ತ್ರ ರೆಪೋ ರೇಟ್. ಇದನ್ನ ನೀವು ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬಳಸುವ ಇನ್ಸುಲಿನ್ ಗೆ ಹೋಲಿಸಬಹುದು.

ರೆಪೋ ರೇಟ್ ಎಂದರೆ ಸೆಂಟ್ರಲ್ ಬ್ಯಾಂಕ್ ಅಂದರೆ ಆರ್ ಬಿ ಐ ತನ್ನ ಬಳಿಯಿರುವ ಹಣವನ್ನ ಇತರ ಬ್ಯಾಂಕ್ಗಳಿಗೆ ಸಾಲ ನೀಡುವಾಗ ಅವಕ್ಕೆ ವಿಧಿಸುವ ಬಡ್ಡಿ ದರ. ಗಮನಿಸಿ ಇದು ದೇಶದ ಅತಿ ದೊಡ್ಡ ಮತ್ತು ಇತರ ಬ್ಯಾಂಕ್ಗಳ ನಡವಳಿಕೆ ಗಮನಿಸುವ ಬ್ಯಾಂಕು ಇತರ ಬ್ಯಾಂಕುಗಳಿಗೆ ಸಾಲ ನೀಡುವ ಹಣದ ಮೇಲೆ ವಿಧಿಸುವ ಬಡ್ಡಿ ಇಲ್ಲಿ ಸಾಮಾನ್ಯ ಗ್ರಾಹಕನ ಪ್ರವೇಶವಿಲ್ಲ. ಉದಾಹರಣೆ ನೋಡಿ. ಆರ್ ಬಿಐ ತನ್ನ ಬಳಿ ಇದ್ದ ಸಾವಿರ ರೂಪಾಯಿಯನ್ನ ಎಸ್ಬಿಐ ಬ್ಯಾಂಕಿಗೆ ಸಾಲ ನೀಡುತ್ತದೆ. ಹಾಗು ಅದರ ಮೇಲೆ ಬಡ್ಡಿ ವಿಧಿಸುತ್ತದೆ. ಹೀಗೆ ಆರ್ ಬಿಐ ಇತರ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ರೇಟ್ ಎನ್ನುತ್ತಾರೆ. ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕನಿಗೆ ವಿಧಿಸುವ ಬಡ್ಡಿ ದರ ರೆಪೋ ರೇಟ್ ಗಿಂತ ಹೆಚ್ಚಾಗಿರುತ್ತದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆಯೇನೂ ಆಕಾಶ ಮುಟ್ಟಿಲ್ಲ. ಆದರೂ ನಮ್ಮಲ್ಲಿ ತೈಲದ ಬೆಲೆ ಅತ್ಯಂತ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುತ್ತಿರುವ ತೆರಿಗೆ. ಇನ್ನೊಂದು ಪ್ರಮುಖ ಕಾರಣ ಭಾರತ ತನಗೆ 100 ಲೀಟರ್ ತೈಲ ಬೇಕಿದ್ದರೆ ಅದರ 15 ಪ್ರತಿಶತ ಮಾತ್ರ ತಾನೇ ಉತ್ಪಾದಿಸಿಕೊಳ್ಳುವ ತಾಕತ್ತು ಹೊಂದಿದೆ. ಉಳಿದ 85 ಪ್ರತಿಶತ ತೈಲಕ್ಕೆ ನಾವು ಬೇರೆ ದೇಶಗಳನ್ನ ಅವಲಂಬಿಸಿದ್ದೇವೆ. ಮೂರನೆಯ ಪ್ರಮುಖ ಕಾರಣ ನಾವು ವೆನಿಜುಯೆಲಾ ಮತ್ತು ಇರಾನ್ಗಳಿಂದ ತೈಲವನ್ನ ಕೊಳ್ಳುವುದು ನಿಲ್ಲಿಸಿರುವುದು. ಅಮೇರಿಕಾ ದೇಶವು ಈ ಎರಡೂ ದೇಶಗಳ ಮೇಲೆ ದಿಗ್ಬಂಧನ ಏರಿರುವ ಕಾರಣ ನಾವು ಈ ಎರಡೂ ದೇಶಗಳಿಂದ ತೈಲವನ್ನ ಆಮದು ಮಾಡಿಕೊಳ್ಳುತ್ತಿಲ್ಲ. 2019ಕ್ಕೂ ಮೊದಲು ನಮ್ಮ ತೈಲದ ಬಹುಪಾಲು ಇರಾನ್ ಮತ್ತು ವೆನಿಜುಯೆಲಾ ದೇಶಗಳಿಂದ ಬರುತ್ತಿತ್ತು. ಇವೆರೆಡೂ ದೇಶದ ತೈಲ ಬೆಲೆ ಜಗತ್ತಿನ ಇತರ ದೇಶಗಳಿಗಿಂತ ಕಡಿಮೆಯಿದೆ. ಇರಾನ್ ದೇಶವಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ ನೀವು ನಮ್ಮ ತೈಲಕ್ಕೆ ಬದಲಾಗಿ ಭಾರತೀಯ ರೂಪಾಯಿಯಲ್ಲಿ ಹಣವನ್ನ ಸಂದಾಯ ಮಾಡಬಹುದು ಎಂದಿತ್ತು. ಒಂದಷ್ಟು ಹಣ ಸಂದಾಯ ಕೂಡ ರೂಪಾಯಿಯಲ್ಲಿ ಆಗಿತ್ತು. ಅಂದಿಗೆ ಇದೊಂದು ಜಾಗತಿಕ ಮಟ್ಟದಲ್ಲಿ ಹುಬ್ಬೇರಿಸುವ ವಿಷಯವಾಗಿತ್ತು. ಇಂದು ಜಾಗತಿಕ ರಾಜಕೀಯವೆಲ್ಲಾ ಇನ್ನಿಲ್ಲದ ಬದಲಾವಣೆ ಪಡೆದುಕೊಂಡಿದೆ.

ಕೊನೆಯ ಕಾರಣ ಒಪೆಕ್ ಮತ್ತು ರಷ್ಯಾ ದೇಶಗಳು ತಮ್ಮ ತೈಲ ಉತ್ಪಾದನೆಯನ್ನ ಕಡಿತಗೊಳಿಸಿವೆ. ಹೀಗೆ ಕಡಿಮೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ತೈಲದ ಅಭಾವ ಸೃಷ್ಟಿಸಿ ಬೆಲೆಯನ್ನ ಕಾಯ್ದುಕೊಳ್ಳುವುದು ಅವರ ಉದ್ದೇಶ. ಗಮನಿಸಿ ಇದೊಂದು ಚೈನ್ ರಿಯಾಕ್ಷನ್. ತೈಲ ಬೆಲೆ ಹೆಚ್ಚಾದ ತಕ್ಷಣ ಟ್ರಾನ್ಸ್ಪೋರ್ಟ್ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಸಹಜವಾಗೇ ಎಲ್ಲಾ ಸರಕುಗಳ ಬೆಲೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ತೈಲ ಬೆಲೆಯನ್ನ ನಿಗದಿ ಮಾಡುವುದು ಡಾಲರ್ ನಲ್ಲಿ. ಈ ಡಾಲರ್ಗೆ ಏಕೆ ಇಷ್ಟೊಂದು ಬೇಡಿಕೆ? ಅದರ ಮೇಲೇಕೆ ಇಷ್ಟೊಂದು ನಂಬಿಕೆ? ಉದಾಹರಣೆ ನೋಡಿ ಒಬ್ಬ ಕನ್ನಡಿಗ ಮತ್ತು ಒಬ್ಬ ಮಲೆಯಾಳಿ ಮಾತಿಗೆ ಕೂತರೆ ಕನ್ನಡಬಾರದ ಮಲೆಯಾಳಿ, ಮಲೆಯಾಳಂ ಬಾರದ ಕನ್ನಡಿಗ ಸಂವಹನಕ್ಕೆ ಏನು ಮಾಡಬೇಕು? ಇಂಗ್ಲಿಷ್ ಭಾಷೆಯನ್ನ ಸಾಮಾನ್ಯ ಸಂವಹನ ಮಾಧ್ಯಮವಾಗಿ ಬಳಸಬೇಕು ಅಲ್ಲವೇ? ಹಾಗೆಯೇ ಭಾರತದ ರುಪಾಯಿಯ ಮೌಲ್ಯ ಜಗತ್ತಿನ ಇತರ ದೇಶಗಳ ಕರೆನ್ಸಿ ಮೌಲ್ಯವನ್ನ ನಿಖರವಾಗಿ ಅಳೆಯಲು ನಂಬಿಕೆಯ ಕೊರತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ ಡಾಲರ್ನನ್ನು ಸಾಮಾನ್ಯ ವಿನಿಮಯ ಕರೆನ್ಸಿಯಾಗಿ ಜಗತ್ತು ಬಳಸುತ್ತಿದೆ. ಹೀಗೆ ಡಾಲರ್ ಮತ್ತು ತೈಲ ಬೆಲೆ ಹೆಚ್ಚುತ್ತಾ ಹೋಗಿ ನಮ್ಮಲಿ ಹಣದುಬ್ಬರ ಹೆಚ್ಚಾದರೆ ಪರಿಸ್ಥಿತಿ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಆರ್ ಬಿ ಐ ಮಧ್ಯ ಪ್ರವೇಶಿಸುತ್ತದೆ. ಮೊದಲೇ ಹೇಳಿದಂತೆ ಇದು ಸರಿ ಅಥವಾ ತಪ್ಪು ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಮುಖ್ಯವಾಗಿ ಇದನ್ನ ಮೂರು ವಿಭಾಗವಾಗಿ ನೋಡಬಹುದು. ಯಾರಿಗೆ ಲಾಭ ಯಾರಿಗೆ ನಷ್ಟ ಎಂದು ನೋಡಬಹುದು. ಜೊತೆಗೆ ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಇಡಲು ಇದು ಅವಶ್ಯಕ ಕೂಡ.

  1. ಮೊದಲ ಸಾಲಿನಲ್ಲಿ ಹೇಳಿದಂತೆ ನಮ್ಮದು ಅತ್ಯಂತ ದೊಡ್ಡ ದೇಶ. ಎಲ್ಲಾ ನಿರ್ಧಾರಗಳು ಎಲ್ಲರಿಗೂ ಅನುಕೂಲ ಮಾಡಿಕೊಡುವುದಿಲ್ಲ. ಆದರೆ ಬಡ್ಡಿ  ದರ ಇಳಿಕೆಯಿಂದ 12 ಕೋಟಿಗೂ ಮೀರಿ ಇರುವ ಹಿರಿಯ ನಾಗರಿಕರ ಮುಖದಲ್ಲಿ ಇದ್ದ ಸಣ್ಣನೆಯ ನಗುವನ್ನ ಕಸಿದದ್ದು ಮಾತ್ರ ಸುಳ್ಳಲ್ಲ. ಗಮನಿಸಿ ಇಂಗ್ಲೆಂಡ್ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆ ನಮ್ಮಲ್ಲಿ ಹಿರಿಯ ನಾಗರಿಕರು ಇದ್ದಾರೆ!  ಇವರ ಆದಾಯದ ಮೂಲ ಜೀವನ ಪೂರ್ತಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಒಂದಷ್ಟು ಹಣ. ಅದನ್ನ ಬ್ಯಾಂಕಿನಲ್ಲಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಅವರ ಜೀವನ ಸಾಗಬೇಕು. ಸೋಶಿಯಲ್ ಸೆಕ್ಯುರಿಟಿ ಇಲ್ಲದ ನಮ್ಮ ದೇಶದಲ್ಲಿ ಪಿಂಚಣಿ ಗಳಿಸುವ ಸಂಖ್ಯೆ ನಗಣ್ಯ. ಹೀಗಾಗಿ ಈ ವರ್ಗದ ಜನರ ಜೊತೆಗೆ ಕೈಲಾಗದವರು, ಅಸಹಾಯಕರು ಸೀಮಿತ ಹಣದ ಮೇಲಿನ ಬಡ್ಡಿಯಲ್ಲಿ ಜೀವನ ಸಾಗಿಸುವ ಲಕ್ಷಾಂತರ ಜನರಿಗೆ ಬಡ್ಡಿದರ ಹೆಚ್ಚಾದರೆ ಅದು ವರದಾನವಾಗಲಿದೆ. ಸದ್ಯದ ಮಟ್ಟಿಗೆ ಇವರ ಬದುಕು ಬಹಳ ಕಷ್ಟವಾಗಿದೆ.
  2. ಬಡ್ಡಿ ದರ ಕಳೆದ ಏಳು ವರ್ಷದಿಂದ ಇಳಿಮುಖವಾಗಿದೆ. ಇದು ರಿಯಲ್ ಎಸ್ಟೇಟ್ ಗೆ ವರದಾನವಾಗಿದೆ. ಲಕ್ಷಾಂತರ ಜನ ಇಳಿದ ಬಡ್ಡಿ ದರದ ಅನುಕೂಲ ಪಡೆದು ಮನೆ ಕಟ್ಟಲು, ಕಾರು ಕೊಳ್ಳಲು ಸಾಲ ಪಡೆದರು. ಇದೀಗ ಹೆಚ್ಚಾದ ಬಡ್ಡಿ ದರ ಹೆಚ್ಚಾಗುವ ಸಂಭ್ಯಾವತೆ ಹೆಚ್ಚಾಗಿದೆ. ಭಾರತದಲ್ಲಿ ಹಣದುಬ್ಬರ 11 ಪ್ರತಿಶತಕ್ಕೂ ಹೆಚ್ಚಾಗಿದೆ. ಹೀಗಾಗಿ ಇಂದಲ್ಲ ನಾಳೆ ಬಡ್ಡಿ ದರ ಹೆಚ್ಚಾಗಲೇಬೇಕು. ಹೊಸದಾಗಿ ಸಾಲ ಕೊಳ್ಳುವರು ಯೋಚಿಸಿ ಬಜೆಟ್ ಹೊಂದಿಸಿಕೊಂಡು ಸಾಲ ಮಾಡುವ ಹಾಗಾಗುತ್ತದೆ. ಜೊತೆಗೆ ಕಾರ್ಪೊರೇಟ್ ವಲಯ ಇಷ್ಟು ದಿನ ಕಡಿಮೆ ಬಡ್ಡಿ ದರದ ಪೂರ್ಣ ಲಾಭ ಪಡೆದವು. ಈಗ ಅವುಗಳಿಗೆ ಕೂಡ ತಮ್ಮ ಸಾಲದ ಮೇಲೆ ಕಟ್ಟುವ ಹಣದ ಮೊತ್ತ ಹೆಚ್ಚಾಗುತ್ತದೆ. ಹೊಸ ಸಾಲ ಮಾಡುವ ಮುನ್ನಾ ಎರಡು ಸಲ ಯೋಚಿಸುವ ಸ್ಥಿತಿ ಎದುರಾಗುತ್ತದೆ. ಇದರಿಂದ ಪ್ರಗತಿಯ ವೇಗ ಕುಂಟಾಗುತ್ತದೆ ಎನ್ನುವುದು ಕಾರ್ಪೊರೇಟ್ ವಲವದ ಕೂಗು. ಆದರೆ ಜನ ಸಾಮಾನ್ಯ ಮಾತ್ರ ತನ್ನ ಹಣಕ್ಕೆ ಸಿಗುತ್ತಿರುವ ಬಡ್ಡಿ ಹಣದಲ್ಲಿ ಭಾರಿ ಕುಸಿತ ಮತ್ತು ಹೆಚ್ಚಾಗಿರುವ ಖರ್ಚಿನಿಂದ ಜರ್ಜರಿತನಾಗಿದ್ದಾನೆ.
  3. ಒಂದು ಹಂತದ ತನಕ ಹೆಚ್ಚಾಗುವ ಬಡ್ಡಿ ದರ ಷೇರು ಮಾರುಕಟ್ಟೆಯ ಮಟ್ಟಿಗೆ ಹುರುಪನ್ನೇ ತರುತ್ತದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯನ್ನ ಗಮನಿಸಿ ನೋಡಿ. ಅಲ್ಲಿ ಗೂಳಿಯ ಓಟ ಸ್ಪಷ್ಟವಾಗಿ ಕಾಣುತ್ತದೆ. ನಿಯಂತ್ರಿತ ಬೆಲೆಯೇರಿಕೆ ಇರಬಹುದು ಅಥವಾ ಬಡ್ಡಿದರ ಕುಸಿತ, ಅದು ಬೆಳೆಯುತ್ತಿರುವ ಸಮಾಜದ ಲಕ್ಷಣ. ಸದ್ಯಕ್ಕೆ ಭಾರತದ ಷೇರುಮಾರುಕಟ್ಟೆ ಹೊಸ ಹುರುಪಿನೊಂದಿಗೆ ಮುನ್ನಡೆಯುತ್ತಿದೆ.ಇದೀಗ ಆಗುತ್ತಿರುವ ಬೆಳವಣಿಗೆ ಇದು ಎಷ್ಟು ದಿನ? ಎನ್ನುವ ಸಂಶಯವನ್ನ ಸೃಷ್ಟಿಮಾಡಿದೆ. ಇದಕ್ಕೆ ಕಾರಣ ಸ್ಪಷ್ಟ ಇಲ್ಲಿನ ಹಣದುಬ್ಬರ ಎರಡಂಕಿಯನ್ನ ದಾಟಿದೆ, ಬಡ್ಡಿ ದರ ತೀವ್ರ ಕುಸಿತ ಕಂಡಿದೆ, ಇವೆರಡರ ನಡುವಿನ ಅನುಪಾತ ತಾಳೆಯಾಗುತ್ತಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಹೆಚ್ಚು ಕಾಲ ಷೇರು ಮಾರುಕಟ್ಟೆ ತನ್ನ ಓಟದ ಓಘವನ್ನ ಕಾಯ್ದುಕೊಳ್ಳಲು ಸಾಧ್ಯವಿಲ್ಲ.

ಕೊನೆ ಮಾತು: ವಿತ್ತ ಜಗತ್ತು ಆಗಲೇ ಮಹಾಕುಸಿತವನ್ನ ಕಂಡಿದೆ. ಆದರೆ ಈ ಕುಸಿತ ಇನ್ನು ನಿಂತಿಲ್ಲದೆ ಇರುವುದು ಮತ್ತೊಂದು ಮಹಾ ಕುಸಿತಕ್ಕೆ ಮುನ್ನುಡಿ ಬರೆಯಲಿದೆಯೇ ಎನ್ನುವ  ಸಂಶಯವನ್ನ ಮೂಡಿಸುತ್ತಿದೆ. 

ಇದಕ್ಕೆ ಕಾರಣ ಸ್ಪಷ್ಟ, ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಇದ್ದುದರಲ್ಲೇ ಪರವಾಗಿಲ್ಲ ಅನ್ನುವಂತಿದೆ, ಹೀಗಿದ್ದೂ ನಮ್ಮಲ್ಲಿನ ಕಥೆಯನ್ನ ನೋಡಿದರೆ ಮುಂದೇನು? ಎನ್ನುವ ಪ್ರಶ್ನೆ ಉದ್ಬವಾಗುತ್ತದೆ. ಇನ್ನು ಬ್ರೆಜಿಲ್, ರಷ್ಯಾ, ಯೂರೋಪು ದೇಶಗಳ ಆರ್ಥಿಕತೆಯನ್ನ ನೋಡುತ್ತಿದ್ದರೆ ಇಲ್ಲೇ ಎಲ್ಲೂ ಹತ್ತಿರದಲ್ಲಿ ಇನ್ನೊಂದು ಆರ್ಥಿಕ ಕುಸಿತದ ಕರಿ ನೆರಳಿನ ಸುಳಿದಾಟ ಕಾಣುತ್ತಿದೆ. ಇವೆಲ್ಲಾ ಗೌಜುಗಳ ನಡುವೆ ಈ ವರ್ಷವೂ ಕೂಡ ಚೀನಾ ಮಾತ್ರ ಸದ್ದಿಲ್ಲದೇ ಮುನ್ನೆಡೆ ಸಾಧಿಸುತ್ತಿದೆ. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp