ಚೀನಾಕ್ಕೆ ವರವಾದ ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರ ನಿರ್ಲಕ್ಷ್ಯ!

ಹಣಕ್ಲಾಸು

-ರಂಗಸ್ವಾಮಿ ಮೂಕನಹಳ್ಳಿ

Published: 04th March 2021 08:33 AM  |   Last Updated: 25th March 2021 01:28 PM   |  A+A-


China

ಚೀನಾ

Posted By : Srinivas Rao BV
Source : Online Desk

ಹೊಟ್ಟೆ ಬಹಳವೇ ಹಸಿದಿತ್ತು. ತುತ್ತು ಅನ್ನ ಒಂದಷ್ಟು ಮೊಸರು ಮತ್ತು ಉಪ್ಪು ಸಿಕ್ಕರೆ ಸಾಕು ಎಂದುಕೊಂಡು ಹತ್ತಾರು ಹೋಟೆಲ್ ಅಲೆದಾಡಿದ್ದೆ. ನನ್ನ ಜೊತೆಗಿದ್ದ ಜಾನ್ (ಚೀನಿಯರು ತಮ್ಮ ಹೆಸರನ್ನ ಬೇರೆಯವರು ಉಚ್ಚಾರಣೆ ಮಾಡಲು ಆಗದು ಎಂದು ತಿಳಿದಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಒಂದು ವೆಸ್ಟ್ರೇನ್ ಹೆಸರನ್ನ ಇಟ್ಟುಕೊಂಡಿರುತ್ತಾರೆ.) ಕಡೆಯದಾಗಿ ಒಂದು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋದ. ಇವರು ನನಗೆ ಪರಿಚಯ ನಿನಗೆ ಬೇಕಾದ ಹಾಗೆ ಮಾಡಿಕೊಡುತ್ತಾರೆ ಎನ್ನುವ ಅಭಯ ಬೇರೆ ಇತ್ತ.

ಹೆಚ್ಚೇನೂ ಬೇಡ ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೆಟೊವನ್ನ ಎಣ್ಣೆಯಲ್ಲಿ ಹುರಿದು ಅದಕ್ಕೆ ಒಂದಷ್ಟು ಉಪ್ಪು, ಮೆಣಸಿನಕಾಯಿ ಸೇರಿಸಿ ಅದರಲ್ಲಿ ಅನ್ನ  ಬೆರೆಸಿ ಕೊಡಿ ಸಾಕು ಎಂದೇ. ಸರಿ ಎಂದವರು ಹತ್ತು ನಿಮಿಷದಲ್ಲಿ ನನ್ನ ಮುಂದೆ ಬಿಸಿ ಬಿಸಿ ಹೊಗೆಯಾಡುವ ಅಂಟು ಅನ್ನವನ್ನ ತಂದಿಟ್ಟರು! ಆಸೆಯಿಂದ ತಿನ್ನಲು ಹೋದರೆ ಅದರಲ್ಲಿ ಮೊಟ್ಟೆ ಜೊತೆಗೆ ಒಂದಷ್ಟು ಸೀ ಫುಡ್ ಕಂಡವು. ಇವೆಲ್ಲ ಬೇಡ ಎಂದರೆ, ಸರಿ ತೆಗೆದು ಹಾಕಿ ತಿನ್ನು ಎಂದರು. ಸ್ವಾಮಿ ಇದು ಮಾತ್ರ ನನ್ನಿಂದ ಸಾಧ್ಯವಿಲ್ಲವೆಂದೆ, ಮತ್ತೆ ಬಂದರು..., ಈ ಬಾರಿ ಸಿ ಫುಡ್ ಇರಲಿಲ್ಲ ಮೊಟ್ಟೆ ಮಾತ್ರ ಇತ್ತು. ಕ್ಷಮಿಸಿ ಬೇರೇನೂ ಬೇಡ, ಟೊಮೊಟೊ, ಈರುಳ್ಳಿ ಮತ್ತು ಆಲೂಗೆಡ್ಡೆ ಎಂದು ಒತ್ತಿ ಹೇಳಿದ ಮೇಲೆ ಸರಿಯೆಂದು ತಲೆಯಾಡಿಸಿ ಹೋದವರು, ನನ್ನ ಮುಂದೆ ತಂದಿಟ್ಟ ಬೌಲ್ ನಲ್ಲಿ ನಾನು ಕೇಳಿದ್ದೇ ಇತ್ತು. ಸಕತ್ ಖುಷಿಯಿಂದ ತಿನ್ನುವಷ್ಟರಲ್ಲಿ ಒಬ್ಬಾಕೆ ಬಂದು ಒಂದು ನಿಮಿಷ ಎಂದು ಬೌಲ್ ಮೇಲೆ ಏನ್ನನ್ನೋ ಉದುರಿಸಿದಳು, ಮರೆತು ಹೋಗಿದ್ದೆ ಎನ್ನುವಂತೆ ಎರಡೆರೆಡು ಬಾರಿ ಸಾರೀ ಅಂದು ಬೇರೆ ಹೋದಳು.

ನಾವು ಚಿತ್ರಾನ್ನದ ಮೇಲೆ ಒಂದಷ್ಟು ಕೊತ್ತಂಬರಿ ಹಾಕುವುದಿಲ್ಲವೇ? ಹಾಗೆ ಇದೇನು ಇರಬೇಕು ಅಂತ ನೋಡಿದರೆ ಹತ್ತದಿನೈದು ಸಣ್ಣ ಜಿರಳೆಗಳನ್ನ ಕರಿದು ಅದನ್ನ ನನ್ನ ಬೌಲ್ ಗೆ ಹಾಕಿ ಹೋಗಿದ್ದಳು ಮಹಾಮಾತೆ! ಇನ್ನು ಅವರ ಬಳಿ ಹೊಡೆದಾಡುವ ಶಕ್ತಿ ಇರಲಿಲ್ಲ, ಜೊತೆಗೆ ಹಸಿವು ಕೂಡ ಬೇಡಪ್ಪ ನಿನ್ನ ಸಹವಾಸ ಅಂತ ಓಡಿ ಹೋಗಿತ್ತು. ಇದು ನನ್ನ ಚೀನಾದ ಪ್ರಥಮ ದಿನದ ಅನುಭವವಾಗಿತ್ತು. ಈ ಸ್ವಾನುಭವ ಹೇಳಲು ಕಾರಣ ಜಿರಳೆ.

ನಿಮಗೆ ಗೊತ್ತೇ? ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ. ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಂತರ ಹಣ ಮಾಡಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ. ಚೀನಿಯರು ಜಗತ್ತಿನಲ್ಲಿ ಆಹಾರವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂತಹ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಳೆಗಳನ್ನ ಸಾಕುತ್ತಾರೆ. ಅವು ಇಂತಹ ವೇಸ್ಟ್ ಆಹಾರ ತಿಂದು ಬೆಳೆದ ಮೇಲೆ ಅದನ್ನ ಇವರು ಹಲವಾರು ಬಳಕೆಗೆ ಬಳಸುತ್ತಾರೆ. ಇದನ್ನ ಔಷಧ  ತಯಾರಿಕೆಯಲ್ಲಿ, ರೆಸ್ಟೊರೆಂಟ್ಗಳಲ್ಲಿ ತಿನ್ನುವುದಕ್ಕೆ ಉಪಯೋಗಿಸುತ್ತಾರೆ. ಟೂತ್ ಪೇಸ್ಟ್ ನಲ್ಲಿ ಕೂಡ ಜಿರಳೆಯನ್ನ ಬಳಸುತ್ತಾರೆ. ಹೀಗೆ ಇದೊಂದು ದೊಡ್ಡ ಉದ್ಯಮ.

ಚೀನಾದ ಮಹಾ ನಗರಗಳಲ್ಲಿ ಗಲ್ಲಿಗಳಲ್ಲಿ ಕ್ಯಾಮೆರಾ ಇನ್ಸ್ಟಾಲ್ ಆಗಿವೆ. ಸಾರ್ವಜನಿಕ ಪ್ರದೇಶದ ಎಲ್ಲಾ ಕ್ಷಣಗಳೂ ರೆಕಾರ್ಡ್ ಆಗುತ್ತಲೇ ಇರುತ್ತವೆ. ಇನ್ನೆರಡು ವರ್ಷಗಳಲ್ಲಿ ಕ್ಯಾಮರಾಗಳ ಸಂಖ್ಯೆಯೇ 600 ಮಿಲಿಯನ್ ಮೀರಿರುತ್ತದೆ. ಇಲ್ಲಿ ಎಲ್ಲವೂ ಸೈಂಟಿಫಿಕ್ ಫಿಕ್ಷನ್ ಸಿನಿಮಾ ತರದಲ್ಲಿ ಮಾನಿಟರ್ ಮಾಡುತ್ತಲೇ ಇರುತ್ತಾರೆ. ಒಮ್ಮೆ ಡೇಟಾ ಬೇಸ್ ಗೆ ನಿಮ್ಮ ಮಾಹಿತಿ ಫೀಡ್ ಆದರೆ ಮುಗಿಯಿತು. ನೀವು ಯಾವ ಗಲ್ಲಿಯಲ್ಲಿರಿ ನಿಮ್ಮ ಹೆಸರು, ಕುಲ, ಗೋತ್ರ ಎಲ್ಲವೂ  ಕೇವಲ ಮುಖ ನೋಡಿ ಕಂಪ್ಯೂಟರ್ ಪರದೆಯಲ್ಲಿ ಅನಾವರಣವಾಗಿ ಬಿಡುತ್ತದೆ. ಚೀನಿಯರು ಹೀಗೆ ದಾಪುಗಾಲಿಡುತ್ತ ಹೆಚ್ಚು ಹೆಚ್ಚು ತನ್ನ ಜನರ ಡೆಟಾವನ್ನ ಶೇಖರಿಸುತ್ತಿದೆ. 

ಸರಕಾರಿ ಕರ್ಮಚಾರಿಗಳ ಅಪಾರ್ಟ್ಮೆಂಟ್ ನಲ್ಲಿ ಕೂಡ ಸೆಕ್ಯುರಿಟಿ ಬದಲು ಈ ಕ್ಯಾಮೆರಾ ಇರುತ್ತೆ. ಮುಖ ನೋಡಿ ಮಣೆ ಹಾಕವ ಬದಲು ಇದು ಬಾಗಿಲು ತೆರೆಯುತ್ತೆ. ತಿಂಗಳಲ್ಲಿ ಇಷ್ಟು ಬಾರಿ ನೀವು ಮನೆಯಿಂದ ಈಚೆ ಹೋಗಿದ್ದಿರಿ ಎನ್ನುವ ನಿರ್ದಿಷ್ಟ ಡೇಟಾ ಕೂಡ ಅದು ಸಂಗ್ರಹಿಸುತ್ತದೆ. ಅಮೆರಿಕಾದಲ್ಲಿ ಇಂತಹ ಒಂದು ಬದಲಾವಣೆ ತರಲು ಖಾಸಗಿ ಹೂಡಿಕೆದಾರರು ಸಂಸ್ಥೆಗಳನ್ನ ತೆಗೆದು ಬೃಹತ್ ಮೊತ್ತವನ್ನ ಅಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಚೀನಾ ಬಿಟ್ಟರೆ ಸದ್ಯದ ಮಟ್ಟಿಗೆ ಅಲ್ಪಸ್ವಲ್ಪ ಈ ಟೆಕ್ನಾಲಜಿ ಅಳವಡಿಸಿಕೊಂಡಿರುವುದು ದುಬೈ ಮತ್ತು ಯೂರೋಪಿನ ಕೆಲವು ದೇಶಗಳು ಮಾತ್ರ! ಇನ್ನೇನು ಟಾಯ್ಲೆಟ್ ಗೆ ಹೋಗುವುದನ್ನ ಕೂಡ ಲೆಕ್ಕವಿಡುತ್ತಾರಾ? ಎಂದು ನೀವು ಪ್ರಶ್ನೆ ಕೇಳಿದರೆ ಹೌದು, ಇದಕ್ಕೆ ಒಂದೂವರೆ ದಶಕದ ಹಿಂದೆಯೇ ಸಾಕ್ಷಿಯಾಗಿದ್ದೇನೆ.

ನನಗೆ ಅತ್ಯಂತ ಬೇಸರ, ಜಿಗುಪ್ಸೆ, ಹತಾಶೆ ಉಂಟಾಗುವುದು ಚೀನಾದ ಓಟದಿಂದಲ್ಲ, ಬದಲಿಗೆ ವಿಶ್ವವಿಖ್ಯಾತ ಬೇಹುಗಾರಿಕೆ ಸಂಸ್ಥೆಗಳನ್ನ ಹೊಂದಿರುವ, ಅಮೇರಿಕಾ, ಇಸ್ರೇಲ್ ಮತ್ತು ರಷ್ಯಾ ದೇಶಗಳು ಎರಡು ದಶಕಗಳ ಕಾಲ ಚೀನಾ ದೈತ್ಯವಾಗಿ ಬೆಳೆಯುತ್ತಾ ಬಂದದ್ದು ಮತ್ತು ಅದು ವಿಶ್ವಕ್ಕೆ ಮಾರಕವಾಗಬಲ್ಲದು ಎನ್ನುವುದನ್ನ ಊಹಿಸಲು, ಜಗತ್ತನ್ನ ಎಚ್ಚರಿಸಲು ಮರೆತದ್ದರಿಂದ. ಹಣ ಬಲದಿಂದ ಚೀನಾ ಜಗತ್ತಿನ ಹತ್ತಾರು ಬ್ಯಾಂಕ್ಗಳನ್ನ ಕೂಡ ಕೊಂಡುಕೊಳ್ಳುತ್ತದೆ. ಅಲ್ಲಿಗೆ ಚೀನಾವನ್ನ ಕೊರೋನೋತ್ತರ ಮಣಿಸುವುದಾದರೂ ಹೇಗೆ?

ಎರಡು ದಶಕಕ್ಕೆ ಒಂದೆರೆಡು ವರ್ಷ ಮುಂಚೆ ಚೀನಾಕ್ಕೆ ಕಾಲಿಟ್ಟಾಗ ಅಲ್ಲೆಲ್ಲಾ ಬದಲಾವಣೆಯ ಭರಾಟೆ ಜೋರಾಗಿತ್ತು. ಇನ್ನೆರೆಡು ದಶಕದಲ್ಲಿ ಇದು ವಿಶ್ವವನ್ನ ತನ್ನ ಉತ್ಪನ್ನಗಳ ಮೂಲಕ ಇಂತಹ ಮಟ್ಟಕ್ಕೆ ಬಗ್ಗಿಸಿ ಬೆನ್ನಮೇಲೆ ನಾಲ್ಕು ಬಾರಿಸಬಹುದು ಎನ್ನುವ ಲೆಕ್ಕಾಚಾರವನ್ನು ಬಹಳಷ್ಟು ಅಮೆರಿಕನ್ ಮತ್ತು ಬ್ರಿಟನ್ ಹೂಡಿಕೆದಾರರು ಅಂದಿಗೆ ಮಾಡಿದ್ದರು. ಈ ಬದಲಾವಣೆಯ ಭರಾಟೆಯಲ್ಲಿ ಅವರು ತುಂಬಿಸಿಕೊಂಡ ಖಜಾನೆ ಬಹಳ ದೊಡ್ಡದು. ಇದೆ ವರ್ಗಕ್ಕೆ ಸೇರುವ ಇನ್ನೊಂದು ಪ್ರಭೇದ, ಆಸ್ಟ್ರೇಲಿಯನ್ ಹೂಡಿಕೆದಾರರು ಮತ್ತು ಅವರ ಅಣತಿಗೆ ಕುಣಿದ ಆಸ್ಟ್ರೇಲಿಯನ್ ರಾಜಕಾರಿಣಿಗಳು. ಯೂರೋಪು, ಅಮೆರಿಕಾ ಮತ್ತು ಆಸ್ಟ್ರೇಲಿಯಾ ಇವತ್ತು ಎಷ್ಟೇ ಜೋರಾಗಿ ಅರುಚಾಡಲಿ, ಚೀನಾದ ಬಗ್ಗೆ ಏನೇ ಹೇಳಲಿ, ಇವರುಗಳ ಅನುಮತಿ ಇಲ್ಲದೆ ಚೀನಾ ಅವರ ಮನೆಯಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗುತ್ತಿರಲಿಲ್ಲ. ಇವತ್ತು ಜಗತ್ತಿನ ಮೇಲೆ ಸವಾರಿ ಮಾಡುವ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಇಪ್ಪತ್ತು ವರ್ಷಗಳಲ್ಲಿ ಹೀಗಾಗಬಹುದು ಎಂದು ಅಂದಾಜಿಸಿದ್ದ ಇವರುಗಳು ತಮ್ಮ ಮನೆಯವರನ್ನ ಇದರ ಬಗ್ಗೆ ಏಕೆ ಎಚ್ಚರಿಸಲಿಲ್ಲ? ಅವರುಗಳು ತಮ್ಮ ಖಜಾನೆ ಭರ್ತಿಯಾದರೆ ಸಾಕು ಎನ್ನುವ ಮನೋಭಾವ ಹೊಂದಿದ್ದವರು. ಹದಿನೈದು, ಇಪ್ಪತ್ತು ವರ್ಷದಿಂದ ಚೀನಾದಲ್ಲಿ ಬೀಡು ಬಿಟ್ಟಿರುವ ಇಂತಹ ಅತಿ ಶ್ರೀಮಂತ ಹೂಡಿಕೆದಾರರು ಅಮೇರಿಕಾ ಮತ್ತು ಯೂರೋಪಿನ ಟಿವಿ ಚಾನಲ್ ಗಳಲ್ಲಿ ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರು ಎನ್ನುವ ಹಣೆಪಟ್ಟಿಯಲ್ಲಿ ಅಲ್ಲಿ ಕೂಡ ಹಣವನ್ನ ದೋಚಿದ್ದಾರೆ.

ಅಲಿಬಾಬ, ಟೆನ್ಸೆಂಟ್, ಪಿಂಗ್ ಆನ್ ನಂತಹ ಸಂಸ್ಥೆಗಳಲ್ಲಿ ಮಿಲಿಯನ್ ಗಟ್ಟಲೆ ಅಮೆರಿಕನ್ ಪೋರ್ಟ್ಫೋಲಿಯೋ ಹಣವನ್ನ ಸುರಿದಿದ್ದಾರೆ ಎಂದರೆ ನಿಮಗೆ ಅಚ್ಚರಿ ಆಗಬಹುದು. ಏಷ್ಯಾ ಪೆಸಿಫಿಕ್ ಹೂಡಿಕೆ ತಜ್ಞರು ಹೇಳುವ ಮಾತುಗಳನ್ನ ಕೇಳಿ ಅಲ್ಲಿನ ಸಾಮಾನ್ಯ ಹೂಡಿಕೆದಾರನ ಹಣವನ್ನ ಫಂಡ್ ಮ್ಯಾನೇಜರ್ ಗಳು ಮತ್ತು ಇಂತಹ ಹಣವನ್ನ ನಿಭಾಯಿಸುವ ಹತ್ತಾರು ಸಂಸ್ಥೆಗಳು ಇಲ್ಲಿ ಅಂದರೆ ಚೀನಾದ ತೇರನ್ನ ಎಳೆಯಲು, ಬೆಳೆಯಲು ಹೂಡಿಕೆ ಮೂಲಕ ಅನ್ನ-ಆಹಾರ ನೀಡಿದ್ದಾರೆ. ಇವತ್ತು ಚೀನಾಗೆ ಯಾರ ಕೈತುತ್ತಿನ ಅವಶ್ಯಕತೆ ಇಲ್ಲ. ಅದು ಎಲ್ಲರ ತುತ್ತನ್ನ ಕಸಿಯುವ ಮಟ್ಟಕ್ಕೆ ಬೆಳೆದುನಿಂತಿದೆ.
 
ಇದರ ಜೊತೆಗೆ ಅಲ್ಲಿ ಉದ್ಯಮಗಳು ಬೆಳೆಯಲು ಸರಕಾರ ಸಿಕ್ಕಾಪಟ್ಟೆ ಸಹಾಯ ಹಸ್ತ ನೀಡಿದೆ. ಹೀಗಾಗಿ ಬೆಳವಣಿಗೆಯ ಟ್ರೈನ್ ಮಿಸ್ ಮಾಡಿಕೊಳ್ಳಲು ಯಾವ ಚೀನಿ ಪ್ರಜೆಯೂ ಸಿದ್ಧನಿಲ್ಲ. ನೀರು, ಕರೆಂಟು, ಜಾಗ, ಬೇಕಾದ ಲೈಸೆನ್ಸ್ ಕೊಟ್ಟು ಇನ್ನೊಂದು ಐದಾರು ವರ್ಷ ನನಗೇನೂ ಬೇಡ, ನಯಾಪೈಸಾ ಟ್ಯಾಕ್ಸ್ ಬೇಡ. ನೀನು ಉತ್ಪಾದನೆ ಮಾಡು, ಕೆಲಸ ಸೃಷ್ಟಿಸು, ಮಾರಾಟ ಮಾಡು ಅಷ್ಟು ಸಾಕು ಎನ್ನುವ ಸರಕಾರವದು. ಈ ವಿಷಯದಲ್ಲಿ ನಾವು ಚೀನಾ ದೇಶವನ್ನ ಸರಿಗಟ್ಟುವುದು ಯಾವಾಗ?

ಕೊನೆ ಮಾತು: ನಾವು ಚೀನಾದಂತೆ ಆಗಬೇಕು ಎನ್ನುವುದು ಈ ಬರಹದ ಉದ್ದೇಶವಲ್ಲ. ಬದಲಿಗೆ ನಮ್ಮ ಅಭಿವೃದ್ಧಿ ಇತರ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗದ ರೀತಿಯಲ್ಲಿ ಇರಬೇಕು ಎನ್ನುವುದು ಉದ್ದೇಶ. ಜಗತ್ತಿನಲ್ಲಿ ಕೊರೋನಘಾತದಿಂದ ವೇಗವಾಗಿ ಚೇತರಿಸಿಕೊಂಡು ಅತಿ ಹೆಚ್ಚು ಜಿಡಿಪಿಯನ್ನ ದಾಖಲಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೆಚ್ಚುತ್ತಿರುವ ತೈಲ ಬೆಲೆಯನ್ನ ಜಿಎಸ್ಟಿ ವಲಯದಲ್ಲಿ ತರುವುದರ ಜೊತೆಗೆ, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಕ್ಕೆ ಒಂದಷ್ಟು ಉತ್ತೇಜನ ನೀಡಿದರೆ 2021 ಮತ್ತು 2022ರಲ್ಲಿ ಚೀನಾ ದೇಶದ ಅಭಿವೃದ್ಧಿ ಮಾಪಕವನ್ನ ಮೀರಿ ಬೆಳೆಯುವ ಅವಕಾಶ ನಮ್ಮ ಮುಂದೆ ವಿಫುಲವಾಗಿದೆ. 


ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp