
ತೈಲ ಬೆಲೆಯನ್ನ ನಿಯಂತ್ರಿಸಲು ಇರುವ ಎರಡು ಅಸ್ತ್ರಗಳು- ಜಿಎಸ್ಟಿ, ಸಬ್ಸಿಡಿ!
- ಇಲೊನ್ ಮುಸ್ಕ್ ನ ಟೆಸ್ಲಾ ಎಬ್ಬಿಸಿದ ಧೂಳಿನಲ್ಲಿ ಮಸುಕಾದ ಆತ್ಮನಿರ್ಭರತೆ!
ಇವತ್ತು ಅತ್ಯಂತ ಹೆಚ್ಚಿನ ಚರ್ಚೆಯಲ್ಲಿರುವ ವಿಷಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ. 2014 ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ದಿನದಿಂದ ತೈಲ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದೆಂದಿಗಿಂತ ಕುಸಿತ ಕಂಡು ಆ ನಂತರ ಸ್ಥಿರವಾಗಿತ್ತು. ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ.
ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇಂದಿನ ಈ ಬರಹದ ಉದ್ದೇಶ ಯಾವ ವರ್ಷದಲ್ಲಿ ತೈಲ ಬೆಲೆ ಎಷ್ಟಿತ್ತು? ಆಗಿನ ಸರ್ಕಾರ ಯಾವುದಿತ್ತು? ಎಂದು ಹುಡುಕುವುದಲ್ಲ! ಬದಲಿಗೆ ಈ ರೀತಿಯ ದರ ಏರಿಕೆ-ಇಳಿಕೆಯ ನಿಜವಾದ ಕಾರಣ ಏನು? ಜಿಎಸ್ ಟಿ ವ್ಯಾಪ್ತಿಗೆ ತೈಲವನ್ನ ತರುವುದರಿಂದ ಏನಾಗಬಹುದು? ಅದರ ಸಾಧಕ-ಬಾಧಕಗಳನ್ನ ಒಂದಷ್ಟು ವಿಮರ್ಶಿಸೋಣ.
ನಿಮ್ಮ ತಾತ, ಮುತ್ತಾತರಿಂದ ಹಿಡಿದು ನಿಮ್ಮ ಪೂರ್ವಜರೆಲ್ಲ ರೈತರು ಎಂದುಕೊಳ್ಳಿ. ತರಕಾರಿ ಮಾತ್ರ ನಿಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಿರಿ ಎಂದುಕೊಳ್ಳಿ. ಆಕಸ್ಮಾತ್ ಯಾವುದೋ ಕಾರಣಕ್ಕೆ ತರಕಾರಿಗೆ ಏನಾದರೂ ಮಾರುಕಟ್ಟೆಯಲ್ಲಿ ಕೆಜಿಗೆ ಒಂದು ಸಾವಿರ ರೂಪಾಯಿ ಬೆಲೆ ಬಂದರೆ, ಬರೇ ಹಣವಷ್ಟೆ ಇದ್ದು ತಮ್ಮಲ್ಲಿ ಚದರ ಅಡಿಯಷ್ಟೂ ಭೂಮಿಯಿಲ್ಲದವರೂ ಬಾಡಿಗೆ ಜಮೀನಿನಲ್ಲಿ, ಅಧಿಕ ಕೂಲಿ ನೀಡಿ ತರಕಾರಿ ಬೆಳೆಯಲು ತೊಡಗಿಬಿಡುತ್ತಾರೆ. ಖರ್ಚಿಗಿಂತ ಲಾಭವೇ ಅಧಿಕಪಟ್ಟು ಹೆಚ್ಚಾಗಿದ್ದರಿಂದ ಮತ್ತಷ್ಟು ಬಾಡಿಗೆ ಬೆಳೆಗಾರರು ಹುಟ್ಟಿಕೊಂಡುಬಿಡುತ್ತಾರೆ. ಬಾಡಿಗೆ ಬೆಳೆಗಾರರಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಸ್ಪರ್ಧೆಯುಂಟಾದಾಗ ಸಂಕಷ್ಟಕ್ಕೊಳಗಾದ ಪರಂಪರಾಗತ ರೈತ ಏನು ಮಾಡಬೇಕು? ಅವನಿಗೆ ಇಂತಹ ಆಟವನ್ನ ನಿಯಂತ್ರಿಸಲು ಉಳಿದ ಮಾರ್ಗವೊಂದೇ! ಹೆಚ್ಚೆ ಹೆಚ್ಚು ತರಕಾರಿ ಬೆಳೆದು ತನ್ನ ಬೆಳೆಯ ಬೆಲೆಯನ್ನ ಕಡಿಮೆ ಮಾಡುವುದು. ಇಂತಹ ನಿರ್ಧಾರ ಕಾರ್ಯಗತವಾದ ನಂತರ ತರಕಾರಿ ಬೆಲೆಯಲ್ಲಿ ಇಳಿಕೆ ಕಾಣಲಾರಂಭಿಸಿತು. ಈಗೇನಾಗುತ್ತೆ ನೋಡಿ ಜಮೀನೇ ಇಲ್ಲದ ನಕಲಿ ರೈತರು ಲಾಭಕ್ಕಿಂತ ನಷ್ಟ ಎಂದೊಡನೆ ಮಾರುಕಟ್ಟೆಯಿಂದ ಓಡಿ ಹೋಗುತ್ತಾರೆ.
ಮೇಲಿನ ಉದಾಹರಣೆಯಲ್ಲಿ ಮೂಲ ರೈತರು ಎನ್ನುವ ಕಡೆಯಲ್ಲಿ ಸೌದಿ ಅರೇಬಿಯಾ, ಒಪೆಕ್ ದೇಶಗಳು ರಷ್ಯಾ ಎಂದು ಓದಿಕೊಳ್ಳಿ. ಯೂರೋಪು ಮತ್ತು ಅಮೇರಿಕಾದಲ್ಲಿ ಕೂತ ಹೂಡಿಕೆದಾರರು ಎಲ್ಲಿ ತೈಲ ಸಿಗುತ್ತದೋ ಅಲ್ಲೆಲ್ಲ ಜಾಗವನ್ನ ಬಾಡಿಗೆಗೆ ಪಡೆದು ತೈಲ ಉತ್ಪಾದನೆ ಶುರು ಮಾಡಿಕೊಂಡಿದ್ದಾರೆ. ಇವರು ಮೇಲಿನ ಉದಾಹರಣೆಯ ನಕಲಿ ರೈತರು.
ಈಗ ಮೇಲಿನ ಉದಾಹರಣೆಯ ಇನ್ನಷ್ಟು ಬಿಡಿಸಿ ನೋಡೋಣ. ಕಳೆದ 4 ವರ್ಷಗಳಿಂದ ಅಮೇರಿಕಾ ಮತ್ತು ಯೂರೋಪಿನ ಬಂಡವಾಳಗಾರರ ಉಪಟಳ ಎಷ್ಟು ಹೆಚ್ಚಾಗಿತ್ತು ಎಂದರೆ. ಒಪೆಕ್ ದೇಶಗಳ ಆರ್ಥಿಕ ಸ್ಥಿತಿ ಕುಸಿಯುವಷ್ಟು. ಇದರಿಂದ ರೊಚ್ಚಿಗೆದ್ದ ಈ ದೇಶಗಳು ಸೌದಿ ಅರೇಬಿಯಾ ದೇಶವನ್ನ ಕೂಡ ಕಡಿಮೆ ತೈಲ ಉತ್ಪಾದಿಸಲು ಒಪ್ಪಿಸಿದವು. ರಷ್ಯಾ ಒಪೆಕ್ ಸದಸ್ಯ ದೇಶವಲ್ಲ. ಹೀಗಿದ್ದೂ ಅಂತರರಾಷ್ಟ್ರೀಯ ಬೆಳಣಿಗೆಯಿಂದ ಬೇಸತ್ತು ರಷ್ಯಾ ಕೂಡ ತೈಲದ ಉತ್ಪಾದನೆ ಕಡಿಮೆ ಮಾಡಲು ಸಮ್ಮತಿಸುತ್ತದೆ. ನಿಧಾನವಾಗಿ ಮೂಲ ತೈಲ ಉತ್ಪಾದಕರು ಯಾವಾಗ ಇಂತಹ ಒಂದು ಪ್ರಕ್ರಿಯೆ ಶುರು ಮಾಡಿಕೊಂಡರು ಆಗ ತೈಲದ ಬೆಲೆ ಏರಿಕೆ ಕಾಣತೊಡಗಿತು. ಕಳೆದ 4 ವರ್ಷದಿಂದ ಏರಿಕೆ ಕಾಣದ ತೈಲ ಬೆಲೆ ಇದೀಗ ಏರಿಕೆಯಾಗುತ್ತಿರುವುದು ಏಕೆ? ಎನ್ನುವ ಅರಿವು ನಿಮ್ಮದಾಯಿತು ಎಂದುಕೊಳ್ಳುತ್ತೇನೆ.
ಇನ್ನೊಂದು ಸಣ್ಣ ಉದಾಹರಣೆ ನೋಡಿ ಇದರೊಂದಿಗೆ ತೈಲ ಬೆಳೆಯ ಏರಿಳಿತದ ಆಟ ಪೂರ್ಣವಾಗಿ ಅರ್ಥವಾಗುತ್ತದೆ. ವಸ್ತು ಯಾವುದೇ ಇರಲಿ ಅದು ತೈಲವಿರಬಹುದು ಅಥವಾ ತರಕಾರಿಯಿರಬಹುದು ಬೇಡಿಕೆ ಮತ್ತು ಪೂರೈಕೆ (ಡಿಮಾಂಡ್ ಅಂಡ್ ಸಪ್ಲೈ) ವಸ್ತುವಿನ ಬೆಲೆಯನ್ನ ನಿರ್ಧರಿಸುತ್ತೆ. ವಸ್ತುವಿನ ಮೇಲಿನ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆಯಿದ್ದರೆ ವಸ್ತುವಿನ ಬೆಲೆಯೇರುತ್ತದೆ. ವಸ್ತುವಿನ ಮೇಲಿನ ಬೇಡಿಕೆ ಕಡಿಮೆ ಇದ್ದು ಪೂರೈಕೆ ಜಾಸ್ತಿಯಾದಾಗ ವಸ್ತುವಿನ ಬೆಲೆ ಕಡಿಮೆಯಾಗುತ್ತದೆ.
ನಕಲಿ ತೈಲ ಉತ್ಪಾದಕರನ್ನ ಮಾರುಕಟ್ಟೆಯಿಂದ ಓಡಿಸಲು ಒಪೆಕ್ ದೇಶಗಳು ಮತ್ತು ರಷ್ಯಾ ಹೆಚ್ಚೆ ಹೆಚ್ಚು ತೈಲ ಉತ್ಪಾದಿಸಿ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನ ಕುಸಿಯುವಂತೆ ಮಾಡಿದ್ದವು ಈ ಕಾರಣದಿಂದ ಕಳೆದ 4 ವರ್ಷ ತೈಲ ಬೆಲೆ ಕಡಿಮೆಯಿತ್ತು. ಈಗ ರಷ್ಯಾ ಮತ್ತು ಒಪೆಕ್ ದೇಶಗಳು ತಮ್ಮ ತೈಲ ಉತ್ಪಾದನೆಯನ್ನ ಕಡಿತಗೊಳಿಸಿವೆ ಹೀಗಾಗಿ ಬೆಲೆಯಲ್ಲಿ ಏರಿಕೆ ಕಾಣ ತೊಡಗಿದೆ. ನಿಮ್ಮ ತೈಲ ಉತ್ಪಾದನೆಯನ್ನ ಜಾಸ್ತಿ ಮಾಡಿ ಎನ್ನುವ ಭಾರತದ ಮನವಿಯನ್ನ ಸೌದಿ ಅರೇಬಿಯಾ ಸಾರಾಸಗಟಾಗಿ ತಿರಸ್ಕರಿಸಿದೆ.
ಇದೆಲ್ಲಾ ಸರಿ ಸದ್ಯದಲ್ಲಿ ತೈಲ ಬೆಲೆ ಕಡಿಮೆ ಮಾಡಲು ಕೇಂದ್ರ ಸರಕಾರ ಏನು ಮಾಡಬಹುದು?
ಇದಕ್ಕೆ ಉತ್ತರ ಹೇಳುವುದಕ್ಕೆ ಮುಂಚೆ ನಮ್ಮ ಪೆಟ್ರೋಲ್ ಮೇಲೆ ಬೀಳುತ್ತಿರುವ ತೆರಿಗೆ ಏನೇನು ಅಂತ ತಿಳಿದುಕೊಳ್ಳೋಣ. ನಮ್ಮ ತೈಲದ ಮೇಲೆ ವ್ಯಾಟ್, ಅಬಕಾರಿ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರಿಕೊಳ್ಳುತ್ತದೆ. ಮಾರ್ಚ್ 1, 2021ರ ಲೆಕ್ಕಾಚಾರವನ್ನ ಒಂದಷ್ಟು ಗಮನಿಸೋಣ ಬನ್ನಿ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ-1 ಬ್ಯಾರೆಲ್ ಗೆ | 65 ಡಾಲರ್ ಡಾಲರ್ |
ಡಾಲರ್- ರೂಪಾಯಿಗೆ | 73. 31 ರೂಪಾಯಿ |
ರೂಪಾಯಿ ಲೆಕ್ಕದಲ್ಲಿ | 4765 ರೂಪಾಯಿ |
ಒಂದು ಬ್ಯಾರಲ್ ಅಂದರೆ ಎಷ್ಟು ಲೀಟರ್? | 159 ಲೀಟರ್ |
ಹೀಗಾಗಿ ಒಂದು ಲೀಟರ್ ಪೆಟ್ರೋಲ್ ಬೆಲೆ- 4765 ÷ 159 | 29.96 ರೂಪಾಯಿ |
ಕಚ್ಚಾ ತೈಲದ ಬೆಲೆ ಒಂದು ಲೀಟರ್ ಗೆ | 29.96 ರೂಪಾಯಿ |
ಸಂಸ್ಕರಣೆ ವೆಚ್ಚ | 3. 58 ರೂಪಾಯಿ |
ಅಬಕಾರಿ ಸುಂಕ - ಕೇಂದ್ರ ಸರಕಾರ | 32.90 ರೂಪಾಯಿ |
ದಲ್ಲಾಳಿ ಕಮಿಷನ್ | 3.69 ರೂಪಾಯಿ |
ವ್ಯಾಟ್ - ರಾಜ್ಯ ಸರಕಾರದ ತೆರಿಗೆ |
21.04 ರೂಪಾಯಿ |
ಒಟ್ಟು | 91.17 ರೂಪಾಯಿಗಳು |
ವ್ಯಾಟ್ (VAT ) ಅಂದರೆ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಅಥವಾ ಮೌಲ್ಯ ವರ್ಧಿತ ತೆರಿಗೆ ಎಂದರ್ಥ. ಮೇಲಿನ ಬ್ರೇಕ್ ಅಪ್ ನೋಡಿದರೆ ತಿಳಿಯುತ್ತದೆ ಒಮ್ಮೆ ಸಂಸ್ಕರಣೆ ಆದ ನಂತರ ಇನ್ನ್ಯಾವುದೇ ವ್ಯಾಲ್ಯೂ ಪೆಟ್ರೋಲ್ ಗೆ ಸೇರಿಲ್ಲ. ಹೀಗಿದ್ದೂ ವ್ಯಾಟ್ ಹಾಕುವುದು ಎಷ್ಟು ಸಮಂಜಸ?
ತೈಲವನ್ನ ಜಿಎಸ್ಟಿಗೆ ತರುವುದರಿಂದ ಏನಾಗುತ್ತದೆ?
ಹೀಗೆ ತೈಲವನ್ನ ಕೂಡ ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ಮೇಲೆ ಹೇಳಿದ ವ್ಯಾಟ್, ಅಬಕಾರಿ ಸುಂಕ ನಿಗದಿತ ಜಿಎಸ್ಟಿ ಸುಂಕ ಮಾತ್ರ ಉಳಿದುಕೊಳ್ಳುತ್ತದೆ. ಈ ರೀತಿ ಮಾಡುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 25ರಿಂದ 30 ರೂಪಾಯಿ ಕುಸಿತವಾಗುತ್ತದೆ. ಇದು ಜನ ಸಾಮಾನ್ಯರಿಗೆ ಬಹಳ ಅನುಕೂಲವಾಗುತ್ತದೆ. ಆದರೆ ರಾಜ್ಯ ಸರಕಾರಗಳಿಗೆ ಸಿಗುತ್ತಿದ್ದ ತೆರಿಗೆ ಹಣ ನಿಂತು ಹೋಗುತ್ತದೆ. ಇದರಿಂದ ರಾಜ್ಯ ಸರಕಾರಗಳು ಕೇಂದ್ರದ ಈ ನಿಲುವನ್ನ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಸರಕಾರವಿರಬಹುದು, ಸಂಸ್ಥೆಗಳಿರಬಹುದು ಅಥವಾ ವ್ಯಕ್ತಿ, ಒಮ್ಮೆ ಒಂದು ಮಟ್ಟದ ಆದಾಯಕ್ಕೆ ಒಗ್ಗಿಕೊಂಡು ಬಿಟ್ಟರೆ ಮತ್ತೆ ಆದಾಯವನ್ನ ಕಳೆದುಕೊಳ್ಳಲು ಯಾರೂ ಒಪ್ಪುವುದಿಲ್ಲ. ರಾಜ್ಯ ಸರಕಾರಗಳು ಹೆಚ್ಚಿನ ಯಾವುದೇ ಕೆಲಸವನ್ನೂ ಮಾಡದೆ ತೈಲದ ಮೇಲೆ 30ರಿಂದ 32 ಪ್ರತಿಶತ ತೆರಿಗೆಯನ್ನ ವಿಧಿಸುತ್ತಾ ಬಂದಿವೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಕಡಿಮೆಯಿತ್ತು. ಈಗ ಅದು ಹೆಚ್ಚಾಗತೊಡಗಿದೆ. ಹೀಗಾಗಿ ಇದು ಜನ ಸಾಮಾನ್ಯನ ಜೇಬನ್ನ ಸುಡಲು ಶುರು ಮಾಡಿದೆ. ಯಾವಾಗ ಅದು ಜನ ಸಾಮಾನ್ಯನನ್ನ ಸುಡಲು ಶುರು ಮಾಡುತ್ತದೆ ಆಗ ನೋಡಿ ಎಲ್ಲಾ ಬೆಲೆಗಳ ಬ್ರೇಕ್ ಅಪ್ ಏನು ಎನ್ನುವುದನ್ನ ನೋಡಲು ಶುರು ಮಾಡುತ್ತಾರೆ. ಭಾರತ ಜಗತ್ತಿನಲ್ಲಿ ತೈಲದ ಮೇಲೆ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ರಾಷ್ಟ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ನಾವು ನೀಡುವ ಹಣದ 60 ಪ್ರತಿಶತ ತೆರಿಗೆ ಎಂದರೆ ನಿಜಕ್ಕೂ ಇದು ವಿಷಾದನೀಯ.
ಎರಡನೆಯ ಆಯ್ಕೆ ತೈಲದ ಮೇಲೆ ಸಬ್ಸಿಡಿ ಕೊಡುವುದು. ಕೇಂದ್ರ ಸರಕಾರ ಕಳೆದ ಆರು ವರ್ಷದಿಂದ ತೈಲದ ಮೇಲೆ ಯಾವುದೇ ಸಬ್ಸಿಡಿ ನೀಡಿಲ್ಲ. ಕಳೆದ ಆರು ವರ್ಷ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಿದ್ದೂ ನಮ್ಮಲ್ಲಿ ಮಾತ್ರ ಕಡಿಮೆಯಾಕೆ ಆಗಿರಲಿಲ್ಲವೆಂದರೆ ಆ ಹೆಚ್ಚುವರಿ ಹಣ ಎಲ್ಲಿ ಹೋಯಿತು ಅನ್ನುವರಿಗೆ ಸರಳ ಲೆಕ್ಕವೆಂದರೆ ಸಬ್ಸಿಡಿ ತೆಗೆದು ಹಾಕಿದ್ದು ಮತ್ತು ಹಿಂದಿನ ಸರಕಾರ ಇರಾನ್ ದೇಶಕ್ಕೆ ಬಾಕಿ ಉಳಿಸಿಕೊಂಡಿದ್ದ ಮಿಲಿಯನ್ ಗಟ್ಟಲೆ ಸಾಲವನ್ನ ಕಡೆಯ ರೂಪಾಯಿ ಕೂಡ ಬಿಡದೆ ತೀರಿಸಲು ಊಪಯೋಗಿಸಿಕೊಂಡಿದೆ. ಇವೆಲ್ಲಾ ಜನ ಸಾಮಾನ್ಯನ ಪಾಲಿಗೆ ಕಥೆಗಳು ಅಷ್ಟೇ. ಆತನಿಗೆ ಬೇಕಾಗಿರುವುದು ಬೆಲೆಯಲ್ಲಿ ಇಳಿಕೆ. ಈಗ ಕೇಂದ್ರ ಸರಕಾರ ಸಬ್ಸಿಡಿ ಜಾರಿ ಮಾಡಿ ತೈಲ ಬೆಲೆ ಕಡಿಮೆ ಮಾಡಿ, ಜೊತೆಗೆ ಜೊತೆಗೆ ಇತರ ವಸ್ತುಗಳ ಬೆಲೆಯನ್ನು ಕೂಡ ನಿಯಂತ್ರಣದಲ್ಲಿರಿಸಬಹುದು. ಹೀಗಾಗಿ ರಾಜ್ಯ ಸರಕಾರಗಳು ಜಿಎಸ್ಟಿ ಗೆ ಒಪ್ಪದಿದ್ದರೆ ಸದ್ಯದ ಮಟ್ಟಿಗೆ ಸಬ್ಸಿಡಿ ನೀಡುವುದು ಉಳಿದಿರುವ ಮಾರ್ಗ. ಯಾವ ಆಯ್ಕೆ ಕೇಂದ್ರ ಸರಕಾರ ಆಯ್ದು ಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕು.
ಕೊನೆಮಾತು: ತೈಲ ಬೆಲೆ ಎನ್ನುವುದು ಸದಾ ತೂಗುಯ್ಯಾಲೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಚಿತ್ರಣ ಬದಲಾಗಲಿದೆ. ಎಲೆಕ್ಟ್ರಿಕ್ ವೆಹಿಕಲ್ ಗಳು, ರಿನ್ಯೂವೆಬಲ್ ಎನರ್ಜಿ ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುತ್ತದೆ. ಹೀಗಾಗಿ ಇಂದು ಜಾಗತಿಕ ಮಟ್ಟದಲ್ಲಿ ಇರುವ ತೈಲದ ರಾಜಕೀಯ ಪ್ರಾಬಲ್ಯ ಖಂಡಿತ ಕುಸಿತ ಕಾಣುತ್ತದೆ. ಅಲ್ಲಿಯವರೆಗೆ, ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಎರಡು ಆಯ್ಕೆಗಳಲ್ಲಿ ಯಾವುದಾದರೂ ಸರಿಯೇ, ಆದಷ್ಟು ಬೇಗ ಜಾರಿಗೆ ತರಬೇಕು. ಜನ ಸಾಮಾನ್ಯನ ಮೇಲಿರುವ ಹೊರೆಯನ್ನ ಇಳಿಸಬೇಕು.
ರಂಗಸ್ವಾಮಿ ಮೂಕನಹಳ್ಳಿ
muraram@yahoo.com
O
P
E
N