'ಸೆಬಿ'ಯ ಹೊಸ ಪರ್ಪೆಚ್ಯುಯಲ್ ಬಾಂಡ್ ನಿಯಮಾವಳಿ ತಡೆಗೆ ವಿತ್ತ ಸಚಿವಾಲಯ ವಿನಂತಿ!

ಹಣಕ್ಲಾಸು-251

-ರಂಗಸ್ವಾಮಿ ಮೂಕನಹಳ್ಳಿ

Published: 18th March 2021 01:49 AM  |   Last Updated: 18th March 2021 02:18 PM   |  A+A-


sebi and perpetual bonds (image for only representational purpose)

'ಸೆಬಿ'ಯ ಹೊಸ ಪರ್ಪೆಚ್ಯುಯಲ್ ಬಾಂಡ್ ನಿಯಮಾವಳಿ ತಡೆಗೆ ವಿತ್ತಸಚಿವಾಲಯ ವಿನಂತಿ!

Posted By : Srinivas Rao BV
Source : Online Desk

ಕಾರ್ಪೊರೇಟ್ ಕಂಪನಿಗಳು ಮತ್ತು ಸರ್ಕಾರಗಳು ಹಣದ ಅವಶ್ಯಕತೆ ಬಿದ್ದಾಗ ಬಾಂಡ್ ವಿತರಿಸಿ ಹಣ ಪಡೆಯುವುದು ಬಹಳ ಹಿಂದಿನಿಂದ  ಬಂದಿರುವ ಸಂಪ್ರದಾಯ. 

ಸಾಲ ಪಡೆದು ಇಂಥಹವರಿಂದ ಇಷ್ಟು ಸಾಲ ಪಡೆದಿದ್ದೇವೆ ಇಷ್ಟು ವರ್ಷದ ನಂತರ ಇಷ್ಟು ಬಡ್ಡಿ ಸಮೇತ ವಾಪಸ್ಸು ಕೊಡುತ್ತೇವೆ ಎನ್ನುವ ಮುಚ್ಚಳಿಕೆ ಪತ್ರವೇ ಬಾಂಡ್. ಇಂತಿಪ್ಪ ಬಾಂಡ್ಗಳಲ್ಲೂ ವಿವಿಧ ರೀತಿ. ಇವತ್ತು ನಾವು  ಪರ್ಪೆಚುಯಲ್ ಬಾಂಡ್ ಎಂದರೆ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇದರ ಜೊತೆಗೆ ಇಂತಹ ಬಾಂಡ್ಗಳ ಸಾಧಕ-ಬಾಧಕಗಳೇನು? ಎನ್ನುವ ವಿಚಾರಗಳನ್ನ ಒಂದಷ್ಟು ವಿಮರ್ಶಿಸೋಣ. ಇವತ್ತು ಈ ಬಾಂಡ್ ಮತ್ತೆ ಸುದ್ದಿಗೆ ಬಂದಿರುವ ಕಾರಣವನ್ನ ಕೂಡ ತಿಳಿದುಕೊಳ್ಳೋಣ.

ಪರ್ಪೆಚುಯಲ್ ಬಾಂಡ್ ಎಂದರೇನು?

ಹೆಸರೇ ಸೂಚಿಸುವಂತೆ ಇದು ನಿಗದಿತ ದಿನದಲ್ಲಿ ಕೊನೆಗೊಳ್ಳದ ಬಾಂಡ್. ಸಾಮಾನ್ಯವಾಗಿ ಬಾಂಡ್ ಗಳು ಸಮಯದ ಮಿತಿಯಲ್ಲಿ ವಿತರಿಸಲ್ಪಡುತ್ತದೆ. ಅಂದರೆ ಹತ್ತು ವರ್ಷದ ಅವಧಿ ಅಥವಾ 15 ಹೀಗೆ. ಈ ಸಮಯದ ಮುಕ್ತಾಯದ ನಂತರ ಬಾಂಡ್ ವಿತರಿಸಿದ ಸಂಸ್ಥೆ ಅಥವಾ ಸರ್ಕಾರ ನಿಗದಿತ ಮೊತ್ತ ವಾಪಸ್ಸು ಕೊಟ್ಟು ಬಾಂಡ್ ನ್ನು ಮರಳಿ ಖರೀದಿ ಮಾಡುತ್ತದೆ. ಆದರೆ ಪರ್ಪೆಚುಯಲ್ ಬಾಂಡ್ ವಿಷಯದಲ್ಲಿ ಮಾತ್ರ ಹೀಗಿಲ್ಲ. ಇಲ್ಲಿ ನಿಗದಿತ ಸಮಯವಿಲ್ಲ. ಹೌದು ಇದೊಂದು ಹಣ ಮರು ಪಾವತಿಸಲು ಅಥವಾ ಬಾಂಡ್ ಮರಳಿ ಪಡೆಯಲು ಸಮಯದ ಕೊನೆಯಿಲ್ಲದ ಬಾಂಡ್. ಸದಾ(ಫಾರ್ ಎವರ್) ಸಾಲದ ಮೇಲಿನ ಬಡ್ಡಿಯನ್ನ ಕೊಡುತ್ತಲೇ ಇರುತ್ತದೆ. ಹೌದ? ಹಾಗಾದರೆ ಇದು ಈಕ್ವಿಟಿಯಂತೆ ಕಾರ್ಯ ನಿರ್ವಹಿಸುತ್ತಿದೆ ಮತ್ತೆ ಇದನ್ನ ಬಾಂಡ್ ಎಂದು ಕರೆಯುವುದೇಕೆ? ಎನ್ನುವ ಪ್ರಶ್ನೆ ನೀವು ಕೇಳಿದ್ದೆ ಆಗಿದ್ದಲ್ಲಿ ನಿಮ್ಮ ಪ್ರಶ್ನೆಗೆ ನನ್ನ ಸಹಮತವಿದೆ.

ಇದು ಈಕ್ವಿಟಿಯಂತೆ ಕಾರ್ಯನಿರ್ವಹಿಸುತ್ತದೆ. ಆದರೂ ಇದನ್ನ ಬಾಂಡ್ ಎಂದು ಕರೆಯಲು ಕಾರಣ ಮುಕ್ಕಾಲು ಪಾಲು ಇಂತಹ ಪರ್ಪೆಚ್ಯುಯಲ್ ಬಾಂಡ್ ಗಳು 'ಕಾಲ್ ಪ್ರಾವಿಷನ್' ಅಡಿಯಲ್ಲಿ ವಿತರಣೆ ಆಗಿರುತ್ತದೆ. ಅಂದರೆ ಬಾಂಡ್ ವಿತರಿಸಿದ ಸಂಸ್ಥೆ ಅಥವಾ ಸರ್ಕಾರ ಸಾಲವನ್ನ ಮರಳಿ ಕೊಡಲು ಯಾವುದೇ ನಿಗದಿತ ಸಮಯ ಇಲ್ಲದಿದ್ದರೂ, ಮುಂದೊಮ್ಮೆ ಸಂಸ್ಥೆ ಅಥವಾ ಸರ್ಕಾರದ ಬಳಿ ಹೆಚ್ಚಿನ ಹಣದ ಹರಿವು ಕಂಡು ಬಂದಲ್ಲಿ ಅವಕ್ಕೆ ಬಾಂಡ್ ಮರು ಖರೀದಿ ಮಾಡುವ ಅವಕಾಶವಿರುತ್ತದೆ. ಹೀಗಾಗಿ ಇವನ್ನ ಬಾಂಡ್ ಎಂದೇ ವರ್ಗಿಕರಿಸಲಾಗಿದೆ.

ಒಂದು ಉದಾಹರಣೆ ಇದನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮಾಡುತ್ತದೆ. ನಮ್ಮ ವಿಜಯಾ ಬ್ಯಾಂಕ್  ಪರ್ಪೆರ್ಚ್ಯುಯಲ್ ಬಾಂಡ್ ನ್ನು ವಿತರಿಸುತ್ತದೆ ಎಂದುಕೊಳ್ಳಿ ಅದನ್ನ ರಾಮ ಎನ್ನುವನು ಕೊಂಡರೆ ವಿಜಯಾ ಬ್ಯಾಂಕ್ ಈ ಸಾಲದ ಮೇಲೆ ಬಡ್ಡಿ ಕೊಡುತ್ತಿದ್ದರೆ ಸಾಕು. ಸಾಲದ ಮೊತ್ತವನ್ನ 5/10 ಅಥವಾ 15 ವರ್ಷಗಳಲ್ಲಿ ಮರಳಿ ಕೊಡಬೇಕು ಎನ್ನುವ ಯಾವುದೇ ತೆರೆನಾದ ಒತ್ತಡ ಬ್ಯಾಂಕ್ ಮೇಲಿರುವುದಿಲ್ಲ. ಆದರೆ ಒಂದು ವೇಳೆ, ವಿಜಯ ಬ್ಯಾಂಕ್ ಬಳಿ 15 ಅಥವಾ 20 ವರ್ಷದ ನಂತರ ತನ್ನ ವ್ಯಾಪಾರಕ್ಕೆ ಬೇಕಾದ ಹಣವನ್ನ ಮೀರಿ ಹಣದ ಲಭ್ಯತೆ ಇದ್ದಲ್ಲಿ ಅಂದು ಅವರು ರಾಮನ ಸಾಲದ ಹಣವನ್ನ ವಾಪಸ್ಸು ಕೊಟ್ಟು ತಮ್ಮ ಬಾಂಡ್  ಮರಳಿ ಪಡೆಯಬಹುದು.

ಗಮನಿಸಿ ಇಂತಹ ಬಾಂಡ್ಗಳ ವಿತರಣೆ ಆಗುವುದು ಹಣದ ಮುಗ್ಗಟ್ಟಿನ ಸಮಯದಲ್ಲಿ! ಹೌದು ಏಕೆಂದರೆ ಸಾಲ ಪಡೆದು ಹಿಂತಿರುಗಿಸುವ ಒತ್ತಡವಿಲ್ಲ. ಅವಧಿ ಹೆಚ್ಚಿದಷ್ಟು ಸಾಲದ ಮೇಲಿನ ಬಡ್ಡಿಯ ಮೊತ್ತವನ್ನ ಕಡಿಮೆಗೆ ನಿಗದಿಪಡಿಸಲಾಗುತ್ತದೆ. ಹೀಗಾಗಿ ಕನಿಷ್ಠ ಬಡ್ಡಿ ಮೊತ್ತವನ್ನ ಬಾಂಡ್ ಖರೀದಿಸಿದವನಿಗೆ ಕೊಟ್ಟರೆ ಮುಗಿಯಿತು. ಇನ್ನೈದೋ ಹತ್ತೋ ವರ್ಷಗಳಲ್ಲಿ ಸಾಲ ತೀರಿಸಬೇಕೆಂಬ ಒತ್ತಡ ಇರುವುದಿಲ್ಲ. ಜಾಗತಿಕ ಹಣಕಾಸು ಒತ್ತಡದಲ್ಲಿರುವ ಇಂದಿನ ದಿನಗಳಲ್ಲಿ ಇವುಗಳ ಬೇಡಿಕೆ ಹೆಚ್ಚಾಗುತ್ತದೆ.

ಈಗ ನೀವು ಕೇಳಬಹುದು ಇದನ್ನ ಜನರೇಕೆ ಕೊಳ್ಳುತ್ತಾರೆ?  ಇಂತಹ ಬಾಂಡ್ಗಳಿಂದ ಆಗುವ ಉಪಯೋಗಗಳನ್ನ ಗಮನಿಸಿದರೆ ಇದಕ್ಕೆ ಉತ್ತರ ಸಿಗುತ್ತದೆ.

  ಸಾಧಕಗಳು:

  • ನಿಗದಿತ ಬಡ್ಡಿ ಸದಾಕಾಲ (ಫಾರ್ ಎವರ್) ಸಿಗುವುದು ಹೂಡಿಕೆದಾರರಿಗೆ ಅತ್ಯಂತ ಖುಷಿಯ ವಿಷಯವಾಗಿದೆ: ಗಮನಿಸಿ ನೋಡಿ ಜಗತ್ತಿನಲ್ಲಿ ಬಹಳಷ್ಟು ಜನ ಸ್ಥಿತಿವಂತರು, ಮತ್ತು ಹಿರಿಯ ನಾಗರಿಕರು ಇದ್ದಾರೆ. ಅವರಿಗೆ ಒಂದಷ್ಟು ಭರವಸೆ ಮತ್ತು ಅಭಯ ನೀಡುವ ಹೂಡಿಕೆ ಸಿಕ್ಕರೆ ಅವರು ಅದರಲ್ಲಿ ಹಣವನ್ನ ಹಾಕಲು ಬಯಸುತ್ತಾರೆ. ಇದು ಡೆಟ್ ಆಗಿರುವ ಕಾರಣ, ಮುಂದೊಮ್ಮೆ ಸಂಸ್ಥೆ ಮುಚ್ಚಾಬೇಕಾದ ಪರಿಸ್ಥಿತಿ ಬಂದರೂ ಈಕ್ವಿಟಿಯಲ್ಲಿ ಆಗಬಹುದಾದಷ್ಟು ನಷ್ಟವಂತೂ ಆಗುವುದಿಲ್ಲ. ಹೀಗಾಗಿ ನಿಗದಿತ ಬಡ್ಡಿಯನ್ನ ಬಯಸುವ ಜನರು ಇದರಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.
  • ಇವುಗಳನ್ನ ಸಾಮಾನ್ಯವಾಗಿ ವಿತರಿಸುವುದು ಅತ್ಯಂತ ಗೌರವಾನ್ವಿತ ಸಂಸ್ಥೆ ಅಥವಾ ಸರ್ಕಾರ ಹೀಗಾಗಿ ನಿಗದಿತ ದಿನದಂದು ಬಡ್ಡಿ ಸಂದಾಯವಾಗುತ್ತದೆ: ಮೊದಲೇ ಹೇಳಿದಂತೆ ಪ್ರತಿಷ್ಠಿತ ಸಂಸ್ಥೆ ವಿತರಿಸುವ ಇಂತಹ ಬಾಂಡ್ ಗಳ ಮೇಲಿನ ಬಡ್ಡಿ ನಿಗದಿತ ಸಮಯಕ್ಕೆ ತಲುಪುತ್ತದೆ. ಈ ರೀತಿಯ ಬಡ್ಡಿಯನ್ನ ನಂಬಿ ಜೀವನ ನಡೆಸುವ ಹೀರಿಯ ನಾಗರಿಕರಿಗೆ ಇದು ವರದಾನ.
  • ಇಂದು ನಿಗದಿತ ಬಡ್ಡಿ ದರಕ್ಕೆ ಒಪ್ಪಂದವಾಗಿರುತ್ತದೆ. ಹತ್ತು ವರ್ಷದ ನಂತರ ಹಣದುಬ್ಬರ ಹೆಚ್ಚಾದರೆ ಅದಕ್ಕೆ ತಕ್ಕಂತೆ ಬಡ್ಡಿಯ ದರವನ್ನ ಕೂಡ ಪರಿಷ್ಕರಿಸುವ ನಿಯಮವಿರುತ್ತದೆ. ಹೀಗಾಗಿ ಸಮಯಕ್ಕೆ ತಕ್ಕಂತೆ ನಮ್ಮ ಬಡ್ಡಿ ದರವನ್ನ ಕೂಡ ಬದಲಾವಣೆಗೆ ಒಗ್ಗಿಕೊಳ್ಳುತ್ತದೆ. ಇದರಿಂದ ಸಂಸ್ಥೆ ಮತ್ತು ಹೂಡಿಕೆದಾರ ಇಬ್ಬರಿಗೂ ಅನುಕೂಲವಾಗುತ್ತದೆ.  
  • ಪದೇ ಪದೇ ಮತ್ತೆಲ್ಲಿ ಹೂಡಿಕೆ ಮಾಡುವುದು ಎನ್ನುವ ಆತಂಕದಿಂದ ಮುಕ್ತವಾಗಬಹುದು: ಗಮನಿಸಿ ನೋಡಿ ಯಾವುದೇ ರೀತಿಯ ಹೂಡಿಕೆ ಒಂದಷ್ಟು ವರ್ಷದ ನಂತರ ಮರಳಿ ಬರುತ್ತದೆ. ಅದನ್ನ ಮತ್ತೆಲ್ಲಿ ಹೂಡಿಕೆ ಮಾಡುವುದು ಎನ್ನುವ ಸಮಸ್ಯೆ ಇದ್ದೆ ಇರುತ್ತದೆ. ಇಂತಹ ಬಾಂಡ್ಗಳ ಮೇಲಿನ ಹೂಡಿಕೆ ಇಂತಹ ಒಂದು ಸಮಸ್ಯೆಯನ್ನ ಪೂರ್ಣವಾಗಿ ಬಗೆಹರಿಸುತ್ತದೆ.

ಬಾಧಕಗಳು:

  • ಮೇಲಿನ ಎಲ್ಲಾ ಸಾಧಕ ಅಥವಾ ಉಪಯೋಗಗಳು ಶ್ರೀಮಂತರಿಗೆ ಅಥವಾ ಹೆಚ್ಚು ಶ್ರೀಮಂತರಿಗೆ ಮಾತ್ರ ಸೀಮಿತ. ಪ್ರತಿ ಒಂದು ಬಾಂಡ್ ನ ಮುಖ ಬೆಲೆ ಹತ್ತು ಲಕ್ಷ ರೂಪಾಯಿಗಳು. ಹೀಗಾಗಿ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ಇದರ ಅನುಕೂಲ ಪಡೆಯಲು ಅಷ್ಟು ಸಾಧ್ಯವಿಲ್ಲ.
  • ಸಾಮಾನ್ಯವಾಗಿ ಇಂತಹ ಬಾಂಡ್ಗಳ ವಿತರಣೆ ಆಗುವುದು ಹಣದ ಸಂಕಷ್ಟ ಸ್ಥಿತಿಯಲ್ಲಿ. ಹೀಗಾಗಿ ಇಂತಹ ಬಾಂಡ್ಗಳನ್ನ ವಿತರಿಸುವ ಸಂಸ್ಥೆ ಅಥವಾ ಸರಕಾರ ಎಷ್ಟೇ ಗೌರವಾವಾನ್ವಿತವಾಗಿದ್ದರು ಅವು ದಿವಾಳಿ ಆಗುವ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.
  • ಸಾಮನ್ಯವಾಗಿ ಇಂತಹ ಬಾಂಡ್ಗಳು 'ಕಾಲ್ ಆಪ್ಷನ್' ಅಡಿಯಲ್ಲಿ ವಿತರಿಸಲ್ಪಟ್ಟಿರುತ್ತವೆ. ಹೀಗಾಗಿ ಹತ್ತು ಅಥವಾ ಹದಿನೈದು ವರ್ಷದ ನಂತರ ಬಾಂಡ್ ವಾಪಸ್ಸು ಪಡೆದ ಸಂದರ್ಭದಲ್ಲಿ ಮತ್ತೆ ಹೂಡಿಕೆಗಾಗಿ ಹುಡುಕಾಡುವುದು ತಪ್ಪುವುದಿಲ್ಲ. ಆದರೆ ತೀರಾ ಇತ್ತೀಚಿಗೆ ಇಂತಹ ಬಾಂಡ್ಗಳನ್ನ 100 ವರ್ಷದ ಅವಧಿಗೆ ನಿಗದಿ ಮಾಡಬೇಕು ಎನ್ನುವ ಮಾತನ್ನ ಸೆಬಿ ಹೇಳಿದೆ.

ಇದೇಕೆ ಮತ್ತೆ ಸುದ್ದಿಗೆ ಬಂದಿದೆ?

ಇತ್ತೀಚಿಗಿನ ಅಂಕಿ-ಅಂಶದ ಪ್ರಕಾರ ತಿಂಗಳ ಸರಾಸರಿ ವಹಿವಾಟು ಈ ಬಾಂಡ್ಗಳಲ್ಲಿ 150 ರಿಂದ 200 ಕೋಟಿ ರೂಪಾಯಿ. ಇದೇನು ದೊಡ್ಡ ಮೊತ್ತವಲ್ಲ. ಆದರೆ ಇವುಗಳು ಕೊಡುತ್ತಿರುವ ಲಾಭಂಶ (ಅಂದರೆ ಬಡ್ಡಿ ಮತ್ತು ಮಾರುಕಟ್ಟೆಯಲ್ಲಿ ಏರಿದ ಬಾಂಡ್ ಬೆಲೆ ಎರಡನ್ನೂ ಕೂಡಿ) 15 ರಿಂದ 17ಪ್ರತಿಶತ. ಬರಿ ಬಡ್ಡಿಯ ಲೆಕ್ಕಾಚಾರವನ್ನ ತೆಗೆದುಕೊಂಡರೆ 8.2 ರಿಂದ 9 ರ ವರೆಗೆ ವಿವಿಧ ಸಂಸ್ಥೆಗಳು ನೀಡುತ್ತಿವೆ.  ಬ್ಯಾಂಕ್ ಬಡ್ಡಿ ದರ 5.5 ಪ್ರತಿಶತಕ್ಕೆ ಕುಸಿದಿರುವ ಈ ದಿನಗಲ್ಲಿ ಇದೊಂದು ಅತ್ಯುತ್ತಮ ಹೂಡಿಕೆ. ನಿಧಾನವಾಗಿ ಜನ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಿಂದ ಇಂತಹ ಬಾಂಡ್ಗಳ ಮೇಲಿನ ಹೂಡಿಕೆಗೆ ಗಮನವನ್ನ ನೀಡುತ್ತಿದ್ದಾರೆ. ಹೀಗಾಗಿ ನೆನೆಗುದಿಗೆ ಬಿದ್ದಿದ್ದ ಪರ್ಪೆಚುಯಲ್ ಬಾಂಡ್ ಮತ್ತೆ ಮಾರುಕಟ್ಟೆಯಲ್ಲಿ ಹೊಸದಾಗಿ ಬಂದಿದೆ ಎಂದುಕೊಂಡರೆ ಅದೊಂದೇ ಕಾರಣವಲ್ಲ. ತೀರಾ ಇತ್ತೀಚಿಗೆ ಅಂದರೆ 12 ಮಾರ್ಚ್ 2021 ರಂದು ಸೆಬಿ ಇಂತಹ ಬಾಂಡ್ ಗಳನ್ನ 100 ವರ್ಷದ ಅವಧಿಗೆ ನಿಗದಿ ಪಡಿಸಬೇಕು ಎನ್ನುವ ನೋಟಿಫಿಕೇಶನ್ ಹೊರಡಿಸಿದೆ. ಸೆಬಿ ಯಾವಾಗಲೂ ಹೂಡಿಕೆದಾರರ ಹಿತವನ್ನ ಕಾಯುವ ಕೆಲಸದಲ್ಲಿ ಮಗ್ನವಾಗಿದೆ. ಏಪ್ರಿಲ್ 1, 2021 ರಿಂದ ಇದು ಜಾರಿಗೆ ಬರುವ ಸಾಧ್ಯತೆಗಳಿವೆ. ಸೆಬಿಯ ಇಂತಹ ನಿರ್ಧಾರ ಬಹಳಷ್ಟು ಸಂಸ್ಥೆಗಳಿಗೆ ಇಷ್ಟವಾಗಿಲ್ಲ. ಅವರುಗಳು ಸಾಂಘಿಕವಾಗಿ ಇದರ ಬಗ್ಗೆ ಧ್ವನಿಯೆತ್ತುವ ಮೊದಲೇ ಹಣಕಾಸು ಸಚಿವಾಲಯ ಸೆಬಿಗೆ ಪತ್ರವನ್ನ ಬರೆದು ಇಂತಹ ಒಂದು ನಿರ್ಧಾರದಿಂದ ಹೊರಬರಲು ವಿನಂತಿಸಿದೆ. ಸೆಬಿಯ ನಿರ್ಧಾರವನ್ನ ಪ್ರಶ್ನಿಸಿ ಸಾರ್ವಜನಿಕವಾಗಿ ಹೀಗೆ ಹಣಕಾಸು ಸಚಿವಾಲಯ ತೆಗೆದುಕೊಂಡು ನಿಲುವು ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ ಸೆಬಿಯ ನಿರ್ಧಾರಗಳಲ್ಲಿ ಹಣಕಾಸು ಸಚಿವಾಲಯ ತನ್ನ ಹಸ್ತಕ್ಷೇಪ ಮಾಡಿದ್ದು ಕಡಿಮೆ. ಹಣಕಾಸು ಸಚಿವಾಲಯ ಕೇವಲ ವಿನಂತಿ ಮಾಡಿದೆ. ಅದು ಆರ್ಡರ್ ಪಾಸ್ ಮಾಡಿಲ್ಲ ಎನ್ನುವುದು ಕೂಡ ಒಂದು ವರ್ಗದ ಕೂಗು.

ಕೊನೆಮಾತು: ಪರ್ಪೆಚುಯಲ್ ಬಾಂಡ್ ಸೇಫ್ ಡೆಪಾಸಿಟ್ ಎಂದು ಹೇಳಬಹುದು. ಆದರೆ ಇಲ್ಲಿ ಹೂಡಿಕೆದಾರನ ಹಣ ದೀರ್ಘಾವಧಿಗೆ ಒಂದು ಕಡೆ ಕಚ್ಚಿ ನಿಲ್ಲುತ್ತದೆ. ಇದೊಂದು ದೊಡ್ಡ ಸಮಸ್ಯೆ. ಇದು ಸಮಸ್ಯೆಯಲ್ಲ ಎನ್ನುವವರಿಗೆ ಇದು ಉತ್ತಮ ಹೂಡಿಕೆಯಾಗಿದೆ. ಜನರಿಗೆ ಇದರ ಮೇಲಿನ ಹೂಡಿಕೆಯಲ್ಲಿ ಇರುವ ಸಂಭಾವ್ಯ ನಷ್ಟಗಳನ್ನ, ಅಪಾಯವನ್ನ ಮೊದಲೇ ತಿಳಿ ಹೇಳಿದರೆ ಇದೊಂದು ಉತ್ತಮ ಹೂಡಿಕೆ ಇನ್ಸ್ಟ್ರುಮೆಂಟ್ ಆಗವುದರಲ್ಲಿ ಸಂಶಯವಿಲ್ಲ. 100 ವರ್ಷದ ಲಾಕ್ ಇನ್ ಪಿರಿಯಡ್ ಬಹಳ ದೊಡ್ಡದು. ಸೆಬಿ, ಹಣಕಾಸು ಸಚಿವಾಲಯದ ವಿನಂತಿಯನ್ನ ಮನ್ನಸಿ ಇದರಲ್ಲಿ ಒಂದಷ್ಟು ಬದಲಾವಣೆ ತಂದರೆ ಒಳ್ಳೆಯದು.ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp