social_icon

ದುರಿತಕಾಲದಲ್ಲಿ ಪಾಲಿಸಬೇಕಾದ ದಶಾಂಶಗಳು!

ಹಣಕ್ಲಾಸು-258

-ರಂಗಸ್ವಾಮಿ ಮೂಕನಹಳ್ಳಿ 

Published: 06th May 2021 12:00 AM  |   Last Updated: 05th May 2021 09:11 PM   |  A+A-


Hanaclasu: 10 financial management principles to follow during crisis period

(ಸಾಂಕೇತಿಕ ಚಿತ್ರ)

Posted By : srinivasrao
Source : Online Desk

ಹಿಂದೊಂದು ಕಾಲವಿತ್ತು ಜನ ಶಾಂತಿಯಿಂದ ಮತ್ತು ಇದ್ದುದ್ದರಲ್ಲೇ ನೆಮ್ಮದಿಯಿಂದ ಬದುಕುತಿದ್ದರು.

ಕೊರೋನ ಎನ್ನುವ ವೈರಸ್ ಬದುಕಿನ ಬುನಾದಿಯನ್ನ ಅಲ್ಲಾಡಿಸುತ್ತಿದೆ. ಇಂದಿನ ಸಮಯದಲ್ಲಿ ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಮಾಸಿಕ ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವವನಿಂದ ಲಕ್ಷಾಂತರ ಸಂಬಳ ಪಡೆಯುವ ವ್ಯಕ್ತಿಯದ್ದು ಅದೇ ಗೋಳು. ಇಂತಹ ಸ್ಥಿತಿ ಏಕೆ ಬಂದಿತು? ಎನ್ನುವ ವಿಶ್ಲೇಷಣೆಗೆ ಹೋದರೆ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ವಿಷಯ, 'ಇತಿಮಿತಿಯಿಲ್ಲದ ಖರ್ಚು 'ಮತ್ತು 'ನಮಗೇನು ಬೇಕು ಅಥವಾ ಬೇಡ' ಎನ್ನುವ ಅರಿವು ಇಲ್ಲದೆ ಇರುವುದು ಸಾಮಾನ್ಯವಾಗಿ ಎಲ್ಲರೂ ಹಣಕಾಸಿನ ಕೊರತೆ ಎದುರಾಗಲು ಇರುವ ಮುಖ್ಯ ಕಾರಣ.

ನನ್ನ ಕಾರಿನ ಸಾರಥಿ ತುಂಬಾ ಒಳ್ಳೆಯ ಹುಡುಗ ಎಲ್ಲವೂ ಸರಿ, ಆದರೆ ಆತನ ಕೈಲಿರುವ ಮೊಬೈಲ್ ಬೆಲೆ 12 ಸಾವಿರ ರೂಪಾಯಿ. ಹೋಗಲಿ ಬಿಡಿ ಆತನಿಗೆ ಹಣಕಾಸಿನ ಅರಿವಿಲ್ಲ ಆರ್ಥಿಕ ಮೌಢ್ಯತೆಯಿಂದ ಬಳಲುತ್ತಿದ್ದಾನೆ ಎಂದು ಬಿಡಬಹುದು. ನನಗೆ ಇನ್ನೊಬ್ಬರು ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮಿತ್ರರೊಬ್ಬರಿದ್ದಾರೆ ಅವರ ತಿಂಗಳ ಸಂಬಳ ಲಕ್ಷ ರೂಪಾಯಿ ಆದರೂ ಸದಾ ಋಣಾತ್ಮಕ ಮಾತು ಮುಖದಲ್ಲಿ ನೀರಸ ಭಾವ. ಕೊನೆಗೂ ನನ್ನ ಬಳಿ ತಮ್ಮ ಆರ್ಥಿಕತೆಯನ್ನು ಹೇಳಿಕೊಂಡರು. ಹೆಸರಿಗೆ ಲಕ್ಷ ಸಂಬಳ ಅದು ಬಂದ ಒಂದೆರಡು ದಿನವೂ ಅವರು ಅದರ ಮಾಲೀಕರಲ್ಲ. ಹತ್ತರಿಂದ ಹದಿನೈದು ಸಾವಿರ ಬಾಡಿಗೆಗೆ ಸಿಗುವ ಅಪಾರ್ಟ್ಮೆಂಟ್ ಅರವತ್ತು ಲಕ್ಷ ವ್ಯಯಿಸಿ ಖರೀದಿಸಿದ್ದಾರೆ. ಅದಕ್ಕೆಂದು ಪ್ರತಿ ತಿಂಗಳ ಕಂತು ಬರೋಬ್ಬರಿ ನಲವತ್ತು ಸಾವಿರ! ಕಾರಿಗೆ ಇನ್ನೊಂದು ಎಂಟು ಸಾವಿರ. ಇಬ್ಬರು ಮಕ್ಕಳ ಶಾಲೆಯ ಶುಲ್ಕ ತಿಂಗಳ ಲೆಕ್ಕದಲ್ಲಿ ಹತ್ತಿರಹತ್ತಿರ ಇಪ್ಪತ್ತು ಸಾವಿರ. ಪೆಟ್ರೋಲ್, ಮನೆ ಖರ್ಚು, ನಾಳಿನ ಅಸ್ಥಿರತೆಗಾಗಿ ಒಂದಷ್ಟು ಉಳಿತಾಯ ಮಾಡಬೇಕಲ್ಲವೇ? ಈ ಮಧ್ಯೆ ಯಾರಿಗಾದರೂ ಹುಷಾರು ತಪ್ಪಿದರೆ ಅದು ಇನ್ನೊಂದು ಕಥೆ.

ಮೇಲಿನ ಇಬ್ಬರು ವಿಭಿನ್ನ ವ್ಯಕ್ತಿಗಳ ಉದಾಹರಣೆ ಹೇಳಿದ್ದರ ಉದ್ದೇಶ ಇಷ್ಟೇ. ವ್ಯಕ್ತಿಯ ವೈಯಕ್ತಿಕ ಹಿನ್ನೆಲೆ ಏನೇ ಇರಲಿ ಹಣಕಾಸಿನ ವಿಷಯದಲ್ಲಿ ಅವರು ಸಮಾನರು. ಸಮಾಜದಲ್ಲಿ ಗಣ್ಯರು ಹೆಸರು ಮಾಡಿದವರು ಕೂಡ ಹಣಕಾಸಿನ ಮೌಢ್ಯತೆಯಿಂದ ಬಳಲುವುದನ್ನು ನಾವು ಕಂಡಿದ್ದೇವೆ. ಚಿಕ್ಕಂದ್ದಿನಿಂದ ನಮ್ಮ ಹೆತ್ತವರು ಮಾಡಿದ್ದು ಸುತ್ತಮುತ್ತಲಿನ ಜನರ ನೋಡಿ ಕಲಿತದ್ದು ಅಷ್ಟು ಸಲುಭವಾಗಿ ಹೋಗುವುದಿಲ್ಲ.

ಆರ್ಥಿಕ ಸಾಕ್ಷರತೆ ಬರದೆ ಹಣಕಾಸಿನ ಕೊರತೆ ನೀಗುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಒಂದು ಸಣ್ಣ ತಪ್ಪು ಜೀವನ ಪೂರ್ತಿ ಅನುಭವಿಸಬೇಕಾದೀತು ಎಚ್ಚರ. ಕಳೆದ ಎರಡು ದಶಕದಲ್ಲಿ ನಮ್ಮ ಬದುಕು ಪೂರ್ಣ ಬದಲಾಗಿ ಹೋಗಿದೆ. ನಾವು ಜಾತಿ, ಧರ್ಮ, ಭಾಷೆ ಇವುಗಳ ಮೀರಿ ಇಂತಹ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ. ಇದೀಗ ನಮ್ಮೆದುರು ಹೊಸ ಸನ್ನಿವೇಶ ಬಂದು ನಿಂತಿದೆ. ಇದೇನಿದು? ಎನ್ನುವುದನ್ನ ಒಂದಷ್ಟು ತಿಳಿದುಕೊಳ್ಳೋಣ.

  1. ಅವಶ್ಯಕತೆಯ ಆಧಾರದ ಮೇಲೆ ಖರ್ಚಿಗೆ ಆದ್ಯತೆ ನೀಡಿ. ಇವತ್ತಿನ ದಿನಗಳಲ್ಲಿ ಬಣ್ಣ ಬಣ್ಣದ ಜಾಹಿರಾತು ಎಂತಹವರನ್ನೂ ಸೆಳೆಯುತ್ತದೆ. ರಸ್ತೆಯ ಇಕ್ಕೆಲೆಗಳಲ್ಲಿ ಮೊಬೈಲ್ ಶಾಪ್ ಗಳದ್ದೆ ಸಾಮ್ರಾಜ್ಯ. ವ್ಯಕ್ತಿಯ ಸಂಬಳ ಎಷ್ಟಾದರೂ ಇರಲಿ ಅವರ ಕೈಲಿರುವ ಮೊಬೈಲ್ ಮಾತ್ರ ಹತ್ತಿಪ್ಪತ್ತು ಸಾವಿರಕ್ಕೆ ಕಡಿಮೆಯಿಲ್ಲ. ಬೇಡದ ವಿಷಯದ ಮೇಲೆ ವೆಚ್ಚ ಮಾಡಿ ಬೇಕಾದ ವಸ್ತು ಖರೀದಿಸಲು ಪರದಾಡುವ ಜನರ ಸಂಖ್ಯೆ ಹೆಚ್ಚು.  ಮನೆಯಲ್ಲಿ ಐದು ಜನರಿದ್ದಾರೆ ಐದು ಜನರ ಕೈಯಲ್ಲಿ ಸ್ಮಾರ್ಟ್ ಫೋನ್! ಐದು ಸ್ಮಾರ್ಟ್ ಫೋನ್ ಬೆಲೆ ಲಕ್ಷಾಂತರ. ಇದೆ ಹಣವನ್ನ ಬೇರೆಡೆ ಹೂಡಿಕೆ ಮಾಡಿದ್ದರೆ ಅದು ವೃದ್ಧಿಯಾಗುತ್ತಿತ್ತು. ಸ್ಮಾರ್ಟ್ ಫೋನ್ಗಳ ಆಯಸ್ಸು ಹೆಚ್ಚೆಂದರೆ ಎರಡರಿಂದ ಮೂರು ವರ್ಷ ಅಷ್ಟೇ. ನೀವು ಅವರಿಗಿಂತ ಭಿನ್ನರಾಗಿ.
  2. ಮನೆ ಕೊಳ್ಳುವ ಮುಂಚೆ ಸಾವಿರ ಸಲ ಯೋಚಿಸಿ. ಅದೇ ಮನೆಯನ್ನು ಬಾಡಿಗೆಗೆ ಪಡೆದರೆ ಎಷ್ಟು ಹಣ, ಕೊಂಡರೆ ಎಷ್ಟು ಕಂತಿನ ಹಣ ಅನ್ನುವುದು ಮೊದಲು ತಿಳಿದುಕೊಳ್ಳಿ. ಎರಡರ ನಡುವೆ ಹೆಚ್ಚು ಅಂತರವಿರದಿದ್ದರೆ ಕೊಳ್ಳುವುದು ಒಳ್ಳೆಯದು. ಎಲ್ಲಕ್ಕೂ ಮುಖ್ಯ ಇಂದಿನ ಅಸ್ಥಿರ ದಿನಗಳಲ್ಲಿ ನಿಮ್ಮ ಕೆಲಸ ಒಂದೇ ನಗರದಲ್ಲಿ ಇರುತ್ತದೆ ಎನ್ನುವುದರ ಗ್ಯಾರಂಟಿ ಇಲ್ಲ. ಈ ಅಂಶವನ್ನು ಗಮನದಲ್ಲಿಡಿ. 2030ರ ವೇಳೆಗೆ ಯೂರೋಪು ಮತ್ತು ಇತರ ಮುಂದುವರಿದ ದೇಶಗಳಲ್ಲಿ ಮನೆ ಕೊಳ್ಳುವುದು ‘ಔಟ್ ಡೇಟೆಡ್’ ಆಗಲಿದೆ. ಎಲ್ಲಿ ಕೆಲಸವಿದೆ ಅಲ್ಲಿ ದಿನದ ಬಾಡಿಗೆ, ವಾರದ ಬಾಡಿಗೆ ಅಥವಾ ತಿಂಗಳ ಬಾಡಿಗೆ ಆಧಾರದ ಮೇಲೆ ವಾಸಿಸಲು ಶುರು ಮಾಡುತ್ತಾರೆ. ಆದರೆ ನಮ್ಮಲ್ಲಿ ಕೆಲಸದ ಜಾಗಕ್ಕೂ ವಾಸಿಸುವ ಜಾಗಕ್ಕೂ ಬಹಳ ದೂರವಿರುತ್ತದೆ. ಹೀಗೆ ಬೆಂಗಳೂರಿನಲ್ಲಿ ಓಡಾಡುವರ ಸಂಖ್ಯೆ ಬಹಳ.  ದೂರದಲ್ಲಿ ಕೊಂಡ ಫ್ಲಾಟ್ ಮರು ಮಾರಾಟಕ್ಕೆ ಇಂದಿನ ದಿನಗಳಲ್ಲಿ ಒಳ್ಳೆಯ ದರ ಕೂಡ ಸಿಕ್ಕುವುದಿಲ್ಲ.
  3. ಅವಶ್ಯಕತೆ ಇದ್ದರೆ ಮಾತ್ರ ಕಾರು ಕೊಳ್ಳಿ. ಕಾರು ನಿರ್ವಹಣೆಯ ಖರ್ಚು ಮತ್ತು ವಾರ್ಷಿಕ ಅದರ ಇನ್ಶೂರೆನ್ಸ್ ಖರ್ಚು, ಪಾರ್ಕಿಂಗ್ ಪರದಾಟ, ಟ್ರಾಫಿಕ್ ಜಂಜಾಟ ಇವನ್ನು ಗಮನಿಸಿದರೆ ಬಾಡಿಗೆ ಕಾರಿನಲ್ಲಿ ಓಡಾಡುವುದು ತುಂಬಾ ಉತ್ತಮ. ಬೆಂಗಳೂರಿಗರ ಮನೆಯ ಮುಂದೆ ಬೆಚ್ಚಗೆ ಕವರ್ ಹೊದ್ದು ಕೂತ ಕಾರಗಳ ಸಂಖ್ಯೆ ಬಹಳ ಹೆಚ್ಚು. ವಾರಕ್ಕೆ ಒಮ್ಮೆ ಕಾರು ತೆಗೆಯುವರ ಸಂಖ್ಯೆಯೂ ಬಹಳ ಹೆಚ್ಚು. ಕಾರಿನ ಮೇಲಿನ ಹತ್ತು ಲಕ್ಷ ಅಥವಾ ಅದಕ್ಕೂ ಹೆಚ್ಚು ರಸ್ತೆಯಲ್ಲಿ ಸುಮ್ಮನೆ ಬಿದ್ದಿರುತ್ತದೆ ಮತ್ತು ಅದಕ್ಕೆ ನಿಮ್ಮ ಖಾತೆಯಿಂದ ಮಾಸಿಕ ಬಡ್ಡಿ ಸಮೇತ ಕಂತು ಹೋಗುತ್ತಿರುತ್ತದೆ. "ಅಕ್ಕ-ಪಕ್ಕದ ಮನೆಯವರು ಏನೆಂದು ಕೊಂಡಾರು? ಸಮಾಜದಲ್ಲಿ ನಮಗೆ ಜನ ಗೌರವ ಕೊಡದೆ ಹೋಗಬಹುದು..." ಹೀಗೆ ಹಲವಾರು ಸಾಮಾಜಿಕ ಕಾರಣಗಳನ್ನ ನೀಡಿ ಕಾರು ಕೊಳ್ಳುವರ ಸಂಖ್ಯೆ ಬಹಳ ಹೆಚ್ಚು. ಹೀಗೆ ಕೊಂಡ ಕಾರನ್ನ ಪೂರ್ಣವಾಗಿ ಉಪಯೋಗಿಸುವುದೂ ಇಲ್ಲ. ವರ್ಷಕ್ಕೆ ಒಮ್ಮೆ ಇದರ ಇನ್ಶೂರೆನ್ಸ್ ಮೂರು ಅಥವಾ ನಾಲ್ಕು ತಿಂಗಳಿಗೆ ಒಮ್ಮೆ ನಿರ್ವಹಣೆಗೆ... ಹೀಗೆ ಖರ್ಚುಗಳಿಗೆ ಇದೊಂದು ರಹದಾರಿ.
  4. ಇವತ್ತು ಹೇಳಿ-ಕೇಳಿ ಸಾಮಾಜಿಕ ಜಾಲತಾಣದ ಯುಗ. ಬೇಡವೆಂದರೂ ಒಬ್ಬರನ್ನ ನೋಡಿ ಒಬ್ಬರು ತುಲನೆ ಮಾಡಿಕೊಳ್ಳುವುದು ಅಯ್ಯೋ ಅದು ನಮಗಿಲ್ಲ ಎಂದು ಕೊರಗುವುದು ಸಾಮಾನ್ಯ ಎನ್ನುವಂತೆ ಆಗಿದೆ. ಅದರಲ್ಲೂ ಪ್ರವಾಸ ಎನ್ನುವುದು ಹೆಚ್ಚಾಗಿ ಇಂತಹ ತುಲನೆಗೆ ಸಿಗುವ ವಿಷಯ. ಯಾರೋ ಸ್ನೇಹಿತರು ವಿದೇಶಿ ಪ್ರವಾಸ ಹೋಗಿದ್ದನ್ನ ಫೋಟೋ ಸಮೇತ ಜಾಲತಾಣದಲ್ಲಿ ಹಾಕುತ್ತಾರೆ. ಅವರಿಗೇನೋ ಅಷ್ಟು ಹಣ ಇತ್ತು ಹೋದರು ಎಂದು ಸುಮ್ಮನಾಗುವ ಬದಲು, ಸಾಲ ಮಾಡಿ ಕಂತು ಕಟ್ಟಿಯಾದರು ಸರಿಯೇ ವಿದೇಶಿ ಪ್ರವಾಸ ಮಾಡಬೇಕು ಎನ್ನುವ ಹುಚ್ಚಾಟಕ್ಕೆ ಸಮಾಜ ಇಂದು ಬಿದ್ದಿದೆ. ಇದು ಒಂದು ರೀತಿಯಲ್ಲಿ ಸಾಮಾಜಿಕ ಒತ್ತಡವಾಗಿ ಪರಿವರ್ತನೆಯಾಗಿದೆ. ನಮಗಿರುವುದು ಇಷ್ಟು ಎನ್ನುವ ತಿಳುವಳಿಕೆ ಮಕ್ಕಳಿಗೂ ಹೇಳುವುದಿಲ್ಲ. ಇಂತಹ ಹುಚ್ಚಾಟಗಳು ದೀಘಕಾಲದಲ್ಲಿ ಕುತ್ತಿಗೆಗೆ ಕುಣಿಕೆಯಾದವು ಎಚ್ಚರ.
  5. ಹಿಂದೆಲ್ಲ ಹೋಟೆಲ್ ಗೆ ಊಟಕ್ಕೆ ಹೋಗುವುದು ಅಪರಾಧ ಅಥವಾ ಅವಮಾನ ಎನ್ನವಂತಿತ್ತು. ಇಂದೇನಾಗಿದೆ...? ವಾರಾಂತ್ಯ ಬಂದರೆ ಸಾಕು ಐಷಾರಾಮಿ ಹೋಟೆಲ್ ಗಳಲ್ಲಿ ಊಟಕ್ಕೆ ಹೋಗಲೇಬೇಕು ಎನ್ನುವಂತಾಗಿದೆ. ಇದರಲ್ಲೂ ಕೂಡ ಸಾಮಾಜಿಕ ಜಾಲತಾಣದ ಕೊಡುಗೆ ಬೇಕಾದಷ್ಟಿದೆ. ವಾರಕೊಮ್ಮೆ ಅಥವಾ ತಿಂಗಳಿಗೆರೆಡು ಬಾರಿ ಐಷಾರಾಮಿ ಹೋಟೆಲ್ ನಲ್ಲಿ ಊಟ ಮಾಡದಿದ್ದರೆ ಸಾಮಾಜಿಕವಾಗಿ ನಾವು ಎಲ್ಲಿ ಬೇರೆಯವರಿಗಿಂತ ಕಡಿಮೆ ಎನ್ನಿಸಿಕೊಳ್ಳುತ್ತೇವೋ ಎನ್ನುವ ಭಯ ನಮ್ಮ ಜನರಲ್ಲಿ ಆವರಿಸಿದೆ. ಮನೆಯೂಟ ಎಂದರೆ ಕೀಳು ಹೋಟೆಲ್ ಊಟ ಎಂದರೆ ಮೇಲು ಎನ್ನುವ ಭಾವನೆ ಆಕ್ರಮಿಸತೊಡಗಿದೆ. ಸ್ವೀಗ್ಗಿ, ಝೋಮೋಟೋ ಗಳ ಹಾವಳಿಯಿಂದ ಕಾಸು ಹಾಳು ತೆಲೆಯೂ ಬೋಳು ಎನ್ನವಂತಾಗಿದೆ. ಬಿಸಿಯಾದ ಆರೋಗ್ಯಕರ ಆಹಾರ ಪದ್ಧತಿಯನ್ನ ನಿಧಾನವಾಗಿ ಪಾಶ್ಚ್ಯಾತ್ಯ ಅಡುಗೆ ಶೈಲಿಗಳು ಆಕ್ರಮಿಸಿವೆ. ಅದರ ಹಿಂದೆ ರೋಗಗಳು ಕೂಡ ಸದ್ದಿಲ್ಲದೇ ನಮ್ಮ ಸಮಾಜವನ್ನ ಹೊಕ್ಕಿವೆ.
  6. ಇನ್ನು ಬಟ್ಟೆ ಎನ್ನುವುದು ಮಾನ ಮುಚ್ಚಲು ಬೇಕಾದ ವಸ್ತುವಾಗಿ ಉಳಿದಿಲ್ಲ. ಹಿಂದೆಲ್ಲ ಶುಭ್ರವಾದ ಬಟ್ಟೆ ತೊಟ್ಟರೆ ಸಾಕು ಎನ್ನುವ ಭಾವನೆಯಿತ್ತು . ಇದೀಗ ಆ ಜಾಗದಲ್ಲಿ ಬ್ರಾಂಡ್ ಎನ್ನುವ ಭೂತ ಬಂದು ಕೂತಿದೆ. ಯಾವ ಬ್ರಾಂಡ್ ಎನ್ನುವುದರ ಮೇಲೆ ಬಟ್ಟೆಯ ಬೆಲೆ ನಿರ್ಧಾರವಾಗುತ್ತದೆ. ಬ್ರಾಂಡ್ ಇಲ್ಲದ ಬಟ್ಟೆಯನ್ನ ಧರಿಸಿದವನು ಈ ಸಮಾಜದಲ್ಲಿ ನಾಲಾಯಕ್ಕು ಎನ್ನುವಂತಾಗಿದೆ. ಮತ್ತದೆ ಸಾಮಾಜಿಕ ಒತ್ತಡ. ತಲೆ ಕೂದಲು ತೆಗೆಸಲು ಇರುವ ಸಲೂನ್, ಪಾರ್ಲರ್ ಗಳು, ಟ್ಯಾಟೂ ಹಾಕುವ ಶಾಪ್ ಗಳು ಹೀಗೆ ಎಲ್ಲವೂ ಬ್ರಾಂಡೆಡ್! ಬದುಕು ಮೂರಾಬಟ್ಟೆಯಾಗಿದ್ದರೂ ಸರಿ ಬಟ್ಟೆ ಮಾತ್ರ ಬ್ರಾಂಡೆಡ್ ಬೇಕೇ ಬೇಕು ಎನ್ನುವಂತಾಗಿದೆ. ಇಂತಹ ಸಾಮಾಜಿಕ ಪಿಡುಗುಗಳಿಂದ ಹೊರಬರಬೇಕಿದೆ.
  7. ಮದುವೆ-ಮುಂಜಿ-ಬರ್ತ್ ಡೇ ಪಾರ್ಟಿಗಳು ಹೀಗೆ ಮಾಡಬೇಕು ಎನ್ನುವ ಜಿದ್ದಿಗೆ ಸಮಾಜ ಬಿದ್ದು ದಶಕಗಳಾಗುತ್ತಾ ಬಂದಿದೆ. ಉಳ್ಳವರು ಮಾಡಿದರು ಎಂದು ಹೇಗಾದರೂ ಸರಿಯೇ ನಾವು ಹಾಗೆ ಮಾಡಬೇಕು ಎನ್ನುವ ಹಠಕ್ಕೆ ನಮ್ಮ ಸಮಾಜದ ಜನರು ಬಿದ್ದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ! ಮಕ್ಕಳು ಇತರ ಮಕ್ಕಳ ಬರ್ತ್ ಡೇ ಪಾರ್ಟಿ ನೋಡಿ ನಮ್ಮ ಬರ್ತ್ ಡೇ ಕೂಡ ಹಾಗೆ ಆಗಬೇಕು ಎನ್ನುವ ಹಠಕ್ಕೆ ಬೀಳುತ್ತವೆ. ಮಕ್ಕಳಿಗೆ ತಿಳಿ ಹೇಳುವ ಬದಲು ಪೋಷಕರೂ ಕೂಡ ಜಿದ್ದಿಗೆ ಬಿದ್ದವರಂತೆ ಖರ್ಚು ಮಾಡುತ್ತಾರೆ. ಸಮಾಜದಲ್ಲಿ ನಾವು ಕೂಡ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಳ್ಳುವ ಆತುರದಲ್ಲಿ ವೈಯಕ್ತಿಕ ಹಣಕಾಸು ಪರಿಸ್ಥಿತಿ ಹದೆಗೆಟ್ಟು ಹೋಗಿರುತ್ತದೆ. ಅದರ ಬಗ್ಗೆ ಗಮನವೇ ಇರುವುದಿಲ್ಲ.
  8. ನಾವೇ ಖುಷಿಯಿಂದ ಅಪ್ಪಿಕೊಂಡ ಇಂತಹ ಜೀವನ ಶೈಲಿಯಿಂದ ಸಮಾಜದಲ್ಲಿ ಹಿಂದೆ ಕೇಳಿರದ ಇದ್ದರೂ ಅಲ್ಲೊಂದು ಇಲ್ಲೊಂದು ಎನ್ನುವಂತಿದ್ದ ರೋಗಗಳ ಸಂಖ್ಯೆ ಇಂದು ಹೆಚ್ಚಾಗಿದೆ. ಆಸ್ಪತ್ರೆಗಳು ಖಾಸಗೀಕರಣಗೊಂಡಿವೆ. ಆರೋಗ್ಯಕ್ಕಾಗಿ ವ್ಯಯಿಸುವ ಹಣದ ಮೊತ್ತ ಬಹಳಷ್ಟು ಹೆಚ್ಚಾಗಿದೆ. ಹಿಂದೆ ಆರೋಗ್ಯಕ್ಕೆ ಎಂದು ಹಣ ತೆಗೆದಿರಿಸುವ ಅವಶ್ಯಕತೆ ಇರಲಿಲ್ಲ. ಇದೀಗ ಆರೋಗ್ಯದ ಕಾರಣಕ್ಕೆ ಕೂಡ ಒಂದಷ್ಟು ಹಣವನ್ನ ತೆಗೆದಿಡಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಇದನ್ನ ನಾನು ಇವತ್ತಿನ ಕೊರೋನ ಕಾಲಘಟ್ಟದಲ್ಲಿ ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂದು ಭಾವಿಸುವೆ.
  9. ಶಿಕ್ಷಣಕ್ಕೆ ಅಂತ ವ್ಯಯಿಸುವ ಹಣದ ಮೊತ್ತ ಬಹಳಷ್ಟು ಏರಿಕೆ ಕಂಡಿದೆ. ಇತ್ತೀಚಿಗೆ ಪದವಿಗೆ ಅಥವಾ ಪದವಿ ನಂತರ ಮಕ್ಕಳನ್ನ ವಿದೇಶಿ ಯೂನಿವೆರ್ಸಿಟಿಗೆ ಕಳಿಸದಿದ್ದರೆ ಅದು ಪೋಷಕರಾಗಿ ಮಕ್ಕಳಿಗೆ ಮಾಡಿದ ಅನ್ಯಾಯ ಎನ್ನುವ ಮಟ್ಟಕ್ಕೆ ಸಮಾಜ ಬದಲಾಗಿದೆ. ಉಳ್ಳವರು, ಅಲ್ಪಸ್ವಲ್ಪ ಇದ್ದವರು ಹೇಗೂ ಅಡ್ಜಸ್ಟ್ ಮಾಡಿಕೊಂಡು ಮಕ್ಕಳನ್ನ ವಿದೇಶಕ್ಕೆ ಕಳಿಸುತ್ತಿದ್ದಾರೆ. ಇದೀಗ ಸಾಲ ಮಾಡಿ ಕೂಡ ಕಳಿಸುವ ಪರಿಪಾಠ ಹೆಚ್ಚಾಗುತ್ತಿದೆ. ಇದು ಅತ್ಯಂತ ಅಪಾಯಕರ ಪ್ರವೃತ್ತಿ. ಮಕ್ಕಳಿಗೆ ಹಣದ ಮೌಲ್ಯ ಹೇಳಿಕೊಡುವುದರ ಬದಲು ಇಂತಹ ಹುಚ್ಚಾಟಕ್ಕೆ ಮಕ್ಕಳನ್ನ ಪ್ರೋತ್ಸಹಿಸುವುದು ತಪ್ಪು.
  10. ವರ್ಷ ಎನ್ನುವುದು ಹೇಗೆ ಕಳೆದು ಹೋಗುತ್ತದೆ ಎನ್ನವುದು ತಿಳಿಯುವುದೇ ಇಲ್ಲ. ನಾಳಿನ ನಿಮ್ಮ ಬದುಕಿಗೆ, ಮಕ್ಕಳ ಭವಿಷ್ಯಕ್ಕೆ ಉಳಿತಾಯ ಒಂದೇ ಸಾಲದು, ಹೂಡಿಕೆ ಕೂಡ ಬಹಳ ಮುಖ್ಯ. ಮಧ್ಯಮ ವರ್ಗ ಷೇರು ಮಾರುಕಟ್ಟೆಯ ಓನಾಮ ತಿಳಿಯದೆ ಏಜೆಂಟ್ ಹೇಳಿದ ಎಂದು ಹೂಡಿಕೆ ಮಾಡುವುದು ಈ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸರಿಯಾದ ಹೂಡಿಕೆ ಬಹಳ ಮುಖ್ಯ.

ಇದೆಲ್ಲಾ ಆಗುತ್ತಿರುವುದು ನಾವು ನಮ್ಮದಲ್ಲದ ಜೀವನಶೈಲಿಯ ಅನುಕರಣೆಯಿಂದ! ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಅವರದೇ ಅದ ಪ್ರಶ್ನೆ ಪತ್ರಿಕೆಯಿದೆ. ಒಬ್ಬರ ಉತ್ತರ ಇನ್ನೊಬ್ಬರಿಗೆ ಸರಿಯಾಗುವುದಿಲ್ಲ. ಅರ್ಥವಿಷ್ಟೆ.., ನಾವು ಪಾಶ್ಚ್ಯಾತರ ಅಂಧಾನುಕರಣೆ ಮಾಡುತ್ತಾ ನಮ್ಮ ಜೀವನಶೈಲಿಯನ್ನ ಕೀಳು ಎನ್ನುವ ಭಾವನೆ ಬೆಳೆಸಿಕೊಂಡಿದ್ದೇವೆ. ನೀವು ನಮ್ಮ ಹಿಂದಿನವರು ಬದುಕುತ್ತಿದ್ದ ರೀತಿಯನೊಮ್ಮೆ ಅವಲೋಕಿಸಿ. ಅಲ್ಲಿ ಕಸ ಎನ್ನುವ ಪದಕ್ಕೆ ಅರ್ಥವಿರಲಿಲ್ಲ. ಸಂಪನ್ಮೂಲಗಳ ಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಅವಶ್ಯಕೆತೆಗೆ ಮೀರಿದ ಯಾವುದನ್ನೂ ಅವರು ಬಳಸುತ್ತಿರಲಿಲ್ಲ. ಅಲ್ಲಿ ಸಾಮಾಜಿಕ ಸಾಮರಸ್ಯವಿತ್ತು. ಇಂದು ಆ ಜಾಗವನ್ನ ಸಾಮಾಜಿಕ ಒತ್ತಡ ಕಸಿದುಕೊಂಡಿದೆ.

ಸಮಾಜ ಇಂತಹ ಸಂಕ್ರಮಣ ಸ್ಥಿತಯಲ್ಲಿರುವಾಗ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಷ್ಟೀಯ ಸ್ಥಿರತೆ ಮತ್ತು ಭದ್ರತೆ ಬಹಳ ಮುಖ್ಯ. ಗಮನಿಸಿ ಒಬ್ಬ ವ್ಯಕ್ತಿ ಆರ್ಥಿಕವಾಗಿ ಭದ್ರವಾಗಿದ್ದರೆ ಅದು ಆತನ ಕುಟುಂಬದ ಆರ್ಥಿಕ ಭದ್ರತೆಗೆ ಬುನಾದಿ. ಹಾಗೆಯೇ ಒಂದು ಕುಟುಂಬ ಆರ್ಥಿಕವಾಗಿ ಭದ್ರವಾದರೆ ಅದು ಆ ಸಮಾಜದ ಆರ್ಥಿಕ ಭದ್ರತೆಗೆ ಸಹಕಾರಿ. ಹಾಗೆಯೇ ಸಮಾಜ ಭದ್ರವಾದರೆ ರಾಜ್ಯ, ದೇಶಗಳೂ ಭದ್ರವಾಗುತ್ತದೆ. ಹೀಗಾಗಿ ನಾನೊಬ್ಬ ಬದಲಾದರೇನು? ಎನ್ನುವ ಭಾವನೆಯಿಂದ ಹೊರಬಂದು ಮೇಲೆ ಉಲ್ಲೇಖಿಸಿದ ಮೂಲಭೂತ ತತ್ವಗಳನ್ನ ಪಾಲಿಸಿದ್ದೆ ಆದರೆ ಎಲ್ಲರಿಗೂ ಒಳ್ಳೆಯದು.

ಕೊನೆ ಮಾತು: ಯಾರು ಎಷ್ಟೇ ಸಲಹೆ ನೀಡಲಿ ಅದನ್ನು ಪಾಲಿಸುವುದು ನಿಮ್ಮ ಕೈಲಿದೆ. ಮುಂದಿನ ದಿನಗಳು ಇನ್ನಷ್ಟು ಅಸ್ಥಿರತೆ ಆಂತಕ ಹೊತ್ತು ತರಲಿವೆ.! ಕೆಲಸವಿಲ್ಲ ಎನ್ನುವುದು ಬಹಳ ಸಾಮಾನ್ಯ ಎನ್ನುವಂತಾಗುತ್ತದೆ. ಹೊಸ ಸನ್ನಿವೇಶಕ್ಕೆ ತಕ್ಕಂತೆ ಒಗ್ಗಿಕೊಂಡು ಬದುಕಲು ಕಲಿಯಬೇಕು. ನೆನಪಿರಲಿ ಇಂದಿನ ಸಮಾಜದಲ್ಲಿ ಬದಲಾದ ಸನ್ನಿವೇಶಕ್ಕೆ ಎಷ್ಟು ಬೇಗ ನಾವು ಹೊಂದಿಕೊಳ್ಳುತ್ತೇವೆ ಅಷ್ಟೂ ಒಳ್ಳೆಯದು. ಪ್ರಕೃತಿ ಬಲಹೀನರನ್ನ ಬಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಯಕ್ಕೆ ತಕ್ಕಂತೆ ಬದಲಾದವರಿಗೆ ಮಾತ್ರ ಉಳಿಗಾಲ!!. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp