ಅಭಿವೃದ್ಧಿ ಎನ್ನುವ ಮಾಯಾಜಿಂಕೆ, ಓಡಿದಷ್ಟೂ ತಪ್ಪದು ದಣಿವು ಮಂಕೆ!

ಹಣಕ್ಲಾಸು-259

-ರಂಗಸ್ವಾಮಿ ಮೂಕನಹಳ್ಳಿ 

Published: 13th May 2021 04:11 AM  |   Last Updated: 13th May 2021 02:02 PM   |  A+A-


File pic
Posted By : Srinivas Rao BV
Source : Online Desk

ಕೊರೋನ ವೈರಸ್ ಬಯೋಲಾಜಿಕಲ್ ವೆಪನ್, 2015 ರ ಸಮಯದಲ್ಲಿ ಚೀನಾದ ಪೀಪಲ್ಸ್ ಲಿಬೇರೇಷನ್ ಆರ್ಮಿ ಬಹಳ ದೊಡ್ಡ ಮೊತ್ತವನ್ನ ಹೂಡಿಕೆ ಮಾಡಿತ್ತು. 

ಹೂಡಿಕೆಯ ಉದ್ದೇಶ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಮನುಷ್ಯರಿಗೆ ಮಾತ್ರ ಸೋಂಕು ತಗುಲಿಸಿ ಘಾತಕವಾಗಬಲ್ಲ ಕೊರೋನ ವೈರಸ್ ಕಂಡು ಹಿಡಿಯುವುದಾಗಿತ್ತು. 2015ರ ವೇಳೆಗೆ ಇಂತಹ ಕೊರೋನ ವೈರಸ್ ಚೀನಾದ ಬಳಿಯಿತ್ತು. ಆದರೆ ನಾಲ್ಕು ವರ್ಷಗಳ ಕಾಲ ಅದು ಹೇಗೆಲ್ಲಾ ಪರಿಣಾಮ ಬೀರಬಹುದು ಎನ್ನುವುದನ್ನ ಅವರು ಅಧ್ಯಯನ ಮಾಡಲು ಸಮಯವನ್ನ ತೆಗೆದುಕೊಂಡರು. ಇದು ಆರ್ಮಿ ಲ್ಯಾಬ್ ನಲ್ಲಿ ತಯಾರಿಸಿ, ಯೋಜನೆ ಮಾಡಿ ಜಗತ್ತಿಗೆ ಬಿಟ್ಟ ವೈರಸ್. ಇದು ಪ್ರಕೃತ್ತಿಯಿಂದ ಉಂಟಾದುದ್ದಲ್ಲ. ಈ ಮಾತುಗಳನ್ನ ಹೇಳಿದವರು ಡಾ. ಲೀ ಮೆಂಗ್ ಯಾನ್. ಈಕೆ ಹಾಂಗ್ ಕಾಂಗ್ ಯೂನಿವೆರ್ಸಿಟಿಯಲ್ಲಿ ಪೋಸ್ಟ್ ಡಾಕ್ಟೋರಲ್ ವೈರೊಲೊಜಿಸ್ಟ್ ಮಾಡುತ್ತಿದ್ದವರು. ಏಪ್ರಿಲ್ 2020 ರ ವೇಳೆಗೆ ಇವರು ಅಮೇರಿಕಾದಲ್ಲಿ ಆಶ್ರಯವನ್ನ ಪಡೆದಿದ್ದಾರೆ. ಈ ಮಾತುಗಳು ನಿಜವೋ ಅಥವಾ ಸುಳ್ಳೋ? ಎನ್ನುವುದನ್ನ ವಿಶ್ಲೇಷಣೆ ಮಾಡುವುದು ಈ ಲೇಖನದ ಉದ್ದೇಶವಲ್ಲ. ಬದಲಿಗೆ ಮನುಷ್ಯನ ಅಭಿವೃದ್ಧಿ ಮಂತ್ರ ಇಂತಹ ಕಾರ್ಯಗಳಿಗೆ ಅಸ್ಥಿಭಾರವನ್ನ ಹಾಕುತ್ತದೆ ಎನ್ನುವುದನ್ನ ವಿವರಿಸುವುದು. ಮತ್ತು ನಮ್ಮ ಇಂದಿನ ಗ್ರೋಥ್ ಅಥವಾ ಅಭಿವೃದ್ಧಿ ಮಂತ್ರ ಸರಿಯಿದೆಯೇ? ಎಂದು ಪ್ರಶ್ನಿಸಿಕೊಳ್ಳುವುದು.

ಕಳೆದ ನಲವತ್ತು ವರ್ಷಗಳಲ್ಲಿ ಚೀನಾ ಜಗತ್ತನ್ನ ಅಚ್ಚರಿಗೊಳಿಸುವ ರೀತಿಯಲ್ಲಿ ಬೆಳೆಯುತ್ತಾ ಬಂದದ್ದು ಇಂದಿಗೆ ನಮಗೆಲ್ಲಾ ತಿಳಿದಿರುವ ವಿಷಯ. ರಷ್ಯಾ ದೇಶವನ್ನ ಶೀತಲ ಸಮರದಲ್ಲಿ ಮಣಿಸಿದ್ದ ಅಮೇರಿಕಾ ಇನ್ನೊಂದು ಶತಮಾನ ತನ್ನ ಪಾರುಪತ್ಯ ಜಗತ್ತಿನ ಮೇಲೆ ಖಾಯಂ ಎಂದುಕೊಂಡಿತ್ತು. ಎಲ್ಲಿಯೂ ಇಲ್ಲದ ಚೀನಾ ದಿಢೀರ್ ಎಂದು ತನ್ನ ಬೃಹದಾಕಾರವನ್ನ ವಿಶ್ವಕ್ಕೆ ತೋರಿಸಿತು. ಇವತ್ತಿಗೆ ಜಗತ್ತಿನಲ್ಲಿ ಈ ಮಟ್ಟದ ಅಸ್ಥಿರತೆ ಇರಲು ಕಾರಣ ವಿಶ್ವದ ಹುಕುಂಮತ್ತಿಗೆ ಬಲಾಢ್ಯ ರಾಷ್ಟ್ರಗಳ ನಡುವಿನ ಕಾದಾಟ. 

ಜಗತ್ತಿಗೆ ಜಗತ್ತು ಇನ್ನೂ ಕೊರೋನ ವೈರಸ್ ನ ಹಾವಳಿಯಿಂದ ಬಳಲುತ್ತಿದ್ದರೆ, ಚೀನಾ ಮಾತ್ರ ಸೌತ್ ಚೀನಾ ಸಮುದ್ರದಲ್ಲಿ ತನ್ನ ನೌಕಾ ಬಲವನ್ನ ತೋರಿಸುತ್ತಿದೆ. ಈ ಹಿಂದೆ ಅಮೇರಿಕಾ ಮತ್ತು ಯೂರೋಪಿನ ಹಲವು ರಾಷ್ಟ್ರಗಳು ಸೌತ್ ಚೀನಾ ಸಮುದ್ರದಲ್ಲಿ ತಮ್ಮ ನೌಕಾ ಪಡೆಗಳನ್ನ ಕೂಡ ಸುತ್ತು ಹೊಡೆಸಿದ್ದವು. ವಾರದಿಂದ ಇಲ್ಲಿ ಠಿಕಾಣಿ ಹೂಡಿ ತಮ್ಮ ಪ್ರಾಬಲ್ಯವನ್ನ ವಿಶ್ವಕ್ಕೆ ಸಾರುವ ಕೆಲಸವನ್ನ ಚೀನಾ ಮಾಡುತ್ತಿದ್ದೆ. ಈ ದಾರಿಯಲ್ಲಿ ಸಾವಿರಾರು ಕೋಟಿಯ ವ್ಯವಹಾರ ಸಾಗುತ್ತದೆ. ಇದರ ಮೇಲಿನ ಹಿಡಿತಕ್ಕೆ ಆಗುತ್ತಿರುವ ಜಟಾಪಟಿಯಿದು. ಹೆಚ್ಚು ಹಣ ಸಂಗ್ರಹವಾದಂತೆಲ್ಲ ಜಗತ್ತು ನನ್ನ ಮಾತು ಕೇಳಲಿ ಎನ್ನುವ ಭಾವನೆ ಬಲವಾಗುತ್ತಾ ಹೋಗುತ್ತದೆ. ಅಮೇರಿಕಾ ದಶಕಗಳ ಕಾಲ ಜಗತ್ತಿನ ಮೇಲೆ ಹಿಡಿತ ಹೊಂದಿದ್ದನ್ನ ನಾವು ಕಾಣಬಹುದು. ಆ ದೇಶ ಎಂದಿನಿಂದಲೂ ಡಬಲ್ ಸ್ಟ್ಯಾಂಡರ್ಡ್ ಬಳಸಿಕೊಂಡು ಬಂದಿತು. ತನ್ನ ವಿರುದ್ಧ ಧ್ವನಿಯೆತ್ತಿದ ದೇಶಗಳ ವಿರುದ್ಧ ಸ್ಯಾಂಕ್ಷನ್ ಹೆಸರಿನಲ್ಲಿ ಬಹಿಷ್ಕಾರ ಹಾಕುತ್ತಿತ್ತು. ಇವತ್ತಿಗೆ ಅಮೇರಿಕಾ ಕೈಲಿದ್ದ ಆ ಅಧಿಕಾರವನ್ನ ಚೀನಾ ಕಸಿಯುವ ಹುನ್ನಾರದಲ್ಲಿದೆ. ಅಧಿಕಾರ ಹಸ್ತಾಂತರ ಸುಲಭವಾಗಿ ಆಗುತ್ತಿಲ್ಲ. ಹೀಗಾಗಿ ಇಷ್ಟು ದೊಡ್ಡ ಮಟ್ಟದ ಹೊಡೆದಾಟವಾಗುತ್ತಿದೆ. ಹಿಂದೆ ಮದ್ದುಗುಂಡುಗಳನ್ನ ಸಿಡಿಸಿ ಮಾಡುವ ಯುದ್ದದಲ್ಲಿ ಸೈನಿಕರ ಸಾವಾಗುತ್ತಿತ್ತು. ಇಂದು ಜಗತ್ತು ಬೇರೆಯ ರೀತಿಯ ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಸಾವಿಗೆ ಯಾರೂ ಬೇಕಾದರೂ ಈಡಾಗಬಹುದು.

ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಹೊರಟಿರುವ ದಾರಿ ಎಷ್ಟರ ಮಟ್ಟಿಗೆ ಸರಿಯಿದೆ? ಗಮನಿಸಿ ನೋಡಿ 1950ರ ನಂತರ ಅಮೇರಿಕಾ ಸೃಷ್ಟಿಸಿದ ಸಂಪತ್ತು, ಜಗತ್ತಿನ ಇತರೆ ದೇಶಗಳು ಆ ದೇಶದ ಅಭಿವೃದ್ಧಿ ಮಾಡೆಲ್ನನ್ನ ನಕಲು ಮಾಡಲು ಪ್ರೇರೇಪಿಸಿತು. ಇತರ ದೇಶಗಳು ಕೂಡ ಇದರಿಂದ ಸಂಪತ್ತು ಸೃಷ್ಟಿ ಮಾಡಿದವು. ಗಗನಚುಂಬಿ ಕಟ್ಟಡಗಳು, ಜನರ ಬಳಿ ಓಡಾಡಲು ಕಾರು, ಐಷಾರಾಮಿ ವಸ್ತುಗಳು ಎಲ್ಲವೂ ಬಂದವು. ಆದರೆ ಈ ಅಭಿವೃದ್ಧಿಯ ಓಟ ಎಲ್ಲಿಯವರೆಗೆ ತಾನೇ ಸಾಗೀತು? ಎಲ್ಲಕ್ಕೂ ಒಂದು ಅಂತ್ಯ ಎನ್ನುವುದು ಇದ್ದೇ ಇರಬೇಕಲ್ಲವೇ? ಇವುಗಳ ಬಗ್ಗೆ ಒಂದಷ್ಟು ಅಂಶಗಳನ್ನ ಗಮನಿಸೋಣ.  

  1. ಎಲಾನ್ ಮಸ್ಕ್ ಕನಸಿನ ಸಂಸ್ಥೆ ಟೆಸ್ಲಾ, ಚೀನಾದಲ್ಲಿ ಹೆಚ್ಚಿನ ಮಾರಾಟವಾಗುತ್ತಿಲ್ಲ. ಇಲ್ಲಿನ ಹೂಡಿಕೆದಾರರು ಆಗಲೆ ಗೋಳಾಡಲು ಶುರುವಿಟ್ಟುಕೊಂಡಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಹೂಡಿಕೆ ಮಾಡಿದ ಹಣ ದುಪಟ್ಟಾಗುತ್ತಲೆ ಹೋಗುತ್ತಿರಬೇಕು. ಒಮ್ಮೆ ಹಾಕಿದ ಹಣ ಕುಸಿತಕಂಡರೆ ಸಾಕು ಮಾರುಕಟ್ಟೆಯಲ್ಲಿ ತಲ್ಲಣ ಶುರುವಾಗುತ್ತದೆ. ಪ್ರೊಡಕ್ಷನ್ ನಿಲ್ಲಬಾರದು, ಪದಾರ್ಥಗಳು ತಯಾರಾಗುತ್ತಲೆ ಇರಬೇಕು. ಜನ ಅದನ್ನ ಕೊಳ್ಳುತ್ತಲೆ ಇರಬೇಕು. ಎರಡರಲ್ಲಿ ಯಾವುದೊಂದು ನಿಂತರೂ, ಹೂಡಿಕೆದಾರ ನಷ್ಟವನ್ನ ಅನುಭವಿಸಬೇಕಾಗುತ್ತದೆ. ಈ ನಿಯಮದ ಮೇಲೆ ನಿಂತಿರುವ ನಮ್ಮ ಅಭಿವೃದ್ಧಿ ಎಷ್ಟು ದಿನ ಎಂದು ಸಾಗಬಲ್ಲದು?
  2. ಕೆಲಸ ಸೃಷ್ಟಿ ಎನ್ನುವ ಮಾಯಾಜಾಲ: ಇಂದಿಗೆ ಜಗತ್ತಿನಲ್ಲಿ 750 ಕೋಟಿಗೂ ಹೆಚ್ಚಿನ ಜನರಿದ್ದಾರೆ. ಇವೆರೆಲ್ಲರಿಗೂ ಕೆಲಸ ಸೃಷ್ಟಿ ಮಾಡುವುದು ಸಾಧ್ಯವಿಲ್ಲದ ಕೆಲಸ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಕೈಗಾರೀಕರಣ, ಅಥವಾ ಅಭಿವೃದ್ಧಿಯಿಂದ ಕೆಲಸ ಸೃಷ್ಟಿಯಾಗುತ್ತದೆ ಎನ್ನುವ ಹಸಿ ಸುಳ್ಳನ್ನ ನಂಬಿಸಿ ಜಗತ್ತನ್ನ ನಡೆಸುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಜಗತ್ತಿನಾದಂತ್ಯ ಕೆಲವೇ ಕೆಲವು ಜನರು ಅತ್ಯಂತ ಹೆಚ್ಚಿನ ಸಂಪತ್ತಿನ ಒಡೆಯರಾಗುತ್ತಿದ್ದರೆ ಸಣ್ಣ ಪುಟ್ಟ ವ್ಯಾಪಾರಗಳು ನೆಲ ಕೆಚ್ಚುತ್ತಿವೆ. ಒಂದು ದೊಡ್ಡ ಸಂಸ್ಥೆ ಸಣ್ಣ ಪುಟ್ಟ ಸಂಸ್ಥೆಗಳನ್ನ ಕೊಂಡುಕೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇರಬೇಕಾದ ಪೈಪೋಟಿ ಇಲ್ಲವಾಗುತ್ತಿದ್ದೆ. ಭಾರತ ಮಾತ್ರವಲ್ಲ ಇದು ಜಗತ್ತಿನ ಎಲ್ಲಾ ದೇಶಗಳ ಕಥೆ. ನೀವು ಯಾವುದೇ ದೇಶವನ್ನ ಉದಾಹರಣೆಗೆ ತೆಗೆದುಕೊಂಡು ನೋಡಿ, ಅಲ್ಲೆಲ್ಲಾ ವ್ಯಾಪಾರ ವಹಿವಾಟು ಕೇವಲ ಎರಡು ಅಥವಾ ಮೂರು ಬೃಹತ್ ಸಂಸ್ಥೆಗಳು ನಡೆಸುತ್ತಿರುತ್ತವೆ. ಈ ರೀತಿ ಆಗಲು ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ದೊಡ್ಡ ಸಂಸ್ಥೆಗಳೊಡನೆ ಕಾದಾಡಲು ಅಂತಹುದೇ ದೊಡ್ಡ ಸಂಸ್ಥೆಗಳು ಬೇಕಾಗುತ್ತದೆ. ಹೀಗಾಗಿ ಇವುಗಳ ಸೃಷ್ಟಿಯಾಗಿದೆ. ಇಂತಹ ಸೃಷ್ಟಿ ಎಷ್ಟು ದಿನ ಸಾಗೀತು?
  3. ಟೆಕ್ನಾಲಜಿ ವರವೋ ಶಾಪವೋ?: ನಮ್ಮ ಮನೆಯಿಂದ ಒಂದಷ್ಟು ದೂರದಲ್ಲಿ ಒಂದು ಫಾರಂ ಇದೆ. ಅಲ್ಲಿ ಒಬ್ಬ ಹುಡುಗ ನಿತ್ಯವೂ ಸೊಪ್ಪು ಮತ್ತಷ್ಟು ತರಕಾರಿಯನ್ನ ಹಾಕಿಕೊಂಡು ಕುಳಿತಿರುತ್ತಾನೆ. ದೊಡ್ಡ ದೊಡ್ಡ ಅಂಗಡಿಯಲ್ಲಿ ಖರೀದಿಸುವುದು ಬೇಡ, ಈ ಹುಡುಗನ ಬಳಿ ತರಕಾರಿ ಕೊಳ್ಳೋಣ ಎಂದು ಹೋದರೆ, ಆ ಹುಡುಗ ಯಾರು ಬಂದಿದ್ದಾರೆ ಎಂದು ತಲೆಯನ್ನ ಎತ್ತಿ ಕೂಡ ನೋಡುವುದಿಲ್ಲ. ಆತ ಕೈಲಿರುವ ಸ್ಮಾರ್ಟ್ ಫೋನ್ ನಲ್ಲಿ ಹುದುಗಿ ಹೋಗಿದ್ದಾನೆ. ಬೆಳಗಿನ ಆರೂವರೆ ಸಮಯದಲ್ಲಿ ಅದ್ಯಾವುದೋ ಆಟದಲ್ಲಿ ಅವನು ತಲ್ಲೀನ ನಾಗಿದ್ದಾನೆ. ಇದೊಂದು ಸಣ್ಣ ಉದಾಹರಣೆ. ಜಗತ್ತಿನ ತುಂಬೆಲ್ಲಾ ಇಂತಹ ಟೆಕ್ನಾಲಜಿ ಸ್ಲೇವ್ಗಳನ್ನ ನಾವು ಕಾಣಬಹುದು. ಜಗತ್ತಿನ ತುಂಬಾ ಯುವ ಜನತೆಯಲ್ಲಿ ಪ್ರಶ್ನಿಸುವ ಶಕ್ತಿಯನ್ನ ಈ ತಂತ್ರಜ್ಞಾನ ಕಸಿದು ಬಿಟ್ಟಿದೆ. ದಿನದಿಂದ ದಿನಕ್ಕೆ ಅವರು ಸ್ವಸುಖ ಬಿಟ್ಟು ಬೇರೇನೂ ಯೋಚಿಸಲಾಗದ ಮಟ್ಟಕ್ಕೆ ತಲುಪಿದ್ದಾರೆ. ಇದು ಒಂದು ರೀತಿಯ ಅಡಿಕ್ಷನ್. ಕೈಯಲ್ಲಿ ಮೊಬೈಲ್, ಡೇಟಾ ಪ್ಯಾಕ್ ಇದ್ದರೆ ಮುಗಿಯಿತು. ಜಗತ್ತಿನಲ್ಲಿ ಯಾರಿಗೆ ಏನಾದರೂ ನನಗೇನು? ಎನ್ನುವ ಕೋಟಿ ಕೋಟಿ ಯುವಜನತೆ ಜಗತ್ತಿನಾದ್ಯಂತ ಸೃಷ್ಟಿಯಾಗಿದ್ದಾರೆ. ಇದು ಅಭಿವೃದ್ಧಿಯ ಕೊಡುಗೆ. ಕಷ್ಟ ಪಟ್ಟು ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಸುಮ್ಮನೆ ವೆಲ್ತ್ ಕ್ರಿಯೇಷನ್ ಹೇಗೆ ಸಾಧ್ಯ?
  4. ಹಿಂದೆ ನಾವು ಮಾಡುತ್ತಿದ್ದ ಕೆಲಸಕ್ಕೆ ಇಂಡಸ್ಟ್ರಿ ರೂಪಕೊಟ್ಟರೆ ಅದು ಅಭಿವೃದ್ಧಿಯೇ?: ಗಮನಿಸಿನೋಡಿ, ಹಿಂದೆ ಮನೆಯಲ್ಲಿ ಹಸುಗಳನ್ನ ಸಾಕಿಕೊಳ್ಳುತ್ತಿದ್ದೆವು. ನಮ್ಮ ಮನೆಗೆ ಬೇಕಾದ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲವೂ ಸಿಗುತ್ತಿತ್ತು. ಇಲ್ಲವೇ ಊರಲ್ಲಿ ಯಾರೋ ಒಂದಿಬ್ಬರು ಹಸುವನ್ನ ಕಟ್ಟಿಕೊಂಡು ಹಾಲನ್ನ ಮಾರುತ್ತಿದ್ದರು. ಜನ ಅವರ ಬಳಿ ಕೊಳ್ಳುತ್ತಿದ್ದರು. ಇಂದೇನಾಗಿದೆ ಊರಿನ ಜನ ಹಾಲನ್ನ ಡೈರಿಗೆ ಹಾಕುತ್ತಾರೆ. ಡೈರಿಯಿಂದ ಹಾಲು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಊರ ಜನರನ್ನ ಸೇರುತ್ತದೆ. ಅಭಿವೃದ್ಧಿಯಾಯ್ತು ನೋಡಿ! ಡೈರಿ ಉದ್ಯಮವಾಗಿ ಬೆಳೆಯಿತು. ಅಂದಿನ ಹಾಲಿ ಅಂದೇ ಕುಡಿಯುತ್ತಿದ್ದ ಜನ, ಅದೇ ಹಾಲನ್ನ ವಾರ ಬಿಟ್ಟು ಕುಡಿಯುವ ಹಾಗಾಯ್ತು. ಹಾಲು ಕೆಡದಂತೆ ಸಂರಕ್ಷಿಸಿ ಇಡಲು ಕೆಮಿಕಲ್ ಬೇಕಾಯ್ತು. ಇದೆ ರೀತಿ ನಮ್ಮ ಇತರ ಬೆಳೆಗಳ ಪಾಡು ಕೂಡ, ಹೀಗಾಗಿ ಕೆಮಿಕಲ್ ಇಂಡಸ್ಟ್ರಿ ಕೂಡ ಸಾಕಷ್ಟು ಬೆಳೆಯಿತು. ಹೀಗೆ ಒಂದು ತಪ್ಪು ಹೆಜ್ಜೆ, ಹತ್ತಾರು ತಪ್ಪು ಹೆಜ್ಜೆಗಳಿಗೆ ದಾರಿಯಾಯ್ತು. ಅದೇ ಬದುಕಾಯ್ತು. ಇವತ್ತು ಬದುಕನ್ನ ಬದಲಾಯಿಸಿಕೊಳ್ಳಿ ಎಂದರೆ ಎಲ್ಲರಿಗೂ ಬೇಸರ. ಇದ್ಯಾವ ಸೀಮೆ ಅಭಿವೃದ್ಧಿ? ಹಿತ್ತಲಲ್ಲಿ ಬೆಳೆಯುತ್ತಿದ್ದ ಕರಿಬೇವು, ಕೊತ್ತಂಬರಿಯನ್ನ ಪಾಕೆಟ್ನಲ್ಲಿಟ್ಟು ಮಾರುವುದು ಇಂದಿಗೆ ಅಭಿವೃದ್ಧಿ. ಏಕೆಂದರೆ ಅದು ಜಿಡಿಪಿ ಲೆಕ್ಕಕ್ಕೆ ಬರುತ್ತದೆ. ನೀವು ನಿಮ್ಮ ಮನೆಯ ಹಿತ್ತಲಲ್ಲಿ ಇರುವ ಕರಿಬೇವು ಕಿತ್ತು ಸಾರಿಗೆ ಹಾಕಿದರೆ ಅದು ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ.
  5. ಇತಿಮಿತಿಯಿಲ್ಲದ ಖರೀದಿಯ ಹೆಸರು ಅಭಿವೃದ್ಧಿ: ಯಾವುದೇ ಪದಾರ್ಥಕ್ಕೆ ಗ್ರಾಹಕ ಇಲ್ಲದೆ ಹೋದರೆ ಅದನ್ನ ಉತ್ಪಾದಿಸುವುದು ಕೂಡ ಕಡಿಮೆಯಾಗುತ್ತದೆ. ತಂತ್ರಜ್ಞಾನದ ಮೂಲಕ ಹಿಂದಿನ ಪದಾರ್ಥಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ತಂದು ಮತ್ತೆ ಮಾರುಕಟ್ಟೆಗೆ ಬಿಡುತ್ತಾರೆ. ಜನ ಮತ್ತೆ ಹೊಸ ಪದಾರ್ಥವನ್ನ ಕೊಳ್ಳಲು ಮುಗಿಬೀಳಬೇಕು. ಅಥವಾ ಮುಗಿ ಬೀಳುವಂತೆ ಮಾಡುತ್ತಾರೆ. ಅದು ಅಭಿವೃದ್ಧಿ. ಹೀಗಾಗದಿದ್ದರೆ ಅದು ಕುಸಿತ. ಉದಾಹರಣೆ ನೋಡಿ ಆಪಲ್ ನವರು ಐ ಪೋಡ್ ಬಿಟ್ಟರು, ಐ ಪ್ಯಾಡ್, ನಂತರ ಐ ಪ್ಯಾಡ್ ಮಿನಿ, ಐ ಫೋನ್ ಹತ್ತಾರು ವರ್ಶನ್ಗಳು. ಇಂದಿಗೆ ಐ ಪೋಡ್ ಮತ್ತು ಐ ಪ್ಯಾಡ್ ಮುಕ್ಕಾಲು ಪಾಲು ಮನೆಯಲ್ಲಿ ಕಸವಾಗಿ ಬಿದ್ದಿವೆ. ಮಿನಿ ಮತ್ತು ಐ ಫೋನ್ ಹಿಂದೆ ಜನ ಓಡಿದ್ದರ ಫಲವಿದು. ಇದೆ ಮಾತನ್ನ ಕಾರಿಗೂ ಅನ್ವಯಿಸಬಹುದು. ವರ್ಷದ ಅಂತರದಲ್ಲಿ ಒಂದಷ್ಟು ಬದಲಾವಣೆ ತಂದು ಹೊಸ ಪದಾರ್ಥವನ್ನ ಚಲಾಯಿಸುತ್ತಿರಬೇಕು. ಹೀಗೆ ಚಲಾವಣೆ ನಿಂತರೆ ಅದು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ಕುಸಿದ ಮಾರುಕಟ್ಟೆ ಸಮಾಜವನ್ನ ಕುಸಿತಕ್ಕೆ ದೂಡುತ್ತದೆ. ಇಂತಹ ಅಡಿಪಾಯದ ಮೇಲೆ ಕಟ್ಟಿರುವ ಅಭಿವೃದ್ಧಿ ಎಷ್ಟು ದಿನ ಕುಸಿಯದೆ ನಿಂತೀತು?ಕೊರೋನೋತ್ತರ ಮತ್ತೆ ಕುಸಿಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?

ಕೊನೆ ಮಾತು: ಪೂರ್ಣ ಜಗತ್ತು ಅಮೆರಿಕಾ ಅಭಿವೃದ್ಧಿ ಮಾದರಿಯನ್ನ ಪ್ರಶ್ನೆ ಮಾಡದೆ ನಕಲು ಮಾಡಿದುದರ ಕಾರಣ ಮತ್ತು ಜಾಗತೀಕರಣ ಇವೆರೆಡೂ ಇಂದು ಸಮಾಜ ತಿರುಗಿ ತಮ್ಮ ಹಳೆಯ ನೆಮ್ಮದಿಯ ದಿನಗಳಿಗೆ ಮರಳದಂತೆ ಮಾಡಿದೆ. ಒಂದು ದೇಶ ತಾನು ತಯಾರಿಸಿದ ಪದಾರ್ಥಗಳನ್ನ ತನ್ನ ದೇಶದ ಜನತೆಗೆ ಎಷ್ಟು ಮಾರಲಾದೀತು? ಹೂಡಿಕೆದಾರ ಹೆಚ್ಚು ಲಾಭದ ಆಸೆ ಜಾಗತೀಕರಣಕ್ಕೆ ನಾಂದಿಯಾಯ್ತು. ಇವತ್ತಿಗೆ ವಿಶ್ವ ವಿತ್ತ ಜಗತ್ತು ಕುಸಿದಾಗ ಜಾಗತೀಕರಣ ತಪ್ಪು ಎನ್ನುವುದರ ಅರಿವು ಅವರಿಗಾಗಿದೆ. ಈ ವಿಷಯವನ್ನ ಭಾರತ ಬಹಳ ಬೇಗ ಮನಗಾಣಬೇಕಾಗಿದೆ. ಆತ್ಮನಿರ್ಭರ ಎನ್ನುವ ಮಾತುಗಳು ಬರಿ ಗಾಳಿ ಮಾತಾಗದೇ ನಿಜಕ್ಕೂ ಕಾರ್ಯರೂಪಕ್ಕೆ ಬಂದರೆ ನಾಳೆಯ ಬಗ್ಗೆ ಒಂದಷ್ಟು ಭರವಸೆಯನ್ನ ಇಟ್ಟುಕೊಳ್ಳಬಹುದು.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp