ಮೂಲಭೂತ ಹೂಡಿಕೆ ಮಾಡದೆ ಷೇರು ಮಾರುಕಟ್ಟೆ ಪ್ರವೇಶ ಎಷ್ಟು ಸರಿ?

ಹಣಕ್ಲಾಸು-261-ರಂಗಸ್ವಾಮಿ ಮೂಕನಹಳ್ಳಿ 
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಸಾಮಾನ್ಯವಾಗಿ ಜನ ಒಂದಷ್ಟು ಗಳಿಸಲು ಶುರು ಮಾಡಿದ ಮೇಲೆ ಎಲ್ಲಾದರೂ ಉಳಿಸಬೇಕು ಮತ್ತು ಅದನ್ನ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತಾರೆ. ಆದರೆ ಅದನ್ನ ಎಲ್ಲಿ ಮತ್ತು ಹೇಗೆ ಉಳಿಸಬೇಕು ಅಥವಾ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ತಿಳುವಳಿಕೆ ಅವರಿಗಿರುವುದಿಲ್ಲ. ಸ್ನೇಹಿತನೋ ಅಥವಾ ಇತರರು ಇಂತಿಪ್ಪ ಕಡೆ ಹೂಡಿಕೆ ಮಾಡಿದೆ, ಈ ಷೇರು ಚೆನ್ನಾಗಿದೆ, ಆ ಐಪಿಒ ಖರೀದಿಸಿ ಕೇವಲ ನಾಲ್ಕು ತಿಂಗಳಲ್ಲಿ ನನ್ನ ಹಣ ದುಪ್ಪಟ್ಟು ಮಾಡಿಕೊಂಡೆ ಎನ್ನುವ ಮಾತುಗಳನ್ನ ಕೇಳಿ ಹೂಡಿಕೆ ಮಾಡುವವರ ಸಂಖ್ಯೆ ನಮ್ಮ ದೇಶದಲ್ಲಿ ಅಸಂಖ್ಯ. 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತಪ್ಪಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಮೂಲಭೂತ ಹೂಡಿಕೆಗಳನ್ನ ನೀವು ಮಾಡಿರಬೇಕು. ಅದಿಲ್ಲದೆ ಏಕಾಏಕಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತಳಪಾಯ ಇಲ್ಲದೆ ಮನೆಯನ್ನ ಕಟ್ಟಿದಂತೆ!. ಇವತ್ತಿನ ಬಹುತೇಕ ಯುವ ಜನತೆ ಈ ಮೂಲಭೂತ ಹೂಡಿಕೆಗಳನ್ನ ಮಾಡಿಲ್ಲ, ಬದಲಿಗೆ ನೇರವಾಗಿ ಷೇರು ಮಾರುಕಟ್ಟೆಯನ್ನ ಪ್ರವೇಶಿಸಿದ್ದಾರೆ. ಮೂಲಭೂತ ಹೂಡಿಕೆಗಳು ಮಾಡಿದ ನಂತರ ಉಳಿದ ಹಣವನ್ನ ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದು ಜಾಣತನ.

ಸಾಮಾನ್ಯವಾಗಿ ಷೇರು ಮಾರುಕಟ್ಟೆ ಬ್ರೋಕರ್ಗಳು ಅಥವಾ ಸಂಸ್ಥೆಗಳು ಹೂಡಿಕೆ ಮೇಲಿನ ಲಾಭಂಶ ಅಥವಾ ವೃದ್ಧಿಯ ಪ್ರತಿಶತವನ್ನ ಹೆಚ್ಚಿಸಿ ಹೇಳುತ್ತವೆ. ಹಾಗೆಲ್ಲ ಹೂಡಿಕೆ ಮಾಡುವ ಮುನ್ನ ಮಾಡಬೇಕಾದ ಮೊದಲ ಕೆಲಸ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಎನ್ನುವ ಲಾಭಂಶದ ಪ್ರತಿಶತ ಎಷ್ಟು ಎನ್ನುವುದನ್ನ ತಿಳಿದುಕೊಳ್ಳುವುದು. ಬ್ರೋಕರ್ ಹೇಳುವ ಲಾಭಂಶ ಅದಕ್ಕಿಂತ ಹೆಚ್ಚಿದ್ದರೆ ಅದು ಎಚ್ಚರಿಕೆಯ ಕರೆಗಂಟೆ..! ವಿಕ್ರಂ ಇನ್ವೆಸ್ಟ್ಮೆಂಟ್ ಎನ್ನುವ ಸಂಸ್ಥೆ ಲೋಹದ ಮೇಲಿನ ಹೂಡಿಕೆಯಲ್ಲಿ ಹತ್ತಿರ ಹತ್ತಿರ 60 ಪ್ರತಿಶತ ಲಾಭಂಶ ಸಿಗುತ್ತದೆ ಎಂದು ಹೇಳಿ ಕೋಟ್ಯಂತರ ರೂಪಾಯಿ ಹೂಡಿಕೆದಾರರ ಹಣವನ್ನ ತಿಂದು ತೇಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಗಮನಿಸಿ ಅಷ್ಟೊಂದು ಹೆಚ್ಚಿನ ಮಟ್ಟದ ಲಾಭ ನಿಜವಾಗಿ ಬರುವುದಾದರೆ ಆ ಸಂಸ್ಥೆಯವರೇ ಅದರ ಲಾಭ ಪಡೆಯಬಹದುದಲ್ಲ? ಅವರೇಕೆ ಅದನ್ನ ನಿಮಗೆ ಕೊಡಲು ಬಯಸುತ್ತಾರೆ?.

ಇನ್ನು ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಅನ್ನುವುದು ಕೂಡ ಅಷ್ಟೇ ನಿಖರತೆಯಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ. ಹೂಡಿಕೆದಾರನಿಗೆ ಹೂಡಿಕೆಯ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ ಹೋದರೆ ಏನಾಗಬಹುದು ಎನ್ನುವುದಕ್ಕೆ ಮಾರುಕಟ್ಟೆಯಲ್ಲಿ ನಾಯಿಕೊಡೆಯಂತೆ ಹೆಚ್ಚಿಕೊಂಡಿರುವ ಮ್ಯೂಚುಯಲ್ ಫಂಡ್ಗಳು ಮತ್ತು ಸಂಸ್ಥೆಗಳು ಸಾಕ್ಷಿ. ಮ್ಯೂಚುಯಲ್ ಫಂಡ್ ನಲ್ಲಿ ಹಲವು ಸಾವಿರ ವಿಧಗಳಿವೆ. ನಿಮ್ಮ ಹಣ ಎಲ್ಲಿ ಹೂಡಿಕೆಯಾಗುತ್ತಿದೆ? ಎನ್ನುವ ಅರಿವು ನಿಮಗಿದೆಯೇ?

ಷೇರು ಮಾರುಕಟ್ಟೆಯಲ್ಲಿ ಅಲ್ಪ ಸಮಯದ ಹೂಡಿಕೆ ಅಥವಾ ಅದೇ ದಿನ ಲಾಭ ತೆಗೆದುಕೊಂಡು ಹೊರಬರುವ ಕ್ರಿಯೆಗಳು ಹೂಡಿಕೆ ಎನ್ನಿಸಿಕೊಳ್ಳುವುದಿಲ್ಲ. ಅದು ಜೂಜಾಟ. ಧೀರ್ಘ ಕಾಲದ ಹೂಡಿಕೆಗಳು ಕೂಡ ಲಾಭ ತಂದುಕೊಡುತ್ತವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಒಂದು ಸಂಸ್ಥೆ ಅತ್ಯಂತ ಯಶಸ್ವಿ ಎನ್ನಿಸಿಕೊಳ್ಳಲು ಹಲವಾರು ಕಾರಣಗಳಿರುತ್ತವೆ. ಯಾವುದೇ ಒಂದು ಕಾರಣ ಅಂದುಕೊಂಡಂತೆ ಕಾರ್ಯ ನಿರ್ವಹಿಸದೆ ಹೋದರೂ ಹೂಡಿಕೆ ಹಣ ಕರಗಿಹೋಗಬಹುದು.

ವಸ್ತುಸ್ಥಿತಿ ಹೀಗಿರುವಾಗ ಮೂಲಭೂತ ಹೂಡಿಕೆಗಳಾದ ಮನೆ, ನಿಶ್ಚಿತ ಠೇವಣಿ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಚಿನ್ನ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸ್ಕೀಮ್ ಇತ್ಯಾದಿಗಳ ಮೇಲೆ ಹಣ ಹೂಡಿಕೆ ಮಾಡಿ ಇನ್ನೂ ಹೆಚ್ಚಿನ ಹಣವಿದ್ದರೆ ಅದು ಐದಾರು ವರ್ಷ ಅವಶ್ಯಕತೆಯಿಲ್ಲ ಎನ್ನುವ ಹಾಗಿದ್ದರೆ ಮತ್ತು ಆಕಸ್ಮಿಕವಾಗಿ ಆ ಹಣ ಕರಗಿಹೋದರೂ ಪರವಾಗಿಲ್ಲ ಎನ್ನುವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಿಕೆ ಮಾಡಬೇಕು. ಇಂದಿನ ಐಟಿ ನೌಕರರು ಮತ್ತಿತರ ಯುವಜನತೆ ಮನೆ ಸಾಲದಲ್ಲಿ ಇರುವುದು ಅಲ್ಲದೆ ಮ್ಯೂಚುಯಲ್ ಫಂಡ್, ಸಿಪ್ ಇತ್ಯಾದಿಗಳ ಕುಣಿಕೆಯಲ್ಲಿ ಯೋಚಿಸದೆ ಬೀಳುತ್ತಿದ್ದಾರೆ. ಇದರ ಜೊತೆಗೆ ಐಪಿಒ ಇವರನ್ನ ಬಹಳವಾಗಿ ಆಕರ್ಷಿಸುತ್ತಿದೆ. ಈ ವರ್ಷ ಅಂದರೆ 2021ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐಪಿಒಗಳ ಸಂಖ್ಯೆಯೂ ಬಹಳವಿದೆ.

ಐಪಿಒ ಎಂದರೇನು?

ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರ್ ಎಂದರ್ಥ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಷೇರುಗಳನ್ನ ಕೊಂಡುಕೊಳ್ಳಲು ನೀಡುವ ಆಹ್ವಾನ ಪ್ರಕ್ರಿಯೆಗೆ ಐಪಿಒ ಎನ್ನುತ್ತಾರೆ.

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷಮ್ ಒಡ್ಡುವ ಹಲವಾರು ನಿಂಬಂಧನೆಗಳನ್ನ ಪಾಲಿಸಿದ ನಂತರ ಹೀಗೆ ಸಾಮಾನ್ಯ ಜನರಿಂದ ಮುಂದಿನ ವ್ಯಾಪಾರಕ್ಕೆ ಬೇಕಾಗುವ ಹಣವನ್ನ ಷೇರು ನೀಡುವ ಮೂಲಕ ಬಂಡವಾಳ ರೂಪದಲ್ಲಿ ಎತ್ತಬಹುದಾಗಿದೆ.

ಒಂದು ಖಾಸಗಿ ಸಂಸ್ಥೆಯನ್ನ ಸ್ಥಾಪಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಯನ್ನ ಒಂದು ಮಟ್ಟಕ್ಕೆ ತರಲು ಪ್ರಾರಂಭದಲ್ಲಿ ಹಣ ಹೂಡಿದ ವ್ಯಕ್ತಿಗಳು ತಮ್ಮ ಹಣವನ್ನ ವಾಪಸ್ಸು ಪಡೆದುಕೊಂಡು ಮುಂದಿನ ಹಂತದ ವ್ಯಾಪಾರಕ್ಕೆ ಬೇಕಾದ ಹಣವನ್ನ ಜನರಿಂದ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಇಲ್ಲಿನ ಷೇರುಗಳ ಮೌಲ್ಯವನ್ನ ಪ್ರಿಮಿಯಂ ನಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಂದರೆ ಷೇರಿನ ಮುಖಬೆಲೆಗಿಂತ ಹೆಚ್ಚಿನ ಬೆಲೆಯನ್ನ ಇಟ್ಟಿರುತ್ತಾರೆ. ಐಪಿಒ ಮೂಲಕ ಬಂಡವಾಳ ಸಂಗ್ರಹಣೆ ಮಾಡಿ ನಂತರ ಫೌಂಡರ್ ಮೆಂಬರ್ ಗಳು ತಮ್ಮ ಹಣವನ್ನ ತೆಗೆದು ಕೊಂಡು ಹೊರ ನಡೆದರೆ ಅದು ಉತ್ತಮ ಲಕ್ಷಣವಲ್ಲ.

ಇಂದಿನ ಸಮಯದಲ್ಲಿ ಐಪಿಒ ಮೇಲಿನ ಹೂಡಿಕೆ ಎಷ್ಟು ಸರಿ?

ಇವತ್ತಿನ ದಿನದಲ್ಲಿ ಬಹಳಷ್ಟು ಜನರಲ್ಲಿ ಪ್ರೈಮರಿ ಮಾರ್ಕೆಟ್ನಲ್ಲಿ  ಕಡಿಮೆ ಅಪಾಯ ಎನ್ನುವ ಭಾವನೆಯಿದೆ ಅದು ತಪ್ಪು. ಸೆಕೆಂಡರಿ ಮಾರ್ಕೆಟ್ನಲ್ಲಿ ಇರುವಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಅಪಾಯ ಪ್ರೈಮರಿ ಮಾರುಕಟ್ಟೆಯಲ್ಲಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ನಿಮ್ಮ ಗಮನವಿರಲಿ.

  1. ಆಯ್ಕೆ ಮಾಡುವ ಮುನ್ನ ಎಚ್ಚರವಿರಲಿ: ಇಂದಿನ ದಿನದಲ್ಲಿ ಮಾರುಕಟ್ಟೆಗೆ ಹೀಗೆ ಬಂಡವಾಳ ಬಯಸಿ ಬರುವ ಸಂಸ್ಥೆಗಳ ಲೆಕ್ಕ ಇಡುವುದು ಕಷ್ಟವಾಗಿದೆ. ಹೀಗೆ ಮಾರುಕಟ್ಟೆಗೆ ಬರುವ 90 ಪ್ರತಿಶತ ಸಂಸ್ಥೆಗಳಿಗೆ ಯಾವುದೇ ರೀತಿಯ ವಿಷನ್ ಅಥವಾ ಚಿಂತನೆಯಲ್ಲಿ ಪಾರದರ್ಶಕತೆ ಇರುವುದಿಲ್ಲ. ಇವುಗಳನ್ನ ಸಾರಾಸಗಟಾಗಿ ಬೋಗಸ್ ಕಂಪನಿಗಳು ಏನು ಹೇಳಿ ಬಿಡಬಹುದು. ನೀವು ಕೊಂಡ ಸಂಸ್ಥೆಯ ಷೇರುಗಳ ಬಂಡವಾಳ ಗೊತ್ತಾಗುವುದು ಅವುಗಳು ಸೆಕೆಂಡರಿ ಮಾರ್ಕೆಟ್ ನಲ್ಲಿ ಟ್ರೇಡ್ ಆಗಲು ಶುರು ಮಾಡಿದ ಮೇಲೆ ಮಾತ್ರ. ಅಷ್ಟೊತ್ತಿಗೆ ನಿಮ್ಮ ಹಣ ಕರಗಿ ಹೋಗಿರುತ್ತದೆ. ಹೀಗಾಗಿ ಆಯ್ಕೆಯ ಮುನ್ನ ಎಚ್ಚರವಿರಲಿ.
  2. ಪೂರ್ಣ ಮಾಹಿತಿ ಇಲ್ಲದೆ ಹೂಡಿಕೆ ಮಾಡಬೇಡಿ: ಗಮನಿಸಿ ಸೆಕೆಂಡರಿ ಮಾರ್ಕೆಟ್ ನಲ್ಲಿ ನೀವು ಕೊಳ್ಳುವ ಷೇರಿನ ಪೂರ್ಣ ಜಾತಕಪತ್ರ ಸಿಗುತ್ತದೆ. ಆದರೆ ಐಪಿಒ ವಿಷಯದಲ್ಲಿ ಹೀಗಲ್ಲ, ಇಲ್ಲಿ ಮಾಹಿತಿಯ ಕೊರತೆ ಬಹಳಷ್ಟಿರುತ್ತದೆ. ಸಂಸ್ಥೆಯ ಮೂಲ ಪುರುಷರು ಅದೇ ಸಂಸ್ಥೆಯಲ್ಲಿ ಉಳಿದುಕೊಳ್ಳುತ್ತಾರೋ ಅಥವಾ ಅವರು ತಾವು ಹಾಕಿದ ಮೂಲಧನವನ್ನ ಪಡೆದುಕೊಂಡು ಹೊರಹೋಗಲು ಇಚ್ಛಿಸುತ್ತಾರೋ ಎನ್ನುವ ಮಾಹಿತಿ, ಮುಂದಿನ ಅವರ ನಡೆಯೇನು? ಹೈರಿಸ್ಕ್, ಮೀಡಿಯಂ ಅಥವಾ ಕಡಿಮೆ ರಿಸ್ಕ್ ಯಾವುದು ಅವರು ತುಳಿಯುವ ದಾರಿ? ಹೀಗೆ ಹತ್ತಾರು ಮಾಹಿತಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಇದ್ದರೂ ಅವುಗಳ ಪೂರ್ಣ ಸತ್ಯಾಸತ್ಯತೆಯನ್ನ ಪರಿಶೀಲಿಸುವ ಬಗೆ ಹೇಗೆ? ಹೀಗೆ ಹಲವಾರು ಪ್ರಶ್ನೆಗಳು ಎದುರಾಗುತ್ತವೆ. ಎಲ್ಲಕ್ಕೂ ಸಮ್ಮತವಾಗುವಂತ ಉತ್ತರ ಸಿಗದಿದ್ದರೆ ಅವುಗಳ ಮೇಲಿನ ಹೂಡಿಕೆ ಸಲ್ಲದು.
  3. ಷೇರಿನ ಮೌಲ್ಯ ನಿರ್ಧಾರದ ಮಾನದಂಡವೇನು?: ಸಾಮಾನ್ಯವಾಗಿ ಐಪಿಒ ಷೇರುಗಳ ಮೌಲ್ಯ ಮುಖ ಬೆಲೆಗಿಂತ ಬಹಳ ಹೆಚ್ಚಿರುತ್ತದೆ. ಅಂದರೆ ಅದನ್ನ ಅವರು ಪ್ರೀಮಿಯಂ ನಲ್ಲಿ ಮಾರಲು ಬಯಸಿರುತ್ತಾರೆ. ಉದಾಹರಣೆಗೆ 10 ರೂಪಾಯಿ ಅಥವಾ 100 ರೂಪಾಯಿ ಮುಖ ಬೆಲೆಯ ಷೇರನ್ನ 150 ರೂಪಾಯಿ ಅಥವಾ 350 ರುಪಾಯಿಗೆ ಮಾರಲು ಹೊರಟಿದ್ದಾರೆ ಎಂದರೆ, ಅದೇಕೆ ಅಷ್ಟೊಂದು ಹೆಚ್ಚುವರಿ ಹಣವನ್ನ ನಾವು ನೀಡಬೇಕು? ಅವರು ಹಾಗೆ ಮುಖ ಬೆಲೆಗಿಂತ ಇಷ್ಟೇ ಹಣವನ್ನ ಹೆಚ್ಚುವರಿಯಾಗಿ ಏಕೆ ಕೇಳುತ್ತಿದ್ದಾರೆ? ಹಾಗೆ ಅಷ್ಟು ಹೆಚ್ಚು  ಹಣವನ್ನ ಯಾವ ಆಧಾರದ ಮೇಲೆ ಅಂದರೆ ಮೌಲ್ಯಮಾಪನ ಸಾಧನ ಯಾವುದು? ಇತ್ಯಾದಿಗಳನ್ನ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮೌಲ್ಯವನ್ನ ಏರಿಸಿ ಜನತೆಯ ಮುಂದಿಡುತ್ತಾರೆ. ಅದಕ್ಕೆ ಸರಿಯಾದ ಮಾಪಕವೇ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೊಂಡ ನಂತರ ನಷ್ಟ ಶತಸಿದ್ಧ. ನೂರಕ್ಕೆ ತೊಂಬತ್ತು ಸಂಸ್ಥೆಗಳ ಮೌಲ್ಯಮಾಪನ, ವ್ಯಾಲ್ಯೂವೇಷನ್ ಹೆಚ್ಚಿರುತ್ತದೆ. ಸರಳವಾಗಿ ಹೇಳಬೇಕೆಂದರೆ ಮಾರುಕಟ್ಟೆಯಲ್ಲಿ ಸಿಗುವ 10 ರೂಪಾಯಿ ಟೊಮೊಟೊವನ್ನ ನೀವು 15 ಅಥವಾ 20 ರೂಪಾಯಿ ಕಿಲೋಗೆ ನೀಡಿದಂತೆ ! ಹೀಗಾಗಿ ಎಚ್ಚರವಿರಲಿ.
  4. ನಿಮ್ಮ ಪರಿಶೀಲನೆ ಬೇಕೇಬೇಕು: ಸಾವಿರ ತಜ್ಞರು, ಸಾವಿರ ಸಲಹೆ ನೀಡುವ ವಾಹಿನಿಗಳು, ವ್ಯಕ್ತಿಗಳು ಏನೇ ಹೇಳಲಿ, ನೀವು ನಿಮ್ಮ ಬುದ್ಧಿಯನ್ನ ಕೂಡ ಒಂದಷ್ಟು ಕೆಲಸಕ್ಕೆ ಹಾಕಬೇಕು. ಅವರು ಹೇಳಿದ್ದು ಕಣ್ಣು ಮುಚ್ಚಿ ನಂಬುವ ಬದಲು, ಇದೇಕೆ ಹೀಗೆ? ಅದೇಕೆ ಹೀಗಿಲ್ಲ? ಎನ್ನುವ ಒಂದಷ್ಟು ಪ್ರಶ್ನೆಗಳನ್ನ ಹಾಕಬೇಕು, ಅವುಗಳಿಗೆ ಸಮಂಜಸ ಉತ್ತರ ಪಡೆದುಕೊಳ್ಳಬೇಕು. ಹೆಬೆಟ್ಟು ಸೂತ್ರದ ಪ್ರಕಾರ ಯಾರಾದರೂ ಅತಿ ಹೆಚ್ಚು ಲಾಭ ಬರುತ್ತದೆ ಎನ್ನುವ ಸಂಸ್ಥೆಗಳನ್ನ ಹೆಚ್ಚು ಪರಿಶೀಲಿಸಬೇಕಾಗುತ್ತದೆ. 14 ರಿಂದ 20 ಪ್ರತಿಶತ ಲಾಭ ನೀಡಬಲ್ಲ ಸಂಸ್ಥೆಗಳ ಮೇಲಿನ ಹೂಡಿಕೆ ಉತ್ತಮ, ಆದರೆ ಗಮನಿಸಿ ಯಾವ ಸಂಸ್ಥೆಯಲ್ಲಿ ಪ್ರಮೋಟರ್ಸ್ ಉಳಿದುಕೊಳ್ಳುತ್ತಾರೆ ಅಂತಹ ಸಂಸ್ಥೆಯಲ್ಲಿ ಹೆಚ್ಚು ವಿಶ್ವಾಸವಿಡಬಹುದು.

ಕೊನೆ ಮಾತು: ಮೂಲಭೂತ ಹೂಡಿಕೆಗಳ ಜೊತೆಗೆ ಮೂಲಭೂತ ಖರ್ಚುಗಳದ್ದಾದ ಜೀವವಿಮೆ ಅಂದರೆ ಟರ್ಮ್ ಇನ್ಶೂರೆನ್ಸ್, ಆರೋಗ್ಯವಿಮೆ, ಎಮೆರ್ಜೆನ್ಸಿ ಫಂಡ್ ಇವುಗಳನ್ನ ಕೂಡ ಮಾಡಿರಬೇಕಾಗುತ್ತದೆ. ಇದೆಲ್ಲವನ್ನೂ ಮೀರಿದ ಹಣವನ್ನ ಮಾತ್ರ ಪ್ರೈಮರಿ ಅಥವಾ ಸೆಕೆಂಡರಿ ಯಾವುದಾದರೂ ಮಾರುಕಟ್ಟೆಯಲ್ಲಿ ತಜ್ಞರ ಸಹಾಯ ಮತ್ತು ಸ್ವ ಪರಿಶೀಲನೆ ನಡೆಸಿ ಹೂಡಿಕೆ ಮಾಡುವುದು ಸೂಕ್ತ. ಇಲ್ಲದಿದ್ದಲ್ಲಿ ಅದು ಜೂಜಾಟ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com