ನಿದ್ರೆ: ನಿದ್ರಾಹೀನತೆ ಮತ್ತು ಇತರ ಸಮಸ್ಯೆಗಳು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ಹಸಿವು, ನೀರಡಿಕೆ ಯಂತೆ ನಿದ್ರೆಯೂ ನಮ್ಮ ಪ್ರಾಥಮಿಕ ಅಗತ್ಯಗಳಲ್ಲಿ ಒಂದು. ಸರಾಸರಿ ಆರೇಳು ಗಂಟೆಗಳ ಕಾಲ ನಿದ್ರೆ ಮಾಡುತ್ತೇವೆ.
ನಿದ್ರಾಹೀನತೆ ಮತ್ತು ಇತರ ಸಮಸ್ಯೆಗಳು
ನಿದ್ರಾಹೀನತೆ ಮತ್ತು ಇತರ ಸಮಸ್ಯೆಗಳು

"ನಿದ್ರೆ ಬರುತ್ತಿಲ್ಲ", "ನಿದ್ರೆ ಬಂದರೂ ಎಚ್ಚರವಾಗಿ ಮತ್ತೆ ನಿದ್ರೆ ಬರುವುದಿಲ್ಲ", "ಕೆಟ್ಟ ಭಯಂಕರ ಕನಸುಗಳು", "ಹಗಲುಹೊತ್ತಿನಲ್ಲಿ ಬೇಡವೆಂದರೂ ನಿದ್ರೆ ಬರುತ್ತದೆ", ನಿದ್ರೆಯ ಬಗ್ಗೆ ಬಹುಜನರ ಸಾಮಾನ್ಯ ದೂರುಗಳಿವೆ.

ಹಸಿವು, ನೀರಡಿಕೆಯಂತೆ ನಿದ್ರೆಯೂ ನಮ್ಮ ಪ್ರಾಥಮಿಕ ಅಗತ್ಯಗಳಲ್ಲಿ ಒಂದು. ಸರಾಸರಿ ಆರೇಳು ಗಂಟೆಗಳ ಕಾಲ ನಿದ್ರೆ ಮಾಡುತ್ತೇವೆ. ಕೆಲವರು ಬೇಗ ಮಲಗಿದ್ದಾರೆ, ಕೆಲವರು ತಡರಾತ್ರಿಗೆ ನಿದ್ರೆ ಮಾಡುತ್ತಾರೆ, ಹಾಗೆಯೇ ಮುಂಜಾನೆ ನಾಲ್ಕೈದು ಗಂಟೆಗೆ ಎದ್ದು ವಾಕಿಂಗ್, ಹೊರಟರೆ ಕೆಲವರು ಏಳೆಂಟು ಗಂಟೆಯಾದರೂ ಹಾಸಿಗೆ ಬಿಟ್ಟು ಏಳುವುದಿಲ್ಲ. ಕುಂಭಕರ್ಣ ಆರು ತಿಂಗಳ ಕಾಲ ಮಲಗಿ ನಿದ್ರಿಸುತ್ತಿದ್ದನಂತೆ! 

ಮಿದುಳಿನ ಲಿಂಬಿಕ್ ವ್ಯವಸ್ಥೆ ಯಲ್ಲಿ ನಿದ್ರಾ ಕೇಂದ್ರವಿದೆ. ನರವಾಹಕಗಳು ಈ ನಿದ್ರಾ ಕೇಂದ್ರವನ್ನು ನಿರ್ದೇಶಿಸುತ್ತವೆ, ಹಗಲು ಹೊತ್ತಿನಲ್ಲಿ ಎಚ್ಚರ, ರಾತ್ರಿ ಹೊತ್ತು ನಿದ್ದೆ ಮಾಡುವಂತೆ ನೋಡಿಕೊಳ್ಳುತ್ತವೆ. ನಿದ್ರೆಯ ಮುಖ್ಯ ಅನುಕೂಲ ಮೈಮನಸ್ಸುಗಳನ್ನು ವಿರಮಿಸುವಂತೆ ಮಾಡುವುದು. ದಣಿದ ದೇಹ ಮನಸ್ಸುಗಳು ಒಳ್ಳೆಯ ನಿದ್ರೆಯಿಂದ ಚೇತರಿಸಿಕೊಂಡು ಉತ್ಸಾಹ -ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. ನಿದ್ರೆಗೆಟ್ಟರೆ ಅಥವಾ ಕಡಿಮೆ ನಿದ್ರೆ ಮಾಡಿದರೆ, ವ್ಯಕ್ತಿ ಮಂಕಾಗುತ್ತಾನೆ, ಹಗಲು ಹೊತ್ತಿನಲ್ಲಿ  ಸಕ್ರಿಯನಾಗಿರುವುದಿಲ್ಲ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ನಿದ್ರಾ ಅವಧಿಯಲ್ಲೇ ಬೆಳವಣಿಗೆ ಹಾರ್ಮೋನ್ ಉತ್ಪತ್ತಿಯಾಗಿ ಅವರು ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ನಿದ್ರಾ ಅವಧಿಯಲ್ಲಿ ಎಲ್ಲ ಅಂಗಾಂಗಗಳ ಕೆಲಸ ಚಟುವಟಿಕೆ ನಿಧಾನವಾಗಿ ಶಕ್ತಿಯ ಉಳಿತಾಯವಾಗುತ್ತದೆ, ಜೀವಕೋಶಗಳ ರಿಪೇರಿಯಾಗುತ್ತದೆ. ನಿದ್ರೆಯ ಐದನೇ ಹಂತದಲ್ಲಿ ಕನಸುಗಳು ಬೀಳುತ್ತವೆ,  ಕನಸುಗಳ ಮುಖಾಂತರ ನಾವು ನಮ್ಮ ಅದುಮಿಟ್ಟ ಭಾವನೆ, ಅನಿಸಿಕೆ,  ಪ್ರತಿಭಟನೆಯನ್ನು ಮತ್ತು ಹಗಲುಹೊತ್ತು ಪ್ರಕಟಿಸಲಾಗದ ಭಾವನೆಗಳನ್ನು ಪ್ರಕಟಿಸುತ್ತೇವೆ, ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ನಮ್ಮ ಕಲ್ಪನೆಗಳು ಕನಸಿನಲ್ಲಿ ಗರಿಗೆದರುತ್ತವೆ. ಸೃಜನಶೀಲತೆ ಹೆಚ್ಚಾಗುತ್ತದೆ. ಹೀಗೆ ನಿದ್ರೆಯಿಂದ ನಮಗೆ ಪ್ರಯೋಜನಗಳುಂಟು.

ನಿದ್ರಾಹೀನತೆ
ಸಾಮಾನ್ಯವಾಗಿ ಮಲಗಿದ ಹತ್ತು - ಹದಿನೈದು ನಿಮಿಷಗಳೊಳಗೆ ನಿದ್ರೆ ಪ್ರಾರಂಭವಾಗುತ್ತದೆ, ನಿದ್ರೆ ಬಾರದಿರಲು ಸಾಮಾನ್ಯ ಕಾರಣ: ಮನಸ್ಸಿನಲ್ಲಿ ಚಿಂತೆ, ಭಯ, ದುಃಖ, ಕೋಪ, ಅವಮಾನದ ನೋವು, ನಾಳೆ ಏನಾಗುವುದೋ ಎಂಬ ಆತಂಕ, ಕೆಟ್ಟ ಅನಿಷ್ಟಕಾರಕ ಆಲೋಚನೆಗಳು, ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ನಿದ್ರಿಸುವ ಸಮಯವನ್ನುಮತ್ತೆ ಮತ್ತೆ ಬದಲಾಯಿಸುವುದು.

ನಿದ್ರಾಹೀನತೆಗೆ ಸುಲಭ ಪರಿಹಾರ:

  • ಮಲಗುವ ವೇಳೆಯನ್ನು ಬದಲಿಸಬೇಡಿ, ಒಂದು ನಿರ್ದಿಷ್ಟ ಸಮಯಕ್ಕೆ ಮಲಗಿ.
  • ಮಲಗುವ ಅರ್ಧಗಂಟೆ ಮೊದಲು, ಯಾವ ಚಿಂತೆ, ಭಯ, ಕೋಪ, ದುಃಖದ ವಿಚಾರಗಳ ಬಗ್ಗೆ ಗಮನ ಕೊಡಬೇಡಿ.
  • ನಾಳೆ ಒಳ್ಳೆಯದಾಗುತ್ತದೆ ಎಂದು ಸಕಾರಾತ್ಮಕವಾಗಿ ಯೋಚಿಸಿ.
  • ಮನಸ್ಸು ರಿಲ್ಯಾಕ್ಸ್ ಆಗುವಂತಹ ಚಟುವಟಿಕೆಗಳನ್ನು ಮಾಡಿ. ಉದಾಹರಣೆಗೆ ಮಧುರ ಸಂಗೀತವನ್ನು ಆಲಿಸುವುದು, ಇಷ್ಟವಾದ ವಿಷಯದ ಬಗ್ಗೆ ಪುಸ್ತಕವನ್ನು ಓದುವುದು . ಮನೆಯವರೊಂದಿಗೆ ಸರಸ ಸಂಭಾಷಣೆ, ದೇವರ ಧ್ಯಾನ - ಜಪ ಮಾಡುವುದು ಮಾಡುವುದು ಇತ್ಯಾದಿ.
  • ತುಂಬಾ ಆಯಾಸವಾಗಿದ್ದರೆ ಸ್ನಾನ ಮಾಡಿ. ಫ್ರೆಶ್ ಆಗಿ.
  • ವೈದ್ಯರ ಮಾರ್ಗದರ್ಶನದಲ್ಲಿ ಮಿತ ಶಮನಕಾರಿ ಔಷಧಿಯನ್ನು ನಾಲ್ಕರಿಂದ ಆರು ವಾರಗಳ ಕಾಲ ಸೇವಿಸಿ. ಈ ಮಾತ್ರೆಗಳು ಸುರಕ್ಷಿತವಾದುವು. ವೈದ್ಯರನ್ನು ಕೇಳದೆ ಔಷಧೀಯ ಪ್ರಮಾಣವನ್ನು ಹೆಚ್ಚಿಸಬೇಡಿ ಅಥವಾ ಹೆಚ್ಚುಕಾಲ ಮುಂದುವರೆಸಬೇಡಿ .
  • ದೈಹಿಕ ಕಾಯಿಲೆಗಳಿಗೆ ಮಾನಸಿಕ ಕಾಯಿಲೆಗಳಿದ್ದರೆ ಸರಿಯಾದ ಚಿಕಿತ್ಸೆ ಪಡೆಯಿರಿ.

ಇತರ ನಿದ್ರಾ ತೊಂದರೆಗಳು:

ಕೆಟ್ಟ /ಭಯಂಕರ ಕನಸುಗಳು ಬಿದ್ದು ಎಚ್ಚರವಾಗುವುದು: ಒಂದು ಗಂಟೆಯ ನಿದ್ರೆಯಲ್ಲಿ ಹತ್ತು ನಿಮಿಷ ಕಾಲ ಕನಸುಗಳು ಬೀಳುತ್ತವೆ. ಕನಸುಗಳು ನಿದ್ರೆಯ ಒಂದು ಭಾಗ, ಕನಸುಗಳ ಮುಖಾಂತರ, ಮನಸ್ಸು ತನ್ನ ಅವ್ಯಕ್ತ ಭಾವನೆಗಳು, ಯೋಚನೆಗಳು, ಕಲ್ಪನೆಗಳನ್ನು ಹೊರಹಾಕುತ್ತದೆ. ಕೆಟ್ಟ/  ಭಯಂಕರ ಕನಸುಗಳು ಯಾವುದೋ ಆತಂಕ/ ಭಯದ ಪ್ರಕಟಣೆ ಅಷ್ಟೇ ಅವು ನಿಜವಾಗಬಹುದೆಂಬ ಆತಂಕ ಬೇಡ. ಇದರ ಪರಿಹಾರಕ್ಕೆ ಆಪ್ತಸಮಾಲೋಚನೆ, ಮಿತ ಶಮನಕಾರಿ ಔಷಧಿಗಳು ಬೇಕಾಗಬಹುದು.

ನಿದ್ರೆಯಲ್ಲಿ ಮಾತಾಡಿಕೊಳ್ಳುವುದು, ಹಲ್ಲು ಕಡಿಯುವುದು, ಕೂಗುವುದು, ಎದ್ದು ಓಡಾಡುವುದು ಇತ್ಯಾದಿ:

ಮಾನಸಿಕ ಒತ್ತಡ ವಿರುವಾಗ, ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ವ್ಯಕ್ತಿಗೆ ಆಪ್ತಸಮಾಲೋಚನೆ ಮತ್ತು ಮಿತ ಶಮನಕಾರಿ ಔಷಧಿಗಳು ಬೇಕಾಗುತ್ತದೆ. ಒತ್ತಡವನ್ನು ತಗ್ಗಿಸಬೇಕು.

ನಿದ್ರಾ ಸ್ಖಲನ - ಸ್ವಪ್ನ ಸ್ಖಲನ:

ಹರೆಯದಲ್ಲಿ ಮತ್ತು ಅನಂತರವೂ ಕೆಲವು ಸಲ ನಿದ್ರೆ ಮಾಡುವಾಗ ವೀರ್ಯಸ್ಖಲನವಾಗುತ್ತದೆ. ವೀರ್ಯ ಚೀಲದಲ್ಲಿ15 ಮಿಲಿ ವೀರ್ಯ ಸಂಗ್ರಹವಾಗಿ, ಅನಂತರ ಅದು ಹೊರ ಬರುವುದು ಸಹಜ ಸ್ವಾಭಾವಿಕ ಕ್ರಿಯೆ. ಆದರೆ ನಿದ್ರಾ ಸ್ಖಲನವನ್ನು ಒಂದು ದೋಷ ಎಂಬ ತಪ್ಪು ನಂಬಿಕೆ ನಮ್ಮಲ್ಲಿದೆ, ಅದ್ದರಿಂದ ದೇಹ-ಮನಸ್ಸು, ಲೈಂಗಿಕ ಶಕ್ತಿ ಕುಗ್ಗುತ್ತದೆ ಎಂದು ನಂಬಲಾಗುತ್ತದೆ, ಈ ತಪ್ಪುಬಿಕೆ ಬೇಡ. ನಿದ್ರಾ ಸ್ಖಲನದಿಂದ ಯಾವ ಕೆಡಕು ಹಾನಿಯೂ ಇಲ್ಲ.

ನಿದ್ರೆಯಲ್ಲಿ ಮೂತ್ರ ವಿಸರ್ಜನೆ:

ನಾಲ್ಕು ಅಥವಾ ಐದನೇ ವಯಸ್ಸಿನವರೆಗೆ ಮಕ್ಕಳಲ್ಲಿ ಅನಿಯಂತ್ರಿತ ಮೂತ್ರ ವಿಸರ್ಜನೆ ಇರುತ್ತದೆ. ನಿದ್ರಿಸುವ ಮಕ್ಕಳು ಹಾಸಿಗೆ ಬಟ್ಟೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾರೆ, ಐದನೇ ವಯಸ್ಸಿನ ನಂತರ ತರಬೇತಿ ಪಡೆದ ಮಕ್ಕಳು ಮೂತ್ರ ವಿಸರ್ಜನೆಯ ಮೇಲೆ ಹತೋಟಿ ಸಾಧಿಸುತ್ತಾರೆ. ಅಭದ್ರತೆ, ಭಯ, ದುಃಖ ಕೋಪಕ್ಕೆ, ಒಳಗಾದ ಮಕ್ಕಳು ನಿದ್ರೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾರೆ.

ಪರಿಹಾರ

- ಸಂಜೆ ಏಳರ ನಂತರ ದ್ರವ ಪದಾರ್ಥಗಳನ್ನು ಕೊಡಬೇಡಿ. 
- ಬೇಗ ಊಟ ಕೊಡಿ 
- ಮಲಗುವ ಮೊದಲು, ಮೂತ್ರ ಮಾಡಿಸಿ
- ಮಧ್ಯರಾತ್ರಿ ಒಮ್ಮೆ ಎಬ್ಬಿಸಿ, ಮೂತ್ರ ಮಾಡಿಸಿ.
- ಮಗುವಿನ ಆತಂಕ, ಖಿನ್ನತೆಯನ್ನು ನಿವಾರಿಸಿ, ಆಸರೆ, ಭರವಸೆ ನೀಡಿ.
- ರಾತ್ರಿ ಮೂತ್ರ ಮಾಡಿಕೊಳ್ಳದಿದ್ದರೆ ಬೇಶ್ ಎನ್ನಿ, ಬಹುಮಾನ ಕೊಡಿ.
- ಇದಾದ ನಂತರವೂ, ಮೂತ್ರ ಮಾಡಿಕೊಳ್ಳುವುದು ನಿಲ್ಲದಿದ್ದರೆ, ವೈದ್ಯರನ್ನು ಕಾಣಿರಿ.

ಗೊರಕೆ:

ನಿದ್ರೆ ಮಾಡುವಾಗ ಗೊರಕೆ ಸಾಮಾನ್ಯ, ಇದರಿಂದ ಅಕ್ಕಪಕ್ಕದಲ್ಲಿರುವವರಿಗೆ ನಿದ್ರೆ ಬರುವುದಿಲ್ಲ. ಮೂಗಿನಿಂದ ಗಂಟಲಿನವರೆಗೆ ಉಸಿರಾಟದ ಮಾರ್ಗದಲ್ಲಿನ ಅಡಚಣೆಯೇ ಗೊರಕೆಗೆ ಕಾರಣ. ಪ್ರಾಣಾಯಾಮ, ತೆಳುವಾದ ದಿಂಬು, ಸಹಾಯಕಾರಿ. ಗಂಟಲು ಮೂಗಿನ ವೈದ್ಯರನ್ನು ಕಾಣಬೇಕು. ಉಸಿರಾಟದ ಮಾರ್ಗದ ಅಡಚಣೆಯನ್ನು, ಗುರುತಿಸುತ್ತಾರೆ, ನಿವಾರಿಸುತ್ತಾರೆ, ಹಾಗೆಯೇ ವ್ಯಕ್ತಿಗೆ ಬೊಜ್ಜಿದ್ದರೆ, ಅದನ್ನು ತಗ್ಗಿಸುವುದು ಅಗತ್ಯ.

ಉಸಿರಾಟದ ತೊಂದರೆ – ಏಪ್ನಿಯಾ:

ಉಸಿರಾಟಕ್ಕೆ ತೊಂದರೆಯಾಗಿ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ವ್ಯಕ್ತಿ ಎದ್ದು ಕೂಡುವಂತಾಗುತ್ತದೆ. ತಾಜಾ ಗಾಳಿಗೆ ಕಿಟಕಿಯ ಬಳಿಗೆ ಹೋಗುವಂತಾಗುತ್ತದೆ. ಶ್ವಾಸಕೋಶ ತಜ್ಞರನ್ನು ಕಾಣಬೇಕು. ಆಕ್ಸಿಜನ್ ಇಟ್ಟುಕೊಳ್ಳಬೇಕು.

ಅತಿಯಾದ ನಿದ್ರೆ:

ರಾತ್ರಿ ಹೊತ್ತು ಹೆಚ್ಚು ನಿದ್ರೆ, ಹಗಲು ಹೊತ್ತಿನಲ್ಲೂ ನಿದ್ರೆ, ಬೇಡದ ಸಮಯ/ಸ್ಥಳದಲ್ಲಿ ನಿದ್ರೆ ಬರುವುದು, ಕೆಲಸ ಮಾಡುವಾಗ ನಿದ್ರೆ ಸಮಸ್ಯೆಯಾಗುತ್ತದೆ, ಅತಿಯಾದ ದಣಿವು, ಒತ್ತಡ, ಖಿನ್ನತೆ ಅನೀಮಿಯ, ಸಾಮಾನ್ಯ ಕಾರಣಗಳು. ಚಿಕಿತ್ಸೆ ಅಗತ್ಯವಿರುತ್ತದೆ. ಭಂಗವಿಲ್ಲದ ಸುಖನಿದ್ರೆ ಆರೋಗ್ಯದಾಯಕ. ಮನಸು ಪ್ರಶಾಂತವಾಗಿಟ್ಟುಕೊಂಡರೆ ಸುಖ ನಿದ್ರೆ ಸಹಜವಾಗಿ ಬರುತ್ತದೆ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com