ಮಕ್ಕಳ ವಿಕಾಸ: ಬೆಳವಣಿಗೆ ನಿಯಂತ್ರಿಸುವ ಅಂಶಗಳು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್

ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಏಕೆ ಹೀಗೆ?

Published: 19th November 2021 01:34 PM  |   Last Updated: 19th November 2021 03:36 PM   |  A+A-


Factors controlling the evolution of children

ಮಕ್ಕಳ ವಿಕಾಸ

ಮಕ್ಕಳು ಕುಟುಂಬದ- ಸಮಾಜದ ಆಶಾಕಿರಣಗಳು. ಅವರು ವಿದ್ಯಾವಂತರಾಗಲಿ, ಬುದ್ಧಿವಂತರಾಗಲಿ, ಪ್ರತಿಭಾವಂತರಾಗಲಿ, ಶ್ರೀಮಂತರಾಗಲಿ, ಚೆನ್ನಾಗಿ ಬದುಕಿ ಬಾಳಲಿ, ಕೀರ್ತಿ ತರಲಿ, ಎಂದು ಎಲ್ಲಾ ತಂದೆ ತಾಯಿಗಳು ಬಯಸುತ್ತಾರೆ.

ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಕೆಲವರು ನೀತಿವಂತ ರಾದರೆ, ಕೆಲವರು ಅಡ್ಡ ಮಾರ್ಗಗಳಾಗಿ ದುಶ್ಚಟಗಳಿಗೆ ದಾಸರಾಗುತ್ತಾರೆ. ಕೆಲವರು ಸಮಾಜಮುಖಿಗಳಾದರೆ, ಕೆಲವರು ಸಮಾಜ ವಿರೋಧಿಗಳಾಗುತ್ತಾರೆ. ಏಕೆ ಹೀಗೆ?

ಮಕ್ಕಳ ಬೆಳವಣಿಗೆ ನಿಯಂತ್ರಿಸುವ ಅಂಶಗಳು:
ಮಕ್ಕಳದು ಪಂಚಮುಖಿ ಬೆಳವಣಿಗೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆ. ಈ ಬೆಳವಣಿಗೆಯನ್ನು ನಿರ್ದೇಶಿಸಿ ನಿಯಂತ್ರಿಸುವ ಅಂಶಗಳು ಹಲವಾರು ಇವೆ.

  1. ವಂಶವಾಹಿನಿಗಳು ಪ್ರತಿ ಜೀವಕೋಶದಲ್ಲಿರುವ 23 ಜೊತೆ ವರ್ಣತಂತುಗಳ ಮೇಲಿರುವ 20000 ವಂಶವಾಹಿನಿಗಳು ತಂದೆ-ತಾಯಿ ಗುಣಲಕ್ಷಣಗಳನ್ನು ಮಕ್ಕಳಿಗೆ ರವಾನಿಸುತ್ತವೆ.
  2. ಮಿದುಳಿನ ಸಮರ್ಪಕ ಅಸಮರ್ಪಕ ಬೆಳವಣಿಗೆ: ತಾಯಿ ಗರ್ಭದಲ್ಲಿ 9 ತಿಂಗಳು ಮತ್ತು ಆ ನಂತರ 5ವರ್ಷಗಳಲ್ಲಿ ಬೆಳೆಯುವ ಮಿದುಳು ಸಮರ್ಪಕವಾಗಿದೆಯೇ ಅಥವಾ ಹಾನಿಗೊಂಡು ನ್ಯೂನತೆಗಳಿವೆಯೇ?
  3. ತಂದೆ-ತಾಯಿ ಕುಟುಂಬದ ಲಾಲನಾ-ಪಾಲನಾ, ವೈಖರಿ ಹಾಗೂ ಕುಟುಂಬದ ವಾತಾವರಣ, ಮಕ್ಕಳಿಗೆ ಎಷ್ಟು ಪ್ರೀತಿ, ಯಾವ ರೀತಿಯಲ್ಲಿ ಪ್ರೀತಿ ತೋರಿಸುತ್ತಾರೆ? ಎಷ್ಟು ಶಿಕ್ಷೆ, ಹೇಗೆ ಶಿಕ್ಷೆ ನೀಡುತ್ತಾರೆ? ಎಷ್ಟು ಶಿಸ್ತು ಕಲಿಸುತ್ತಾರೆ, ಪರಸ್ಪರ ಹೇಗೆ ಸಂವಹನ ಮಾಡುತ್ತಾರೆ? ಕುಟುಂಬದವರಿಗೆ ಯಾವ ಯಾವ ಹವ್ಯಾಸ - ದುರಭ್ಯಾಸಗಳಿವೆ?. ಅವರಲ್ಲಿ ಎಷ್ಟು ಸಾಮರಸ್ಯ– ವಿರಸಗಳಿವೆ.
  4. ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ ಮತ್ತು ಶಿಕ್ಷಕರ ಗುಣಮಟ್ಟ, ನಡೆನುಡಿಗಳಲ್ಲಿ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿದ್ದಾರೆಯೇ? ಕೇವಲ ಅಂಕಗಳನ್ನು ಗಳಿಸಲು ಒತ್ತಾಯವಿದೆಯೇ? ಜೀವನ ಕೌಶಲಗಳನ್ನು ಕಲಿಸುವ ವ್ಯವಸ್ಥೆ ಇದೆಯೇ?
  5. ನೆರೆಹೊರೆಯಲ್ಲಿ ಯಾರಿದ್ದಾರೆ ಎಂಥವರಿದ್ದಾರೆ? ಸ್ನೇಹಪರರೇ ಜಗಳಗಂಟರೇ? ಶಿಷ್ಟರೇ? ದುಷ್ಟರೇ?.
  6. ಮಕ್ಕಳು ಮೊಬೈಲ್ ಟಿವಿ ಇಂಟರ್ ನೆಟ್ ನ್ನು ಎಷ್ಟು ಬಳಸುತ್ತಾರೆ, ಏನನ್ನು ನೋಡುತ್ತಾರೆ, ಯಾವುದನ್ನು ಅನುಕರಿಸುತ್ತಾರೆ?
  7. ಮಕ್ಕಳು ಅನುಕರಿಸಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ? ಆ ವ್ಯಕ್ತಿಗಳ ಗುಣವಿಶೇಷಗಳು ನಡೆ-ನುಡಿ ಏನು?
  8. ಮಕ್ಕಳ ಆಹಾರ ಸೇವನೆ ಹೇಗೆ? ಏನು ಮತ್ತು ಎಷ್ಟನ್ನು, ಎಲ್ಲಿ ಮತ್ತು ಹೇಗೆ ತಿನ್ನುತ್ತಾರೆ ?
  9. ಮಕ್ಕಳು ಬಿಡುವಿನ ವೇಳೆಯನ್ನು ಕಳೆಯಲು ಏನು ಮಾಡುತ್ತಾರೆ, ಅವರ ಮನರಂಜನಾ ಚಟುವಟಿಕೆಗಳೇನು?, ಹವ್ಯಾಸಗಳೇನು?
  10. ಮಕ್ಕಳ ಆರೋಗ್ಯ- ಅನಾರೋಗ್ಯ ಸ್ಥಿತಿ ಹೇಗಿದೆ? ಎಷ್ಟು ಅವಧಿಗೊಮ್ಮೆ ರೋಗ ಗ್ರಸ್ತ ರಾಗುತ್ತಾರೆ, ದೀರ್ಘಕಾಲ ಉಳಿಯುವ ಕಾಯಿಲೆಗೆ ಒಳಗಾಗಿದ್ದಾರೆಯೇ?

ಬುದ್ಧಿವಂತಿಕೆ: 
ಶಾಲಾ ಪಠ್ಯ ಪುಸ್ತಕಗಳಲ್ಲಿರುವ ಮಾಹಿತಿಯನ್ನು ಗ್ರಹಿಸಿಕೊಂಡು ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆದು, ಅತಿಹೆಚ್ಚು ಅಂಕಗಳನ್ನು ಪಡೆಯುವುದೇ ಬುದ್ಧಿವಂತಿಕೆ ಎಂದು ತಿಳಿಯುವ ಪಾಲಕರಿದ್ದಾರೆ ಶಿಕ್ಷಕರಿದ್ದಾರೆ. ಟಾಪರ್ ನನ್ನು ಬುದ್ಧಿವಂತನೆಂದೂ, ಫೇಲಾದವನನ್ನು ದಡ್ಡ ನೆಂದು ಕರೆಯುವ ಜನರಿದ್ದಾರೆ. ಹೆಚ್ಚು ಅಂಕ ಗಳಿಸುವುದೇ ಬುದ್ಧಿವಂತಿಕೆ ಖಂಡಿತ ಅಲ್ಲ.

* ಉತ್ತಮ ಸಂವಹನ ಸಾಮರ್ಥ್ಯ: ಮಾತೃಭಾಷೆ ಅಥವಾ ಯಾವುದಾದರೊಂದು ಭಾಷೆಯಲ್ಲಿ ಚೆನ್ನಾಗಿ ಮಾತನಾಡುವ ಬರೆಯುವ ಸಾಮರ್ಥ್ಯ. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಸ್ಫುಟವಾಗಿ ವ್ಯಕ್ತಪಡಿಸುವ ಕೌಶಲ.

* ಉತ್ತಮ ಆಲೋಚನೆ -ವಿಚಾರ ಮಾಡುವ ಶಕ್ತಿ: ನೋಡಿದ್ದನ್ನು, ಓದಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅರ್ಥಮಾಡಿಕೊಂಡು ನಿಜವೇ/ ಸುಳ್ಳೇ, ಸರಿಯೇ/ ತಪ್ಪೇ, ಸಾಧ್ಯವೇ/ ಅಸಾಧ್ಯವೇ, ಅನುಕೂಲವೇ/ ಅನಾನುಕುಲವೇ ಎಂದು ವಿಚಾರ ಮಾಡಬೇಕು, ವಾಸ್ತವಿಕತೆಯೇ/ ಕಲ್ಪನೆಯೇ ತಿಳಿಯಬೇಕು. ಬೇಕು/ ಬೇಡಗಳನ್ನು ಸರಿಯಾಗಿ ನಿರ್ಧರಿಸಬೇಕು.

* ಸೃಜನಶೀಲತೆ: ಹೊಸರೀತಿಯಲ್ಲಿ ಹಳೆಯ ಜಾಡನ್ನು ಬಿಟ್ಟು, ಸಾಮಾನ್ಯರಿಗಿಂತ ಭಿನ್ನವಾಗಿ ಚಿಂತನೆ ಮಾಡಿ ಹೊಸತನ್ನು ಸೃಷ್ಟಿಸುವುದು, ಸಮಸ್ಯೆಗಳಿಗೆ ನವ-ನವೀನ ಪರಿಹಾರಗಳನ್ನು ಹುಡುಕುವುದು. ವಿಷಯಗಳ, ವಸ್ತುಗಳ ಆವಿಷ್ಕಾರ ಮಾಡುವುದು.

ಇದನ್ನೂ ಓದಿ: ಮಕ್ಕಳಲ್ಲಿ ನಕಾರಾತ್ಮಕ ನಡವಳಿಕೆಗಳನ್ನು ತಡೆಯುವುದು ಹೇಗೆ? ಪರಿಹಾರವೇನು?

* ವೇಗದ ಕಲಿಕೆ, ಉತ್ತಮ ನೆನಪು.
* ಲೆಕ್ಕಾಚಾರ, ಉತ್ತಮ ವ್ಯವಹಾರಿಕ ಜ್ಞಾನ
* ಮಾಹಿತಿಗಳ ಚಿಂತನ - ಮಂಥನ ಮಾಡಿ, ತನ್ನ ಅರಿವು, ಜ್ಞಾನವನ್ನು ವಿಸ್ತರಿಸುವುದು.
* ಕಾರ್ಯ-ಕಾರಣ ಸಂಬಂಧಗಳನ್ನು ಅರಿಯುವುದು.
* ಕ್ಷೇತ್ರ ಜ್ಞಾನ -ದಿಕ್ಕು -ದಾರಿಗಳನ್ನು ತಿಳಿಯುವುದು.

ಭಾವನಾತ್ಮಕ ಬೆಳವಣಿಗೆ: 
ಆಂತರಿಕ ಮತ್ತು ಹೊರಗಿನ ಪ್ರಚೋದನೆಗಳಿಗೆ ಸಹಜವಾಗಿ ಸೃಷ್ಟಿಯಾಗುವ ಭಾವನೆಗಳನ್ನು ಹಿತಮಿತವಾಗಿ ತನಗೆ ಮತ್ತು ಇತರರಿಗೆ ತೊಂದರೆ ಆಗದ ರೀತಿಯಲ್ಲಿ ಪ್ರಕಟಿಸುವ ಕೌಶಲವನ್ನು ಮಕ್ಕಳು ಕಲಿಯಬೇಕು. ಅವು ಸಂತೋಷ- ದುಃಖ ವಾಗಬಹುದು, ಪ್ರೀತಿ- ದ್ವೇಷ ವಾಗಬಹುದು, ಭಯ- ಕೋಪ ವಾಗಬಹುದು, ಮತ್ಸರ- ನಾಚಿಕೆಯಾಗಬಹುದು, ಸಮಯ- ಸಂದರ್ಭ- ಸನ್ನಿವೇಶಕ್ಕೆ ಸೂಕ್ತರೀತಿಯಲ್ಲಿ ಭಾವ ಪ್ರಕಟಣೆ ಮಾಡುವುದನ್ನು ತಂದೆತಾಯಿಗಳು, ಇತರರು ಮಕ್ಕಳಿಗೆ ಕಲಿಸಬೇಕು. ಯಾವುದೇ ರೀತಿಯ ಭಾವೋದ್ವೇಗವನ್ನು ಪ್ರಕಟಿಸದಂತೆ ತರಪೇತಿ ನೀಡಬೇಕು. ಮಕ್ಕಳಲ್ಲೂ ಈಗ ಕೋಪ ರೋಷ ವೇಷಗಳು, ಹಿಂಸಾಚಾರ ಕಂಡುಬರುತ್ತಿದೆ. ಅನಗತ್ಯ ಭಯದಿಂದ ಅವರ ನಿರ್ವಹಣಾ ಸಾಮರ್ಥ್ಯ (ಉದಾಹರಣೆಗೆ ಪರೀಕ್ಷಾ ಸಮಯದಲ್ಲಿ/ ಸ್ಪರ್ಧೆ ಮಾಡುವಾಗ) ಕಡಿಮೆಯಾಗಬಹುದು ದುಃಖದಿಂದ - ಹತಾಶೆಯಿಂದ ಮಕ್ಕಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಕೆಲಸವಾಗಬೇಕು.

ಇದನ್ನೂ ಓದಿ: ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ

ಸಾಮಾಜಿಕ ಬೆಳವಣಿಗೆ:
ಬೆಳೆಯುವ ಮಕ್ಕಳು ಮನೆಯೊಳಗೆ - ಹೊರಗೆ ಶಾಲೆಯೊಳಗೆ, ಮುಂದೆ ಸಮಾಜದಲ್ಲಿ ಇತರರೊಡನೆ ಸಹಕರಿಸಿ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕು. ಕುಟುಂಬದಲ್ಲಿ, ಸಮಾಜದಲ್ಲಿ ತನ್ನ ಹಕ್ಕು ಬಾದ್ಯತೆಗಳೇನೆಂದು ತಿಳಿಯಬೇಕು. ಆಹಾರವಾಗಲಿ ವಸ್ತ್ರ - ವಸ್ತುಗಳನ್ನಾಗಲೀ, ಅನುಕೂಲತೆಗಳನ್ನಾಗಲೀ, ಭಾವನೆಗಳನ್ನಾಗಲೀ, ಇತರರೊಡನೆ ಹಂಚಿಕೊಳ್ಳಬೇಕು, ಸ್ವಾರ್ಥದ ಜೊತೆಜೊತೆಗೆ ಪರ ಹಿತವನ್ನು ಬಿಡಬಾರದು, ಕಷ್ಟ-ನಷ್ಟಗಳಿಗೆ ತುತ್ತಾದವರಿಗೆ ಸಹಾಯ ಸಹಾನುಭೂತಿ ತೋರಿಸಬೇಕು. ಸಮಾಜಮುಖಿಯಾಗಿ ಬದುಕಲು ಕಲಿಯಬೇಕು.

ನೈತಿಕ ಬೆಳವಣಿಗೆ:
ನೀತಿ-ನಿಯಮಗಳು ಯಾವುದೇ ಸಭ್ಯ ಸಮಾಜದ ಅಂಗಗಳು. ನೀತಿ-ನಿಯಮಗಳ ಪಾಲನೆಯಿಂದ ವ್ಯಕ್ತಿಗೂ ಕ್ಷೇಮ ಮತ್ತು ಸಮಾಜಕ್ಕೂ ಕ್ಷೇಮ. ಬಲಾಢ್ಯರು, ಬುದ್ಧಿವಂತರು, ಹೆಚ್ಚು ಸಂಪನ್ಮೂಲ ಉಳ್ಳವರು ಇತರರನ್ನು, ಮುಖ್ಯವಾಗಿ ದುರ್ಬಲರನ್ನು, ವ್ಯವಹಾರಜ್ಞಾನ ತಿಳುವಳಿಕೆ ಇಲ್ಲದವರನ್ನ, ಬಡವರನ್ನು ಶೋಷಿಸಬಾರದು. ಸುಳ್ಳು, ಕಪಟ, ಮೋಸ ವಂಚನೆಗಳನ್ನು ಮಾಡಬಾರದು. ಇನ್ನೊಬ್ಬರ ವಸ್ತು, ಹಣವನ್ನು ಅಪಹರಿಸ ಬಾರದು. ಪ್ರಮಾಣಿಕತೆ, ಪರಹಿತ, ಸೇವೆ, ಸಹಕಾರ, ಇತ್ಯಾದಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಬಗೆಯ ಅಪರಾಧ ಮಾಡಬಾರದು. ಅಪರಾಧ ಮಾಡಲು ಪ್ರೋತ್ಸಾಹ ನೀಡಬಾರದು. ಮಕ್ಕಳ ವಿಕಾಸ ಈ ಐದುವಿಭಾಗದಲ್ಲಿ ಆಗುವಂತೆ ನೋಡಿಕೊಳ್ಳಬೇಕು. 


ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp