ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ, ಹಸ್ತದಿಂದಧಿಕ ಹಿತರಿಲ್ಲ, ಎಷ್ಟೇ ವಿಮರ್ಶಿಸಿದರೂ ಮೋದಿಗೆ ಸದ್ಯ ಮನಃಶಾಂತಿ ಇಲ್ಲ!

ಅಂತಃಪುರದ ಸುದ್ದಿಗಳುಸ್ವಾತಿ ಚಂದ್ರಶೇಖರ್ಪ್ರಧಾನಿ ಮೋದಿಗೆ ಮನಃಶಾಂತಿ ಇಲ್ಲ! ದೇಶದ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಓರ್ವ ಪ್ರಧಾನಿಗೆ ಸೃಷ್ಟಿ ಆಗುವುದು, ಮತ್ತು ಅದನ್ನು ರಾಜಕೀಯ ತಂತ್ರ ಎಂದು ಸಮರ್ಥಿಸಿಕೊಂಡರೂ ಅಂತಹ ಪರಿಸ್ಥಿತಿ ಎದುರಿಸುವುದು ಕಷ್ಟ..
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿಗೆ ಮನಃಶಾಂತಿ ಇಲ್ಲ! ಇದು ನಿಜವೇ. ದೇಶದ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಓರ್ವ ಪ್ರಧಾನಿಗೆ ಸೃಷ್ಟಿ ಆಗುವುದು, ಮತ್ತು ಅದನ್ನು ರಾಜಕೀಯ ತಂತ್ರ ಎಂದು ಏನೆಲ್ಲ ಸಮರ್ಥಿಸಿಕೊಂಡರು ದೇಶದ ಅತ್ಯುನ್ನತ ಸ್ಥಾನದಲ್ಲಿ ಇರುವ ಪ್ರಧಾನಿಗೆ ಅದು ಕಷ್ಟ ಸಾಧ್ಯವೇ.

ಜನರಿಂದ ಆಯ್ಕೆ ಆಗುವ ರಾಜಕರಣಿಗೆ ಜನರ ಮುಂದೆ ಕ್ಷಮೆ ಯಾಚಿಸಿದರೆ ಏನಂತೆ ಅಂತೀರಾ...? 

ಮತ ಯಾಚಿಸಬಹುದು ಆದರೆ ಕ್ಷಮೆ ಯಾಚಿಸಲು ಆಗುವುದಿಲ್ಲ. ಇದು ಯಾವ ರಾಜಕಾರಿಣಿಗೆ ಆದರೂ ಸಾರ್ವಕಾಲಿಕ ಸತ್ಯ. ಇನ್ನು "ತಾನು ತಂದ ಕೃಷಿ ಕಾಯ್ದೆಯನ್ನು ಹಿಂಪಡೆಯುವೆ ಮತ್ತು ದೇಶದ ಜನರ ಮುಂದೆ ಕ್ಷಮೆ ಯಾಚಿಸುವೆ, "ರೈತರ ಒಳಿತಿಗೆ ತಂದೆ, ದೇಶದ ಹಿತಕ್ಕೆ ಹಿಂಪಡೆಯುತ್ತಿದ್ದೇನೆ".

ಇಲ್ಲಿ ರೈತರ ಒಳಿತು ಕಂಡೀತಾದರು ದೇಶದ ಹಿತ ಇನ್ನು ಕಾಣಬೇಕಷ್ಟೇ. ನೆಟ್ಟ ಬೀಜವೆಲ್ಲವೂ ಗಿಡವಾಗದೇ ಇದ್ದರೂ ಪರವಾಗಿಲ್ಲ ಆದರೆ ಗಿಡವಾಗಿ ಬೆಳದದ್ದು ಸತ್ತರೆ ಅದು ಹೆಚ್ಚು ನೋವು ಉಂಟು ಮಾಡುವುದು. ಕಳೆದ ವರ್ಷ ಜೂನ್ 3 2020 ರಂದು ಕೇಂದ್ರ ವಿತ್ತ ಮಂತ್ರಿ ನಿರ್ಮಲ ಸೀತರಾಮನ್ ಕೃಷಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿಗಳ ಅಂಗೀಕಾರ ಪಡೆದು ತರುತ್ತಾರೆ.

ನಂತರ ಮಳೆಗಾಲದ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಲಾಗುತ್ತದೆ. ಸಂಸತ್ ನಲ್ಲಿ ಬಹುಮತ ಹೊಂದಿರುವ ಬಿಜೆಪಿ ಸಹಜವಾಗಿಯೇ ಅನುಮೋದನೆಯನ್ನೂ ಪಡೆಯುತ್ತೆ. 

ಆದರೆ ಅಷ್ಟರಲ್ಲಿ ದೇಶದ ಹಲವೆಡೆ ಕಾಯ್ದೆ ವಿರುದ್ಧ ರೈತರು ಧ್ವನಿ ಎತ್ತಿರುತ್ತಾರೆ. ಬಿಜೆಪಿ ಮೈತ್ರಿ ಪಂಜಾಬಿನ ಶಿರೋಮಣಿ ಅಕಾಲಿ ದಳ ಬಿಜೆಪಿ ಬಿಟ್ಟು ಹೋಗುವ ನಿರ್ಧಾರವಾಗುತ್ತೆ ಅಲ್ಲಿಗೆ ಮೊದಲ ಪೈರು ಮೊಳಕೆ ಒಡೆಯುವ ಮುಂಚೆಯೇ ನೆಲ ಕಚ್ಚುತ್ತದೆ. 

ಇಷ್ಟಕ್ಕೂ ಈ ಕೃಷಿ ಕಾಯ್ದೆಯನ್ನು ರೈತ ವಿರೋಧಿ ಎಂಬ ರೈತರ ಆಕ್ಷೇಪ ಮೊಳಗುತ್ತಿರುವುದು ಏಕೆ..?

ರೈತರ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಹೊರಗೆ ಮಾರಾಟ ಮಾಡಲು ಇರುವ ಅವಕಾಶವನ್ನು ಮೊದಲ ಕಾಯ್ದೆ ಸೂಚಿಸುತ್ತದೆ, ಅದು ಸರಿಯೇ. ಒಂದು ವೇಳೆ ಮಾರಲು ಆಗದೆ ಇದ್ದಲ್ಲಿ ಮುಂದೇನು..? ಎಂಬ ದುಗುಡ, ಆತಂಕ ರೈತರದ್ದು, ಚಿಂತೆ ಬೇಡ ಎಪಿಎಂಸಿ ಇದ್ದೇ ಇರುವುದು ಎನ್ನುವ ವಾದ ಸರ್ಕಾರದ್ದು. ಖಾಸಗಿ ಸಂಸ್ಥೆಗಳು ಬಂದಲ್ಲಿ ದೀರ್ಘಾವಧಿಯಲ್ಲಿ ನಷ್ಟಕ್ಕೆ ಬೀಳುವ ಎಪಿಎಂಸಿಯನ್ನು ಎಷ್ಟು ದಿನ ನಡೆಸಲು ಸಾಧ್ಯ? ಎನ್ನುವ ಪ್ರತಿ ಪ್ರಶ್ನೆ ರೈತರದ್ದು. 

ಎಪಿಎಂಸಿಯ ಅಧಿಪತ್ಯವನ್ನು ಕಡಿಮೆ ಮಾಡಬೇಕು ಎಂಬುದೇ ಸರ್ಕಾರದ ಒಳ ಉದ್ದೇಶ. ಇನ್ನು ಸರಿ ಸುಮಾರು ಎಪಿಎಂಸಿಯಿಂದ ವರ್ಷಕ್ಕೆ ರಾಜ್ಯ ಅನುಸಾರ ಬರುವ 3 ರಿಂದ 4 ಸಾವಿರ ಕೋಟಿ ಆದಾಯಕ್ಕೂ ಯಾವುದೇ ಖಾತ್ರಿ ಇಲ್ಲ.

ಇನ್ನು ಕೆಲವು ಬಿಜೆಪಿ ಆಡಳಿತ ರಾಜ್ಯಗಳು ತಮ್ಮದೇ ಪಕ್ಷದ ಮಸೂದೆ-ಕಾಯ್ದೆಗಳನ್ನು ಬಹಿರಂಗವಾಗಿ ವಿರೋಧಿಸಲು ಸಾಧ್ಯವಾಗಿಲ್ಲ. ಆಂತರ್ಯದಲ್ಲಿ ಬಿಜೆಪಿ ಆಡಳಿತವಿದ್ದ ರಾಜ್ಯಗಳೂ ಸೇರಿದಂತೆ ಆದರೆ ಬಹುತೇಕ ಎಲ್ಲ ರಾಜ್ಯಗಳು ಕಾಯ್ದೆ ವಿರುದ್ಧವೇ ಇದ್ದವು.

ಕೃಷಿಯಲ್ಲಿ ಖಾಸಗೀಕರಣ ಒಳಿತೇ ಆದರೂ ಒಮ್ಮೆ ದೊಡ್ಡ ಸಂಸ್ಥೆಗಳು ಲಗ್ಗೆ ಇಟ್ಟರೆ ಮೊತ್ತ, ಆದಾಯಗಳೇನೋ   ದೊಡ್ಡದೇ ಆಗಿರುತ್ತದೆ. ಆದರೆ ಪ್ರತಿ ದಿನ ಶುಕ್ರವಾರ ಅಲ್ಲವಲ್ಲ, ಬಿದ್ದರೆ ನಮ್ಮನ್ನು ಹಿಡಿಯಲು ಕನಿಷ್ಟ ದರ ನಿಗದಿ ಮಾಡಿ" ಎನ್ನುವುದು ರೈತರ ಆಗ್ರಹ

ಇದಕ್ಕೆ ಮೌನವನ್ನೇ ಉತ್ತರವಾಗಿಸಿ ಕಾದು ನೋಡುತ್ತಿದಿದ್ದು ಸರ್ಕಾರದ ಮತ್ತೊಂದು ತಂತ್ರ. ಇನ್ನು ಎರಡನೇ ಕಾಯ್ದೆ ರೈತರು ತಮ್ಮಷ್ಟಿಗೆ ತಾವೇ ಬಂಡವಾಳ ಶಾಹಿಗಳ ಜೊತೆ ಮೈತ್ರಿ ಮಾಡಿಕೊಂಡು ಅವರಿಗೆ ಬೇಕಾದ ಬೆಳೆ ಬೆಳೆದು ನೀಡಬಹುದು.

ಆದರೆ ದೊಡ್ಡ ಸಂಸ್ಥೆಗೆ ಬೇಕಾಗುವ ಗುಣಮಟ್ಟ, ಮೊತ್ತ ತರಲು ಸಣ್ಣ ರೈತರಿಗೆ ಆಗುವುದಿಲ್ಲ, 5 ಎಕ್ಕರೆ ಒಳಗೆ ಕೃಷಿ ಮಾಡುವ ಸಣ್ಣ ರೈತರೇ ನಮ್ಮಲ್ಲಿ ಹೆಚ್ಚು ಇನ್ನು ಅವರ ಗತಿ ಏನು ಎನ್ನುವ ಪ್ರಶ್ನೆ ಸಹಜವೇ

ಆದರೆ ಪ್ರತಿ ಒಪ್ಪಂದಕ್ಕೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಉಸ್ತುವಾರಿ ಇರುವುದು, ಮತ್ತು ಎಲ್ಲವೂ ಲಿಖಿತ ರೂಪದಲ್ಲಿ ನಡೆಯುವುದು, ಇಲ್ಲಿ ಮೋಸಕ್ಕೆ ಜಾಗ ಇಲ್ಲ ಎಂದು ಸರ್ಕಾರದ ಕಾಯ್ದೆಯೇನೋ ಹೇಳುತ್ತೆ. ಆದರೆ ಒಂದು ವೇಳೆ ಮೋಸ ಆದಲ್ಲಿ ಕೋರ್ಟ್-ಕಚೇರಿ ಅಲೆಯುವ ಶಕ್ತಿ ಇಲ್ಲ ಎಂಬ ರೈತನ ಆತಂಕ ಸಹಜವಾದುದ್ದೇ. ಇನ್ನು ಮೂರನೇ ಕಾಯ್ದೆ, ಅಗತ್ಯ ಉತ್ಪನ್ನಗಳ ಪಟ್ಟಿಯಿಂದ ಬೇಳೆ, ಧಾನ್ಯ, ಎಣ್ಣೆ, ಈರುಳ್ಳಿ, ಅಲೂಗಡ್ಡೆ ಯನ್ನ ತೆಗೆಯುವುದು. 

ಇದನ್ನು ತೆಗೆದಲ್ಲಿ. ಯುದ್ಧ, ಪ್ರಕೃತಿ ವಿಕೋಪ ಸಮಯ ಬಿಟ್ಟು ಇನ್ನು ಯಾವ ಕಾಲಕ್ಕೂ ಇದು ಅಗತ್ಯ ಉತ್ಪನ್ನಗಳು ಅಲ್ಲ, ಹಾಗಿದ್ದಲ್ಲಿ ಸರ್ಕಾರ ಈ ಉತ್ಪನ್ನಗಳಿಗೆ ಕನಿಷ್ಟ ದರ ನಿಗದಿಪಡಿಸಿ ಏನೇ ಕಷ್ಟ ಇದ್ದರೋ ಇದನ್ನು ಕೊಂಡುಕೊಳ್ಳಬೇಕು ಎನ್ನುವ ಈಗಿನ ಅನಿವಾರ್ಯತೆ ಮುಂದೆ ಇರುವುದಿಲ್ಲ.

ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಹಳೆ ಪದ್ಧತಿಗೆ ಜೋತು ಬಿದ್ದು ಸರ್ಕಾರ ಕೊಳ್ಳುತ್ತದೆ ಎಂಬ ಭರವಸೆಯಲ್ಲೇ  ಬೇಕೋ, ಬೇಡವೋ ಒಟ್ಟಿನಲ್ಲಿ ಟನ್ ಗಟ್ಟಲೆ ಈ ಉತ್ಪನ್ನಗಳನ್ನ ಬೆಳೆಯುವ ರೈತರ ಆತಂಕ ಒಂದೆಡೆಯಾದರೆ, ಹೀಗಾದರೂ ಪದ್ಧತಿ ಬದಲಾಗಲಿ ಎನ್ನುವ ಸರ್ಕಾರದ ಆಶಯ ಮಾತ್ತೊಂದೆಡೆ.

ಇನ್ನು 8 ತಿಂಗಳ ಹಿಂದೆಯೇ ಸರ್ವೋಚ್ಚ ನ್ಯಾಯಾಲಯ ಈ ಕೃಷಿ ಕಾಯ್ದೆ ವಿಷಯಕ್ಕೆ ಅಂತ್ಯ ಹಾಡಿತ್ತು. ಜನವರಿ 2021 ರಂದು ಸುಪ್ರೀಂ ಕೋರ್ಟ್ ದೇಶದ ರೈತರನ್ನು ನೋಯಿಸುವ ಯಾವ ಕಾನೂನು ಬೇಕಿಲ್ಲ ಎಂದು ಸ್ಪಷ್ಟಪಡಿಸಿ ಕಾಯ್ದೆಗಳು ಜಾರಿಗೆ ತರುವುದನ್ನು ನಿಲ್ಲಿಸಿತು. ಇದಕ್ಕೆ ನನ್ನ ಸಮ್ಮತಿ ಇದೆ ಎಂದು ಜಂಟಿ ಸಂಸತ್ತಿನ ಅಧಿವೇಶನದಲ್ಲಿ ರಾಷ್ಟ್ರಪತಿಗೆಳೆ ಹೇಳಿದ್ದರು. ಇನ್ನು ಮೊನ್ನೆ ಪ್ರಧಾನಿ ಹೇಳಿದ್ದು ಏನು ಹಾಗಿದ್ದರೆ? 

"ಜಾರಿಗೆ ತರಲು ಆಗದ ಕಾಯ್ದೆಯನ್ನು ರದ್ದು ಗೊಳಿಸುತ್ತಿದ್ದೇವೆ" ಎಂದು ಹೇಳಿದ್ದು ಆಶ್ಚರ್ಯವೇ. ಆದರೆ ಇದರಿಂದ ಆದ ರಾಜಕೀಯ ಲಾಭ ಅಪಾರ.

ಮುಂಬರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆ ಅತಿ ಮಹತ್ವದ್ದು, ಪಂಜಾಬ್ ಇವರ ಪಾಲಾಗದೆ ಇದ್ದರೂ ಯುಪಿಯಲ್ಲಿ ಇವರ ಸಾರ್ವಭೌಮತ್ವ ಸಾಧಿಸಲೇ ಬೇಕಾದ ಅನಿವಾರ್ಯತೆ ಬಿಜೆಪಿಯದ್ದು ಹೆಚ್ಚಿಲ್ಲದಿರೂ ಕೃಷಿ ಕಾಯ್ದೆ ವಿರುದ್ಧ ಇದ್ದ ರೈತರ ಪೈಕಿ ಕನಿಷ್ಟ ಶೇಕಡ 12ರಷ್ಟು  ಮತದಾರರನ್ನು ಒಲಿಸಿಕೊಂಡಂತಾಯಿತು ಎನ್ನುವುದು ಲೆಕ್ಕಾಚಾರ

ಸೋತು ಗೆದ್ದರೆ ಮೋದಿ?

ಇದೆ ವರ್ಷ ಫೆಬ್ರವರಿಯಲ್ಲೇ ಕೃಷಿ ಕಾಯ್ದೆ ಜಾರಿಗೆ ತರಲು ಆಗುವುದಿಲ್ಲ ಎಂದು ಅರಿತ ಬಿಜೆಪಿ ಈ ಹೋರಾಟ ಮುಂದುವರೆಯಲು ಬಿಡಲು ಮತ್ತೊಂದು ಬಲವಾದ ಕಾರಣವಿದೆ. ಪ್ರತಿ ವರ್ಷ ಒಮ್ಮೆ ಪ್ರತಿಧ್ವನಿಸಿಸುವ ಖಾಲಿಸ್ತಾನಿ ಅಲೆಯನ್ನು ಸದ್ಯಕ್ಕೆ ಹತ್ತಿಕ್ಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 

ಏನೇ ಹೇಳಿದರೂ 13 ತಿಂಗಳು ಹೋರಾಟ ಮಾಡುವಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ಖಲಿಸ್ತಾನಿ ಬೇಡಿಕೆದಾರರ ಕೈವಾಡ ಇದ್ದೇ ಇದೆ. ಖಾಲಿಸ್ತಾನಿ ಹೋರಾಟಕ್ಕೆ ಎಂದು ಕೆನಡಾ ಯುಕೆ ದೇಶಗಳಲ್ಲಿ ಸಂಗ್ರಹ ವಾಗಿತ್ತಿದ್ದ ವಾರ್ಷಿಕ ನೂರಾರು ಕೋಟಿ ಹಣ ಈ ಹೋರಾಟದಲ್ಲಿ ವಿನಿಯೋಗವಾಯಿತು. ಸದ್ಯ ಇನ್ನು 2-3 ವರ್ಷ ಈ ಸಂಸ್ಥೆಗಳ ಕೈ ಖಾಲಿ ಎನ್ನುವುದಂತೂ ಸತ್ಯ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧದದ "ಕೈ"ಗಳು ಖಾಲಿಯಾದರೆ ಅದರ ಬಹುಪಾಲು ಪರಿಣಾಮ ಏನಾಗಲಿದೆ  

ಸಿಖ್ಖರು ಮುಸ್ಲಿಮರು ಒಂದಾಗುತ್ತಿದ್ದಾರೆ ಎನ್ನುವ ಭಯ ಕಾಡಿತೆ ಬಿಜೆಪಿಗೆ?

ಹಿಂದೂ ರಾಷ್ಟ್ರ ಅಥವಾ ಧರ್ಮ ಎಂದರೆ ಅದರಲ್ಲಿ ಸಿಖ್ಖರು ಸೇರುತ್ತಾರೆ ಮತ್ತು ಅವರನ್ನು ದೂರವಿಟ್ಟು ಹಿಂದೂ ಧರ್ಮ ಬೆಳಿಯಬಾರದು ಎಂದು ಸಾವರ್ಕರ್ ಅನೇಕ ಬಾರಿ ಉಲ್ಲೇಖ ಮಾಡಿದ್ದಾರೆ. ಆದರೆ ಕಳೆದ ಒಂದು ವರ್ಷದ ಬೆಳವಣಿಗೆಯಲ್ಲಿ ನಾಗರೀಕ ಮಸೂದೆ ತಿದ್ದುಪಡಿ ವಿರೋಧಿಸಿ ಹೊರಾಟದಿಂದ ಹಿಡಿದು, ಗುರುದ್ವಾರದ ಆವರಣದಲ್ಲಿ ನಮಾಜ್ ಮಾಡಲು ಅವಕಾಶ ನೀಡುತ್ತಾ ಮುಸಲ್ಮಾನರ ಜೊತೆ ನಿಂತ ಸಿಖ್ಖರ ವರ್ತನೆ ಬಿಜೆಪಿಗೆ ಆತಂಕ ಮೂಡಿಸಿದೆ. ಇನ್ನು ಇದು ಮುಂದುವರೆದಲ್ಲಿ, ಇತಿಹಾಸದಲ್ಲೇ ಸೈದ್ಧಾಂತಿಕವಾಗಿ ತಪ್ಪು ಹೆಜ್ಜೆ ಇಟ್ಟ ಅಪಕೀರ್ತಿಗೆ ಬಿಜೆಪಿ ಮತ್ತು ಇಂದಿನ ಆರ್ ಎಸ್ ಎಸ್ ಸಿದ್ಧವಿರಲಿಲ್ಲ ಎನ್ನಬಹುದು. ಇದೆಲ್ಲದರ ಪರಿಣಾಮವೇ ಈ ಕ್ಷಮೆ ಯಾಚನೆ

ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ, ಹಸ್ತದಿಂದಧಿಕ ಹಿತವರಿಲ್ಲ

ಇನ್ನು ಈ ಕಾಯ್ದೆಗಳು ಮುಂದಿನ ದಿನಗಳಲ್ಲಿ ರೈತರಿಗೆ ಒಳಿತಾದೀತು ಎನ್ನುವುದು ಸತ್ಯವೇ ಆದರೂ ಅದನ್ನು ಸರಿ ದಾರಿಯಲ್ಲಿ ನಡೆಸಲು ಇಡೀ ಸಂಪುಟದಲ್ಲಿ ಯಾರಿಂದಲೂ ಸಾಧ್ಯವಾಗಲಿಲ್ಲ. 

ಸ್ಥಿರ ಚಿತ್ತದಿಂದ ದಬ್ಬಾಳಿಕೆ ಬಿಟ್ಟು ಎಲ್ಲರನ್ನು ಜೊತೆಗೆ ಕರೆದು ಕೊಂಡು ಹೋಗಿದ್ದರೆ ಇದು ಸಾಧ್ಯ ಇತ್ತು. ಕಾಯ್ದೆ ಬರುವ ಮುಂಚೆ ರೈತರ ಜೊತೆ ಮತಡಬೇಕಿತ್ತು, ಕಾಯ್ದೆ ಬಂದು ವಿರೋಧ ಸೃಷ್ಟಿ ಆದ ನಂತರ ಅಮಿತ್ ಶಾ ಆದಿಯಾಗಿ ಯಾವ ಚಾಣಕ್ಯ ಮಾತನಾಡಿದರೂ ಏನು ಪ್ರಯೋಜನ?. 

ಭಾರತದಂತಹ ವೈವಿಧ್ಯಮ ದೇಶದಲ್ಲಿ ಪ್ರತಿ ಕಾಯ್ದೆಯೂ, ಪ್ರತಿ ಭಾಗಕ್ಕೂ ಯಥಾವತ್ತಾಗಿ ಅನ್ವಯವಾಗುತ್ತದೆ ಎಂದು ಹೇಳಲಾಗದು. ಒಮ್ಮೆ ಮೋದಿ ಅವರೇ ತಮ್ಮ ಸಂಸತ್ ನ ಭಾಷಣದಲ್ಲಿ ಗುಜರಾತ್ ಮಾದರಿ ಎಂದು ದೇಶವೆಲ್ಲಾ ಮಾತನಾಡುತ್ತಿದೆ. ಆದರೆ ಗುಜರಾತ್ ನ ಕೆಲವು ಭಾಗಗಳಲ್ಲೇ ಗುಜರಾತ್ ಮಾದರಿಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಪ್ರಧಾನಿಯೇ ಕೃಷಿ ರಾಜ್ಯಗಳ ವಿಷಯ, ರಾಷ್ಟ್ರೀಯ ಮಟ್ಟದಲ್ಲಿ ತರುವಂತಹ ಯಾವುದೇ ಕಾಯ್ದೆಯೂ ಪ್ರತಿ ರಾಜ್ಯಕ್ಕೂ ಇದಂ ಇತ್ಥಂ ಎಂದು ಅನ್ವಯ ಮಾಡಲು ಸಾಧ್ಯವಿಲ್ಲ.

ಇನ್ನು ಈ ಮೂರು ಕಾಯ್ದೆಗಳನ್ನು ಸಮಗ್ರವಾಗಿ ನೋಡುತ್ತಾ, ಆಯಾ ರಾಜ್ಯಗಳ ಅಗತ್ಯತೆತೆಗೆ ತಕ್ಕಂತೆ ಮಾರ್ಪಾಡು ಮಾಡುವ ಅವಕಾಶ ಸೃಷ್ಟಿಸಬಹುದಿತ್ತು. ಈಗಾಗಲೇ ಮಣಿಪುರ ಆದಿಯಾಗಿ ಹಲವು ಈಶಾನ್ಯ ರಾಜ್ಯಗಳಲ್ಲಿ ಎಪಿಎಂಸಿ ಜಾರಿಯಲ್ಲೇ ಇಲ್ಲ ಅದನ್ನೇ ಇಲ್ಲೂ ಉಲ್ಲೇಖಿಸಿ ಒಪ್ಪಿಸಬಹುದಿತ್ತು. ಈ ಕಾಯ್ದೆ ತರುವ ಮುನ್ನವೇ ಹಲವು ರೈತರು ಖಾಸಿಗಿಕರಣದ ಕದವನ್ನ ಸ್ವಯಂಪ್ರೇರಿತರಾಗಿ ತಟ್ಟಿದ್ದಾರೆ ಅವರ ಚರಿತ್ರೆ ಸಾರುತ್ತಾ, ಹೊಸ ಚರಿತ್ರೆ ಸೃಷ್ಟಿಸಬಹುದಿತ್ತು. ಆದರೆ ಇದು ಯಾವುದನ್ನೂ ಮಾಡದೆ, ಅಂಗಯ್ಯಲ್ಲಿ ಇದ್ದ ಹಿತವರನ್ನು ಎಲ್ಲೋ ಒಂದು ಕಡೆ ಈ ನಡೆ ಇಂದ ಕಳೆದು ಕೊಂಡಂತಾಯಿತು. ಏನು ಪ್ರಯೋಜನ?

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com