ಹರೆಯದವರ ಸಮಸ್ಯೆಗಳನ್ನು ಅರಿಯುವ, ನಿವಾರಿಸುವ ಸುಲಭ ಉಪಾಯಗಳು ಹೀಗಿವೆ... (ಚಿತ್ತ ಮಂದಿರ)

ಹತ್ತು-ಹನ್ನೆರಡು ವರ್ಷ ವಯಸ್ಸಾದಂತೆ, ಮಕ್ಕಳು ಹರೆಯಕ್ಕೆ ಕಾಲಿಡುತ್ತಾರೆ. ಹಾರ್ಮೋನುಗಳ ಸ್ರವಿಕೆಯಿಂದ ಹುಡುಗಿ ಸ್ತ್ರೀಯಾಗಿ, ಹುಡುಗ ಪುರುಷನಾಗಿ, ಪರಿವರ್ತನೆಗೊಳ್ಳಲು ಪ್ರಾರಂಭವಾಗುತ್ತದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಹತ್ತು-ಹನ್ನೆರಡು ವರ್ಷ ವಯಸ್ಸಾದಂತೆ, ಮಕ್ಕಳು ಹರೆಯಕ್ಕೆ ಕಾಲಿಡುತ್ತಾರೆ. ಹಾರ್ಮೋನುಗಳ ಸ್ರವಿಕೆಯಿಂದ ಹುಡುಗಿ ಸ್ತ್ರೀಯಾಗಿ, ಹುಡುಗ ಪುರುಷನಾಗಿ, ಪರಿವರ್ತನೆಗೊಳ್ಳಲು ಪ್ರಾರಂಭವಾಗುತ್ತದೆ. ಇಪ್ಪತ್ತು ವರ್ಷ ವಯಸ್ಸಿನವರೆಗೆ, ಈ ಪರಿವರ್ತನೆ ನಡೆಯುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ, ಈ ಅವಧಿ ಒಂದು ಸುವರ್ಣಾವಧಿ ಎನ್ನಬಹುದು.  ಬಾಲ್ಯದ ಮುಗ್ಧತೆ ಕಳೆದು ಪ್ರೌಢತೆಯ ಮಟ್ಟವನ್ನು ಈ ಅವಧಿಯಲ್ಲಿ ವ್ಯಕ್ತಿ ಮುಟ್ಟುತ್ತಾನೆ/ಳೆ, ಲೈಂಗಿಕ ಬೆಳವಣಿಗೆ , ಶೈಕ್ಷಣಿಕ ಸಾಧನೆ, ಸ್ವಾವಲಂಬಿತನ, ಮುಂದೆ ಮದುವೆಯಾಗಿ, ಕುಟುಂಬವನ್ನು ಹೊಂದುವ, ಸಂಪಾದಿಸಿ ಆರ್ಥಿಕ ಭದ್ರತೆಯನ್ನು ಸಾಧಿಸಬೇಕು. ಸಹಜವಾಗಿ ಅನೇಕ ಕಳವಳ - ತಲ್ಲಣಗಳು ಈ ಅವಧಿಯಲ್ಲಿ ಹುಡುಗ ಹುಡುಗಿಯರಲ್ಲಿ ಕಂಡುಬರುತ್ತವೆ.

ಲಿಂಗನಿರ್ದಿಷ್ಟ ಲಕ್ಷಣಗಳ ಬೆಳವಣಿಗೆ:

ಲೈಂಗಿಕ ಅಭಿವ್ಯಕ್ತಿಯ ಬಗ್ಗೆ ಆತಂಕ, ತಾನು ಎಷ್ಟರಮಟ್ಟಿಗೆ ಪುರುಷಸಿಂಹನಾಗುತ್ತಿದ್ದೇನೆ ಎಂದು ಹುಡುಗನೂ, ತಾನು ಎಷ್ಟರಮಟ್ಟಿಗೆ ಸ್ತ್ರೀರತ್ನಳಾಗುತ್ತಿದ್ದೇನೆ ಎಂದು ಹುಡುಗಿಯೂ ಆತಂಕ ಪಟ್ಟುಕೊಳ್ಳುತ್ತಾರೆ. ಅನುಮಾನಗಳಿದ್ದರೆ, ವೈದ್ಯರನ್ನು ಕಾಣಬೇಕು. ಹಾರ್ಮೋನ್ ಗಳ ಮಟ್ಟವನ್ನು ತಪಾಸಣೆ ಮಾಡಿ ಪರಿಹಾರ ಸೂಚಿಸಲಾಗುತ್ತದೆ . ಹುಡುಗಿಯರಲ್ಲಿ ಋತುಸ್ರಾವ ಏರುಪೇರಾಗುವುದು, ಋತುಚಕ್ರ ಶುರುವಾಗುವುದು ತಡವಾಗುವುದು. ಪಾಲಿಸಿಸ್ಟಿಕ್ ಓವರಿ ಸಮಸ್ಯೆಗಳನ್ನು ವೈದ್ಯರು ನಿವಾರಿಸಲು ಪ್ರಯತ್ನ ಪಡುತ್ತಾರೆ. ಹರೆಯದಲ್ಲಿ ಹಸ್ತ ಮೈಥುನ ಸಹಜ, ಸ್ವಾಭಾವಿಕ. ಆದರೆ ಇದರ ಬಗ್ಗೆ ಹರೆಯದವರಿಗೆ ಭಯ - ತಪ್ಪಿತಸ್ಥ ಭಾವನೆ, ತಮ್ಮ ಲೈಂಗಿಕ ಶಕ್ತಿ ಸಾಮರ್ಥ್ಯ ಕುಗ್ಗುವುದು ಎಂದು ಚಿಂತಿಸುತ್ತಾರೆ,  ಇದು ಸಲ್ಲದು. ಲೈಂಗಿಕ ಆಕರ್ಷಣೆ/ ಭಾವನೆಗಳನ್ನು ನಿಯಂತ್ರಿಸುವುದು ಅನೇಕರಿಗೆ ಕಷ್ಟವಾಗುತ್ತದೆ. ಲೈಂಗಿಕ ಚಟುವಟಿಕೆಗಳು ಪ್ರೀತಿ-ಪ್ರೇಮದ ಸುಳಿಯಲ್ಲಿ. ಅನೇಕರು ಸಿಕ್ಕಿಹಾಕಿಕೊಳ್ಳುತ್ತಾರೆ, ಅವರಿಗೆ ವೈದ್ಯರ ಮುಖಾಂತರ ಲೈಂಗಿಕ ಆರೋಗ್ಯ ಶಿಕ್ಷಣ ಕೊಡಿಸಿ ಲೈಂಗಿಕ ಅರಿವನ್ನು ಮೂಡಿಸುವ ಕೆಲಸವನ್ನು ಪಾಲಕರು, ಶಿಕ್ಷಕರು ಮಾಡಬೇಕು.

ಶೈಕ್ಷಣಿಕ ಉದ್ಯೋಗದ ಆಯ್ಕೆಯ ಗೊಂದಲ:

SSLC ಆದಮೇಲೆ ವಿಜ್ಞಾನವೇ, ವಾಣಿಜ್ಯವೇ, ಕಲೆಯೇ? ಯಾವ ಕಾಲೇಜು, ಯಾವ ಕೋರ್ಸ್, ಯಾವ ಉದ್ಯೋಗ, ಸಂಪಾದನೆಯ ಹಾದಿ ಯಾವುದು, ಪ್ರತಿಯೊಬ್ಬ ಹರೆಯದ ವಿದ್ಯಾರ್ಥಿಯ ಮುಂದೆ ನಿಲ್ಲುವ ಪ್ರಶ್ನೆಗಳು. ತಂದೆ-ತಾಯಿಗಳ ಒತ್ತಡಕ್ಕೋ, ಗೆಳೆಯರನ್ನು ಅನುಕರಿಸಲೋ ಯಾವುದೋ ಒಂದು ಕೋರ್ಸ್ ಆಯ್ದುಕೊಂಡು, ಅದು ಇಷ್ಟವಾಗದೆ ಅಥವಾ ಕಷ್ಟವಾಗಿ, ಫೇಲಾಗಿ ನಿರಾಶರಾಗುತ್ತಾರೆ. ಇಷ್ಟವಾದ ಕೋರ್ಸ್ ಸೇರಲಾಗದೇ  ಹತಾಶರಾಗುವವರು ಕೆಲವರು, ವಿಪರೀತವಾದ ಸ್ಪರ್ಧೆಯಲ್ಲಿ, ಅಗತ್ಯವಾದಷ್ಟು ಮಾರ್ಕ್ಸ್ ಪಡೆಯಲಾಗದೆ, ಅವಮಾನಕ್ಕೆ ಈಡಾಗುವರು ಕೆಲವರು. ಆರ್ಥಿಕ ಸಮಸ್ಯೆಯಿಂದಲೋ ಸಂಪಾದನೆ ಶುರುಮಾಡುವ ಅನಿವಾರ್ಯತೆಯಿಂದಲೋ ಓದನ್ನು ಮುಂದುವರೆಸಲಾಗದಿರುವವರು ಕೆಲವರು. ಕಾಂಪಿಟಿಟಿವ್ ಪರೀಕ್ಷೆಗೆ ಕೂತು ಹಲವುಸಲ ಫೇಲಾಗಿ ನೋವು ನಿರಾಸೆಯನ್ನು ಅನುಭವಿಸುವವರು ಕೆಲವರು. ಯಾವುದೇ ಕೋರ್ಸ್ ನಲ್ಲಿ ಯಶಸ್ವಿಯಾಗಬೇಕಾದರೆ ಶ್ರದ್ಧೆ ಶ್ರಮ ಅತ್ಯಗತ್ಯ, ಆದರೆ ಇಂದಿನ ಅನೇಕ ಯುವಜನರಿಗೆ ಶ್ರದ್ಧೆಯೂ ಇಲ್ಲ ಶ್ರಮ ಪಡುವ ಮನೋಭಾವವು ಇಲ್ಲ, ಸುಲಭವಾಗಿ ಯಶಸ್ಸಿಗಾಗಿ ನಿರೀಕ್ಷಿಸಿ ನಿರಾಶರಾಗುತ್ತಾರೆ, ಇಲ್ಲವೇ ಹಣದಿಂದ ಅಕ್ರಮ ಮಾರ್ಗದಲ್ಲಿ ಯಶಸ್ಸನ್ನು ಪಡೆಯಲು ವಿಫಲ ಪ್ರಯತ್ನ ಮಾಡುತ್ತಾರೆ. ಮೋಜು ಮಸ್ತಿ ಮಾಡುವುದರಲ್ಲಿ ಹಾಗೂ ತಂದೆ-ತಾಯಿಯನ್ನು ಆಕ್ಷೇಪಿಸುವುದುರಲ್ಲೇ ಸಂತೋಷ ಕಾಣುತ್ತಾರೆ. ಇವರಿಗೆ ಸರಿಯಾದ ಶಿಕ್ಷಣ ಮತ್ತು ಕೆರಿಯರ್-  ವೃತ್ತಿ ಮಾರ್ಗದರ್ಶನದ ಅಗತ್ಯವಿದೆ.

ದುರಭ್ಯಾಸ-ಚಟಗಳು:

ಹರೆಯದವರಿಗೆ ಕುತೂಹಲ ಹೆಚ್ಚು, ಬೇರೆಯವರು ಮಾಡುವುದನ್ನೆಲ್ಲ ಅನುಕರಿಸುವ ಸ್ವಭಾವ, ಯಾವುದು ತಕ್ಷಣ ಖುಷಿಕೊಡುತ್ತದೋ ಅದರ ಬಗ್ಗೆ ಬಹುಬೇಗ ಆಕರ್ಷಿತರಾಗುತ್ತಾರೆ. ಅವುಗಳ ಒಳಿತು, ಕೆಡಕು, ಅಪಾಯದ ಬಗ್ಗೆ ಆಲೋಚಿಸುವ ವ್ಯವಧಾನ ಇರುವುದಿಲ್ಲ. ಸಂಯಮ ಬಹಳ ಕಷ್ಟ, ಹೀಗಾಗಿ ಹರೆಯದವರು ಅನೇಕ ದುರಭ್ಯಾಸ, ದುರ್ವ್ಯಸನಗಳ ಬಲೆಗೆ ಬೀಳುತ್ತಾರೆ. ಸಿಗರೇಟು ಸೇದುವುದು ,ಗುಟ್ಕಾ  ಖೈನಿ ,ತಂಬಾಕು ಜಿಗಿಯುವುದು, ಬಿಯರ್, ಬ್ರಾಂದಿ-ವಿಸ್ಕಿಯ ಸೇವನೆ ಗಾಂಜಾ-ಅಫೀಮು ಸೇವಿಸುವುದು, ಮೊಬೈಲ್, ಟಿವಿ ಇಂಟರ್ ನೆಟ್ ಗಳ ದುರ್ಬಳಕೆ, ಅಶ್ಲೀಲ ಚಿತ್ರಗಳ ವೀಕ್ಷಣೆ, ವಿಡಿಯೋ ಗೇಮಿಂಗ್, ಬೆಟ್ಟಿಂಗ್, ಇತ್ಯಾದಿ ಚಟುವಟಿಕೆಗಳಿಗೆ ಮನಸೋಲುತ್ತಾರೆ, ಚಟವನ್ನು ಬೆಳೆಸಿಕೊಳ್ಳುತ್ತಾರೆ. ಇದರ ಬಗ್ಗೆ ಮುನ್ನೆಚ್ಚರಿಕಾ ಶಿಕ್ಷಣವನ್ನು ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲೇ ಪ್ರಾರಂಭವಾಗಬೇಕು. ಶಾಲಾ-ಕಾಲೇಜುಗಳಿಗೆ ವೈದ್ಯರನ್ನು ಕರೆಸಿ, ಉಪನ್ಯಾಸಗಳನ್ನು ಏರ್ಪಾಟು ಮಾಡಬೇಕು, ತಮ್ಮ ಮಕ್ಕಳು ಯಾರ ಸಂಗಡ ಹೆಚ್ಚು ಸೇರುತ್ತಾರೆ, ಜೊತೆ ಸೇರಿ ಏನು ಏನು ಮಾಡುತ್ತಾರೆಂದು ತಂದೆ-ತಾಯಿಗಳು ತಿಳಿಯಲು ಪ್ರಯತ್ನಿಸಬೇಕು. ಒಳ್ಳೆಯ ಮಾತಿನಲ್ಲೇ ಮಕ್ಕಳನ್ನು ಸರಿದಾರಿಗೆ ತರಲು ಮುಂದಾಗಬೇಕು.

ಅಪರಾಧ ಪ್ರವೃತ್ತಿ:

ಇತ್ತೀಚಿನ ವರ್ಷಗಳಲ್ಲಿ ಹರೆಯದವರಲ್ಲಿ, ಯುವಜನರಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಾಗುತ್ತಿರುವುದು ಆತಂಕದ ವಿಚಾರ. ಸುಳ್ಳು, ಕಳ್ಳತನ, ದರೋಡೆ, ಮೋಸ, ವಂಚನೆ, ಹಿಂಸಾಚಾರ, ಕಾನೂನು ನಿಯಮಗಳ ಪಾಲನೆ ಮಾಡದಿರುವುದು, ಅತಿ ವೇಗದಲ್ಲಿ ವಾಹನ ಚಲಾಯಿಸುವುದು, ಲೈಂಗಿಕ ಸ್ವೇಚ್ಛಾಚಾರ, ದುರ್ಬಲರ ಶೋಷಣೆ, ಸ್ತ್ರೀಯರು, ವೃದ್ಧರನ್ನು ಅವಮಾನಿಸುವುದು ಇತ್ಯಾದಿ. ಕರ್ನಾಟಕದಲ್ಲಿ ಶೇಕಡಾ 65ರಷ್ಟು ಅಪರಾಧಗಳನ್ನು ಮಾಡುವವರ ವಯಸ್ಸು 15 ರಿಂದ 29 ವರ್ಷ ಎನ್ನುವುದು ವಾಸ್ತವಿಕ ಸತ್ಯ.

ಆತ್ಮಹತ್ಯೆ ಪ್ರಯತ್ನ ಮತ್ತು ಸಾವು:

ಕ್ಷುಲಕ ಕಾರಣಗಳಿಗೆ, ಮನೆಯವರ ಮೇಲೆ ಇತರರ ಮೇಲೆ ಒತ್ತಡ ತರಲು ಆತ್ಮಹತ್ಯೆ ಪ್ರಯತ್ನ ಮಾಡುತ್ತೇನೆಂದು ಹೆದರಿಸುವುದು ಹಾಗೂ ಪ್ರಯತ್ನ ಮಾಡುವುದು ಯುವಜನರಲ್ಲಿ ಹೆಚ್ಚುತ್ತಿದೆ. ಪ್ರತಿವರ್ಷ 5 ಲಕ್ಷಕ್ಕಿಂತ ಹೆಚ್ಚಿನ ಹರೆಯದವರು/ ಯುವ ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ಬಹಳ ವಿಷಾದದ ಸಂಗತಿ. ಸೋಲು, ನಿರಾಸೆ, ಹತಾಶೆಗಳು ಕಷ್ಟಕಾರ್ಪಣ್ಯಗಳನ್ನು ಎದುರಿಸುವ ಕೌಶಲವನ್ನು  ಹರೆಯದವರಿಗೆ ಕಲಿಸಬೇಕು, ಸೋತಾಗ ಮತ್ತೆ ಗೆಲ್ಲುವ ಛಲ, ನಿರಾಶೆಯಾದಾಗ ಮತ್ತೆ ಸಕ್ರಿಯರಾಗುವ, ಗುರಿ ಮುಟ್ಟುವ, ಛಲವನ್ನುಅವರು ಕಲಿಯಬೇಕು. ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು.

ಸಾಮಾಜಿಕ ಸಂಬಂಧಗಳು:

ಸಂಬಂಧಗಳನ್ನು ಶುರುಮಾಡುವುದು, ಇರುವ ಸಂಬಂಧಗಳನ್ನು ಉಳಿಸಿ-ಬೆಳೆಸುವುದು, ಹರೆಯದವರು ಕಲಿಯ ಬೇಕಾದ ಕೌಶಲ. ಸಹಪಾಠಿಗಳು, ಸಹವಯಸ್ಕರೊಂದಿಗೆ ಸ್ನೇಹ ಸಂಬಂಧ ಬೆಳೆಸುವುದರಲ್ಲಿ ಖುಷಿ. ಆದರೆ ಸಂಬಂಧ ಒಡೆದಾಗ ತೀವ್ರ ನಿರಾಶೆಯನ್ನು ಅನುಭವಿಸುತ್ತಾರೆ, ನಂಬಿದ ಸ್ನೇಹಿತರೇ ಮೋಸ ಮಾಡಿದಾಗ ಹತಾಶರಾಗುತ್ತಾರೆ, ದುಃಖ, ಸಿಟ್ಟಿಗೆ ಒಳಗಾಗುತ್ತಾರೆ. ಕುಟುಂಬದೊಳಗೆ ತಂದೆ-ತಾಯಿ, ಸಹೋದರರೊಂದಿಗೆ, ಕುಟುಂಬದ ಇತರರೊಂದಿಗೆ, ನೆರೆಹೊರೆ, ಬಂಧುಗಳೊಂದಿಗೆ, ಸಂಬಂಧ, ಸಂಪರ್ಕ ಸಂವಹನ, ಏರು ಏರುಪೇರಾಗುವುದುಂಟು. ಭಿನ್ನಾಭಿಪ್ರಾಯಗಳು ತೀವ್ರವಾಗಿ ದ್ವೇಷದ ಮಟ್ಟವನ್ನು ಮುಟ್ಟಬಹುದು. ಇಂದು ಅನೇಕ ಕುಟುಂಬಗಳಲ್ಲಿ ತಂದೆ-ತಾಯಿ- ಒಡಹುಟ್ಟಿದವರ ಜೊತೆ ಹರೆಯದವರು ಜಗಳಕ್ಕೆ ನಿಲ್ಲುತ್ತಾರೆ, ಮುನಿಸಿಕೊಳ್ಳುತ್ತಾರೆ, ಏತಿ ಎಂದರೆ ಪ್ರೇತಿ ಎನ್ನುತ್ತಾರೆ, ಮನೆಬಿಟ್ಟು ಸ್ವತಂತ್ರವಾಗಿ ಹಾಸ್ಟೆಲಿನಲ್ಲೋ, ಪಿಜಿಯಲ್ಲೋ ಇರಲು ಬಯಸುತ್ತಾರೆ, ಬಹುತೇಕ ವಿಷಯಗಳು, ಸಂದರ್ಭಗಳಲ್ಲಿ ಘರ್ಷಣೆಗೆ ಇಳಿಯುತ್ತಾರೆ. ರಾಜಿ ಸಂಧಾನ- ಆಪ್ತ ಸಮಲೋಚನೆ ಅತ್ಯಗತ್ಯವಾಗುತ್ತದೆ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com