ಮೈತ್ರಿಯ ಮತ್ತು ಮುಂದಾಗುವುದನ್ನು ಮರೆಸಿದರೆ, ಮಸುಕು ಮಣಿಸುವುದು (ಅಂತಃಪುರದ ಸುದ್ದಿಗಳು)

ಸ್ವಾತಿ ಚಂದ್ರಶೇಖರ್ಹೇಗೆ ನೋಡಿದರು ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮ ಆಗದೆ ಇದ್ದರೆ ಮತ್ತೊಂದು.
ಆಂಧ್ರ ಸಿಎಂ ಜಗನ್ ರೆಡ್ಡಿ, ಮೋದಿ, ಚಂದ್ರಬಾಬು ನಾಯ್ಡು
ಆಂಧ್ರ ಸಿಎಂ ಜಗನ್ ರೆಡ್ಡಿ, ಮೋದಿ, ಚಂದ್ರಬಾಬು ನಾಯ್ಡು

ಹೇಗೆ ನೋಡಿದರು ದೇಶದಲ್ಲಿ ಈಗ ಮೈತ್ರಿಯದ್ದೇ ಚರ್ಚೆ. ಮೈತ್ರಿ ಆದರೆ ಒಂದು ಪರಿಣಾಮ ಆಗದೆ ಇದ್ದರೆ ಮತ್ತೊಂದು. 

ಕರ್ನಾಟಕದಲ್ಲಿ ಕಡೆಯದಾಗಿ ನಡೆದ ಮುನ್ಸಿಪಲ್ ಚುನಾವಣೆ, ಮೇಯರ್ ಆಯ್ಕೆಯ ಪ್ರಕ್ರಿಯೆಯಲ್ಲೂ ಮೈತ್ರಿಯೇ ಸಿಂಹಪಾಲು ವಹಿಸಿದೆ. ಇನ್ನು ಖುದ್ದು ಮುಖ್ಯಮಂತ್ರಿಗಳು ಈ ರಾಜಿಯಲ್ಲಿ ಇಳಿದಿದ್ದಾರೆ. ಅಷ್ಟೇ ಅಲ್ಲ ಎರಡು ದಿನಕ್ಕೆ ಒಮ್ಮೆ ಅನ್ನುವ ಹಾಗೆ ಕುಮಾರಸ್ವಾಮಿ ಅವರನ್ನು ಸಂಪರ್ಕ ಮಾಡಲು ಯತ್ನಿಸುತ್ತಿದ್ದಾರೆ, ಆದರೆ ಇತ್ತ ಮಾಜಿ ಸಿಎಂ, "ಈ ವಿಚಾರಕ್ಕೆ ಹಾಲಿ ಸಿಎಂ ಮಾತಾಡುವುದಾದರೆ ನಮಗೆ ಮೇಯರ್ ಪಟ್ಟ ಕೊಟ್ಟು ಮಾತಡಲಿ" ಅನ್ನುತ್ತಾರೆ.

ಇನ್ನು ಖರ್ಗೆ ದೇವೇಗೌಡರ ಜೊತೆ ಮಾತಾಡಿ ಇವತ್ತಿನ ಮೈತ್ರಿಯ ಮತ್ತಲ್ಲಿ ಮೈ ಮರೆಯಬೇಡಿ ಮುಂದಿನ ಮಹಾಸಂಗ್ರಾಮಕ್ಕೆ ಮುನ್ನುಡಿ ಬರೆಯಿರಿ ಅನ್ನುತ್ತಿದ್ದಾರೆ.

ಆದರೆ ಸಿಎಂ ಇವತ್ತಿನ ಮೈತ್ರಿ ಮುಂದಿನ ಭವಿಷ್ಯದ ಮೈತ್ರಿ ಮತ್ತು ಭವಿಷ್ಯದಲ್ಲಿ ಮೈತ್ರಿಯ ಬಗೆಗಿನ ತಮ್ಮ ಚಾಕಚಕ್ಯತೆ ಏನು ಎಂಬುದನ್ನು ತೋರಿಸುವ ಮೊದಲ ಮೆಟ್ಟಿಲು ಇದು ಎಂದು ಭಾವಿಸಿದಂತಿದೆ. ಸಿಎಂ ಆದ ನಂತರ ಬೊಮ್ಮಾಯಿ ಅವರಿಗೆ ಮೊದಲ ಮೈತ್ರಿ ಪರೀಕ್ಷೆ ಇದು. ಕೇವಲ ಒಂದು ಜಿಲ್ಲೆ ಮುನ್ಸಿಪಲ್ ಚುನಾವಣೆಗೆ ರಾಜ್ಯದ ಸಿಎಂ ಇಷ್ಟು ತಲೆಕೆಡಿಸಿಕೊಂಡಿದ್ದು ಇದೇ ಮೊದಲು ಎಂಬುದು ಜೆಡಿಎಸ್ ನಾಯಕರನ್ನು ಆಶ್ಚರ್ಯ ಚಕಿತಗೊಳಿಸಿದೆ.

ಇನ್ನು ಪಕ್ಕದ ಆಂಧ್ರದ ಚುನಾವಣೆಯಲ್ಲಿ ಹೀನಾಯವಾಗಿ ಮುಗ್ಗರಿಸಿದ ಟಿಡಿಪಿಗೆ ಭವಿಷ್ಯ ತೋರದಂತಾಗಿದೆ. ಚಂದ್ರಬಾಬು ನಾಯ್ಡು ನಂತರ ಯಾರು ಎಂಬ ಪ್ರಶ್ನೆ ಪಕ್ಷದಲ್ಲಿ ಕಾಡುತ್ತಿದೆ. 

ನಾಯ್ಡು ಮಗ ಪಕ್ಷವನ್ನು ಮುನ್ನಡೆಸಿಬಹುದು ಎಂಬ ಆಶಯವಿತ್ತು ಆದರೆ ರಾಜಕೀಯ ತಂತ್ರಗಾರಿಕೆಯಲ್ಲಿ ತಂದೆಯ ನೆರಳನ್ನು ತಲುಪಲು ಸಾಧ್ಯವಿಲ್ಲ. ಈತ ಹೇಗ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲ ಎಂಬುದು ಟಿಡಿಪಿ ನಾಯಕರ ಆತಂಕ ಹಾಗಾಗಿ ಸದ್ಯಕ್ಕೆ ಚಂದ್ರಬಾಬು ನಾಯ್ಡು  ಬಿಜೆಪಿಯ ಮೊರೆಹೋಗಲು ಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಅವಕಾಶವನ್ನು ಒದಗಿಸುತ್ತಿಲ್ಲ. 2016ರಿಂದ 2019ರವರೆಗೆ 

ನಾಯ್ಡು ಅವರ ವರಸೆಯನ್ನು ಬಿಜೆಪಿ ಮರೆತಂತೆ ಕಾಣುತ್ತಿಲ್ಲ  ರಾಜ್ಯಸಭಾ ಚೇರ್ಮನ್ ಆದಿಯಾಗಿ ಬಿಜೆಪಿಯ ಎಲ್ಲಾ ತೆಲಗು ಸಂಸದರ ಕದ ತಟ್ಟಿರುವ ಚಂದ್ರಬಾಬು ನಾಯ್ಡು ಹೇಗಾದರೂ ಬಿಜೆಪಿ ಜೊತೆ ಚುನಾವಣೆ ಪೂರ್ವ ಮೈತ್ರಿ ಆಗಬೇಕೆಂದು ಇಚ್ಛಿಸುತ್ತಿದ್ದಾರೆ.
 
ಇನ್ನೂ ಮೂರು ವರ್ಷ ಅವಧಿಯಿರುವ ಆಂಧ್ರಪ್ರದೇಶ ಚುನಾವಣೆಯಲ್ಲಿ ಈಗಲೇ ತಮ್ಮ ಮೈತ್ರಿ ಘೋಷಿಸಿದರೆ ಜಗನ್ ಜನಪ್ರಿಯತೆ ವಿರುದ್ಧ ವೇದಿಕೆ ಸಿದ್ಧಪಡಿಸಬಹುದು ಎಂಬುದು ನಾಯ್ಡು ಅವರ ಅಭಿಪ್ರಾಯ ಆದರೆ ಬಿಜೆಪಿ ಯಾವ ಮೈತ್ರಿಯಲ್ಲೂ ಮೈ-ಮರೆತಂತೆ ಕಾಣುತ್ತಿಲ್ಲ.

ಇತ್ತ ಜಗನ್ ಜೊತೆ ಸಂಪೂರ್ಣ ಮೈತ್ರಿಯನ್ನೂ ಘೋಷಿಸದೆ ಅತ್ತ ಜಗನ್ ನನ್ನು ಕಷ್ಟದಲ್ಲಿ ಕೈ ಹಿಡಿಯುತ್ತೇವೆ ಎಂದು ಕೇವಲ ಭರವಸೆ ನೀಡುವಲ್ಲಿ ಯಶಸ್ವಿ ಆಗಿರುವ ಬಿಜೆಪಿ, ಜಗನ್ ನ್ನು ತ್ರಿಶಂಕು ಸ್ಥಿತಿಯಲ್ಲಿಟ್ಟು, ಕಾದು ನೋಡುವ ತಂತ್ರದಲ್ಲಿ ನಾಯ್ಡುರನ್ನು ಇಟ್ಟು ಎರಡೂ ಕಡೆಯ ನಿರೀಕ್ಷೆಯನ್ನು ಗಟ್ಟಿಗೊಳಿಸುತ್ತಿದೆ. ಇದು ದಕ್ಷಿಣದ ಕಥೆಯಾದರೆ ಇನ್ನು ಉತ್ತರದ ಉತ್ತರಾಧಿಕಾರಿಯನ್ನು ಹುಡುಕುವುದೆಲ್ಲಿ, ಮೈತ್ರಿ ಮರೆಯಲ್ಲಾದರೂ ಮುಖ್ಯ ಪರದೆಯಲ್ಲಾದರೂ ಅದು ರಾಜಕೀಯ ಲಾಭಗಳನ್ನು ತಂದುಕೊಡಬೇಕು ಅತಿ ಉತ್ಸಾಹದಿಂದ ಪಂಜಾಬಿನಲ್ಲಿ ಮೈತ್ರಿ ಮಾಡಿಕೊಂಡಿರುವ ಮಾಯವತಿ ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಮರೆತಂತಿದೆ ಜೈ ಭೀಮ್ ಎಂದು ಹೊಸ ದಲಿತ ಸಂಗ್ರಾಮಕ್ಕೆ ನಾಂದಿ ಹಾಡಿದ ಮಾಯವತಿ, ಈಗ ಮತ್ತೆ ಅದೇ ಉತ್ಸಾಹದಿಂದ ಕೆಲಸ ಸಾಗಿಸಬೇಕು ಎಂಬುದು ಕಾರ್ಯಕರ್ತರ ಆಶಯ. 2012 ರಲ್ಲಿ ಬಹುಜನ ಸಮಾಜವಾದಿ ಪಕ್ಷವನ್ನು ಪೂರ್ಣ ಬಹುಮತದಿಂದ ಗೆಲ್ಲಿಸಿದ ಮಾಯವತಿ ಈಗ ಎಲ್ಲಿದ್ದಾರೆ?!!

1996-97 ರಿಂದ ಸತತ ಮೈತ್ರಿಯ ಜೊತೆ ಆಟ ಆಡುತ್ತಿರುವ ಮಾಯಾವತಿ, ಬಿಎಸ್ಪಿ ಜೊತೆ ಈ ಬಾರಿ ಮೈತ್ರಿ ಮಾಡಿಕೊಳ್ಳಲು ತಯಾರಾಗಿಲ್ಲ ಎಂಬುದು ಅಖಿಲೇಶ್ ಯಾದವ್ ಬಾಹ್ಯ ಸ್ಪಷ್ಟನೆ.

ಆದರೆ ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿ ಜಂಟಿಯಾಗಿ ಸ್ಪರ್ಧಿಸಿ 15 ಲೋಕಸಭೆ ಕ್ಷೇತ್ರಗಳಲ್ಲಿ ಬಿಎಸ್ಪಿ ಮತ್ತು ಎಸ್ಪಿ ಜಯಗಳಿಸಿತ್ತು. 80 ಕ್ಷೇತ್ರಗಳಲ್ಲಿ 15 ಗೆಲ್ಲುವುದು ಮೈತ್ರಿಯ ಸಾಮರ್ಥ್ಯವೇ ಅಂತ ಯೋಚಿಸಬಹುದು. ಆದರೆ ವಿಶೇಷ ಅನಿಸುವುದು ಶೇಕಡ 40ರಷ್ಟು ಮತಗಳನ್ನು ಒಟ್ಟಾಗಿ ಸ್ಪರ್ಧಿಸಿ ಬಿಎಸ್ಪಿ ಮತ್ತು ಎಸ್ಪಿ ಪಡೆದಿರುವುದು. 

ಮೋದಿ ವಿರುದ್ಧದ ಚುನಾವಣೆಯಲ್ಲಿ ದಲಿತ ಮುಸ್ಲಿಂ ಹಿಂದುಳಿದ ವರ್ಗಗಳ ಮತವನ್ನು ಕ್ರೋಡೀಕರಿಸುವಲ್ಲಿ ಯಶಸ್ವಿಯಾದ ಮೈತ್ರಿ ಯೋಗಿ ವಿರುದ್ಧದ ಚುನಾವಣೆಯಲ್ಲಿ ಹೊಸ ಮುಖ್ಯಮಂತ್ರಿಯನ್ನೇ ತರಬಹುದು ಎಂಬುದು ಉತ್ತರಪ್ರದೇಶ ಜನರ ಅಭಿಪ್ರಾಯ ಆದರೆ 15 ರಲ್ಲಿ 10 ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಈ ಗೆಲುವು ಮೂರೇ ತಿಂಗಳಲ್ಲಿ ಮೈತ್ರಿಯಿಂದ ಹೊರನಡೆಯುವ ಹಾಗೆ ಮಾಡಿದೆ.

ಮಾಯಾವತಿ ಹೊರ ನಡೆಯುವುದು ಒಂದು ಆದರೆ ಇನ್ನೂ ಮತ್ತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚಿಸದೆ ಇರುವುದು ತಮ್ಮ ಚುನಾವಣೆ ರಣತಂತ್ರದ ಲೆಕ್ಕಾಚಾರದಲ್ಲಿ ಎಡವಿದ್ದಾರೆ ಎಂಬ ಛಾಯೆ ತೋರಿಸುತ್ತಿದೆ. ಸದ್ಯ ಬಿಎಸ್ಪಿಯ ಹಲವು ನಾಯಕರನ್ನು ತನ್ನ ಕಡೆ ಸೆಳೆಯುತ್ತಿರುವ ಅಖಿಲೇಶ್ ಯಾದವ್ ಕೊನೆಗೆ ಬಿಎಸ್ಪಿ ಜೊತೆ ಮಾಯಾವತಿ ಬಂದರೂ ಒಪ್ಪಿಕೊಳ್ಳುವ ಹಾಗೆ ಕಾಣುತ್ತಿದೆ. ಆದರೆ ಸದ್ಯಕ್ಕೆ ಬಿಎಸ್ಪಿ ಮನಸ್ಸು ಮಾಡಬೇಕಷ್ಟೇ 

ಯೋಗಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ತಕ್ಕಮಟ್ಟಿಗೆ ಮತಗಳನ್ನಾಗಿ ಪರಿವರ್ತಿಸಿದರೂ ಇವರಿಗೆ ಚುನಾವಣೆ ರಂಗನ್ನು ಬದಲಿಸುವ ಅವಕಾಶವಿದೆ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com