ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ: ಪರಿಣಾಮ-ಪರಿಹಾರ (ಚಿತ್ತ ಮಂದಿರ)

-ಡಾ. ಸಿ.ಆರ್. ಚಂದ್ರಶೇಖರ್ಇತ್ತೀಚಿನ ವರ್ಷಗಳಲ್ಲಿ ಈ ನೆರೆಯುವಿಕೆ (PUBERTY) 10 ಅಥವಾ 11 ವರ್ಷಕ್ಕೆ ಆಗುತ್ತಿದೆ. ಈ ವಯಸ್ಸಿಗೆ ಅವರಲ್ಲಿ ಲೈಂಗಿಕ ಆಸೆ-ಬಯಕೆ ಪರಸ್ಪರ ಆಕರ್ಷಣೆ ಶುರುವಾಗುತ್ತದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕಾಮ: ಲೈಂಗಿಕ ಆಸೆ–ಮಾಡುವ ಬಯಕೆ ಮನುಷ್ಯನ ಹುಟ್ಟಾಸೆಗಳಲ್ಲಿಒಂದು. ಹಸಿವು ನಿದ್ರೆಗಿಂತ ತೀವ್ರವಾಗಿ ಅದು ನಮ್ಮನ್ನು ಆವರಿಸಿಕೊಳ್ಳುತ್ತದೆ. ಹುಡುಗ-ಹುಡುಗಿ 'ನೆರೆದಾಗ' ಲೈಂಗಿಕ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ.

ಹುಡುಗನಲ್ಲಿ ಟೆಸ್ಟೋಸ್ಟೀರಾನ್, ಹುಡುಗಿಯಲ್ಲಿಈಸ್ಟ್ರೋಜನ್ - ಪ್ರೊಜೆಸ್ಟೆರಾನ್. ಈ ಹಾರ್ಮೋನುಗಳ ಪ್ರಭಾವದಿಂದ ಹುಡುಗರಿಗೆ ಪುರುಷ ಲಕ್ಷಣಗಳು (ಗಡ್ಡ-ಮೀಸೆ ಜನನಾಂಗ ದೊಡ್ಡದಾಗುವುದು ವೀರ್ಯೋತ್ಪತ್ತಿ- ಸ್ಖಲನ), ಹುಡುಗಿಯರಲ್ಲಿ ಋತುಸ್ರಾವ ಶುರುವಾಗುತ್ತದೆ. ಸ್ತ್ರೀತನದ ದೈಹಿಕ ಲಕ್ಷಣಗಳು ಮೂಡುತ್ತವೆ. 

ಇತ್ತೀಚಿನ ವರ್ಷಗಳಲ್ಲಿ ಈ ನೆರೆಯುವಿಕೆ (PUBERTY) 10 ಅಥವಾ 11 ವರ್ಷಕ್ಕೆ ಆಗುತ್ತಿದೆ. ಈ ವಯಸ್ಸಿಗೆ ಅವರಲ್ಲಿ ಲೈಂಗಿಕ ಆಸೆ-ಬಯಕೆ ಪರಸ್ಪರ ಆಕರ್ಷಣೆ ಶುರುವಾಗುತ್ತದೆ. ಜೊತೆಗೆ ಈಗ ದೃಶ್ಯ ಮಾಧ್ಯಮಗಳಲ್ಲಿ ವಿಪುಲವಾಗಿ ಲೈಂಗಿಕ ಪ್ರಚೋದಕ ದೃಶ್ಯಗಳು ನಡವಳಿಕೆಗಳು ಪ್ರಸಾರವಾಗುತ್ತಿವೆ. ಹರೆಯದವರ ಪ್ರೀತಿ- ಪ್ರೇಮ –ಪ್ರಣಯಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಜಾಹೀರಾತುಗಳಲ್ಲಿ ಸ್ತ್ರೀ-ಪುರುಷರ ವಸ್ತ್ರವಿನ್ಯಾಸ-ಮೇಕಪ್ನಲ್ಲಿ ಲೈಂಗಿಕ ಆಕರ್ಷಣೆಗೆ  ಹೆಚ್ಚು ಒತ್ತುನೀಡಲಾಗುತ್ತದೆ. ದೇಹ ಪ್ರದರ್ಶನ ಕಾಮ ಪ್ರಚೋದನೆಯನ್ನುಂಟು ಮಾಡುವ ಮಾತು ವರ್ತನೆ ನೃತ್ಯಗಳು ಧಾರಾಳವಾಗಿ ಕಾಣಸಿಗುತ್ತವೆ. 

ಈಗ ಮೊಬೈಲ್ ನಲ್ಲಿ ಇಂಟರ್ನೆಟ್ ನಲ್ಲಿ ಧಂಡಿಯಾಗಿ ಅಶ್ಲೀಲ ಚಿತ್ರಗಳು ನೃತ್ಯಗಳು ಲೈಂಗಿಕಕ್ರಿಯೆ ನಡೆಸುವ ಚಿತ್ರಗಳು (ಬ್ಲೂಫಿಲಂ) ಲಭ್ಯವಿದೆ. ನೀವು ಒಮ್ಮೆ ಒಂದು ಚಿತ್ರ ನೋಡಿದರೆ ಸಾಕು. ಪುಂಖಾನುಸುಖವಾಗಿ ಅದೇ ರೀತಿಯ ಅಶ್ಲೀಲ ಚಿತ್ರಗಳು ನಿಮ್ಮ ಮೊಬೈಲ್  ಇಂಟ್ರೆಸ್ಟ್ ಗೆ ಬಂದು ಬೀಳುತ್ತವೆ. ಜಗತ್ತಿನಾದ್ಯಂತ 800 ಕೂ ಹೆಚ್ಚಿನ  ಪೋರ್ನೋ ಚಾನಲ್ಗಳಿವೆ. ಯಾರು ಬೇಕಾದರೂ ವೀಕ್ಷಿಸಬಹುದು. ಯಾವ ನಿರ್ಬಂಧವೂ ಇಲ್ಲ. ಹರೆಯದ ಹುಡುಗ ಹುಡುಗಿಯರಿಂದ ಹಿಡಿದು ಇಳಿವಯಸ್ಸಿನ ವೃದ್ಧರವರೆಗೆ ಪೋರ್ನ್ ನೋಡುವ ಆಸೆ,  ಚಪಲ ಎಲ್ಲೆಡೆ ಕಾಣುತ್ತಿದೆ. ಸಚಿವರಿಂದ ಹಿಡಿದು, ಎಂಎಲ್ಎ, ಎಂಪಿಗಳಿಂದ ಹಿಡಿದು, ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ  ಪೋರ್ನ್ ಆಕರ್ಷಣೆ ಕಬಂಧ ಬಾಹುವಿನಂತೆ ಚಾಚಿದೆ.

ಪಾಪಪ್ರಜ್ಞೆ

ಪೋರ್ನ್ ಅನ್ನುನೋಡಿದ ವ್ಯಕ್ತಿಗೆ ಅದೇ ಗುಂಗು. ಪುರುಷನಿಗೆ ಯಾವುದೇ ಸ್ತ್ರೀಯನ್ನು ನೋಡಲಿ, ಲೈಂಗಿಕ ಬಯಕೆ ಗರಿಗೆದರುತ್ತದೆ. ಆಕೆಯೊಡನೆ ಲೈಂಗಿಕ ಸಂಪರ್ಕ ಮಾಡಿದಂತೆ ಕಲ್ಪಿಸಿಕೊಳ್ಳುತ್ತಾನೆ. ಇಂದು ವಿಜಾಪುರದಿಂದ ಒಬ್ಬಾತ ಫೋನ್ಮಾಡಿ ಅಶ್ಲೀಲ ಚಿತ್ರನೋಡಿ ಪ್ರೇರಿತನಾಗಿ ತನ್ನ ಅಕ್ಕ ಮಲಗಿರುವಾಗ ಆಕೆಯನ್ನು ನೋಡುತ್ತಾ ಹಸ್ತಮೈಥುನ  ಮಾಡಿಕೊಂಡಿರುವುದಾಗಿ, ಆ ಬಗ್ಗೆ ತಪ್ಪಿತಸ್ಥ ಭಾವನೆಯಿಂದ ದುಃಖಿತನಾಗಿರುವುದಾಗಿ ಹೇಳಿದ. ಹಸ್ತ ಮೈಥುನ ಮಾಡಿ ತಾನು ಸುಸ್ತು ನಿಶಕ್ತಿಯಿಂದ ಬಳಲುತ್ತಿರುವುದಾಗಿ ನುಡಿದ. ಇದನ್ನು ನಿಲ್ಲಿಸುವುದು ಹೇಗೆ ಎಂದ.

ಅನೇಕ ಮಂದಿ, ಅಶ್ಲೀಲಚಿತ್ರಗಳನ್ನು ನೋಡಿ. ಲೈಂಗಿಕವಾಗಿ ಉದ್ರೇಕಗೊಂಡು. ತಮ್ಮ ಪರಿಚಿತ ವ್ಯಕ್ತಿಗಳೊಂದಿಗೆ (ಸಹೋದರಿ, ಅತ್ತಿಗೆ, ಬಂಧು, ಇತ್ಯಾದಿ) ಲೈಂಗಿಕಕ್ರಿಯೆ ಮಾಡಿದಂತೆ ಕಲ್ಪಿಸಿಕೊಳ್ಳುತ್ತಾರೆ. ಆನಂತರ ಪಾಪಪ್ರಜ್ಞೆಯಿಂದ ಬಳಲುತ್ತಾರೆ. ಕೆಲವರು ಅವಕಾಶ, ಸಂದರ್ಭ ಒದಗಿದರೆ ಪರಿಚಿತ/ ಅಪರಿಚಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕ ಮಾಡುತ್ತಾರೆ. ಈ ವಿಚಾರ ಬಹಿರಂಗಗೊಂಡರೆ, ತಮ್ಮ ಮಾನಮರ್ಯಾದೆ ಹೋಗುತ್ತದೆ ಎಂಬ ಹೆದರಿಕೆಯಲ್ಲೇ ಬದುಕುತ್ತಾರೆ.

ಅಪರಾಧಕ್ಕೆ ಪ್ರಚೋದನೆ
ಅಶ್ಲೀಲ ಚಿತ್ರ ನೋಡಿ, ಮದ್ಯಪಾನ ಮಾಡಿದ ವ್ಯಕ್ತಿ ಲೈಂಗಿಕ ಅಪಚಾರ ಅತ್ಯಾಚಾರಗಳನ್ನು ಮಾಡಲು ಮುಂದಾಗುತ್ತಾನೆ. ಸ್ತ್ರೀಯರ ಮುಂದೆ ನಗ್ನನಾಗುವುದು, ಜನನಾಂಗ ಪ್ರದರ್ಶನ ಮಾಡುವುದು ಇತ್ಯಾದಿ ಲೈಂಗಿಕ ವಿಕೃತಿಯನ್ನು ಪ್ರದರ್ಶಿಸುತ್ತಾನೆ. ಮಕ್ಕಳನ್ನು ತಮ್ಮ ಕಾಮತೃಷೆಗೆ  ಬಳಸಿಕೊಳ್ಳುವವರು ಸಾಕಷ್ಟಿದ್ದಾರೆ. ಅನೇಕ ಲೈಂಗಿಕ ಅಪರಾಧಗಳನ್ನು ಮಾಡುತ್ತಾರೆ.

ಈ ಡಿಜಿಟಲ್ ಯುಗದಲ್ಲಿ ಲೈಂಗಿಕ ಸಂದೇಶಗಳನ್ನು, ತಮ್ಮ ನಗ್ನ ಶರೀರದ ಚಿತ್ರಗಳನ್ನು ವಾಟ್ಸಾಪನಲ್ಲಿ ಪೋಸ್ಟ್  ಮಾಡುವವರಿದ್ದಾರೆ, ಪೋಸ್ಟ್ ಮಾಡಲು ಇತರರನ್ನು ಒತ್ತಾಯ ಮಾಡುತ್ತಾರೆ. ಅನಂತರ ಬ್ಲ್ಯಾಕ್ಮೇಲ್ ಗೆ ಒಳಗಾಗುತ್ತಾರೆ.

ಮದುವೆಯಾದ ಮೇಲೂ ಲೈಂಗಿಕ ಚಿತ್ರಗಳನ್ನು ನೋಡುವ ಆನಂದಿಸುವ ಗಂಡಂದಿರಿದ್ದಾರೆ. ಹೆಂಡತಿಯನ್ನು ಈ ಚಿತ್ರಗಳನ್ನು ನೋಡಲು ಬಲವಂತ ಮಾಡುತ್ತಾರೆ. ಚಿತ್ರದಲ್ಲಿ ತೋರಿಸುವ ವಿಕೃತ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಒತ್ತಾಯ ಮಾಡುತ್ತಾರೆ. ಮಾಡದಿದ್ದರೆ ತಾವು ವಿವಾಹೇತರ ಸಂಬಂಧ ಮಾಡುವುದಾಗಿ ಹೆದರಿಸುತ್ತಾರೆ.

ಕಾಮವೆಂಬುದು ಬೆಂಕಿ. ಇತಿಮಿತಿಯಲ್ಲಿದ್ದರೆ ಅದು ಜ್ಯೋತಿಯಾಗಿ ನಮಗೆ ಬೆಳಕು ನೀಡುತ್ತದೆ. ಸುಖ ಮತ್ತು ಸಂತಾನವನ್ನು ಕೊಡುತ್ತದೆ. ದಾಂಪತ್ಯ ಜೀವನ ರಸಮಯವಾಗುತ್ತದೆ. ಕಾಮ ಹೆಚ್ಚಾದರೆ ಕಾಡ್ಗಿಚಾಗಿ ವ್ಯಕ್ತಿಯನ್ನು ಮತ್ತು ಇತರರನ್ನು ಸುಟ್ಟು ಭಸ್ಮ ಮಾಡುತ್ತದೆ. ಕಾಮದ ಬಗ್ಗೆ ಶಿಸ್ತು – ಸಂಯಮ ಬಹಳ ಅಗತ್ಯ.

ಮಾನಸಿಕ ರೋಗ 
ಬಹಿರಂಗವಾಗಿ ಅಶ್ಲೀಲ ಚಿತ್ರ ವೀಕ್ಷಣೆ, ಬೇರೆಯವರನ್ನು  ನೋಡಲು ಒತ್ತಾಯ ಮಾಡುವುದು ಶಿಕ್ಷಾರ್ಹ ಅಪರಾಧ. ಆದರೆ ಮಾಧ್ಯಮಗಳು ಸ್ವಾತಂತ್ರ್ಯದ ಸೋಗಿನಲ್ಲಿ. ಅಶ್ಲೀಲ ಚಿತ್ರಗಳ, ಮಾತುಗಳ ಪ್ರಸಾರಕ್ಕೆ ಯಾವ ಅಡ್ಡಿಯೂ ಇಲ್ಲದಂತಾಗಿದೆ.

ಸರ್ಕಾರಗಳು ಅಸಹಾಯಕವಾಗಿ ಕುಳಿತಿರುವುದು ಒಂದು ದೊಡ್ಡ ದುರಂತ. ಅಶ್ಲೀಲತೆಯನೇ ಬಂಡವಾಳ ಮಾಡಿಕೊಂಡಿರುವ ಜಾಹಿರಾತು ಸಂಸ್ಥೆಗಳಿವೆ. ಎಗ್ಗಿಲ್ಲದೆ ಈ ಚಿತ್ರಗಳು  ಮಕ್ಕಳು ಹರೆಯದವರೂ ಸೇರಿದಂತೆ ಎಲ್ಲರಿಗೆ ಮೋಡಿ ಹಾಕಿ ಆಕರ್ಷಿಸುತ್ತಿವೆ.

ಪರಿಣಾಮ ಅಶ್ಲೀಲ ಚಿತ್ರವೀಕ್ಷಣೆ ಕೆಲವರಲ್ಲಿ ಚಟವಾಗಿ ಬೆಳೆಯುತ್ತಿದೆ. ಇದೊಂದು ಮಾನಸಿಕ ರೋಗ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ (PORNO ADDICTION DISORDER).

ತಿಳುವಳಿಕೆ
ಅಶ್ಲೀಲ ಚಿತ್ರಗಳನ್ನು ನೋಡದಿರಲು ಮಕ್ಕಳಿಗೆ, ಹರೆಯದವರಿಗೆ ತಿಳುವಳಿಕೆ ಹೇಳಬೇಕು. ಅವರಿಗೆ ಮೊಬೈಲ್,  ಲ್ಯಾಪ್ ಟಾಪ್ ಕೊಟ್ಟಾಗ ಇಂತಹ ಚಿತ್ರಗಳು ಬರುತ್ತವೆ, ಅವನ್ನು ಏಕೆ ನೋಡಬಾರದು. ಏನು ಅಪಾಯ ಎಂದು ತಿಳಿಸಿ ಹೇಳಬೇಕು ಪಕ್ಕದಲ್ಲೇ ಇದ್ದು ನೋಡದಂತೆ ನಿರ್ಬಂಧ ಮಾಡಬೇಕು.

ಚಟ ನಿವಾರಣೆ
ಈಗಾಗಲೇ ಚಟ ಶುರುವಾಗಿದ್ದರೆ, ನೋಡದಿರಲು ನಿರ್ಧಾರ ಮಾಡಬೇಕು. ಸಂಗೀತ ಶ್ರವಣ, ಪುಸ್ತಕ ಓದು, ಪೇಂಟಿಂಗ್, ಒಳಾಂಗಣ ಆಟಗಳು, ದೇವರ ಸ್ಮರಣೆ ಇತ್ಯಾದಿ ಚಟುವಟಿಕೆಗಳಿಂದ ಮನಸ್ಸಿನ ಗಮನವನ್ನು ಸ್ಥಳಾಂತರಿಸಬೇಕು. ರೊಮಾಂಟಿಕ್ ದೃಶ್ಯಗಳಿರುವ ಹಾಡು / ಸಿನೆಮಾ ಬಂದಾಗ ಟಿವಿ ಆಫ್ ಮಾಡಬೇಕು. ಮನೋವೈದ್ಯರ ಸಲಹೆ ಆಪ್ತಸಮಾಲೋಚನೆ ಪಡೆಯಬೇಕು.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com