ಮನೋರೋಗಗಳಿಗೆ ಮದ್ದು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ಮಾನಸಿಕ ಕಾಯಿಲೆಗಳು ಬರಲು ಮಿದುಳಿನ ನರಕೋಶಗಳಲ್ಲಿರುವ ರಾಸಾಯನಿಕ ಕಣಗಳಾದ ನರವಾಹಕಗಳ ಏರುಪೇರೇ ಕಾರಣ ಎಂದು ಅಧ್ಯಯನಗಳಿಂದ ತಿಳಿದುಬಂದ ಮೇಲೆ, ಏರುಪೇರನ್ನು ಸರಿಪಡಿಸುವ ಚಿಕಿತ್ಸಾವಿಧಾನಗಳು, ಔಷಧಿಗಳೂ ಆವಿಷ್ಕಾರಗೊಂಡದ್ದು ಇತಿಹಾಸ.
ಔಷಧಗಳು (ಸಾಂಕೇತಿಕ ಚಿತ್ರ)
ಔಷಧಗಳು (ಸಾಂಕೇತಿಕ ಚಿತ್ರ)

'ಮನೋರೋಗಕ್ಕೆ ಮದ್ದಿಲ್ಲ', ' ಹುಚ್ಚು ಗುಣವಾಗುವುದಿಲ್ಲ' ಎಂಬ ಗಾದೆಗಳನ್ನು ಜನ ಇನ್ನೂ ಮರೆತೇ ಇಲ್ಲ. ದೆವ್ವಭೂತಗಳ ಕಾಟದಿಂದಲೋ, ಮಾಟಮಂತ್ರಕೈ ಮದ್ದು, ಪೂರ್ವಜನ್ಮಗಳ ಪಾಪ ಕರ್ಮ ಫಲದಿಂದಲೋ, ದೈವ ಶಾಪದಿಂದಲೋ ಬರುವ ’ಹುಚ್ಚಿಗೆ’ ದೇವರು, ಪೂಜಾರಿಗಳು, ಮಂತ್ರವಾದಿಗಳು, ಬಾಬಾಗಳ ಬಳಿಗೆ ಹೋಗಿ ಪರಿಹಾರ ಕೇಳಬೇಕು ಎಂದೇ ಜನನಂಬಿದ್ದರು. ಈಗಲೂ ಹಾಗೆಯೇ ನಂಬುವ ಜನರಿದ್ದಾರೆ.

ಯುರೋಪ್ ದೇಶಗಳಲ್ಲಿ ಮನೋರೋಗಿಗಳನ್ನು ಕೂಡಿಹಾಕುವ ‘ಅಸೈಲಮ್’ (ಆಶ್ರಯಧಾಮಗಳು) ಗಳನ್ನು ಕಟ್ಟಿ, ಅವುಗಳಲ್ಲಿ ಹುಚ್ಚರನ್ನು ಬಂಧನದಲ್ಲಿಡುತ್ತಿದ್ದರು. ಅಪೌಷ್ಟಿಕತೆ, ಸೋಂಕು ರೋಗಗಳು, ಬಂಧನದ ಮಾನಸಿಕ ಹಿಂಸೆಗಳಿಂದ ಅನೇಕರು ಅಲ್ಲೇ ಸಾಯುತ್ತಿದ್ದರು. ಇಂತಹ ಅಸೈಲಮ್ ಗಳನ್ನು ಬ್ರಿಟಿಷರು ಭಾರತದಲ್ಲೂ ಕಟ್ಟಿದರು. ಕೊಲ್ಕತ್ತಾ, ಮುಂಬಯಿ, ಚೆನ್ನೈ, ಧಾರವಾಡ, ಅಮೃತ್ಸರ್, ಆಗ್ರ, ಬರೇಲಿ, ವಾರಣಾಸಿ, ಲಾಹೋರ್, ರಾಂಚಿ, ಮುಂತಾದ ಸ್ಥಳಗಳಲ್ಲಿ ಹುಚ್ಚಾಸ್ಪತ್ರೆಗಳು ತಲೆಯೆತ್ತಿದವು. ಹುಚ್ಚಾಸ್ಪತ್ರೆಗೆ ಸೇರಿಸಲ್ಪಟ್ಟವರು ಮತ್ತೆ ವಾಪಸ್ ಹೊರಗೆ ಬರುತ್ತಿರಲಿಲ್ಲ.

1937 ರಲ್ಲಿ ಬೆಂಗಳೂರಿನ ಮಾನಸಿಕ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯಾಗಿ ಮೈಸೂರು ಅರಸರು ರೂಪಿಸಿದರು. ಆ ಬಳಿಕ ಈ ಆಸ್ಪತ್ರೆ ನಿಮ್ಹಾನ್ಸ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡು, ಇಡೀ ದೇಶಕ್ಕೆ ಅಗ್ರಸ್ಥಾನದ ಮಾನಸಿಕ ಆರೋಗ್ಯ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯನ್ನುಂಟು ಮಾಡುವ ವಿಷಯ.

ಮನೋರೋಗಗಳಿಗೆ ಔಷಧಿ
ಮಾನಸಿಕ ಕಾಯಿಲೆಗಳು ಬರಲು ಮಿದುಳಿನ ನರಕೋಶಗಳಲ್ಲಿರುವ ರಾಸಾಯನಿಕ ಕಣಗಳಾದ ನರವಾಹಕಗಳ ಏರುಪೇರೇ ಕಾರಣ ಎಂದು ಅಧ್ಯಯನಗಳಿಂದ ತಿಳಿದುಬಂದ ಮೇಲೆ, ಏರುಪೇರನ್ನು ಸರಿಪಡಿಸುವ ಚಿಕಿತ್ಸಾವಿಧಾನಗಳು, ಔಷಧಿಗಳೂ ಆವಿಷ್ಕಾರಗೊಂಡದ್ದು ಇತಿಹಾಸ. 1939 ರಲ್ಲಿ ಜಾರಿಗೆ ಬಂದ ವಿದ್ಯುತ್ಕಂಪನ ಚಿಕಿತ್ಸೆಯನ್ನು ಪ್ರಪಂಚದಾದ್ಯಂತ ಮನೋವೈದ್ಯರು ಬಳಸುತ್ತಿದ್ದಾರೆ.

ಸಣ್ಣ ಪ್ರಮಾಣದ ವಿದ್ಯುತ್ತನ್ನು ಮಿದುಳಿನೊಳಗೆ ಹಾಯಿಸಿದರೆ ರಾಸಾಯನಿಕ ಏರು-ಪೇರು ಮತ್ತೆ ಸಮತೋಲನಕ್ಕೆ ಬರುತ್ತದೆ. ಅರಿವಳಿಕೆ ಕೊಟ್ಟು, ಕೊಡುವ ಇಸಿಟಿ ಚಿಕಿತ್ಸೆ ಅತ್ಯಂತ ಸುರಕ್ಷಿತವಾದ ಚಿಕಿತ್ಸೆ ಎಂದು ಸಾಬೀತಾಗಿದೆ.

ಮಾನಸಿಕ ಕಾಯಿಲೆಗಳಿಗೆ ಕೊಡಲು 1951 ರಲ್ಲಿ ಬಂದ  ಕ್ಲೋರ್ಪ್ರೋಮಜಿನ್  ಮೊದಲ ಔಷಧಿ. ಈ ಔಷಧ ಮಾನಸಿಕ ರೋಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಯಿತು. ಹುಚ್ಚಾಸ್ಪತ್ರೆಗಳಲ್ಲಿ ಬಂಧಿತರಾಗಿ ಕೊಳೆಯುತ್ತಿದ್ದ ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿ ಮನೆಗೆಹೋದರು. ಮಾನಸಿಕ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳು ಪ್ರಾರಂಭವಾಗಿ, ರೋಗಿಗಳನ್ನು ಮನೆಯಲ್ಲೇ  ಇರಿಸಿ ಚಿಕಿತ್ಸೆಗೊಳಪಡಿಸಲು ಸಾಧ್ಯವಾಯಿತು. ಮನೋರೋಗಗಳಿಗೆ ಮದ್ದಿದೆ ಎಂದು ವೈದ್ಯರು ಹೇಳುವಂತಾಯಿತು. ಈ 60 ವರ್ಷಗಳಲ್ಲಿ ಮನೋವೈದ್ಯ ಔಷಧಶಾಸ್ತ್ರವು ದಾಪುಗಾಲು ಹಾಕಿ ಹತ್ತಾರು ಪರಿಣಾಮಕಾರಿ ಸುರಕ್ಷಿತ ಔಷಧಗಳನ್ನು ಜಗತ್ತಿಗೆ ಕೊಟ್ಟಿದೆ. ಜನರಿಕ್ ಔಷಧಗಳು ಪ್ರಧಾನಮಂತ್ರಿ ಜನೌಷಧ ಅಂಗಡಿಗಳಲ್ಲಿ ಅತ್ಯಲ್ಪ ಬೆಲೆಗೆ ಸಿಗುತ್ತವೆ.

ಪ್ರಸಕ್ತ ಕಾಲದಲ್ಲಿ ಬಳಕೆಯಲ್ಲಿರುವ ಮನೋರೋಗಗಳ ಔಷಧಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದು.

1. ಪ್ರಧಾನ ಶಮನಕಾರಿ ಔಷಧಿಗಳು (MAJOR TRANQUILISERS)

  • ರಿಸ್ಪಿರಿಡೋನ, ಆರಿಪಿಪ್ರಜೋಲ್, ಹೆಲ್ಲೋಪೆರಿಡಾಲ, ಒಲಾಂಜೆಪಿನ್, ಫ್ಲ್ಯೂಪೆನ್ಥಿಕ್ಸಾಲ್, ಕ್ವಿಟಾಪಿನ್.

ಈ ಔಷಧಿಗಳು ತೀವ್ರ ಮಾನಸಿಕ ರೋಗಗಳಾದ ಮೇನಿಯಾ, ಸ್ಕಿಜೋಫ್ರೇನಿಯಾದಲ್ಲಿ ಬಳಸಲ್ಪಡುತ್ತವೆ. 3 ತಿಂಗಳ ಅವಧಿಯಿಂದ ಹಲವಾರು ವರ್ಷಗಳ ಕಾಲ ಸೇವಿಸಬೇಕು. ಗಂಭೀರವಾದ ಅಡ್ಡಪರಿಣಾಮಗಳಿಲ್ಲ. ಸಾಮಾನ್ಯವಾಗಿ ಸುರಕ್ಷಿತ. ವೈದ್ಯರ ಮಾರ್ಗದರ್ಶನದಲ್ಲಿ ಸೇವಿಸಬೇಕು, ಔಷಧ ಪ್ರಮಾಣವನ್ನು, ರೋಗಿ ಮತ್ತು ರೋಗ ಲಕ್ಷಣಗಳ ಮೇಲೆ ನಿರ್ಧರಿಸಲಾಗುತ್ತದೆ.

2. ಮಿತ ಶಮನಕಾರಿ ಔಷಧಿಗಳು (MINOR TRANQUILISERS)

  • ಪ್ರೊಪ್ರೆನಲಾಲ್, ಲೊರಾಜೆಪಾಂ, ನೈಟ್ರಜೆಪಾಂ, ಅಲ್ಪ್ರೊಜೊಲಂ, ಕ್ಲೋರ್  ಡೈಯಜೆಪಾಕ್ಸೈಡ್, ಡಯಾಜೆಪಾಂ.

ಮುಖ್ಯವಾಗಿ ಆತಂಕ/ಭಯನಿವಾರಣೆಗೆ, ಸುಖನಿದ್ರೆ ತರಿಸಲು ಇವು ಬಳಕೆಯಾಗುತ್ತವೆ. 4 ವಾರಗಳಿಂದ 3 ತಿಂಗಳ ಕಾಲ ಬಳಸಲ್ಪಡುತ್ತವೆ. ಕೆಲವರಲ್ಲಿ ಇವು ಅವಲಂಬನೆಯನ್ನುಂಟು ಮಾಡುವ ಸಂಭವ ಇರುತ್ತದೆ. ಇನ್ಯಾವುದೇ ಅಡ್ಡಪರಿಣಾಮಗಳಿಲ್ಲ, ವೈದ್ಯರನ್ನು ಕೇಳದೆಯೇ ಮಾತ್ರೆಗಳನ್ನು ಹೆಚ್ಚಿಸುವುದಾಗಲೀ, ಹೆಚ್ಚುಕಾಲ ತೆಗೆದುಕೊಳ್ಳುವುದಾಗಲೀ ಮಾಡಬಾರದು.

3. ಖಿನ್ನತೆ ನಿವಾರಕ ಔಷಧಿಗಳು (ANTI DEPRESSANTS)

  • ಎಸ್ಪಿಟಲೋಪ್ರಾಂ, ಸರ್ಟಾಲಿನ್, ಮಿರ್ಟಾಜಿಪಿನ್, ಡಾತಿಪಿನ್, ಇಮಿಪ್ರಮಿನ್, ಅಮಿಟ್ರಿಪ್ಪಲಿನ್, ವೆನ್ಲಾಫ್ಲಾಕ್ಸಿನ್, ಡೆಸ್ವೆನ್ಲಾಫ್ಲಾಕ್ಸಿನ್.

3 ರಿಂದ 6 ತಿಂಗಳು ಅಥವಾ 1 ವರ್ಷ ಕಾಲ ಸೇವಿಸಬೇಕು, ಗಂಭೀರ ಅಡ್ಡಪರಿಣಾಮಗಳಾವುವೂ ಇಲ್ಲ. ಅವಲಂಬನೆ ಬೆಳೆಯುವುದಿಲ್ಲ

4. ಭಾವನೆಗಳನ್ನು ನಿಯಂತ್ರಣದಲ್ಲಿಡುವ ಔಷಧಿಗಳು (MOOD STABILISERS)

  • ಲಿಥಿಯಂ, ವಾಲ್ಪ್ರೊಯೇಟ್, ಕಾರ್ಬಮಜಿಪಿನ್, ಇತ್ಯಾದಿ.

ಮನೋರೋಗದ ಔಷಧಿಗಳ ಬಗ್ಗೆ ಸಾಮಾನ್ಯ ತಿಳುವಳಿಕೆ

  • ಗಮನಿಸಿ ಮನೋರೋಗಗಳಿಗೆ ಕೊಡುವ ಔಷಧಿಗಳು ನಿದ್ರಾ ಮಾತ್ರೆಗಳಲ್ಲ, ರೋಗಿಯನ್ನು ಮಂಕಾಗಿಸಿ ನಿಷ್ಕ್ರಿಯರನ್ನಾಗಿ ಮಾಡುವುದಿಲ್ಲ.
  • ಲಿವರ್, ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುವುದಿಲ್ಲ
  • ಸಾಮಾನ್ಯವಾಗಿ ಚಟ/ ಅಭ್ಯಾಸ/ ಅವಲಂಬನೆಯನ್ನುಂಟು ಮಾಡುವುದಿಲ್ಲ.
  • ಜೀವನ ಪರ್ಯಂತ ತಿನ್ನಬೇಕಿಲ್ಲ.
  • ಗಂಭೀರವಾದ ಅಡ್ಡ ಅಥವಾ ವಿಷಮ ಪರಿಣಾಮಗಳಿಲ್ಲ.
  • ಎಂಬಿಬಿಎಸ್ ಡಿಗ್ರಿ ಪಡೆದ ಯಾವ ವೈದ್ಯರಾದರೂ ಇವನ್ನು ಬರೆದು ಕೊಡಲು ಅನುಮತಿ ಇದೆ.
  • ಪ್ರತಿಸಲ ಮಾತ್ರೆ ಕೊಂಡುಕೊಳ್ಳುವಾಗ ವೈದ್ಯರ ಹೊಸಚೀಟಿ ಬರಿಸಿಕೊಳ್ಳಿ, ಹಳೆಚೀಟಿಗೆ ಮಾತ್ರೆಗಳನ್ನು ಅಂಗಡಿಯಾತ ಮಾತ್ರೆ ಕೊಡುವಂತಿಲ್ಲ.
  • ವೈದ್ಯರು ಹೇಳಿದ ಪ್ರಮಾಣದಲ್ಲಿ, ಹೇಳಿದಷ್ಟು ಅವಧಿಕಾಲ, ಮಾತ್ರೆಗಳನ್ನು ಕ್ರಮವಾಗಿ ನಂಬಿಕೆಯಿಂದ ಸೇವಿಸಿ.
  • ನಿಮ್ಮ ಮಾತ್ರೆಗಳನ್ನು ಬೇರೆಯವರಿಗೆ ಉಪಯೋಗಿಸಲು ಕೊಡಬೇಡಿ.
  • ಮಾತ್ರೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಿ, ಇತರರ ಕೈಗೆ ಸಿಗದಂತೆ ನೋಡಿಕೊಳ್ಳಿ, ಇತರರು ದುರುಪಯೋಗ ಮಾಡಬಹುದು.
  • ಮಾತ್ರೆ ಸೇವನೆಯಿಂದ ಅಡ್ಡಪರಿಣಾಮ ಕಾಣಿಸಿಕೊಂಡಿದೆ ಎಂದಾದರೆ, ತತಕ್ಷಣ ವೈದ್ಯರನ್ನು ಸಂಪರ್ಕಿಸಿ, ನೀವೇ ಮಾತ್ರೆಯ ಪ್ರಮಾಣವನ್ನು ಬದಲಿಸಬೇಡಿ. ನಿಲ್ಲಿಸಬೇಡಿ.
  • ಮಾತ್ರೆ ಸೇವನೆ ಜೊತೆ ಆಪ್ತ ಸಮಾಲೋಚನೆಯೂ ಅಗತ್ಯ.
  • ಮಾತ್ರೆ ತಿನ್ನುವಾಗ, ಸ್ತ್ರೀ ಗರ್ಭಧಾರಣೆ ಮಾಡಬೇಕೆನಿಸಿದರೆ, ವೈದ್ಯರ ಸಲಹೆ ಕೇಳಿ, ಹಾಲುಣಿಸುವ ತಾಯಿ ಮಾತ್ರೆ ಸೇವಿಸಬಹುದು, ಮಗುವಿಗೇನೂ ತೊಂದರೆ ಇಲ್ಲ .
  • ಬೇರೆ ಕಾಯಿಲೆಗಳು ಬಂದಾಗ, ಈ ಮಾತ್ರೆಗಳನ್ನು ನಿಲ್ಲಿಸುವ ಅಗತ್ಯವಿಲ್ಲ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com