ಒಂದು ಚುನಾವಣಾ ಫಲಿತಾಂಶವನ್ನು ಮತ್ತೊಂದಕ್ಕೆ ಅನ್ವಯಿಸುವುದು ಸರಿಯೇ? (ನೇರ ನೋಟ)

- ಕೂಡ್ಲಿ ಗುರುರಾಜಒಂದು ಸಂಸ್ಧೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇದು ರಾಜ್ಯ ರಾಜಕಾರಣದ ದಿಕ್ಸೂಚಿ,  ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಮತದಾರರ ಒಲವನ್ನು ಇದು ಬಿಂಬಿಸುತ್ತದೆ ಎಂದು ಗೆದ್ದವರು ಬೀಗಿ ಹೇಳಿಕೆ ಕೊಡುವುದು ಸಾಮಾನ್ಯ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾವುದೋ ಒಂದು ಪ್ರದೇಶ ಅಥವಾ ಒಂದು ಸಂಸ್ಧೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇದು ರಾಜ್ಯ ರಾಜಕಾರಣದ ದಿಕ್ಸೂಚಿ,  ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಮತದಾರರ ಒಲವನ್ನು ಇದು ಬಿಂಬಿಸುತ್ತದೆ ಎಂದು ಗೆದ್ದವರು ಬೀಗಿ ಹೇಳಿಕೆ ಕೊಡುವುದು ಸಾಮಾನ್ಯ.

ರಾಜ್ಯದ ಮೂರು ಮಹಾನಗರ ಪಾಲಿಕೆಗಳು, ಕೆಲವು ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆಲುವನ್ನು ಭವಿಷ್ಯದ ದಿಕ್ಸೂಚಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ಲೇಷಿಸಿದ್ದಾರೆ. 

ಆದರೆ, ಒಂದು ಮಾತು ಸ್ಪಷ್ಟ. ಯಾವುದೇ ಒಂದು ಚುನಾವಣೆಯ ಫಲಿತಾಂಶ ಮುಂದೆ ನಡೆಯುವ ಮತ್ತೊಂದು ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಚುನಾವಣೆಗಳ ಫಲಿತಾಂಶದ ಇತಿಹಾಸವನ್ನು ಗಮನಿಸಿದರೆ ಇದು ಸ್ಪಷ್ಟ.

ಏಕೆ ಈ ಮಾತು ಅಂದರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದವರು ತಮ್ಮ ಪರ ತುತ್ತೂರಿ ಊದಿಕೊಂಡಾಗಿದೆ. ಇದು ಮುಂದಿನ ಅಸೆಂಬ್ಲಿ ಚುನಾವಣೆಯ ದಿಕ್ಸೂಚಿ ಎಂದು ಷರಾ ಬರೆದುಬಿಟ್ಟಿದ್ದಾರೆ. ಆದರೆ, ವಾಸ್ತವ ಅನೇಕ ಬಾರಿ ಹಾಗಿರುವುದಿಲ್ಲ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಪೇಟೆ-ಪಟ್ಟಣಗಳ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳು ಬೇರೆಬೇರೆಯವೇ. ಈ ಚುನಾವಣೆಗಳಲ್ಲಿ ಪ್ರಸ್ತಾಪವಾಗುವ ವಿಷಯಗಳೂ ಬೇರೆ ಬೇರೆ. ಮತದಾರನ ಆಯ್ಕೆಯ ಮಾನದಂಡಗಳೂ ಬೇರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಭ್ಯರ್ಥಿಗಳ ವರ್ಚಸ್ಸಿನದೇ ಪ್ರಧಾನ ಪಾತ್ರ. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ವರ್ಚಸ್ಸು, ವೈಯಕ್ತಿಕ ಸಾಮರ್ಥ್ಯ ಮುಖ್ಯವಾದರೂ ಪಕ್ಷದ ಸಂಘಟನಾ ಶಕ್ತಿ, ಪ್ರಾಬಲ್ಯ ಅತ್ಯಂತ ಮುಖ್ಯ ಎನಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನಾ ಶಕ್ತಿ, ಪ್ರಾಬಲ್ಯ, ರಾಷ್ಟ್ರೀಯ ವಿಚಾರಗಳೇ ಮುಖ್ಯ ಆಗಿರುತ್ತವೆ. ವ್ಯಕ್ತಿಗಿಂತ ಇಲ್ಲಿ ಪಕ್ಷಗಳ ಪಾತ್ರವೇ ಪ್ರಧಾನ. ಹೀಗಾಗಿ, ಯಾವುದೇ ಒಂದು ಸಂಸ್ಥೆಗೆ ನಡೆದ ಚುನಾವಣೆಯನ್ನು ಇಲ್ಲವೇ ಯಾವುದೋ ಒಂದು ಭಾಗದಲ್ಲಿ ನಡೆದ ಚುನಾವಣೆಯನ್ನು ಇಡಿಯಾಗಿ ಮತ್ತೊಂದು ಸಂಸ್ಥೆಯ ಹಾಗೂ ಇಡೀ ರಾಜ್ಯ ಅಥವಾ ದೇಶದ ವ್ಯಾಪ್ತಿಗೆ ಅನ್ವಯಿಸಿ ಇದು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಖಚಿತವಾಗಿ ಹೇಳುವುದೇ ಅವಾಸ್ತವ.

ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಅಸೆಂಬ್ಲಿ ಹಾಗೂ ಲೋಕಸಭೆಗೆ ಏಕಕಾಲಕ್ಕೆ ನಡೆದ ಚುನಾವಣೆ, ಕೆಲವು ತಿಂಗಳ ಅಂತರದಲ್ಲಿ ಲೋಕಸಭೆ ಹಾಗೂ ಅಸೆಂಬ್ಲಿಗೆ ನಡೆದ ಚುನಾವಣೆ, ಉಪ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರ ಬೇರೆ ಬೇರೆ ಪಕ್ಷಗಳ ಕೈಹಿಡಿದಿರುವ ನಿದರ್ಶನಗಳಿವೆ.

ದೇಶದಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಕಬಳಿಸಿತು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಅಸೆಂಬ್ಲಿಯನ್ನು ವಿಸರ್ಜಿಸಿ 1985ರಲ್ಲಿ ಅಸೆಂಬ್ಲಿ ಚುನಾವಣೆಗೆ ಹೊರಟಾಗ ಮತದಾರರು ನಿಚ್ಛಳ ಬಹುಮತದಿಂದ ಹೆಗಡೆ ಅವರ ನಾಯಕತ್ವವನ್ನು ಬೆಂಬಲಿಸಿ ಜನತಾಪಕ್ಷದ ಕೈ ಹಿಡಿದಿದ್ದರು.

ಅದು 2004ನೇ ಇಸವಿ. ಆಗ ಎಸ್‌ಎಂ ಕೃಷ್ಣ ಅವರು ಮುಖ್ಯಮಂತ್ರಿ. ಅವರ ಸರಕಾರಕ್ಕೆ ಇನ್ನೂ ಕೆಲವು ತಿಂಗಳ ಅಧಿಕಾರ ಅವಧಿ ಇತ್ತು. ಆದರೆ, ಅಷ್ಟರಲ್ಲಿ 2004ರ ಲೋಕಸಭಾ ಚುನಾವಣೆ ಎದುರಾಯಿತು. ಕೃಷ್ಣ ಅವರು ಅವಧಿಗೆ ಮುನ್ನ ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೊರಟರೆ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ಎದುರಾಗುತ್ತದೆ. ಆಗ ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂದು ಲೆಕ್ಕಾಚಾರ ಹಾಕಿದರು. ಹಾಗೇ 2004ರಲ್ಲಿ ಏಕಕಾಲಕ್ಕೆ ನಡೆದ ಚುನಾವಣೆಯಲ್ಲಿ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಸೋತಿತು. ಕೃಷ್ಣ ಅವರ ಲೆಕ್ಕಾಚಾರ ಕೈಕೊಟ್ಟಿತ್ತು.

ಆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಪತನಗೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಆದರೆ, ಕರ್ನಾಟಕದ ವಿಧಾನಸಭೆಯಲ್ಲಿ ಕಾಂಗ್ರೆಸ್ 65 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಲೋಕಸಭೆಗೆ 18 ಸ್ಥಾನಗಳನ್ನು ಗಳಿಸಿದರೂ ಅಸೆಂಬ್ಲಿಯಲ್ಲಿ ಪಡೆದಿದ್ದು 79 ಸೀಟುಗಳನ್ನು ಮಾತ್ರ. ಅಂದರೆ, ಲೋಕಸಭೆಗೆ ಬಿಜೆಪಿಯನ್ನು ಬೆಂಬಲಿಸಿದ್ದ ಮತದಾರ ಅಸೆಂಬ್ಲಿಗೆ ಮತ್ತೊಂದು ಪಕ್ಷವನ್ನು ಆಯ್ಕೆ ಮಾಡಿದ್ದರು. ಲೋಕಸಭೆಯಲ್ಲಿ 2 ಸ್ಥಾನ ಗೆದ್ದ ಜೆಡಿಎಸ್ ಅಸೆಂಬ್ಲಿಯಲ್ಲಿ ಗೆದ್ದಿದ್ದು 58 ಸೀಟುಗಳನ್ನು. ಕಾಂಗ್ರೆಸ್ ವಿರೋಧಿ ಮತಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಚಲಾವಣೆಯಾಗಿದ್ದರೆ ಅಸೆಂಬ್ಲಿಯಲ್ಲಿ ಜೆಡಿಎಸ್ ಪಾಲಾಗಿತ್ತು. ಹೀಗಾಗಿ, ಲೋಕಸಭೆಯಲ್ಲಿ ಕೇವಲ 2 ಸ್ಥಾನ ಗೆದ್ದ ಜೆಡಿಎಸ್ ಅಸೆಂಬ್ಲಿಯಲ್ಲಿ 58 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಂದರೆ, ಮತದಾರರು ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಯನ್ನು ಪ್ರತ್ಯೇಕವಾಗಿಯೇ ಪರಿಗಣಿಸಿದ್ದು ಕಂಡುಬಂದಿತು.

ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ. ಗುಂಡ್ಲುಪೇಟೆ ಹಾಗೂ ನಂಜನಗೂಡು (ಮೀಸಲು) ಅಸೆಂಬ್ಲಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಆಗ ಕಾಂಗ್ರೆಸ್ ಇದು ಮುಂದಿನ ಅಸೆಂಬ್ಲಿ ಚುನಾವಣೆಯ ದಿಕ್ಸೂಚಿ ಎಂದು ಬೀಗಿತು. ಆದರೆ, 2018ರ ಸಾರ್ವತ್ರಿಕ  ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದಷ್ಟೇ ಅಲ್ಲ, ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. 

ಮೂರು ತಿಂಗಳ ಹಿಂದೆ ಕೆಲವು ಕಡೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿತ್ತು. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲಿನ ಅಂತರವನ್ನು ಲಕ್ಷಗಳಿಂದ ಕೆಲವೇ ಸಾವಿರ ಮತಗಳಿಗೆ ಇಳಿಸಿಕೊಂಡಿತು. ಹಾಗಿದ್ದರೆ, ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯೇ? 

ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭಾ ಚುನಾವಣೆಗಳೇ ಬೇರೆ. ಮತದಾರರ ಮುಂದಿರುವ ಆಯ್ಕೆ ಮಾನದಂಡಗಳು ಬೇರೆ. ಕೆಲವು ರಾಜ್ಯಗಳಲ್ಲಿ ಲೋಕಸಭಾ ಹಾಗೂ ವಿಧಾನಸಭಾಗೆ ಏಕಕಾಲಕ್ಕೆ ಚುನಾವಣೆಗಳು ನಡೆದಾಗ ಕೆಲವು ಬಾರಿ ಮತದಾರರು ಒಂದೇ ಪಕ್ಷವನ್ನು ಆಯ್ಕೆ ಮಾಡಿರುವ ಉದಾಹರಣೆಗಳೂ ಇವೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com