ಸ್ಟ್ರೆಸ್ ಟೆಂಶನ್ ಕಿರಿಕಿರಿ: ಪಾರಾಗುವುದು ಹೇಗೆ? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ದೇಹದಲ್ಲಿ ಎರಡು ಹಾರ್ಮೋನುಗಳು ಅಡ್ರಿನಾಲಿನ್-ಕಾರ್ಟಿಸಾಲ್ ಗಳು ಹೆಚ್ಚಾಗಿ ಉತ್ಪತ್ತಿಯಾಗಿ ದೇಹದ ಅಂಗಾಂಗಗಳ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ.
ಒತ್ತಡ (ಸಾಂಕೇತಿಕ ಚಿತ್ರ)
ಒತ್ತಡ (ಸಾಂಕೇತಿಕ ಚಿತ್ರ)

ಸ್ಟ್ರೆಸ್ ಟೆನ್ಷನ್ ಇಲ್ಲದ ಮನೆಯಿಂದ ಸಾಸಿವೆಕಾಳು ತೆಗೆದುಕೊಂಡು ಬಾ ಎಂದು ಗೌತಮ ಬುದ್ಧ ಈಗ ಹೇಳಿದರೆ ಸಾಸಿವೆಕಾಳು ಸಿಗುವುದಿಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಸ್ತಕ ಕಾಲದಲ್ಲಿ ಟೆನ್ಷನ್ ಇದ್ದು ಅದರ ದುಷ್ಪರಿಣಾಮಗಳಿಂದ ಬಳಲುತ್ತಿದ್ದಾರೆ.

ಸ್ಟ್ರೆಸ್ ಟೆನ್ಷನ್ ಆಗುವುದು ಯಾವಾಗ?
ಯಾವುದೇ ವ್ಯಕ್ತಿಗೆ ಸನ್ನಿವೇಶವನ್ನು, ಜವಾಬ್ದಾರಿಯನ್ನು, ಕೆಲಸ-ಕರ್ತವ್ಯವನ್ನು, ಸಮಸ್ಯೆಯನ್ನು ನಿಭಾಯಿಸಲಾರೆ ಅಥವಾ ಅದು ನಮ್ಮ ಶಕ್ತಿ ಸಾಮರ್ಥ್ಯ ಸಂಪನ್ಮೂಲಕ್ಕೆ ಮೀರಿದ್ದು ಅನಿಸಿದಾಗ ಸ್ಟ್ರೆಸ್ ಟೆನ್ಷನ್ ಆಗುವುದು ಸಹಜ. ಇದು ಯಾರಿಗಾದರೂ ಆಗುವಂತಹ ಅನುಭವ. 

ಸ್ಟ್ರೆಸ್ / ಟೆನ್ಷನ್ ನ ಕೆಲವು ಸ್ಯಾಂಪಲ್ ಗಳಿವು:

  1. ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಟೆನ್ಷನ್, ಹೆಚ್ಚು ಹೆಚ್ಚು ಮಾರ್ಕ್ಸ್ ತೆಗೆಯುವ ಒತ್ತಡ.
  2. ವಿದ್ಯಾಭ್ಯಾಸ ಮುಗಿಸಿದವರಿಗೆ ಉದ್ಯೋಗ ಸಿಗುತ್ತದೆಯೋ ಇಲ್ಲವೋ ಎನ್ನುವ ಟೆನ್ಷನ್.
  3. ಉದ್ಯೋಗ ಮಾಡುವವರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿ ಪೂರೈಸಬೇಕಾದ ಟೆನ್ಷನ್, ಮೇಲಧಿಕಾರಿಗಳ ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾದ ಒತ್ತಡ. ಇಂಕ್ರಿಮೆಂಟ್ ಪ್ರಮೋಷನ್ ಸಿಗದಿರುವ ಅಥವಾ ಲೇಟಾಗಿ ಸಿಗುವ ಟೆನ್ಷನ್.
  4. ಆದಾಯ ವೆಚ್ಚವನ್ನು ಸರಿದೂಗಿಸುವ ಒತ್ತಡ. ಆದಾಯ ಕಡಿಮೆ ವೆಚ್ಚ, ಹೆಚ್ಚು. ಸಾಲ ಮಾಡಿ ಬಡ್ಡಿಕಟ್ಟುವ ಟೆನ್ಷನ್. ಅಡವಿಟ್ಟ ಒಡವೆಗಳನ್ನು ಆಸ್ತಿಯನ್ನು ಬಿಡಿಸಿಕೊಳ್ಳಲಾಗದ ಒತ್ತಡ.
  5. ಪ್ರೀತಿ ತೋರದ, ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಂಡು ಸಣ್ಣಪುಟ್ಟ ನ್ಯೂನತೆಗಳನ್ನು ಎತ್ತಿ ಹಾಡುವ ತಂದೆತಾಯಿಗಳು-ಹಿರಿಯರನ್ನು, ಸಂಗಾತಿಯನ್ನುನಿಭಾಯಿಸುವ ಒತ್ತಡ.
  6. ಥಟ್ಟನೆ ಬಂದೆರಗುವ ಅನಾರೋಗ್ಯ. ಯಾವ ವೈದ್ಯರನ್ನು ಕಾಣಬೇಕು? ಯಾವ ಚಿಕಿತ್ಸೆ ಉತ್ತಮ? ಖರ್ಚೆಷ್ಟು ಬರುತ್ತದೆ, ಕಾಯಿಲೆ ವಾಸಿಯಾಗುತ್ತದೋ ಇಲ್ಲವೋ. ಕಾಯಿಲೆಯ ನೋವು, ಅದು ಪ್ರಾಣಾಂತಕ ವಾಗಬಹುದೆಂಬ ಟೆನ್ಷನ್.
  7. ಬೆಳೆದ ಮಗ-ಮಗಳಿಗೆ ಒಳ್ಳೆಯ ವಧು/ವರನನ್ನು ಹುಡುಕುವ, ಎಲ್ಲರಿಗೆ ಮೆಚ್ಚುಗೆಯಾಗುವಂತೆ ಮದುವೆ ಸಮಾರಂಭ ನಡೆಯುತ್ತದೋ ಇಲ್ಲವೋ ಎಂಬ ಆತಂಕದಿಂದ ಉಂಟಾಗುವ ಸ್ಟ್ರೆಸ್.
  8. ಮದುವೆಯಾಗಿ ಎರಡು ಮೂರು ವರ್ಷವಾದರೂ ಮದುವೆಯಾದ ಮಗ ಮಗಳಿಗೆ ಮಗುವಾಗಿಲ್ಲ ಎಂಬ ಚಿಂತೆ.
  9. ಮಗಳು ಗರ್ಭಿಣಿಯಾಗಿದ್ದಾಳೆ. ಅವಳಿಗೆ ಸುಸೂತ್ರವಾಗಿ ಹೆರಿಗೆ ಆಗುತ್ತದೋ ಇಲ್ಲವೋ.
  10. ಮನೆ ಕಟ್ಟಲು ಪ್ರಾರಂಭಿಸಿದ್ದೇವೆ, ಯೋಜಿಸಿರುವ ಹಣ ಬಜೆಟ್ ನಲ್ಲಿ ನಿಗದಿತ ವೇಳೆಗೆ ಕಟ್ಟುವಿಕೆ ಪೂರ್ಣಗೊಳ್ಳುವುದೇ? ಕಂಟ್ರಾಕ್ಟರ್ ಒಳ್ಳೆಯ ಗುಣಮಟ್ಟದ ಕೆಲಸ ಮಾಡುವನೇ?
  11. ಮಳಿಗೆ ತೆರೆದಿದ್ದೇನೆ. ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಮಳಿಗೆ ಮುಚ್ಚಬೇಕಾಗುತ್ತದೋ ಏನೋ. ಪಾರ್ಟ್ನರ್ ಸರಿಯಾಗಿ ಸಹಕರಿಸುತ್ತಿಲ್ಲ.

ಸ್ಟ್ರೆಸ್ ಟೆಂಶನ್ ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಏನು?

ಆಗ ನಾವು ಕೈಚೆಲ್ಲಿ ಕುಳಿತರೆ ಚಿಂತೆ ವ್ಯಥೆ ಪಟ್ಟರೆ, ಆತಂಕಕ್ಕೀಡಾದರೆ, ವ್ಯಕ್ತಿ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಸ್ಟ್ರೆಸ್ ಹೆಚ್ಚಾಗುತ್ತದೆ. ದೇಹದಲ್ಲಿ ಎರಡು ಹಾರ್ಮೋನುಗಳು ಅಡ್ರಿನಾಲಿನ್-ಕಾರ್ಟಿಸಾಲ್ ಗಳು ಹೆಚ್ಚಾಗಿ ಉತ್ಪತ್ತಿಯಾಗಿ ದೇಹದ ಅಂಗಾಂಗಗಳ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ. ಸ್ಟ್ರೆಸ್ ನಿಂದ ಬರುವ ಕಾಯಿಲೆಗಳ ಪಟ್ಟಿ ದೊಡ್ಡದೇ ಇದೆ. ಡಯಾಬಿಟಿಸ್, ಬಿಪಿ ಕಾಯಿಲೆ, ಥೈರಾಯಿಡ್, ಅಲ್ಸರ್, ಅಸಿಡಿಟಿ, ಕೀಲು ಊತ-ಬಾಧೆ, ಮೈಗ್ರೇನ್, ಟೆಂಶನ್ ತಲೆನೋವು, ಲೈಂಗಿಕ ದುರ್ಬಲತೆ, ಬಂಜೆತನ, ಕ್ಯಾನ್ಸರ್ ಇತ್ಯಾದಿ.

ಸ್ಟ್ರೆಸ್ ನಿಂದ ಉಂಟಾಗುವ ಕಿರಿಕಿರಿಯನ್ನು ತಗ್ಗಿಸುವುದು ಹೇಗೆ?

  1. ಪ್ರೀತಿ-ವಿಶ್ವಾಸ ಗೌರವಗಳಿಂದ ವ್ಯಕ್ತಿಗಳನ್ನು ನಿಭಾಯಿಸಬೇಕು. ಆರೋಪ – ಪ್ರತ್ಯಾರೋಪ ಜಗಳಗಳಿಂದ ಏನು ಪ್ರಯೋಜನವಿಲ್ಲ. ಯಾರೊಂದಿಗೆ ಬದುಕಬೇಕೋ, ವ್ಯವಹರಿಸಬೇಕೋ ಅವರೊಂದಿಗೆ ಸಾಧ್ಯವಾದಷ್ಟು ಹೊಂದಿಕೊಂಡು ಹೋಗಬೇಕು.
  2. ಶಿಸ್ತು–ಸಂಯಮ, ಸರಿಯಾಗಿ ಯೋಜಿಸುವುದು, ಅಗತ್ಯ ಬಿದ್ದಾಗ ಮನೆಯವರ, ಬಂಧುಮಿತ್ರರ, ಸಹೋದ್ಯೋಗಿಗಳ ಸಲಹೆ ಸಹಕಾರವನ್ನು ಪಡೆದು ಯಾವುದೇ ಕೆಲಸ- ಕರ್ತವ್ಯ ಜವಾಬ್ದಾರಿಗಳನ್ನು ನಿಭಾಯಿಸುವುದು.
  3. ಹಣ ಸಂಪನ್ಮೂಲಗಳನ್ನು ವಿವೇಚನೆಯಿಂದ ಉಪಯೋಗಿಸುವುದು. ಇತರರನ್ನು ಮೆಚ್ಚಿಸಲು ವೆಚ್ಚ ಆಡಂಬರ-ಪ್ರತಿಷ್ಠೆ ಎಂದು ಹಣದ ದುರುಪಯೋಗ ಬೇಡ.
  4. ಅಪಾಯಕಾರಿ ದುಶ್ಚಟ ಅಭ್ಯಾಸಗಳನ್ನು ಮಾಡದಿರುವುದು.
  5. ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡುವುದು. ಅಕಸ್ಮಾತ್ ಸೋತರೆ ಮತ್ತೆ ಗೆಲ್ಲಲು ಪ್ರಯತ್ನಿಸುವುದು.
  6. ತಿಳುವಳಿಕೆ ಜ್ಞಾನವೇ ಶಕ್ತಿ, ಅಜ್ಞಾನ ಹುಸಿ ನಂಬಿಕೆಗಳೇ ನಮ್ಮ ದೌರ್ಬಲ್ಯ, ನಮ್ಮ ತಿಳುವಳಿಕೆ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು.
  7. ಕಷ್ಟಕರ ಸನ್ನಿವೇಶಗಳಲ್ಲಿ ಸವಾಲಿನ ಸಂದರ್ಭಗಳಲ್ಲಿ ನಾವು ಎಷ್ಟು ಪ್ರಶಾಂತವಾಗಿರುತೇವೋ ಅಷ್ಟು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸರಿ ನಿರ್ಧಾರ ಮಾಡುವ ಚತುರತೆ ಹೆಚ್ಚುತ್ತದೆ. ಭಾವೋದ್ವೇಗವನ್ನು ನಿಭಾಯಿಸುವುದನ್ನು ಕಲಿಯಬೇಕು. 
  8. ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ನಮ್ಮ ಇತಿಮಿತಿಯನ್ನು ತಿಳಿದುಕೊಂಡು, ಏನು ಮಾಡಲು ಏನನ್ನು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಬೇಕು. ನಮ್ಮ ಬಗ್ಗೆ ಭರವಸೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com