ಕಾಂಗ್ರೆಸ್‌ಗೆ ವಿಪಕ್ಷದ ಕೆಲಸ, ಬಿಜೆಪಿಗೆ ಆಡಳಿತದ ಕೆಲಸ ಬರಲ್ಲ: ಮಾತು ಸುಳ್ಳು ಮಾಡುವತ್ತ ಪಕ್ಷಗಳ ಚಿತ್ತ (ನೇರ ನೋಟ)

- ಕೂಡ್ಲಿ ಗುರುರಾಜಯುದ್ಧಕ್ಕೆ ಶಸ್ತ್ರಾಸ್ತ್ರ ಗಳನ್ನು ತಯಾರಿಸಿಟ್ಟುಕೊಳ್ಳುವಂತೆಯೇ ನಡೆದಿದೆ ಚುನಾವಣಾ ಸಿದ್ಧತೆಯ ಕಾರ್ಯ. ಕರ್ನಾಟಕ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದೊಂದು ಪರಿಸ್ಥಿತಿ ಗೋಚರವಾಗುತ್ತದೆ.
ಕಾಂಗ್ರೆಸ್-ಜೆಡಿಎಸ್-ಬಿಜೆಪಿ
ಕಾಂಗ್ರೆಸ್-ಜೆಡಿಎಸ್-ಬಿಜೆಪಿ

ಇದು ಚುನಾವಣಾ ಮುನ್ನದ ಸ್ಥಿತಿಯ ತಯಾರಿ. ಯುದ್ಧಕ್ಕೆ ಶಸ್ತ್ರಾಸ್ತ್ರ ಗಳನ್ನು ತಯಾರಿಸಿಟ್ಟುಕೊಳ್ಳುವಂತೆಯೇ ನಡೆದಿದೆ ಚುನಾವಣಾ ಸಿದ್ಧತೆಯ ಕಾರ್ಯ. ಕರ್ನಾಟಕ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದೊಂದು ಪರಿಸ್ಥಿತಿ ಗೋಚರವಾಗುತ್ತದೆ.

ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನದಲ್ಲಿ ಹೈಕಮಾಂಡ್ ಕೂರಿಸಿದಾಗಲೇ ಮುಂದಿನ ಚುನಾವಣೆಗೆ ಬಿಜೆಪಿ ಮುಹೂರ್ತ ಇಟ್ಟಾಗಿತ್ತು. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಆಳುವ ಪಕ್ಷದ ವಿರೋಧಿ ಮತಗಳಿಗೆ ಬ್ರೇಕ್ ಹಾಕುವುದೇ ಇದರ ಹಿಂದಿನ ಲೆಕ್ಕಾಚಾರ ಆಗಿತ್ತು. ಯಡಿಯೂರಪ್ಪ ನಾಯಕತ್ವ ಬದಲಾವಣೆ  ಮುಂದಿನ ಅಸೆಂಬ್ಲಿ ಚುನಾವಣೆಯ ತಯಾರಿಯ ಒಂದು ಭಾಗವೇ. ಅಂದರೆ, ಆಡಳಿತಾರೂಢ ಬಿಜೆಪಿ ಕೂಡ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಹೋರಾಟಕ್ಕೆ ಈಗಲೇ ಅಣಿಯಾಗುತ್ತಿರುವುದು ಸ್ಪಷ್ಟ.

ಕಾಂಗ್ರೆಸ್‌ನಲ್ಲಿ ಹೊಸಹುರುಪು:

ಇನ್ನು  ಕಾಂಗ್ರೆಸ್. ಪ್ರತಿಪಕ್ಷವಾಗಿ ಸದನದ ಒಳಗೆ ಹಾಗೂ ಹೊರಗೆ ಸರಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಹೋರಾಟಕ್ಕೆ ಇಳಿದಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಹೋರಾಟ ತಳಮಟ್ಟದಲ್ಲಿ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಿದೆ. ರಾಜ್ಯ ಸರಕಾರದ ಕೋವಿಡ್ ನಿರ್ವಹಣೆ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಿತರ ಸಂಗತಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಿರುವುದು ಜನತೆಯ ಗಮನ ಸೆಳೆದಿದೆ. ಕಾಂಗ್ರೆಸ್ ಹೋರಾಟಗಳ ಮೂಲಕ ನಿಧಾನವಾಗಿ ಜನಾಭಿಪ್ರಾಯ ರೂಪಿಸುವತ್ತ ಸಾಗಿರುವುದು ಕಂಡು ಬರುತ್ತದೆ.

ಜಾತ್ಯತೀತ ಜನತಾದಳ ಮುಂದಿನ ಅಸೆಂಬ್ಲಿ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯ ಬಿಡುಗಡೆಗೆ ಸಿದ್ದತೆ ನಡೆಸಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ಹೊಯ್ದಾಡುತ್ತಿರುವ ಈ ಪಕ್ಷ ಯಾರ ಜೊತೆ ಒಪ್ಪಂದ ಮಾಡಿಕೊಂಡರೆ ತನಗೆ ಅನುಕೂಲ ಎಂಬ ಲೆಕ್ಕಾಚಾರದಲ್ಲಿದೆ. ಜೆಡಿಎಸ್ ನ ಈ ನಡೆ ಹೊಸದೇನಲ್ಲ. ಬಿಜೆಪಿ-ಕಾಂಗ್ರೆಸ್ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ಇಲ್ಲದಿರುವುದೇ ಜೆಡಿಎಸ್‌ನ ಬಹುದೊಡ್ಡ ಸಮಸ್ಯೆಯೂ ಆಗಿದೆ.

ಅನೇಕ ಜೆಡಿಎಸ್ ಶಾಸಕರು ಬೇಲಿ ಮೇಲೆ ಕುಳಿತಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸಿದಾಗ ತೆನೆ ಇಳಿಸಿ ಸ್ಥಳೀಯವಾಗಿ ತಮ್ಮ ಕ್ಷೇತ್ರದ ರಾಜಕೀಯ ಲೆಕ್ಕಾಚಾರವನ್ನು ಪರಿಗಣಿಸಿ ಬಿಜೆಪಿ ಅಥವಾ ಕಾಂಗ್ರೆಸ್ ಕೈಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿವೆ.  ಜೆಡಿಎಸ್‌ಗೆ ಈ ಪರಿಸ್ಥಿತಿ ಏಕೆ ಬಂತು? ಎಂಬುದು ಎಲ್ಲರಿಗಿಂತ ಹೆಚ್ಚಾಗಿ ಆ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೇ ಗೊತ್ತಿದೆ.

ಕರ್ನಾಟಕದ ರಾಜಕಾರಣದಲ್ಲಿ ಒಂದು ಮಾತಿದೆ. ಕಾಂಗ್ರೆಸ್‌ಗೆ ಪ್ರತಿಪಕ್ಷವಾಗಿ ಕೆಲಸ ಮಾಡಲು ಬರೋದಿಲ್ಲ, ಬಿಜೆಪಿಗೆ ಆಡಳಿತ ನಡೆಸಲು ಬರಲ್ಲ ಅಂತ. ಈ ಎರಡೂ ಪಕ್ಷಗಳೂ ಈಗ ರಾಜ್ಯದಲ್ಲಿ ತನ್ನ ಮೇಲಿನ ಈ ದೂರನ್ನು ಸುಳ್ಳು ಮಾಡಲು ಹೊರಟಂತಿದೆ. ಸುದೀರ್ಘ ಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು ಕಡಿಮೆ. ಬಿಜೆಪಿ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಲೆಲ್ಲಾ ಒಳಜಗಳ, ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಆಗಾಗ್ಗೆ ಮುಖ್ಯಮಂತ್ರಿಗಳ ಬದಲಾವಣೆಯನ್ನು ಕಂಡಿದೆ. ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿದೆ. 

ಈ ಹಿಂದೆ 2008-13ರಲ್ಲಿ ಬಿಜೆಪಿ ಸರಕಾರವಿದ್ದಾಗ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಇದ್ದರೂ ಪ್ರತಿಪಕ್ಷವಾಗಿ ಆಕ್ರಮಣಕಾರಿಯಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ಜೆಡಿಎಸ್‌ಗೆ ಸಲ್ಲುತ್ತದೆ. ಆದರೆ, ಈ ಬಾರಿ ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ತಂತ್ರಗಳನ್ನು ಸಮರ್ಥವಾಗಿ ಹೆಣೆಯುತ್ತಿದೆ.  ಸದನದ ಒಳಗೆ ಹಾಗೂ ಹೊರಗಿನ ರಾಜಕಾರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳನ್ನು ಪಟ್ಟಿ ಮಾಡಿ ಜನತೆಯ ಮುಂದಿಟ್ಟು ಜನಾಭಿಪ್ರಾಯ ರೂಪಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ.

ಬದಲಾದ ಕಾಂಗ್ರೆಸ್ ತಂತ್ರ:

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರದ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದ ಕಾಂಗ್ರೆಸ್ ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆ, ನೆರೆ ಸಂತ್ರಸ್ತರಿಗೆ ಪರಿಹಾರ, ಕೋವಿಡ್ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ- ಹೀಗೆ ವಿವಿಧ ವಿಷಯಗಳನ್ನು ಕೈಗೆತ್ತಿಕೊಂಡು ಸರಕಾರದ ವಿರುದ್ಧ ಹೋರಾಟ ನಡೆಸಿದೆ. ನಂಜನಗೂಡು ಸಮೀಪ ದೇವಸ್ಥಾನವನ್ನು ಸ್ಥಳೀಯ ಆಡಳಿತ ಕೆಡವಿದ್ದನ್ನು ವಿರೋಧಿಸಿ ಕಾಂಗ್ರೆಸ್ ಬೀದಿಗಿಳಿದಿದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಟೀಕೆಯಿಂದ ಹೊರಬರುವ ಕಸರತ್ತಿನ ಒಂದು ಭಾಗ ಕಾಂಗ್ರೆಸ್ಸಿನ ಈ ನಡೆ ಎಂಬ ಟೀಕೆಯಲ್ಲಿ ಹುರುಳಿಲ್ಲದೇ ಇಲ್ಲ.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಅಧಿಕಾರಕ್ಕೆ ಬರುವ ಮುನ್ನವೇ ಮುಂದಿನ ಮುಖ್ಯಮಂತ್ರಿ ಕುರಿತು ಹಾದಿಬೀದಿಗಳಲ್ಲಿ ಚರ್ಚೆಯಾಗಿ ಹೈಕಮಾಂಡ್ ಮಧ್ಯೆ ಪ್ರವೇಶದಿಂದಾಗಿ ಸದ್ಯಕ್ಕೆ ತಣ್ಣಗಾಗಿದೆ. ಆದರೆ, ಈ ವಿಚಾರ ಯಾವತ್ತು ಬೇಕಾದರೂ ಭುಗಿಲೇಳಬಹುದು.

ಬಿಜೆಪಿ ಈಗ ಬಹುಮತದಿಂದ ಆಡಳಿತ ನಡೆಸುತ್ತಿದ್ದರೂ 2018ರ ಚುನಾವಣೆಯಲ್ಲಿ ಆ ಪಕ್ಷಕ್ಕೆ ಬಹುಮತ ದೊರೆತಿರಲಿಲ್ಲ. ಬಹುಮತಕ್ಕಾಗಿ ಅದು ಕೈ ಹಾಕಿದ್ದು ಆಪರೇಷನ್ ಕಮಲಕ್ಕೆ. ಅಂದರೆ, ಈವರೆಗೂ  ರಾಜ್ಯದಲ್ಲಿ ಬಿಜೆಪಿಗೆ  ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತಗಳಿಸಲು ಸಾಧ್ಯವಾಗಿಲ್ಲ.

ವೋಟಿಗಿಂತ ಸೀಟಿನಲ್ಲಿ ಅಂತರ ಹೆಚ್ಚು:

ರಾಜ್ಯ ವಿಧಾನಸಭೆಯ  2018ರ ಚುನಾವಣೆಯಲ್ಲಿ ಬಿಜೆಪಿ 104 , ಕಾಂಗ್ರೆಸ್ 78, ಜೆಡಿಎಸ್‌ಗೆ 37 ಸೀಟುಗಳು ದೊರೆತವು. (ಆಗ 222 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು). ಕಾಂಗ್ರೆಸ್  ಒಟ್ಟು 71,04,000 ಲಕ್ಷ (ಶೇ.38), ಬಿಜೆಪಿ 69.37 ಲಕ್ಷ (ಶೇ.37.2), ಜೆಡಿಎಸ್ 32.62 ಲಕ್ಷ ಮತಗಳನ್ನು (ಶೇ.17) ಸೆಳೆದಿತ್ತು.

ರಾಜ್ಯ ವಿಧಾನಸಭೆಗೆ  2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ  88.81 ಲಕ್ಷ ಮತಗಳು (ದೊರೆತ ಸೀಟುಗಳು 65) ಬಂದವು. ಬಿಜೆಪಿಗೆ ದೊರೆತಿದ್ದು 71.18 ಲಕ್ಷ ವೋಟುಗಳು (79 ಸೀಟುಗಳು), ಜೆಡಿಎಸ್‌ಗೆ 52.26 ಲಕ್ಷ ಮತಗಳು (58 ಸೀಟುಗಳು) ದೊರೆತವು.

ರಾಜ್ಯದಲ್ಲಿ 2008ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಆದರೆ, ಒಟ್ಟು ಮತಗಳನ್ನು ಪರಿಗಣಿಸಿದಾಗ ಬಿಜೆಪಿಗಿಂತ ಹೆಚ್ಚು ಪಡೆದಿತ್ತು. ಕಾಂಗ್ರೆಸ್ 89.50 ಲಕ್ಷ ವೋಟುಗಳು, ಬಿಜೆಪಿ 87.79 ಲಕ್ಷ ಮತಗಳನ್ನು (ಒಟ್ಟು ಸೀಟುಗಳು 110) ಪಡೆದಿತ್ತು. ಜೆಡಿಎಸ್ 50 ಲಕ್ಷ ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.  ಆಗ ಜೆಡಿಎಸ್ 28 ಸೀಟುಗಳನ್ನು ಪಡೆದು ಕಳೆದ ಚುನಾವಣೆಗಿಂತ 30 ಸ್ಥಾನಗಳನ್ನು ಕಡಿಮೆಗಳಿಸಿತು. .

ರಾಜ್ಯ ವಿಧಾನಸಭೆಗೆ  2013ರಲ್ಲಿ ಕಾಂಗ್ರೆಸ್ 122,  ಬಿಜೆಪಿ 40,  ಜೆಡಿಎಸ್ 40 ಸ್ಥಾನಗಳನ್ನು ಪಡೆಯಿತು. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು. ಕಾಂಗ್ರೆಸ್ ಶೇ.36.76, ಬಿಜೆಪಿ ಶೇ.20.07, ಜೆಡಿಎಸ್ ಶೇ.20.45,  ಕೆಜೆಪಿ ಶೇ.10.82 ಮತಗಳನ್ನು ಪಡೆದಿತ್ತು. ಬಿಜೆಪಿ-ಕೆಜೆಪಿ ಮಧ್ಯೆ ವೋಟುಗಳು ವಿಂಗಡಣೆಯಾಗಿದ್ದು ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ನೆರವಾಗಿತ್ತು.

ಅಂದರೆ, ಇತ್ತೀಚಿನ ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಹೆಚ್ಚು ಕಡಿಮೆ ಸರಿಸಮಾನವಾಗಿಯೇ ಮತಗಳನ್ನು ಪಡೆಯುತ್ತಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಮತಗಳಲ್ಲಿ ಹೆಚ್ಚಿನ ಅಂತರವಿಲ್ಲ. ಆದರೆ, ಸೀಟುಗಳಲ್ಲಿ ಈ ಅಂತರ ಅಧಿಕವಾಗಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com