ರಾಜಕಾರಣ ಹೀಗಾಗಲು ರಾಜಿಯೇ-ಕಾರಣ! (ಅಂತಃಪುರದ ಸುದ್ದಿಗಳು)

- ಸ್ವಾತಿ ಚಂದ್ರಶೇಖರ್ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಕಳೆದ ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ.
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ-ಆಪ್ ನಾಯಕ, ದೆಹಲಿ ಸಿಎಂ ಕೇಜ್ರಿವಾಲ್
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ-ಆಪ್ ನಾಯಕ, ದೆಹಲಿ ಸಿಎಂ ಕೇಜ್ರಿವಾಲ್

ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಸಾಲು ಸಾಲಾಗಿ ಕಳೆದ 1 ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ. 

ಹಾಗಾದರೆ ಓರ್ವ ರಾಜಕಾರಣಿಯ ಅಳಿವು ಉಳಿವು ಪಕ್ಷ ನಿಷ್ಠೆ ಮೇಲೆಯೊ? ಧರ್ಮ ನಿಷ್ಠೆ ಮೇಲೆಯೊ? ಅಥವಾ ತನ್ನ ಇಂದ್ರಿಯಗಳ ನಿಗ್ರಹದ ಮೇಲೆಯೊ? ಯಾವ ಆಧಾರದಲ್ಲಿ ರಾಜಕಾರಣಿಯ ಬದ್ಧತೆಯನ್ನು ಅಳೆಯಬೇಕು? ಬಹುಶಃ ಈ ರೀತಿಯ ಪ್ರಶ್ನೆಗಳನ್ನು ತಮ್ಮ ಆಪ್ತ ವಲಯಗಳಲ್ಲಿ ಕೇಳಿಕೊಳ್ಳುತ್ತಾ ಮುಜುಗರಕ್ಕೆ ಒಳಗಾಗಿವೆ ಇವತ್ತಿನ ರಾಜಕೀಯ ಪಕ್ಷಗಳು. ಅಚ್ಚರಿಯಾದರೂ, ಅದರಲ್ಲಿ ಅಗ್ರ ಸ್ಥಾನ ಪಡೆದಿರುವುದು ಬಿಜೆಪಿ ಎಂಬ ಶಿಸ್ತಿನ ಪಕ್ಷ!!.
 
ಸಿ.ಡಿ ಪ್ರಕರಣಗಳು ಹೊರ ಬರುತ್ತಿರುವಂತೆಲ್ಲಾ ಆರ್ ಎಸ್ಎಸ್ ಮತ್ತು ಬಿಜೆಪಿ ವಲಯದಲ್ಲಿ ಈ ಪ್ರಶ್ನೆಗಳು ಉದ್ಭವಿಸುತ್ತಿವೆ. ಹಾಗೆಯೇ ಕಳೆದ 6 ತಿಂಗಳಲ್ಲಿ ಹಾಲಿ ಸಚಿವರು ಮಾಜಿ ಸಚಿವರು ಆಗಿದ್ದಾರೆ. 
 
ಹೊರಗಿನಿಂದ ಬಂದವರು ಈ ರೀತಿ ಮಾಡುವುದನ್ನು, ಸಹಿಸಿಕೊಳ್ಳುವ ಸಮರ್ಥಿಸಿಕೊಳ್ಳುವ, ಬಿಜೆಪಿ ಆರ್ ಎಸ್ಎಸ್ ತಮ್ಮ ಸಿದ್ಧಾಂತಗಳನ್ನು ಅರಸಿ, ಹರಿಸಿ ಅದರಲ್ಲೇ ಸವೆಸಿ ಹೊರಬರುವ ಮೂಲ ನಾಯಕರ ಈ ಸಿಡಿ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬ ಇಕ್ಕಟ್ಟಿನ ಪರಿಸ್ಥಿತಿ ಕೇಸರಿ ಪಾಳಯದ್ದು. 

ಈ ಹಿಂದೆ 2019ರ ಚುನಾವಣೆ ವೇಳೆ ವೈರಲ್ ಆಗಿದ್ದ ಕರ್ನಾಟಕದ ಲೋಕಸಭೆ ಅಭ್ಯರ್ಥಿಯ ಆಡಿಯೋ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು. "ಇಂತಹ ಆಡಿಯೋ, ವಿಡಿಯೋಗಳು ಚುನಾವಣೆ ಎದುರಿಸಲು ಪಕ್ಷ, ಅಭ್ಯರ್ಥಿಯ ಘನತೆ, ಗೌರವಗಳಿಗೆ ಚ್ಯುತಿ ತರುವುದಿಲ್ಲವೇ ಎಂದಾಗ", 
"ಅದೂ ಚುನಾವಣೆಗೆ ಒಂದು ರೀತಿಯ ಪ್ರಚಾರವೇ ಎಂದು ಪತ್ರಕರ್ತರ ಬಳಿ ಹೇಳಿ ಲೇವಡಿ ಮಾಡಿದ್ದ ಕರ್ನಾಟಕದ ಮಾಜಿ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಗೆ ಹೈ ಕಮಾಂಡ್ ತರಾಟೆಗೆ ತೆಗೆದುಕೊಂಡಿತ್ತು.
 
ಈಗ ಮತ್ತೆ ಅಂತಹ ಪ್ರಕರಣಗಳು ಕರ್ನಾಟಕ ಬಿಜೆಪಿ ಮತ್ತು ತಮಿಳುನಾಡು ಬಿಜೆಪಿ ವಲಯದಲ್ಲಿ ಇತ್ತೀಚಿಗೆ ಬೆಳಕಿದೆ ಬಂದದ್ದು, ಇದು ರಾಜಕಾರಣದ ಭಾಗ ಅಲ್ಲ ಎಂದು ರಾಜಿ ಆಗಬೇಕಾ ಅಥವಾ ಇದು ರಾಜಕೀಯ ಮೌಲ್ಯಗಳಲ್ಲಿ ಒಂದು ಇದರಲ್ಲಿ ರಾಜಿಯಿಲ್ಲದ ರಾಜಕಾರಣ ತರುತ್ತೇವೆ ಎಂದು ಕರಾರು ಹೊರಡಿಸಬೇಕಾ ಎಂಬ ಪ್ರಶ್ನೆ ಸದ್ಯಕ್ಕೆ ಬಿಜೆಪಿಯನ್ನು  ಕಾಡುತ್ತಿದೆ.

ಉಡ್ತ ಪಂಜಾಬ್

ಕೊನೆಗೂ ಪಂಜಾಬ್ ನಲ್ಲಿ ಕಾಂಗ್ರೆಸ್ ಸ್ವಯಂ ಪ್ರಾಯೋಜಿತ ರಾಜಕೀಯ ಗೊಂದಲ, ಚರಣ್ ಜಿತ್ ಸಿಂಗ್ ಛನ್ನಿ ಆಯ್ಕೆಯ ಮೂಲಕ ಕೊನೆಯಾಗಿದೆ.

"ಹಮ್ ರಾಜ್ ಕೆ ಲಿಯೇ ವೋಟ್ ದೇಂಗೆ" ಹೀಗೆ ಘೋಷಣೆ ಕೇಳಿ ಬಂದಿದ್ದು 2017 ರ ಪಂಜಾಬ್ ರಾಜ್ಯ ಚುನಾವಣೆಯಲ್ಲಿ. ಕಾಂಗ್ರೆಸ್ ಪಂಜಾಬ್ ಅನ್ನು ಗೆದ್ದಿದ್ದು ಇದೇ ರಾಜ್/ಕ್ಯಾಪ್ಟನ್ ಅಮರೇಂದ್ರ ಸಿಂಗ್ ವರ್ಚಸ್ಸಿನಿಂದ. ಪಕ್ಷಕ್ಕೂ ಮೀರಿ ಬೆಳೆದು ನಿಂತ ಅಮರೇಂದ್ರ ಸಿಂಗ್, ಇದು ಅವರ ಕೊನೆ ಚುನಾವಣೆ ಎಂದೇ ಪಂಜಾಬ್ ಜನೆತೆ ಬಳಿ ವೋಟ್ ಕೇಳಿದ್ದರು. ಪಂಜಾಬ್ ಜನ ರಾಜನಿಗೆ ತಮ್ಮ ವೋಟ್ ಎಂದು ಕಾಂಗ್ರೆಸ್ ಚಿನ್ಹೆಗೆ ಮತ ಹಾಕಿದ್ದರು. ಅಂತಹ ಕ್ಯಾಪ್ಟನ್ ಅಮರೇಂದ್ರ ಸಿಂಗ್ ರನ್ನು ಸ್ವಯಂ ರಾಜೀನಾಮೆ ನೀಡುವ ಹಾಗೆ ಮಾಡುವಲ್ಲಿ ಸಿಧು ಮತ್ತು ಕಾಂಗ್ರೆಸ್ ಹೈಕಮಾಂಡ್ ಸಫಲವಾಗಿದೆ.
 
ರಾಜೀನಾಮೆ ನಂತರ ಇದು ತನಗೆ ಆದ ಅಪಮಾನ ಎಂದು ಬಹಿರಂಗ ಹೇಳಿಕೆ ನೀಡಿರುವ ಕಾಪ್ಟನ್ ಆಗಲೇ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ ಮತ್ತು ಕಮಲದ ಮೂಲಕ ತಕ್ಕ ಉತರ ಕೊಡುತ್ತಾರೆ ಎಂಬುದು ಪಂಜಾಬ್ ಮೂಲಗಳು ಹೇಳುತ್ತಿವೆ. ಆದರೆ ರೈತರು ವಿರೋಧಿಸುತ್ತಿರುವ ಬಿಲ್ ಅನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ ಎಂಬುದೇ ಕ್ಯಾಪ್ಟನ್ ಗೆ ಇರುವ ಗೊಂದಲ. 

ಅಕಾಲಿ ದಳದಲ್ಲಿ ಜಾಗ ಇಲ್ಲ, ಆಪ್ ನಲ್ಲಿ ಭವಿಷ್ಯ ಇಲ್ಲ. ಬಿಜೆಪಿ ಬಿಟ್ಟರೆ ಸದ್ಯಕ್ಕೆ ಬೇರೆ ರಸ್ತೆ ಸಿಗದೆ ತಮ್ಮದೇ ಸ್ವಂತ ಪಾರ್ಟಿ ಸೃಷ್ಟಿಸಿದರೆ ಹೇಗೆ ಎಂಬ ಕವಲು ದಾರಿಯಲ್ಲಿ ನಿಂತಿದ್ದಾರೆ ಪಂಜಾಬಿನ ಮಾಜಿ ಮುಖ್ಯಮಂತ್ರಿ.

ಗರ್ವ್ ಸೆ ಕಹೊ ಹಮ್ ದಲಿತ್ ಹೈ

ಹೀಗೆ ಕೇಳಿ ಬರ್ತಿರೋದು ಪಂಜಾಬ್ ನಲ್ಲಿ. ಸಾಮಾನ್ಯವಾಗಿ  ಪಂಜಾಬ್ ನಲ್ಲಿ ಇರುವ ಪ್ರಮುಖ ಜಾತಿ ಅಥವಾ ಧರ್ಮ ಅಥವಾ ಪಂಗಡ ಯಾವುದು ಎಂದರೆ ಅದು ಸಿಖ್ ಎನ್ನುತ್ತೇವೆ.

ಆದರೆ ಪಂಜಾಬ್ ಕಾಂಗ್ರೇಸ್ ನಲ್ಲಿ ಅಮರೇಂದ್ರ ಸಿಂಗ್ ರನ್ನು ಕೆಳಗಿಳಿಸಿದ್ದೇ ದಲಿತರನ್ನು ಮುಖ್ಯಮಂತ್ರಿ ಮಾಡಲು. ಅದು ಸಿಖ್ ದಲಿತರ ಮತವನ್ನು ತಮ್ಮತ್ತ  ಸೆಳೆಯುವ ಉದ್ದೇಶವಾಗಿತ್ತು. ಸಿಖ್ ಎಲ್ಲರನ್ನು ಸಮಾನವಾಗಿ ನೋಡುವ ಒಂದು ಧರ್ಮ ಎಂದು ಎಲ್ಲರೂ ನಂಬಿದ್ದೀರಿ ಹಾಗಾದರೆ ಈ ಸಿಖ್ ಸಮುದಾಯದಲ್ಲೂ ಉಪ ಜಾತಿ ಇದೆಯಾ...?

ಸಿಖ್ ಗುರುಗಳು, ಗ್ರಂಥಗಳು ಎಲ್ಲೂ ಉಪ ಜಾತಿಯ ಬಗ್ಗೆ ಉಲ್ಲೇಖ ಮಾಡಿಲ್ಲ, ಈ ಹಿಂದೆ ಪಂಜಾಬಿನ ರಾಜ ರಂಜಿತ್ ಸಿಂಗ್ ಕಾಲದಲ್ಲಿ ಜಾಟ್ ಸಿಖ್ ಮತ್ತು ಅದನ್ನು ಹೊರತು ಪಡಿಸಿದವರು ದಲಿತ್ ಸಿಖ್ ಎಂದು ಹೊರ ಹೊಮ್ಮಿದರು. ಜಾಟ್ ಸಿಖ್ಖರ ಅತಿಯಾದ ಓಲೈಕೆಯಿಂದ ದಲಿತ ಸಿಖ್ಖರು ಹಿಂದೆ ಉಳಿದರು. 

ಹೀಗೆ ಸಿಖ್ಖರಲ್ಲಿ ಬಂದ ಈ ಜಾತಿಯ ಅವಘಡ ಇಂದು ಶೇಖಡ 33 ರಷ್ಟು ದಲಿತ ಸಿಖ್ಖರನ್ನು ಪಂಜಾಬ್ ನಲ್ಲಿ ನೆಲೆ ನಿಲ್ಲಿಸಿದೆ.

ಪಂಜಾಬಿನ ಮೂರು ಕೋಟಿಗಿಂತ ಕೊಂಚ ಅಧಿಕ ಜನಸಂಖ್ಯೆಯಲ್ಲಿ ಒಂದು ಕೋಟಿ (ಶೇ.33% ರಷ್ಟು) ದಲಿತ ಸಿಖ್ ಸಮುದಾಯದವರಿದ್ದಾರೆ. ಅದರಲ್ಲಿ ಮಸಾಬಿ ಸಿಖ್ಖರು ಅತಿ ಹೆಚ್ಚು ಸಂಖ್ಯೆಯಲ್ಲಿ ನಂತರ ರವಿದಾಸಿಯ ಸಿಖ್ಖರು ಮತ್ತು ರಾಮದಾಸಿಯ ಸಿಖ್ಖರು.

ಈಗ ಸದ್ಯದ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ರಾಮದಾಸಿಯ ಸಿಖ್. ಈ ಒಂದು ಕೋಟಿಗೂ ಅಧಿಕ ಇರುವ ದಲಿತರ ಮತವನ್ನು ಪಡೆಯಲು ಕಾಂಗ್ರೆಸ್ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ.

ಬಿಜೆಪಿಯದ್ದು "ನಾವು ಗೆದ್ದರೆ ದಲಿತ ಮುಖ್ಯಮಂತ್ರಿ ನೀಡುತ್ತೇವೆ" ಎಂಬ ಘೋಷಣೆ, ಅಕಾಲಿ ದಳ-ಬಹುಜನ ಸಮಾಜವಾದಿ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ದಲಿತ ಉಪ ಮುಖ್ಯಮಂತ್ರಿ ನೀಡುತ್ತೇವೆ ಎಂಬುದು ಮತ್ತೊಂದು ಆಶ್ವಾಸನೆ. 

ಒಟ್ಟಿನಲ್ಲಿ ಸಿಧು ಮತ್ತು ಕ್ಯಾಪ್ಟನ್ ಇಬ್ಬರು ಜಾಟ್ ಸಿಖ್ಖರಾಗಿದ್ದರಿಂದ ಕಾಂಗ್ರೆಸ್ ಅಧ್ಯಕ್ಷ ಜಾಟ್ ಸಿಖ್ಖರಿಗೆ ಅಂದರೆ ಸಿಧುಗೆ, ಮತ್ತು ಮುಖ್ಯಮಂತ್ರಿ ಗಾದಿಯನ್ನು ದಲಿತ ಸಿಖ್ಖರಿಗೆ ನೀಡಿ ಎಂಬ ಆಗ್ರಹ ಹೆಚ್ಚಾಗಿತ್ತು. ಸದ್ಯಕ್ಕೆ "ಗರ್ವ್ ಸೆ ಕಹೊ ಹಮ್ ದಲಿತ್ ಹೈ ಎಂಬುದು ಪಂಜಾಬ್ ನಾದ್ಯಂತ ಗಟ್ಟಿಯಾಗಿ ಕೇಳಿಬರುತ್ತಿರುವ ಘೋಷಣೆ.

ಅಗ್ರಿ ರಾಜ್ಯಕ್ಕೆ ಬರಲಿದ್ದಾರೆ ಕೇಜ್ರಿ

ಇನ್ನು ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ನೀಡಿ ಚುನಾವಣೆ ಗೆಲ್ಲುವ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದರೆ, ಬಿಜೆಪಿ ಚರಣ್ ಜಿತ್ ಸಿಂಗ್ ಛನ್ನಿ ಅವರ ಹಳೆಯ ಮಿಟೂ ಕೇಸ್ ಹಿಡಿದು ಮುಖ್ಯಮಂತ್ರಿಯ ಗತಕಾಲವನ್ನು ಕೆದಕುತ್ತಿದೆ. ಈ ಹಿಂದೆ ಕ್ಯಾಪ್ಟನ್ ಕ್ಯಾಬಿನೆಟ್ ನಲ್ಲಿ ಮಂತ್ರಿ ಆಗಿದ್ದಾಗ ಪಂಜಾಬಿನ ಮಹಿಳಾ ಐಎಎಸ್ ಅಧಿಕಾರಿಗೆ ಅಶ್ಲೀಲ ಚಿತ್ರಗಳು, ಸಂದೇಶಗಳನ್ನು ಕಳುಹಿಸಿ ಸಿಕ್ಕಿ ಹಾಕಿಕೊಂಡಿದ್ದ ಚರಣ್ ಜಿತ್ ಸಿಂಗ್ ಕ್ಲೀನ್ ಚಿಟ್ ಪಡೆದರಷ್ಟೇ ಸಿಎಂ ಹುದ್ದೆಯಲ್ಲಿ ಮುಂದುವರೆಯಲಿ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಹೇಳಿಕೆ. ಮಹಿಳಾ ಆಯೋಗದ ಮೂಲಕ ಬಿಜೆಪಿ ತನ್ನ ರಾಜಕೀಯ ದಾಳ ಉರುಳಿಸುತ್ತಿದೆ. ಅಕಾಲಿ ದಳ ಬಿಜೆಪಿ ಜೊತೆಗಿನ ಮೈತ್ರಿಯ ಛಾಯೆಯಿಂದ ಇನ್ನೂ ಹೊರಬರಲು ಆಗದೆ ನಾನಾ ಪ್ರಯತ್ನಗಳನ್ನು ಮಾಡುತ್ತಿದೆ.

ಇಷ್ಟೆಲ್ಲ ರಾಜಕೀಯ ಷಡ್ಯಂತ್ರದ ನಡುವೆ ಆಮ್ ಆದ್ಮಿ ಪಕ್ಷ ಬಹುಸಂಖ್ಯಾ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆಪ್ ಬಹುಮತ ಸಂಪಾದಿಸಲು ಆಗದೆ ಅತಿ ಹೆಚ್ಚು ಸೀಟ್ ಪಡೆದಲ್ಲಿ, ಅಕಾಲಿ ದಳ ಆಪ್ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಸಿದ್ಧ ಇದ್ದಂತೆ ಕಾಣುತ್ತಿದೆ. ಹಾಗಾದಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡುತ್ತಾರೆ.

ಸದ್ಯ ಇತ್ತ ರಾಜ್ಯನೂ ಅಲ್ಲ ಅತ್ತ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವೂ ಅಲ್ಲದ ದೆಹಲಿಯನ್ನು ಬಿಟ್ಟು ಹೋದರೆ ಸಂಪೂರ್ಣ ರಾಜ್ಯವಾಗಿರುವ ಪಂಜಾಬ್ ನಲ್ಲಿ ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ತಂದು ಉತ್ತಮ ಆಡಳಿತಗಾರ ಎಂದು ಸಾಬೀತು ಪಡಿಸಬಹುದು ಎಂಬುದು ಕೇಜ್ರಿವಾಲ್ ಚಿಂತನೆ. ದೆಹಲಿಗೆ ಡಿಸಿಎಂ ಮನೀಶ್ ಸಿಸೋಡಿಯಾರನ್ನು ಮುಖ್ಯಮಂತ್ರಿ ಆಗಿ ನೇಮಿಸಿ, ದೆಹಲಿ ಹೊರಗೆ ಆಪ್ ಅನ್ನು ವಿಸ್ತರಿಸುವ ಕನಸು ನನಸು ಮಾಡಿಕೊಳ್ಳುವ ಯೋಜನೆಯಲ್ಲಿ ಕೇಜ್ರಿವಾಲ್ ಇದ್ದಂತಿದೆ. ಇದೆಲ್ಲ ನಡೆಯಲು, ಮೊದಲು ಚುನಾವಣೆ ಆಗಬೇಕು ನಂತರ ಆಪ್- ಅಕಾಲಿ ದಳದ ನಡುವೆ ಮೈತ್ರಿಯಾಗಬೇಕು!

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com