ಮೂಡುವನೆ "ರವಿ" ಮೂಡುವನೆ? ಏರುವನೆ "ಭಾಸ್ಕರ" ಏರುವನೆ.? ಬಾನೋಳು ಸಣ್ಣಗೆ ತೋರುವರೆ? (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಪಂಜೆ ಮಂಗೇಶರಾಯರ ಪದ್ಯ ಸಾಹಿತ್ಯಕ್ಕೆ ಮಾತ್ರವಲ್ಲ ರಾಜಕೀಯಕ್ಕೂ ಅಳವಡಿಸಬಹುದು ನೋಡಿ, ಅದು ಪ್ರಸ್ತುತ ಸಂದರ್ಭಕ್ಕೆ ಇದಕ್ಕಿಂತ ಹೆಚ್ಚು ಸೂಕ್ತ ಶೀರ್ಷಿಕೆ ತರಲು ಹೇಗೆ ಸಾಧ್ಯ.
ರವಿ ಚೆನ್ನಣ್ಣನವರ್-ಭಾಸ್ಕರ್ ರಾವ್
ರವಿ ಚೆನ್ನಣ್ಣನವರ್-ಭಾಸ್ಕರ್ ರಾವ್

ಪಂಜೆ ಮಂಗೇಶರಾಯರ ಪದ್ಯ ಸಾಹಿತ್ಯಕ್ಕೆ ಮಾತ್ರವಲ್ಲ ರಾಜಕೀಯಕ್ಕೂ ಅಳವಡಿಸಬಹುದು ನೋಡಿ, ಅದು ಪ್ರಸ್ತುತ ಸಂದರ್ಭಕ್ಕೆ ಇದಕ್ಕಿಂತ ಹೆಚ್ಚು ಸೂಕ್ತ ಶೀರ್ಷಿಕೆ ತರಲು ಹೇಗೆ ಸಾಧ್ಯ.

ಒಟ್ಟಿನಲ್ಲಿ ರಾಜಕೀಯದಲ್ಲಿ ಎರಡು ವಿಧ. ಹೋರಾಡಿ ಅಧಿಕಾರಕ್ಕೆ ಬರುವುದು, ಅಧಿಕಾರದಲ್ಲಿ ಇದ್ದು ಅದರಿಂದ ರಾಜಕೀಯ ಗದ್ದುಗೆ ಹಿಡಿಯುವುದು. ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಿದ ಹಲವರು ರಾಜಕೀಯಕ್ಕೆ ಬಂದದ್ದು ನೋಡಿದ್ದೇವೆ. ಸದ್ಯ ಚುನಾವಣೆಯಲ್ಲಿ ಗೆಲ್ಲದೆ ಇದ್ದರೂ ಪಕ್ಷದಲ್ಲಿ ಗೆದ್ದ ಅಣ್ಣಾಮಲೈ ಓಂದು ಕಡೆ ಆದರೆ, ಪಕ್ಷದಲ್ಲೂ ಸಲ್ಲದೆ ಚುನಾವಣೆಯಲ್ಲೂ ನಿಲ್ಲದ ಶಂಕರ್ ಬಿದರಿ ಇನ್ನೊಂದು ಕಡೆ. ಇನ್ನು ಬಿಜೆಪಿ ಯಲ್ಲಿ ಕೆ.ಸಿ ರಾಮಮೂರ್ತಿ ರಾಜ್ಯಸಭೆ ಹಿಡಿದರು ಆದರೆ ಜೆಡಿಎಸ್ ನಂಬಿ ಬಂದ ಲಕ್ಷ್ಮಿ ಅಶವಿನ್ ಗೌಡ ರವರಿಗೆ ಇತ್ತ ಕೆಲಸವು ಇಲ್ಲ, ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಲೋಕಸಭೆ ಟಿಕೆಟ್ ಕೂಡ ಇಲ್ಲ, ದಿಕ್ಕು ತೋಚದೆ ಈಗಲೂ ತ್ರಿಶಂಕುವಿನಲ್ಲಿ ಇದ್ದಾರೆ.

ಅಧಿಕಾರಿಯಾಗಿ ಒಳ್ಳೆ ಹೆಸರು ಪಡೆದ ನಂತರ ರಾಜಕೀಯ ಕದ ತಟ್ಟುವುದು ಹೊಸತಲ್ಲ, ಈಗ ಅದರ ಸಾಲಿಗೆ ಸೇರಲು ಸಜ್ಜಾಗಿರುವುದು ಎಡಿಜಿಪಿ ಭಾಸ್ಕರ್ ರಾವ್ ಬೆಂಗಳೂರು ಆಯುಕ್ತರಾಗಿ ಉತ್ತಮ ಹೆಸರು ಗಳಿಸಿದ ನಂತರ ರೈಲ್ವೆಸ್ ಗೆ ವರ್ಗಾವಣೆಗೊಂಡು, ತಮ್ಮ ಒಲವನ್ನು ಖಾಕಿ ಇಂದ ಕಳಚಿದ್ದಾರೆ. ಫೋನ್ ಕದ್ದಾಲಿಕೆ ಕೇಸ್ ಅನ್ನು ಸರ್ಕಾರ ಮುಚ್ಚಿ ಹಾಕುತ್ತಿದೆ ಎಂಬುದು ಇವರ ಬೇಸರಕ್ಕೆ ಕಾರಣ.

ಸ್ವಯಂ ನಿವೃತ್ತಿ ಘೋಷಿಸಿದ ಭಾಸ್ಕರ್ ರಾವ್ ಮುಂದೆ ರಾಜಕೀಯಕ್ಕೆ ಬರುತ್ತಾರೆ ಎಂಬ ಗುಮಾನಿ ಇದೆ, ಆದರೆ ಯಾವ ಪಕ್ಷ ಎಂಬ ಕುತೂಹಲ ಇದ್ದೆ ಇದೆ. 2019 ರಲ್ಲಿ ಬೆಂಗಳೂರು ದಕ್ಷಿಣ ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಚುನಾವಣೆಗೆ ನಿಲ್ಲಲು ಸಿದ್ಧರಾಗಿದ್ದರು, ದೆಹಲಿಗೆ ದಂಡಯಾತ್ರೆಯೂ ನಡೆಸಿದ್ದರು ಆದರೆ ಸ್ವಯಂ ನಿವೃತ್ತಿ ಸಿಗಲಿಲ್ಲ. ಈ ಬಾರಿ ನಿವೃತ್ತಿ ಸಿಕ್ಕೇ ಬಿಡುತ್ತೆ ಎಂಬ ಭರವಸೆ ಅವರಿಗೂ ಇದ್ದಂತಿದೆ, ಅವರು ಕಾಂಗ್ರೆಸ್ ನ ಬಸವನಗುಡಿಯ ಅಭ್ಯರ್ಥಿ ಆಗೇ ಬಿಡುತ್ತಾರೆ ಎಂಬ ನಂಬಿಕೆ ಕಾಂಗ್ರೆಸ್ ಗು ಇದ್ದಂತಿದೆ, ಆದರೆ ಸದ್ಯ ಕೇಶವ ಕೃಪದಲ್ಲಿ ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಆರ್ ಎಸ್ ಎಸ್ ಕಛೇರಿ ಗೆ ಆಗಾಗ ಭೇಟಿ ನೀಡುತ್ತಿದ್ದ ಇವರು ಕಾಂಗ್ರೆಸ್ ಸೇರುವರೆ ಎಂಬ ಯಕ್ಷ ಪ್ರಶ್ನೆ ಸಂಘದಲ್ಲಿ ಕಾಡುತ್ತಿದೆ.

ಇನ್ನು ಇದರ ಜೊತೆ ಕರ್ನಾಟಕದ ಮತ್ತೋರ್ವ ಪೊಲೀಸ್ ಅಧಿಕಾರಿ ರಾಜಕೀಯದತ್ತ ಮುಖ ಮಾಡಿರಬಹುದು ಎಂಬ ಗುಮಾನಿ ಇದೆ, ಸದ್ಯ ಯುವಕರ ಐಕಾನ್ ಅನ್ನಿಸಿಕೊಂಡಿರುವ ರವಿ ಚಣ್ಣನವರ್ ಹಿಂದುಳಿದ ವರ್ಗಗಳ ಆಯೋಗದ ಬೋರ್ಡ ಚೇರ್ಮನ್ ಗೆ ಯತ್ನಿಸುತ್ತಿದ್ದಾರೆ ಎಂಬ ಶಂಕೆ ಒಂದು ಕಡೆ, ದೆಹಲಿಯಲ್ಲಿ ಬಿ ಎಲ್ ಎಸ್ ರವರನ್ನು ಭೇಟಿ ಮಾಡಿದ್ದಾರೆ ಎಂಬುದು ಇನ್ನೊಂದು ಕಥೆ.

ಅತ್ತ ಬಿಜೆಪಿ ತಪ್ಪಿದರೆ ಕಾಂಗ್ರೆಸ್ ನಿಂದ ಯಾಕೆ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಎರಡು ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಅನ್ನುವುದು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಚರ್ಚೆ. ಒಟ್ಟಿನಲ್ಲಿ ಅಧಿಕಾರದ ಅಡಿಪಾಯದಿಂದ ಉನ್ನತ ಅಧಿಕಾರದ ಮಹಲನ್ನು ಕಟ್ಟುವ ಕನಸು ಯಾವ ಕಾಲಕ್ಕೂ ಬತ್ತುವಂತೆ ಕಾಣುವುದಿಲ್ಲ

ವಿಕಟ ಕವಿಯನ್ನು ಉಳಿಸಿಕೊಳ್ಳುತ್ತಾ ರಾಜನನ್ನೇ ಕಳೆದುಕೊಂಡರ? 

ಸದ್ಯಕ್ಕೆ ಕಾಂಗ್ರೆಸ್ ನ ಪರಿಸ್ಥಿತಿ ಹೀಗೆ ಆಗಿದೆ. ಪಂಜಾಬ್ ನಲ್ಲಿ ಸಿಧು ಉಳಿಸಿಕೊಳ್ಳುತ್ತೇವೆ ಎಂದು ಕ್ಯಾಪ್ಟನ್ ನ ಕಳೆದು ಕೊಂಡರು. ಇನ್ನು 72 ದಿನಗಳ ಹಿಂದೆ ಪಂಜಾಬ್  ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆದ ಸಿಧು ಈಗ ರಾಜಿನಾಮೆ ನೀಡಿದ್ದಾರೆ. ಅದು ಅವರು ಹೇಳಿದ ವ್ಯಕ್ತಿ ಮುಖ್ಯಮಂತ್ರಿ ಆದ ನಂತರವೂ, ಅಷ್ಟೇ ಯಾಕೆ ಪಕ್ಷಕ್ಕೂ ಮೀರಿ ಬೆಳೆದಿದ್ದ ಜನಸ್ನೇಹಿ ಕ್ಯಾಪ್ಟನ್ ಅನ್ನು ಕೆಳಗೆ ಇಳುಸುವಲ್ಲಿ ಯಶಸ್ವಿ ಆದ ನಂತರವೂ. ಸಿಧುವಿನ ಈ ವರ್ತನೆ ಕಾಂಗ್ರೆಸ್ ಗೂ ಆಘಾತ ನೀಡಿದೆ. ಇನ್ನು ಕೇವಲ 4 ತಿಂಗಳಲ್ಲಿ ಚುನಾವಣೆ ಎದುರಿಸುವ ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ನ ಈ ಹಾವು ಎಣಿ ಆಟ ಭಾರೀ ಬೆಲೆ ತರುವಂತಿದೆ. ಅಷ್ಟಕ್ಕೂ ತನ್ನ ಎಲ್ಲಾ ಷರತ್ತುಗಳು ಪೂರೈಕೆ ಆದರೂ ಸಿಧುವಿನ ಈ ನಿರ್ಧಾರಕ್ಕೆ ಕಾರಣ ಚಂಚಲತೆ ಎಂಬ ಮಾತು ಕೇಳಿಬರುತ್ತಿದೆ. ಈ ಹಿಂದೆ ಕ್ರಿಕೆಟ್ ಪಂದ್ಯದಲ್ಲಿ ಹೀಗೆಯೇ ತಂಡ ಕೈಬಿಟ್ಟು ಹೋಗಿದ್ದರು ಆದರೆ ಆಗ ಆಡಲು ಆಟಗಾರರಿದ್ದರು ಈಗ ಆಟಗಾರರು ಇಲ್ಲ ಆಟದ ರೀತಿ ರಿವಾಜು ತಿಳಿದಂತೆ ಕಾಣುತ್ತಿಲ್ಲ, ತನಗೆ ಬೇಕಾದವರನ್ನು ಸಂಪುಟದಲ್ಲಿ ಆಯ್ಕೆ ಮಾಡಲಿಲ್ಲ ಎಂದು ರಾಜೀನಾಮೆ ನೀಡಿರುವ ಸಿಧು ಈ ವಿಚಾರಗಳನ್ನು ಹೈ ಕಮಾಂಡ್ ನ ಯಾವ ನಾಯಕರ ಬಳಿಯೂ ಸಣ್ಣ ಅಸಮಾಧಾನವನ್ನು ವ್ಯಕ್ತ ಪಡಿಸದೆ ಅಧಿಕಾರ ತೊರೆದಿರುವುದು ಸಾಕಸ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಸರ್ವ ಯಶಸ್ಸಿಗೂ ಹೆಗ್ಗಳಿಕೆ ಪಡೆದ ಮೇಲೆ, ಸೋಲಿಗೂ ಹೊಣೆಗಾರಿಕೆ ಬೇಕಲ್ಲವೆ

ಈ ಹಿಂದೆ ಭ್ರಷ್ಟಾಚಾರದ ಆರೋಪದ ಅಡಿ ರಾಜಿನಾಮೆ ನೀಡಿದ್ದ.. ಅಲ್ಲ ಕ್ಯಾಪ್ಟನ್ ಒತ್ತಾಯ  ಮಾಡಿ ರಾಜೀನಾಮೆ ಪಡೆದಿದ್ದ ರಾಣಾ ಗುರ್ಜಿತ್ ಸಿಂಗ್ ರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದು ಛನ್ನಿ ವಿರುದ್ಧ ಹರಿಹಾಯಲು ಸಿಧುಗೆ ದೊಡ್ಡ ಅಸ್ತ್ರವಾದಂತಿದೆ.

ಅಷ್ಟೇ ಅಲ್ಲ 14 ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಳಲ್ಲೂ ಕಾರಣ ಏನು ಎಂಬುದು ಸಿಧು ಗೊಂದಲಕ್ಕೆ ಕಾರಣ. 
ಆದರೆ ಈ ಕಾರಣಗಳಿಂದ ರಾಜೀನಾಮೆ ನೀಡಲು ಸಾಧ್ಯವೇ, ಸಿಧು ಮಾತು ಕೇಳಿ ಅಮರೇಂದ್ರ ಸಿಂಗ್ ವರ್ಚಸ್ಸನ್ನು ಮರೆತು ಅವಮಾನ ಮಾಡಿದ ಹರೀಶ್ ರಾವತ್ ಈಗ ಎಲ್ಲಿದ್ದಾರೆ. ಈ ನಿರ್ಧಾರಕ್ಕೆ ಬರುವ ಮುನ್ನ ರಾಹುಲ್ ಗಾಂಧಿಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದರು ಆದರೆ ಅದು ವಿಫಲ ವಾಗಿದೆ ಎಂಬುದು ಸಿಧು ಆಪ್ತರ ಗುಸುಗುಸು. ಹಾಗಾದಲ್ಲಿ ಕ್ಯಾಪ್ಟನ್ ನಂತರ ಸಿಧುವನ್ನು ಮೂಲೆ ಗುಂಪು ಮಾಡಲು ಹೈ ಕಮಾಂಡ್ ಯತ್ನಿಸಿದಂತಿದೆ.

ಈ ಗಾಳಿ ಸುದ್ದಿ ನಿಜವಾದಲ್ಲಿ ತನ್ನ ಅಂಗಯ್ಯಲ್ಲಿ ಇರುವ ಚಂದಿರನನ್ನು ಬಿಟ್ಟು ಕೆಳಗೆ ಬೀಳುವ ನಕ್ಷತ್ರಕ್ಕೆ ದುರಬೀನು ಹಾಕಿದಂತೆ ಆಗುವುದು ಕಾಂಗ್ರೆಸ್ ಪರಿಸ್ಥಿತಿ. ಸಿಧುವನ್ನು ಮೂಲೆ ಗುಂಪು ಮಾಡುತ್ತೇವೆ ಎನ್ನುವ ನಿರ್ಧಾರದಲ್ಲಿ  ಕಾಂಗ್ರೇಸ್ ಇದ್ದಲ್ಲಿ, ಕ್ಯಾಪ್ಟನ್ ಅನ್ನು ಆದರೂ ಚುನಾವಣೆ ತನಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟು ಉಳಿಸಿಕೊಳ್ಳಬಹುದಿತ್ತಲ್ಲ ಎಂಬುದು ಪಂಜಾಬ್ ಕಾಂಗ್ರೆಸ್ ನಾಯಕರ ಆಕ್ರೋಶ. ಒಟ್ಟಿನಲ್ಲಿ ಈ ಸ್ವಯಂ ನಿರ್ಮಿತ ಗೊಂದಲಕ್ಕೆ ಕಾಲವೇ ಉತ್ತರ ನೀಡಬೇಕಿದೆ

ಕಮಲಕ್ಕೆ ಕೈ ಚಾಚಿದ ಕ್ಯಾಪ್ಟನ್:

ಸದ್ಯಕ್ಕೆ ಕ್ಯಾಪ್ಟನ್ ಮುಂದೆ ಇರುವ ಏಕೈಕ ದಾರಿ ಬಿಜೆಪಿ. ದೆಹಲಿಯ ಕಪೂರ್ತಲದಲ್ಲಿ ಇರುವ ನಿವಾಸವನ್ನು ಖಾಲಿ ಮಾಡಲು ಬಂದಿರುವೆ ಎನ್ನುತ್ತಿರುವ ಕ್ಯಾಪ್ಟನ್ ನಡ್ಡಾ ಅಮಿತ್ ಶಾ ರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಸದ್ಯಕ್ಕೆ ಕ್ಯಾಪ್ಟನ್ ಮೇಲಿರುವ ಸಿಂಪತಿಯನ್ನ ಬಿಜೆಪಿ ಬಿಟ್ಟು ಕೊಡಲು ಇಚ್ಛಿಸುವುದಿಲ್ಲ. ರೈತರ ಕಾಯ್ದೆಯಿಂದ ಪಂಜಾಬಿನ ಒಲವು ಕಳೆದುಕೊಂಡಿದ್ದ ಬಿಜೆಪಿಗೆ ಮರುಭೂಮಿಯಲ್ಲಿ ನೀರು ಸಿಕ್ಕಂತೆ ಆಗಿದೆ.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com