ಡೆಟ್ ಬಾಂಡ್ ಗಳ ಮೇಲೆ ಹೂಡಿಕೆ ಮಾಡಬಹುದೇ? (ಹಣಕ್ಲಾಸು)

ಹಣಕ್ಲಾಸು-303

-ರಂಗಸ್ವಾಮಿ ಮೂಕನಹಳ್ಳಿ

Published: 07th April 2022 10:00 AM  |   Last Updated: 07th April 2022 01:47 PM   |  A+A-


Debt Bonds

ಡೆಟ್ ಬಾಂಡ್ (ಸಾಂಕೇತಿಕ ಚಿತ್ರ)

ಸಾಮಾನ್ಯ ಜನರ ಬಾಯಿಯಲ್ಲಿ ಬಾಂಡ್ ಎನ್ನಿಸಿಕೊಂಡಿರುವ ಬಾಂಡ್ಗಳನ್ನ ಡೆಟ್ ಬಾಂಡ್ಗಳು ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಇದೊಂದು ಸಾಲ ಪತ್ರ. ಸಾಲ ಪಡೆದ ಸಂಸ್ಥೆ, ಇಂತಹ ವ್ಯಕ್ತಿಯಿಂದ ಇಷ್ಟು ಸಾಲವನ್ನ, ಇಷ್ಟು ಸಮಯದವರೆಗೆ ಪಡೆದಿರುವುದಾಗಿ, ಅದಕ್ಕಾಗಿ ಇಂತಿಷ್ಟು ಬಡ್ಡಿಯನ್ನ, ಇಷ್ಟು ಸಮಯದಲ್ಲಿ ಕೊಡುವುದಾಗಿ ಮತ್ತು ನಿಗದಿತ ಅವಧಿಯ ನಂತರ ಸಾಲವನ್ನ ಹಿಂತಿರುಗಿಸುತ್ತೇನೆ ಎಂದು ಬರೆದು ಕೊಟ್ಟ ಮುಚ್ಚಳಿಕೆ ಪತ್ರವನ್ನ  ಡೆಟ್ ಬಾಂಡ್ ಅಥವಾ ಸಾಲ ಪತ್ರಗಳು ಎನ್ನುತ್ತೇವೆ.

ಸರಕಾರ , ಪಬ್ಲಿಕ್ ಸೆಕ್ಟರ್ ಸಂಸ್ಥೆಗಳು , ಖಾಸಗಿ ಸಂಸ್ಥೆಗಳು , ಮುನಿಸಿಪಾಲಿಟಿ ಮತ್ತಿತರ ಸಂಸ್ಥೆಗಳು ಈ ಬಾಂಡ್ಗಳನ್ನ ವಿತರಿಸಬಹುದು. ಹೂಡಿಕೆದಾರ ತನಗೆ ಸರಿ ಎನ್ನಿಸಿದ ಬಾಂಡ್ಗಳನ್ನ ಕೊಳ್ಳುತ್ತಾನೆ. ಕಾರ್ಪೊರೇಟ್ ಕಂಪನಿಗಳು ಮತ್ತು ಸರಕಾರಗಳು ಹಣದ ಅವಶ್ಯಕತೆ ಬಿದ್ದಾಗ ಬಾಂಡ್ ವಿತರಿಸಿ ಹಣ ಪಡೆಯುವುದು ಬಹಳ ಹಿಂದಿನಿಂದ  ಬಂದಿರುವ ಸಂಪ್ರದಾಯ. ಸಾಲ ಪಡೆದು ಇಂತವರಿಂದ ಇಷ್ಟು ಸಾಲ ಪಡೆದಿದ್ದೇವೆ ಇಷ್ಟು ವರ್ಷದ ನಂತರ ಇಷ್ಟು ಬಡ್ಡಿ ಸಮೇತ ವಾಪಸ್ಸು ಕೊಡುತ್ತೇವೆ ಎನ್ನುವ ಮುಚ್ಚಳಿಕೆ ಪತ್ರವೇ ಬಾಂಡ್. ಇಂತಿಪ್ಪ ಬಾಂಡ್ಗಳಲ್ಲೂ ವಿವಿಧ ರೀತಿ. ಉದಾಹರಣೆಗೆ

 ಯಾವ ಸಂಸ್ಥೆ ಇದನ್ನ ಇಶ್ಯೂ ಮಾಡುತ್ತಿದೆ ಎನ್ನುವುದರ ಆಧಾರದ ಮೇಲೆ:

  1. ಟ್ರೆಷರಿ ಬಾಂಡ್ಗಳು  
  2. ಏಜನ್ಸಿ ಬಾಂಡ್ಗಳು
  3. ಮುನಿಸಿಪಲ್ ಬಾಂಡ್ಗಳು
  4. ಕಾರ್ಪೊರೇಟ್ ಬಾಂಡ್ಗಳು,  ಎಂದು ವಿಭಾಗಿಸಬಹುದು.

ವಿಶೇಷತೆಯ ಆಧಾರದ ಮೇಲೆ:

  1. ಸೇವಿಂಗ್ ಬಾಂಡ್ಸ್
  2. ಫಾರಿನ್ ಬಾಂಡ್ಸ್
  3. ಹೈ ಹೀಲ್ಡ್ ಬಾಂಡ್ಸ್
  4. ಮಾರ್ಟ್ಗೇಜ್ ಬ್ಯಾಕ್ಡ್ ಬಾಂಡ್ಸ್ ಎಂದು ವಿಭಾಗಿಸಬಹುದು.

ಹೀಗೆ ಬಾಂಡ್ ಗಳಲ್ಲಿ ಕೂಡ ಇಷ್ಟೇ ಅಲ್ಲದೆ ಹಲವು ಹತ್ತು ವಿಧಗಳಿವೆ ,ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮೂಲಭೂತ ಗುಣದ ಆಧಾರದ ಮೇಲೆ ಇದನ್ನ ನಾಲ್ಕು ಭಾಗಗಳಾಗಿ ವರ್ಗಿಕರಿಸಬಹುದು. ಉಳಿದೆಲ್ಲಾ ಬಾಂಡ್ಗಳ ಸ್ವರೂಪ ಅಷ್ಟಿಷ್ಟು ಬದಲಾವಣೆಯಾದರೂ ಅವೆಲ್ಲವೂ ಸ್ಥೂಲವಾಗಿ ನೋಡಿದಾಗ ಇವುಗಳ ಪರಿಧಿಯ ಅಡಿಯಲ್ಲೇ ಬರುತ್ತವೆ.

  1. ಫಿಕ್ಸೆಡ್ ಇಂಟರೆಸ್ಟ್ ಬಾಂಡ್ಸ್
  2. ಫ್ಲೋಟಿಂಗ್ ಇಂಟರೆಸ್ಟ್ ಬಾಂಡ್ಸ್  
  3. ಇನ್ಫ್ಲೇಶನ್ ಲಿಂಕ್ಡ್ ಬಾಂಡ್ಸ್
  4. ಪರ್ಪೇಚುಯಲ್ ಬಾಂಡ್ಗಳು

ಗಮನಿಸಿ ಇಂತಹ ಬಾಂಡ್ಗಳ ವಿತರಣೆ ಆಗುವುದು ಹಣದ ಮುಗ್ಗಟ್ಟಿನ ಸಮಯದಲ್ಲಿ! ಹೌದು ಏಕೆಂದರೆ ಸಾಲ ಪಡೆದು ಹಿಂತಿರಿಗಿಸುವ ಒತ್ತಡವಿಲ್ಲ. ಅವಧಿ ಹೆಚ್ಚಿದಷ್ಟು ಸಾಲದ ಮೇಲಿನ ಬಡ್ಡಿಯ ಮೊತ್ತವನ್ನ ಕಡಿಮೆಗೆ ನಿಗದಿಪಡಿಸಲಾಗುತ್ತದೆ . ಹೀಗಾಗಿ ಕನಿಷ್ಠ ಬಡ್ಡಿ ಮೊತ್ತವನ್ನ ಬಾಂಡ್ ಖರೀದಿಸಿದವನಿಗೆ ಕೊಟ್ಟರೆ ಮುಗಿಯಿತು. ಇನ್ನೈದೋ ಹತ್ತೋ ವರ್ಷದಲ್ಲಿ ಸಾಲ ತೀರಿಸಬೇಕೆಂಬ ಒತ್ತಡ ಇರುವುದಿಲ್ಲ. ಜಾಗತಿಕ ಹಣಕಾಸು ಒತ್ತಡದಲ್ಲಿರುವ ಇಂದಿನ ದಿನಗಳಲ್ಲಿ ಇವುಗಳ ಬೇಡಿಕೆ ಹೆಚ್ಚಾಗುತ್ತದೆ

ಈಗ ನೀವು ಕೇಳಬಹುದು ಇದನ್ನ ಜನರೇಕೆ ಕೊಳ್ಳುತ್ತಾರೆ?  ಇಂತಹ ಬಾಂಡ್ಗಳಿಂದ ಆಗುವ ಉಪಯೋಗಗಳನ್ನ ಗಮನಿಸಿದರೆ ಇದಕ್ಕೆ ಉತ್ತರ ಸಿಗುತ್ತದೆ .

ಲಾಭ:

  1. ಡೆಟ್ ಬಾಂಡ್ಗಳು ಸಾಮಾನ್ಯವಾಗಿ ಸುರಕ್ಷಿತ ಮತ್ತು ಬಡ್ಡಿಯ ಭದ್ರತೆಯನ್ನ ಒದಗಿಸುತ್ತದೆ.
  2. ಡೆಟ್ ಬಾಂಡ್ಗಳ ಮೇಲಿನ ಹೂಡಿಕೆ ಲೀಗಲ್ ಹೀಗಾಗಿ ಮೂಲಧನ ಕರಗಿ ಹೋಗುವ ಅಥವಾ ಮೂಲಧನಕ್ಕೆ ಮೋಸವಾಗುವ ಸಂಭಾವ್ಯತೆ ಇಲ್ಲ ಎನ್ನುವಷ್ಟು ಗೌಣ.
  3. ಸಾಮಾನ್ಯವಾಗಿ ಬೇರೆ ರೀತಿಯ ಹೂಡಿಕೆಗಳಲ್ಲಿ ಸ್ಥಿರತೆ ಅಂದರೆ ಗಳಿಕೆಯಲ್ಲಿ ಸ್ಥಿರತೆಯನ್ನ ಬಯಸಲು ಸಾಧ್ಯವಿಲ್ಲ. ಹೀಗಾಗಿ ಪೋರ್ಟ್ಫೋಲಿಯೋ ವನ್ನ ಬ್ಯಾಲೆನ್ಸ್ ಮಾಡಲು ಕೂಡ ಇದೊಂದು ಒಳ್ಳೆಯ ಪರ್ಯಾಯ ಮಾರ್ಗ . ಅಂದರೆ ನೂರು ರೂಪಾಯಿಯಲ್ಲಿ ಮೂವತ್ತು ರೂಪಾಯಿ ಹಣವನ್ನ ಬಾಂಡ್ಗಳ ಮೇಲೆ ಹೂಡಿಕೆ ಮಾಡಿದರೆ ಅಷ್ಟರ ಮಟ್ಟಿಗೆ ಸ್ಥಿರತೆ ಸಿಕ್ಕಂತೆ, ಉಳಿದ ಹಣದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಹುದು. ಹೀಗಾಗಿ ಇದು ರಿಸ್ಕ್ ಬ್ಯಾಲೆನ್ಸ್ ಮಾಡಲು ಕೂಡ ಉತ್ತಮ ಹೂಡಿಕೆಯಾಗಿದೆ.

 ನಷ್ಟ:

  1. ಹಣದುಬ್ಬರಕ್ಕೆ ಸಮವಾಗಿ ನಿಲ್ಲದ ಕಾರಣ ಇದರಲ್ಲಿನ ಹೂಡಿಕೆ ಮೇಲ್ನೋಟಕ್ಕೆ ಲಾಭದಾಯಕ ಎನ್ನಿಸಿದರೂ ಮಾರುಕಟ್ಟೆಯಲ್ಲಿನ ವೇಗದ ಬದಲಾವಣೆ ಮತ್ತು ಹಣದುಬ್ಬರದ ಲೆಕ್ಕಾಚಾರದಲ್ಲಿ ಇದು ಸೋಲುತ್ತದೆ .
  2. ಸಾಮನ್ಯವಾಗಿ ಇಲ್ಲಿನ ಹೂಡಿಕೆಯನ್ನ 3 ರಿಂದ 5, 10 ಮತ್ತು ಕೆಲವೊಮ್ಮೆ ಇನ್ನಷ್ಟು ದೀರ್ಘಾವಧಿವರೆಗೆ ಮುಟ್ಟುವಂತಿರುವುದಿಲ್ಲ , ಹೀಗಾಗಿ ಹಣ ಒಂದೆಡೆ ಬ್ಲಾಕ್ ಆಗಿಬಿಡುತ್ತದೆ. ಇನ್ನೊಂದು ಇದಕ್ಕಿಂತ ಉತ್ತಮ ಅವಕಾಶ ಮಾರುಕಟ್ಟೆಯಲ್ಲಿ ಬಂದಾಗ ಅದರಲ್ಲಿ ಹೂಡಿಕೆ ಮಾಡಲಾಗದೆ ವಂಚಿತರಾಗುವ ಸಾಧ್ಯತೆ ಕೂಡ ಇರುತ್ತದೆ.
  3. ಇದರಲ್ಲಿ ಸ್ಥಿರತೆಯಿದೆ ಆದರೆ ಆದಾಯ ಕಡಿಮೆ ಎನ್ನುವುದು ಸರ್ವವೇದ್ಯ .

ಎಲ್ಲಾ ಹೂಡಿಕೆಗಳಲ್ಲಿ ಇರುವಂತೆ ಇಲ್ಲಿ ಕೂಡ ಲಾಭ ಮತ್ತು ನಷ್ಟ ಇದ್ದೆ ಇದೆ, ಆದರೆ ಇದರಲ್ಲಿ ಹೂಡಿಕೆ ಮಾಡುವುದು ಬೇಡ ಎನ್ನುವಂತಿಲ್ಲ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನ ಕೆಳಕಂಡ ಅಂಶಗಳನ್ನ ಗಮನಿಸಬೇಕಾಗುತ್ತದೆ .

  1. ರಿಸ್ಕ್ ಫ್ಯಾಕ್ಟರ್ ಅಥವಾ ಅಪಾಯದ ಮಿತಿ: ಬಾಂಡ್ ಗಳಲ್ಲಿ ಕೂಡ ಹೆಚ್ಚು ಅಪಾಯ , ಮಧ್ಯಮ ಮಟ್ಟದ ಅಪಾಯ ಮತ್ತು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವ ರೀತಿಯ ಬಾಂಡ್ಗಳಿವೆ. ಹೆಸರಿಗೆ ತಕ್ಕಂತೆ ಹೆಚ್ಚು ಅಪಾಯದ ಬಾಂಡ್ಗಳು ಹೆಚ್ಚು ಬಡ್ಡಿಯನ್ನ , ಆದಾಯವನ್ನ ತಂದು ಕೊಡುತ್ತವೆ. ಕಡಿಮೆ ಅಪಾಯದ ಬಾಂಡ್ಗಳು ಕಡಿಮೆ ಆದಾಯವನ್ನ ನೀಡುತ್ತವೆ. ಹೀಗಾಗಿ ಎಷ್ಟು ಆದಾಯ ಬೇಕು , ಎಷ್ಟು ಅಪಾಯ ತೆಗೆದುಕೊಳ್ಳುವ ಶಕ್ತಿಯಿದೆ ಎನ್ನುವುದರ ಆಧಾರದ ಮೇಲೆ ಯಾವ ರೀತಿಯ ಬಾಂಡ್ ಮೇಲೆ ಹೂಡಿಕೆ ಮಾಡಬೇಕು ಎನ್ನುವುದನ್ನ ನಿರ್ಧರಿಸಬೇಕು.
  2. ಇನ್ವೆಸ್ಟ್ಮೆಂಟ್ ಮಾಡುವ ಮೂಲ ಉದ್ದೇಶದ ಆಧಾರ ಮೇಲೆ ಹೂಡಿಕೆ ಮಾಡಬೇಕು: ಅಂದರೆ ಸಾಮಾನ್ಯವಾಗಿ ಬಾಂಡ್ಗಳು ದೀರ್ಘಾವದಿಯನ್ನ ಬೇಡುತ್ತವೆ. ಹೀಗಾಗಿ ನಮ್ಮ ಹೂಡಿಕೆ ದೀರ್ಘಾವಧಿಗೆ ಸಂಬಂಧಿಸಿದ್ದೇ ಅಥವಾ ಇಲ್ಲವೇ ? ಎಷ್ಟು ಭದ್ರತೆ ಬೇಕು ಹೀಗೆ ನಮ್ಮ ಬೇಕು ಬೇಡಗಳ ಆಧಾರದ ಮೇಲೆ ಹೂಡಿಕೆ ಮಾಡಬೇಕು.
  3. ಬಾಂಡ್ ಅವಧಿ ಮತ್ತಿತರ ನಿಬಂಧನೆಗಳು: ಹಲವಾರು ಬಾಂಡ್ಗಳಲ್ಲಿ ನಿಗದಿತ ಸಮಯದ ವರೆಗೆ ಅದನ್ನ ಮುಟ್ಟವಂತೆ ಇರುವುದಿಲ್ಲ, ಇತ್ತೀಚಿಗೆ ಇವುಗಳಲ್ಲಿ ಕೂಡ ಹಲವು ರೀತಿಯ ಬಾಂಡ್ಗಳಿವೆ , ಮೊದಲ ಐದು ವರ್ಷ ಲಾಕ್ ಇನ್ ಪಿರಿಯಡ್ , ಅಂದರೆ ಅದನ್ನ ಮುಟ್ಟವಂತಿಲ್ಲ ಆನಂತರ ಬೇಕಾದರೆ ಐವತ್ತು ಪ್ರತಿಶತ ತೆಗೆದುಕೊಳ್ಳುವ ಅವಕಾಶವಿರುತ್ತದೆ , ಕೆಲವೊಮ್ಮೆ ಹಿರಿಯ ನಾಗರೀಕರಾಗಿದ್ದರೆ ಬೇರೆಯ ತರಹದ ನಿಬಂಧನೆಗಳು ಇರುತ್ತದೆ. ಹೀಗೆ ನಿಬಂಧನೆಗಳು ನಮ್ಮ ಹೂಡಿಕೆಗೆ ಒಗ್ಗುತ್ತದೆಯೇ ಎನ್ನುವುದನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕು.

ಕೊನೆಮಾತು: ಇದೆಲ್ಲ ಸರಿ ನಾನು ಮೇಲಿನ ಎಲ್ಲವನ್ನೂ ಓದಿದೆ, ಆದರೂ ಡೆಟ್ ಬಾಂಡ್ಗಳಲ್ಲಿ ಹೂಡಿಕೆ ಮಾಡಲಾ? ಅಥವಾ ಬೇಡವಾ? ಎನ್ನುವುದಕ್ಕೆ ಸರಳ ಉತ್ತರ ಹೇಳಿ ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು. ಅದಕ್ಕೆ ಉತ್ತರವನ್ನ ಕೂಡ ಸರಳವಾಗೇ ಹೇಳಿ ಬಿಡುತ್ತೇನೆ. ಸರಕಾರ ಹೊರಡಿಸುವ ಬಾಂಡ್ಗಳ ಮೇಲಿನ ಹೂಡಿಕೆ ಬಹಳ ಸುರಕ್ಷಿತ, ಹಾಗೆಯೇ ಬಹಳಷ್ಟು ಪ್ರಸಿದ್ಧ ಕಾರ್ಪೊರೇಟ್ ಸಂಸ್ಥೆಗಳು ಹೊರಡಿಸುವ ಬಾಂಡ್ಗಳು ಕೂಡ ಸುರಕ್ಷಿತ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಿಗುವ ಬಡ್ಡಿ ದರಕ್ಕಿಂತ ಒಂದಷ್ಟು ಹೆಚ್ಚಿನ ಆದಾಯವನ್ನ ಕೂಡ ಇವುಗಳು ನೀಡುತ್ತವೆ. ಹೀಗಾಗಿ ಸುರಕ್ಷತೆ, ಭದ್ರತೆ ಮತ್ತು ನಿಯಮಿತವಾಗಿ ಆದಾಯವನ್ನ ಬಯಸುವ ಹೂಡಿಕೆದಾರ ನೀವಾಗಿದ್ದರೆ ಖಂಡಿತ ಇಲ್ಲಿನ ಹೂಡಿಕೆ ನಿಮಗಾಗಿಯೇ ಇದೆ ಎಂದು ಹೇಳಬಹುದು. ನೀವು ಹೆಚ್ಚು ಹಣವನ್ನ ಬಯಸುವ, ವೇಗ ಬಯಸುವ, ರಿಸ್ಕ್ ತೆಗೆದುಕೊಳ್ಳುವ ಗುಣದ ಹೂಡಿಕೆದಾರರಾಗಿದ್ದರೆ ಮತ್ತು ಹಣವನ್ನ ದೀರ್ಘಾವಧಿಗೆ ಒಂದೆಡೆ ಕುಳಿತುಕೊಳ್ಳಲು ಬಿಡದೆ ಇರುವರಾಗಿದ್ದರೆ , ಈ ಹೂಡಿಕೆ ನಿಮಗಲ್ಲ. ಸಮಾಜದಲ್ಲಿ ಎಲ್ಲಾ ರೀತಿಯ ವರ್ಗದ ಜನ , ಹೂಡಿಕೆದಾರರು ಇದ್ದಾರೆ . ನಾವು ಯಾವ ವರ್ಗದಲ್ಲಿ ಬರುತ್ತೇವೆ? ನಮ್ಮ ಲಿಮಿಟೇಷನ್ ಏನು? ನಮ್ಮ ಬಲವೇನು? ಎನ್ನುವ ಅರಿವು ಇಟ್ಟು ಕೊಂಡು ಹೂಡಿಕೆ ಮಾಡಿದ್ದಾಗ ಎಲ್ಲವೂ ಲಾಭದಾಯಕವಾಗೇ ಇರುತ್ತದೆ. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp