ಆಸ್ಟಿಯೋಫೈಟ್‍ಗಳು ಅಥವಾ ಬೋನ್ ಸ್ಪರ್ಸ್ ಸಮಸ್ಯೆ: ನೀವು ತಿಳಿದುಕೊಳ್ಳಬೇಕಾದ ಅಂಶಗಳು.. (ಕುಶಲವೇ ಕ್ಷೇಮವೇ)
ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ.
Published: 09th April 2022 01:17 PM | Last Updated: 09th April 2022 01:39 PM | A+A A-

ಆಸ್ಟಿಯೋಫೈಟ್‍ಗಳು (ಸಾಂಕೇತಿಕ ಚಿತ್ರ)
ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ. ನಡೆಯುವಾಗ ಅಷ್ಟೇನೂ ತೊಂದರೆ ಇಲ್ಲ. ಏನಾಗಿದೆ ಪರೀಕ್ಷಿಸಿ ನೋಡಿ” ಎಂದು ಹೇಳಿದರು. ಅವರನ್ನು ಪರೀಕ್ಷಿಸಿ ನೋಡಿದಾಗ ಅವರಲ್ಲಿ ಆಸ್ಟೀಯೋಫೈಟ್‍ಗಳು (Osteophytes) ಇರುವುದು ಕಂಡುಬಂತು.
ಆಸ್ಟಿಯೋಫೈಟ್ಸ್ ಎಂದರೇನು?
ಆಸ್ಟಿಯೋಫೈಟ್‍ಗಳು ಮೂಳೆಗಳ ಮೇಲೆ ಅಥವಾ ಕೀಲುಗಳ ಸುತ್ತಲೂ ಬೆಳೆಯುವ ಎಲುಬಿನ ಉಂಡೆಗಳಾಗಿವೆ (ಬೋನ್ ಸ್ಪರ್ಸ್- Bone Spurs). ಸಾಮಾನ್ಯವಾಗಿ ಸಂಧಿವಾತದಿಂದ (ಆರ್ಥ್ರೈಟಿಸ್) ಪ್ರಭಾವಿತವಾಗಿರುವ ಕೀಲುಗಳ ಪಕ್ಕದಲ್ಲಿ ಇವು ರೂಪುಗೊಳ್ಳುತ್ತವೆ. ಈ ಸ್ಥಿತಿಯು ಕೀಲುಗಳು ನೋವಿನಿಂದ ಮತ್ತೂ ಗಟ್ಟಿಯಾಗಲು ಕಾರಣವಾಗುತ್ತದೆ. ಆಸ್ಟಿಯೋಫೈಟ್‍ಗಳು ಯಾವುದೇ ಮೂಳೆಯಿಂದ ಬೆಳೆಯಬಹುದು. ಆದರೆ ಅವುಗಳು ಹೆಚ್ಚಾಗಿ ಕುತ್ತಿಗೆಯಲ್ಲಿ ನಂತರ ಭುಜ, ಮೊಣಕಾಲು, ಬೆನ್ನಿನ ಕೆಳಭಾಗ, ಬೆರಳುಗಳು ಅಥವಾ ಹೆಬ್ಬೆರಳು, ಕಾಲು ಅಥವಾ ಹಿಮ್ಮಡಿಗಳಲ್ಲಿ ಕಂಡುಬರುತ್ತವೆ.
ಈ ಸಮಸ್ಯೆಯು 60 ವರ್ಷ ಆದವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ನಿಧಾನವಾಗಿ ಕಂಡುಬರುತ್ತದೆ. ಅದರಲ್ಲಿಯೂ ಮಹಿಳೆಯರಲ್ಲಿ ಮುಟ್ಟು ನಿಂತ ನಂತರ (ಮಿನೋಪಾಸ್) ಹಾರ್ಮೋನುಗಳ ಏರುಪೇರಿನಿಂದ ಉಂಟಾಗುತ್ತದೆ. ಜೊತೆಗೆ ಫಾಸ್ಪರಸ್ (ರಂಜಕ) ಮತ್ತು ಕ್ಯಾಲ್ಸಿಯಂ ದೇಹದಲ್ಲಿ ಕಡಿಮೆಯಾದರೂ ಇದು ಬರುತ್ತದೆ. ಆಸ್ಟಿಯೋಫೈಟ್‍ಗಳು ದೊಡ್ಡದಾಗಿ ಬೆಳೆದರೆ ಹೆಚ್ಚು ತೊಂದರೆ ಆಗಬಹುದು. ಆದರೆ ಆರೋಗ್ಯಕರ ಜೀವನಶೈಲಿಯು ನೋವು, ಬಿಗಿತ ಮತ್ತು ಸೀಮಿತ ಚಲನೆಯಂತಹ ರೋಗಲಕ್ಷಣಗಳನ್ನು ಹೋಗಲಾಡಿಸುತ್ತದೆ. ಔಷಧಿಗಳು, ದೈಹಿಕ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಕೂಡ ಸಹಾಯ ಮಾಡಬಹುದು. ಏರುತ್ತಿರುವ ವಯಸ್ಸು, ಬಲಹೀನವಾಗಿತ್ತಿರುವ ಕೀಲುಗಳು, ಅನಾರೋಗ್ಯಕರ ಭಂಗಿ, ಅನುವಂಶೀಯತೆ ಮತ್ತು ಇತರ ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು.
ಆಸ್ಟಿಯೋಫೈಟ್ಸ್ ಅಥವಾ ಬೋನ್ ಸ್ಪರ್ಸ್ ಹೇಗೆ ಕಾಣಿಸಿಕೊಳ್ಳುತ್ತದೆ?
ಆಸ್ಟಿಯೋಫೈಟ್‍ಗಳು ಎಲ್ಲಿ ಕಂಡು ಬರುತ್ತದೆಯೋ ಅಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅವುಗಳು ಇತರ ಮೂಳೆ ಅಥವಾ ಅಂಗಾಂಶಗಳ ವಿರುದ್ಧ ಉಜ್ಜಿದಾಗ ನೋವು ಉಂಟಾಗಬಹುದು. ಕೈ ಮತ್ತು ಕಾಲುಗಳಲ್ಲಿ ಅವುಗಳಿಂದ ಸುಲಭವಾಗಿ ಚಲಿಸಲು ತೊಂದರೆ ಆಗಬಹುದು. ಕುತ್ತಿಗೆಯಲ್ಲಿದ್ದರೆ ಹತ್ತಿರದ ನರವನ್ನು ಹಿಸುಕಿದ ಅನುಭವ ಆಗಬಹುದು. ಅವುಗಳಿಂದ ಬೆನ್ನು ಮೂಳೆಯ ಹಿಂಭಾಗದಲ್ಲಿ ನೋವು ಮತ್ತು ಬಿಗಿತ ಉಂಟಾಗಬಹುದು. ಮಂಡಿಯನ್ನು ಬಗ್ಗಿಸಿದಾಗ ಅಥವಾ ಕಾಲುಗಳನ್ನು ಅಗಲಿಸಿದಾಗ ಅಲ್ಲಿ ನೋವಾಗಬಹುದು. ಕೈಗಳಲ್ಲಿದ್ದರೆ ಬೆರಳುಗಳು ಗಂಟಾಗಬಹುದು. ಭುಜದಲ್ಲಿದ್ದರೆ ಜೋಮು ಮತ್ತು ದುರ್ಬಲತೆ ಕಾಣಿಸಿಕೊಳ್ಳಬಹುದು.
ಆಸ್ಟಿಯೋಫೈಟ್ಸ್ ಹೇಗೆ ಬಾಧಿಸುತ್ತದೆ?
ಕೀಲುಗಳು ಸಂಧಿವಾತದಿಂದ ಪ್ರಭಾವಿತವಾದಾಗ ಆಸ್ಟಿಯೋಫೈಟ್‍ಗಳು ರೂಪುಗೊಳ್ಳುತ್ತವೆ. ಸಂಧಿವಾತವು ಮೂಳೆಗಳನ್ನು ಜೋಡಿಸುವ ಮತ್ತು ಕೀಲುಗಳನ್ನು ಸುಲಭವಾಗಿ ಚಲಿಸುವಂತೆ ಮಾಡುವ ಮೃದ್ವಸ್ಥಿಗಳನ್ನು ಹಾನಿಗೊಳಿಸುತ್ತದೆ. ಮೊಣಕಾಲುಗಳು, ಸೊಂಟ, ಬೆನ್ನುಮೂಳೆ ಮತ್ತು ಕೈಗಳ ಸಣ್ಣ ಕೀಲುಗಳು ಮತ್ತು ಹೆಬ್ಬೆರಳಿನ ತಳದಲ್ಲಿ ಸಂಧಿವಾತವು ಸಾಮಾನ್ಯವಾಗಿದೆ. ಕೀಲುಗಳು ಹೆಚ್ಚು ಹಾನಿಗೊಳಗಾಗುವುದರಿಂದ ಅವುಗಳ ಸುತ್ತಲೂ ಹೊಸ ಮೂಳೆ ರೂಪುಗೊಳ್ಳಬಹುದು. ಮೂಳೆಗಳ ಈ ಬೆಳವಣಿಗೆಗಳೇ ಆಸ್ಟಿಯೋಫೈಟ್‍ಗಳು. ಬೆನ್ನುಮೂಳೆಯ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುವ ಸಂಧಿವಾತದ ಪರಿಣಾಮವಾಗಿ ಸಹ ಆಸ್ಟಿಯೋಫೈಟ್‍ಗಳು ರೂಪುಗೊಳ್ಳಬಹುದು.
ಆಸ್ಟಿಯೋಫೈಟ್ಸ್ ನೋವಿನಿಂದ ಉಪಶಮನ ಹೇಗೆ?
ಆಸ್ಟಿಯೋಫೈಟ್‍ಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುವುದಿಲ್ಲ. ಆದರೆ ಅವುಗಳಿಗೆ ಸಂಬಂಧಿಸಿರುವ ಸಂಧಿವಾತದಿಂದ ನೋವು ಉಂಟಾಗುತ್ತದೆ. ನೋವು ಕಂಡುಬಂದರೆ ಪೇನ್ ಕಿಲ್ಲರ್‍ಗಳನ್ನು ಸೇವಿಸಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾತ್ರೆಗಳಿಂದ ಊತವನ್ನು ಕೂಡ ತಡೆಗಟ್ಟಬಹುದು. ದೇಹದ ತೂಕ ಹೆಚ್ಚಾಗಿದ್ದರೆ ತೂಕವನ್ನು ಕಡಿಮೆ ಮಾಡಿಕೊಂಡರೆ ಕೀಲುಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಫಿಸಿಯೋಥೆರಪಿಸ್ಟರಿಂದ ಚಿಕಿತ್ಸೆ ಮಾಡಿಸಿಕೊಂಡರೆ ಅವರು ಸ್ನಾಯುಗಳನ್ನು ಬಲಪಡಿಸಲು ಬೇಕಾದ ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಇದರಿಂದ ಸಮಸ್ಯೆ ಉಂಟಾಗಿರುವ ಭಾಗದ ಸ್ನಾಯುಗಳನ್ನು ತಣಿಸಿ ಚಲನೆ ಸುಲಭವಾಗಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಪೌಷ್ಟಿಕಾಂಶಭರಿತ ಆಹಾರ ಸೇವನೆ ಬಹಳ ಮುಖ್ಯ. ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಪೊಟಾಸಿಯಂ ಅಂಶಗಳಿರುವ ಹಾಲು, ಮೊಟ್ಟೆ, ಹಸಿರು ಸೊಪ್ಪು, ತರಕಾರಿಗಳು, ಬೀನ್ಸ್, ಮೊಳಕೆಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಡಯಾಬಿಟಿಸ್ ಇದ್ದಲ್ಲಿ ಅದನ್ನು ಸರಿಯಾಗಿ ನಿರ್ವಹಿಸಬೇಕು. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಕೀಲುಗಳಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ನಿಯತವಾಗಿ ನೋವು, ಬಿಗಿತ, ಜೋಮು ಹಿಡಿಯುವುದು ಅಥವಾ ನರಗಳ ನೋವು ಕಂಡುಬಂದಾಗ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು. ಅವರು ಕೀಲುಗಳ ಚಲನೆ ಮತ್ತು ಸ್ನಾಯುಗಳ ಬಲದ ಪರೀಕ್ಷೆ ಮಾಡುತ್ತಾರೆ. ಇದರ ಜೊತೆಗೆ ಇತರ ಸಮಸ್ಯೆಗಳೇನಾದರೂ ಇವೆಯೇ ಎಂದು ವಿಚಾರಿಸಿ ತಜ್ಞ ವೈದ್ಯರ ಬಳಿ ಹೋಗಿ ಎಂದು ಸಲಹೆ ನೀಡಬಹುದು. ಎಕ್ಸ್-ರೇ ತೆಗೆಸಿದಾಗ ಕೀಲುಗಳಲ್ಲಿ ಇರಬಹುದಾದ ಸಂಧಿವಾತ ಮತ್ತು ಆಸ್ಟಿಯೋಫೈಟ್‍ಗಳನ್ನು ಪತ್ತೆ ಹಚ್ಚಬಹುದು. ಎಂಆರ್‍ಐ ಸ್ಕ್ಯಾನ್ ಮಾಡಿದರೆ ಲಿಗಮೆಂಟ್ ಮತ್ತು ಟೆಂಡನ್‍ಗಳಿಗೆ ಉಂಟಾಗಿರುವ ಸಮಸ್ಯೆಗಳನ್ನು ಸರಿಯಾಗಿ ಅರಿತುಕೊಳ್ಳಬಹುದು.
ಆಸ್ಟಿಯೋಫೈಟ್ಸ್ ಗೆ ಆಯುರ್ವೇದ ಚಿಕಿತ್ಸೆ
ಆಯುರ್ವೇದದಲ್ಲಿಯೂ ಈ ಸಮಸ್ಯೆಗ ಉತ್ತಮ ಚಿಕಿತ್ಸೆ ಲಭ್ಯವಿದೆ. ದೇಹದ ಯಾವುದೇ ಭಾಗದಲ್ಲಿ ನೋವು ಕಂಡುಬಂದರೆ ಪಂಚಕರ್ಮಚಿಕಿತ್ಸೆ, ವಿರೇಚನ, ಮಂಡಿ ಕೀಲುಗಳಿಗೆ ಮಾಡುವ ಜಾನು ಬಸ್ತಿ ಕ್ರಿಯೆಯಿಂದ ಪರಿಹಾರ ಸಾಧ್ಯ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆಯುರ್ವೇದೀಯ ಔಷಧಿ ತೈಲಗಳಿಂದ ಬಾಧಿತ ಅಂಗಾಂಗವನ್ನು ಮಸಾಜು ಮಾಡಿಕೊಳ್ಳುವುದು ಮತ್ತು ಶಾಖ ತೆಗೆದುಕೊಳ್ಳುವುದು ಮುಖ್ಯ. ಹಾಗೆಯೇ ನಿಲ್ಲುವ ಮತ್ತು ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಮೆಟ್ಟಿಲುಗನ್ನು ಹತ್ತಿ ಇಳಿಯುವಾಗ ಎಚ್ಚರಿಕೆಯಿಂದ ಇರಬೇಕು. ಮಂಡಿಗಳು ಮತ್ತು ಕೀಲುಗಳ ಮೇಲೆ ಹೆಚ್ಚು ಭಾರ ಹಾಕಬಾರದು. 50-60 ವರ್ಷಗಳ ನಂತರ ಅಥವಾ ಮುಟ್ಟು ನಿಂತ ನಂತರ ನಿಯಮಿತವಾಗಿ ಮೂಳೆ ಸಾಂದ್ರತೆ ಪರೀಕ್ಷೆಯನ್ನು (ಬೋನ್ ಡೆನ್ಸಿಟಿ ಟೆಸ್ಟ್) ಮಾಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳನ್ನು ವೈದ್ಯರಿಂದ ಪಡೆಯಬಹುದು.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com