ಮ್ಯೂಚುಯಲ್ ಫಂಡ್ ಬಗ್ಗೆ ಇಲ್ಲಿದೆ ಮೂಲಭೂತ ಮಾಹಿತಿ! (ಹಣಕ್ಲಾಸು)

ಹಣಕ್ಲಾಸು-304

-ರಂಗಸ್ವಾಮಿ ಮೂಕನಹಳ್ಳಿ

Published: 14th April 2022 11:21 AM  |   Last Updated: 14th April 2022 12:35 PM   |  A+A-


Mutual Funds

ಮ್ಯೂಚ್ಯುಯಲ್ ಫಂಡ್ಸ್

ಮ್ಯೂಚುಯಲ್ ಫಂಡ್ ಎನ್ನುವುದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಒಂದು ಮಾಧ್ಯಮ. ಇಲ್ಲಿ ಸಾಮಾನ್ಯ ಗುರಿಯನ್ನ ಹೊಂದಿರುವ ಅನೇಕ ಹೂಡಿಕೆದಾರರ ಹಣವನ್ನ ಒಂದೆಡೆ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹವಾದ ಹಣವನ್ನ ಅನೇಕ ಸಂಸ್ಥೆಗಳಲ್ಲಿ, ಬೇರೆ ಬೇರೆ ವಲಯಗಳಲ್ಲಿ ವೈಜ್ಞಾನಿಕ ತಳಹದಿಯ ವಿಶ್ಲೇಷಣೆಯ ಮೂಲಕ ಹೂಡಿಕೆಯನ್ನ ಮಾಡಲಾಗುತ್ತದೆ. ಹೀಗೆ ಹಲವಾರು ಜನರ ಹಣದ ನಿರ್ವಹಣೆಗೆ ಒಬ್ಬ ಫಂಡ್ ಮ್ಯಾನೇಜರ್ ಕೂಡ ನೇಮಿಸಲಾಗಿರುತ್ತದೆ. ಷೇರು ಮಾರುಕಟ್ಟೆಯ ಪರಿಪೂರ್ಣ ಜ್ಞಾನವಿಲ್ಲದಿದ್ದರೂ ಆದಾಯ ವೃದ್ಧಿ ಅಥವಾ ವೆಲ್ತ್ ಕ್ರಿಯೇಷನ್ ಗೆ ಇದು ಸುಲಭ ಮಾರ್ಗ. ಹಣವನ್ನ ಸಂಸ್ಥೆಗಳ ಸ್ಟಾಕ್ಸ್, ಷೇರುಗಳು, ಬಾಂಡ್ ಹೀಗೆ ಹಲವಾರು ಇನ್ಸ್ಟ್ರುಮೆಂಟ್ ಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ.

ಮ್ಯೂಚುಯಲ್ ಫಂಡ್ ಅನೇಕ ಜನರ ಹಣ ಒಂದೆಡೆ ಸೇರಿ ಸೃಷ್ಟಿಯಾದ ಹಣ. ಹೀಗಾಗಿ ಇದರ ತಪ್ಪು ಬಳಕೆಯಾಗಬಾರದು ಎನ್ನುವ ಉದ್ದೇಶದಿಂದ ಇದನ್ನ ಸ್ಟಾಕ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಗರಾಣಿಯಲ್ಲಿ ಸೇರಿಸಲಾಗಿದೆ. ಸಮಯಕ್ಕೆ ತಕ್ಕಂತೆ ಈ ಸಂಸ್ಥೆ ಹೇಳುವ ರೂಪುರೇಷೆಗಳ ಅಡಿಯಲ್ಲಿ ಮ್ಯೂಚುಯಲ್ ಫಂಡ್ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರ ಮೂಲ ಉದ್ದೇಶ ಹಣವನ್ನ ಹೂಡಿದ ಹೂಡಿಕೆದಾರನ ಹಿತವನ್ನ ಕಾಯುವುದಾಗಿದೆ. ಹೀಗಾಗಿ ಮ್ಯೂಚುಯಲ್ ಫಂಡ್ ಸೇವೆ ನೀಡುವ ಯಾವುದೇ ಸಂಸ್ಥೆಗಳು ಮೋಸದಾಟದಲ್ಲಿ ತೊಡಗಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಮ್ಯೂಚುಯಲ್ ಫಂಡ್ ಗಳಲ್ಲಿ ಎಷ್ಟು ವಿಧ?

ಮ್ಯೂಚುಯಲ್ ಫಂಡ್ ಗಳಲ್ಲಿ ಸಾವಿರಾರು ವಿಧವಿದೆ. ಆದರೆ ಅವುಗಳ ಮುಖ್ಯ ಗುಣ ವಿಶೇಷತೆಗಳ ಆಧಾರದ ಮೇಲೆ ಸ್ಥೂಲವಾಗಿ ನಾಲ್ಕು ವಿಭಾಗ ಮಾಡಬಹುದು.

  1. ಅಸೆಟ್ ಕ್ಲಾಸ್
  2. ರಚನೆ ಅಥವಾ ಸ್ಟ್ರಕ್ಚರ್
  3. ಹೂಡಿಕೆಯ ಉದ್ದೇಶ
  4. ಹೂಡಿಕೆಯ ಮೇಲಿನ ಅಪಾಯ.
  5. ವಿಶೇಷ ಮ್ಯೂಚುಯಲ್ ಫಂಡ್ ಗಳು

ಇಲ್ಲಿ ಏಕೆ ಹೂಡಿಕೆ ಮಾಡಬೇಕು? ಇದರಿಂದ ಆಗುವ ಲಾಭಗಳೇನು?

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಅನುಭವ ಇಲ್ಲದವರು ,ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವವರು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯ ಆಳ ಅಗಲದ ಅರಿವಾಗುತ್ತದೆ. ಯಾವುದೇ ತೆರನಾದ ಸೇಫ್ಟಿ ನೆಟ್ ಇಲ್ಲದೆ ಧುಮುವುದು ಹೆಚ್ಚು ಅಪಾಯಕಾರಿ ಈ ನಿಟ್ಟಿನಲ್ಲಿ ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ . ಇದರಿಂದ ಅನೇಕ ಲಾಭಗಳಿವೆ ಅವುಗಳಲ್ಲಿ ಪ್ರಮುಖವಾದವು ಹೀಗಿವೆ :

  1. ಲಿಕ್ವಿಡಿಟಿ: ಇಲ್ಲಿನ ಹೂಡಿಕೆಯನ್ನ ನಮಗೆ ಬೇಕಾದ ಸಮಯದಲ್ಲಿ ಹೊರತೆಗೆದುಕೊಳ್ಳುವ ಅವಕಾಶವಿದೆ. ಗಮನಿಸಿ ಹೂಡಿಕೆಯ ಸಮಯದಲ್ಲೇ ನಮಗೆ ಎಷ್ಟು ಸಮಯ ಹಣ ಬೇಡ, ಯಾವಾಗ ಬೇಕಾಗುತ್ತದೆ ಎನ್ನುವುದನ್ನ ತಿಳಿಸಿ ಹೂಡಿಕೆ ಮಾಡಬಹುದು. ಮಧ್ಯದಲ್ಲಿ ತೆಗೆದು ಕೊಂಡರೆ ಯಾವುದೇ ಶುಲ್ಕವಿಲ್ಲ, ಆದರೆ ಅಂದಿನ ಮಾರುಕಟ್ಟೆ ಮೌಲ್ಯ ದಕ್ಕುತ್ತದೆ.
  2. ವೃತ್ತಿಪರರ ನೆರವು ಸಿಗುತ್ತದೆ: ಮಾರುಕಟ್ಟೆಯಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವ ಎರಡೂ ಇರುವ ಪ್ರೊಫೆಷನಲ್ ಗಳ ನೆರವು ಸಿಗುತ್ತದೆ. ಹೀಗಾಗಿ ಏನೂ ತಿಳಿಯದೆ ನೇರವಾಗಿ ಮಾರುಕಟ್ಟೆಗೆ ಧುಮುಕಿದಾಗ ಆಗುತ್ತಿದ್ದ ನಷ್ಟ ತಪ್ಪುತ್ತದೆ. ಹೆಚ್ಚಿನ ಜ್ಞಾನವಿಲ್ಲದೆ ಸಂಪತ್ತಿನ ವೃದ್ಧಿಗೆ ಸರಳ ಮಾರ್ಗ ಇದಾಗಿದೆ.
  3. ಡೈವರ್ಸಿಫಿಕೇಷನ್: ನಾವು ನಮ್ಮ ಬಳಿ ಇದ್ದ ಹಣವನ್ನ ನಿಗದಿತ ಸಂಸ್ಥೆ ಅಥವಾ ಷೇರಿನ ಮೇಲೆ ಹೂಡಿಕೆ ಮಾಡುತ್ತೇವೆ, ಆದರೆ ಮ್ಯೂಚುಯಲ್ ಫಂಡ್ ನಲ್ಲಿ ಬಹಳಷ್ಟು ವಲಯದ ವಿವಿಧ ಸಂಸ್ಥೆಯ ಷೇರುಗಳ ಮೇಲೆ ಹೂಡಿಕೆಯನ್ನ ಮಾಡಲಾಗುತ್ತದೆ. ಹೀಗಾಗಿ ಅಪಾಯ ವಿತರಣೆಯಾಗುತ್ತದೆ. ಒಂಟಿಯಾಗಿ ಮಾಡುವ ಹೂಡಿಕೆಗಿಂತ ಸಾಂಘಿಕ ಹೂಡಿಕೆಯಲ್ಲಿ ಹೆಚ್ಚು ಬಲವಿದೆ.
  4. ಸಾಮೂಹಿಕ ಮತ್ತು ಹೆಚ್ಚಿನ ಖರೀದಿಯಲ್ಲಿ ಉಳಿತಾಯ ಹೆಚ್ಚು: ಅರ್ಥ ಖರೀದಿ ಸಮಯದಲ್ಲಿ ಆಗುವ ಖರ್ಚು ಹೆಚ್ಚು ಖರೀದಿ ಮಾಡುವುದರಿಂದ ಕಡಿಮೆಯಾಗುತ್ತದೆ. ಇದನ್ನ ಲೊ ಕಾಸ್ಟ್ ಆಫ್ ಪರ್ಚೆಸ್ ಎನ್ನುತ್ತಾರೆ. ಕಮಿಷನ್ ಚಾರ್ಜಸ್, ಪ್ರೋಸೆಸ್ ಫೀಸ್ ಇವುಗಳಲ್ಲಿ ಭಾರಿ ಉಳಿತಾಯವಾಗುತ್ತದೆ.
  5. ಸಿಪ್ - ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಸ್: ಒಮ್ಮೆಲೇ ಹೂಡಿಕೆ ಮಾಡಲು ಹಣವಿಲ್ಲದವರು ಪ್ರತಿ ತಿಂಗಳು ಇಷ್ಟು ಎಂದು ತಮ್ಮಿಷ್ಟದ ಫಂಡ್ ನಲ್ಲಿ ಹೂಡಿಕೆ ಮಾಡುತ್ತಾ ಹೋಗಬಹುದು. ಇದು ಎಲ್ಲರನ್ನೂ ಮಾರುಕಟ್ಟೆಗೆ ಕರೆತರುವುದರಲ್ಲಿ ಮತ್ತು ಕಡಿಮೆ ಹಣದಲ್ಲಿ ಮಾರುಕಟ್ಟೆಯ ಅನುಭವ ಪಡೆಯಲು ಸಹಾಯ ಮಾಡುತ್ತದೆ. ಕೇವಲ ಐನೂರು ರೂಪಾಯಿ ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ ನೀವು ಖಾತೆ ತೆರೆಯಬಹುದು.
  6. ಕೆಲವೊಂದು ಹೂಡಿಕೆಗಳು ತೆರಿಗೆಯನ್ನ ಉಳಿಸಲು ಕೂಡ ಸಹಕಾರಿಯಾಗಿವೆ.
  7. ಸುರಕ್ಷತೆ: ಮ್ಯೂಚುಯಲ್ ಫಂಡ್ ಗಳು ಹೆಚ್ಚು ಸುರಕ್ಷಿತವಲ್ಲ ಎನ್ನುವುದು ಜನ ಸಾಮಾನ್ಯರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿಬಿಟ್ಟಿದೆ. ಆದರೆ ಗಮನಿಸಿ ಇದು ನಮ್ಮ ಸೆಬಿ ಯ ರೂಪುರೇಶೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹೂಡಿಕೆ ಮಾಡುವ ಮುನ್ನ ನಾವು ಸೇವೆ ಪಡೆಯುತ್ತಿರುವ ಫಂಡ್ ಹೌಸ್ ಯಾವುದು, ಫಂಡ್ ಮ್ಯಾನೇಜರ್ ಯಾರು ಅವರ ಹಿಂದಿನ ಟ್ರ್ಯಾಕ್ ರೆಕಾರ್ಡ್ ನೋಡಿ ಹೂಡಿಕೆ ಮಾಡಿದರೆ, ಇಲ್ಲಿಯೂ ಬ್ಯಾಂಕ್ ನಲ್ಲಿ ಇಟ್ಟ ಹಣದ ಸುರಕ್ಷತೆ ಸಿಗುತ್ತದೆ.
  8. ಸ್ವಂತಂತ್ರ ಹೂಡಿಕೆದಾರರಾಗಲು ಸಹಕಾರಿ: ಆರಂಭಿಕ ಹೂಡಿಕೆದಾರನಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಮೂಲಕ ಮಾರುಕಟ್ಟೆಯಲ್ಲಿ ಸ್ವಂತಂತ್ರ ಹೂಡಿಕೆದಾರನಾಗಲು ಇದು ಚಿಮ್ಮು ಹಲಗೆಯಂತೆ ಸಹಾಯ ಮಾಡುತ್ತದೆ.

ಇಲ್ಲಿ ಹೂಡಿಕೆ ಮಾಡುವ ಬಗೆ ಹೇಗೆ?

ಇಲ್ಲಿ ಹೂಡಿಕೆ ಮಾಡುವ ಮುನ್ನ ಕೆಳಗೆ ಪಟ್ಟಿ ಮಾಡಿರುವ ಬೇಸಿಕ್ ಪ್ರಶ್ನೆಗಳನ್ನ ನಿಮ್ಮನ್ನ ನೀವೇ ಕೇಳಿಕೊಳ್ಳಿ. ನಿಮ್ಮ ಫಂಡ್ ಮ್ಯಾನೇಜರ್ನನ್ನೂ ಕೇಳಿ. ಒಪ್ಪಿಗೆಯಾದರೆ ಮಾತ್ರ ಹೂಡಿಕೆ ಮಾಡಿ. ಇಲ್ಲದಿದ್ದರೆ ಮ್ಯೂಚುಯಲ್ ಫಂಡ್ ಮೋಸದ ಫಂಡ್ ಆದೀತು ಎಚ್ಚರ.

  • ಮೇಲಿನ ಸಾಲಿನಲ್ಲಿ ಹೇಳಿದಂತೆ ಏಳು ಸಾವಿರ ರೀತಿಯ ಮ್ಯೂಚುಯಲ್ ಫಂಡ್ ಗಳಿವೆ. ಯಾವುದು ಎಲ್ಲಿ ಹೂಡಿಕೆ ಮಾಡುತ್ತದೆ . ಎನ್ನುವ ಪೂರ್ಣ ಅರಿವು ನಿಮ್ಮದಾಗಿರಬೇಕು . ಹೂಡಿಕೆಯನ್ನ ವಿವಿಧ ಕ್ಷೇತ್ರಗಳಲ್ಲಿ ಹಂಚಿದ್ದರೆ ಅದರ ಅನುಪಾತ ತಿಳಿದುಕೊಳ್ಳಿ . ಎಲ್ಲಕ್ಕೂ ಮೊದಲು ನಿಮಗೇನು ಬೇಕು? ನಿಮ್ಮ ಗುರಿ ಏನು? ಎನ್ನುವ ಸ್ಪಷ್ಟ ಅರಿವಿನೊಂದಿಗೆ ಹೂಡಿಕೆಗೆ ಮುಂದಾಗಿ  ಹಣವಿದೆ ಎಲ್ಲಿ ಹೂಡಿಕೆ ಮಾಡುವುದು ಎನ್ನುವ ಪ್ರಶ್ನೆಯೊಂದಿಗೆ ಹೋಗುವುದು ಬೇಡ. ಸ್ವಲ್ಪ ಹೋಂ ವರ್ಕ್ ಮಾಡಿಕೊಂಡು ಹೋದರೆ ಹೆಚ್ಚಿನ ಲಾಭ ನಿಮ್ಮದಾಗುತ್ತದೆ . ಹೂಡಿಕೆಯ ಅವಧಿ ಹೆಚ್ಚಿದಷ್ಟೂ ಲಾಭ ಹೆಚ್ಚು.
  • ಮ್ಯೂಚುಯಲ್ ಫಂಡ್ ನ ಹೂಡಿಕೆಯಲ್ಲಿ ಗಳಿಸುವ ಆದಾಯವೆಲ್ಲ ಪೂರ್ಣ ನಿಮ್ಮದೇ ಅಲ್ಲ . ನಿಮ್ಮ ಹಣದಿಂದ ಗಳಿಸಿದ ಲಾಭದ ಒಂದಷ್ಟು ಅಂಶ ಫಂಡ್ ಮ್ಯಾನೇಜರ್ ಅಥವಾ ಪೋರ್ಟ್ಫೋಲಿಯೋ ಮ್ಯಾನೇಜರ್ ಫೀಸ್ ಅಂತಲೋ ಕಮಿಷನ್ ಹೆಸರಲ್ಲೂ ನಿಮ್ಮಿಂದ ವಸೂಲಿ ಮಾಡುತ್ತಾರೆ . ಹೂಡಿಕೆಗೆ ಮೊದಲೇ ಇಂತಹ ಖರ್ಚು ಎಷ್ಟು ಎನ್ನುವ ಬಗ್ಗೆ ಮಾಹಿತಿ ಪಡೆಯಿರಿ . ಹಿಡನ್ ಚಾರ್ಜಸ್ ಇದೆಯೇ ? ಇಷ್ಟು ಖರ್ಚು ಮೀರಿ ಹೆಚ್ಚು ನೀಡಲು ನಾನು ಸಿದ್ಧನಿಲ್ಲ ಎನ್ನುವ ನಿಲುವನ್ನ ಫಂಡ್ ಮ್ಯಾನೇಜರ್ ಗೆ ಹೇಳಿ.
  • ಹಲವಾರು ಕಂಪನಿಗಳು ಮ್ಯೂಚುಯಲ್ ಫಂಡ್ ಗಳ ವಹಿವಾಟು ಅವುಗಳ ಹಣಕಾಸಿನ ಆರೋಗ್ಯದ ಬಗ್ಗೆ ಮಾಹಿತಿಯನ್ನ ನೀಡುತ್ತವೆ . ನಿಮ್ಮ ಗುರಿ ಲಾಂಗ್ ಟರ್ಮ್ ಅಥವಾ ಶಾರ್ಟ್ ಟರ್ಮ್ ಎನ್ನುವುದನ್ನ ನಿರ್ಧರಿಸಿ ಇಂತಹ ಮಾಹಿತಿಯ ಸಹಾಯದಿಂದ ನಿಮಗೆ ಒಪ್ಪುವ ಉತ್ತಮ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿಕೊಳ್ಳಬಹದು.
  • ಆಕ್ಟಿವ್ ಮತ್ತು ಪಾಸಿವ್ ಫಂಡ್ ಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ . ಆಕ್ಟಿವ್ ಫಂಡ್ ವಿಶಾಲವಾದದ್ದು . ಪಾಸಿವ್ ಆಯ್ದ ಕೆಲವು ಕಂಪನಿಗಳ ಸೆಕ್ಯುರಿಟೀಸ್ ನಲ್ಲಿ ಮಾತ್ರ ಹೂಡಿಕೆ ಮಾಡುವ ಫಂಡ್ . ಕೆಲವರು ಆಕ್ಟಿವ್ ಫಂಡ್ ಉತ್ತಮ ಎಂದು ಹಲವು ಫಲಿತಾಂಶದ ಮಾಹಿತಿ ನಿಮ್ಮ ಮುಂದೆ ಇಟ್ಟರೆ. ಇನ್ನು ಹಲವು ಫಂಡ್ ಮ್ಯಾನೇಜರ್ ಗಳು ಪಾಸಿವ್ ಫಂಡ್ ಉತ್ತಮ ಎನ್ನುತ್ತಾರೆ. ಯಾವುದು ಉತ್ತಮ ಎನ್ನುವುದು ಮಾತ್ರ ನಮ್ಮ ವಿವೇಚನೆಗೆ ಬಿಟ್ಟದ್ದು . ಅದಕ್ಕೆ ಹೇಳಿದ್ದು ನಿಮ್ಮ ಫಂಡ್ ಮ್ಯಾನೇಜ್ ಮಾಡಬೇಕಿರುವುದು ನೀವು ಎಂದು . ಮ್ಯಾನೇಜರ್ ಗೆ ಬಿಟ್ಟರೆ ಆತನ ಇಷ್ಟದಂತೆ ನಿಮ್ಮ ಹಣ ಹೂಡಿಕೆಯಾಗುತ್ತದೆ. ಸೋಲು ಅಥವಾ ಗೆಲುವು ನಿರ್ಧಾರ ಮಾತ್ರ ನಿಮ್ಮದಾಗಿರಲಿ.
  • ಹೂಡಿಕೆ ಮಾಡಿದ ಹಣವನ್ನ ಅದರ ಪೂರ್ಣ ಶಕ್ತಿಗೆ ತಕ್ಕಂತೆ ದುಡಿಸಬೇಕು. ಹೇಗೆ ? ನಾನೇನು ಹೂಡಿಕೆ ತಜ್ಞನಲ್ಲ ಎನ್ನುವ ಪ್ರಶ್ನೆ ನಿಮ್ಮದು. ಹೂಡಿಕೆ ಮಾಡಲು ತಜ್ಞರೇ ಆಗಬೇಕೆಂದಿಲ್ಲ ನಿಮ್ಮ ಹಣ ಪೋಲಾದರೆ ಅಥವಾ ಮರಳಿ ಬರದೇ ಹೋದರೆ ಎನ್ನುವ ಸಣ್ಣ ಭಯ ನಿಮ್ಮಲಿದ್ದರೆ ಸಾಕು. ಆ ಭಯ ನಿಮ್ಮನ್ನ ವಿವಿಧ ಹೂಡಿಕೆಯ ಬೆರಕೆಯನ್ನ ತಿಳಿಯಲು ನಿಮ್ಮನ್ನ ಪ್ರೇರೇಪಿಸುತ್ತೆ ಇಷ್ಟಾದರೆ ಸಾಕು ಮಿಕ್ಕ ಮಾಹಿತಿ ತಿಳಿಯಲು ಹಲವು ಮಾರ್ಗಗಳಿವೆ.
  • ಹಲವಾರು ಮ್ಯೂಚುಯಲ್ ಫಂಡ್ ಗಳು ರಿಟೈರ್ಮೆಂಟ್ ಆದ ನಂತರ ನಿಮ್ಮನ್ನ ಒಂದು ರೆಸಾರ್ಟ್ ನಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿರುವಂತೆ ತೂರಿಸಿ ಇಂದು ನಿಮ್ಮ ಹಣವನ್ನ ಹೂಡಿಕೆ ಮಾಡಲು ಪ್ರೇರೇಪಿಸುತ್ತವೆ. ಇಂತಹ ರಿಟೈರ್ಮೆಂಟ್ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೆಚ್ಚು ಗಮನವಿರಲಿ. ವೇಗದಿಂದ ಬದಲಾಗುತ್ತಿರುವ ಜಾಗತಿಕ ಹಣಕಾಸು ನೀತಿ ನಿಯಮಗಳು ನಿಮ್ಮೆಲ್ಲಾ ರಿಟೈರ್ಮೆಂಟ್ ಪ್ಲಾನ್ಗಳನ್ನ ರಿಟೈರ್ ಮಾಡಿ ಬಿಡುತ್ತವೆ. ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನಿಮ್ಮ ಪೋರ್ಟ್ಫೋಲಿಯೋ ಅವಲೋಕನ ಅತಿ ಅವಶ್ಯಕ.

ಕೊನೆ ಮಾತು: ಒಂದೆರೆಡು ಸಾಲಿನಲ್ಲಿ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಸರಿಯೇ ತಪ್ಪೇ ತಿಳಿಸಿ ಬಿಡಿ ಎಂದು ಕೇಳುವರ ಸಂಖ್ಯೆ ಬಹಳ ಹೆಚ್ಚು. ಅಂತವರಿಗೆಲ್ಲ ಉತ್ತರ ನೇರ ಮತ್ತು ಸರಳ. ಟಿವಿ ಜಾಹಿರಾತು ನೋಡಿ ಸರಿ ಎಂದು ಹೂಡಿಕೆ ಮಾಡುವುದು ತಪ್ಪು. ನಿಮ್ಮ ಗುರಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ರಿಸ್ಕ್ ಅನ್ನು ವಿಭಜಿಸಿ ಹೂಡಿಕೆ ಮಾಡಿದರೆ ಅದು ಸರಿ. ಹೂಡಿಕೆ ಮಾಡಿದ ಮೇಲೆ ಶಿವನ ಮೇಲೆ ಭಾರ ಹಾಕಿ ಕೂತರೆ ಅದು ಕೂಡ ತಪ್ಪು. 


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp