ಬಿಸಿಲ ಧಗೆ ಬಾಧಿಸದಿರಲಿ ತನುವ (ಕುಶಲವೇ ಕ್ಷೇಮವೇ)
ವಸಂತ ಋತುವಿನಲ್ಲಿ ದೇಹ ಸುಸ್ತಾಗಿ ಸೊರಗುತ್ತದೆ. ಇದರಿಂದ ಮನಸ್ಸಿಗೂ ಹಿತವೆನಿಸುವುದಿಲ್ಲ. ಮಹಿಳೆಯರಲ್ಲಿ ಸುಸ್ತು, ತಲೆನೋವು, ಬೆವರುಗುಳ್ಳೆ, ಕಣ್ಣುರಿ, ಉರಿಮೂತ್ರದ ತೊಂದರೆಗಳು ಹೆಚ್ಚು ಬಾಧಿಸುತ್ತವೆ.
Published: 16th April 2022 11:49 AM | Last Updated: 16th April 2022 02:25 PM | A+A A-

ಬೇಸಿಗೆ (ಸಂಗ್ರಹ ಚಿತ್ರ)
- ಡಾ. ವಸುಂಧರಾ ಭೂಪತಿ
ವಸಂತ ಋತುವಿನಲ್ಲಿ ದೇಹ ಸುಸ್ತಾಗಿ ಸೊರಗುತ್ತದೆ. ಇದರಿಂದ ಮನಸ್ಸಿಗೂ ಹಿತವೆನಿಸುವುದಿಲ್ಲ. ಮಹಿಳೆಯರಲ್ಲಿ ಸುಸ್ತು, ತಲೆನೋವು, ಬೆವರುಗುಳ್ಳೆ, ಕಣ್ಣುರಿ, ಉರಿಮೂತ್ರದ ತೊಂದರೆಗಳು ಹೆಚ್ಚು ಬಾಧಿಸುತ್ತವೆ. ಬೇಸಿಗೆಯ ಆಗಮನವಾಗುತ್ತಿದ್ದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಲ್ಲಿ ಬೇಸಿಗೆಯ ಬೇಸರ ನೀಗಿಸಿಕೊಳ್ಳಬಹುದಾಗಿದೆ. ಕುಡಿಯುವ ನೀರು, ಆಹಾರ ಕ್ರಮ, ಜೀವನ ಶೈಲಿಯ ಬದಲಾವಣೆ ಮಾಡಿಕೊಂಡಲ್ಲಿ ಹೆಚ್ಚಿನ ತೊಂದರೆಗಳು ಬಾಧಿಸಲಾರವು.
ಆಹಾರ: ಬೇಸಿಗೆಯಲ್ಲಿ ಹೊಟ್ಟೆ ಭಾರವಾಗುವಷ್ಟು ಅಂದರೆ ಹೊಟ್ಟೆ ತುಂಬ ಊಟ ಮಾಡುವುದು ಸಲ್ಲದು. ಜೀರ್ಣಕ್ಕೆ ಸುಲಭವಾದ ಜವಗೋಧಿ, ಬಾರ್ಲಿ, ಹೆಸರುಬೇಳೆ, ಹಳೆಯ ಅಕ್ಕಿ, ರಾಗಿ ಮುಂತಾದವುಗಳಿಂದ ತಯಾರಿಸಿದ ಖಾದ್ಯಗಳನ್ನು ತಿನ್ನಬೇಕು. ಆಹಾರ ಜೀರ್ಣವಾಗಲು ಸಹಕಾರಿಯಾಗುವ ಹೀರೇಕಾಯಿ, ಮೂಲಂಗಿ, ನುಗ್ಗೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಬೂದುಗುಂಬಳ ಮುಂತಾದವುಗಳನ್ನು ಹೆಚ್ಚು ಸೇವಿಸಬೇಕು.
ದಂಟು, ಹರಿವೆ, ಸಬ್ಬಿಸಿಗೆ, ಮೆಂತ್ಯ ಹೊಗೆಸೊಪ್ಪು, ಚಕ್ರಮುನಿ ಹೆಚ್ಚುಬಳಸಿ. ಗಟ್ಟಿ ಮೊಸರಿಗಿಂತ ನೀರು ಮಜ್ಜಿಗೆ ಉತ್ತಮ, ಮಜ್ಜಿಗೆಗೆ ಸ್ವಲ್ಪ ಜೀರಿಗೆ ಪುಡಿ, ಕೊತ್ತಬಂಬರಿ ಸೊಪ್ಪು ಉಪ್ಪು, ಕರಿಬೇವು ಹಾಕಿ ಕುಡಿದಲ್ಲಿ ಇನ್ನು ಉತ್ತಮ. ಕರಿದ ತಿಂಡಿ, ಜಿಡ್ಡಿನ ಪದಾರ್ಥಗಳು, ತುಪ್ಪದಲ್ಲಿ ಮಾಡಿದ ಸಿಹಿ ಪದಾರ್ಥಗಳು ಸೇವನೆ ಮಿತಿಯಲ್ಲಿದ್ದಷ್ಟು ಒಳ್ಳೆಯದು.
ಹೆಚ್ಚು ನೀರಿನಾಂಶ ಸೇವನೆ:
ಬೇಸಿಗೆಯೆಂದರೆ ಮೇಲಿಂದ ಮೇಲೆ ಬಾಯಾರಿಕೆ ಇದದ್ದೇ, ಬಾಯಾರಿಕೆ ತಗ್ಗಿಸಲು ಹೆಚ್ಚು ನೀರು ಬೆರೆಸಿದ ಹಣ್ಣಿನ ರಸದಲ್ಲಿ ಬೆಲ್ಲ ಸೇರಿಸಿ ಕುಡಿಯಬೇಕು. ಇಲ್ಲವೇ ತುಂಡು ಬೆಲ್ಲ ಬಾಯಿಗೆ ಹಾಕಿ ನೀರು ಕುಡಿಯಬೇಕು. ನಿಂಬೆಯ ಪಾನಕವನ್ನು ಕುಡಿಯುವುದು ಒಳ್ಳೆಯದು. ಕುಡಿಯುವ ನೀರನ್ನು ಕುದಿಸಿ, ಆರಿಸಿ, ಕೊನ್ನಾರಿಗಡ್ಡೆ, ಸೊಗದೆಬೇರು ಅಥವಾ ಲಾವಂಚ ಇವುಗಳಲ್ಲಿ ಒಂದನ್ನು ಹಾಕಿಟ್ಟುಕೊಳ್ಳುವುದು ಉತ್ತಮ. ಅಲ್ಲದೆ ಜೇನುತುಪ್ಪ ಬೆರೆಸಿದ ನೀರು ಒಳ್ಳೆಯದು. ದ್ರಾಕ್ಷಿ, ಸೇಬು, ಬಾಳೆ, ಸಪೋಟ, ಕಲ್ಲಂಗಡಿ, ಕರಬೂಜ, ಮಾವು ಇವುಗಳಲ್ಲಿ ಯಾವುದಾದರೊಂದಿಗೆ ರಸ ತೆಗೆದು ಬೆಲ್ಲ ಬೆರೆಸಿ ಕುಡಿಯಬೇಕು. ಐಸ್‍ಕ್ರೀಮ್ ತಿನ್ನಬೇಕಾದಲ್ಲಿ ಮನೆಯಲ್ಲಿಯೇ ತಯಾರಿಸಿ ತಿನ್ನುವುದು.
ಬೇಸಿಗೆಯ ಹಣ್ಣುಗಳಾದ ಕಲ್ಲಂಗಡಿ, ಕರಬೂಜ, ನಮ್ಮ ದಾಹ ತಣಿಸಲು ಪ್ರಕೃತಿ ನಮಗೆ ನೀಡಿದ ವರ. ಇವುಗಳಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ನಿರ್ಜಲತೆಯ ತೊಂದರೆಗಳಾಗದಂತೆ ನೋಡಿಕೊಳ್ಳುತ್ತವೆ. ಮನೆಯಲ್ಲಿಯೇ ತಯಾರಿಸಿದ ರಾಗಿಹಿಟ್ಟಿನ ಪಾನೀಯ, ಅಕ್ಕಿಹುರಿಟ್ಟಿನ ಪಾನೀಯಗಳು ಒಳ್ಳೆಯದು.
ಆಹಾರದೊಂದಿಗೆ ತುಪ್ಪ ಮತ್ತು ಹಾಲನ್ನು ಧಾರಾಳವಾಗಿ ಬಳಸಬಹುದು. ಬೇಸಿಗೆಯ ಅತ್ಯುತ್ತಮ ಆಹಾರವೆಂದರೆ ಪಾಯಸ, ಹೆಸರುಬೇಳೆಯ ಪಾಯಸ ಸೇವನೆ ಒಳ್ಳೆಯದು. ಮೆಣಸಿನಕಾಯಿ ಬಳಕೆ ಅತ್ಯಂತ ಕಡಿಮೆ ಇರಲಿ.
ಬೇಲದ ಹಣ್ಣಿನ ಪಾನಕ:
ದಾಹ ನಿವಾರಿಸುತ್ತದೆ. ಬಾಯಿಯಲ್ಲಿನ ದುರ್ಗಂಧ ವಸಡಿನ ರಕ್ತಸ್ರಾವ ನಿಲ್ಲಿಸುತ್ತದೆ. ‘ಸಿ’ ಜೀವಸತ್ವ, ರೋಗನಿರೋಧಕ ಶಕ್ತಿ ನೆಗಡಿಯಾಗದಂತೆ ತಡೆಯಲು ಕಲ್ಲಂಗಡಿಗೆ ಉಪ್ಪು, ಹಾಕಿ ಸೇವನೆ ಮಾಡಬೇಕು.
ಸಕ್ಕರೆ ಕಾಯಿಲೆಯವರಿಗೆ ಪಾನೀಯ:
1. ಕಿತ್ತಲೆ ರಸ + ಕಲ್ಲಂಗಡಿ ರಸ + ನಿಂಬೆಹಣ್ಣಿನ ರಸ ಎಲ್ಲವನ್ನು ಸೇರಿಸಿ ಇದಕ್ಕೆ ಶುಂಠಿ, ಮೆಣಸು, ಜೀರಿಗೆ ಪುಡಿ ಮಾಡಿಟ್ಟುಕೊಂಡು ಎರಡು ಚಿಟಿಕೆ ಬೆರೆಸಿ ಸ್ವಲ್ಪ ಉಪ್ಪು ಬೆರೆಸಿ ಕುಡಿಯಬೇಕು.
2. ಕರುಬೂಜ ರಸ + ಸೌತೆ ರಸ + ಪುದಿನ ರಸ + ನಿಂಬೆರಸ + ಶುಂಠಿ, ಜೀರಿಗೆ ಪುಡಿ + ಉಪ್ಪು ಕುಡಿಯಬೇಕು.
3. ಮಜ್ಜಿಗೆಯಲ್ಲಿ ಸೌತೆಕಾಯಿ ತುರಿದು ಹಾಕಬಹುದು ಇಲ್ಲವೇ ಸೌತೆಕಾಯಿ ರಸ ಬೆರೆಸಿ, ಉಪ್ಪು ಹಾಕಿ ಕುಡಿಯಬೇಕು.
ಬೇಸಿಗೆಯ ಸಾಮಾನ್ಯ ಕಾಯಿಲೆಗಳು
ಬೇಸಿಗೆಯ ಬಿಸಿಲಿನಿಂದ ದೇಹದಲ್ಲಿ ಶಕ್ತಿ ಕಡಿಮೆಯಾಗಿ ಅಶಕ್ತತೆ ಉಂಟಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣುರಿ, ಉರಿಮೂತ್ರ, ತಲೆನೋವು, ಮಲಬದ್ಧತೆ, ಮೈಉರಿ, ಬೆವರುಗುಳ್ಳೆ, ಬೆವರಿನ ದುರ್ಗಂಧ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಕಣ್ಣುರಿ: ಗುಲಾಬಿ ಜಲ ಇಲ್ಲವೇ ಗುಲಾಬಿ ಕಷಾಯದಿಂದ ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ಉರಿಮೂತ್ರ: ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಬೇಕು. ಸೌತೆಕಾಯಿರಸಕ್ಕೆ ಮಜ್ಜಿಗೆ ಬೆರೆಸಿ ಕುಡಿಯಬೇಕು.
ತಲೆನೋವು: ಶ್ರೀಗಂಧವನ್ನು ಹಣೆಗೆ ಲೇಪಿಸಿಕೊಳ್ಳಬೇಕು. ಹುರುಳಿ ಬೇಯಿಸಿ ಕಟ್ಟು ತೆಗೆದು ಜೀರಿಗೆಪುಡಿ, ಉಪ್ಪು ಬೆರೆಸಿ ಕುಡಿಯಬೇಕು.
ಮಲಬದ್ಧತೆ: ಸೊಪ್ಪು, ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಬೇಕು. ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿನೀರಿಗೆ ಒಂದು ಚಮಚೆ ತ್ರಿಫಲಾ ಪುಡಿ ಬೆರೆಸಿ ಕುಡಿಯಬೇಕು.
ಮೈಉರಿ: ಸ್ನಾನದ ನೀರಿಗೆ ಗುಲಾಬಿ ಜಲ ಇಲ್ಲವೇ ನಿಂಬೆರಸ ಬೆರೆಸಿ ಸ್ನಾನ ಮಾಡಬೇಕು.
ಬೆವರಿನ ಗುಳ್ಳೆ: ಉತ್ತರ ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಬೆವರು ಗುಳ್ಳೆ ತುಂಬ ಹೆಚ್ಚು.
ಬೇಸಿಗೆಯ ಅತಿ ಬೆವರಿನಿಂದ ರಕ್ಷಿಸಲು ದಿನಕ್ಕೆರಡು ಬಾರಿ ತಣ್ಣಿರು ಸ್ನಾನ ಮಾಡಬೇಕು. ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವ ಇರುತ್ತದೆ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರು ಬಟ್ಟೆಯನ್ನು ತಣ್ಣಿರಿನಲ್ಲಿ ಮೈಯನ್ನು ಆಗಾಗ ಒರೆಸಿಕೊಳ್ಳಬೆಕು. ನೀರಿಗೆ ಸ್ವಲ್ಪ ಕರ್ಪೂರ ಹಾಕಿ ಸ್ನಾನ ಮಾಡಬೇಕು. ಮೈಗೆ ಬೇವಿನೆಲೆಯನ್ನು ಅರೆದು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಬೇಕು. ತೆಳುವಾದ ಹತ್ತಿಬಟ್ಟೆ ಧರಿಸಬೇಕು. ಸಡಿಲವಾದ ಬಟ್ಟೆ ಧರಿಸಿದಲ್ಲಿ ಗುಳ್ಳೆಗಳ ಸಮಸ್ಯೆಗಳು ಕಾಡುವುದಿಲ್ಲ.
ಹಾಲಿನಲ್ಲಿ ಅರಶಿನ ಬೆರೆಸಿ ಮೈಗೆ ಲೇಪಿಸಿ ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಗುಳ್ಳೆಗಳು ವಾಸಿಯಾಗುವುದಲ್ಲದೆ ಚರ್ಮಕ್ಕೆ ಕಾಂತಿಯುಂಟಾಗುತ್ತದೆ.
ಅತಿ ಬೆವರಿನಿಂದ ರಕ್ಷಿಸಲು:
ಕೆಲವರಲ್ಲಿ ಅತಿಯಾದ ಬೆವರಿನ ಸಮಸ್ಯೆ ಕಾಡುತ್ತಿರುತ್ತದೆ. ಅಂತಹವರು ಅಳಲೆಕಾಯಿ, ಬೇವಿನ ಎಲೆ, ಲೋಧ್ರ, ದಾಳಿಂಬೆ ಸಿಪ್ಪೆಗಳನ್ನು ಸೇರಿಸಿ ಪುಡಿ ತಯಾರಿಸಿಟ್ಟುಕೊಳ್ಳಬೇಕು. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಮೈಗೆಲ್ಲ ತೆಳುವಾಗಿ ಲೇಪಿಸಿಕೊಂಡು ಒಂದು ಗಂಟೆಯ ನಂತರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಬೆವರು ಕಡಿಮೆಯಾಗುತ್ತದೆ ಮತ್ತು ಬೆವರಿನಿಂದ ಬರುವ ಕೆಟ್ಟ ವಾಸನೆ ದೂರವಾಗುತ್ತದೆ.
ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com