ಪಾರ್ಕಿನ್ಸನ್ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಇಲ್ಲಿದೆ ಮಾಹಿತಿ... (ಕುಶಲವೇ ಕ್ಷೇಮವೇ)

ಒಂದು ದಿನ ನನ್ನ ಕ್ಲಿನಿಕ್ಕಿಗೆ 60 ವರ್ಷದ ಹಿರಿಯರೊಬ್ಬರು ಬಂದು “ಡಾಕ್ಟ್ರೇ, ಕೆಲವು ದಿನಗಳಿಂದ ಕೈ ನಡುಗುತ್ತಿದೆ. ಸರಿಯಾಗಿ ಬ್ಯಾಲೆನ್ಸ್ ಸಿಗದೇ ನಡೆಯುವುದು ಕಷ್ಟ ಆಗುತ್ತಿದೆ” ಎಂದು ಹೇಳಿದರು. ಈ ರೀತಿ ವಯಸ್ಸಾದವರಿಗೆ ಆಗುವುದು ಸಹಜ.

Published: 23rd April 2022 11:49 AM  |   Last Updated: 23rd April 2022 02:05 PM   |  A+A-


parkinson's disease

ಪಾರ್ಕಿನ್ಸನ್ ಕಾಯಿಲೆ (ಸಂಗ್ರಹ ಚಿತ್ರ)

ಒಂದು ದಿನ ನನ್ನ ಕ್ಲಿನಿಕ್ಕಿಗೆ 60 ವರ್ಷದ ಹಿರಿಯರೊಬ್ಬರು ಬಂದು “ಡಾಕ್ಟ್ರೇ, ಕೆಲವು ದಿನಗಳಿಂದ ಕೈ ನಡುಗುತ್ತಿದೆ. ಸರಿಯಾಗಿ ಬ್ಯಾಲೆನ್ಸ್ ಸಿಗದೇ ನಡೆಯುವುದು ಕಷ್ಟ ಆಗುತ್ತಿದೆ” ಎಂದು ಹೇಳಿದರು. ಈ ರೀತಿ ವಯಸ್ಸಾದವರಿಗೆ ಆಗುವುದು ಸಹಜ. ಕೈ ಮತ್ತು ಕಾಲುಗಳು ಸರಿಯಾಗಿ ನಿಯಂತ್ರಣಕ್ಕೆ ಸಿಗದೇ ಇರುವುದು ಕಂಡುಬರುತ್ತದೆ. ನಂತರ ಕೂಲಂಕುಷವಾಗಿ ಅವರನ್ನು ಪರೀಕ್ಷಿಸಿದಾಗ ಅವರಿಗೆ ಪಾರ್ಕಿನ್ಸನ್‍ ಕಾಯಿಲೆಯ ಲಕ್ಷಣಗಳಿರುವುದು ಗೊತ್ತಾಯಿತು. 

ಪಾರ್ಕಿನ್ಸನ್ ಕಾಯಿಲೆ ವಯಸ್ಸಾದಂತೆಲ್ಲಾ ಉಲ್ಬಣಿಸುವ ಕಾಯಿಲೆ, ಇದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಯಾಗಿದ್ದು ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಕಾಯಿಲೆಯಿಂದ ಮೆದುಳಿನ ಅಸಹಜತೆಯ ಈ ಕಾಯಿಲೆಯಿಂದ ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಚಲನವಲನ ಮತ್ತು ಸಂವಹನದ ತೊಂದರೆ ಉಂಟಾಗಬಹುದು. ಕೆಲವೊಮ್ಮೆ ಈ ಕಾಯಿಲೆ ಅನುವಂಶಿಕವಾಗಿಯೂ ಕುಟುಂಬಸ್ಥರಲ್ಲಿ ಕಾಣಿಸಿಕೊಳ್ಳಬಹುದು. ಒಂದು ಕುಟುಂಬದಲ್ಲಿ ಹಿಂದಿನಿಂದಲೂ ನರಗಳ ಕಾಯಿಲೆಯ ಸಮಸ್ಯೆ ಇದ್ದಲ್ಲಿ, ಆ ಕುಟುಂಬದವರಲ್ಲಿ ನರಗಳ ದೌರ್ಬಲ್ಯದ ಕಾಯಿಲೆ ಪಾರ್ಕಿನ್ಸನ್‍ ರೋಗದ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ಪಾರ್ಕಿನ್ಸನ್ ಕಾಯಿಲೆಯ ಪತ್ತೆ ಹೇಗೆ?

ಇತ್ತೀಚಿನ ಕೆಲವು ವರ್ಷಗಳವರೆಗೆ ಪಾರ್ಕಿನ್ಸನ್‍ ಕಾಯಿಲೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ವ್ಯಾಪಕವಾದ ಸಂಶೋಧನೆಯ ನಂತರ ಪಾರ್ಕಿನ್ಸನ್ ಕಾಯಿಲೆಗೆ ವಿಜ್ಞಾನಿಗಳು ಇದಕ್ಕೆ ಕಾರಣಗಳನ್ನು ಮತ್ತು ಇದರ ಲಕ್ಷಣಗಳನ್ನು ಕಂಡುಹಿಡಿದಿದ್ದಾರೆ. ಆರಂಭದ ಹಂತದಲ್ಲಿ ಈ ಕಾಯಿಲೆಯ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಆರಂಭದಲ್ಲಿ ಒಂದೇ ಕಾಲಿನಲ್ಲಿ ಅಥವಾ ಕೈಯಲ್ಲಿ ನಡುಕ ಅಥವಾ ಕಾಲು ಸೆಟೆತ ಹಾಗೂ ಕಾಲು ಎಳೆತ ಕಾಣಿಸಿಕೊಳ್ಳಬಹುದು. ದೇಹದ ಸಮತೋಲನ ಮತ್ತು ನಡಿಗೆ ಕಷ್ಟವಾಗಬಹುದು. 

ಪಾರ್ಕಿನ್ಸನ್ ಫೌಂಡೇಶನ್‍ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ವಿಶ್ವದ 10 ದಶಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೆದುಳಿನಲ್ಲಿನ ನರಕೋಶಗಳು ಮುರಿದು ಹೋದಾಗ ಅಥವಾ ನಾಶವಾದಾಗ ಈ ಕಾಯಿಲೆ ಬರುತ್ತದೆ.

ಪಾರ್ಕಿನ್ಸನ್ ಕಾಯಿಲೆ ಮುಖ್ಯವಾಗಿ ಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಇದು ದಿನೇ ದಿನೇ ಹೆಚ್ಚಾಗುವ ನರವೈಜ್ಞಾನಿಕ ಕಾಯಿಲೆಯಾಗಿದೆ. ಪಾರ್ಕಿನ್ಸನ್‍ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಕೈಕಾಲುಗಳಲ್ಲಿ ನಡುಕವನ್ನು ಅನುಭವಿಸುತ್ತಾರೆ. ಜೊತೆಗೆ ಠೀವಿ ಮತ್ತು ಚಲನೆಯ ಕೊರತೆಯನ್ನು ಸಹ ಅನುಭವಿಸುತ್ತಾರೆ, ಇದು ಸಮಯ ಕಳೆದಂತೆ ಉಲ್ಬಣಗೊಳ್ಳುತ್ತದೆ. ಮೆದುಳಿನೊಳಗಿನ ನರ ಕೋಶಗಳಲ್ಲಿ ಹಾನಿಯಾಗುವುದರಿಂದ ಇದು ಸಂಭವಿಸುತ್ತದೆ.

ಪಾರ್ಕಿನ್ಸನ್‍ ಕಾಯಿಲೆ ಹೇಗೆ ಬಾಧಿಸುತ್ತದೆ?

ಪಾರ್ಕಿನ್ಸನ್‍ ಕಾಯಿಲೆಯು ಕೇಂದ್ರ ನರಮಂಡಲದ ದೀರ್ಘಕಾಲಿಕವಾಗಿ ಕ್ಷೀಣಗೊಳ್ಳುವ ಕಾಯಿಲೆಯಾಗಿದೆ. ಕೆಲವು ಪ್ರಕರಣಗಳನ್ನು ಆನುವಂಶಿಕ ಅಥವಾ ಪರಿಸರದ ಅಂಶಗಳು ಕಾರಣವೆಂದು ಹೇಳಬಹುದು. ಇದರ ರೋಗನಿರ್ಣಯ ಮಾಡಲು ಯಾವುದೇ ಒಂದು ಮಾರ್ಗ ಇಲ್ಲ. ನಿಖರವಾಗಿ ಈ ರೋಗನಿರ್ಣಯ ಮಾಡುವುದು – ವಿಶೇಷವಾಗಿ ಅದರ ಆರಂಭಿಕ ಹಂತಗಳಲ್ಲಿ –ಕಷ್ಟಕರವಾಗಿದೆ. ಸಾಮಾನ್ಯವಾಗಿ ನಡುಕ, ನಿಧಾನ ಚಲನೆ, ತೋಳುಗಳು, ಕಾಲುಗಳ ಬಿಗಿತ, ಸಮತೋಲನದ ತೊಂದರೆ ಮತ್ತು ಭಂಗಿ ಅಸ್ಥಿರತೆಗಳಿಂದ ಇದನ್ನು ಗುರುತಿಸುತ್ತಾರೆ. ಸಾಮಾನ್ಯವಾಗಿ, ಪಾರ್ಕಿನ್ಸನ್‍ ರೋಗನಿರ್ಣಯವನ್ನು ಮೊದಲು ಕುಟುಂಬದ ವೈದ್ಯರಿಂದ ಮಾಡಲಾಗುತ್ತದೆ. ನಂತರ ತಜ್ಞವೈದ್ಯರು ಮತ್ತು ನರರೋಗ ತಜ್ಞರು ಇದನ್ನುಗುರುತಿಸುತ್ತಾರೆ. ಪಾರ್ಕಿನ್ಸನ್‍ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ಔಷಧಿಗಳು ರೋಗಲಕ್ಷಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪಾರ್ಕಿನ್ಸನ್‍ ಕಾಯಿಲೆಯೊಂದಿಗೆ ಉತ್ತಮವಾಗಿ ಬದುಕಲು ಮೊದಲ ಹೆಜ್ಜೆ ಈ ಕಾಯಿಲೆಯನ್ನು ಏನು ಮತ್ತು ಇದು ಹೇಗೆ ಉಲ್ಬಣಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ.

ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ

ಪಾರ್ಕಿನ್ಸನ್ ಕಾಯಿಲೆಗೆ ಯಾವುದೇ ಪ್ರಮಾಣಿತ ಚಿಕಿತ್ಸೆಇಲ್ಲ. ಪಾರ್ಕಿನ್ಸನ್‍ ರೋಗವಿರುವ ಪ್ರತಿಯೊಬ್ಬ ವ್ಯಕ್ತಿಗೆ ಅವರ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ.ಇದರ ಚಿಕಿತ್ಸೆ ಔಷಧಿ ಮತ್ತು ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿವೆ. ಇತರ ಚಿಕಿತ್ಸೆಗಳಲ್ಲಿ ಜೀವನಶೈಲಿಯ ಮಾರ್ಪಾಡುಗಳು ಸೇರಿವೆ. ಅದರಲ್ಲಿಯೂ ಸಾಕಷ್ಟು ವಿಶ್ರಾಂತಿ ಮತ್ತು ವ್ಯಾಯಾಮವನ್ನು ಮಾಡುವುದು ಬಹಳ ಮುಖ್ಯವಾಗಿದೆ.

ಈ ಕಾಯಿಲೆ ಬರದಂತೆ ತಡೆಗಟ್ಟಲು ಜೀವನಶೈಲಿಯನ್ನು ಆರೋಗ್ಯಕರವಾಗಿ ಬದಲಾಯಿಸಿಕೊಳ್ಳಬೇಕು. ದೇಹ, ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಪೋಷಕಾಂಶಗಳು, ಪ್ರೊಟೀನ್‍ಗಳಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ದೇಹದ ಪರಿಸ್ಥಿತಿಗೆ ಒಗ್ಗುವಂಥಹಾ ಲಘುವಾದ ವ್ಯಾಯಾಮಗಳನ್ನು ಮಾಡಬೇಕು.

ಪಾರ್ಕಿನ್ಸನ್ ಕಾಯಿಲೆಗೆ ಆಯುರ್ವೇದ ಚಿಕಿತ್ಸೆ

ಆಯುರ್ವೇದದಲ್ಲಿ ಇದಕ್ಕೆ ಹಲವು ವಿಧಗಳ ಚಿಕಿತ್ಸೆಗಳುಂಟು. ಪಂಚಕರ್ಮ, ಕೆಲವು ಔಷಧಿಗಳಿಂದ ಬಾಧಿತ ಅಂಗಗಳ ಮಸಾಜು, ಅಭ್ಯಂಗ, ಸ್ವೇದನ, ಶಿರೋಧಾರಾದಂತ ಬೇರೆ ಬೇರೆ ಚಿಕಿತ್ಸೆಗಳಿವೆ. ಬ್ರಾಹ್ಮಿ, ಜೋತಿಷ್ಮತಿ ಮೂಲಿಕೆಗಳಿಂದ ತಯಾರಿಸಿದ ಔಷಧಿಗಳು ಉತ್ತಮ ಪರಿಣಾಮಗಳನ್ನು ಉಂಟುಮಾಡುತ್ತವೆ. ಒಂದೆಲಗವನ್ನು (ಬ್ರಾಹ್ಮಿ) ತಂಬುಳಿ, ಸಾರು, ಚಟ್ನಿ ಮತ್ತು ಪಲ್ಯವನ್ನು ತಯಾರಿಸಿ ಸೇವಿಸಬೇಕು. ಲೇಹ್ಯ ಮತ್ತು ಕಷಾಯಗಳು ಲಭ್ಯವಿವೆ. ಪಾರ್ಕಿನ್ಸನ್‍ ಕಾಯಿಲೆಯಿಂದ ಪ್ರಭಾವಿತವಾಗಿರುವ ದೇಹದ ಭಾಗಕ್ಕೆ ಔಷಧೀಯ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯವನ್ನು ನಿಧಾನವಾಗಿ ಹನಿಹನಿಯಾಗಿ ಧಾರೆಯ ರೂಪದಲ್ಲಿ ಹಾಕುತ್ತಾರೆ. ಇದೇ ರೀತಿಯಲ್ಲಿ ಎಲ್ಲಾ ಅಂಗಗಳಿಗೆ ಸರ್ವಾಂಗಧಾರಾ ಚಿಕಿತ್ಸೆಯೂ ಉಂಟು. ಜೊತೆಗೆ ಉತ್ತಮ ಪೋಷಕಾಂಶಭರಿತ ಆಹಾರ ಸೇವನೆ ಮುಖ್ಯ. ಡಯಾಬಿಟಿಸ್, ಬಿಪಿ ಅಥವಾ ಹೃದಯದ ರೋಗಗಳಂತಹ ಇತರ ಕಾಯಿಲೆಗಳಿದ್ದರೆ ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯ ಮಾನಸಿಕ ನೆಮ್ಮದಿ. ಜೀವನದಲ್ಲಿ ತುಂಬಾ ಒತ್ತಡ ಇದ್ದರೆ ಮಾನಸಿಕ ನೆಮ್ಮದಿ ಇರುವುದಿಲ್ಲ. ದಿನನಿತ್ಯ ನಿದ್ರೆಯನ್ನು ಸರಿಯಾಗಿ ಮಾಡಬೇಕು. ಆರೋಗ್ಯಕರವಾದ ನಿದ್ರೆ ಇರದಿದ್ದರೆ ಈ ಕಾಯಿಲೆಯ ಲಕ್ಷಣಗಳು ಉಲ್ಬಣಗೊಳ್ಳುತ್ತವೆ.


ಡಾ. ವಸುಂಧರಾ ಭೂಪತಿ
ಮೊಬೈಲ್: 9986840477
ಇ-ಮೇಲ್: bhupathivasundhara@gmail.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp