
ಹೂಡಿಕೆ ಅಥವಾ ಟ್ರೇಡಿಂಗ್ (ಸಂಗ್ರಹ ಚಿತ್ರ)
ಎಷ್ಟು ಹಣವನ್ನ ಮಾರುಕಟ್ಟೆಯಲ್ಲಿ ತೊಡಗಿಸಬೇಕು ಎನ್ನುವುದು ಅತ್ಯಂತ ಹೆಚ್ಚು ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಮಾತ್ರ ಉತ್ತರವನ್ನ ಪ್ರತಿಯೊಬ್ಬರೂ ಅವರೇ ಕಂಡು ಕೊಳ್ಳಬೇಕು. ಅವರವರ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಇದಕ್ಕೆ ಉತ್ತರವನ್ನ ಕಂಡುಕೊಳ್ಳಬೇಕು. ಇಲ್ಲಿ ಒಂದು ಮಾತನ್ನ ಮಾತ್ರ ಸೇರಿಸಲು ಬಯಸುತ್ತೇನೆ. ಸಾಲ ಮಾಡಿ ಷೇರು ಮಾರುಕಟ್ಟೆಯನ್ನ ಪ್ರವೇಶಿಸಬಾರದು. ಏಕೆಂದರೆ ಸಾಲ ಮಾಡಿ ಮಾಡಿದ ಹೂಡಿಕೆ ಎಂದಿಗೂ ಹೂಡಿಕೆ ಎನ್ನಿಸಿಕೊಳ್ಳುವುದಿಲ್ಲ. ಇವತ್ತು ನಮ್ಮ ಸಮಾಜ ಸಂಕ್ರಮಣ ಕಾಲಘಟ್ಟದಲ್ಲಿದೆ, ನಾವಿನ್ನೂ ಪೂರ್ಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಹೂಡಿಕೆಯ ಮನಸ್ಥಿತಿಯಿಂದ ಹೊರಬಂದು ಮುಕ್ತ ಮನಸ್ಸಿನಿಂದ ಮಾರುಕಟ್ಟೆಯನ್ನ ಅಪ್ಪುವ ಪರಿಸ್ಥಿತಿಯಲ್ಲಿ ಇಲ್ಲ, ಹಾಗೆಂದ ಮಾತ್ರಕ್ಕೆ ಮಾರುಕಟ್ಟೆಯನ್ನ ನಿರ್ಲಕ್ಷಿಸಿ ಬದುಕನ್ನ ಸಾಗಿಸುತ್ತೇವೆ ಎನ್ನುವ ಸಮಯದಲ್ಲಿ ಕೂಡ ಇಂದು ನಾವಿಲ್ಲ. ಅದಕ್ಕೆ ಇದೊಂದು ಸಂಕ್ರಮಣ ಕಾಲಘಟ್ಟ ಎಂದದ್ದು. ಇಂದಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಬದುಕುವುದು ಕಷ್ಟ ಎನ್ನುವ ಮಟ್ಟಕ್ಕೆ ಬದಲಾವಣೆಯಾಗುತ್ತಿದೆ. ಇಂತಹ ಬದಲಾವಣೆಯ ಸಮಯದಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಎಲ್ಲಕ್ಕೂ ಮೊದಲು ಟ್ರೇಡಿಂಗ್ ಮತ್ತು ಇನ್ವೆಸ್ಟ್ಮೆಂಟ್ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿರಲಿ. ಹಣವನ್ನ ಹೆಚ್ಚು ಸಮಯ ಯಾವುದಾದರೂ ಷೇರಿನ ಮೇಲೆ ಬಿಟ್ಟರೆ ಅದನ್ನ ಹೂಡಿಕೆ ಎನ್ನಬಹುದು. ಷೇರು ಕೊಂಡು ಅಂದಿನ ದಿನ ಅಥವಾ ಕೇವಲ ಒಂದೆರೆಡು ವಾರ ಅಥವಾ ತಿಂಗಳಲ್ಲಿ ಕೇವಲ ಲಾಭದ ಉದ್ದೇಶದಿಂದ ಮಾರಿದರೆ ಅದನ್ನ ಟ್ರೇಡಿಂಗ್ ಎನ್ನಬಹುದು. ಎಲ್ಲವುದರ ಉದ್ದೇಶ ಲಾಭವೇ ಆಗಿದ್ದರೂ ಟ್ರೇಡಿಂಗ್ ಮತ್ತು ಇನ್ವೆಸ್ಟ್ಮೆಂಟ್ ನಡುವಿನ ವ್ಯತ್ಯಾಸ ಮನಸ್ಥಿತಿಯ ವ್ಯತ್ಯಾಸವನ್ನ ತಿಳಿಸುತ್ತದೆ. ಯಾವುದು ಬೆಸ್ಟ್ ? ಇದಕ್ಕೆ ಉತ್ತರ ಕೂಡ ನಿಮ್ಮ ಜೇಬು , ಮನಸ್ಥಿತಿ ಉತ್ತರವನ್ನ ಹುಡುಕಿಕೊಳ್ಳುತ್ತವೆ. ನಿಮ್ಮ ಸ್ಥಿತಿಗೆ ಯಾವುದು ಹೆಚ್ಚು ಹೊಂದುತ್ತದೆ ಅದನ್ನ ಮಾಡುವುದು ಉತ್ತಮ. ಸಾಮಾನ್ಯವಾಗಿ ಹೂಡಿಕೆಯಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಕಡಿಮೆ . ಟ್ರೇಡಿಂಗ್ ಮಲ್ಲಿ ಈ ಮಾತನ್ನ ಹೇಳಲು ಬರುವುದಿಲ್ಲ.
ಮಾರುಕಟ್ಟೆಯಲ್ಲಿ ಷೇರು ಕೊಳ್ಳುವ ಕ್ರಿಯೆಯನ್ನ ಎರಡು ವಿಧಾನದಲ್ಲಿ ಮಾಡಬಹುದು .
1. ಇಂಟ್ರಾ ಡೇ ಟ್ರೇಡಿಂಗ್
2. ಡೆಲಿವರಿ ಟ್ರೇಡಿಂಗ್
ಇಂಟ್ರಾ ಡೇ ಟ್ರೇಡಿಂಗ್: ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಅಂದು ಕೊಂಡ ಷೇರನ್ನ ಅಂದೇ ಮಾರುತ್ತಾರೆ. ಹೀಗೆ ಷೇರು ಕೊಳ್ಳುವ ಉದ್ದೇಶ ಅಂದಿನ ದಿನದಲ್ಲಿ ಎಷ್ಟು ಸಾಧ್ಯ ಅಷ್ಟು ಲಾಭವನ್ನ ಮಾಡಿಕೊಳ್ಳುವುದಾಗಿರುತ್ತದೆ. ಇದು ಹೂಡಿಕೆಯ ಲೆಕ್ಕಕ್ಕೆ ಬರುವುದಿಲ್ಲ. ಇದನ್ನ ಕೇವಲ ಟ್ರೇಡಿಂಗ್ ಎನ್ನಬಹುದು. ಇದರಿಂದ ಮಾರುಕಟ್ಟೆ ಮುಂದಿನ ದಿನದಲ್ಲಿ ಏನಾಗುತ್ತದೆ ಎಂದು ತಲೆಕೆಡಿಸಕೊಳ್ಳುವ ಗೋಜಿಲ್ಲ. ಸಣ್ಣ ಮೊತ್ತದ ಹಣ ಬಂಡವಾಳವಿದ್ದರೆ ಸಾಕು. ಬಂಡವಾಳ ಹೆಚ್ಚು ದಿನ ಒಂದೆಡೆ ಉಳಿದುಕೊಳ್ಳುವುದಿಲ್ಲ. ಆದರೆ ಇದರಲ್ಲಿ ಟ್ರೇಡ್ ಮಾಡುವ ವ್ಯಕ್ತಿ ಸದಾ ಜಾಗೃತ ಅವಸ್ಥೆಯಲ್ಲಿ ಇರಬೇಕಾಗುತ್ತದೆ. ಲಾಭದ ಜೊತೆಗೆ ನಷ್ಟ ಕೂಡ ಅಷ್ಟೇ ವೇಗದಲ್ಲಿ ಆಗುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ .
ಡೆಲಿವರಿ ಟ್ರೇಡಿಂಗ್: ಡೆಲಿವರಿ ಟ್ರೇಡಿಂಗ್ ನಲ್ಲಿ ಷೇರನ್ನ ಖರೀದಿ ಮಾಡಿ ಮುಂದಿನ ದಿನಗಳಲ್ಲಿ ಲಾಭ ಬಂದಾಗ ಮಾರಲು ಇಟ್ಟುಕೊಳ್ಳುತ್ತಾರೆ. ಇದಕ್ಕೆ ಸಮಯ ಮಿತಿ ಇರುವುದಿಲ್ಲ ಅಂದರೆ ಇದನ್ನ ಕೊಂಡ ದಿನವೇ ಮಾರಬೇಕು ಅಥವಾ ಇಷ್ಟು ದಿನದಲ್ಲಿ ಮಾರಬೇಕು ಎನ್ನುವ ಯಾವ ಕಿರಿಕಿರಿ ಇಲ್ಲ . ಖರೀದಿದಾರ ಯಾವಾಗ ಬಯಸುತ್ತಾನೆ ಆಗ ಮಾರುವ ಅವಕಾಶವಿದೆ. ಮಾರದೆ ಉಳಿಸಿಕೊಂಡ ಷೇರು ಗಳ ಮೇಲೆ ಎಲ್ಲರಿಗೆ ಸಿಕ್ಕಹಾಗೆ ಡಿವಿಡೆಂಡ್ ಕೂಡ ಸಿಗುತ್ತದೆ. ಇಂತಹ ಖರೀದಿಯನ್ನ ಇನ್ವೆಸ್ಟ್ಮೆಂಟ್ ಅಥವಾ ಹೂಡಿಕೆ ಎಂದು ಕರೆಯಬಹುದು.
ಹೀಗೆ ಷೇರು ಖರೀದಿಯಲ್ಲಿ ಷೇರಿನ ಮಾಲೀಕರಾಗುವ ಅಥವಾ ಮಾಲೀಕರಾಗದೆ ನಿಗದಿತ ಸಮಯದಲ್ಲಿ ಷೇರನ್ನ ಮಾರುವ ಅಧಿಕಾರವನ್ನ ಕೂಡ ಪಡೆದುಕೊಳ್ಳಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಅದರದೇ ಅದ ವ್ಯವಹರಿಸುವ ರೀತಿಯೂ ಇದೆ.
ಹೀಗಾಗಿ ಮಾರುಕಟ್ಟೆಯನ್ನ:
1. ಕ್ಯಾಶ್ ಮಾರುಕಟ್ಟೆ
2. ಆಪ್ಷನ್ ಮಾರುಕಟ್ಟೆ
3. ಫ್ಯೂಚರ್ ಮಾರುಕಟ್ಟೆ
ಎಂದು ಮೂರು ವಿಭಾಗಗಳನ್ನಾಗಿ ವಿಗಂಡಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆತನ ಹಣಕಾಸು ಮತ್ತು ವಿಶ್ಲೇಷಣೆಗೆ ಅನುಗುಣವಾಗಿ ಬೇಕಾದ ಮಾರುಕಟ್ಟೆಯಲ್ಲಿ ಬೇಕಾದ ರೀತಿಯಲ್ಲಿ ಹೂಡಿಕೆಯನ್ನ ಮಾಡಬಹುದು.
ಕ್ಯಾಶ್ ಮಾರುಕಟ್ಟೆ ಎಂದರೇನು?
ಇದನ್ನ ಡೆಲಿವರಿ ಟ್ರೇಡಿಂಗ್ ಗೆ ಹೋಲಿಸಬಹುದು. ಅಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ನಮಗಿಷ್ಟವಾಗ ಷೇರನ್ನ ನಾವು ಹಣ ಕೊಟ್ಟು ಖರೀದಿಸಬಹುದು. ಒಂದೆರಡು ದಿನದಲ್ಲಿ ಇದು ನಮ್ಮ ಡಿಮ್ಯಾಟ್ ಖಾತೆಗೆ ಜಮಾ ಆಗುತ್ತದೆ. ಅಂದಿನ ದಿನದಿಂದ ಆ ಷೇರಿನ ಮಾಲೀಕತ್ವ ಕೊಡವರದ್ದಾಗುತ್ತದೆ. ಇದನ್ನ ಯಾವುದೇ ಸಮಯದಲ್ಲಿ ಬೇಕಾದರೂ ಮಾರಬಹುದು. ಮಾರದೆ ಇಟ್ಟು ಕೊಂಡಿದ್ದರೆ ಡಿವಿಡೆಂಡ್ ನೀಡುವ ಸಮಯದಲ್ಲಿ ಡಿವಿಡೆಂಡ್ ಕೂಡ ಸಿಗುತ್ತದೆ. ಇದನ್ನ ಮಾರದೆ ಜಿವಿತಾವಧಿಗೆ ಕೂಡ ಇಟ್ಟು ಕೊಳ್ಳಬಹದು.
ಆಪ್ಷನ್ ಮಾರುಕಟ್ಟೆ ಎಂದರೇನು?
ಆಪ್ಷನ್ ಎನ್ನುವುದು ಒಂದು ಒಪ್ಪಂದ. ಇದರ ಪ್ರಕಾರ ನಿಗದಿ ಪಡಿಸಿದ ಸಮಯದಲ್ಲಿ ಷೇರನ್ನ ಕೊಳ್ಳುವ ಅಥವಾ ಮಾರುವ ಅಧಿಕಾರವನ್ನ ನೀಡುತ್ತದೆ. ಆದರೆ ಕೊಳ್ಳಲೇ ಬೇಕು ಅಥವಾ ಮಾರಲೇ ಬೇಕು ಎನ್ನುವ ಬಾಧ್ಯತೆ ಇರುವುದಿಲ್ಲ. ಆದರೆ ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವುದರ ಮೇಲೆ ಕೂಡ ಇದು ನಿರ್ಧಾರವಾಗುತ್ತದೆ. ಆಪ್ಷನ್ ಖರೀದಿ ಮಾಡುವ ದಿನದಂದು ನಿರ್ದಿಷ್ಟ ಮೊತ್ತವನ್ನ ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಸ್ಟ್ರೈಕ್ ರೇಟ್ ಎನ್ನುತ್ತಾರೆ. ನಿಗದಿತ ದಿನಾಂಕದ ದಿನ ಖರೀದಿದಾರ ನಿಜಕ್ಕೂ ಖರೀದಿ ಮಾಡಲು ಬಯಸಿದರೆ ಅದಕ್ಕೆ 'ಕಾಲ್ ಆಪ್ಷನ್ ' ಎನ್ನುತ್ತಾರೆ. ಅದೇ ಮಾರಟಗಾರ ಇದನ್ನ ಕೊಂಡು ಕೊಳ್ಳುವಂತೆ ಖರೀದಿದಾರನಿಗೆ ತಾಕೀತು ಮಾಡಿದರೆ ಅದನ್ನ 'ಪುಟ್ ಆಪ್ಷನ್ ' ಎನ್ನುತ್ತಾರೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಇಲ್ಲಿ ಷೇರಿನ ಮಾಲೀಕತ್ವ ಖರೀದಿದಾರನ ಬಳಿ ತಕ್ಷಣ ಇರುವುದಿಲ್ಲ. ನಿಗದಿತ ಸಮಯದ ನಂತರ ಕೂಡ ಮಾಲೀಕತ್ವ ಹೊಂದುವುದು ಅಥವಾ ಬಿಡುವುದು ಕೂಡ ಒಪ್ಪಂದದ ಮೇಲೆ ನಿಗದಿಯಾಗುತ್ತದೆ.
ಫ್ಯೂಚರ್ ಮಾರುಕಟ್ಟೆ: ಇದು ಕೂಡ ಮುಂದಿನ ದಿನಾಂಕದಲ್ಲಿ ಸೂಚಿತವಾಗಿರುವ ನಿಗದಿತ ಮೌಲ್ಯದ ಷೇರನ್ನ ಖರೀದಿಸುವ ಒಪ್ಪಂದ . ಇದರಲ್ಲಿ ಕೂಡ ಖರೀದಿದಾರ ಷೇರಿನ ಮಾಲೀಕತ್ವ ಪಡೆಯುವುದಿಲ್ಲ. ಹೀಗಾಗಿ ಎಂದೆಂದಿಗೂ ಡಿವಿಡೆಂಡ್ ಸಿಗುವುದಿಲ್ಲ. ಇಲ್ಲಿ ಕನಿಷ್ಠ ಇಷ್ಟು ಎಂದು ಸಂಖ್ಯೆ ನಿಗದಿಯಾಗಿರುತ್ತದೆ. ಅದಕ್ಕೆ ಕಡಿಮೆ ಷೇರನ್ನ ಕೊಳ್ಳುವ ಹಾಗಿಲ್ಲ. ಮೂರು ತಿಂಗಳ ಒಳಗೆ ಒಪ್ಪಂದದ ಪ್ರಕಾರ ಕೊಳ್ಳುವ /ಮಾರುವ ಅಥವಾ ಅದನ್ನ ಮಾಡದೆ ನಷ್ಟ ಅಥವಾ ಲಾಭವನ್ನ ಮಾತ್ರ ಭರಿಸುವ ಅವಕಾಶವಿರುತ್ತದೆ.
ಹೀಗಾಗಿ ಆಪ್ಷನ್ ಮತ್ತು ಫ್ಯೂಚರ್ ಮಾರುಕಟ್ಟೆಯನ್ನ ಒಂದು ರೀತಿಯಲ್ಲಿ ಜೂಜು ಎನ್ನಬಹುದು. ಕ್ಯಾಶ್ ಮಾರುಕಟ್ಟೆಯಲ್ಲಿನ ಹೂಡಿಕೆ ಮಾತ್ರ ಇನ್ವೆಸ್ಟ್ಮೆಂಟ್ ಎನ್ನಿಸಿಕೊಳ್ಳುತ್ತದೆ. ಮೂರರಲ್ಲೂ ಲಾಭವೇ ಮುಖ್ಯವಾದರೂ ಆಪ್ಷನ್ ಮತ್ತು ಫ್ಯೂಚರ್ ನಲ್ಲಿ ಮಾಲೀಕತ್ವ ಪಡೆಯದೇ ಕೇವಲ ಲಾಭದ ಉದ್ದೇಶದಿಂದ ಮಾಡುವ ಸ್ಪೆಕ್ಯುಲೇಷನ್ ಎನ್ನಿಸಿಕೊಳ್ಳುತ್ತದೆ. ಗಟ್ಟಿಯಾಗಿ ಮಾರುಕಟ್ಟೆಯಲ್ಲಿ ಬೆಳೆಯಬೇಕು ಎನ್ನುವ ಉದ್ದೇಶವಿದ್ದವರು ಕ್ಯಾಶ್ ಮಾರುಕಟ್ಟೆಯನ್ನ ಪ್ರವೇಶಿಸುವುದು ಉತ್ತಮ.
ಇಂಟ್ರಾ ಡೇ ಟ್ರೇಡಿಂಗ್ , ಆಪ್ಷನ್ ಮತ್ತು ಫ್ಯೂಚರ್ ಟ್ರೇಡಿಂಗ್ ಗಳು ಹೆಚ್ಚಿನ ಹಣವನ್ನ ತಂದು ಕೊಡತ್ತದೆ ಅಥವಾ ಹಾಗೆಯೇ ಹೆಚ್ಚಿನ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಒಬ್ಬ ವೃತ್ತಿಪರ ಹೂಡಿಕೆದಾರ ಇಂತಹ ಗಿಮಿಕ್ಗಳಿಗೆ ಎಂದೂ ಬಲಿಯಾಗುವುದಿಲ್ಲ.
ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಮಾಹಿತಿಯ ಕೊರತೆ ಜನರಲ್ಲಿ ಭಯವನ್ನ ಹುಟ್ಟುಹಾಕುತ್ತದೆ. ಹೀಗಾಗಿ ಇಂದಿಗೂ ಭಾರತದಂತಹ ಜನಭರಿತ ದೇಶದಲ್ಲಿ ಕೂಡ ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹಾಗೆ ನೋಡಲು ಹೋದರೆ ಇಂದಿಗೆ ಸಮಾಜದಲ್ಲಿ ಮಾಹಿತಿ ಕೂಡ ಬಹಳಷ್ಟು ಲಭ್ಯವಿದೆ. ಕನ್ನಡಲ್ಲಿ ಕಡಿಮೆ ಎನ್ನಬಹುದು. ಆದರೆ ಮಾಹಿತಿ ಲಭ್ಯವಿದೆ. ಆದರೆ ಅದರ ವಿಶ್ಲೇಷಣೆ, ನೈಜವಾಗಿ ಇದದ್ದ ಇದ್ದ ಹಾಗೆ ಹೇಳುವ ಮಾಹಿತಿಯ ಕೊರತೆ ಖಂಡಿತ ಇದೆ. ಹೀಗಾಗಿ ಅದೆಷ್ಟೇ ಚಾನಲ್ಗಳು ಇರಲಿ , ಅದೆಷ್ಟೇ ಸಲಹೆಗಾರರು ಏನೇ ಹೇಳಲಿ, ನಮ್ಮ ವಿಶ್ಲೇಷಣೆ, ನಮ್ಮ ವಿವೇಚನೆ ನಮ್ಮದಾಗಿರಲಿ. ಇದು ನಿರಂತರ ಕಲಿಕೆಯಿಂದ ಸಾಧ್ಯ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com