
ಮ್ಯೂಚುಯಲ್ ಫಂಡ್ಗಳು
ಸ್ಪೆಷಲೈಸ್ಡ್ ಅಥವಾ ವಿಶೇಷ ಮ್ಯೂಚುಯಲ್ ಫಂಡ್ಗಳು ಗುರುತಿಸಲ್ಪಟ್ಟ ಅಂದರೆ ಸ್ಪೆಸಿಫಿಕ್ ಇಂಡಸ್ಟ್ರಿಯಲ್ಲಿನ ವಸ್ತುಗಳ ಮೇಲೆ, ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತು ಉಳಿದ ಯಾವುದೇ ಸೆಗ್ಮೆಂಟ್ ನಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ.
ಹೆಸರೇ ಹೇಳುವಂತೆ ಇದು ವಿಶೇಷವಾದದ್ದು ಏಕೆಂದರೆ ಇದು ಸ್ಟ್ರಕ್ಚರಲ್, ಬ್ಯಾಲೆನ್ಸ್ಡ್, ಅಸೆಟ್, ಏನಾದರು ಆಗಿರಬಹುದು. ಇದರ ಮೂಲಕ ರಿಯಲ್ ಎಸ್ಟೇಟ್, ಫಾರ್ಮಾ, ಕೆಮಿಕಲ್, ಟೆಲಿ ಕಮ್ಯುನಿಕೇಷನ್ ಹೀಗೆ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ಕೂಡ ಹೂಡಿಕೆ ಮಾಡುವ ಅವಕಾಶ ಇಲ್ಲಿರುತ್ತದೆ. ಇವುಗಲ್ಲಿ ಪ್ರಮುಖವಾಗಿ ಹನ್ನೊಂದು ವಿಧಗಳಿವೆ ಅವುಗಳೆಂದರೆ :
- ಸೂಚ್ಯಂಕ ಅಥವಾ ಇಂಡೆಕ್ಸ್ ಫಂಡ್ಸ್: ಸೂಚ್ಯಂಕ ಅಥವಾ ಇಂಡೆಕ್ಸ್ ಎಂದರೆ ಷೇರು ಮಾರುಕಟ್ಟೆಯ ಒಟ್ಟಾರೆ ಏರಿಕೆ, ಇಳಿಕೆ ಜೊತೆಗೆ ಮಾರುಕಟ್ಟೆಯ ಮೌಲ್ಯವನ್ನ ತಿಳಿಸುವ ಒಂದು ಸಂಖ್ಯೆ. ಈ ಸಂಖ್ಯೆ ಏರಿಕೆ ಕಂಡರೆ ಮಾರುಕಟ್ಟೆ ಮೇಲೇರುತ್ತಿದೆ ಎಂದರ್ಥ. ಇಳಿಕೆ ಕಂಡರೆ ಒಟ್ಟಾರೆ ಮಾರುಕಟ್ಟೆ ಕುಸಿತ ಕಂಡಿದೆ ಎಂದರ್ಥ. ಅಂದಿನ ಸಂಖ್ಯೆ ಮಾರುಕಟ್ಟೆಯ ಒಟ್ಟಾರೆ ಇರುವ ಸ್ಥಿತಿಯನ್ನ ಸೂಚಿಸುತ್ತದೆ. ಮಾರುಕಟ್ಟೆ ಸೂಚ್ಯಂಕ ಕುಸಿದಿದ್ದರೂ ಕೆಲವೊಂದು ವಲಯದಲ್ಲಿ ಏರಿಕೆಯಾಗಿರಬಹುದು, ಹೀಗಾಗಿ ಸೂಚ್ಯಂಕ ಒಟ್ಟಾರೆ ಮಾರುಕಟ್ಟೆ ಚಿತ್ರಣ ನೀಡುತ್ತದೆಯೇ ಹೊರತು ನಿರ್ದಿಷ್ಟ ಸಂಸ್ಥೆ ಅಥವಾ ವಲಯದಲ್ಲ . ಹೀಗಾಗಿ ಇಲ್ಲಿನ ಹೂಡಿಕೆಯಲ್ಲಿ ಸೂಚ್ಯಂಕ ಏರಿಕೆ ಕಂಡರೆ ಲಾಭವೂ ಏರಿಕೆ ಕಾಣುತ್ತದೆ. ಸೂಚ್ಯಂಕ ಇಳಿಕೆ ಕಂಡರೆ ಲಾಭವೂ ಇಳಿಕೆಯಾಗುತ್ತದೆ.
- ಸೆಕ್ಟರ್ ಫಂಡ್ಸ್ ಅಥವಾ ವಲಯವಾರು ಫಂಡ್ಸ್ : ನಿರ್ದಿಷ್ಟ ವಲಯದಲ್ಲಿ ಮಾತ್ರ ಇಲ್ಲಿ ಹೂಡಿಕೆ ಮಾಡಲಾಗುತ್ತದೆ. ಇವು ಥೀಮ್ ಬೇಸ್ಡ್ ಆಗಿರುತ್ತದೆ. ಕೆಲವು ಥೀಮ್ ಗಳು ಗೆಲ್ಲುತ್ತವೆ , ಕೆಲವು ಇಲ್ಲ. ಇದನ್ನ ಊಹಿಸುವುದು ಬಹಳ ಕಷ್ಟ ಹೀಗಾಗಿ ಇದು ಹೈ ರಿಸ್ಕ್ ವರ್ಗಿಕರಣದಲ್ಲಿ ಬರುತ್ತದೆ.
- ಫಂಡ್ಸ್ ಆಫ್ ಫಂಡ್ಸ್ : ಕೆಲವೊಮ್ಮೆ ಫಂಡ್ ಮ್ಯಾನೇಜರ್ ಹಲವಾರು ವಲಯದಲ್ಲಿ ಹೂಡಿಕೆ ಮಾಡುವ ಫಂಡ್ ಗಳ ಮೇಲೆ ಹೂಡಿಕೆ ಮಾಡುತ್ತಾರೆ ಇದನ್ನ ಫಂಡ್ಸ್ ಆಫ್ ಫಂಡ್ಸ್ ಎನ್ನುತ್ತಾರೆ, ನೇರವಾಗಿ ಹೂಡಿಕೆ ಮಾಡುವುದರ ಬದಲು ಹೀಗೆ ಹೂಡಿಕೆ ಮಾಡುವ ಇತರ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಕೂಡ ಒಂದು ವಿಧಾನವಾಗಿದೆ.
- ವಿದೇಶಿ ಅಥವಾ ಅಂತರರಾಷ್ಟ್ರೀಯ ಫಂಡ್ಸ್ : ಹೂಡಿಕೆದಾರನ ಮೂಲ ದೇಶವನ್ನ ಬಿಟ್ಟು ಬೇರೆ ದೇಶದ ಫಂಡ್ ಗಳಲ್ಲಿ ಮಾಡುವ ಹೂಡಿಕೆಯನ್ನ ವಿದೇಶಿ ಅಥವಾ ಇಂಟರ್ನ್ಯಾಷನಲ್ ಫಂಡ್ಸ್ ಎಂದು ಕರೆಯಲಾಗುತ್ತದೆ. ಯಾವ ದೇಶದ ಫಂಡ್ ಎಂದು ತಿಳಿಯದೆ ಮಾಡುವ ಹೂಡಿಕೆ ತರವಲ್ಲ. ಇಲ್ಲಿ ರಿಸ್ಕ್ ಹೆಚ್ಚಾಗಿರುತ್ತದೆ.
- ಗ್ಲೋಬಲ್ ಫಂಡ್ಸ್ : ಇದರಲ್ಲಿ ಹೂಡಿಕೆದಾರನ ಮೂಲ ದೇಶದ ಜೊತೆಗೆ ಜಗತ್ತಿನ ಒಂದಕ್ಕಿಂತ ಹೆಚ್ಚು ದೇಶಗಳ ಫಂಡ್ ಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ. ಹೀಗೆ ಹತ್ತಾರು ದೇಶಗಳು ಇಲ್ಲಿ ಬರುವುದರಿಂದ ಇದು ಹೆಚ್ಚು ಅಪಾಯದ ಹೂಡಿಕೆಯಾಗಿರುತ್ತದೆ. ಆಯಾ ದೇಶದ ಪರಿಸ್ಥಿತಿ ಜೊತೆಗೆ ವಿನಿಮಯ ದರದ ಏರಿಳಿತಗಳನ್ನ ಕೂಡ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
- ಎಮರ್ಜಿಂಗ್ ಮಾರ್ಕೆಟ್ ಫಂಡ್ಸ್ : ಮುಂದುವರೆಯುತ್ತಿರುವ ದೇಶಗಳು ಅಥವಾ ಈ ಹಿಂದೆ ಡೆವಲಪಿಂಗ್ ಮಾರ್ಕೆಟ್ ಎಂದು ಯಾವ ದೇಶಗಳನ್ನ ಕರೆಯಲಾಗುತ್ತಿತ್ತು ಅದಕ್ಕೆ ಮರು ನಾಮಕರಣ ಮಾಡಿ ಎಮರ್ಜಿಂಗ್ ಮಾರ್ಕೆಟ್ ಎಂದು ಹೇಳಲಾಗಿದೆ. ಬ್ರೆಝಿಲ್ , ಇಂಡಿಯಾ , ಸೌತ್ ಆಫ್ರಿಕಾ ಹೀಗೆ ಹಲವಾರು ದೇಶಗಳನ್ನ ಎಮರ್ಜಿಂಗ್ ಅಥವಾ ಉದಯಿಸುತ್ತಿರುವ ಎಕಾನಮಿ ಅಥವಾ ಮಾರ್ಕೆಟ್ ಎನ್ನಲಾಗಿದೆ . ಇಲ್ಲಿನ ಹೂಡಿಕೆ ಕೂಡ ಆಯಾ ದೇಶದ ಮಾರುಕಟ್ಟೆ ಏರಿಳಿತಕ್ಕೆ ತಕ್ಕಂತೆ ವರ್ತಿಸುತ್ತವೆ. ಇದು ಕೂಡ ಅಪಾಯಕಾರಿ ಹೂಡಿಕೆಯಾಗಿದೆ.
- ರಿಯಲ್ ಎಸ್ಟೇಟ್ ಫಂಡ್ಸ್ : ರಿಯಲ್ ಎಸ್ಟೇಟ್ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಅದೂ ಉತ್ತಮ ಗುಣಮಟ್ಟದ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ , ಇದು ಸಾಧಾರಣವಾಗಿ ದೀರ್ಘಕಾಲೀನ ಹೂಡಿಕೆ ಹೀಗಾಗಿ ಇಲ್ಲಿನ ಲಾಭ ನಷ್ಟ ಕೂಡ ತಕ್ಷಣಕ್ಕೆ ತಿಳಿಯುವುದಿಲ್ಲ ಹೀಗಾಗಿ ಅನಿಶ್ಚಿತತೆ ಇದನ್ನ ಅಪಾಯಕಾರಿ ಹೂಡಿಕೆಯ ಪಟ್ಟಿಯಲ್ಲಿ ಸೇರಿಸುವಂತಾಗಿದೆ.
- ಮಾರ್ಕೆಟ್ ನ್ಯೂಟ್ರಲ್ ಫಂಡ್ಸ್ : ಮಾರುಕಟ್ಟೆಯಲ್ಲಿ ಕುಸಿತವಾದಾಗ ಹೆಚ್ಚಿನ ನಷ್ಟವಾಗದಂತೆ ತಡೆಯುವ ಇದರ ಜೊತೆಗೆ ದಿನ ನಿತ್ಯದ ಏರಿಳಿತಗಳಿಗೆ ತಡೆಗೋಡೆಯಂತೆ ನಿಲ್ಲುವ ಫಂಡ್ ಗಳ ಮೇಲಿನ ಹೂಡಿಕೆ ಮಾರ್ಕೆಟ್ ನ್ಯೂಟ್ರಲ್ ಫಂಡ್ಸ್ ಎನ್ನಿಸ್ಕೊಳ್ಳುತ್ತದೆ. ಜೊತೆಗೆ ಅರೋಗ್ಯಕರ ಲಾಭ ಕೂಡ ಸಿಗುತ್ತದೆ.
- ಅಸೆಟ್ ಅಲೊಕೇಶನ್ ಫಂಡ್ಸ್ : ಅಸೆಟ್ ಕ್ಲಾಸ್ ನಲ್ಲಿ ವರ್ಗಿಕರಿಸಿ ಮಾಡಿದ ಹೂಡಿಕೆ ಅಂದರೆ ಡೆಟ್ , ಈಕ್ವಿಟಿ ಜೊತೆಗೆ ಗೋಲ್ಡ್ ಮೇಲೆ ಕೂಡ ಹೂಡಿಕೆ ಮಾಡಲಾಗುತ್ತದೆ , ಜೊತೆಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅದನ್ನ ಬದಲಾಯಿಸುವ ಅಥವಾ ಅಲೋಕೇಟ್ ಮಾಡುವ ಹೂಡಿಕೆಯನ್ನ ಆಸೆಟ್ ಅಲೋಕೇಷನ್ ಫಂಡ್ಸ್ ಎನ್ನುತ್ತಾರೆ.
- ಗಿಫ್ಟ್ ಫಂಡ್ಸ್ : ಹೂಡಿಕೆದಾರ ತನ್ನ ಪರಿವಾರದ ಜನಕ್ಕೆ ವರ್ಗಾಯಿಸಬಹುದಾದ ಹೂಡಿಕೆ ಇದಾಗಿರುತ್ತದೆ. ತನ್ನ ಪರಿವಾರದ ಸದಸ್ಯರ ಭವಿಷ್ಯವನ್ನ ಭದ್ರವಾಗಿಸಲು ಇಂತಹ ಹೂಡಿಕೆಯನ್ನ ಮಾಡಬಹುದು. ಆದರೆ ಇದನ್ನ ಪೂರ್ಣವಾಗಿ ಹೊಸ ಖರೀದಿ ಅಥವಾ ಹೂಡಿಕೆಗೆ ಬಳಸುವಂತಿಲ್ಲ , ಅಲ್ಪ ಭಾಗವನ್ನ ಬೇಕಾದ ಹಾಗೆ ಬಳಸಿಕೊಳ್ಳಬಹುದು.
- ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ : ನಿಗದಿತ ವಲಯದ ವಿದೇಶಿ ಮಾರುಕಟ್ಟೆಗೆ ಇದನ್ನ ಲಿಂಕ್ ಮಾಡಲಾಗುತ್ತದೆ. ಭಾರತದಲ್ಲಿ ಇದನ್ನ ಟ್ರೇಡ್ ಮಾಡಿದಾಗ ಇದು ಬೇರೆ ದೇಶದ ಮಾರುಕಟ್ಟೆಯ ಏರಿಳಿತಕ್ಕೆ ಸಮವಾಗಿ ಏರಿಳಿತ ಕಾಣುತ್ತದೆ. ಇದು ರಿಯಲ್ ಟೈಮ್ ಆಗಿರುವುದರಿಂದ ಸದಾ ಏರಿಳಿತ ಕಾಣುತ್ತಿರುತ್ತದೆ.
ಎಲ್ಲಕ್ಕೂ ಮುಖ್ಯವಾಗಿ ಹೂಡಿಕೆ ಮಾಡಲು ಇಚ್ಛಿಸಿದ ಫಂಡ್ ನಿಮ್ಮ ಹಣಕಾಸು ನಿರ್ವಹಣೆಯ ಪರಿಧಿಯಲ್ಲಿ ಬರುತ್ತದೆಯೇ ಎನ್ನುವುದನ್ನ ಕೂಡ ಗಮನಿಸುವುದು ಒಳ್ಳೆಯದು. ಫಂಡ್ ಆಯ್ಕೆ ಮಾಡಿಕೊಳ್ಳುವ ಮುನ್ನ:
- ಯಾವ ಕಾರಣಕ್ಕೆ ಈ ಫಂಡ್ ಮೇಲೆ ಹೂಡಿಕೆ ಮಾಡುತ್ತಿದ್ದೇವೆ ಎನ್ನುವ ಅರಿವು ಹೂಡಿಕೆದಾರನಿಗೆ ಇರಬೇಕು. ಅಂದರೆ ಹೂಡಿಕೆ ದೀರ್ಘಾವಧಿಯದ್ದೇ ? ಅಥವಾ ಅಲ್ಪಾವಧಿ ? ಈ ಹೂಡಿಕೆಯ ಮುಖ್ಯ ಉದ್ದೇಶವೇನು ? ಅಂದರೆ ಈ ಹೂಡಿಕೆಯಿಂದ ನಿವೃತ್ತಿಯ ಸಮಯದಲ್ಲಿ ರಿಟರ್ನ್ಸ್ ಬಯಸುತ್ತೀರಾ ? ಅಥವಾ ಅಲ್ಪ ಸಮಯದಲ್ಲಿ ಹೆಚ್ಚುವರಿ ಹಣದಲ್ಲಿ ವಿದೇಶಿ ಪ್ರಯಾಣ ಮಾಡಲು ಬಯಸುವಿರಾ ? ಉದ್ದೇಶ ಮತ್ತು ವೇಳೆ ಇಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಗಮನಿಸಿ ಇಲ್ಲಿ ಫಂಡ್ ಎಷ್ಟು ಮುಖ್ಯವೋ ನಮ್ಮ ನಿರ್ಧಾರಗಳು ಕೂಡ ಅಷ್ಟೇ ಮುಖ್ಯ.
- ನಾವು ಹೂಡಿಕೆ ಮಾಡುವ ಫಂಡ್ ನಂತರ ಅದನ್ನ ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡುತ್ತದೆ ಎನ್ನುವುದನ್ನ ಕೂಡ ಗಮನಿಸಬೇಕು . ಉತ್ತಮ ಪೋರ್ಟ್ಫೋಲಿಯೋ ಎಂದಿಗೂ ಉತ್ತಮ ಪಲಿತಾಂಶವನ್ನ ನೀಡುತ್ತದೆ.
- ನಾವು ಹೂಡಿಕೆ ಮಾಡಲು ಇಚ್ಛಿಸಿದ ಮ್ಯೂಚುಯಲ್ ಫಂಡ್ ನಡೆದು ಬಂದ ದಾರಿಯನ್ನ ಕೂಲಂಕುಷವಾಗಿ ಪರಿಶೀಲಿಸಬೇಕು. ಅಂದರೆ ಅದರ ಹಿಸ್ಟ್ರಿ ಅಥವಾ ಇತಿಹಾಸವನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕು. ಹೆಚ್ಚು ವರ್ಷ ಉತ್ತಮ ಫಲಿತಾಂಶ ನೀಡಿದ ಫಂಡ್ ಗಳ ಮೇಲೆ ಹೂಡಿಕೆ ಮಾಡಬೇಕು.
- ನಾವು ಹೂಡಿಕೆ ಮಾಡಲು ಇಚ್ಛಿಸಿದ ಫಂಡ್ ಜನ ಸ್ನೇಹಿಯೇ ಎನ್ನುವುದನ್ನ ತಿಳಿದುಕೊಳ್ಳಬೇಕು. ಹೆಚ್ಚು ಹೆಚ್ಚು ಹೂಡಿಕೆದಾರರು ಇದರ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರೆ ಅದು ಅಷ್ಟರ ಮಟ್ಟಿಗೆ ಹೆಚ್ಚಿನ ವಿಶ್ವಾಸವನ್ನ ಪಡೆದುಕೊಂಡಿದೆ ಎಂದರ್ಥ.
- ಮ್ಯೂಚುಯಲ್ ಫಂಡ್ ನ ಅತ್ಯಂತ ದೊಡ್ಡ ನೂನ್ಯತೆ ಖರ್ಚುಗಳು. ಪ್ರತಿಯೊಂದು ಮ್ಯೂಚುಯಲ್ ಫಂಡ್ ಹೌಸ್ಗಳು ಕೂಡ ಫಂಡ್ ಮ್ಯಾನೇಜರ್ ಸಹಿತ ಬಹಳಷ್ಟು ಖರ್ಚುಗಳನ್ನ ಹೂಡಿಕೆದಾರನ ಮೇಲೆ ಹಾಕುತ್ತವೆ , ಜೊತೆಗೆ ಕಮಿಷನ್ ಬೇರೆ ಇರುತ್ತದೆ. ಜಿಎಸ್ಟಿ ಮ್ಯೂಚುಯಲ್ ಫಂಡ್ ನ ಕಾಸ್ಟ್ ಸ್ವಲ್ಪ ಮಟ್ಟಿಗೆ ಏರಿಸಿರುವುದು ಕೂಡ ಸುಳ್ಳಲ್ಲ. ಹೀಗೆ ಲಾಭ ಬಹಳಷ್ಟು ಬಂದರೂ ಖರ್ಚುಗಳನ್ನ ಕಳೆದು ನಮ್ಮ ಕೈಗೆ ಬಂದದ್ದು ಮಾತ್ರ ನಮ್ಮದು ಅದರ ಮೇಲೂ ತೆರಿಗೆ ಇರುತ್ತದೆ. ಹೀಗಾಗಿ ಎಲ್ಲಾ ಕಳೆದು ನಮಗೆ ಏನು ಉಳಿಯುತ್ತದೆ ಎನ್ನುವ ಲೆಕ್ಕಾಚಾರ ಮಾಡದೆ ಹೂಡಿಕೆ ಮಾಡಬಾರದು.
ಇದನ್ನೂ ಓದಿ: ಮ್ಯೂಚುಯಲ್ ಫಂಡ್ ಬಗ್ಗೆ ಇಲ್ಲಿದೆ ಮೂಲಭೂತ ಮಾಹಿತಿ!
ಕೊನೆಮಾತು: ಇದರಲ್ಲಿನ ಸಂಕೀರ್ಣತೆಯನ್ನ ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನ ನಮ್ಮ ಲಾಭಕ್ಕೆ ದುಡಿಸಿಕೊಳ್ಳುವ ಚಾಕಚಕ್ಯತೆ ಗಳಿಸಿಕೊಂಡದ್ದೇ ಆದರೆ ಮೇಲಿನ ಹಲವು ರೀತಿಯ ಮ್ಯೂಚುಯಲ್ ಫಂಡ್ ಗಳಲ್ಲಿ ನಿಗದಿತವಾಗಿ ಹೂಡಿಕೆ ಮಾಡುತ್ತಾ ಒಳ್ಳೆಯ ಲಾಭವನ್ನ ಪಡೆಯಬಹುದು. ಅದರಲ್ಲೂ ವಿಶೇಷ ಮ್ಯೂಚುಯಲ್ ಫಂಡ್ ಗಳು ವಿಶೇಷ ಲಾಭವನ್ನ ನೀಡುತ್ತವೆ, ಹಾಗೆಯೇ ವಿಶೇಷ ನಷ್ಟಕ್ಕೂ ಸಿದ್ಧರಾಗಿರಬೇಕಾಗುತ್ತದೆ. ಕೊನೆಗೂ ನಮ್ಮ ಹಣಕಾಸು ನಿರ್ವಹಣೆ ನಮ್ಮ ಕೈಲಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com