ಭಾರತೀಯ ಮಾರುಕಟ್ಟೆಗೆ ಮರಳುತ್ತಿದ್ದಾರೆ ಎಫ್ ಐಐ- Foreign Institutional Investors; ಕಾರಣ ಏನು ಅಂದರೆ...(ಹಣಕ್ಲಾಸು)

ಹಣಕ್ಲಾಸು-323-ರಂಗಸ್ವಾಮಿ ಮೂಕನಹಳ್ಳಿ
ಎಫ್ಐಐ ಸಾಂಕೇತಿಕ ಚಿತ್ರ
ಎಫ್ಐಐ ಸಾಂಕೇತಿಕ ಚಿತ್ರ

ಜಗತ್ತಿನ ಎಲ್ಲಾ ದೇಶಗಳ ಷೇರು ಮಾರುಕಟ್ಟೆಯಂತೆ ಭಾರತೀಯ ಷೇರು ಮಾರುಕಟ್ಟೆ ಕೂಡ ಅತ್ತಿತ್ತ ವಾಲಾಡುತ್ತಲೇ ಇರುತ್ತದೆ. ಮಾರುಕಟ್ಟೆ ಕುಸಿತಕ್ಕೆ ಹತ್ತಾರು ಕಾರಣಗಳನ್ನ ನೀಡಬಹುದು ಹಾಗೆಯೇ ಮಾರುಕಟ್ಟೆಯ ಚೇತರಿಕೆಗೆ ಕೂಡ ಹತ್ತಾರು ಆಯಾಮಗಳು ಇರುತ್ತವೆ. ಇದರಲ್ಲಿ ನಾವು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಾರುಕಟ್ಟೆ ಸದಾ ಏರಿಳಿತದಿಂದ ಕೂಡಿರುತ್ತದೆ. ಅದು ಎಂದಿಗೂ ಫ್ಲಾಟ್ ಆಗಿರಲು ಸಾಧ್ಯವಿಲ್ಲ, ಇದ್ದರೂ ಅದು ಕೇವಲ ಸೀಮಿತ ಅವಧಿಯಲ್ಲಿ ಮಾತ್ರ ಇರುತ್ತದೆ. ಉದಾಹರಣೆಗೆ ಎಫ್ ಐಐ ಅಂದರೆ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ಗಳನ್ನ ತೆಗೆದುಕೊಳ್ಳೋಣ. ಈ ವರ್ಷದ ಪ್ರಾರಂಭದಿಂದ ಅಂದರೆ ಜನವರಿ 2022 ರಿಂದ ಜೂನ್ ಅಂತ್ಯದವರೆಗೆ ಭಾರತದ ಷೇರು ಮಾರುಕಟ್ಟೆಯಿಂದ ಈ ರೀತಿಯ ಹೂಡಿಕೆದಾರರು ಹೊರತೆಗೆದ ಹಣ 27 ಬಿಲಿಯನ್ ಅಮೆರಿಕನ್ ಡಾಲರ್.

ಇನ್ನೇನು ಭಾರತಕ್ಕೆ ಇಂತಹ ಹೂಡಿಕೆಗಳು ಬರುತ್ತವೆಯೂ ಇಲ್ಲವೋ ಎನ್ನುವಂತೆ ಎಲ್ಲರೂ ಹಣವನ್ನ ಇಲ್ಲಿಂದ ತೆಗೆದು ಹೊರಟುಬಿಟ್ಟಿದ್ದರು, ಇದೀಗ ಅಂದರೆ ಜುಲೈ ತಿಂಗಳಲ್ಲಿ ಮತ್ತು ಆಗಸ್ಟ್ ತಿಂಗಳ ಮೊದಲ ವಾರದ ಲೆಕ್ಕಾಚಾರದ ಪ್ರಕಾರ  6.4 ಬಿಲಿಯನ್ ಹಣವನ್ನ ಮತ್ತೆ ಮರು ಹೂಡಿಕೆ ಮಾಡಿದ್ದಾರೆ. ಗಮನಿಸಿ ನೋಡಿ 6 ತಿಂಗಳಲ್ಲಿ ಹೊರಹೋದ ಹಣ ತಿಂಗಳ ಲೆಕ್ಕಾಚಾರದಲ್ಲಿ ನಾಲ್ಕೂವರೆ ಬಿಲಿಯನ್, ಇದಕ್ಕಿಂತ ಹೆಚ್ಚಿನ ಹಣ ತಿಂಗಳಿಗೆ ಮತ್ತೆ ಮರಳಿ ಭಾರತೀಯ ಷೇರು ಮಾರುಕಟ್ಟೆಗೆ ಬರುತ್ತಿದೆ. ಇದು ಆರಂಭ ಮಾತ್ರ ಮುಂಬರುವ ದಿನಗಳಲ್ಲಿ ಇದರ ವೇಗ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಾಗಿಲ್ಲ.

ಇದಕ್ಕೆ ಕಾರಣಗಳೇನು ಎನ್ನುವುದನ್ನ ತಿಳಿದುಕೊಳ್ಳುವ ಮುನ್ನ, ಎಫ್ ಐಐ-ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಎಂದರೇನು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.

ಭಾರತ ದೇಶದಲ್ಲಿ ಅಲ್ಲದೆ ತನ್ನ ಮುಖ್ಯ ಕಛೇರಿಯನ್ನ ಬೇರೆ ದೇಶದಲ್ಲಿ ಹೊಂದಿರುವ ಯಾವುದೇ ಸಂಸ್ಥೆ, ಯಾವುದೇ ರೀತಿಯಲ್ಲಿ ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅವುಗಳನ್ನ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಎನ್ನಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಚೀನಾ ದೇಶದ ಮಾರುಕಟ್ಟೆಯಲ್ಲಿ ಮಾತ್ರ ಹೊರ ದೇಶದಿಂದ ಬಂದ ಹೂಡಿಕೆಗೆ ಈ ಹೆಸರಿನಿಂದ ಕರೆಯಲಾಗುತ್ತದೆ.

ಹೆಡ್ಜ್ ಫಂಡ್, ಇನ್ಶೂರೆನ್ಸ್ ಫಂಡ್, ಇನ್ವೆಸ್ಟ್ಮೆಂಟ್ ಬ್ಯಾಂಕ್ಸ್, ಪೆನ್ಷನ್ ಫಂಡ್ಸ್, ಮ್ಯೂಚುಯಲ್ ಫಂಡ್ಸ್ ಗಳಲ್ಲಿನ ಹೂಡಿಕೆಯನ್ನ ಕೂಡ ಎಫ್ ಐಐ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ವಿದೇಶದಿಂದ ಬರುವ ಹಣ ಮಾರುಕಟ್ಟೆಯಲ್ಲಿ ಬಂಡವಾಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇಶದ ಅಭಿವೃದಿಗೆ ಕೂಡ ಕಾರಣವಾಗುತ್ತದೆ. ಹೀಗಿದ್ದೂ ಎಲ್ಲಾ ದೇಶಗಳೂ ಈ ರೀತಿಯ ಹಣವನ್ನ ಪೂರ್ಣವಾಗಿ ಸ್ವಾಗತಿಸುವುದಿಲ್ಲ. ಇವುಗಳ ಮೇಲೆ ಬಹಳಷ್ಟು ನಿಬಂಧನೆಗಳನ್ನ ಹಾಕುತ್ತದೆ. ಭಾರತದಲ್ಲಿ ಕೂಡ ಇದಕ್ಕೆ ಹಲವಾರು ನಿಬಂಧನೆಗಳಿವೆ. ಎಲ್ಲಕ್ಕೂ ಮೊದಲು ಈ ರೀತಿಯ ಹೂಡಿಕೆ ಮಾಡುವ ಸಂಸ್ಥೆ 'ಸೆಬಿ'ಯಲ್ಲಿ ನೋಂದಾವಣಿ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಾ ವಲಯಗಳಲ್ಲಿ ಇದನ್ನ ಮುಕ್ತವಾಗಿ ಹೂಡಿಕೆ ಮಾಡಲು ಬಿಡುವುದರಿಂದ ಇವುಗಳ ಪ್ರಭಾವ ಹೆಚ್ಚಾಗುವುದು ದೇಶದ ಹಿತದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ, ಇದಕ್ಕೆ ಹಲವು ವಲಯದಲ್ಲಿ ಅವಕಾಶವಿಲ್ಲ.  

ಕೇವಲ 5-6 ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಗೆ bye ಹೇಳಿ ಹೋಗಿದ್ದ ಎಫ್ ಐಐ ಗಳು ಮತ್ತೆ ಭಾರತಕ್ಕೆ ಬರಲು ಈ ಬಗೆಯ ಆತುರ ತೋರಲು ಕಾರಣವೇನಿರಬಹುದು?

  1. ಅಮೆರಿಕಾದ ಫೆಡರಲ್ ಬ್ಯಾಂಕ್ ಹಣದುಬ್ಬರ ಕಡಿವಾಣ ಹಾಕಲು ಶತಾಯಗತಾಯ ಪ್ರಯತ್ನಪಡುತ್ತಿದೆ: ಕೋವಿಡ್ ಸಮಯದಲ್ಲಿ ಅಮೇರಿಕಾ ಸರಕಾರ ಮಾಡಿದ ತಪ್ಪಿಗೆ ಇಂದು ಜಗತ್ತಿನ ಆರ್ಥಿಕತೆ ನಲುಗುತ್ತಿದೆ. ಅಂದು ಜನ ಸಾಮಾನ್ಯರ ನಡುವೆ ಕ್ರೈಸಿಸ್ ಎಂದು ಹೇಳಿಕೊಳ್ಳಲು ಇಚ್ಛಿಸದ ಸರಕಾರ ಹತ್ತಿರತ್ತಿರ 9 ಟ್ರಿಲಿಯನ್ ಡಾಲರ್ ಹಣವನ್ನ ಮುದ್ರಣ ಮಾಡಿತ್ತು. ಇದರಿಂದ ಅಲ್ಲಿನ ಸಮಾಜದಲ್ಲಿ ಹಣದ ಹರಿವು ಬಹಳ ಹೆಚ್ಚಾಗಿದೆ. ಸಹಜವಾಗೇ ಹಣದುಬ್ಬರ ಹೆಚ್ಚಾಗಿದೆ. ಹಣದುಬ್ಬರವನ್ನ ನಿಯಂತ್ರಣಕ್ಕೆ ತರಲು ಫೆಡರಲ್ ಬ್ಯಾಂಕ್ ಅಲ್ಲಿನ ಬಡ್ಡಿ ದರಗಳನ್ನ ಏರಿಕೆ ಮಾಡಿತ್ತು. ಎಮೆರ್ಜಿಂಗ್ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಕಂಗೆಟ್ಟಿದ್ದ ಹೂಡಿಕೆದಾರ ಸಹಜವಾಗೇ ಇಲ್ಲಿಂದ ಹಣವನ್ನ ತೆಗೆದು ಗುಳೆ ಹೊರಟು ಬಿಟ್ಟರು. ಈಗ ಅಲ್ಲಿನ ಸರಕಾರ ಹಣದುಬ್ಬರ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಬಡ್ಡಿ ದರವನ್ನ ಸಹಜ ಸ್ಥಿತಿಗೆ ತರುವ ಸೂಚನೆಯನ್ನ ನೀಡಿದೆ. ಹೆಚ್ಚಿನ ಬಡ್ಡಿ ದರ ಮತ್ತೊಮ್ಮೆ ಸಮಾಜದ ಕುಸಿತಕ್ಕೆ ಕಾರಣವಾಗಬಾರದು ಎನ್ನುವ ಉದ್ದೇಶ ಅವರದು, ಇದನ್ನ ಗಮನಿಸಿದ ಹೂಡಿಕೆದಾರ ಮತ್ತೆ ಭಾರತದೆಡೆಗೆ ಮುಖ ಮಾಡಿದ್ದಾನೆ.
  2. ಭಾರತೀಯ ಸ್ಥಳೀಯ ಹೂಡಿಕೆದಾರನ ವಿಶ್ವಾಸ ಹುಬ್ಬೇರಿಸಿದೆ: ಮೊದಲ ಸಾಲುಗಳಲ್ಲಿ ಬರೆದಂತೆ ಪ್ರಥಮ ಆರು ತಿಂಗಳಲ್ಲಿ 27 ಬಿಲಿಯನ್ ಅಮೆರಿಕನ್ ಡಾಲರ್ ನಮ್ಮ ಮಾರುಕಟ್ಟೆಯಿಂದ ಹೊರಹೋಗಿತ್ತು, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಹೊರತೆಗೆದರೂ ಭಾರತೀಯ ಮಾರುಕಟ್ಟೆ ಹೇಳಿಕೊಳ್ಳುವ ಕುಸಿತ ಕಾಣಲಿಲ್ಲ, ಇದಕ್ಕೆ ಪ್ರಮುಖ ಕಾರಣ ಸ್ಥಳೀಯ ಹೂಡಿಕೆದಾರ! ,  ಸಮಯದಲ್ಲಿ ಆತ ಮಾಡಿದ ಹೂಡಿಕೆಯ ಮೊತ್ತ 30 ಬಿಲಿಯನ್ ಡಾಲರ್. ಸ್ಥಳೀಯ ಹೂಡಿಕೆದಾರ ತೋರಿದ ಈ ಆತ್ಮವಿಶ್ವಾಸ, ತನ್ನ ಮಾರುಕಟ್ಟೆಯ ಮೇಲಿನ ನಂಬಿಕೆ ಎಫ್ ಐಐ ಗಳು ಮರಳಲು ಮನಸ್ಸು ಮಾಡಿದಾಗ ಸಂಜೀವಿನಿಯಂತೆ ಕೆಲಸ ಮಾಡಿದೆ.
  3. ಇಂಡಿಯನ್ ಈಕ್ವಿಟಿಯನ್ನ ಕಡೆಗಣಿಸುವುದು ಸುಲಭವಲ್ಲ: ಗ್ಲೋಬಲ್ ಇನ್ವೆಸ್ಟರ್ ಆದವನು ಇಂದು ಭಾರತದಲ್ಲಿ ಹೂಡಿಕೆಯಿಲ್ಲ ಎಂದರೆ ಅವನು ಗ್ಲೋಬಲ್ ಇನ್ವೆಸ್ಟರ್ ಹೇಗಾದಾನು? ಎನ್ನುವ ಮಟ್ಟಕ್ಕೆ ಇಂದಿನ ಪರಿಭಾಷೆ ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಭಾರತೀಯ ಮಾರುಕಟ್ಟೆಯಲ್ಲಿನ ಹೂಡಿಕೆ ಹೆಚ್ಚಿನ ಲಾಭವನ್ನ ನೀಡುತ್ತಾ ಬರುತ್ತಿದೆ. ಇಂದಿನ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಬಹುತೇಕ ಎಲ್ಲಾ ದೇಶಗಳೂ ಅಮೆರಿಕನ್ ಡಾಲರ್ ಎದುರು ತಮ್ಮ ಕರೆನ್ಸಿಯನ್ನ ಕರೆಕ್ಷನ್ ಗೆ ಒಡ್ಡಿಕೊಂಡಿವೆ, ಆ ನಿಟ್ಟಿನಲ್ಲಿ ಭಾರತೀಯ ರೂಪಾಯಿ ಇತರ ಕರೆನ್ಸಿ ಗಳಿಗಿಂತ ಉತ್ತಮ ಸಾಧನೆಯನ್ನ ಮಾಡಿದೆ. ಇಂದಿನ ದಿನದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಹೆಚ್ಚಿನ ಆಯ್ಕೆಗಳು ಕೂಡ ಇಲ್ಲ , ಅಷ್ಟರಮಟ್ಟಿಗೆ ಭಾರತ ಬೇಕೇಬೇಕು ಎನ್ನುವ ಹಂತವನ್ನ ತಲುಪಿದೆ.
  4. ಭಾರತೀಯ ಮಿಡ್ ಕ್ಯಾಪ್ ಕಂಪನಿಗಳು 2022ನೇ ಸಾಲಿನಲ್ಲಿ 19 ಪ್ರತಿಶತ ಲಾಭವನ್ನ ನೀಡುವ ಸಾಧ್ಯತೆಯನ್ನ ಎಫ್ ಐಐ ಗಳು ಮನಗಂಡಿದ್ದಾರೆ, ಇದು ಏಷ್ಯಾದಲ್ಲೇ ಅತಿ ಹೆಚ್ಚು ರಿಟರ್ನ್ ಎನ್ನಬಹುದು. ಪ್ರತಿ ಹೂಡಿಕೆದಾರನ ಸರಳ ಮಂತ್ರ ತನ್ನ ಹೂಡಿಕೆಯ ಸುರಕ್ಷತೆ ಮತ್ತು ಹೆಚ್ಚಿನ ಲಾಭ, ಅವರೆಡನ್ನೂ ಭಾರತೀಯ ಮಾರುಕಟ್ಟೆ ಪೂರೈಸುವ ಭರವಸೆಯಿದೆ.
  5. ಓವರ್ಸೀಸ್ ಫಂಡ್ ಮ್ಯಾನೇಜರ್ಗಳು ಭಾರತದತ್ತ ಒಲವು ತೋರುತ್ತಿದ್ದಾರೆ: ಚೀನಾ ದೇಶದಲ್ಲಿ ಕುಳಿತಿರುವ ಬಹಳಷ್ಟು ಫಂಡ್ ಮ್ಯಾನೇಜರ್ ಗಳು ಭಾರತದಲ್ಲಿ ಹೂಡಿಕೆ ಮಾಡಿ ಎನ್ನುವ ಸಲಹೆ ನೀಡುತ್ತಿದ್ದಾರೆ, ಜೊತೆಗೆ ಹಣವನ್ನ ಇತ್ತ ಹರಿಸುತ್ತಿದ್ದಾರೆ. ಚೀನಾ ದೇಶದಲ್ಲಿ ಕೋವಿಡ್ ಹೊಸ ಹೊಸ ರೂಪವನ್ನ ಪಡೆದುಕೊಳ್ಳುತ್ತಿರುವುದು ಒಂದು ಕಡೆಯಾದರೆ, ಅಲ್ಲಿನ ರಿಯಲ್ ಎಸ್ಟೇಟ್ ವಲಯದ ಕುಸಿತ ಇನ್ನೊಂದೆಡೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮತ್ತು ಅಲ್ಲಿನ ಆಡಳಿತ ಯಾವ ಸಮಯದಲ್ಲಿ ಎಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನ ಯಾರೂ ಊಹಿಸಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ಅಲ್ಲಿ ಹೂಡಿಕೆಯಾಗಬೇಕಿದ್ದ ಒಂದಷ್ಟು ಹಣ ಇತ್ತ ತಿರುಗಿ ಕೊಂಡಿದೆ.

ಕೊನೆಮಾತು: ಭಾರತದಲ್ಲಿ ಹಣದುಬ್ಬರ ನಿಲ್ಲುವಂತೆ ಕಾಣುತ್ತಿಲ್ಲ, ಆಗಸ್ಟ್ ತಿಂಗಳಲ್ಲಿ ಕೂಡ ಆಹಾರ ಧಾನ್ಯಗಳ ಬೆಲೆ 9/8 ಪ್ರತಿಶತ ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನ ಏರಿಸುತ್ತಲೇ ಇದೆ, ಇದು ಇನ್ನು ಒಂದು ಪ್ರತಿಶತ ಏರಿಕೆಯಾಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ನೆನಪಿರಲಿ ಇದು ಎರಡು ಅಲುಗಿನ ಕತ್ತಿ ಇದ್ದಹಾಗೆ , ಬಡ್ಡಿ ದರಗಳು ಹೆಚ್ಚಾದಂತೆ ಡೊಮೆಸ್ಟಿಕ್ ಇನ್ವೆಸ್ಟರ್ಸ್ ಷೇರು ಮಾರುಕಟ್ಟೆಯಿಂದ ನಿಧಾನವಾಗಿ ಕಾಲು ತೆಗೆಯುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜುಲೈ ತಿಂಗಳಲ್ಲಿ 772 ಮಿಲಿಯನ್ ಡಾಲರ್ ಹಣವನ್ನ ಮಾರುಕಟ್ಟೆಯಿಂದ ಸ್ಥಳೀಯ ಹೂಡಿಕೆದಾರರು ಹೊರ ತೆಗೆದಿದ್ದಾರೆ. ಮುಂಬರುವ ದಿನಗಳಲ್ಲಿ ಬಡ್ಡಿ ದರ ಹೆಚ್ಚಾದಂತೆ ಈ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಎಲ್ಲಕ್ಕೂ ಮುಖ್ಯವಾಗಿ ಹೆಚ್ಚುತ್ತಿರುವ ಬೆಲೆಗಳು ಜನ ಸಾಮಾನ್ಯನನ್ನ ಕಂಗೆಡಿಸುತ್ತವೆ. ಮಾರುಕಟ್ಟೆಯ ಏರಿಳಿತ ಸದಾ ಇದ್ದೆ ಇರುತ್ತದೆ, ಜನ ಸಾಮಾನ್ಯನ ಬದುಕು ಬಹಳ ಏರುಪೇರು ಕಾಣುವುದು ಮಾತ್ರ ಯಾವ ಕೋನದಿಂದಲೂ ಒಳ್ಳೆಯದಲ್ಲ. ಇದರ ದೊರಗಾಮಿ ಪರಿಣಾಮಗಳು ಬಹಳ ಕೆಟ್ಟವಾಗಿರುತ್ತದೆ. ಹೀಗಾಗಿ ಎಲ್ಲಕ್ಕೂ ಮುಖ್ಯವಾಗಿ ಭಾರತದ ಮುಂದಿನ ಸವಾಲು ಹಣದುಬ್ಬರವನ್ನ ನಿಯಂತ್ರಣಕ್ಕೆ ತರುವುದು , ಇದಾಗದಿದ್ದರೆ ಯಾವ ಅಭಿವೃದ್ಧಿಯೂ ಲೆಕ್ಕಕ್ಕೆ ಬರುವುದಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com