social_icon

ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಟೇಟಸ್ ಬೇಕು, ಜೊತೆಗೆ, ಇನ್ನಷ್ಟು ವಿಷಯಗಳ ಕಡೆ ಕೇಂದ್ರದ ಗಮನ ಸೆಳೆಯಬೇಕು! (ಹಣಕ್ಲಾಸು)

ಹಣಕ್ಲಾಸು-338

ರಂಗಸ್ವಾಮಿ ಮೂನಕನಹಳ್ಳಿ

Published: 15th December 2022 04:00 AM  |   Last Updated: 15th December 2022 08:21 AM   |  A+A-


Tax (file pic)

ತೆರಿಗೆ (ಸಂಗ್ರಹ ಚಿತ್ರ)

ಮೊನ್ನೆ ಸದನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಟೇಟಸ್ ಕೊಡಬೇಕು ಎನ್ನುವುದರ ಬಗ್ಗೆ ಧ್ವನಿ ಎತ್ತಿದ್ದಾರೆ. ಬೆಂಗಳೂರಿನಂತಹ ಮಹಾ ನಗರದ ಬಗ್ಗೆ ಇದರ ಬಗ್ಗೆ ಇಲ್ಲಿಯವರೆಗೆ ದೊಡ್ಡ ಧ್ವನಿಯಲ್ಲಿ ಮಾತಾಗಿರಲಿಲ್ಲ ಎನ್ನುವುದು ವಿಪರ್ಯಾಸ. 

ಆಗೊಮ್ಮೆ ಈಗೊಮ್ಮೆ ಬೆಂಗಳೂರನ್ನ ಮೆಟ್ರೊಪಾಲಿಟನ್ ನಗರವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಪಿಸುಮಾತುಗಳು ಆಗಿದ್ದವು. ಇವತ್ತಿನ ಮಟ್ಟದ ಸುದ್ದಿಯಾಗಿರಲಿಲ್ಲ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ನಗರ, ಜೊತೆಗೆ ಹಲವು ಉದ್ದಿಮೆಗಳ ತವರು, ಅದರಲ್ಲೂ ನವೋದ್ದಿಮೆಗಳಿಗೆ ಬೆಂಗಳೂರು ತವರು. ಸೆಮಿ ಕಂಡಕ್ಟರ್ ಇರಬಹುದು , ಬಯೋ ಟೆಕ್ ಅಥವಾ ಸಾಫ್ಟ್ವೇರ್ ಎಲ್ಲದರಲ್ಲೂ ಬೆಂಗಳೂರು ಮೆಟ್ರೋಗಳಿಗಿಂತ ಮುಂದಿದೆ. ಬೆಂಗಳೂರು ಕರ್ನಾಟಕದ 80 ಪ್ರತಿಶತ ಜಿಡಿಪಿ ಸೃಷ್ಟಿಸುತ್ತಿದೆ. ಭಾರತದ ಐಟಿ ಉದ್ದಿಮೆಯ 40 ಪ್ರತಿಶತ ದೇಣಿಗೆ ನಮ್ಮ ಬೆಂಗಳೂರು ಒಂದೇ ನಗರ ನೀಡುತ್ತಿದೆ. ವಸ್ತುಸ್ಥಿತಿ ಹೀಗಿದ್ದೂ ಇನ್ನೂ ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಟೇಟಸ್ ಸಿಕ್ಕಿಲ್ಲ ಎನ್ನುವುದೇ ಆಶ್ಚರ್ಯ. ಇದರ ಬಗ್ಗೆ ಕೇಳುವ ಅಥವಾ ಹಣಕಾಸು ಸಚಿವರಲ್ಲಿ ಮನವಿ ಮಾಡಿಕೊಳ್ಳುವ ಸ್ಥಿತಿಯೇಕೆ ಬಂದಿದೆ ಎನ್ನುವುದು ಪ್ರಶ್ನೆ. ಇವುಗಳನ್ನ ಯಾರೊಬ್ಬರೂ ಮಾತನಾಡದೆ ಇರುವ ಅಂಶವನ್ನ ಗಮನಿಸಿ ಮೆಟ್ರೋ ಸ್ಥಾನವನ್ನ ನೀಡಬೇಕು. ಇದರಿಂದ ಮಾಸಿಕ ವೇತನಕ್ಕೆ ದುಡಿಯುವ ಲಕ್ಷಾಂತರ ಜನರಿಗೆ ಹೌಸ್ ರೆಂಟ್ ಅಲೋವೆನ್ಸ್ (ಹೆಚ್ ಆರ್ ಎ) ಅಡಿಯಲ್ಲಿ ಇನ್ನು ಹತ್ತು ಪ್ರತಿಶತ ಹೆಚ್ಚಿನ ಡಿಡಕ್ಷನ್ ಪಡೆಯುವ ಅವಕಾಶಸಿಗುತ್ತದೆ. ಮೆಟ್ರೋಗಳ್ಳಲ್ಲಿ 50 ಪ್ರತಿಶತ ಇರುವ ಹೆಚ್ ಆರ್ ಎ ಭಾರತದ ಇತರ ನಗರಗಳಲ್ಲಿ 40 ಪ್ರತಿಶತವಿದೆ. ನಾಲ್ಕು ಮೆಟ್ರೋಗಳಲ್ಲಿ ಇರುವ ಖರ್ಚಿನ ಲೆಕ್ಕಾಚಾರ ಹಾಕಿದರೆ ಬೆಂಗಳೂರಿನಲ್ಲಿ ಕೂಡ ಖರ್ಚಿನ ಬಾಬತ್ತು ಕಡಿಮೆಯೇನಿಲ್ಲ , ಪರಿಸ್ಥಿತಿ ಹೀಗಿದ್ದೂ ಬೆಂಗಳೂರಿನ ಜನತೆ ಹತ್ತು ಪ್ರತಿಶತ ಹೆಚ್ಚಿನ ಡಿಡಕ್ಷನ್ ನಿಂದ ಏಕೆ ವಂಚಿತರಾಗಬೇಕು?

ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗುತ್ತಿವೆ ಗ್ರೀನ್ ಬಾಂಡ್ಸ್!

ಮೇಲಿನ ಅಂಶವನ್ನ ಯುವ ಸಂಸದರು ಸದನದಲ್ಲಿ ಎತ್ತಿದ್ದು ಉತ್ತಮ ಬೆಳವಣಿಗೆ. ಇದರ ಜೊತೆಗೆ ಇನ್ನೊಂದು ಅಂಶವನ್ನ ಸಹ ನಮ್ಮ ರಾಜ್ಯದ ಸಂಸದರು ಸದನದಲ್ಲಿ ಎತ್ತಿದರೆ ಅದು ಕೂಡ ಒಳ್ಳೆಯದು. ಗಮನಿಸಿ ನೋಡಿ ಎರಡೂವರೆ ಲಕ್ಷ ರೂಪಾಯಿವರೆಗೆ ಯಾವುದೇ ತೆರಿಗೆ ಇಲ್ಲ. ಅಂದರೆ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಬೇಕಾದ ಅವಶ್ಯಕತೆಯಿಲ್ಲ. ಸೀನಿಯರ್ ಸಿಟಿಜಿನ್ ಆಗಿದ್ದರೆ ಈ ಹಣವನ್ನ 3 ಲಕ್ಷದವರೆಗೆ ವಿಸ್ತರಿಸಲಾಗಿದೆ. ಸೂಪರ್ ಸೀನಿಯರ್ ಸಿಟಿಜೆನ್ ಅಂದರೆ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಹಣದ ಮಿತಿಯನ್ನ 5 ಲಕ್ಷದವರೆಗೆ ಏರಿಸಲಾಗಿದೆ. 

ಬೆಂಗಳೂರಿನಂತಹ ಮಹಾನಗರದಲ್ಲಿ ಪರಿಸ್ಥಿತಿ ಇವತ್ತು ಎರಡೂವರೆ ಲಕ್ಷ ರೂಪಾಯಿ ವಾರ್ಷಿಕ ವರಮಾನ ಇಟ್ಟು ಕೊಂಡು ಬದುಕುವುದು ಅಸಾಧ್ಯ ಎನ್ನುವ ಮಟ್ಟಕ್ಕೆ ಬಂದು ಕುಳಿತಿದೆ. ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರ ಭಾರತವನ್ನ ಕೂಡ ಬಿಟ್ಟಿಲ್ಲ , ಹೀಗಾಗಿ ಪದಾರ್ಥಗಳ ಬೆಲೆ ಇನ್ನಿಲ್ಲದೆ ಏರಿಕೆ ಕಂಡಿದೆ. ಇವೆಲ್ಲುವುಗಳ ನಡುವೆ ಮಧ್ಯಮ ವರ್ಗದ ಜನರ ಬದುಕು ಬಹಳ ದುಸ್ಸರವಾಗಿದೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಈ ಮಿತಿಯನ್ನ ಬದಲಾಯಿಸುವ ಅವಶ್ಯಕತೆ ಬಹಳವಿದೆ. ಸಾಮಾನ್ಯ ಜನತೆಗೆ ಇರುವ ಎರಡೂವರೆ ಲಕ್ಷದ ಆದಾಯ ಮಿತಿಯನ್ನ ಕನಿಷ್ಠ ಮೂರುವರೆ ಅಥವಾ ನಾಲ್ಕು ಲಕ್ಷಕ್ಕೆ ಏರಿಸುವುದು ಎಲ್ಲಾ ರೀತಿಯಲ್ಲೂ ತಕ್ಷಣ ಮಾಡಬೇಕಿರುವ ಕೆಲಸ. ಉಳಿದಂತೆ ಟ್ಯಾಕ್ಸ್ ಸ್ಲಾಬ್ನಲ್ಲಿ ಕೂಡ ಒಂದಷ್ಟು ರಿಯಾಯತಿ ನೀಡಿದರೆ ಒಳಿತು.

ಇದನ್ನೂ ಓದಿ: ತೆರಿಗೆ ಎನ್ನುವುದು ಕುಣಿಕೆಯಾಗದೆ ಹಾರವಾಗಬೇಕು!

ಬೆಂಗಳೂರಿಗೆ ಶೀಘ್ರವಾಗಿ ಮೆಟ್ರೋ ಸ್ಥಾನವನ್ನ ಕೇಂದ್ರ ವಿತ್ತ ಸಚಿವರು ನೀಡಬೇಕಿದೆ, ಇದರ ಜೊತೆಗೆ ಒಂದೇ ಸಮನೆ ಏರುತ್ತಿರುವ ಹಣದುಬ್ಬರವನ್ನ ಗಮನದಲ್ಲಿಟ್ಟುಕೊಂಡು ಆದಾಯತೆರಿಗೆ ಮಿತಿಯನ್ನ ಕೂಡ ಹೆಚ್ಚಿಸುವ ಕಾರ್ಯ ಕೂಡ ಆಗಬೇಕಿದೆ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅಥವಾ ಮೈಸೂರು ಸಂಸದ ಪ್ರತಾಪ್ ಸಿಂಹ ಮಾತ್ರ ಈ ವಿಷಯವನ್ನ ಎತ್ತಬೇಕು ಎಂದಿಲ್ಲ, ಕರ್ನಾಟಕದ ಸಂಸದರಲ್ಲಿ ಯಾರಾದರೂ ಈ ವಿಷಯವನ್ನ ಸದನದಲ್ಲಿ ಎತ್ತಬೇಕಿದೆ. ಇದು ರಾಷ್ಟ್ರೀಯ ಸಮಸ್ಯೆ, ಕೇವಲ ಬೆಂಗಳೂರು ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಹೀಗಾಗಿ ಈ ವಿಷಯವನ್ನ ಎತ್ತಿಕೊಂಡು  ಮಾತನಾಡಲು ಶುರು ಮಾಡಿದರೆ ಬೇರೆ ರಾಜ್ಯಗಳ ಸಂಸದರು ಕೂಡ ಇದಕ್ಕೆ ಜೊತೆಯಾಗುವ, ಧ್ವನಿಯೆತ್ತುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಕಾರ್ಯ ನಮ್ಮ ಸಂಸದರಿಂದ ಶುರುವಾಗಲಿ.

ಈ ವಾರದ ಇನ್ನೊಂದು ಪ್ರಮುಖ ವಿಷಯ ಇಂದು ಅಂದರೆ 15/12/2022 ರಂದು ಮೂರನೇ ಇನ್ಸ್ಟಾಲ್ಮೆಂಟ್ ಅಡ್ವಾನ್ಸ್ ಟ್ಯಾಕ್ಸ್ (Advance Tax Payment third instalment) ಕಟ್ಟುವುದಕ್ಕೆ ಕೊನೆಯ ದಿನ. ಹೀಗಾಗಿ ಅಡ್ವಾನ್ಸ್ ಟ್ಯಾಕ್ಸ್ ತಪ್ಪದೆ ಪಾವತಿಸಬೇಕಾಗುತ್ತದೆ.

ಏನಿದು ಅಡ್ವಾನ್ಸ್ ಟ್ಯಾಕ್ಸ್?

ಯಾವ Finincial year ನಲ್ಲಿ ಆದಾಯ ಉತ್ಪತ್ತಿಯಾಗಿರುತ್ತದೆ ಅದೇ Finincial year ನಲ್ಲಿ ತೆರಿಗೆಯನ್ನ ಕಟ್ಟುವ ಕ್ರಿಯೆಗೆ ಅಡ್ವಾನ್ಸ್ ಇನ್ಕಮ್ ಟ್ಯಾಕ್ಸ್ (Advance Income Tax) ಎನ್ನಲಾಗುತ್ತದೆ. ಯಾರೆಲ್ಲರ ಆದಾಯ ತೆರಿಗೆ ಮಿತಿಗಿಂತ ಹತ್ತು ಸಾವಿರ ರೂಪಾಯಿ ವಾರ್ಷಿಕ ಹೆಚ್ಚಾಗಿರುತ್ತದೆ ಅವರೆಲ್ಲರೂ ಅಡ್ವಾನ್ಸ್ ಟ್ಯಾಕ್ಸ್ ಕಟ್ಟ ಬೇಕಾಗುತ್ತದೆ. ಬಹಳಷ್ಟು ಜನರಿಗೆ ಅದರಲ್ಲೂ ವೇತನಕ್ಕೆ ದುಡಿಯುವ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ ಏಕೆಂದರೆ ಸಾಮಾನ್ಯವಾಗಿ ಅವರು ಕೆಲಸ ಮಾಡುವ ಸಂಸ್ಥೆ ಅವರ ಮೂಲ ವೇತನದಲ್ಲಿ ಟ್ಯಾಕ್ಸ್ ಡಿಡಕ್ಟೇಡ್ ಅಟ್ ಸೋರ್ಸ್ ಅಂದರೆ TDS ಮಾಡಿರುತ್ತಾರೆ. ಹೀಗಾಗಿ ಇವರಿಗೆ ಕೊನೆಯ ದಿನಾಂಕದ ನೋವು ಗೊತ್ತಾಗುವುದಿಲ್ಲ. ಆದರೆ ಸಣ್ಣಪುಟ್ಟ ಉದ್ದಿಮೆದಾರರು ಇದನ್ನ ಬಹಳವಾಗಿ ಗಮನಿಸಬೇಕಾಗುತ್ತದೆ. ಏಕೆಂದರೆ Advance tax ಕಟ್ಟಲು ವಿಫಲರಾದಲ್ಲಿ, ಹೀಗೆ ಕಟ್ಟಲು ವಿಫಲವಾದ ಹಣದ ಮೇಲೆ ಮಾಸಿಕ 1 ಪ್ರತಿಶತ ಪೆನಾಲ್ಟಿ ವಿಧಿಸಲಾಗುತ್ತದೆ.

ಎಲ್ಲಕ್ಕೂ ಮೊದಲಿಗೆ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಲು ಇರುವ due ಡೇಟ್ ಗಳನ್ನ ನೋಡೋಣ. ಇದನ್ನ ನಾಲ್ಕು ಕಂತುಗಳಲ್ಲಿ ಕಟ್ಟಬಹುದು.

  • ಮೊದಲನೇ ಕಂತು ಪಾವತಿಸಲು ಕೊನೆಯ ದಿನಾಂಕ - June 15, - ಒಟ್ಟು ಅಂದಾಜು ತೆರಿಗೆಯ 15 ಪ್ರತಿಶತ
  • ಎರಡನೇ ಕಂತು ಪಾವತಿಸಲು ಕೊನೆಯ ದಿನಾಂಕ - 15 ನೇ September. - ಒಟ್ಟು ತೆರಿಗೆಯ  45 ಪ್ರತಿಶತ
  • ಮೂರನೇ ಕಂತು ಪಾವತಿಸಲು ಕೊನೆಯ ದಿನಾಂಕ - 15 ನೇ December - ಒಟ್ಟು ತೆರಿಗೆಯ 75 ಪ್ರತಿಶತ
  • ನಾಲ್ಕನೇ ಕಂತು ಪಾವತಿಸಲು ಕೊನೆಯ ದಿನಾಂಕ - ಮಾರ್ಚ್ 15. - 100 ಪ್ರತಿಶತ.

ಕೆಲವೊಮ್ಮೆ ಕೆಲವೊಂದು ಸಂಸ್ಥೆ ಅಥವಾ ತೆರಿಗೆದಾರರು ಪ್ರೆಸೆಮ್ಟಿವ್ ಟಾಕ್ಸಾಷನ್ ಸ್ಕೀಮ್ (presumptive taxation scheme ಅಥವಾ PTS) ಅಡಿಯಲ್ಲಿ ನೊಂದಾಯಿಸಿ ಕೊಂಡಿರುತ್ತಾರೆ. ಆಗ ಮಾರ್ಚ್ 15 ರಂದು ಪೂರ್ಣ 100 ಪ್ರತಿಶತ ತೆರಿಗೆಯನ್ನ ಕಟ್ಟಬೇಕಾಗುತ್ತದೆ. ನಾಳೆಗೆ ಅಂದರೆ ಡಿಸೆಂಬರ್ 15ರಲ್ಲಿ ಒಟ್ಟು ಅಂದಾಜು ಆದಾಯದ 75 ಪ್ರತಿಶತ ತೆರಿಗೆಯನ್ನ ಕಟ್ಟಬೇಕಾಗುತ್ತದೆ. ಮೊದಲ ಎರಡು ಕಂತು ಕಟ್ಟಿಲ್ಲದವರು ನಾಳೆ 75 ಪ್ರತಿಶತ ಮತ್ತು ವಿಫಲರಾದ ಮೊತ್ತದ ಮೇಲೆ ಮಾಸಿಕ 1 ಪ್ರತಿಶತ ಹಣವನ್ನ ಪೆನಾಲ್ಟಿ ರೂಪದಲ್ಲಿ ಕಟ್ಟಬೇಕಾಗುತ್ತದೆ. ನಾಳೆಯೂ ಕಟ್ಟಲು ವಿಫಲರಾದರೆ ಮಾರ್ಚ್ 15 ರಂದು ಪೂರ್ಣ ಅಂದರೆ 100 ಪ್ರತಿಶತ ತೆರಿಗೆಯನ್ನ ಪೆನಾಲ್ಟಿ ಸಹಿತ ಕಟ್ಟಬೇಕಾಗುತ್ತದೆ. ಪೆನಾಲ್ಟಿ ಹಣವೇ ದೊಡ್ಡ ಮೊತ್ತವಾಗಿ ಕೂರುತ್ತದೆ. ಹೀಗಾಗಿ ಅಡ್ವಾನ್ಸ್ ಟ್ಯಾಕ್ಸ್ ಎನ್ನುವುದು ಬಹಳ ಮುಖ್ಯ , ಕೊನೆಯ ದಿನಾಂಕದಂದು ತಪ್ಪದೆ ಕಟ್ಟುವುದು ಒಳ್ಳೆಯದು.

ಈ ವರ್ಷದಲ್ಲಿ ಎಷ್ಟು ಆದಾಯ ಉತ್ಪತ್ತಿಯಾಗುತ್ತದೆ ಎನ್ನುವುದನ್ನ ಹೇಗೆ ಪತ್ತೆ ಹಚ್ಚುವುದು? ಗೊತ್ತಿಲ್ಲದ ಆದಾಯದ ಮೇಲೆ ಹೇಗೆ ತೆರಿಗೆಯನ್ನ ಕಟ್ಟುವುದು?

ಗಮನಿಸಿ ಎಷ್ಟು ಆದಾಯ ಉತ್ಪತ್ತಿಯಾಗಬಹುದು ಎನ್ನುವ ಅಂದಾಜು ಲೆಕ್ಕಾಚಾರದ ಮೇಲೆ ಈ ತೆರಿಗೆಯನ್ನ ಕಟ್ಟಬೇಕಾಗುತ್ತದೆ. ಅಂದಾಜು ಆದಾಯದ ಮೇಲೆ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎನ್ನುವುದನ್ನ ಲೆಕ್ಕಹಾಕಿ ಅದರಲ್ಲಿ ಹಿಂದಿನ ಅಡ್ವಾನ್ಸ್ ಟ್ಯಾಕ್ಸ್ ಮತ್ತು ಟಿಡಿಎಸ್ ಇದ್ದರೆ ಅದನ್ನ ಕಳೆಯಬೇಕಾಗುತ್ತದೆ. ಆ ನಂತರವೂ ಹಣವನ್ನ ನೀಡಬೇಕಾದ ಸಂದರ್ಭದಲ್ಲಿ ಹೊಸ ಅಡ್ವಾನ್ಸ್ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತದೆ. ಅಂದರೆ ಅಡ್ವಾನ್ಸ್ ಟ್ಯಾಕ್ಸ್ ಹಣವನ್ನ ಕಳೆದು ಹೋದ ತಿಂಗಳುಗಳ ನಿಜವಾದ ಆದಾಯದ ಜೊತೆಗೆ ತಾಳೆ ಮಾಡಿ ಅಡ್ಜಸ್ಟ್ ಮಾಡಬಹುದು. ಹೆಚ್ಚಿನ ಆದಾಯದ ಸಂಭಾವ್ಯತೆ ಇದ್ದಾಗ ಮಾತ್ರ ಮತ್ತೆ ಅಡ್ವಾಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಎಲೆಕ್ಟ್ರೋಲ್ ಬಾಂಡ್: ಇದು ಹೂಡಿಕೆಯ ಬಾಂಡ್ ಅಲ್ಲ, ದೇಣಿಗೆಯ ಬಾಂಡ್! 

ಇನ್ನು ಜಿಎಸ್ಟಿ ಕಥೆ ಬೇರೆಯದು. ಬಿಲ್ ಆದ ನಂತರದ ತಿಂಗಳ ದಿನಾಂಕ 20ರ ಒಳಗೆ ತೆರಿಗೆಯನ್ನ ಪಾವತಿಸಿ ಬಿಡಬೇಕು. ಇಲ್ಲದಿದ್ದರೆ ಇಲ್ಲೂ ಪೆನಾಲ್ಟಿ ತಪ್ಪಿದ್ದಲ್ಲ. ಆದರೆ ಗಮನಿಸಿ ಬಹಳಷ್ಟು ವೇಳೆ ಬಿಲ್ ಮೊತ್ತ ವರ್ತಕನಿಗೆ ವಸೂಲಿ ಮಾಡಲು ಮೂರರಿಂದ ನಾಲ್ಕು ತಿಂಗಳು ತಗಲುತ್ತದೆ. ಅಂದರೆ ಹಣ ವಸೂಲಿ ಆಗುವುದಕ್ಕೆ ಮುಂಚೆ ಆತ ತೆರಿಗೆಯನ್ನ ನೀಡಬೇಕಾಗುತ್ತದೆ. ಇದೆ ಪ್ರತಿ ತಿಂಗಳೂ ಆಗುವುದರಿಂದ ಮೊದಲ ಬಿಲ್ ಹಣ ವಸೂಲಿ ಆಗುವ ವೇಳೆಗೆ ಮೂರು ಬಾರಿ ತೆರಿಗೆ ನೀಡಿರುತ್ತಾರೆ. ಇವತ್ತಿನ ದಿನ ವರ್ತಕರು ವರ್ಕಿಂಗ್ ಕ್ಯಾಪಿಟಲ್ ಇಲ್ಲದೆ ಪರದಾಡಲು ಇದು ಬಹುಮುಖ್ಯ ಕಾರಣ. ಹಿಂದಿನ ವ್ಯಾಟ್ ಲೆಕ್ಕಾಚಾರದಲ್ಲಿ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟಬೇಕಾಗಿತ್ತು. ಜಿಎಸ್ಟಿ ಪ್ರತಿ ತಿಂಗಳೂ ಹಣ ವಸೂಲಾಗಿರಲಿ ಅಥವಾ ಬಿಡಲಿ ಕಟ್ಟಲೇಬೇಕಾದ ತೆರಿಗೆಯಾಗಿದೆ. ಇದರಿಂದ ವರ್ತಕ ಸಮಾಜ ಇನ್ನಿಲ್ಲದೆ ತೊಂದರೆಯನ್ನ ಕೂಡ ಅನುಭವಿಸುತ್ತಿದೆ. ಈ ವಿಷಯವನ್ನೂ ಕೂಡ ನಮ್ಮ ಸಂಸದರು ಸದನದಲ್ಲಿ ಪ್ರಸ್ತಾಪಿಸಿ, ವಿತ್ತ ಸಚಿವರಿಗೆ ಮನದಟ್ಟು ಮಾಡಿಕೊಡಬೇಕಿದೆ.

ಕೊನೆಮಾತು: ಇಂದು ವರ್ತಕ ಸಮಾಜದ ಜೊತೆಗೆ ಜನ ಸಾಮಾನ್ಯ ಕೂಡ ಬಹಳಷ್ಟು ಸಂಕಷ್ಟದಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಸರಕಾರ ತನಗೆ ಬರುವ ಹಣದಲ್ಲಿ ಒಂದು ದಿನವೂ ಏರುಪೇರು ಆಗಬಾರದು ಎನ್ನುವ ತೀರಾ ಕಠೋರ ಶಿಸ್ತಿಗೆ ಗುರಿಯಾಗಬಾರದು. ತೆರಿಗೆ ಮನ್ನಾ ಮಾಡಲಿ ಎನ್ನುವುದು ಅಥವಾ ಕಡಿಮೆ ಮಾಡಿ ಎನ್ನುವುದು ಇಲ್ಲಿನ ಉದ್ದೇಶವಲ್ಲ, ನಿಗದಿತ ಸಮಯದಲ್ಲಿ ಕಟ್ಟಲಾಗದ ಸಂಸ್ಥೆಗಳಿಗೆ , ತೆರಿಗೆದಾರರಿಗೆ ಒಂದಷ್ಟು ಸಮಯ ನೀಡಬೇಕು. ಉದ್ದಿಮೆದಾರರಿಗೆ ಎಲ್ಲಾ ಕಡೆಯಿಂದಲೂ ಪೆಟ್ಟು ಬೀಳುತ್ತಿದೆ. ಒಮ್ಮೆ ಯೋಚಿಸಿ ನೋಡಿ ಪ್ರತಿ ಊರಿನ ಪ್ರಮುಖ 100 ವರ್ತಕರು ನಮ್ಮ ಜೀವನಕ್ಕೆ ಬೇಕಾದ ಹಣ ಗಳಿಸಿದ್ದೇವೆ ಎಂದು ವ್ಯಾಪಾರ ನಿಲ್ಲಿಸಿದರೆ? ಭಾರತ ಕುಸಿಯಲು ತಿಂಗಳು ಸಾಕು. ಭಾರತದ ಬೆನ್ನೆಲುಬು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ , ಅವುಗಳ ಪೋಷಣೆ ಸರಕಾರದ ಹೊಣೆ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
rahul-gandhi

ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆ; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಇದರಿಂದ...


Result
ಕಾಂಗ್ರೆಸ್ ಗೆ ಹಿನ್ನಡೆ
ಕಾಂಗ್ರೆಸ್ ಗೆ ಪ್ರಯೋಜನ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp