ಮಲಬದ್ಧತೆ ಸಮಸ್ಯೆ: ನಿಮಗೆ ತಿಳಿಯದೇ ಇರುವ ಕಾರಣಗಳು? ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ... (ಕುಶಲವೇ ಕ್ಷೇಮವೇ)
ಇಂದು ಮಲಬದ್ಧತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಮಲಬದ್ಧತೆ ಬಗ್ಗೆ ಒಂದು ಸಮಸ್ಯೆ ಎಂಬುದು ತಿಳಿದಿರುವುದಿಲ್ಲ. “ಡಾಕ್ಟ್ರೇ, ನಮ್ಮ ಮಗ ಹಲವಾರು ದಿನಗಳಿಂದ ಟಾಯ್ಲೆಟ್ಟಿಗೆ ಸರಿಯಾಗಿ ಹೋಗುತ್ತಿಲ್ಲ” ಅಥವಾ “ಸರಿಯಾಗಿ ಮಲವಿಸರ್ಜನೆ ಆಗುತ್ತಿಲ್ಲ” ಎಂದು ಹೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
Published: 17th December 2022 01:02 PM | Last Updated: 21st December 2022 05:40 PM | A+A A-

ಸಂಗ್ರಹ ಚಿತ್ರ
ಇಂದು ಮಲಬದ್ಧತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಮಲಬದ್ಧತೆ ಬಗ್ಗೆ ಒಂದು ಸಮಸ್ಯೆ ಎಂಬುದು ತಿಳಿದಿರುವುದಿಲ್ಲ. “ಡಾಕ್ಟ್ರೇ, ನಮ್ಮ ಮಗ ಹಲವಾರು ದಿನಗಳಿಂದ ಟಾಯ್ಲೆಟ್ಟಿಗೆ ಸರಿಯಾಗಿ ಹೋಗುತ್ತಿಲ್ಲ” ಅಥವಾ “ಸರಿಯಾಗಿ ಮಲವಿಸರ್ಜನೆ ಆಗುತ್ತಿಲ್ಲ” ಎಂದು ಹೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ನಾರಿನಾಂಶದ ಕೊರತೆ ಮತ್ತು ಸರಿಯಾಗಿ ನೀರು ಕುಡಿಯದಿದ್ದರೆ ಮಲಬದ್ದತೆ ಉಂಟಾಗುತ್ತದೆ. ಇತ್ತೀಚೆಗೆ ಎಲ್ಲರಲ್ಲೂ ಕಂಡುಬರುತ್ತಿರುವ ಅನಾರೋಗ್ಯಕರ ಜೀವನಶೈಲಿ, ದೈಹಿಕ ವ್ಯಾಯಾಮ/ವಾಕಿಂಗ್ ಮಾಡದಿರುವುದು ಮತ್ತು ಅತಿಯಾಗಿ ಜಂಕ್ ಫುಡ್ ಸೇವನೆ ಮಾಡುವುದರಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಮಲಬದ್ಧತೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ. ನಾವು ಸೇವಿಸಿದ ಆಹಾರ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು. ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನಲ್ಲಿ ಚಲನೆಯಲ್ಲಿ ತೊಡಕು ಉಂಟಾಗಿ ಮಲ ಹೊರಗೆ ಬರುವುದಿಲ್ಲ. ಇದಕ್ಕೆ ಮಲಬದ್ಧತೆ ಎನ್ನುತ್ತಾರೆ.
ಇದನ್ನೂ ಓದಿ: ಪದೆಪದೇ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಪರಿಹಾರ...
ಮಲಬದ್ಧತೆ ಒಂದು ದೀರ್ಘಾವಧಿ ಸಮಸ್ಯೆ. ಇದು ಆರು ತಿಂಗಳಿಂದ ಹಿಡಿದು ವರ್ಷಗಳವರೆಗೆ ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಹೊರಬರಲು ನಿರಂತರ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ನಾವು ಸೇವಿಸುವ ಆಹಾರದ ಮೂಲಕವೇ ಇದನ್ನು ನಿಧಾನವಾಗಿ ಸರಿಪಡಿಸಿಕೊಳ್ಳಬೇಕು.
ಮಲಬದ್ಧತೆಯ ಮುಖ್ಯ ಸಾಮಾನ್ಯ ಲಕ್ಷಣಗಳೆಂದರೆ ಬೆಳಗ್ಗೆ ಸರಿಯಾಗಿ ಮಲವಿಸರ್ಜನೆಯಾಗದೆ ಇರುವುದು., ಮಲವು ಗಟ್ಟಿಯಾಗಿರುವುದು, ಮಲ ವಿಸರ್ಜನೆ ಮಾಡುವಾಗ ನೋವು ಉಂಟಾಗುವುದು, ರಕ್ತ ಬೀಳುವುದು, ಬೆಳಗ್ಗೆ ಎದ್ದ ತಕ್ಷಣ ವಾಕರಿಕೆ, ನಿ:ಶ್ಯಕ್ತಿ, ಆಯಾಸ, ಮಲ ಪೂರ್ತಿಯಾಗಿ ಖಾಲಿಯಾಗಿಲ್ಲ ಎಂದು ಅನಿಸುವುದು, ಹೊಟ್ಟೆ ನೋವು, ಸೆಳೆತ ಇತ್ಯಾದಿ.
ವೃದ್ಧರಲ್ಲಿ ಚಯಾಪಚಯ ಕ್ರಿಯೆ (ಮೆಟಾಬಾಲಿಸಂ) ಸರಿಯಾಗಿ ನಡೆಯದೇ ಇರುವುದು ಮತ್ತು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದಿರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ನಂತರದ ದಿನಗಳಲ್ಲಿ ದೊಡ್ಡ ಕರುಳಿನ ಚಲನವಲನಗಳು ಸರಿಯಾಗಿ ನಡೆಯದೇ ಶುರುವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚು ಸಮಯ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಪೌಷ್ಟಿಕಾಂಶದ ಕೊರತೆಯಿಂದಲೂ ಮಲಬದ್ಧತೆ ಉಂಟಾಗುತ್ತದೆ. ಕೆಲವರು ಅತಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದಲೂ ಜೀರ್ಣಕ್ರಿಯೆಲ್ಲಿ ತೊಂದರೆ ಉಂಟಾಗಿ ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ. ಕಡಿಮೆ ನಿದ್ದೆ ಮಾಡುವುದು. ವ್ಯಾಯಾಮ ಆಥವಾ ಜಾಗಿಂಗ್ ಮಾಡದೇ ಇರುವುದು ಇದಕ್ಕೆ ದಾರಿ ಮಾಡಿಕೊಡುತ್ತದೆ.
ಇದನ್ನೂ ಓದಿ: ಕರುಳು ಸಂಬಂಧಿತ ಸಮಸ್ಯೆಗಳಿಗೆ ರಾಮಬಾಣ; ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ನೈಸರ್ಗಿಕ ಔಷಧಿ!
ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ನೀರಿನ ಸೇವನೆ ಅತ್ಯಗತ್ಯ. ಮಲಬದ್ಧತೆಯನ್ನು ನಿವಾರಿಸಲು ನಾವು ಮೊದಲು ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಲೇಬೇಕು. ಇದರಿಂದ ತ್ಯಾಜ್ಯ ವಿಸರ್ಜನೆ ಸುಲಭವಾಗುತ್ತದೆ.
ಆಹಾರ ಸೇವಿಸುವಾಗ ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ನಾರಿನಾಂಶವಿರುತ್ತದೆ ಅವುಗಳನ್ನು ಬಳಸುವುದು ಒಳ್ಳೆಯದು. ತಾಜಾ ಹಸಿರು ಸೊಪ್ಪು , ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಪಪ್ಪಾಯಿ, ಬಾಳೆಹಣ್ಣು, ಕಿತ್ತಳೆ, ನಿಂಬೆ, ಸೀಬೆಹಣ್ಣು ಮತ್ತು ಆವಕಾಡೊದಂತಹ ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇವುಗಳನ್ನು ಪೂರ್ತಿಯಾಗಿ ತಿನ್ನಬಹುದು. ಇವುಗಳಲ್ಲಿ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳೂ ಇವೆ. ಗೋಡಂಬಿ, ಬಾದಾಮಿ, ಏಪ್ರಿಕಾಟ್ ಮತ್ತು ಬಾದಾಮಿಗಳನ್ನೂ ಸೇವಿಸಬಹುದು. ಶುಂಠಿ, ಕೋಸುಗಡ್ಡೆ, ಪಾಲಕ್ ಸೊಪ್ಪು ಮತ್ತು ಮೊಳಕೆ ಕಾಳಿನಲ್ಲಿ ನಾರಿನಂಶ ಅಧಿಕವಾಗಿದೆ. ಅಲ್ಲದೇ ಹಾಲು, ತುಪ್ಪ ಮತ್ತು ಮೊಸರನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಇಂದು ಹೆಚ್ಚು ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವ ಪ್ರವೃತ್ತಿಯು ಹೆಚ್ಚಾಗಿದೆ, ಇದು ತಿನ್ನಲು ರುಚಿಯಾಗಿರಬಹುದು, ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಅತಿ ಹೆಚ್ಚು ಉಪ್ಪು, ಖಾರ, ಸಿಹಿ ಮತ್ತು ಹುಳಿಯಾಗಿರುವ ತಿನಿಸುಗಳು ಅದರಲ್ಲಿಯೂ ಜಂಕ್ ಫುಡ್ ಸೇವನೆ ಬಿಡಬೇಕು.
ಇದನ್ನೂ ಓದಿ: ಪ್ರಾಸ್ಟೇಟ್ ಕ್ಯಾನ್ಸರ್ ಬಗೆಗಿನ ಏಳು ತಪ್ಪು ಕಲ್ಪನೆಗಳು...
ಬೆಳಗಿನ ಸಮಯದಲ್ಲಿ ನಿಮ್ಮ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನವೂ ಕನಿಷ್ಠ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಖಾಲಿ ಹೊಟ್ಟೆಗೆ ಜೀರಿಗೆ ಹಾಕಿ ಕುದಿಸಿದ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ ಮಲಗುವಾಗ ತ್ರಿಫಲಾ ಚೂರ್ಣವನ್ನು ಕಾಲು ಲೋಟ ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಬೇಕು.
ಪೌಷ್ಟಿಕಾಂಶದ ಆಹಾರದ ಜೊತೆಗೆ ಸರಿಯಾದ ವಿಶ್ರಾಂತಿ ಮತ್ತು ವ್ಯಾಯಾಮ ಮಾಡುವುದೂ ಕೂಡ ಮಲಬದ್ಧತೆಯನ್ನು ನಿವಾರಿಸುತ್ತದೆ. ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಕನಿಷ್ಠ ೪೫ ನಿಮಿಷ ನಿಲ್ಲದೆ ವಾಕಿಂಗ್ ಮಾಡಬೇಕು. ಜೊತೆಗೆ ಯೋಗಾಭ್ಯಾಸವೂ ಇದ್ದರೆ ಉತ್ತಮ. ಇದರಿಂದ ನಮ್ಮ ಕರುಳಿನ ಸುತ್ತ ಇರುವ ಮಾಂಸ ಖಂಡಗಳನ್ನು ಬಲಗೊಳ್ಳುತ್ತವೆ. ಕರುಳಿನಲ್ಲಿ ಆಹಾರದ ಪಚನ ಮತ್ತು ಚಲನೆಯನ್ನು ಸರಿಯಾಗಿಸಲು ನೆರವಾಗುತ್ತದೆ. ಮಲಬದ್ಧತೆಯಿಂದ ಪರಿಹಾರ ಪಡೆಯಲು ಅಲೋವೆರಾ ರಸ, ಹಸಿ ಅರಿಶಿನ, ಎಳ್ಳು ಬೀಜಗಳು, ಅಗಸೆ ಬೀಜಗಳು ಮತ್ತು ನೆನೆಸಿದ ಚಿಯಾ ಬೀಜಗಳನ್ನು ಸೇವನೆ ಉತ್ತಮ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com