ಸ್ನಾಯು ಕ್ಷಯ ಅಥವಾ ಮಸ್ಕ್ಯುಲರ್ ಡಿಸ್ಟ್ರೊಫಿ ಯಾರಿಗೆ ಬರಬಹುದು? ಚಿಕಿತ್ಸೆ ಹೇಗೆ...? (ಕುಶಲವೇ ಕ್ಷೇಮವೇ)

ಸ್ನಾಯು ಕ್ಷಯವು ಸ್ನಾಯುಗಳ ದೌರ್ಬಲ್ಯವನ್ನು ಕ್ರಮೇಣ ಹೆಚ್ಚಿಸುವ ಮತ್ತು ಸ್ನಾಯು ನಷ್ಟವನ್ನು ಉಂಟುಮಾಡುವ ರೋಗಗಳ ಒಂದು ಗುಂಪು.
ಸ್ನಾಯು ಕ್ಷಯ
ಸ್ನಾಯು ಕ್ಷಯ

ಸ್ನಾಯು ಕ್ಷಯವು ಸ್ನಾಯುಗಳ ದೌರ್ಬಲ್ಯವನ್ನು ಕ್ರಮೇಣ ಹೆಚ್ಚಿಸುವ ಮತ್ತು ಸ್ನಾಯು ನಷ್ಟವನ್ನು ಉಂಟುಮಾಡುವ ರೋಗಗಳ ಒಂದು ಗುಂಪು. ಈ ರೋಗವಿದ್ದವರಲ್ಲಿ ಸ್ನಾಯುಗಳು ಕ್ರಮೇಣ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಮತ್ತು ಅವರು ದಿನನಿತ್ಯದ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸಬೇಕಾಗುತ್ತದೆ. 

ಸ್ನಾಯು ಕ್ಷಯಕ್ಕೆ ಕಾರಣ

ಸ್ನಾಯು ಕ್ಷಯಕ್ಕೆ ವಂಶವಾಹಿಗಳಲ್ಲಿ (ಜೀನ್ಸ್) ಉಂಟಾಗುವ ಬದಲಾವಣೆಗಳೇ ಕಾರಣ. ಇದೊಂದು ಅಪರೂಪದ ರೋಗ. ಈ ರೋಗಕ್ಕೆ ಯಾವ ಔಷಧಿ ಇಲ್ಲ. ಆದರೆ ಇದರ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ನಿರ್ವಹಿಸಲು ಚಿಕಿತ್ಸೆಗಳು ಮತ್ತು ಥೆರಪಿಗಳು ಲಭ್ಯವಿವೆ. ಡಿಸ್ಟ್ರೋಫಿನ್ ಎಂಬ ಪ್ರೋಟೀನ್ ಕೊರತೆಯಿಂದಾಗಿ ಸ್ನಾಯು ಕ್ಷಯ ಉಂಟಾಗುತ್ತದೆ. ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಡಿಸ್ಟ್ರೋಫಿನ್ ಬಹಳ ಮುಖ್ಯ. ಈ ಪ್ರೋಟೀನ್ ನ ಕೊರತೆಯು ನಡಿಗೆ, ಆಹಾರ ನುಂಗುವಿಕೆ ಮತ್ತು ಸ್ನಾಯುಗಳ ಸಮನ್ವಯದ ಸಮಸ್ಯೆಗಳನ್ನು ಉಂಟುಮಾಡಬಹುದು.

ಸ್ನಾಯು ಕ್ಷಯ ಯಾರಿಗೆ ಬರಬಹುದು

ಸ್ನಾಯು ಕ್ಷಯ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಕೆಲವೊಮ್ಮೆ ಇದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಒಡಹುಟ್ಟಿದವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮಕ್ಕಳಿಗೆ ಹುಟ್ಟಿದಾಗಿನಿಂದಲೇ ಸ್ನಾಯು ಕ್ಷಯ ಬರಬಹುದು. ವಂಶವಾಹಿಗಳ ಮೂಲಕ ಈ ರೋಗ ಬಂದು 20 ವರ್ಷ ತಲುಪುವ ಮೊದಲೇ ಸಾವು ಉಂಟಾಗಬಹುದು. ಈ ಅನುವಂಶಿಕ ರೋಗವು ದೇಹದ ಎಲುಬಿನ ಮಾಂಸಖಂಡ ಕ್ಷೀಣ ಹಾಗೂ ನಿತ್ರಾಣಕ್ಕೆ ಕಾರಣವಾಗುತ್ತದೆ. ಇದರಿಂದ ಕೇವಲ ಐಚ್ಛಿಕ ಸ್ನಾಯುಗಳು ಮಾತ್ರವಲ್ಲ, ದೇಹದಲ್ಲಿನ ಐನೈಚ್ಛಿಕ ಸ್ನಾಯು ಹೊಂದಿರುವ ಹೃದಯ ಮತ್ತಿತರ ಪ್ರಮುಖ ಅಂಗಗಳೂ ತೊಂದರೆಗೆ ಒಳಗಾಗುತ್ತವೆ.

ಸ್ನಾಯು ಕ್ಷಯ ಅನುವಂಶೀಯವಾಗಿ ಕುಟುಂಬಗಳಲ್ಲಿ ಕಂಡುಬರುತ್ತದೆ. ಸ್ನಾಯು ಕ್ಷಯವಿರುವ ಒಬ್ಬ ಪೋಷಕರನ್ನು ಹೊಂದಿರುವ ಮಗು ಅವರಿಂದ ಸ್ನಾಯು ಕ್ಷಯ ಉಂಟುಮಾಡುವ ವಂಶವಾಹಿಯನ್ನು ಪಡೆಯಬಹುದು. ಹೀಗೆ ಕುಟುಂಬದಲ್ಲಿ ಸ್ನಾಯು ಕ್ಷಯ ಹರಿದು ಬರುತ್ತದೆ.  

ಸಾಮಾನ್ಯವಾಗಿ ಮೂರರಿಂದ ಆರು ವರ್ಷ ವರ್ಷದ ಮಕ್ಕಳಲ್ಲಿ ಲಕ್ಷಣಗಳನ್ನು ಅನುಸರಿಸಿ ಸ್ನಾಯು ಕ್ಷಯದ ರೋಗನಿರ್ಣಯ ಮಾಡಲಾಗುತ್ತದೆ. ಈ ರೋಗ ಬಂದರೆ ಕುಳಿತರೆ ಮೇಲೇಳಲು ಕಷ್ಟಪಡುವುದು, ನಡೆದಾಡಲು ಕಷ್ಟವಾಗುವುದು, ನಡೆದಾಡುವಾಗ ಬೀಳುವುದು ಮತ್ತು ಕಾಲಿನ ಮೀನಖಂಡಗಳ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಮಾತು, ಭಾಷೆ, ದೃಷ್ಟಿ, ಶ್ರವಣ, ಆಹಾರ ಸೇವನೆಯಲ್ಲಿ ಈ ದೋಷಗಳು ಕಂಡು ಬರುವುದಿಲ್ಲ. ಆದರೆ ಕೆಲವು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದಲ್ಲಿ ಕುಸಿತ ಕಾಣಬಹುದು.

ಸ್ನಾಯು ಕ್ಷಯ ರೋಗದ ಪರಿಣಾಮಗಳು

ಈ ರೋಗದಿಂದ ಬಾಧಿತ ಮಕ್ಕಳು ಸುಮಾರು 10 ರಿಂದ 12 ವರ್ಷಗಳಲ್ಲಿ ನಡೆಯುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಬಳಿಕ ನಿಧಾನವಾಗಿ ಉಸಿರಾಟ ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ. ಬೆನ್ನಿನ ಎಲುಬು ಬಾಗಲು ಆರಂಭಿಸುತ್ತದೆ. ಇದರಿಂದಾಗಿ ಉಸಿರಾಟ, ಎದೆನೋವು ಮತ್ತಿತರ ಸಮಸ್ಯೆಗಳು ಕಾಡಬಹುದು. ರೋಗಕ್ಕೆ ತುತ್ತಾದ ಹೆಚ್ಚಿನ ಮಕ್ಕಳು ಸುಮಾರು 20 ವರ್ಷ ತುಂಬುವ ವೇಳೆ ಭಾರಿ ತೊಂದರೆಗೆ ಈಡಾಗುತ್ತಾರೆ. ಹೃದಯ ಹಾಗೂ ಶ್ವಾಸಕೋಶದ ತೊಂದರೆ ಉಂಟಾಗುತ್ತದೆ.  

ಸ್ನಾಯು ಕ್ಷಯದ ವಿಧಗಳು

ಸ್ನಾಯು ಕ್ಷಯದಲ್ಲಿ ಸುಮಾರು 10 ವಿಧಗಳಿವೆ. ಇವುಗಳಲ್ಲಿ ಡಚೆನ್, ಬೆಕರ್, ಕಾನ್ ಜೆನಿಟಲ್, ಲಿಂಬ್ ಗ್ರಿಡಲ್ ಮತ್ತು ಫೇಸಿಯೋಸ್ಕಾಪುಲೋಹ್ಯೂಮರಲ್ ಡಿಸ್ಟ್ರೋಫಿಗಳು ಪ್ರಮುಖವಾದವು. ಈ ಪೈಕಿ ಡಚೆನ್ ಮಸ್ಕ್ಯುಲರ್ ಡಸ್ಟ್ರೊಫಿ (ಡಿಎಂಡಿ) ಅತಿ ಹೆಚ್ಚಾಗಿ ಕಂಡುಬರುತ್ತದೆ. ಇದು ಮುಖ್ಯವಾಗಿ ಗಂಡು ಮಕ್ಕಳನ್ನು ಪ್ರಭಾವಿಸುತ್ತದೆ. ಇದರ ಸಾಮಾನ್ಯ ಲಕ್ಷಣಗಳು ಒಂದರಿಂದ ಮೂರು ವರ್ಷವಾದಾಗ ಏಳಲು ಕಷ್ಟ, ಓಡಲು ಆಗದಿರುವುದು, ಜಿಗಿಯಲು ಆಗದಿರುವುದು ಮತ್ತು ತನ್ನ ವಯಸ್ಸಿನ ಇತರ ಮಕ್ಕಳೊಡನೆ ಆಟವಾಡಲು ಆಗದಿರುವುದು. ಮೆಟ್ಟಿಲುಗಳನ್ನು ಹತ್ತಲು ಆಗದಿರುವುದು. ಹೀಗೆ ಲಕ್ಷಣಗಳು ಮುಂದುವರೆದರೆ ಮಕ್ಕಳಿಗೆ ದೂರ ನಡೆಯಲು ಆಗುವುದಿಲ್ಲ. ಕೆಲವೊಮ್ಮೆ ನಡೆಯುವಾಗ ಬೀಳಲೂಬಹುದು. ಕ್ರಮೇಣ ಅವರನ್ನು ವೀಲ್ ಚೇರಿನಲ್ಲಿ ಕೂರಿಸಬೇಕಾಗುತ್ತದೆ. ಇಂತಹ ಲಕ್ಷಣಗಳನ್ನು ಹೊರತುಪಡಿಸಿದರೆ  ಆ ಮಕ್ಕಳು ಸಾಮಾನ್ಯ ಮಕ್ಕಳಂತೆಯೇ ಇರುತ್ತಾರೆ. ಅವರ ಮಾತು ಮತ್ತು ಶ್ರವಣ ಶಕ್ತಿಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. 

ಸ್ನಾಯು ಕ್ಷಯಕ್ಕೆ ಚಿಕಿತ್ಸೆಗಳು

ಫಿಸಿಯೋಥೆರಪಿ ವ್ಯಾಯಾಮಗಳಿಂದ ರೋಗಗ್ರಸ್ತ ಮಕ್ಕಳ ಜೀವನವನ್ನು ಉತ್ತಮಪಡಿಸಬಹುದು. ಅವರನ್ನು ಆದಷ್ಟುಮಟ್ಟಿಗೆ ಚಲನಶೀಲರನ್ನಾಗಿ ಇಡಬಹುದು. ಆದರೆ ಸ್ನಾಯುಗಳ ಕ್ಷೀಣತೆಗೆ ಯಾವ ಪರಿಹಾರವೂ ಇಲ್ಲ. ಈ ರೋಗಕ್ಕೆ ಸಮರ್ಪಕ ಔಷಧಿಯನ್ನು ಈ ತನಕ ಪತ್ತೆ ಹಚ್ಚಿಲ್ಲ. ಈ ಬಗ್ಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಭಾರತದಲ್ಲಿ ಅಂತಹ ಸಂಶೋಧನೆಗಳ ಪ್ರಗತಿ ಕಂಡುಬಂದಿಲ್ಲ.

ಆಯುರ್ವೇದಲ್ಲಿ ಸ್ನಾಯು ಕ್ಷಯಕ್ಕೆ ಪಂಚಕರ್ಮ ಮತ್ತು ಧಾರಾ ಚಿಕಿತ್ಸೆಗಳು ಲಭ್ಯವಿವೆ. ಜೊತೆಗೆ ಸರಳ ವ್ಯಾಯಾಮಗಳು ಚಲನಶೀಲತೆಗೆ ಸಹಾಯಮಾಡುತ್ತವೆ. ಎಲ್ಲಾ ಅವಶ್ಯಕ ಪೋಷಕಾಂಶಗಳಿರುವ ಆಹಾರ ಸೇವನೆ ಮತ್ತು ದಿನಕ್ಕೆ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯುವುದು ಮುಖ್ಯ. 

ಮಸ್ಕ್ಯುಲರ್ ಡಿಸ್ಟ್ರೊಫಿ ಅಸೋಸಿಯೇಷನ್ ಆಫ್ ಇಂಡಿಯಾ ಭಾರತದಲ್ಲಿ ಈ ರೋಗದಿಂದ ತೊಂದರೆಗೊಳಗಾದವರಿಗೆ ಮತ್ತು ಅವರ ಮನೆಯವರಗೆ ಸಹಾಯ ಮತ್ತು ಬೆಂಬಲ ನೀಡುತ್ತದೆ. ಇಪ್ಪತ್ತೆರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಆರಂಭವಾದ ಸಂಸ್ಥೆಯು ಈವರೆಗೆ ಸಾವಿರಾರು ರೋಗಿಗಳಿಗೆ ಸಹಾಯಹಸ್ತ ನೀಡಿದೆ. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com