
ಬಜೆಟ್ 2022 ಮಂಡನೆಗೆ ಮುನ್ನ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವ ಬಜೆಟ್ ಮಂಡಿಸುವುದು ಬಹಳ ಕಷ್ಟ, ಎಲ್ಲಾ ವರ್ಗದ ಜನರನ್ನೂ ಗಣನೆಗೆ ತೆಗೆದುಕೊಂಡು ಬಜೆಟ್ ಮಂಡನೆ ಮಾಡಿದರೂ ಕೋಟ್ಯಂತರ ಜನರಿಗೆ ಇದರಿಂದ ಯಾವುದೇ ತೆರನಾದ ಉಪಯೋಗವಿಲ್ಲ ಎನ್ನುವಂತಾಗುವುದು ಕೂಡ ಸಹಜ. ನೀವು ಈ ಬಜೆಟ್ ಎಂದಲ್ಲ, ಇಲ್ಲಿಯ ತನಕ ಸ್ವತಂತ್ರ ಭಾರತದಲ್ಲಿ ಮಂಡನೆಯಾಗಿರುವ ಎಲ್ಲಾ ಬಜೆಟ್ಗಳ ಕಥೆ ಇದೆ.
ಈ ಬಜೆಟ್ ಕೂಡ ಅದೇ ರಾಗವನ್ನ ಮುಂದುವರಿಸಿದೆ. ಅಂದರೆ ಮಧ್ಯಮ ವರ್ಗದ ಜನರಿಗೆ ಯಾವುದೇ ರೀತಿಯ ಲಾಭವಿಲ್ಲ. ಸಾಲದಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಫೈನಾನ್ಸ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿಯವರು ಇನ್ಕಮ್ ಟ್ಯಾಕ್ಸ್ ಹೆಚ್ಚಿಸದಂತೆ ನನಗೆ ತಾಕೀತು ಮಾಡಿದ್ದರು ಹೀಗಾಗಿ ಇನ್ಕಮ್ ಟ್ಯಾಕ್ಸ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ.
ಕೋವಿಡ್ ಇತ್ತು ಹೀಗಾಗಿ ಕೂಡ ದರದ ಹೆಚ್ಚಳ ಮಾಡಿಲ್ಲ ಎಂದಿದ್ದಾರೆ. ಜನತೆ ಏನಾದರೂ ಕಡಿಮೆಯಾದೀತೇ ಎನ್ನುವ ಆಶಾಭಾವದಲ್ಲಿದ್ದರೆ, ಹೆಚ್ಚು ಮಾಡಿಲ್ಲ ಅದು ನಿಮ್ಮ ಪುಣ್ಯ ಎನ್ನುವ ಮಾತನ್ನ ಆಡಿದ್ದಾರೆ. ಗಮನಿಸಿ ಇಂದಿಗೆ ಭಾರತದಲ್ಲಿ ಪುಸ್ತಕದ ಪ್ರಕಾರ 5.6 ಪ್ರತಿಶತ ಹಣದುಬ್ಬರವಿದೆ, ಆದರೆ ತೈಲಬೆಲೆ ಹೆಚ್ಚಳ, ಸಪ್ಲೈ ಚೈನ್ ಕುಸಿತದ ಕಾರಣಗಳಿಂದ ಮಾರುಕಟ್ಟೆಯಲ್ಲಿ ಇರುವ ನಿಜವಾದ ಹಣದುಬ್ಬರ 13 ಪ್ರತಿಶತಕ್ಕೂ ಹೆಚ್ಚಿದೆ. ಹಣದುಬ್ಬರ ಹೆಚ್ಚಾದಂತೆ ಹಣ ತನ್ನ ಕೊಳ್ಳುವ ಮೌಲ್ಯವನ್ನ ಕಳೆದುಕೊಳ್ಳುತ್ತಾ ಹೋಗುತ್ತದೆ.
ಹೀಗಾಗಿ ಸಮಾಜದಲ್ಲಿ ಸಹಜವಾಗೇ ವೇತನದಲ್ಲಿ ಹೆಚ್ಚಳ ಇತ್ಯಾದಿಗಳ ಮೂಲಕ ಆದಾಯ ಕೂಡ ಹೆಚ್ಚಾಗಲೇ ಬೇಕು, ಬೇರೆ ದಾರಿಯೇ ಇಲ್ಲ. ಹೀಗೆ ಮೌಲ್ಯ ಕಳೆದುಕೊಂಡು ಹೆಚ್ಚಾದ ಸಂಖ್ಯೆಯಿಂದ ಮಧ್ಯಮವರ್ಗಕ್ಕೆ ಯಾವುದೇ ಪ್ರಯೋನಿಜವಿಲ್ಲ, ಬರುತ್ತಿದ್ದ ಸಂಬಳಕ್ಕಿಂತ ಹೆಚ್ಚಿನ ಸಂಬಳ ಬಂದರೂ ಅದರಿಂದ ಉಳಿತಾಯವೇನೂ ಇಲ್ಲ. ವಸ್ತುಸ್ಥಿತಿ ಹೀಗಿದ್ದಾಗ ಅದ್ಯಾವ ಕೋನದಲ್ಲಿ ಮಧ್ಯಮವರ್ಗದ ಮೇಲಿನ ಆದಾಯದ ತೆರಿಗೆಯನ್ನ ಹೆಚ್ಚಿಸುವ ಯೋಚನೆಯನ್ನ ಮಾಡಿದ್ದರು? ಎನ್ನುವುದು ದೊಡ್ಡ ಪ್ರಶ್ನೆ. ಪ್ರಧಾನಿಯವರು ಹೇಳಿದ್ದರು ಅದಕ್ಕೆ ತೆರಿಗೆ ಹೆಚ್ಚಳ ಮಾಡಲಿಲ್ಲ ಎನ್ನುವ ಹಣಕಾಸು ಸಚಿವರ ಹೇಳಿಕೆಯನ್ನ ಪ್ರತಿಯೊಬ್ಬ ತೆರಿಗೆದಾರ ಕೂಡ ಖಂಡಿಸಬೇಕು.
ಮಧ್ಯಮವರ್ಗದ ಜನಕ್ಕೆ ಎಲ್ಲಾ ಬಜೆಟ್ನಂತೆ ಈ ಬಜೆಟ್ ಕೂಡ ನೇರವಾಗಿ ಯಾವುದೇ ಲಾಭ, ಅಥವಾ ಯೋಜನೆಯನ್ನ ಘೋಷಿಸಿಲ್ಲ ಅಂದಮಾತ್ರಕ್ಕೆ ಏನೂ ಇಲ್ಲವೇ ಇಲ್ಲ ಎನ್ನುವುದು ಕೂಡ ತಪ್ಪಾಗುತ್ತದೆ. ಈ ಬಜೆಟ್ ನಲ್ಲಿ ಪರೋಕ್ಷವಾಗಿಯಾದರೂ ಸರಿಯೇ ಮಧ್ಯಮವರ್ಗಕ್ಕೂ ಒಂದಷ್ಟು ಯೋಜನೆಗಳಿವೆ. ಒಂದಷ್ಟು ಉತ್ತಮ ಅಂಶಗಳಿವೆ ಅವೇನು ಎನ್ನುವುದರ ಬಗ್ಗೆ ಒಂದಷ್ಟು ಗಮನ ಹರಿಸೋಣ.
- ಭಾರತದಲ್ಲಿರುವ ಒಂದೂವರೆ ಲಕ್ಷ ಪೋಸ್ಟ್ ಆಫೀಸಗಳನ್ನ ಕೋರ್ ಬ್ಯಾಂಕಿಂಗ್ ಅಡಿಯಲ್ಲಿ ತರುವುದಾಗಿ ಘೋಷಣೆ ಮಾಡಿದ್ದಾರೆ, ಇದು ಅತ್ಯಂತ ಉತ್ತಮ ಅಂಶ. ಇದರಿಂದ ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದ್ದ ಎಲ್ಲರೂ ಯಾವುದೇ ಬ್ಯಾಂಕಿನಲ್ಲಿ ಎಟಿಎಂ ಬಳಸುವುದು, ಬ್ಯಾಂಕಿಂಗ್ ವ್ಯವಸ್ಥೆ ಬಳಸಿಕೊಳ್ಳುವುದು ಮಾಡಬಹುದು. ಇದರಿಂದ ಹಳ್ಳಿಗಳಲ್ಲಿ ಮತ್ತು ಗುಡ್ಡಗಾಡಿನ ಪ್ರದೇಶದ ಜನಗಳಿಗೆ ಯಾವ ವ್ಯವಸ್ಥೆ ಹತ್ತಿರದಲ್ಲಿದೆ ಅದನ್ನ ಬಳಸಿಕೊಳ್ಳುವ ಅವಕಾಶ ಲಭ್ಯವಾಗಲಿದೆ. ಕೊರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಬರುವುದರಿಂದ ಭಾರತದ ಯಾವುದೇ ನಗರದಲ್ಲಿ ಕುಳಿತು ಕೂಡ ಖಾತೆಯ ನಿರ್ವಹಣೆ ಮಾಡುವ ಸೌಲಭ್ಯ ಕೂಡ ಸಿಗಲಿದೆ. ಇದರಿಂದ ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರುವ ಲಕ್ಷಾಂತರ ಗ್ರಾಹಕರಿಗೆ ಅನುಕೊಲವಾಗಲಿದೆ.
- ಕೋವಿಡ್ ಪರಿಣಾಮ ವಿದ್ಯಾರ್ಥಿಗಳಲ್ಲಿ ಅದರಲ್ಲೂ ಗ್ರಾಮೀಣ ಭಾರತದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕೊರತೆ ಬಹಳಷ್ಟು ಹೆಚ್ಚಾಗಿದೆ. ಈ ಕೊರತೆಯನ್ನ ನೀಗಿಸುವ ಸಲುವಾಗಿ ಇ-ವಿದ್ಯಾ ಎನ್ನುವ ಯೋಜನೆಯನ್ನ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಇದರಿಂದ ಗ್ರಾಮೀಣ ಭಾರತದ ಲಕ್ಷಾಂತರ ಮಕ್ಕಳಿಗೆ ಕಲಿಕೆಯಲ್ಲಿ ಸಹಾಯವಾಗುತ್ತದೆ. ಇದಕ್ಕಾಗಿ ಟಿವಿ ಚಾನಲ್ ಗಳನ್ನ ಬಳಸಿಕೊಳ್ಳುವುದು, ಇತ್ಯಾದಿ ಮಾರ್ಗಗಳ ಮೂಲಕ ಕಲಿಕೆಯಲ್ಲಿ ಉಂಟಾಗಿರುವ ಏರುಪೇರನ್ನ ಸರಿಪಡಿಸುವ ಗುರಿಯನ್ನ ಹೊಂದಿದೆ.
- ನವೋದ್ದಿಮೆಗಳ ಮೇಲಿನ ಪ್ರಾಥಮಿಕ ವರ್ಷಗಳ ತೆರಿಗೆಯ ಹೊರೆಯನ್ನ ಇಳಿಸುವ ಸಲುವಾಗಿ 2016 ರಿಂದ 2021ರ ವೆರೆಗೆ ತೆರಿಗೆ ವಿನಾಯತಿಯನ್ನ ಘೋಷಿಸಲಾಗಿತ್ತು , ಈ ಬಜೆಟ್ ನಲ್ಲಿ ಅದನ್ನ ಮಾರ್ಚ್ 2023ರ ವರೆಗೆ ಮುಂದುವರೆಸಲು ಸೂಚಿಸಲಾಗಿದೆ. ಇದು ಕೂಡ ಒಂದು ಉತ್ತಮ ಬೆಳವಣಿಗೆಯಾಗಿದೆ.
- ಜನ ಸಾಮಾನ್ಯರು ಕೈಗೆಟುಕುವ ಬೆಲೆಯಲ್ಲಿ ಮನೆಯನ್ನ ಕಟ್ಟಲು ಈ ಬಾರಿ ಕೇಂದ್ರ ಸರಕಾರ 48 ಸಾವಿರ ಕೋಟಿ ರೂಪಾಯಿಯನ್ನ ತೆಗೆದಿರಿಸಿದೆ. ಭಾರತದ ಉದ್ದಗಲಕ್ಕೂ ಆಯ್ದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಮನೆಗಳನ್ನ ನಿರ್ಮಿಸಿ ಅದನ್ನ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರುವ ಯೋಜನೆಯನ್ನ ಕೂಡ ಸರಕಾರ ಹಮ್ಮಿಕೊಂಡಿದೆ. ಈ ಬಾರಿಯ ಬಜೆಟ್ ಮುಖ್ಯಾಂಶದಲ್ಲಿ ಅದೇಕೋ ಇದು ಸುದ್ದಿಯಾಗಲಿಲ್ಲ. ಜನ ಸಾಮಾನ್ಯನಿಗೆ ಏನೂ ಇಲ್ಲ ಎನ್ನುವುದು ದೊಡ್ಡ ಸುದ್ದಿಯಾಯ್ತು, ಅದು ನಿಜ ಕೂಡ ಆದರೆ ಏನೂ ಇಲ್ಲವೇ ಇಲ್ಲ ಎನ್ನುವಂತೆಯೂ ಇಲ್ಲ.
- ಇದೆ ವರ್ಷದಲ್ಲಿ ನಾವು ಇ-ರುಪಿ ಗೆ ಸಾಕ್ಷಿಯಾಗಲಿದ್ದೇವೆ. ಭಾರತ ಸರಕಾರ ಈ ಬಾರಿಯ ಬಜೆಟ್ ನಲ್ಲಿ 2022/23 ನೇ ಸಾಲಿನಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿಕೊಂಡು ಕ್ರಿಪ್ಟೋ ಕರೆನ್ಸಿ ರೀತಿಯಲ್ಲಿ ನಮ್ಮದೇ ಆದ ಡಿಜಿಟಲ್ ಕರೆನ್ಸಿ ಬರಲಿದೆ. ಗಮನಿಸಿ ಈಗಾಗಲೇ ಚೀನಾ ದೇಶದಲ್ಲಿ ಇ-ಆರ್ ಎಂ ಬಿ ಎನ್ನುವ ಡಿಜಿಟಲ್ ಹಣ ಚಾಲನೆಯಲ್ಲಿದೆ. ಹೀಗೆ ನಮ್ಮದೇ ಡಿಜಿಟಲ್ ಕರೆನ್ಸಿ ಹೊಂದುವುದರಿಂದ ಕ್ರಿಪ್ಟೋ ಕರೆನ್ಸಿಯಲ್ಲಿ ಇಂದಿನ ದಿನದಲ್ಲಿರುವ ಏರಿಳಿತಗಳಿಗೆ ಒಂದಷ್ಟು ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಅಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಇಂದಲ್ಲ ನಾಳೆ ಈ ರೀತಿಯ ತಮ್ಮದೇ ಡಿಜಿಟಲ್ ಕರೆನ್ಸಿ ಹೊಂದುವುದು ಕಡ್ಡಾಯವಾಗಲಿದೆ. ಹೀಗಾಗಿ ಈ ಹೊಸ ಆಟದಲ್ಲಿ ಭಾರತ ಬೇಗನೆ ಹೊಸ ನಿಯಮಾವಳಿಗೆ ಒಗ್ಗಿಕೊಳ್ಳಲಿದೆ. ಹಾಗೆ ನೋಡಲು ಹೋದರೆ ಮುಂದವರೆದ ದೇಶಗಳೇ ಇನ್ನೂ ಈ ವಿಷಯದಲ್ಲಿ ಸದ್ದು ಮಾಡದೆ ಕುಳಿತಿವೆ, ಇಂತಹ ಸನ್ನಿವೇಶದಲ್ಲಿ ಭಾರತದ ಈ ನಿಲುವು ಶ್ಲಾಘನೀಯ.
- ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಇ-ಪಾಸ್ಪೋರ್ಟ್ ಕೂಡ ಇದೆ ವರ್ಷದಲ್ಲಿ ಚಲಾವಣೆಗೆ ಬರುವ ಸಾಧ್ಯತೆಯನ್ನ ಕೂಡ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದರಿಂದ ಹೆಚ್ಚು ಪ್ರವಾಸದಲ್ಲಿ ತೊಡಗಿಕೊಳ್ಳುವ ಉದ್ಯಮಿಗಳಿಂದ ಹಿಡಿದು, ಪ್ರವಾಸಿಗರಾಗಿ ಹೋಗುವ ಎಲ್ಲಾ ಭಾರತೀಯರಿಗೂ ಅನುಕೂಲವಾಗಲಿದೆ.
- ಕಳೆದ ನಾಲ್ಕೈದು ಬಜೆಟ್ ನಂತೆ ಈ ಬಾರಿ ಕೂಡ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ.
ಬಜೆಟ್ ನಲ್ಲಿ ಉತ್ತಮ ಅಂಶಗಳಿದ್ದಂತೆ ಕೆಟ್ಟ ಅಂಶಗಳೂ ಇರುತ್ತವೆ. ಕೆಟ್ಟದು ಎನ್ನುವ ಪದವನ್ನ ಬಳಸದೆ ಇದ್ದರೂ ಕೆಲವೊಂದು ಕಾರ್ಯಕ್ಷೇತ್ರಗಳಿಗೆ ಇನ್ನಷ್ಟು ಹೆಚ್ಚಿನ ಗಮನ ಮತ್ತು ಸವಲತ್ತು ನೀಡಬಹುದಿತ್ತು ಎನ್ನುವುದು ಬಜೆಟ್ ವೀಕ್ಷಿಸಿದಾಗ ಮನದಟ್ಟಾಗುತ್ತದೆ. ಅಂತಹ ಒಂದಷ್ಟು ಅಂಶಗಳ ಬಗ್ಗೆ ಕೂಡ ಗಮನ ಹರಿಸೋಣ.
- ಭಾರತ ಕಳೆದ ಎರಡು ದಶಕದಲ್ಲಿ ಕಾಣದ ಅಭಿವೃದ್ಧಿಯ ವೇಗವನ್ನ ಇತ್ತೀಚಿಗೆ ಪಡೆದುಕೊಂಡಿದೆ. ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಯೂನಿಕಾರ್ನ್ ಸಂಸ್ಥೆಗಳು ಈ ಯಶೋಗಾಥೆಯನ್ನ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿದ್ದೂ ಭಾರತದ ನವೋದ್ದಿಮೆಗೆ ಬೇಕಾದ ಯಾವುದೇ ಸವಲತ್ತು ಸರಕಾರ ನೀಡಿಲ್ಲ. ಇನ್ನೆರೆಡು ವರ್ಷ ಟ್ಯಾಕ್ಸ್ ಹಾಕುವುದಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದೆ. ಇಂತಹ ನವೋದ್ದಿಮೆಗೆ ಬೇಕಾದ ಅನುಕೂಲ, ಸರಿಯಾದ ವಾತಾವರಣ ಸೃಷ್ಟಿಸುವ ಕೆಲಸವನ್ನ ಸರಕಾರ ಮಾಡಬೇಕಿದೆ. ಯಾವುದೇ ಸಹಕಾರವಿಲ್ಲದೆ ಭಾರತದ ನವೋದ್ದಿಮೆದಾರರು ಮುಟ್ಟುತ್ತಿರುವ ಎತ್ತರ ಮಾತ್ರ ಎಂತಹವರನ್ನೂ ಅಚ್ಚರಿಗೆ ದೂಡುತ್ತದೆ. ಇಂತಹ ಸನ್ನಿವೇಶದಲ್ಲಿ ಸರಕಾರ ಬಜೆಟ್ ನಲ್ಲಿ ಈ ಕಾರ್ಯಕ್ಷೇತ್ರದ ಬಗ್ಗೆ ದಿವ್ಯ ಮೌನವನ್ನ ತಳೆದಿದೆ ಎನ್ನುವುದು ಮಾತ್ರ ವೇದ್ಯ.
- ಮೇಲ್ನೋಟಕ್ಕೆ ಸರಕಾರ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಗೆ ಬಹಳ ಹಣವನ್ನ ಮೀಸಲಿರಿಸಿದೆ ಎನ್ನಿಸುತ್ತದೆ. ಆದರೆ ಕೋವಿಡ್ ನಂತರದ ಚೇತರಿಸಿಕೊಳ್ಳುತ್ತಿರುವ ಸಮಾಜಕ್ಕೆ ಅವರು ಮೀಸಲಿಟ್ಟಿರುವ ಹಣ ಖಂಡಿತ ಸಾಲದು. ಇಲ್ಲಿಗೆ ಇನ್ನಷ್ಟು ಹಣವನ್ನ ನೀಡಬೇಕಾಗಿತ್ತು. ಎಂದಿನಂತೆ ಹಣಕಾಸು ಸಚಿವೆ ತಮ್ಮ ಉಡಾಫೆಯ ಧ್ವನಿಯಲ್ಲಿ ಭಾರತದ ಚೇತರಿಕೆ ವೇಗ ಎಂತಹವರನ್ನೂ ಅಚ್ಚರಿಗೊಳಿಸುತ್ತದೆ, ಆ ನಿಟ್ಟಿನಲ್ಲಿ ನೋಡಿದಾಗ ನಾವು ಮೀಸಲಿಟ್ಟಿರುವ ಹಣ ಖಂಡಿತ ಸಾಕು ಎಂದು ಹೇಳಿದ್ದಾರೆ. ಹೌದು ಭಾರತದ ಚೇತರಿಕೆ ವೇಗ ಸತ್ಯ, ಆದರೆ ಅದಕ್ಕೆ ಇನ್ನಷ್ಟು ಬಲವನ್ನ ನೀಡಿ ಸದೃಢಗೊಳಿಸುವ ಒಂದು ಅತ್ಯುತ್ತಮ ಅವಕಾಶವನ್ನ ಕೈ ಚಲ್ಲಿದ್ದಾರೆ.
- 2030ರ ವೇಳೆಗೆ 280 ಗಿಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಯನ್ನ ಸರಕಾರ ಹೊಂದಿದೆ. ಇದು ಉತ್ತಮ ಟಾರ್ಗೆಟ್. ಆದರೆ ಸೌರಶಕ್ತಿಯಿಂದ ವಿದ್ಯುತ್ ಉತ್ಪತ್ತಿ ಮಾಡಲು ಬೇಕಾಗಿರುವ ಸೋಲಾರ್ ಪ್ಯಾನೆಲ್ ಗಳಿಗಾಗಿ ನಾವು ಚೀನಾ ದೇಶದ ಮೇಲೆ ಅವಲಂಬಿತರಾಗಿದ್ದೇವೆ. ಹತ್ತಿರತ್ತಿರ 80 ಪ್ರತಿಶತ ಸೋಲಾರ್ ಪ್ಯಾನೆಲ್ ಗಳು ಭಾರತಕ್ಕೆ ಚೀನಾ ದೇಶದಿಂದ ಬರುತ್ತಿವೆ. ಗಮನಿಸಿ ಜಾಗತಿಕ ಮಟ್ಟದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಇಂತಹ ಪರಿಕರಗಳ ಬೆಲೆ 35 ರಿಂದ 40 ಪ್ರತಿಶತ ಕಡಿಮೆಯಾಗುತ್ತದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ. ಇದು ಭಾರತದ ಮಟ್ಟಿಗೂ ಸತ್ಯವಿತ್ತು. ಸರಕಾರ ಈ ಬಜೆಟ್ನಲ್ಲಿ ಹೀಗೆ ಚೀನಾದಿಂದ ಬರುವ ಸೋಲಾರ್ ಪ್ಯಾನೆಲ್ ಮತ್ತು ಸೋಲಾರ್ ಸೆಲ್ ಗಳ ಮೇಲೆ ಇಂಪೋರ್ಟ್ ಡ್ಯೂಟಿಯನ್ನ ಹಾಕಿದೆ. ಚೀನಾ ದೇಶದ ಪಾರುಪತ್ಯವನ್ನ ತಡೆಯಲು ಈ ರೀತಿಯ ಕ್ರಮವನ್ನ ತೆಗೆದುಕೊಂಡಿದೆ. ಆದರೆ ಮೊದಲು ನಮ್ಮಲ್ಲಿ ಇದನ್ನ ಉತ್ಪಾದಿಸಲು ಬೇಕಾಗುವ ಎಲ್ಲಾ ಅನುಕೂಲಗಳನ್ನ ಮಾಡಿಕೊಳ್ಳದೆ ತೆಗೆದುಕೊಂಡಿರುವ ಇಂತಹ ನಿರ್ಧಾರದಿಂದ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲಿರುವ ಎಲ್ಲಾ ಗ್ರಾಹಕರಿಗೆ 12/14 ಪ್ರತಿಶತ ಹೆಚ್ಚಿನ ಹೊರೆ ಬೀಳಲಿದೆ. ಒಂದು ಕಡೆ ಸೋಲಾರ್ ನಿಂದ ವಿದ್ಯುತ್ ಹೆಚ್ಚು ಉತ್ಪಾದನೆ ಕೂಡ ಆಗಬೇಕು, ಇನ್ನೊಂದು ಕಡೆ ಚೀನಾ ದೇಶದ ವಸ್ತುಗಳು ಬೇಡ, ಆತ್ಮನಿರ್ಭರ ಭಾರತ್ ಎನ್ನುವ ಘೋಷಣೆ ಕೂಡ ಕೂಗಬೇಕು. ಆದರೆ ಇದರಿಂದ ಬೆಲೆ ತೆರುವವರು ಮಾತ್ರ ಮತ್ತೆ ಜನ ಸಾಮಾನ್ಯ. ಚೀನಾ ದೇಶವೇನು ಇಂಪೋರ್ಟ್ ಡ್ಯೂಟಿ ಕೈಯಿಂದ ಕೊಡುವುದಿಲ್ಲ ಅದನ್ನ ಅದು ಗ್ರಾಹಕರಿಂದ ವಸೂಲಿ ಮಾಡುತ್ತದೆ.
- ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಫಿಸ್ಕಲ್ ಡೆಫಿಸಿಟ್ ಇನ್ನೊಂದು ಕಳವಳಕಾರಿ ಅಂಶ.
ಕೊನೆಮಾತು: ಒಂದು ಬಜೆಟ್ ಅದೆಷ್ಟೇ ಅಂಶಗಳನ್ನ ಗಮನದಲ್ಲಿಟ್ಟು ಕೊಂಡು ಮಂಡಿಸಿದರೂ ಅದರಲ್ಲಿ ಕೂಡ ಹತ್ತು ತಪ್ಪುಗಳು ಇರುತ್ತವೆ. ಹೀಗಾಗಿ ತಪ್ಪುಗಳ ಲೆಕ್ಕ ಬೇಡ. ಆದರೆ ತಪ್ಪನ್ನ ತಿದ್ದಿಕೊಳ್ಳುವ, ಜನತೆಯ ವಿಶ್ವಾಸಕ್ಕೆ, ಅವರ ನಂಬಿಕೆಗೆ ಧಕ್ಕೆ ಬರುವಂತಹ ಹೇಳಿಕೆಗಳು, ಉದ್ಧಟತನದ ಮಾತುಗಳನ್ನ ಆಡುವುದು ಸರ್ವಥಾ ಒಪ್ಪಿತವಲ್ಲ, ಈ ನಿಟ್ಟಿನಲ್ಲಿ ನೋಡಿದಾಗ ಈ ಬಜೆಟ್ ಅಶಾಭಾವಕ್ಕಿಂತ ನಿರಾಶೆಯನ್ನ ನೀಡಿದೆ. ಉನ್ನತ ಹುದ್ದೆಯಲ್ಲಿರುವ ಜನ ಮಾತನಾಡುವ ಮುನ್ನಾ ಹತ್ತಲ್ಲ ಸಾವಿರ ಬಾರಿ ಯೋಚಿಸಬೇಕು. ತರ್ಕವಿಲ್ಲದೆ ಆಡುವ ಮಾತುಗಳು ವ್ಯಕ್ತಿಯ ಘನತೆಯನ್ನ ಕುಗ್ಗಿಸುತ್ತವೆ. ನಿರ್ಮಲ ಸೀತಾರಾಮನ್ ಅವರಿಗೆ ಇದು ಬೇಗ ತಿಳಿದಷ್ಟೂ ಅವರಿಗೆ ಒಳ್ಳೆಯದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com