ಚುನಾವಣೆ ಇದ್ದರೆ ಸಂಸತ್ ನಡೆಸಬಾರದೆಂಬ ಶಾಸನ ಇದೆಯೇ? ಈ ಅಸಂವಿಧಾನಿಕ ಪ್ರಕ್ರಿಯೆಗೆ ಪೂರ್ಣ ವಿರಾಮ ಯಾವಾಗ? (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್

ಕಳೆದ 20 ವರ್ಷಗಳಲ್ಲಿ ಸಂಸತ್ತು ಕಲಾಪ ನಡೆದಿರುವುದು ಕೇವಲ ಶೇಖಡ 51 ರಷ್ಟು ಅಷ್ಟೇ. ಅಂದರೆ 62 ಕಲಾಪದಲ್ಲಿ ಕೇವಲ 25 ಕಲಾಪಗಳು ಮಾತ್ರ ಸೂಕ್ತ ಸಮಯಕ್ಕೆ ಮುಕ್ತಾಯ ವಾಗಿರುವುದು.

Published: 04th February 2022 12:27 PM  |   Last Updated: 04th February 2022 12:53 PM   |  A+A-


Parliament

ಸಂಸತ್ತು

ಸಂಸತ್ತು ದೇಶವನ್ನು ನಡೆಸುವ ಸಾಂವಿಧಾನಿಕ ವ್ಯವಸ್ಥೆ. ನಾವು ಆಯ್ಕೆ ಮಾಡಿ ನಮ್ಮ ಸಮಸ್ಯೆಗಳನ್ನ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿ ಎಂದು ಮತ ನೀಡಿ, ಸಂಬಳ ನೀಡಿ, ಅಧಿಕಾರ ನೀಡಿ, ಅದರ ಜೊತೆ ರಾಜಕೀಯ ನಾಯಕರ ಅಸಂಬದ್ಧ ವರ್ತನೆಗಳನ್ನು ಸಹಿಸಿಕೊಂಡು ನಮ್ಮ ಅಹವಾಲುಗಳಿಗೆ ಕೇಂದ್ರದಿಂದ, ರಾಜ್ಯಗಳ ಮಧ್ಯೆ ಚರ್ಚಿಸಿ ಸಮರ್ಥ ಪರಿಹಾರ ಕೊಡಬಹುದು ಎಂದು ಯೋಚಿಸುವ ಪ್ರತಿ ಮತದಾರನು ಇದನ್ನು ಅರಿಯಬೇಕು. 

ಕಳೆದ 20 ವರ್ಷಗಳಲ್ಲಿ ಸಂಸತ್ತು ಕಲಾಪ ನಡೆದಿರುವುದು ಕೇವಲ ಶೇಖಡ 51 ರಷ್ಟು ಅಷ್ಟೇ. ಅಂದರೆ 62 ಕಲಾಪದಲ್ಲಿ ಕೇವಲ 25 ಕಲಾಪಗಳು ಮಾತ್ರ ಸೂಕ್ತ ಸಮಯಕ್ಕೆ ಮುಕ್ತಾಯ ವಾಗಿರುವುದು. 9 ಕಲಾಪಗಳು ಹೆಚ್ಚು ನಡೆದರೆ ಇನ್ನೂ ಬರೋಬ್ಬರಿ 32 ಕಲಾಪಗಳು ಅವಧಿಗಿಂತ ಮುಂಚೆಯೇ ಮುಗಿದಿರುವುದು. 

ವರ್ಷದಲ್ಲಿ ಕನಿಷ್ಠ 3 ಬಾರಿ ದೆಹಲಿಯಲ್ಲಿ ಸೇರಿ, ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಲು ಏಷ್ಟೋ ಸಂಸದರು ತಯಾರಿರುವುದಿಲ್ಲ, ಪಟ್ಟಿ ನೋಡಿದರೆ 300 ಜನಕ್ಕೂ ಹೆಚ್ಚು ಸಂಸದರ ಹಾಜರಾತಿ 5 ವರ್ಷಗಳಲ್ಲಿ ಶೇ.60 ದಾಟಿರುವುದಿಲ್ಲ. Atttendance ಇಲ್ಲ ಅಂದರೆ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡಲ್ಲ, ಅವಧಿಗಿಂತ ಹೆಚ್ಚು ರಜಾ ತೆಗೆದುಕೊಂಡರೆ ಆಫೀಸ್ ನಲ್ಲಿ ಸಂಬಳ ಕೊಡಲ್ಲ. ಆದರೆ ನಮ್ಮ ಶಾಸಕರು ಸಂಸದರದ್ದೇ  ನೋಡಿ ಮಜಾ ಎಂದರೆ. ಈಕಡೆ ಬಂದರೂ ಸೈ ಬರದಿದ್ದರೂ ಸೈ. ಸಂಸತ್ತಿನಲ್ಲಿ ಇದ್ದರೂ ಸೈ ಬೆಳಗ್ಗೆ ಬಂದು ಸಹಿ ಹಾಕಿ ಮುಖ ತೋರಿಸಿ ಮನೆಗೆ ಅಥವಾ ವೈಯಕ್ತಿಕ ಕೆಲಸಕ್ಕೆ ಮರಳಿದರೂ ಸೈ. ಪ್ರಶ್ನಿಸುವವರು ಮಾತ್ರ ಯಾರೂ ಇಲ್ಲ. 

ಹೀಗೆ ನೋಡ ನೋಡುತ್ತಿದ್ದಂತೆ ಸಮಯ ವ್ಯರ್ಥ ಮಾಡುವ ಮಧ್ಯೆ ಸಂಸತ್ತು ಕಲಾಪಗಳೇ ಮೋಟುಕುಗೊಂಡರೆ ಮುಗಿದೇ ಹೋಯಿತು ಅಲ್ವಾ. ನಿದ್ರೆ ಮಾಡುವವರಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ. ಇನ್ನು ಪ್ರತಿ ವರ್ಷ ಯಾವುದಾದರೂ ಒಂದು ಕಲಾಪ ಚುನಾವಣೆಯಿಂದ ಮೋಟುಕುಗೊಳ್ಳುವುದು. ಈ ವರ್ಷ 5 ರಾಜ್ಯಗಳ ಚುನಾವಣೆ. ಇನ್ನು ಇದೇ ವರ್ಷ ಚಳಿಗಾಲದ ಅಧಿವೇಶನ ಸಮಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಹೀಗೆ ವರ್ಷಕ್ಕೆ ಕನಿಷ್ಠ 5-6 ರಾಜ್ಯಗಳ ಚುನಾವಣೆ. ಮೂರು ಕಲಾಪದಲ್ಲಿ ಒಂದು ಕಲಾಪ ಚುನಾವಣೆ ಕಾರಣ ಬೇಗ ಮುಗಿಯುತ್ತದೆ. ಇನ್ನೂ ಪೂರ್ಣ ಅವಧಿ ಮುಗಿಯುವ ಕಲಾಪಗಳು ಜಗಳ-ಕದನ, ಪೆಪ್ಪರ್ ಸ್ಪ್ರೇ ಹಾಕುವುದು, ಖುರ್ಚಿ ಎಸೆಯುವುದು ಬಾವಿಗಿಳಿದು ಒದ್ದಾಡುವುದು, ಹೀಗೆ ಸಕಲ ಸಂಕಟಕ್ಕೆ ಒಳಗಾಗಿ ಎಷ್ಟರ ಮಟ್ಟಕ್ಕೆ ಫಲ ಕೊಡುವುದು ಎಂದು ನಾವು ಹೇಳಬೇಕಿಲ್ಲ. 

ಚುನಾವಣೆ ನಡೆದರೆ ನಡೆಯಲಿ ನಿಮ್ಮ ಕೆಲಸ ನೀವು ಮಾಡಿ, ಚುನಾವಣೆಯಲ್ಲಿ ಭಾಗಿ ಆಗಬೇಕು ಎಂಬ ಅನಿವಾರ್ಯವಿದ್ದರೆ ಚುನಾವಣೆ ನಂತರ ಕಲಾಪ ಮುಗಿಸಿ ನಂತರ ಮನೆಗೆ ತೆರಳಿ, ಚುನಾವಣೆ ಸಮಯದಲ್ಲಿ 2 ತಿಂಗಳ ಸಂಸತ್ತಿನ ವೇಳಾ ಪಟ್ಟಿ ನೀಡಿ ಪ್ರಜೆಗಳಿಗೆ ಮಂಕು ಬೂದಿ ಎರಚಬೇಡಿ. ಇದು ಪ್ರತೀ ಪಕ್ಷಕ್ಕೂ ಅನ್ವಯಿಸುವ ಜವಾಬ್ದಾರಿ ಯಾವ ಪಕ್ಷವೂ ಸಂಸತ್ತನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳದೆ ಉಳಿದಿಲ್ಲ.

ಈ ಬಾರಿ ಚುನಾವಣೆ ಮುಗಿದ ನಂತರ ಕಲಾಪ ಮುಂದುವರೆಸಿ ದೇಶದ ಸತ್ಪ್ರಜೆಗಳ ಸಾಲಲ್ಲಿ ನೀವು ಸೇರಿ ಎಂಬುದು ದೇಶದ ಜನರ ಅಪೇಕ್ಷೆ.

ಪಂಜಾಬ್ ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?

ಕಳೆದೊಂದು ದಶಕದಲ್ಲಿ ದೇಶದಲ್ಲಿ ನಡೆಯುತ್ತಿರುವ ಚುನಾವಣೆಯ ಮಾದರಿಯನ್ನು ನೋಡಿದರೆ ಮತದಾರರು ಆಯಾ ಪಕ್ಷಗಳ ಮುಖ್ಯಮಂತ್ರಿ ಹಾಗೂ ಪ್ರಧಾನಿ ಅಭ್ಯರ್ಥಿಗಳು ನೀಡಿದ ಚುನಾವಣಾ ಭರವಸೆಗಳಿಗಿಂತ ಅವರ ವರ್ಚಸ್ಸನ್ನು ನೋಡಿ ಮತ ಹಾಕುತ್ತಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಟಿಆರ್‌ಎಸ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿವೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮತ್ತು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಂತಹ ಪಕ್ಷವನ್ನು ಮೀರಿ ಬೆಳದಂತಹ ನಾಯಕರಿಂದ ಆಯಾ ರಾಜಕೀಯ ಪಕ್ಷಗಳು ಗದ್ದುಗೆಯ ಮೇಲೆ ಕುಳಿತಿವೆ.

ಇನ್ನು ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರಾಖಂಡ ಈ ಪಂಚ ರಾಜ್ಯ ಚುನಾವಣೆಯ ಪೈಕಿ, ಯುಪಿಯಲ್ಲಿ ಆಡಳಿತಾರೂಢ ಬಿಜೆಪಿ, ಎಸ್‌ಪಿ ಮತ್ತು ಬಿಎಸ್‌ಪಿ ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟನೆ ನೀಡಿವೆ. ಪಂಜಾಬ್‌ನಲ್ಲಿ ಇನ್ನೇನು ಗದ್ದುಗೆ ಹಿಡಿದೇ ಬಿಡುತ್ತೇವೆ ಎನ್ನುವ ಆಮ್ ಆದ್ಮಿ ಪಕ್ಷವೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡುವ ಬಗ್ಗೆ ಚರ್ಚೆಯನ್ನು ಕಳೆದ ಆರು ತಿಂಗಳಿಂದ ನಡೆಸುತ್ತಲೇ ಇದೇ.

ಅದರಲ್ಲೂ ಪಕ್ಷ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಸಿಎಂ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಪಂಜಾಬ್ ಪ್ರವಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಉಸಿರುಗಟ್ಟಿಸಿದ್ದು ಇದೇ ಪ್ರಶ್ನೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಸತತ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಭಗವಂತ್ ಮಾನ್ ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆನ್‌ಲೈನ್ ಸಮೀಕ್ಷೆ ನಡೆಸಿ ಹೆಚ್ಚಿನ ಜನರನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಪಾಲುದಾರರನ್ನಾಗಿ ಮಾಡಿದೆ. ಈ ಆನ್ ಲೈನ್ ಸಮೀಕ್ಷೆಯಲ್ಲಿ ಶೇ.93ರಷ್ಟು ಬೆಂಬಲ ಪಡೆದಿರುವ ಭಗವಂತ್ ಮಾನ್ ತಮ್ಮ ಉಮ್ಮೆದುವಾರಿಕೆಗೆ ಪೈಪೋಟಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ನ ಪರಿಸ್ಥಿತಿ ತೂಗುಗತ್ತಿ ಕೆಳಗೆ ಕುಳಿತಂತೆ ಇದೆ. ಇತ್ತ ಮುಖ್ಯಮಂತ್ರಿಯಾಗಲು ಶತಪ್ರಯತ್ನ ನಡೆಸುತ್ತಿರುವ ನವಜೋತ್ ಸಿಂಗ್ ಸಿಧು ಒಂದು ಕಡೆ, ಸಿಕ್ಕ ಸಮಯದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಯತ್ನಿಸುತ್ತಾ ಸಿಧು ವಿರುದ್ಧ ರೇಸಿನಲ್ಲಿ ಸೆಣಸಾಡುತ್ತಿರುವ ಚರಂಜೀತ್ ಸಿಂಗ್ ಚನ್ನಿ ಮತ್ತೊಂದು ಕಡೆ. ಯಾವ ಕಡೆ ವಾಲಿದರು ಇರಿಯುವುದು ಖಚಿತ.

ಪಕ್ಷದ ಹೈಕಮಾಂಡ್ ಅತ್ಯಂತ ಸಂದಿಗ್ಧತೆಗೆ ಸಿಲುಕಿದೆ. ಕಾಂಗ್ರೆಸ್ ಸಂಸ್ಕೃತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವುದು ತೀರಾ ಅಪರೂಪ. ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿಯನ್ನು ಸೀಲ್ ಕವರ್ ಮೂಲಕ ನಿರ್ಧರಿಸುವುದು ಪಕ್ಷದಲ್ಲಿ ನಡೆಯುತ್ತಿರುವ ಪರಿಪಾಠ.

ರಾಹುಲ್ ಗಾಂಧಿ ಇತ್ತೀಚಿನ ಪಂಜಾಬ್ ಭೇಟಿಯ ಸಮಯದಲ್ಲಿ ಪ್ರತಿ ಹೆಜ್ಜೆಯಲ್ಲೂ ಇದೇ ಪ್ರಶ್ನೆಯನ್ನು ಎದುರಿಸಬೇಕಾಯಿತು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾರ್ಯಕರ್ತರೇ ನಿರ್ಧರಿಸಬೇಕು, ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿ ತಾತ್ಕಾಲಿಕವಾಗಿ ತಲೆಮರೆಸಿ ಕೊಳ್ಳಬೇಕಾಯಿತು. 

ಪಂಜಾಬ್ ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧುವಿನ ಆಕ್ರಮಣಶೀಲತೆ, ದುರಹಂಕಾರ ದಿನಕ್ಕೊಂದು ಹೊಸ ವೇಷ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಅನ್ನುವುದು ಒಂದು ರೀತಿಯಲ್ಲಿ ಸತ್ಯವಾದರೂ, ಇನ್ನು ತನ್ನ ಸಹೋದರನಿಗೆ ಪಕ್ಷ ಟಿಕೆಟ್ ನಿರಾಕರಿಸಿದರೂ, ಚರಣಜೀತ್ ಸಿಂಗ್ ಒಂದು ಮಾತನ್ನೂ ಹೇಳದೆ ಪಕ್ಷ ನಿಷ್ಠೆ ತೋರಿರುವುದು ಇನ್ನೊಂದು ಭಾಗ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾದಾಗಿನಿಂದ ಮುಖ್ಯಮಂತ್ರಿ ಹುದ್ದೆಗೆ ಹರಸಾಹಸ ಪಡುತ್ತಿರುವ ಸಿಧು, ಮುಖ್ಯಮಂತ್ರಿ ಬದಲಾದ ಬಳಿಕ ಆ ಹುದ್ದೆ ತಮ್ಮದೆಂದು ಪರಿಗಣಿಸಿದ್ದರು. ಆದರೆ ಹೈಕಮಾಂಡ್ ಅನಿರೀಕ್ಷಿತವಾಗಿ ಚರಣ್‌ಜಿತ್ ಸಿಂಗ್ ಚನ್ನಿಗೆ ಆಡಳಿತವನ್ನು ಹಸ್ತಾಂತರಿಸಿದಾಗ ಸಿಧು ದಿಗ್ಭ್ರಮೆಗೊಂಡರು. ಅಂದಿನಿಂದ ಚನ್ನಿಯೊಂದಿಗೆ ಶೀತಲ ಸಮರವನ್ನು ಪ್ರಾರಂಭಿಸಿದ ಸಿಧುವನ್ನು ದಾರಿಗೆ ತರಲು ಇಂದಿಗೂ ಆಗಿಲ್ಲ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಏನು ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದೆ.

ದೇಶದ ಯಾವುದೇ ರಾಜ್ಯಕ್ಕಿಂತಲೂ ಹೆಚ್ಚಾಗಿ ಇರುವ ಅಂದರೆ ಶೇ.34 ರಷ್ಟು ದಲಿತರಿರುವ ಪಂಜಾಬ್ ರಾಜ್ಯದಲ್ಲಿ ದಲಿತರ ಮತಗಳಿಗಾಗಿ ಎಲ್ಲ ಪಕ್ಷಗಳು ಮಾಡುವ ಪ್ರಯತ್ನ ಕಾಣಿಸುತ್ತಲೆ ಇದೇ. ಹೀಗಿರುವಾಗ ದಲಿತರೊಬ್ಬರನ್ನು ಸಿಎಂ ಪೀಠದಲ್ಲಿ ಕೂರಿಸಿದ ಕಾಂಗ್ರೆಸ್ ಪಕ್ಷ ಈ ವಿಚಾರವನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿದ್ಯುತ್ ಶುಲ್ಕ ಕಡಿತ, ಸರ್ಕಾರಿ ನೌಕರರ ಡಿಎ ಹೆಚ್ಚಳದಂತಹ ಕ್ರಮಗಳಿಂದ ಒಂದಿಷ್ಟು ಒಳ್ಳೆ ಹೆಸರನ್ನೂ ಚನ್ನಿ ಗಳಿಸಿದ್ದಾರೆ. ಹೆಚ್ಚಿನ ದರದಲ್ಲಿ ವಿದ್ಯುತ್ ಪೂರೈಸುವ ಖಾಸಗಿ ವಿದ್ಯುತ್ ಕಂಪನಿಗಳ ಜತೆಗಿನ ಒಪ್ಪಂದಗಳನ್ನು ರದ್ದುಪಡಿಸಿ, ಕಡಿಮೆ ಬೆಲೆಗೆ ಮರು ಗುತ್ತಿಗೆ ನೀಡುವುದು ಮುಂತಾದ ಕ್ರಮಗಳೂ ಚನ್ನಿ ಬಗ್ಗೆ ಚರ್ಚೆಗೆ ಕಾರಣವಾಗಿವೆ. "ನವಿ ಸೋಚ್, ನವನ್ ಪಂಜಾಬ್ (ಹೊಸ ಆಲೋಚನೆ ಹೊಸ ಪಂಜಾಬ್)" ಎಂಬ ಘೋಷಣೆಯೂ ಚುನಾವಣಾ ಪ್ರಚಾರದಲ್ಲಿ ತನ್ನ ಛಾಪು ಮೂಡಿಸುತ್ತಿದೆ.

ಮುಖ್ಯಮಂತ್ರಿಯಾಗಿ 111 ದಿನಗಳ ಆಡಳಿತ ಇಷ್ಟವಾದರೆ ಇನ್ನೂ ಐದು ವರ್ಷ ಅವಕಾಶ ಕೊಡಿ ಎಂದು ಚನ್ನಿ ಮತ ಯಾಚಿಸಿದರೆ. ಪಕ್ಷದ ಹೆಸರಲ್ಲಿ ಕೇಳಲಿ ಮುಖ್ಯಮಂತ್ರಿ ವಿಚಾರ ಗೆದ್ದ ನಂತರದ್ದು ಎಂದು ಸಿಧು ಕುಟುಕುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಸಮರ ಆಪ್ ಪಕ್ಷಕ್ಕೆ  ವಿಧಾಸಭೆಗೆ ದ್ವಾರ.


ಸ್ವಾತಿ ಚಂದ್ರಶೇಖರ್

swathichandrashekar92@gmail.com


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp