
ಮುಂಬೈ ಷೇರು ಮಾರುಕಟ್ಟೆ ಕೇಂದ್ರದ ಚಿತ್ರ
ಯಾವಾಗ ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಬಡ್ಡಿ ದರ ಇಷ್ಟೊಂದು ಕಡಿಮೆಯಾಗುತ್ತದೆ ಆಗೆಲ್ಲಾ ಜನ ಇತರೆ ಹಣಕಾಸು ಸಂಸ್ಥೆಗಳತ್ತ ಮುಖ ಮಾಡುವುದು ಸಹಜ.
ಒಂದೆರಡು ಪ್ರತಿಶತ ಹೆಚ್ಚಿನ ಬಡ್ಡಿಯ ಆಸೆಗೆ ಮೂಲ ಧನವನ್ನ ಕಳೆದುಕೊಳ್ಳುವ ರಿಸ್ಕ್ ನಲ್ಲಿ ಇವರು ಬೀಳುತ್ತಾರೆ. ಇಂದಿನ ದಿನಗಳಲ್ಲಿ ಜನರ ಜೀವಿತಾವಧಿ ಹೆಚ್ಚಳ ಕಂಡಿದೆ, ಬಹಳಷ್ಟು ಹಿರಿಯ ನಾಗರೀಕರು ಆರೋಗ್ಯವನ್ನ ಕಾಪಾಡಿಕೊಳ್ಳುವುದರಲ್ಲಿ ಯಶಸ್ಸು ಕೂಡ ಗಳಿಸಿದ್ದಾರೆ. ಹೀಗೆ ಆರೋಗ್ಯ ಚೆನ್ನಾಗಿದ್ದು ಒಂದಷ್ಟು ಹೊಸತನ್ನ ಕಲಿಯುವ ಮನಸುಳ್ಳವರು ಷೇರು ಮಾರುಕಟ್ಟೆಯನ್ನ ಪ್ರವೇಶಿಸಬಹುದು. ಇಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ಒಂದಷ್ಟು ಹಣವನ್ನ ಗಳಿಸಬಹುದು. ತಮ್ಮ ಉಳಿಕೆಯ ಹಣದ 75 ಪ್ರತಿಶತ ಹಣವನ್ನ ಭದ್ರತೆಯ ಹೂಡಿಕೆಯಲ್ಲಿ ತೊಡಗಿಸಿ ಉಳಿದ 25 ಪ್ರತಿಶತ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಜಾಣತನ. ಇಲ್ಲಿ ಇನ್ನೊಂದು ಅನುಕೂಲ ಕೂಡ ಇದೆ. ಹಿರಿಯ ನಾಗರಿಕರ ಬಳಿ ಸಮಯವಿರುವ ಕಾರಣ, ತಾವು ಹೂಡಿಕೆ ಮಾಡಲು ಇಚ್ಛಿಸಿದ ಸಂಸ್ಥೆಯ ಬಗ್ಗೆ ಕೂಲಂಕುಷವಾಗಿ ತಪಾಸಣೆ ಮಾಡಬಹುದು. ಇದರ ಜೊತೆಗೆ ಪರಿಣಿತರ ಒಂದಷ್ಟು ಸಲಹೆ ಅಳವಡಿಸಿಕೊಡರೆ ಆಗ ಬಹಳಷ್ಟು ಚಮತ್ಕಾರ ಸೃಷ್ಟಿಸಲು ಸಾಧ್ಯವಿದೆ.
ಎಲ್ಲಕ್ಕೂ ಮುಖ್ಯವಾಗಿ ಕೆಲವೊಂದು ಷೇರು ಮಾರುಕಟ್ಟೆ ಮೂಲಭೂತ ಸೂತ್ರಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಅವುಗಳನ್ನ ಪಾಲಿಸಬೇಕು. ಇಲ್ಲಿ ಹೇಳುತ್ತಿರುವ ಸೂತ್ರಗಳು ಕೆಲವೇ ಕೆಲವು, ನೂರಾರು ಸೂತ್ರಗಳಿವೆ. ಆದರೆ ಇವುಗಳು ಬೇಸಿಕ್, ಹೀಗಾಗಿ ಇವುಗಳಲ್ಲಿ ಎಡವುವಂತಿಲ್ಲ.
- ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವಂತಿಲ್ಲ. ಅದೆಷ್ಟೇ ದೊಡ್ಡ ಮಟ್ಟದ ಹಣ ಮರಳಿ ಬರುತ್ತದೆ ಎನ್ನುವ ಖಾತ್ರಿ ಇದ್ದರೂ ಸಾಲ ಮಾಡಿ ಹೂಡಿಕೆ ಮಾಡುವಂತಿಲ್ಲ. ಸಾಲ ಹೂಡಿಕೆ ಎರಡೂ ವಿರುದ್ಧ ಪದಗಳು:
ಗಮನಿಸಿ ಹೂಡಿಕೆ ಎಂದರೆ ನಮ್ಮ ಎಲ್ಲಾ ದಿನ ನಿತ್ಯದ ಪೂರೈಕೆಗೆ ಬೇಕಾದ ಹಣವನ್ನ ಮೀರಿ ಉಳಿದ ಹಣದಲ್ಲಿ, ಭವಿಷ್ಯದ ದೃಷ್ಟಿಯಿಂದ ಎಲ್ಲಾದರೂ ಏನಾದರೂ ಕೊಳ್ಳುವ ಕ್ರಿಯೆಗೆ ಹೂಡಿಕೆ ಎನ್ನಲಾಗುತ್ತದೆ. ದಿನ ನಿತ್ಯದ ಅವಶ್ಯಕತೆಗೆ ಅಥವಾ ದೀರ್ಘವಾಧಿ ಯೋಜನೆಯಾದ ಮನೆ ಅಥವಾ ನಿವೇಶನ ಖರೀದಿ ಇಂತಹವುಗಳಿಗೆ ಹಣವಿಲ್ಲದಾಗ ಮುಂದಿನ ದಿನಗಳಲ್ಲಿ ಇವುಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂಗಡ ಹಣವನ್ನ ಪಡೆಯುವ ಕ್ರಿಯೆಗೆ ಸಾಲ ಎನ್ನುತ್ತಾರೆ. ಅಂದರೆ ಸದ್ಯಕ್ಕೆ ನಮ್ಮ ಬಳಿ ಇಲ್ಲದ ಭವಿಷ್ಯದ ಹಣವನ್ನ ಇಂದೇ ತೆಗೆದುಕೊಂಡು ಅದಕ್ಕೆ ಬಡ್ಡಿ ಕಟ್ಟುತ್ತಾ ಮೂಲಧನವನ್ನ ಕೂಡ ಕಟ್ಟಬೇಕಾಗುತ್ತದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಅದು ನಿಮ್ಮ ದಿನನಿತ್ಯದ ಎಲ್ಲಾ ಪೂರೈಕೆಗೆ ಬೇಕಾಗಿ ಉಳಿದ ಹಣವೇ ಎನ್ನುವುದನ್ನ ನೋಡಬೇಕು. ಸಾಲ ಮಾಡಿ ಎಂದಿಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಾರದು. ಷೇರು ಮಾರುಕಟ್ಟೆಯು ಬಾಹ್ಯ ಜಗತ್ತಿನ ಸಾವಿರಾರು ಕಾರಣಕ್ಕೆ ಕಂಪಿಸುತ್ತಿರುತ್ತದೆ. ನಾವು ಹೂಡಿಕೆ ಮಾಡಿದ ಸಂಸ್ಥೆ ಎಷ್ಟೇ ಪ್ರಬಲವಾಗಿದ್ದರೂ ಕೆಲವೊಮ್ಮೆ ಬಾಹ್ಯ ಕಾರಣಗಳಿಂದ ಕುಸಿಯುವ ಸಾಧ್ಯತೆಯನ್ನ ಅಲ್ಲಗಳೆಯಲು ಬಾರದು. ಇಂತಹ ಸಂದರ್ಭದಲ್ಲಿ ಮೂಲಧನ ಕೂಡ ಕಳೆದುಕೊಂಡು, ಬಡ್ಡಿಯನ್ನ ಕೂಡ ಕಟ್ಟಬೇಕು ಎನ್ನುವಂತಾದರೆ, ಬದುಕು ಬಹಳ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಸಾಲ ಮಾಡಿ ಹೂಡಿಕೆ ಮಾಡಬಾರದು. ಮೊದಲೇ ಹೇಳಿದಂತೆ ಸಾಲ ಮತ್ತು ಹೂಡಿಕೆ ಎಣ್ಣೆ ಸೀಗೆಕಾಯಿಯ ಲೆಕ್ಕಾಚಾರದಲ್ಲಿ ಬರುತ್ತವೆ. ಷೇರು ಪೇಟೆಯಲ್ಲಿನ ಹೂಡಿಕೆಗೆ ಮಾತ್ರವಲ್ಲ, ಅವಶ್ಯಕತೆ ಹೆಚ್ಚು ಇರದಿದ್ದರೆ ಸಾಲ ಮಾಡಬಾರದು.
- ಆಳವಾದ ಅಧ್ಯಯನ ಬೇಕು, ಆದರೆ ಕೇವಲ ಅಧ್ಯಯನದಿಂದ ಗೆಲುವು ಸಾಧ್ಯವಿಲ್ಲ, ಏಕೆಂದರೆ ಷೇರು ಮಾರುಕಟ್ಟೆಯಲ್ಲಿ ಮನುಷ್ಯರ ದುರಾಸೆ, ಭಯ, ಕೋಪ, ತಲೆಬುಡವಿಲ್ಲದ ಗಾಳಿಮಾತುಗಳು ಹೇರಳವಾಗಿದೆ. ಹೀಗಾಗಿ ಇಲ್ಲಿ ಎಲ್ಲಕ್ಕೂ ಮೊದಲಿಗೆ ಬೇಕಾಗುವುದು ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ, ಪರಿಸ್ಥಿತಿಯನ್ನ ಅಂದಾಜಿಸುವ ಸಾಮಾನ್ಯ ಜ್ಞಾನ.:
ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ಅಧ್ಯಯನ ಬೇಕು ಎನ್ನುವ ಮಾತನ್ನ ಇದೆ ಪುಸ್ತಕದಲ್ಲಿ ನಾನೇ ಹಲವಾರು ಬಾರಿ ಉಚ್ಛರಿಸಿದ್ದೇನೆ. ಆದರೆ ಕೇವಲ ಅಧ್ಯಯನದಿಂದ ಗೆಲುವು ಅಥವಾ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂದ ಮಾತ್ರಕ್ಕೆ ಅಧ್ಯಯನ ಬೇಡ ಎಂದಲ್ಲ. ಅಧ್ಯಯನ ಇಲ್ಲದಿದ್ದರೆ ಸೋಲು ಖಚಿತ. ಅಧ್ಯಯನ ಇದ್ದ ಮಾತ್ರಕ್ಕೆ ಗೆಲುವು ಶತಸಿದ್ಧ ಎನ್ನಲು ಬಾರದು, ಹೀಗಾಗಿ ಅಧ್ಯಯನ ಬೇಕೇಬೇಕು. ಷೇರು ಮಾರುಕಟ್ಟೆಯನ್ನ ಉಗಮದಿಂದ ಇಂದಿನವರೆಗೆ ಮತ್ತು ಮುಂದೆಯೂ ಕೂಡ ಆಳುತ್ತಿರುವುದು ಎರಡು ಪ್ರಮುಖ ಭಾವನೆಗಳು, ಒಂದು ಭಯ, ಎರಡು ಆಸೆ ಅಥವಾ ದುರಾಸೆ. ಹಣ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ತನ್ಮೂಲಕ ನಿಜವಾದ ಕುಸಿತಕ್ಕೂ ನಾಂದಿ ಹಾಡುತ್ತದೆ. ನಿಜವಾದ ನಷ್ಟಕ್ಕೂ ಕಾರಣವಾಗುತ್ತದೆ. ಭಯವೂ ನಿಜವಾಗುತ್ತದೆ. ಹಾಗೆಯೇ ಇನ್ನಷ್ಟು, ಮತ್ತಷ್ಟು ಲಾಭ ಮಾಡಿಕೊಳ್ಳಬೇಕು ಎನ್ನುವ ಆಸೆ, ಅಥವಾ ದುರಾಸೆ ಇಲ್ಲದ ಬೇಡಿಕೆಯ ಸೃಷ್ಟಿಗೆ ಕಾರಣವಾಗುತ್ತದೆ. ಇಲ್ಲದ ಡಿಮ್ಯಾಂಡ್ ಹುಸಿ ಮಾರುಕಟ್ಟೆಯನ್ನ ಸೃಷ್ಟಿಸುತ್ತದೆ. ಹೀಗೆ ಉತ್ಪನ್ನವಾದ ಬಬ್ಬಲ್ ಹೊಡೆದು ಹೋಗಲೇಬೇಕಲ್ಲವೇ? ಒಂದಷ್ಟು ಸಮಯ ಆಚೀಚೆ ಆದೀತು ಆದರೆ ಸೃಷ್ಟಿತ ಮಾರುಕಟ್ಟೆ ಕುಸಿತ ಕಾಣುವುದು ಮಾತ್ರ ಖಚಿತ. ಈ ಭಯ ಮತ್ತು ದುರಾಸೆ ಎನ್ನುವ ಮನುಷ್ಯನ ಎರಡು ಮುಖ್ಯ ಅವಗುಣಗಳಿಗೆ ತುಪ್ಪ ಸುರಿಯುವುದು ಗಾಳಿ ಮಾತುಗಳು. ಹಾಗಂತೆ, ಹೀಗಂತೆ , ಅಲ್ಲಿ ಏನೋ ಆಯ್ತಂತೆ.., ಹೀಗೆ ಅಂತೆ-ಕಂತೆಗಳ ಕಂತೆ ಪುರಾಣಗಳಿಂದ ನಷ್ಟವೂ ಅಧಿಕ, ಲಾಭವೂ ಅಧಿಕ. ಆದರೆ ಎರಡೂ ಹೆಚ್ಚು ಕಾಲ ಬಾಳದ ಕ್ಷಣಿಕ ಸೋಲು ಅಥವಾ ಗೆಲುವನ್ನ ನೀಡುವ ವಿಷಯಗಳು. ಹೀಗಾಗಿ ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಪರಿಸ್ಥಿತಿಯನ್ನ ಅಂದಾಜಿಸುವ ಸಾಮಾನ್ಯ ಜ್ಞಾನ. ಸಾಮಾನ್ಯ ಜ್ಞಾನ ಇಂದಿನ ದಿನಗಳಲ್ಲಿ ಅತ್ಯಂತ ವಿರಳ ಗುಣ ಎನ್ನುವಂತಾಗಿದೆ. ಹೀಗಾಗಿ ಎಲ್ಲಕ್ಕೂ ಮುಖ್ಯವಾಗಿ ಒಂದಷ್ಟು ಸಾಮಾನ್ಯ ಜ್ಞಾನ ನಮ್ಮದಾಗಿರಲಿ.
- ಒಂದು ಸರಳ, ಅತಿ ಸರಳ ಸೂತ್ರವಿದೆ. ಅದನ್ನ ಪಾಲಿಸಿದರೆ ಯಶಸ್ಸು ನಿಮ್ಮದು. ಗಟ್ಟಿ ತಳಹದಿಯ ಆಧಾರದ ಮೇಲೆ ಕಟ್ಟಲಾಗಿರುವ, ಉತ್ತಮ ಜನರಿಂದ ನಡೆಸಲ್ಪಡುತ್ತಿರುವ ಸಂಸ್ಥೆಯ ಷೇರುಗಳನ್ನ ಉತ್ತಮ ಬೆಲೆಗೆ ಕೊಂಡು, ಇನ್ನಷ್ಟು ಉತ್ತಮ ಬೆಲೆ ಬರುವವರೆಗೆ ಕಾಯುವ ತಾಳ್ಮೆ ಇದ್ದರೆ ಸಾಕು ನೋಡಿ!!
ಗಮನಿಸಿ ಹೇಗೆ ಭಯ ಮತ್ತು ದುರಾಸೆ ಮನುಷ್ಯನ ಎರಡು ಪ್ರಮುಖ ಗುಣಗಳೂ ಹಾಗೆಯೇ ತಾಳ್ಮೆ ಕೂಡ ಮನುಷ್ಯನ ಇನ್ನೊಂದು ಪ್ರಮುಖ ಗುಣ. ನಿಮಗೆ ಹಲವಾರು ವಿಷಯಗಳನ್ನ ಪುಸ್ತಕ ಕಲಿಸಿಕೊಡಬಹುದು ಆದರೆ ಕೆಲವೊಂದನ್ನ ಅದು ಕಲಿಸಿಕೊಡಲು ಸಾಧ್ಯವಿಲ್ಲ. ಸಂಸ್ಥೆ ಅಥವಾ ಮಾರುಕಟ್ಟೆ ಕುಸಿದಾಗ ಅವುಗಳ ತಳಹದಿ ಭದ್ರವಾಗಿದ್ದರೆ ಖಂಡಿತ ಅವುಗಳು ಅಲ್ಪಾವಧಿಯಲ್ಲೇ ಮತ್ತೆ ಮೇಲಕ್ಕೆ ಏರುತ್ತವೆ. ಅಲ್ಪಾವಧಿ ಆರು ತಿಂಗಳಿಂದ ವರ್ಷವೂ ಆಗಬಹುದು, ಇಂತಹ ಸಮಯದಲ್ಲಿ ಕಾಯುವ ತಾಳ್ಮೆ ಮತ್ತು ಅದೇ ಪೋರ್ಟಿಫೋಲಿಯೋ ಗೆ ಕಚ್ಚಿ ನಿಲ್ಲುವ ಆತ್ಮಸ್ಥೈರ್ಯ ಮಾತ್ರ ಗೆಲುವು ತಂದು ಕೊಡುತ್ತದೆ. ನೀವು ಭದ್ರ ತಳಹದಿಯ ಬುನಾದಿಯ ಮೇಲೆ ಕಟ್ಟಿರುವ, ಉತ್ತಮ ಮಾರ್ಗದರ್ಶಿಗಳನ್ನ ಹೊಂದಿರುವ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರೆ, ಸಂಸ್ಥೆ ಕೆಲ ಸಮಯ ಕುಸಿತ ಕಂಡರೂ ಕಾಯುವ ತಾಳ್ಮೆ ಇರುತ್ತದೆ. ಏಕೆಂದರೆ ಮೂಲಭೂತ ವಿಷಯಗಳು ಸರಿಯಾಗಿದ್ದರೆ ಗೆಲುವು ಎನ್ನುವುದು ಸಮಯಕ್ಕೆ ಸಂಬಂದಿಸಿದ್ದು ಎನ್ನುವುದು ಬಿಟ್ಟರೆ ಗೆಲುವು ಖಂಡಿತ. ಹೀಗಾಗಿ ಹೂಡಿಕೆ ಮಾಡುವ ಮುನ್ನ ಎಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎನ್ನುವ ಜ್ಞಾನ ನಮ್ಮದಾಗಿರಲಿ.
- ನೀವು ಹೂಡಿಕೆ ಮಾಡಬಹುದಾದ ಅತ್ಯುತ್ತಮ ಆಸ್ತಿ ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು 'ನೀವು'. ನಿಮ್ಮ ಮೇಲೆ ನೀವು ಸಮಯವನ್ನ ಹೂಡಿಕೆ ಮಾಡಿ ಅಪ್ಡೇಟ್ ಆಗುವುದು ಎಲ್ಲಾ ಹೂಡಿಕೆಗಿಂತ ಮೊದಲು ಮಾಡಬೇಕಾದ ಹೂಡಿಕೆ!
ಕನ್ನಡದಲ್ಲಿ ಒಂದು ಆಡು ಮಾತಿದೆ, 'ಮಾಡಿದ ಕೆಲಸ ನೋಡದೆ ಹೋಯ್ತು' ಎನ್ನುವುದು ಆ ಮಾತು. ಇದರ ಅರ್ಥ ಬಹಳ ಸರಳ. ನಾವು ಯಾವುದೇ ಕೆಲಸವನ್ನ ಅದೆಷ್ಟೇ ಶ್ರದ್ಧೆ ಮತ್ತು ಅಚ್ಚುಕಟ್ಟಾಗಿ ಮಾಡಿರಲಿ, ಅದನ್ನ ಪದೇ ಪದೇ ನೋಡದೆ ಹೋದರೆ ಅದು ಕಸವಾಗಿ ಮಾರ್ಪಾಡಾಗಲು ಬಹಳ ಸಮಯ ಬೇಕಾಗುವುದಿಲ್ಲ. ಇದನ್ನ ಮಾರುಕಟ್ಟೆಗೆ ಹೋಲಿಕೆ ಮಾಡಿ ನೋಡಿದರು ಫಲಿತಾಂಶ ಅದೇ ಸಿಗುತ್ತದೆ. ಉದಾಹರಣೆಗೆ ನೀವು ಹೂಡಿಕೆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್, ಅತ್ಯುತ್ತಮ ಎನ್ನಿಸಿಕೊಂಡ ಷೇರಿನ ಮೇಲೆ ಹೂಡಿಕೆ ಮಾಡಿರುತ್ತೀರಿ ಆದರೆ ವರ್ಷಾನುಗಟ್ಟಲೆ ಅದನ್ನ ನೋಡದೆ ಹಾಗೆ ಬಿಟ್ಟು ಬಿಟ್ಟರೆ ಅದು ಕುಸಿತ ಕಂಡಿರಬಹುದು, ಅಥವಾ ಮಾರುಕಟ್ಟೆಯಲ್ಲಿ ಅದಕ್ಕಿಂತ ಉತ್ತಮ ಷೇರು ಬಂದಿರಬಹುದು, ಅಥವಾ ನೀವು ಕೊಂಡ ಅಂದಿನ ಅತ್ಯುತ್ತಮ ಷೇರು ಮುಂಬರುವ ದಿನಗಳಲ್ಲಿ ತನ್ನ ಪ್ರಸ್ತುತತೆ ಕಾಯ್ದುಕೊಳ್ಳದೆ ಇರಬಹುದು. ಹೀಗೆ ಸಾಧ್ಯತೆಗಳ ಪಟ್ಟಿ ದೊಡ್ಡದ್ದು. ಹೀಗಾಗಿ ಕೊಂಡ ನಂತರ ಅದನ್ನ ಸದಾ ಗಮನಿಸುತ್ತಿರಬೇಕು. ಇದರ ಅರ್ಥ ನಾವು ಸದಾ ಅಪ್ಡೇಟ್ ಆಗುತ್ತಿರಬೇಕು. ಮಾರುಕಟ್ಟೆಯಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಬದಲಾವಣೆಗಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು. ಅದಕ್ಕೆ ಮಾರುಕಟ್ಟೆ ತಜ್ಞರು ಒಂದು ಮಾತು ಹೇಳುತ್ತಾರೆ, ಎಲ್ಲಾದರೂ ಹೂಡಿಕೆ ಮಾಡುವ ಮೊದಲು ನಿನ್ನ ಮೇಲೆ ಸಮಯವನ್ನ ಹೂಡಿಕೆ ಮಾಡಿಕೊಳ್ಳಬೇಕು ಎಂದು. ಆ ಮೂಲಕ ನಾವು ಸಿದ್ಧರಾಗಿದ್ದರೆ ಉಳಿದದ್ದು ಸಮಯದ ಆಟ. ಕಲಿಕೆಯೊಂದೇ ನಿರಂತರ. ಕಲಿತವನೇ ಸರದಾರ.
- ಪ್ರೈಸ್ ಅಥವಾ ಬೆಲೆ ನೀವು ಕೊಡುವುದು. ವ್ಯಾಲ್ಯೂ ಅಥವಾ ಮೌಲ್ಯ ನಿಮಗೆ ಸಿಗುವುದು. ಹೀಗಾಗಿ ಕೊಟ್ಟ ಬೆಲೆಗೆ ತಕ್ಕ ಮೌಲ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ಹೂಡಿಕೆದಾರನ ಹಕ್ಕು. ಹಕ್ಕು ಮತ್ತು ಬಾಧ್ಯತೆ ಮರೆತಿರುವ ಮಾರುಕಟ್ಟೆಯಲ್ಲಿ ಇದನ್ನ ಸದಾ ನೆನಪಿಟ್ಟುಕೊಳ್ಳಬೇಕು:
ನೀವು ಇಷ್ಟಪಟ್ಟು, ನಂಬಿಕೆಯಿಟ್ಟು ಒಂದು ಷೇರಿನ ಮೇಲೆ ಹೂಡಿಕೆ ಮಾಡುವುದಕ್ಕೂ, ಮಾರುಕಟ್ಟೆಯ ಅಬ್ಬರಕ್ಕೆ ಸಿಲುಕಿಕೊಳ್ಳುವುದಕ್ಕೂ ಭಾರಿ ವ್ಯತ್ಯಾಸವಿದೆ. ಇದು ಹೇಗೆ ಎಂದರೆ ನೀವು ಇಷ್ಟಪಟ್ಟು ಹೂಡಿಕೆ ಮಾಡಿದರೆ ಅದು ಖರೀದಿ. ನೀವು ಖರೀದಿಸಿದ್ದು. ಅದೇ ಅಬ್ಬರಕ್ಕೆ ಸಿಲುಕಿ ಮಾಡಿದ ಹೂಡಿಕೆ ನಿಮಗೆ ಬೇರೆ ಯಾರೋ ಮಾರಾಟ ಮಾಡಿದ ಹಾಗೆ. ನಿಮಗೆ ಅರ್ಥವಾಯ್ತು ಎಂದುಕೊಳ್ಳುವೆ. ನಾವು ಇಷ್ಟ ಪಟ್ಟು ಕೊಂಡರೆ ಅದು ಖರೀದಿ, ನಾವು ಇಷ್ಟಪಡದೆ ಕೂಡ ಕೊಂಡರೆ ಅದು ಖರೀದಿಯಲ್ಲ, ಇತರರು ನಿಮಗೆ ಅದನ್ನ ಮಾರಿದ್ದಾರೆ ಎಂದರ್ಥ. ಮುಕ್ಕಾಲು ಪಾಲು ಅಧ್ಯಯನ ಮಾಡಿ ಕೊಂಡ ಷೇರಿಗೆ ತಕ್ಕ ಮೌಲ್ಯ ಸಿಕ್ಕಿರುತ್ತದೆ. ಮಾರುಕಟ್ಟೆಯ ಆರ್ಭಟದಲ್ಲಿ ಕೊಂಡ ಷೇರಿಗೆ ತಕ್ಕ ಮೌಲ್ಯ ಸಿಕ್ಕಿರುತ್ತದೆಯೇ ಎನ್ನುವುದು ಪ್ರಶ್ನೆ. ಮಾರುಕಟ್ಟೆಯಲ್ಲಿ ಒಂದು ವರ್ಗ ಸದಾ ಹೆಚ್ಚು ಲಾಭ ಮಾಡುವುದು ಹೇಗೆ ಎನ್ನುವುದರಲ್ಲೇ ಮಗ್ನವಾಗಿರುತ್ತದೆ. ಹೀಗಾಗಿ ಕೊಳ್ಳುವ ಅಥವಾ ಮಾರುವ ಮುನ್ನ ಎಚ್ಚರ ವಹಿಸುವುದು ಉತ್ತಮ. ಏಕೆಂದರೆ ನಾವು ಕೊಟ್ಟ ಬೆಲೆಗೆ ತಕ್ಕ ಮೌಲ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಹಾಗೆಯೇ ಇಲ್ಲದ ಮೌಲ್ಯಕ್ಕೆ ಮಾರದೆ ಇರುವುದು ಬಾಧ್ಯತೆ, ಹಕ್ಕು ಮತ್ತು ಬಾಧ್ಯತೆ ಮರೆತಿರುವ ಮಾರುಕಟ್ಟೆಯಲ್ಲಿ ಇದನ್ನ ಸದಾ ನೆನಪಿಟ್ಟುಕೊಳ್ಳಬೇಕು. ಮೋಸ ಮಾಡುವುದು ಎಷ್ಟು ತಪ್ಪೋ ಹಾಗೆಯೇ ಮೋಸ ಹೋಗುವುದು ಕೂಡ ತಪ್ಪು. ಯಾ ಸುಪ್ತೇಷು ಜಾಗ್ರತ-ಸದಾ ಜಾಗ್ರತ ಸ್ಥಿತಿಯಲ್ಲಿರಬೇಕು.
- ಸ್ಟಾಕ್ ಅಥವಾ ಷೇರಿಗೆ ನೀವು ಉಲ್ಲೇಖಿತ ಸಂಸ್ಥೆಯ ಉಲ್ಲೇಖಿತ ಮೌಲ್ಯದ ಮಾಲೀಕರು ಎನ್ನುವುದು ತಿಳಿದಿರುವುದಿಲ್ಲ!! ಸೊ ಬಿಸಿನೆಸ್ ನಲ್ಲಿ ಭಾವನೆ ಬಿಗ್, ಬಿಗ್ ನೋ!!
ಎರಡು ದಶಕಕ್ಕೂ ಹೆಚ್ಚಿನ ಹಣಕಾಸು ಸಲಹೆಗಾರನ ವೃತ್ತಿಯಲ್ಲಿ ಸಾವಿರಾರು ಜನರನ್ನ ಕಾಣುವ ಭಾಗ್ಯ ನನ್ನದು. ಹಲವಾರು ಜನ ತಾವು ಕೊಂಡ ಷೇರಿನ ಜೊತೆಗೆ, ಸಂಸ್ಥೆಯ ಜೊತೆಗೆ ಭಾವನಾತ್ಮಕ ಸಂಬಂಧವನ್ನ ಬೆಸೆದುಕೊಂಡು ಬಿಡುತ್ತಾರೆ. ಮಾರುಕಟ್ಟೆಯಲ್ಲಿ ಷೇರಿನ ಬೆಲೆ ಎಲ್ಲಾ ದಾಖಲೆಯನ್ನ ಮೀರಿ ಹೊಸ ದಾಖಲೆ ಬರೆಯುತ್ತಿರುವ ಸಮಯದಲ್ಲಿ ಕೂಡ ಷೇರನ್ನ ಮಾರಿ ಹಣ ಮಾಡಿಕೊಳ್ಳುವ ಮನಸ್ಸು ಮಾಡುವುದಿಲ್ಲ.
ಅಯ್ಯೋ ಕಳೆದ ಹತ್ತು ವರ್ಷದಿಂದ ಇಟ್ಟುಕೊಂಡಿದ್ದೇನೆ ಹೇಗೆ ಮಾರುವುದು ಎನ್ನುವುದು ಇವರ ಮಾತು. ತಮ್ಮ ಬಳಿ ಇರುವ ಪೆನ್ನು, ಮೊಬೈಲ್ ಕೊನೆಗೆ ಪುಟಾಣಿ ಡೈರಿ ಪುಸ್ತಕ ಹೀಗೆ ಬಹಳ ವರ್ಷದಿಂದ ಜೊತೆಗಿದ್ದ ಜೀವವಿಲ್ಲದ ವಸ್ತುಗಳ ಜೊತೆಗೂ ಭಾವನಾತ್ಮಕವಾಗಿ ಅನೇಕರು ಬೆಸೆದು ಕೊಂಡುಬಿಡುತ್ತಾರೆ. ಇದನ್ನ ಪೂರ್ಣವಾಗಿ ತಪ್ಪು ಎಂದು ಹೇಳಲು ಬಾರದಿದ್ದರೂ ಅವರಿಗೆ ಒಂದು ಸಣ್ಣ ಕಿವಿ ಮಾತು ಹೇಳಲೇಬೇಕು ನೋಡಿ ನೀವು ಕೊಂಡ ಸ್ಟಾಕ್ ಅಥವಾ ಷೇರಿಗೆ ನೀವು ಉಲ್ಲೇಖಿತ ಸಂಸ್ಥೆಯ ಉಲ್ಲೇಖಿತ ಮೌಲ್ಯದ ಮಾಲೀಕರು ಎನ್ನುವುದು ತಿಳಿದಿರುವುದಿಲ್ಲ, ಅದೊಂದು ಕೇವಲ ಪೇಪರ್ ತುಂಡು!! ಆ ಪೇಪರ್ ಮೇಲೆ ಎಲ್ಲಿಯ ತನಕ ನಿಮ್ಮ ಹೆಸರು ಬರೆದಿರುತ್ತದೆ ಅಲ್ಲಿಯ ತನಕ ನೀವು ಅಲ್ಲಿನ ಉಲ್ಲೇಖಿತ ಮೌಲ್ಯದ ಮಾಲೀಕರು ಅಷ್ಟೇ, ಹೂಡಿಕೆ ಮಾಡುವುದು ಸರಿಯಾದ ಸಮಯ ಬಂದಾಗ ಅದನ್ನ ಮಾರಿ ಇನ್ನೊಂದು ಕಡೆ ಹೂಡಿಕೆ ಮಾಡುವುದಕ್ಕೆ, ಇದೊಂದು ನಿಲ್ಲದ ಪ್ರಕ್ರಿಯೆ. ಹೀಗಾಗಿ ಕೊಳ್ಳುವ ಸಮಯ ಮತ್ತು ಮಾರುವ ಸಮಯದಲ್ಲಿ ಇಂತಹ ಭಾವನೆಗಳಿಗೆ ಬಿಗ್ ಬಿಗ್ ನೋ, ಏಕೆಂದರೆ ಮಾರುವ ಅಥವಾ ಕೊಳ್ಳುವ ನಿರ್ಧಾರ ಕೆಲವು ದಿನಗಳ ಕಾಲ ಅತ್ತಿತ್ತ ಆದರೂ ಅದು ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇವಲ ಷೇರು ಮಾರುಕಟ್ಟೆ ಮಾತ್ರ ಎಂದಲ್ಲ, ಯಾವುದೇ ಬಿಸಿನೆಸ್ ನಲ್ಲಿ ಭಾವನೆಗಳಿಗೆ ಜಾಗವಿಲ್ಲ. ಇರಲು ಕೂಡದು ಎನ್ನುವ ಸತ್ಯ ತಿಳಿದಿರಲಿ.
- ನಿಮಗೆ ಎಲ್ಲಾ ರೂಲ್ಸ್ ಯಾರು ಕೂಡ ಹೇಳಿಕೊಡಲು ಸಾಧ್ಯವಿಲ್ಲ. ಕೆಲವು ಸ್ವತಃ ಕಲಿಯಬೇಕು, ಕೆಲವು ಕಲಿಯಲಾಗದೆ ಉಳಿದವುಗಳ ಬಗ್ಗೆ ಹೆಚ್ಚು ಚಿಂತಿಸಬಾರದು:
ಯಶಸ್ಸಿಗೆ ಒಂದು ಸಿದ್ಧ ಸೂತ್ರವಿಲ್ಲ. ಹತ್ತಾರು ಸೂತ್ರಗಳ ಮಿಶ್ರಣ ಯಶಸ್ಸು ತಂದು ಕೊಟ್ಟಿರುತ್ತದೆ. ಅದೇ ಹತ್ತಾರು ಸೂತ್ರಗಳ ಮಿಶ್ರಣ ಮತ್ತೊಮ್ಮೆ ಅಷ್ಟೇ ದೊಡ್ಡ ಮಟ್ಟದ ಗೆಲುವನ್ನ ತಂದುಕೊಡುತ್ತದೆ ಎಂದು ಕೂಡ ಹೇಳಲು ಬಾರದು. ಸಮಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಈ ಮಿಶ್ರಣದಲ್ಲಿ ಕೂಡ ಬದಲಾವಣೆ ಆಗುತ್ತಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಶಸ್ಸು ಕಾಣಲು ಸಿದ್ಧ ಸೂತ್ರವಿಲ್ಲ ಎಂದದ್ದು. ಮಾರುಕಟ್ಟೆ ಪರಿಣಿತರು ತಮ್ಮ ಅನುಭವದ ಆಧಾರದ ಮೇಲೆ ಸಾಕಷ್ಟು ಸೂತ್ರಗಳನ್ನ ನೀಡಿದ್ದಾರೆ. ಅವುಗಳನ್ನ ಮನನ ಮಾಡಿಕೊಂಡು ಮಾರುಕಟ್ಟೆ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಹೀಗೆ ಅನುಭವ ಪಡೆಯುತ್ತ ಹೋದಂತೆಲ್ಲ ನಮ್ಮದೇ ಆದ ಸಿದ್ಧಾಂತ, ಸೂತ್ರಗಳನ್ನ ಕೂಡ ಕಂಡುಕೊಳ್ಳಬಹುದು. ಮಾರುಕಟ್ಟೆ ಪಂಡಿತರು ಹೇಳಿದ ಸೂತ್ರಕ್ಕಿಂತ ಸ್ವತಃ ಅನುಭವದ ಸೂತ್ರ ವಿಭಿನ್ನವಾಗಿರಬಹುದು. ಅದು ನಮಗೆ ಗೆಲುವನ್ನ ಕೂಡ ತಂದುಕೊಡಬಹುದು, ಹೀಗಾಗಿ ಎಲ್ಲವನ್ನೂ ಯಾರೋ ಹೇಳಿರಲೇ ಬೇಕೆಂದಿಲ್ಲ, ಬಹಳಷ್ಟು ಸ್ವತಃ ಕಲಿಯಬಹುದು.
ಕೊನೆಗೂ ಬದುಕೆಂದರೆ ಇಷ್ಟೇ ನೋಡಿ, ನೀವೆಷ್ಟೇ ಕಷ್ಟಪಟ್ಟರೂ ಒಂದಲ್ಲ ಒಂದು ಅಂಶ ಮಿಸ್ ಆಗಿಯೇ ಹೋಗುತ್ತದೆ. ಹೀಗೆ ತಿಳಿಯಲಾಗದ ಅಥವಾ ಮಿಸ್ ಆದ ವಿಷಯದ ಬಗ್ಗೆ ಕೂಡ ಹೆಚ್ಚು ತಲೆ ಕೆಡಸಿಕೊಳ್ಳಬಾರದು. ಸ್ವಸ್ಥ ಮನ ಗೆಲ್ಲುವುದೆಲ್ಲವನ್ನ ಎನ್ನುವ ತತ್ವದ ಆಧಾರದ ಮೇಲೆ ಬದುಕನ್ನ ಸಾಗಿಸಬೇಕು. ಮಾರುಕಟ್ಟೆಯಲ್ಲಿನ ಗೆಲುವಿಗೆ ಸಂತನ ಮನಸ್ಥಿತಿ ಕೂಡ ಇರಬೇಕು.
ಈ ಸೂತ್ರಗಳು ಬಹುತೇಕ ಬಾರಿ ಒಂದಕ್ಕೊಂದು ವಿರುದ್ಧ ಹೇಳಿಕೆಗಳನ್ನ ಕೂಡ ನೀಡುತ್ತವೆ. ಇದನ್ನ ಆಯಾ ಸಮಯಕ್ಕೆ , ಸನ್ನಿವೇಶಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಜಾಣ್ಮೆ ಕೂಡ ಹೂಡಿಕೆದಾರನಿಗೆ ಇರಬೇಕಾಗುತ್ತದೆ. ಷೇರು ಮಾರುಕಟ್ಟೆ ಅಪಾಯ ಎಂದು ಅದನ್ನ ಪ್ರವೇಶಿಸದೆ ಇರುವುದು ಕೂಡ ಕಡಿಮೆ ಅಪಾಯವೇನಲ್ಲ. ಹೀಗಾಗಿ ಜಾಣ್ಮೆಯ , ಕಲಿಕೆಯ ನಡಿಗೆ ನಮ್ಮದಾಗಿರಬೇಕು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com