
ಬೆಲೆ ಏರಿಕೆ
ಇವತ್ತು ಮತ್ತೆ ಜಗತ್ತು ಪೂರ್ತಿ ಇನ್ನೊಂದು ಹೊಸ ಬೆಲೆಯೇರಿಕೆಗೆ ಸಿದ್ಧವಾಗುತ್ತಿದೆ. ಪ್ರಜೆಗಳ ಆದಾಯದಲ್ಲಿ ಅಂತಹ ಹೆಚ್ಚಿನ ಬದಲಾವಣೆ ಖಂಡಿತ ಆಗಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಹೊಸ ರೀತಿಯ ಬದಲಾವಣೆಗಳು ಆಗುತ್ತಿವೆ. ಇಂತಹ ಬದಲಾವಣೆಗಳು ಭಾರತದ ಮೇಲೂ ಆಗುತ್ತದೆ. ಹಣ ಗಳಿಸುವುದು ಮತ್ತು ಉಳಿಸುವುದು ಕಷ್ಟವಾಗುತ್ತದೆ. ಆದರೆ ಯಾವುದೇ ಹೊಸ ವ್ಯಾಪಾರ, ಉದ್ದಿಮೆ ತೆರೆದರೆ ಅದರಿಂದ ಹೇಗಾದರೂ ಬದುಕು ಕಟ್ಟಿಕೊಳ್ಳಬಹುದು ಎನ್ನುವ ನಂಬಿಕೆ ಕೂಡ ಕಮರಿ ಹೋಗುತ್ತಿದೆ. ಬಾಡಿಗೆಯಿಂದ ಹಿಡಿದು ಕಚ್ಚಾ ಪದಾರ್ಥಗಳ ವರೆಗೆ ಎಲ್ಲದರ ಬೆಲೆಯೇರಿಕೆ ಆಗುತ್ತಿದೆ. ಗ್ರಾಹಕ ತನ್ನ ಬಳಿ ಇರುವ ಹಣವನ್ನ ಬಹಳ ಜಾಗರೋಕತೆಯಿಂದ ಖರ್ಚು ಮಾಡುತ್ತಿದ್ದಾನೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಇರುವುದು ಸೂತಕದ ಛಾಯೆ. ಇಲ್ಲೇನಿದ್ದರೂ ಪದಾರ್ಥಗಳ ಉತ್ಪಾದನೆ ನಿಲ್ಲದೆ ಆಗುತ್ತಿರಬೇಕು, ಗ್ರಾಹಕ ಅದನ್ನ ಕೊಳ್ಳುತ್ತಿರಬೇಕು. ದೇಹದಲ್ಲಿ ರಕ್ತ ಪರಿಚಲನೆ ಎಷ್ಟು ಮುಖ್ಯವೋ ದೇಶದಲ್ಲಿ ಹಣದ ಚಲನೆ ಕೂಡ ಅಷ್ಟೇ ಮುಖ್ಯ. ರಕ್ತ ಹರಿಯದಿದ್ದರೆ ದೇಹ ಸ್ತಬ್ಧ, ಹಣದ ಹರಿವಿಲ್ಲದಿದ್ದರೆ ದೇಶ ಸ್ತಬ್ಧ.
ಅಮೆರಿಕನ್ ಎಕಾನಮಿ ಇನ್ ಡೇಂಜರ್!
ಅಮೇರಿಕಾ ಎಕಾನಮಿ ನಿಂತಿರುವುದು ಗ್ರಾಹಕತ್ವದ ಮೇಲೆ, ಅಂದರೆ ಅಲ್ಲಿನ ಜನ ಐ ಫೋನ್, ಸೋಫಾ, ಕಾರುಗಳನ್ನ ಬೇಕಿರಲಿ ಬೇಡದಿರಲಿ ಕೊಳ್ಳುತ್ತಿರಬೇಕು. ಇದರ ಜೊತೆಗೆ ಅವರು ಮನೆಯಲ್ಲಿ ಕಡಿಮೆ ಅಡುಗೆ ಮಾಡಬೇಕು, ಹೆಚ್ಚೆಚ್ಚು ರೆಸ್ಟೊರೆಂಟ್ ಗಳಲ್ಲಿ ತಿನ್ನಬೇಕು. ಒಟ್ಟಿನಲ್ಲಿ ತಮಗೆ ಬಂದ ಹಣವನ್ನೆಲ್ಲ ಖರ್ಚು ಮಾಡಿಬಿಡಬೇಕು. ಸಾಲದಕ್ಕೆ ಸಾಲ ಮಾಡಬೇಕು. ಮುಂದಿನ ಹತ್ತಾರು ವರ್ಷ ಗಳಿಸಬಹುದಾದ ಸಂಭಾವ್ಯ ಹಣವನ್ನ ಕೂಡ ಸಾಲದ ರೂಪದಲ್ಲಿ ಪಡೆದು ಇಂದೇ ಖರ್ಚು ಮಾಡಿಬಿಡಬೇಕು. ಇಂತಹ ಆರ್ಥಿಕತೆ ಎಷ್ಟು ದಿನ ನಡೆದೀತು? ದಶಕಗಳ ಅಮೆರಿಕಾದ ಈ ತರಹದ ಹುಚ್ಚಾಟಕ್ಕೆ ಬೇರಾರೋ ಕಡಿವಾಣ ಹಾಕುತ್ತಿಲ್ಲ ಅಲ್ಲಿನ ಜನರೇ, ಆ ದೇಶದ ನಾಗರಿಕರೇ ದಶಕಗಳಲ್ಲಿ ಪ್ರಥಮ ಬಾರಿಗೆ ಖರ್ಚು ಕಡಿಮೆ ಮಾಡಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ಹೆಚ್ಚಾಗಿರುವ ಅಸ್ಥಿರತೆ ಖರ್ಚು ಕಡಿಮೆ ಮಾಡಲು ಪ್ರಮುಖ ಕಾರಣ.
ಅಮೇರಿಕಾದಲ್ಲಿ ಹೆಚ್ಚಿನ ನಾಗರಿಕರು ತಮ್ಮ ಬದುಕಿನ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಕಡಿಮೆ ಆದಾಯ ಇರುವ ಮನೆಗಳಲ್ಲಿ ಇದು ಹೆಚ್ಚು, ವರ್ಷಕ್ಕೆ ಲಕ್ಷ ಡಾಲರ್ ಆದಾಯವಿರುವ ಮನೆಗಳಲ್ಲಿ ಕೂಡ ಈ ತರಹದ ಅತೃಪ್ತಿಯ ಹೊಗೆ ಕಾಣಿಕೊಳ್ಳುತ್ತಿರುವುದು ಮಾತ್ರ ದಶಕದಲ್ಲಿ ಪ್ರಥಮ. ನಿಮಗೆಲ್ಲಾ ಗೊತ್ತಿರಲಿ ಅಮೆರಿಕಾದ ಎಕಾನಮಿ 70 ಪ್ರತಿಶತ ನಿಂತಿರುವುದು ಈ ರೀತಿಯ ಖರ್ಚುಗಳ ಮೇಲೆ, ಯಾವಾಗ ಜನ ಸಾಮಾನ್ಯ ಖರ್ಚು ಕಡಿಮೆ ಮಾಡುತ್ತಾನೆ ಆಗೆಲ್ಲಾ ಅಮೆರಿಕಾದ ಎಕಾನಮಿ ಇನ್ ಡೇಂಜರ್ ಎನ್ನುವ ಮಾತುಗಳು ಕೇಳಿ ಬರುತ್ತವೆ. ಪ್ಯಾಂಡಮಿಕ್ ಕಾರಣ ಅಮೆರಿಕನ್ ಸರಕಾರ ಉದಾರವಾಗಿ ಜನರಿಗೆ ನೀಡಿದ್ದ ಹಣ ಅವರ ಬಳಿ ಇನ್ನೂ ಇದೆ. ಆದರೆ ಅದನ್ನ ಜನರು ಖರ್ಚು ಮಾಡುತ್ತಿಲ್ಲ. ಹೀಗೆ ಜನ ಖರ್ಚು ಮಾಡದೆ ಇರುವುದು ಸರಕಾರ ಮತ್ತು ಹೂಡಿಕೆದಾರರಿಬ್ಬರಿಗೂ ಹೊಸ ತಲೆ ನೋವಾಗಿ ಪರಿಣಮಿಸಿದೆ.
ಜನ ಹೆಚ್ಚು ಖರ್ಚು ಮಾಡಬೇಕು ಎಂದರೆ ಹಣದುಬ್ಬರ ಕಡಿಮೆಯಾಗಬೇಕು, ಅಸ್ಥಿರತೆ ಹೋಗಲಾಡಿಸಬೇಕು. ಅಮೆರಿಕಾ ಸರಕಾರ ಹಣದುಬ್ಬರವನ್ನ ನಿಯಂತ್ರಣದಲ್ಲಿರಸಲು ಫೆಡರಲ್ ಇಂಟರೆಸ್ಟ್ ರೇಟ್ ಹೆಚ್ಚಿಸುತ್ತದೆ, ತನ್ಮೂಲಕ ಸಮಾಜದಲ್ಲಿ ಮತ್ತೆ ಕನ್ಸ್ಯೂಮರಿಸಂ ಮರುಕಳಿಸಲು ಏನು ಬೇಕು ಅದನ್ನೆಲ್ಲ ಮಾಡುತ್ತದೆ. ಫೆಡರಲ್ ಬಡ್ಡಿ ದರ ಹೆಚ್ಚಾದಾಗ ಭಾರತದಲ್ಲಿ ಹೂಡಿಕೆ ಮಾಡಿದ್ದ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ತಮ್ಮ ಹಣವನ್ನ ಇಲ್ಲಿಂದ ತೆಗೆದು ಅಲ್ಲಿಗೆ ಹಾಕುತ್ತಾರೆ. ಇದು ಭಾರತಕ್ಕೆ ದೊಡ್ಡ ಮೊತ್ತದ ಹೊಡೆತವನ್ನ ನೀಡುತ್ತದೆ. ಗಮನಿಸಿ ಯಾವುದೇ ವಿದೇಶಿ ಹೂಡಿಕೆದಾರ ಇಲ್ಲಿ ಒಂದಷ್ಟು ಹೆಚ್ಚಿನ ಹಣ ಸಿಗುತ್ತದೆ ಎನ್ನುವ ಆಸೆಯಿಂದ ಹೂಡಿಕೆ ಮಾಡಿರುತ್ತಾನೆ. ನಿಜವಾದ ಹೂಡಿಕೆದಾರ ಸೆಂಟಿಮೆಂಟಿಗೆ ಎಂದಿಗೂ ಒಳಗಾಗುವುದಿಲ್ಲ. ಫೆಡರಲ್ ಬಡ್ಡಿ ದರ ಹೆಚ್ಚಾದರೆ ಅಲ್ಲಿಗೆ ಗುಳೆ ಹೊರಡುವುದಕ್ಕೆ ಪ್ರಮುಖ ಕಾರಣ ವಿದೇಶಿ ವಿನಿಮಯದಲ್ಲಿ ಆಗುವ ವ್ಯತ್ಯಾಸ. ಅಲ್ಲಿಗಿಂತ ಒಂದಷ್ಟು ಹೆಚ್ಚಿನ ಹಣವನ್ನ ಗಳಿಸಿದರೂ ಅದನ್ನ ಡಾಲರ್ಗೆ ಬದಲಾಯಿಸುವ ಪ್ರಕ್ರಿಯೆಯಲ್ಲಿ ಗಳಿಸಿದ ಹಣವನ್ನ ಕಳೆದುಕೊಂಡು ಬಿಟ್ಟಿರುತ್ತಾರೆ. ಅಮೆರಿಕಾದ ಎಕಾನಮಿ ಸ್ವಸ್ಥವಿರಬೇಕು ಇಲ್ಲದಿದ್ದರೆ ಅವರು ಇತರರನ್ನ ಕೂಡ ಸಾಮಾನ್ಯವಾಗಿ, ಸುಖವಾಗಿ ಬಾಳಲು ಬಿಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.
ಮತ್ತೆ ಉತ್ತರಾಭಿಮುಖವಾಗಿ ಹೊರಟ ಕಚ್ಚಾ ತೈಲದ ಬೆಲೆ:
ನಿಮಗೆಲ್ಲಾ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರರ ಗಡಿಯನ್ನ ಮುಟ್ಟಿದ್ದು ಮತ್ತು ಅದರಿಂದ ಸಮಾಜದಲ್ಲಿ ಆದ ಬವಣೆ ನೆನಪಿರುತ್ತದೆ ಎಂದು ಭಾವಿಸುವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಬ್ಯಾರಲ್ ಗೆ 100 ಡಾಲರ್ ಬಳಿ ಸಾಗುತ್ತಿದೆ. ಇದರರ್ಥ ಮತ್ತೆ ನಾವು ಪೆಟ್ರೋಲ್ ಮತ್ತು ಡೀಸೆಲ್ ಗೆ ಹೆಚ್ಚಿನ ಬೆಲೆಯನ್ನ ನೀಡಲು ಸಿದ್ಧರಾಗಬೇಕು ಎನ್ನುವುದು. ಒಮ್ಮೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಾದರೆ ಅದು ಸಿರೀಸ್ ಬೆಲೆ ಹೆಚ್ಚಳಕ್ಕೆ ನಾಂದಿ ಹಾಡುತ್ತದೆ. ಟ್ರಾನ್ಸ್ಪೋರ್ಟ್ ಬೆಲೆಗಳು ತಕ್ಷಣ ಹೆಚ್ಚಾಗುತ್ತದೆ. ಅದಕ್ಕೆ ಪೂರಕವಾಗಿ ತರಕಾರಿ, ಹಾಲು ಹಣ್ಣು ಎಲ್ಲವೂ ಹೆಚ್ಚಾಗುತ್ತದೆ. ಮೂಲಭೂತ ಖರ್ಚುಗಳಿಗೆ ಹೆಚ್ಚು ಹಣವನ್ನ ವ್ಯಯ ಮಾಡುವುದರಿಂದ ಜನ ಸಾಮಾನ್ಯರ ಕೈಯಲ್ಲಿ ಬೇರೆ ಖರ್ಚುಗಳಿಗೆ ಹಣ ಉಳಿಯುವುದಿಲ್ಲ. ಹೀಗಾಗಿ ಸಹಜವಾಗೇ ಮಾರುಕಟ್ಟೆ ಕುಸಿತವನ್ನ ಕಾಣುತ್ತದೆ.
ತೈಲ ಬೆಲೆ ಎರಡು ರೀತಿಯಲ್ಲಿ ಭಾರತದ ಮಾರುಕಟ್ಟೆಗೆ ಪೆಟ್ಟನ್ನ ನೀಡುತ್ತದೆ. ಪ್ರಥಮವಾಗಿ ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸುವುದರಿಂದ ಮತ್ತು ಹೆಚ್ಚಿನ ಹೂಡಿಕೆದಾರರನ್ನ ಸೆಳೆಯುವುದರಿಂದ ಸಹಜವಾಗೇ ಡಾಲರ್ ಮತ್ತಷ್ಟು ಬಲಿಷ್ಠವಾಗುತ್ತದೆ. ಅಂದರೆ ಇಂದು ಒಂದು ಡಾಲರ್ ಕೊಳ್ಳಲು ನಾವು 72/73 ರೂಪಾಯಿ ನೀಡುತ್ತಿದ್ದರೆ ನಾಳೆ 74/75 ನೀಡಬೇಕಾಗಬಹುದು. ಹೀಗಾಗಿ ಕುಸಿದ ರೂಪಾಯಿ ಹೆಚ್ಚಿದ ಡಾಲರ್ ತೈಲ ಬೆಲೆಯನ್ನ ಹೆಚ್ಚಿಸುತ್ತದೆ. ಏಕೆಂದರೆ ಇಂದಿಗೂ ತೈಲ ಖರೀದಿ ಹಣವನ್ನ ನೀಡುವುದು ಡಾಲರ್ ಮೂಲಕ ಎನ್ನವುದು ನಿಮಗೆ ತಿಳಿದಿರಲಿ. ಎರಡು, ಸಹಜವಾಗೇ ಹೆಚ್ಚಾದ ತೈಲ ಬೆಲೆಯ ಹೊರೆ ಕೂಡ ಹೊರಬೇಕಾಗುತ್ತದೆ. ಹೀಗಾಗಿ ಎರಡು ರೀತಿಯ ಹೆಚ್ಚಾಗುವ ಬೆಲೆಯನ್ನ ನಾವು ಸಹಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಭಾರತದಲ್ಲಿ ತೈಲದ ಮೇಲಿನ ತೆರಿಗೆ ಜಗತ್ತಿನಲ್ಲಿ ಹೆಚ್ಚು ಎನ್ನುವಷ್ಟಿದೆ, ನಮ್ಮ ಸಮಾಜ ಹೆಚ್ಚಾಗುವ ತೈಲ ಬೆಲೆಗೆ ಹೇಗೆ ವರ್ತಿಸುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ. ತೈಲ ಬೆಲೆ ಹೆಚ್ಚಳ ಇತರ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ, ತನ್ಮೂಲಕ ಸಮಾಜದಲ್ಲಿರುವ ಸ್ಥಿರತೆ ಕದಡಿಹೋಗುತ್ತದೆ ಎನ್ನುವುದನ್ನ ಸರಕಾರ ಗಮನಿಸಬೇಕಾಗಿದೆ. ಯೂರೋಪಿಯನ್ ಯೂನಿಯನ್ ನ ಕೇಂದ್ರಸ್ಥಾನ ಬ್ರುಸೆಲ್ಸ್ ವರದಿಗಳು ಹೇಳುವ ಪ್ರಕಾರ ತೈಲಬೆಲೆ ಇನ್ನೋಂದಿಪತ್ತು ಪ್ರತಿಶತ ಏರಿಕೆ ಕಂಡು 110 ಡಾಲರ್ ಬ್ಯಾರಲ್ ತಲುಪುವು ಸಾಧ್ಯತೆಗಳಿವೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡದಿದ್ದರೂ ಗೋಧಿ ಬೆಲೆ ಏರಿಕೆಯಾಗಲಿದೆ:
ನಿಮಗೆಲ್ಲ ತಿಳಿದಿರುವಂತೆ ರಷ್ಯಾ, ಉಕ್ರೇನ್ ದೇಶದ ಸರಹದ್ದಿನಲ್ಲಿ ತನ್ನ ಸೈನಿಕರ ಜಮಾವಣೆ ಮಾಡಿದೆ. ಭಾರತ ಸರಕಾರ ಉಕ್ರೇನ್ ದೇಶದಲ್ಲಿರುವ ತನ್ನೆಲ್ಲಾ ಪ್ರಜೆಗಳನ್ನ ಮರಳಿ ಭಾರತಕ್ಕೆ ಬರುವಂತೆ ಫರ್ಮಾನು ಹೊರಡಿಸಿದೆ. ರಷ್ಯಾ ಕೂಡ ಒಂದಷ್ಟು ಸೈನಿಕರನ್ನ ವಾಪಸ್ಸು ಕರೆಸಿಕೊಂಡು ನಮಗೆ ಯುದ್ಧ ಬೇಕಿಲ್ಲ, ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳೋಣ ಎನ್ನುವ ಮಾತನ್ನ ಆಡಿದೆ. ಉಕ್ರೇನ್, ರಷ್ಯಾ ಮತ್ತು ಯೂರೋಪಿಗೆ ಸೇತುವೆಯಿದ್ದಂತೆ. ಇವುಗಳ ಮಧ್ಯೆ ಯುದ್ಧವಾದರೆ ಗೋಧಿ ಬೆಲೆಯಲ್ಲಿ ಇನ್ನಷ್ಟು ವ್ಯತ್ಯಾಸ ಗಳಾಗಲಿವೆ. ಯೂರೋಪಿಯನ್ ಯೂನಿಯನ್ ನಲ್ಲಿ ಕೂಡ ಸಾಕಷ್ಟು ಗೋಧಿಯನ್ನ ಬೆಳೆಯುತ್ತಾರೆ. ಸಪ್ಲೈ ಚೈನ್ ನಲ್ಲಿ ಕುಸಿತವಾದರೆ ಬಹಳ ತೊಂದರೆಯಾಗುತ್ತದೆ. ಚೀನಾ, ಇಂಡಿಯಾ ಮತ್ತು ರಷ್ಯಾ ದೇಶಗಳು ಜಗತ್ತಿನ 41 ಪ್ರತಿಶತ ಗೋಧಿಯನ್ನ ಉತ್ಪಾದಿಸುತ್ತವೆ. ಹೀಗಾಗಿ ಗೋಧಿ ಭಾರತಕ್ಕೆ ಬಿಸಿ ತಟ್ಟಿಸದೆ ಇರಬಹುದು, ಆದರೆ ಜಾಗತಿಕವಾಗಿ ಇದರ ಬಿಸಿ ಖಂಡಿತ ತಟ್ಟುತ್ತದೆ. ಈಗಾಗಲೇ ಜಾಗತಿಕವಾಗಿ ಗೋಧಿಯ ಬೆಲೆ ಕೆಲವೇ ವರ್ಷದಲ್ಲಿ ಮೂರುಪಟ್ಟು ಹೆಚ್ಚಳವನ್ನ ಕಂಡಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಯುದ್ಧವಾಗುವುದು ಬಹಳ ಕಡಿಮೆ ಎನ್ನಬಹುದು. ಆದರೆ ಇಂದಿನ ದಿನದಲ್ಲಿ ಯಾವುದನ್ನ ಆಗುವುದಿಲ್ಲ ಎಂದುಕೊಳ್ಳುತ್ತೇವೆ ಅದು ಆಗುತ್ತದೆ. ಹೀಗಾಗಿ ಇದು ಆಗುವುದಿಲ್ಲ ಎಂದು ನಾವು ಯಾವುದನ್ನೂ ಖಚಿತವಾಗಿ ಹೇಳಲು ಬಾರದು. ಹಾಗೊಮ್ಮೆ ಯುದ್ಧವಾದರೆ, ಅಥವಾ ರಷ್ಯಾ ದೇಶ ಉಕ್ರೈನ್ ಮೇಲೆ ದಾಳಿಯೇನಾದರೂ ಮಾಡಿದರೆ ಅದು ಸದ್ದಿಲ್ಲದೇ ಜಾಗತಿಕ ಮಟ್ಟದಲ್ಲಿ ಹಣದುಬ್ಬರವನ್ನ ಹೆಚ್ಚು ಮಾಡುತ್ತದೆ. ಅಮೇರಿಕಾದಲ್ಲಿ ಇದರ ಪ್ರಭಾವ ಭಾರಿ ಹೆಚ್ಚಾಗುತ್ತದೆ. ರಷ್ಯಾ ಯುದ್ಧ ಸಾರುವುದು ಅಮೆರಿಕಾದ ಮಟ್ಟಿಗೆ ಒಳ್ಳೆಯದಲ್ಲ.
ಕೊನೆಮಾತು: ಭಾರತದಲ್ಲಿ ಇಂದು ಆಂತರಿಕ ಸಮಸ್ಯೆಗಳು ಬಹಳವಾಗಿದೆ. ಆಂತರಿಕ ಸಮಸ್ಯೆಯ ಹುಟ್ಟಿಗೆ ಹೊರಗಿನಿಂದ ಬಹಳಷ್ಟು ಶಕ್ತಿಗಳು ಪ್ರೇರಣೆ ನೀಡುತ್ತಿವೆ ಎನ್ನುವುದು ಕೂಡ ಸತ್ಯ. ಸದ್ಯದ ಪರಿಸ್ಥಿತಯಲ್ಲಿ ಭಾರತದಲ್ಲಿ ಹಣದುಬ್ಬರ ತಡೆದುಕೊಳ್ಳುವ ಶಕ್ತಿ ಜನತೆಗಿಲ್ಲ. ಯಾವುದೇ ಕಾರಣಕ್ಕೂ ಬೆಲೆಯಲ್ಲಿ ಹೆಚ್ಚಳವಾಗಬಾರದು. ಆದರೆ ಬೆಲೆಯ ಮೇಲಿನ ನಿಯಂತ್ರಣ ಇಂದು ಕೇವಲ ಭಾರತ ಸರಕಾರದ ಕೈಯಲ್ಲಿ ಕೂಡ ಇಲ್ಲ. ಮೇಲೆ ಹೇಳಿದ ಮೂರು ಕಾರಣಗಳು ಭಾರತದ ಹಿಡಿತದಲ್ಲಿಲ್ಲ. ಹೀಗಾಗಿ ಭಾರತ ಸರಕಾರದ ಮುಂದೆ ಸದ್ಯದಲ್ಲೇ ಅತ್ಯಂತ ಗುರುತರವಾದ ಸಮಸ್ಯೆ ಬಂದು ನಿಲ್ಲಲಿದೆ. ಪ್ಯಾಂಡೆಮಿಕ್ ನಿಂದ ಈಗಷ್ಟೆ ಹೊರಬರುತ್ತಿರುವ ಸಮಾಜ ಮತ್ತು ಸರಕಾರ ಎರಡೂ ಇಂತಹ ಪರಿಸ್ಥಿತಿಯನ್ನ ಹೇಗೆ ನಿಭಾಯಿಸುತ್ತವೆ ಎನ್ನುವುದು ಸಹಜವಾಗೇ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಸರಕಾರವನ್ನ ದ್ವಂದ್ವಕ್ಕೆ ಸಿಲುಕಿಸುವ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಸುವ ಅವುಗಳಲ್ಲಿ ಯಾವುದರಲ್ಲಿ ಸೋತರು ಅದನ್ನ ದೊಡ್ಡದಾಗಿ ಬಿಂಬಿಸುವ ಹುನ್ನಾರಗಳು ನಡೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಯಾವ ದೇಶದಲ್ಲಿ ಯಾರ ಸರಕಾರವಿದ್ದರೆ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರ ಹಾಕುವ ಪರಿಪಾಠ ಇಂದು ನಿನ್ನೆಯದಲ್ಲ , ಹೀಗಾಗಿ ಇದು ಅವರಿಗೆ ಮಾಮೂಲಿ ಆಟ. ಇವೆಲ್ಲ ಪ್ರಹಸನಗಳ ನಡುವೆ ಪೈಸೆ ಪೈಸೆಗೂ ತಲೆ ಬಿಸಿ ಮಾಡಿಕೊಳ್ಳುವ ಜನ ಸಾಮಾನ್ಯ ಪ್ರಜೆಯ ಗೋಳು ಕೂಡ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಾವುದಕ್ಕೂ ನೀವು ಮಾಡುವ ಖರ್ಚಿನ ಮೇಲೆ ನಿಗಾ ಇರಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com