ಕಲಂ ನಲ್ಲಿ ರಕ್ತದ ಹನಿ, ಪ್ರಮಾಣ ವಚನದಲ್ಲಿ ಆರ್ತ ನಾದ, ಸಮಾಧಿ ಸೌಧವನ್ನು ಮೆಟ್ಟಿ ವಿಧಾನಸೌಧ ಪ್ರವೇಶಿಸುವ ಪರಿಸ್ಥಿತಿ ಬಂದೀತು ಜಾಗ್ರತೆ!
(ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್)
ನಿಮ್ಮ ಸಾವು ಏನನ್ನು ಬದಲಾಯಿಸದು, ನಿಮ್ಮ ಮನೆಯವರಿಗೆ ಆಗುವ ನಷ್ಟವನ್ನು ಯಾರಿಂದಲೂ ಭರಿಸಲಾಗದು ಧರ್ಮ ಸಾವನ್ನು ಎಂದೂ ಬೇಡಿಲ್ಲ, ಸಾವು ಧರ್ಮವನ್ನು ಎಂದೂ ಪ್ರತಿಪಾದಿಸುವುದಿಲ್ಲ
Published: 23rd February 2022 10:19 AM | Last Updated: 23rd February 2022 11:36 PM | A+A A-

ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ
ಯಾವ ಶಾಪಕ್ಕೆ ಈ ಸಾವುಗಳು?, ಯಾವ ಶಿಕ್ಷೆಗೆ ಈ ಹಿಂಸೆ? ಯಾವ ಪುರುಷಾರ್ಥಕ್ಕೆ ಈ ಹೋರಾಟ. ಒಂದು ಕಡೆ "ಮುಸ್ಲಿಂ ಸಂಘಟನೆಯಿಂದ ಕೊಲೆ ಆಗಿದೆ" ಎಂದು, ಇನ್ನೊಂದು ಕಡೆ "ಹಿಂದೂ ಪ್ರಚೋದನೆಗೆ ತನ್ನವರಿಂದಲೆ ಬಲಿ ಆಗಿದೆ" ಎಂದು, ಯಾರಿಂದ ಏನಾಯಿತು?, ತಿಳಿದಿಲ್ಲ, ಆದರೆ ಹೋದದ್ದು ಮಾತ್ರ ಕುಟುಂಬದ ಭರವಸೆ, ತಾಯಿಗೆ ಮಗ, ಅಕ್ಕನಿಗೆ ಆಶ್ರಯ, ತಂದೆಗೆ ಜೀವನದ ನಂಬಿಕೆ.
ಪ್ಯಾಂಟ್ ಶರ್ಟ್ ಹೊಲೆದು ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಶವವಾಗಿ ಬಿದ್ದಿದ್ದಾನೆ. ಯಾವ ಸೂಜಿ ದಾರವು ಆತನ ಆತ್ಮವನ್ನು ಮತ್ತೆ ದೇಹದ ಜೊತೆ ಹೊಲೆಯಲು ಸಾಧ್ಯವಿಲ್ಲ. ಕಳೆದ 15 ದಿನದಿಂದ ಆರಂಭವಾದ ಹಿಜಾಬ್ ಕೂಗು ಕೊನೆಗೂ ಒಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡು ಬಿಟ್ಟಿತ್ತು.
ರಕ್ತದ ಓಕುಳಿ ಇಲ್ಲದೆ ಒಂದು ಚರ್ಚೆ ಅಂತ್ಯಗೊಳ್ಳಲು ಸಾಧ್ಯವೇ ಇಲ್ಲವೇ? ಯಾರು ಈ ಹರ್ಷ? ಆತನಿಗೂ ಮುಸ್ಲಿಮರಿಗೂ ಏನು ಸಂಬಂಧ? ಆತನಿಗೂ ಹಿಂದೂ ಸಂಘಟನೆಗೆ ಏನು ಸಂಬಂಧ?, ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಎಲ್ಲರೂ ಹೇಳುತ್ತಿರುವುದು ಒಂದೇ, "ಆತ ಒಂದು ದೊಡ್ಡ ಬದಲಾವಣೆಗೆ ಬಲಿಯಾದ" ಎಂದು. ಸರಿ ಇನ್ನು ಮುಂದಿನ ದಿನಗಳಲ್ಲಿ, ಜಾತಿ ವ್ಯವಸ್ಥೆ ಧರ್ಮ ವ್ಯವಸ್ಥೆ ಹಿಂದೂ ಮುಸ್ಲಿಂ ಸಾಮರಸ್ಯ ಎಲ್ಲವೂ ಆದೀತು ಎಂದೇ ತಿಳಿಯೋಣ ಆದರೆ ಅದಕ್ಕೆ ಬಲಿಯೆ ಆಗಬೇಕಿತ್ತೆ....?
ರಕ್ತದ ಓಕುಳಿಯಿಂದಲೇ ವ್ಯವಸ್ಥೆ ಪುನಶ್ಚೇತನಗೊಳ್ಳುವುದೇ...?
ಇರಲಿ ಹಾಗೆ ಎಂದು ಕೊಳ್ಳೋಣ. ಈ ಹಿಂದೆ ನಡೆದ ರಕ್ತದ ಓಕುಳಿಗಳು ವ್ಯವಸ್ಥೆಯನ್ನು ಅದೆಷ್ಟು ಪುನಶ್ಚೇತನಗೊಳಿಸಿದೆ ಎಂದು ಮೊದಲು ಅರ್ಥ ಮಾಡಿಕೊಳ್ಳೋಣ 90 ರ ದಶಕದಲ್ಲಿ ನಡೆದ ಚಿತ್ತರಂಜನ್ ಕೊಲೆ, ನಂತರ ನಡೆದ ಪ್ರಶಾಂತ್ ಪೂಜಾರಿ ಕೊಲೆ,
ನಂತರ ನಡೆದ ದೀಪಕ್ ಕೊಲೆ, ನಂತರ ನಡೆದ ಕುಟ್ಟಪ್ಪ ಕೊಲೆ, ಆನಂತರ ಪರೇಶ್ ಮೇಸ್ತ ಕೊಲೆ, ಅಲ್ಲ ಬರ್ಬರ ಹತ್ಯೆ ಬೆಂಗಳೂರಿನ ಮಧ್ಯಭಾಗದಲ್ಲಿ ನಡೆದ ರುದ್ರೇಶ್ ಕೊಲೆ, ಈ ಎಲ್ಲ ಸಾವುಗಳು ವ್ಯವಸ್ಥೆಯನ್ನು ಎಷ್ಟು ಪುನಶ್ಚೇತನಗೊಳಿಸಿತು ಎಂದು ವಿವರಿಸಲು ಹೇಳಿ ನಂತರ ರಕ್ತದ ಓಕುಳಿಯನ್ನ ಸಮರ್ಥಿಸಿಕೊಳ್ಳಲಿ.
ಯಾವ ಸದುದ್ದೇಶ ಸಾಕರವಾಯಿತು?, ಯಾವ ಸತ್ಕಾರ್ಯ ಸಾಧಿಸಿದ್ದು ಕಣ್ಣಿಗೆ ಬಿತ್ತು? ಹೋಗಲಿ ಹಿಂದೂ ಧರ್ಮ ಎಷ್ಟು ಪ್ರವಲವಾಯಿತು? ಇಲ್ಲವೇ ಮುಸ್ಲಿಂ ಧರ್ಮಕ್ಕೆ ಎಷ್ಟು ಪಾವಿತ್ರ್ಯತೆ ಹೆಚ್ಚಾಯಿತು?.
ಇಷ್ಟಕ್ಕೂ ಒಂದು ಪ್ರಶ್ನೆ, ಚಿತ್ತರಂಜನ್ ದಾಸ್ ಹತ್ಯೆಯ ನಂತರ ಅಲ್ಲಿ ಅರಳಿದ ಕಮಲ ಇಲ್ಲಿಯ ತನಕ ಅಲ್ಲಿನ ಕೆಸರನ್ನು ತೊಳೆದು ಹಾಕಲು ಯಾಕೆ ಪ್ರಯತ್ನಿಸಿಲ್ಲ?, ದಾಸ್ ರ ಹತ್ಯೆಯ ಹಿಂದಿನ ರಹಸ್ಯ ಯಾಕಿನ್ನೂ ಬಯಲಾಗಿಲ್ಲ 30 ವರ್ಷಗಳು ಕಳೆದವು, ಮಣ್ಣಲ್ಲಿ ಮಣ್ಣಾದ ದಾಸ್ ಜೊತೆ ಸುಳ್ಳಿನ ಕೋಟೆಯಲ್ಲಿ ಏಷ್ಟೋ ಜನ ದಾಸರಾದರೆ?. ಸಂಸದ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಬಳಿ ಇಲ್ಲಿಯ ತನಕವೂ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಮುಂದೆ ಸಿಗುವುದು ಎಂಬ ಆಶಯವೂ ಇಲ್ಲ.
ಇನ್ನು ರಕ್ತದ ಒಂದೊಂದು ಹನಿಗೂ ಉತ್ತರ ನೀಡುತ್ತೇವೆ ಎಂದಿದ್ದರು ದಿವಂಗತ ಕೇಂದ್ರ ಸಚಿವ ಮತ್ತು ಪ್ರಸ್ತುತ ಕೇಂದ್ರ ಸಚಿವೆ. ಒಬ್ಬರು ಅನಂತದಾಚೆ ಸಾಗಿದರು. ಮತ್ತೊಬ್ಬರು ಚಿಕ್ಕಮಗಳೂರು ತಮ್ಮ ಸಂಸದೀಯ ಕ್ಷೇತ್ರ ಎನ್ನುವುದನ್ನೇ ಮರೆತು ಬಿಟ್ಟಿದ್ದಾರೆ. ಇನ್ನು ಉದ್ವೇಗದಲ್ಲಿ ಆಡಿದ ಮಾತು ಶೋಭಾ ಕರಂದ್ಲಾಜೆ ಅವರಿಗೆ ಎಲ್ಲಿ ನೆನಪಿರಬೇಕು?
ಕುದಿಯುವ ಎಣ್ಣೆಗೆ ಹಾಕಿ ಸುಟ್ಟಿದ್ದು ಪರೇಶ್ ಮೇಸ್ತನನ್ನು ಅಲ್ಲ ನಮ್ಮ ಆತ್ಮಾಭಿಮಾನವನ್ನು ಸುಡಲಾಗಿದೆ ಎಂದವರು ಈಗ ಎಲ್ಲಿದ್ದಾರೆ....?
ಈ ಎಲ್ಲಾ ಸಾವುಗಳು ಯಾಕೆ ಇಲ್ಲಿ ತನಕ ಒಂದು ಸ್ಪಷ್ಟ ಕೊನೆಯನ್ನು ಕಾಣಲಿಲ್ಲ?, ದೇಶದ, ರಾಜ್ಯದ ತನಿಖಾ ಸಂಸ್ಥೆಗಳು ಇಲ್ಲಿ ತನಕ ಆರೋಪಿಗಳನ್ನು ಹುಡುಕಲು ಯಾಕೆ ಸಾಧ್ಯವಾಗಿಲ್ಲ?, ನಟೋರಿಯಸ್ ಕಿಲ್ಲರ್ಸ್ ನ್ನು ಹುಡುಕುವ ಚಾಕಚಕ್ಯತೆ ಹೊಂದಿರುವ ಆರಕ್ಷಕರು ಒಂದು ಕೋಮು ಗಲಭೆ ಅಪರಾಧಿಗಳನ್ನು ಹುಡುಕಲು ಆಗಲಿಲ್ಲ ಎಂದರೆ ಇದು ನಂಬುವ ವಿಚಾರವೇ?
ಇದು ಹಿಂದೂ ಯುವಕರ ಹತ್ಯೆಯ ಕಥೆಯಾದರೆ ಇನ್ನೂ ಮುಸ್ಲಿಂ ಯುವಕರ ಪಟ್ಟಿಯೂ ಕಡಿಮೆ ಏನಿಲ್ಲ. ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ಆರೋಪಿಸಿ ಅಧಿಕಾರದಲ್ಲಿ ಇದ್ದಾಗ ಜಾರಿಕೊಳ್ಳುತ್ತಾರೆ ಬಿಟ್ಟರೆ, ಒಬ್ಬರಾದರೂ ಸಾವಿಗೆ ಕಾನೂನಾತ್ಮಕವಾಗಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆಯೇ?
ಇವತ್ತು ಟ್ವಿಟರ್ ನಲ್ಲಿ ಪುಂಖಾನುಪುಂಖವಾಗಿ ಕೊಲೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಅಧಿಕಾರಾವಧಿಯಲ್ಲಿ ಸೈದ್ಧಾಂತಿಕ ಕಾರಣಗಳಿಗಾಗಿ ನಡೆದ ಹತ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆಯೇ? 2016-2018ರ ಮಧ್ಯೆ 10 ಕೊಲೆಗಳು ಆದವು. ಆಗ ಸಿದ್ದರಾಮಯ್ಯ ಸರ್ಕಾರ ಏನೂ ಮಾಡಲಿಲ್ಲ. ಅಂದಿನ ಕಾನೂನು ಸುವ್ಯವಸ್ಥೆ, ಇವರ ಕೈಲಿಯೇ ಇತ್ತು. ಯಾವ ತನಿಖೆಯೂ ಹೊರಬರಲಿಲ್ಲ. ಯಾವ ಆಪರಾಧಿಯೂ ಒಳಸೇರಲಿಲ್ಲ. ಪರೇಶ್ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಲೀಮ್ ಜಾಮೀನು ಪಡೆದು ಈಗ ರಾಜಾರೋಷವಾಗಿ ಹೊರಗೆ ಅಡ್ಡಾಡುತ್ತಿದ್ದಾನೆ. ಹೀಗೆ ಆರೋಪಿ-ಅಪರಾಧಿಗಳ ಪಟ್ಟಿ ಮಾಡುತ್ತಾ ಹೋದರೆ ಕೋಮುಗಲಭೆಯಲ್ಲಿ ತಡಗಿಸಿಕೊಂಡಿದ್ದ ಆರೋಪ ಹೊತ್ತಿರುವವರ ಪೈಕಿ ಶೇ.1 ರಷ್ಟು ಆರೋಪಿಗಳಿಗೂ ಶಿಕ್ಷೆ ಆಗಿಲ್ಲ! ಇನ್ನು ಹಿಂದೂ ಸಿದ್ದರಾಮಯ್ಯ ಅವರದ್ದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನೇ ಚುನಾವಣೆಯ ವಿಷಯ ಮಾಡಿಕೊಂಡು, ಮೈತ್ರಿ ಸರ್ಕಾರವನ್ನು ಉರುಳಿಸಿ, ಕಳೆದ 3 ವರ್ಷದಿಂದ ಇರುವ ಬಿಜೆಪಿ ಸರ್ಕಾರ ಆ ಕೊಲೆಗಳ ತನಿಖೆ ಇರಲಿ ಅದರ ಬಗ್ಗೆ ಪ್ರಸ್ತಾಪವೂ ಮಾಡಲಿಲ್ಲ. ಇನ್ನು ಗಲಭೆ ಎಂದ ತಕ್ಷಣ 24 ಗಂಟೆಯೂ ಎಡಬಿಡದೆ ತೋರಿಸುವ ಪ್ರಮುಖ ಮಾಧ್ಯಮಗಳು ಟಿಆರ್ಪಿ ಬಂದ ನಂತರ ಇದರ ಬಗ್ಗೆ ಪ್ರಶ್ನಿಸುವರೇ...? ಮೂರು ತಿಂಗಳಾದ ಬಳಿಕ ಯಾರಿಗೂ ಬೇಡವಾದ ನಿಮ್ಮ ಸಾವು, ಕೇವಲ ಅಸ್ತಿಯಾಗಿ ನಿಮ್ಮ ಮನೆಯಲ್ಲಿ ಉಳಿವುದು.
ಇನ್ನಾದರೂ ಇಂತಹ ಬಲೆಗೆ ಬೀಳದಿರಿ... ನಿಮ್ಮ ಸಾವು ಏನನ್ನು ಬದಲಾಯಿಸದು, ನಿಮ್ಮ ಮನೆಯವರಿಗೆ ಆಗುವ ನಷ್ಟವನ್ನು ಯಾರಿಂದಲೂ ಭರಿಸಲಾಗದು ಧರ್ಮ ಸಾವನ್ನು ಎಂದೂ ಬೇಡಿಲ್ಲ, ಸಾವು ಧರ್ಮವನ್ನು ಎಂದೂ ಪ್ರತಿಪಾದಿಸುವುದಿಲ್ಲ
ಸ್ವಾತಿ ಚಂದ್ರಶೇಖರ್
swathichandrashekar92@gmail.com