
ಭಾರತ-ಲಂಕಾ
ಒಂದು ದೇಶದ ಆರ್ಥಿಕತೆ ಎಂದರೆ ಅಲ್ಲಿ ಬಹಳಷ್ಟು ವಿಷಯಗಳು ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಆಯಾ ದೇಶದ ಆರ್ಥಿಕತೆ ಚೆನ್ನಾಗಿದೆ ಅಥವಾ ಉತ್ತಮವಾಗಿದೆ ಎನ್ನಬೇಕಾದರೆ ಕನಿಷ್ಟ ಎರಡು ಪ್ರಮುಖ ವಲಯಗಳು ಭದ್ರವಾಗಿರಬೇಕು. ಪ್ರಥಮವಾಗಿ ದೇಶಿಯ ಮಾರುಕಟ್ಟೆ ಅಂದರೆ ಡೊಮೆಸ್ಟಿಕ್ ಮಾರ್ಕೆಟ್ ಭದ್ರವಾಗಿರಬೇಕು. ದ್ವಿತೀಯವಾಗಿ ವಿದೇಶಿ ಮಾರುಕಟ್ಟೆಯಲ್ಲಿ ದೇಶದ ಬಗ್ಗೆ ಉತ್ತಮ ಅಭಿಪ್ರಾಯ ಇರಬೇಕು. ಹೀಗೆಂದರೇನು ಎನ್ನುವುದನ್ನ ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ .
1. ಡೊಮೆಸ್ಟಿಕ್ ಮಾರ್ಕೆಟ್ ಭದ್ರವಾಗಿರಬೇಕು: ಯಾವುದೇ ದೇಶದ ಕರೆನ್ಸಿ ಗೆ ಎರಡು ರೀತಿಯ ಶಕ್ತಿ ಇರುತ್ತದೆ. ಮೊದಲನೆಯದಾಗಿ ಸ್ಥಳೀಯ ಅಥವಾ ದೇಶಿಯ ಮಾರುಕಟ್ಟೆಯಲ್ಲಿ ಖರೀದಿ ಶಕ್ತಿ ಎರಡು ಅದೇ ಹಣ ವಿದೇಶದ ವಸ್ತುವನ್ನ ಕೊಳ್ಳಬೇಕಾದ ಇರುವ ಖರೀದಿ ಶಕ್ತಿ. ಉದಾಹರಣೆ ನೋಡೋಣ ನಮ್ಮ ದೇಶದ ಹಣದ ಮೌಲ್ಯ ವಿದೇಶಿ ಹಣದ ಮುಂದೆ ಎಷ್ಟೇ ಇರಲಿ, ನಮ್ಮ ಹಣ ಇಲ್ಲಿ ಏನನ್ನ ನಮಗೆ ಖರೀದಿ ಮಾಡಿ ಕೊಡಬಹುದು ಎನ್ನುವುದು ಬಹಳ ಮುಖ್ಯವಾಗುತ್ತದೆ. ಡೊಮೆಸ್ಟಿಕ್ ಪೆರ್ಚಸಿಂಗ್ ಪವರ್ ಗಟ್ಟಿಯಾಗಿದ್ದಷ್ಟೂ ಆ ದೇಶವನ್ನ ಹೆಚ್ಚು ದಿನಗಳ ಕಾಲ ಸರಾಗವಾಗಿ ನಡೆಸಬಹುದು. ಉದಾಹರಣೆಗೆ ಭಾರತದ 75 ರೂಪಾಯಿ ನೀಡಿದರೆ ಅಮೆರಿಕಾದ ಒಂದು ಡಾಲರ್ ದೊರೆಯುತ್ತದೆ. ಒಂದು ಡಾಲರ್ ಹಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾಫಿ ಕೊಳ್ಳುವುದು ಕಷ್ಟ. ಆದರೆ ಭಾರತದ ಬಹತೇಕ ಸ್ಥಳದಲ್ಲಿ 75 ರೂಪಾಯಿಯಲ್ಲಿ ಒಂದು ಹೊತ್ತಿನ ಆಹಾರವನ್ನ ಖಂಡಿತ ಖರೀದಿಸಬಹುದು. ಹೀಗಾಗಿ ಎಲ್ಲಿಯವರೆಗೆ ಡೊಮೆಸ್ಟಿಕ್ ಮಾರ್ಕೆಟ್ ಖರೀದಿ ಶಕ್ತಿ ಇರುತ್ತದೆ ಅಲ್ಲಿಯವರೆಗೆ ದೇಶದ ಆರ್ಥಿಕತೆ ಕೂಡ ತಕ್ಕ ಮಟ್ಟಿಗೆ ಭದ್ರ ಎಂದು ಹೇಳಬಹುದು. ನಾಗರೀಕರು ಯಾವಾಗ ತಮ್ಮ ದೇಶದ ಹಣದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ, ಆಗ ದೇಶಿಯ ಖರೀದಿ ಶಕ್ತಿ ಕೂಡ ಕುಗುತ್ತಾ ಹೋಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ವೆನಿಜುಯೆಲಾ. ಈ ದೇಶದಲ್ಲಿ ಹಣದ ಮೌಲ್ಯ ಎರಡೂ ಕಡೆ ಅಂದರೆ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸಿತ ಕಂಡಿದೆ.
2. ವಿದೇಶಿ ಮಾರುಕಟ್ಟೆಯಲ್ಲಿ ದೇಶದ ಬಗ್ಗೆ ಉತ್ತಮ ಅಭಿಪ್ರಾಯ ಇರಬೇಕು: ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶದ ಬಗ್ಗೆ ಉತ್ತಮ ಅಭಿಪ್ರಾಯ ಎಂದರೆ ಆ ದೇಶ ಆರ್ಥಿಕವಾಗಿ ಸಬಲವಾಗಿರಬೇಕು ಎಂದರ್ಥ. ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಬಲವಾಗಿರುವುದು ಎಂದರೆ ಹೆಚ್ಚು ಫಾರಿನ್ ಎಕ್ಸ್ಚೇಂಜ್ ರಿಸರ್ವ್ ನಲ್ಲಿ ಹಣ ಹೊಂದಿರುವುದು. ಅಂದರೆ ಗಮನಿಸಿ ದೇಶದ ಹಣ ಮತ್ತು ಆಸ್ತಿಗಳಲ್ಲಿ ಒಂದಷ್ಟು ಪಾಲು ವಿದೇಶಿ ಹಣದ ರೂಪದಲ್ಲಿ ಇಟ್ಟುಕೊಂಡಿರುವುದನ್ನ ಫಾರಿನ್ ರಿಸರ್ವ್ ಎಂದು ಸರಳವಾಗಿ ಹೇಳಬಹುದು. ಹೀಗೆ ಇಟ್ಟುಕೊಂಡ ಹಣ ಇತರ ದೇಶಗಳಿಗೆ ಒಂದು ರೀತಿಯ ನಂಬಿಕೆಯ ಭಾವವನ್ನ ನೀಡುತ್ತದೆ. ವ್ಯಾಪಾರ ಮಾಡುವ ಸಂದರ್ಭದಲ್ಲಿ ಇಂತಹ ಹಣದ ಮೊತ್ತ ಆ ದೇಶದೊಂದಿಗೆ ವ್ಯವಹರಿಸಬೇಕೇ ಅಥವಾ ಬೇಡವೇ ಎನ್ನುವುದನ್ನ ನಿರ್ಧಾರ ಮಾಡುವ ವಿಷಯವಾಗಿರುತ್ತದೆ. ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶ ಸಹಜವಾಗೇ ಈ ಜಗತ್ತಿನ ಹಿರಿಯಣ್ಣ ಎನ್ನಿಸಿಕೊಳ್ಳುತ್ತದೆ.
ಮೊದಲೇ ಹೇಳಿದಂತೆ ಎರಡೂ ಅರ್ಥದಲ್ಲಿ ಪ್ರಬಲವಾಗಿದ್ದಾಗ ಮಾತ್ರ ದೇಶದ ಆರ್ಥಿಕತೆ ಭದ್ರವಾಗಿದೆ ಎನ್ನಬಹುದು. ಇಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ನಾವೆಲ್ಲಾ ಗಮನಿಸಬೇಕು. ವಿದೇಶಿ ವಿನಿಮಯದಲ್ಲಿ ಕುಸಿತವಾದರೆ ಆಗ ಅದು ನಿಧಾನವಾಗಿ ದೇಶಿಯ ಮಾರುಕಟ್ಟೆಯ ಶಕ್ತಿಯನ್ನ ಕೂಡ ಕಸಿಯುತ್ತದೆ. ವಿದೇಶಿ ವಿನಿಮಯ ಕುಸಿತ ತಕ್ಷಣ ದೇಶದ ಮೇಲೆ ಪರಿಣಾಮ ಬೀರುತ್ತದೆ. ಪರಿಸ್ಥಿತಿ ಹೀಗಿದ್ದೂ ಡೊಮೆಸ್ಟಿಕ್ ಆರ್ಥಿಕತೆ ತಕ್ಷಣ ಕುಸಿತ ಕಾಣುವುದಿಲ್ಲ. ಆದರೆ ಅದು ಕುಸಿತ ಕಾಣಲು ಬಹಳ ಸಮಯ ಹಿಡಿಯುವುದಿಲ್ಲ. ಗಮನಿಸಿ ವಿದೇಶಿ ವಿನಿಮಯ ಇಲ್ಲ ಎಂದಾಗ ದೇಶಕ್ಕೆ ಬೇಕಾಗುವ ಅವಶ್ಯಕ ಆಹಾರ ಪದಾರ್ಥ, ಔಷಧ ಇತ್ಯಾದಿಗಳನ್ನ ಕೊಳ್ಳಲು ಸಾಧ್ಯವಾಗುವುದಿಲ್ಲ. ಬೇರೆ ದೇಶದಿಂದ ಬೇಕಾಗುವ ಯಾವುದೇ ಪದಾರ್ಥಗಳನ್ನ ಕೊಳ್ಳಲು ಸಾಧ್ಯವಿಲ್ಲ ಎಂದಾಗ ಸಹಜವಾಗೇ ಸ್ಥಳೀಯ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಆಕಾಶಕ್ಕೆ ಏರಲು ಶುರು ಮಾಡುತ್ತವೆ. ಹದಿನೈದರಿಂದ ಇಪ್ಪತ್ತು ತಿಂಗಳಲ್ಲಿ ದೇಶ ದಿವಾಳಿ ಸ್ಥಿತಿಗೆ ಬಂದು ಕೂರುತ್ತದೆ. ಹೀಗಾಗಿ ಎರಡೂ ಆರ್ಥಿಕತೆ ಭದ್ರವಾಗಿರಬೇಕು.
ಇಷ್ಟೆಲ್ಲಾ ವಿಷಯ ಇಲ್ಲಿ ಪ್ರಸ್ತಾಪಿಸಲು ಕಾರಣ ಪಕ್ಕದ ರಾಷ್ಟ್ರ್ರ ಶ್ರೀಲಂಕಾ ವಿದೇಶಿ ವಿನಿಮಯ ಪೂರ್ತಿ ಖಾಲಿ ಮಾಡಿಕೊಂಡು ಕುಳಿತಿದೆ. ಅತ್ಯವಶ್ಯಕವಾಗಿ ಬೇಕಾಗುವ ವಸ್ತುಗಳನ್ನ ತರಿಸಿಕೊಳ್ಳಲು ಕೂಡ ಅದರ ಬಳಿ ಹಣವಿಲ್ಲ. ಅಂತಾರಾಷ್ಟ್ರೀಯ ವಲಯದಲ್ಲಿ ಶ್ರೀಲಂಕಾ ದೇಶವನ್ನ ಬ್ಯಾಂಕ್ ಕ್ರಪ್ಟ್ ಎಂದು ಘೋಷಿಸುವಂತೆ ಒತ್ತಾಯಗಳು ಶುರುವಾಗಿದೆ. ಆದರೆ ಮೇಲೆ ಹೇಳಿದ ಸಾಲುಗಳನ್ನ ಸರಿಯಾಗಿ ಮತ್ತೊಮ್ಮೆ ಓದಿ. ಶ್ರೀಲಂಕಾ ಕುಸಿತ ಕಂಡಿರುವುದು ನಿಜ ಆದರೆ ಅದರ ಡೊಮೆಸ್ಟಿಕ್ ಮಾರುಕಟ್ಟೆ ಇನ್ನೂ ಕುಸಿತ ಕಂಡಿಲ್ಲ. ಶ್ರೀಲಂಕಾ ಪೂರ್ಣ ಪ್ರಮಾಣದ ದಿವಾಳಿ ಎಂದು ಘೋಷಿಸ ಬೇಕಾದರೆ ಅದರ ದೇಶಿಯ ಮಾರುಕಟ್ಟೆ ಕೂಡ ಕುಸಿತ ಕಾಣಬೇಕು. ಅದಕ್ಕೆ ಇನ್ನೂ ಒಂದೂವರೆ ವರ್ಷ ಖಂಡಿತ ವೇಳೆಯಿದೆ. ಇಷ್ಟರಲ್ಲಿ ಶ್ರೀಲಂಕಾ ಸರಕಾರಕ್ಕೆ, ದೇಶಕ್ಕೆ ಸಹಾಯ ಬೇಕು. ನಿಮಗೆಲ್ಲಾ ಗೊತ್ತಿರಲಿ ಶ್ರೀಲಂಕಾದ ಇಂದಿನ ಸ್ಥಿತಿಗೆ ಹಲವಾರು ಕಾರಣಗಳಲಿವೆ.
ಅವುಗಳಲ್ಲಿ ಪ್ರಮುಖವಾಗಿ:
1. ಚೀನಾದ ಸಾಲದ ಖೆಡ್ಡಾಗೆ ಬಿದ್ದದ್ದು: ಚೀನಾ ಅತ್ಯಂತ ಕಡಿಮೆ ಬಡ್ಡಿಗೆ ಎಂದು ಬಹಳಷ್ಟು ಹಣವನ್ನ ನಿರ್ದಿಷ್ಟ ಅವಧಿಗೆ ಸಾಲದ ರೂಪದಲ್ಲಿ ಶ್ರೀಲಂಕಾ ಸರಕಾರಕ್ಕೆ ನೀಡಿತ್ತು. ಅಲ್ಲಿನ ಬಹುತೇಕ ಹಣವನ್ನ ಉತ್ತಮ ಮೂಲಭೂತ ಸೌಕರ್ಯ ಬಳಸಲು ಖರ್ಚು ಮಾಡಿದ್ದಾರೆ. ಶ್ರೀಲಂಕಾ ಖಂಡಿತ ಬಹಳ ಸುಂದರವಾಗಿ ಅಚ್ಚುಕಟ್ಟಾದ ದೇಶವಾಗಿ ರೂಪುಗೊಂಡಿದೆ, ಆದರೆ ಈಗ ಹಣವನ್ನ ಹಿಂದಿರುಗಿಸುವ ಸಮಯ. ಶ್ರೀಲಂಕಾ ದೇಶದ ಬಳಿ ಅಷ್ಟೊಂದು ಹಣ ಉತ್ಪತ್ತಿಯಾಗುತ್ತಿಲ್ಲ. ಹೀಗೆ ಮುಂದೆ ಗಳಿಸಬಹುದಾದ ಸಂಭಾವ್ಯ ಹಣವನ್ನ ಸಾಲದಲ್ಲಿ ಪಡೆದು ಖರ್ಚು ಮಾಡಿದುದರ ಪಲವನ್ನ ಇಂದು ಶ್ರೀಲಂಕಾ ಅನುಭವಿಸುತ್ತಿದೆ.
2. ಕೋವಿಡ್ ತಂದಿಟ್ಟ ಸಂಕಷ್ಟ: ಶ್ರೀಲಂಕಾ ಮಾತ್ರವಲ್ಲದೆ ಬಹಳಷ್ಟು ಸಣ್ಣ ಪುಟ್ಟ ದೇಶಗಳ ಆರ್ಥಿಕತೆಗೆ ಕೋವಿಡ್ ಭಾರಿ ಹೊಡೆತವನ್ನ ನೀಡಿದೆ. ಶ್ರೀಲಂಕಾ ದೇಶ ಉತ್ತಮ ಮೂಲಭೂತ ಸೌಕರ್ಯವನ್ನ ಸೃಷ್ಟಿಸಿಕೊಂಡು ಜಾಗತಿಕ ಟೂರಿಸಂಗೆ ತೆರೆದುಕೊಂಡಿತ್ತು. ಮೂರ್ನಾಲ್ಕು ವರ್ಷ ಬಹಳಷ್ಟು ಇದರಿಂದ ಉತ್ತಮ ಫಲಿತಾಂಶ ಕೂಡ ಸಿಕ್ಕಿತ್ತು. ಆದರೆ 2020ರ ಆರಂಭದಲ್ಲಿ ಶುರುವಾದ ಕೋವಿಡ್ ಇಡೀ ಜಗತ್ತನ್ನ ಮಕಾಡೆ ಮಲಗಿಸಿತು. ಟೂರಿಸಂ ಇಲ್ಲದೆ, ಇತರೆ ವಸ್ತುಗಳ ಮೇಲಿನ ಬೇಡಿಕೆ ಕುಸಿತದಿಂದ ಶ್ರೀಲಂಕಾ ಮಾರುಕಟ್ಟೆ ಇನ್ನಿಲ್ಲದ ಕುಸಿತ ಕಂಡಿತು. ಚೀನಾಗೆ ಸಾಲದ ಮೇಲಿನ ಬಡ್ಡಿ ಮೊತ್ತವೇ ಬಹಳಷ್ಟಿತ್ತು. ಇವೆಲ್ಲ ನೀಡಿ ಸರಕಾರದ ಬಳಿ ಹಣ ಉಳಿಯುತ್ತಿರಲಿಲ್ಲ. ಹೀಗಾಗಿ ಇದ್ದ ರಿಸರ್ವ್ ಕರಗಿ ಹೋಗಲು ಬಹಳ ಸಮಯ ಹಿಡಿಯಲಿಲ್ಲ.
3. ಮಾಡರ್ನ್ ಮನಿ ಥಿಯರಿ: ಜಗತ್ತಿನ ಯಾವುದೇ ದೇಶದ ಸರಕಾರಕ್ಕೆ ಬೇಕಾದಷ್ಟು ಹಣವನ್ನ ಮುದ್ರಿಸುವ ಅಧಿಕಾರ ಇದೆ. ಅಂದಮಾತ್ರಕ್ಕೆ ಬೇಕಾಬಿಟ್ಟಿ ಹಣ ಮುದ್ರಿಸಿ ಎನ್ನುವುದು ಈ ಥಿಯರಿ ವಾದವಲ್ಲ. ಬದಲಿಗೆ ಫೀಸ್ಕಲ್ ಡಿಫೀಸಿಟ್ ಎಷ್ಟಿದೆ ಅಷ್ಟನ್ನ ಮುದ್ರಿಸಿದರೆ ತಪ್ಪಿಲ್ಲ ಎನ್ನುತ್ತದೆ ಈ ವಾದ. ಅಂದರೆ ಸರಳವಾಗಿ ಹೇಳಬೇಕೆಂದರೆ ಯಾವುದೇ ಸರಕಾರ ದಿವಾಳಿ ಆಗಲು ಸಾಧ್ಯವೇ ಇಲ್ಲ ಎನ್ನುವುದು. ಸದಾ ಕಾಲಕ್ಕೂ ಅದು ಕೆಲಸ ಮಾಡಿಸಿಕೊಂಡವರಿಗೆ ಹಣವನ್ನ ಕೊಡುವ ಶಕ್ತಿ ಹೊಂದಿರುತ್ತದೆ ಎನ್ನುವುದು ಈ ವಾದದ ತಿರುಳು. ಬನ್ನಿ ಇದನ್ನ ಇನ್ನಷ್ಟು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ.
ಶ್ರೀಲಂಕಾ ಸರಕಾರಕ್ಕೆ ಎಲ್ಲಾ ಮೂಲಗಳಿಂದ ಬಂದ ಆದಾಯ ನೂರು ರೂಪಾಯಿ ಎಂದುಕೊಳ್ಳಿ. ಖರ್ಚು ನೂರಾಹತ್ತು ರೂಪಾಯಿ ಎಂದುಕೊಂಡರೆ, ಆದಾಯಕ್ಕಿಂತ ಹೆಚ್ಚಿದ ಹತ್ತು ರೂಪಾಯಿ ಖರ್ಚನ್ನ ಆ ವರ್ಷದ ಫೀಸ್ಕಲ್ ಡೆಫಿಸಿಟ್ ಎಂದು ಕರೆಯಲಾಗುತ್ತದೆ. ಆದಾಯಕ್ಕಿಂತ ಹೆಚ್ಚಿದ ಖರ್ಚನ್ನ ಸರಿದೂಗಿಸಲು ಸರಕಾರ ಕೆಲವೊಮ್ಮೆ ಕೆಲವೊಂದು ವಿಷಯಗಳಿಗೆ ಮೀಸಲಿಟ್ಟ ಹಣವನ್ನ ಕಡಿತ ಮಾಡುತ್ತದೆ. ಉದಾಹರಣೆಗೆ ಶಿಕ್ಷಣ ಕ್ಷೇತ್ರದ ಅನುದಾನ ಅಥವಾ ವೈದ್ಯಕೀಯ ಕ್ಷೇತ್ರದ ಅನುದಾನ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಕಡಿತ ಹೀಗೆ ಯಾವುದೋ ವಿಷಯದಲ್ಲಿ ಖರ್ಚನ್ನ ಕಡಿಮೆ ಮಾಡಿ ಬಜೆಟ್ ಹೊಂದಿಸಲು ಪ್ರಯತ್ನ ಪಡುತ್ತದೆ. ಇದು ಇಂದಿನ ಯೂರೋಪಿನ ದೇಶಗಳಲ್ಲಿ ಅತಿ ಹೆಚ್ಚು. MMT (ಮಾಡರ್ನ್ ಮನಿ ಥಿಯರಿ) ಹೇಳುವುದು ಇಷ್ಟೇ ಫಿಸ್ಕಲ್ ಡೆಫಿಸಿಟ್ ಎಷ್ಟಿದೆ ಅದಕ್ಕೆ ಹೊಂದುವಷ್ಟು ಹಣವನ್ನ ಆಯಾ ಸರಕಾರ ಮುದ್ರಿಸಿದರೆ ತಪ್ಪಿಲ್ಲ ಎನ್ನುವುದು . ಈ ವಾದಕ್ಕೆ ಅದು ಕೊಡುವ ಕಾರಣ ಕೂಡ ಬಹಳ ಸರಳ ಈ ಹಣವನ್ನ ಸೃಷ್ಟಿಸಿದವರು ನಾವು ಅದಕ್ಕೆ ಇಂದಿಗೆ ಯಾವುದೇ ನಿರ್ಧಾರಿತ ಮಾಪನ ವ್ಯವಸ್ಥೆ ಇಲ್ಲ (ಗೋಲ್ಡ್ ಬ್ಯಾಕ್ ಅಪ್ ) ವಸ್ತಿ ಸ್ಥಿತಿ ಹೀಗಿರುವಾಗ ,ಸರಕಾರದ ಬಳಿ ಹಣವಿಲ್ಲ ಹೀಗಾಗಿ ಈ ವರ್ಷ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ ಅಂತಲೂ ಅಥವಾ ಶಿಕ್ಷಣಕ್ಕೆ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಸಾವಿರಾರು ಯುವಜನರ ಭವಿಷ್ಯದ ಜೊತೆ ಆಟ ಆಡುವುದು ಎಷ್ಟು ಸರಿ ? ಯಾವುದು ಪ್ರಾಮುಖ್ಯವೋ ಆ ಕೆಲಸಗಳು ಹಣವಿಲ್ಲ ಎನ್ನುವ ಕಾರಣಕ್ಕೆ ನಿಲ್ಲಬಾರದು ಎನ್ನುವುದು MMT . ಈ ಥಿಯರಿ ಪ್ರಕಾರ ಸರಕಾರ ಅಕ್ಷಯ ಪಾತ್ರೆ ಇದ್ದಹಾಗೆ. ಅದು ತನ್ನ ನಾಗರೀಕರ ಒಳಿತನ್ನ ಪೂರ್ಣಗೊಳಿಸುತ್ತಲೇ ಇರಬೇಕು .
ಹೀಗೆ ಹಣವನ್ನ ಮುದ್ರಿಸುವುದರಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಆದರೆ ಎಂ ಎಂ ಟಿ ಪ್ರತಿಪಾದಕರು ಹಾಗೇನೂ ಆಗುವುದಿಲ್ಲ ಎನ್ನುತ್ತಾರೆ. ಇದೀಗ ಶ್ರೀಲಂಕಾ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಎಂ ಎಂ ಟಿ ಸದ್ಯದ ಮಟ್ಟಿಗೆ ಕಾರ್ಯಸಾಧುವಲ್ಲ ಎನ್ನುವುದು ಸಾಬೀತಾಗಿದೆ. ಶ್ರೀಲಂಕಾ ಸರಕಾರ ಬಹಿರಂಗವಾಗಿ ಈ ವ್ಯವಸ್ಥೆಯನ್ನ ಪಾಲಿಸಿರುವುದಾಗಿ ಒಪ್ಪಿಕೊಂಡಿಲ್ಲ , ಆದರೆ ಸರಕಾರ ಸಲಹಾ ಮಂಡಳಿಯಲ್ಲಿ ಇದ್ದವರೆಲ್ಲಾ ಈ ವಾದದ ಪ್ರತಿಪಾದಕರು ಎನ್ನುವುದು ಗೊತ್ತಿರುವ ಸತ್ಯ.
ಕೊನೆಮಾತು: ಪುಟಾಣಿ ದೇಶಗಳ ಆರ್ಥಿಕತೆಯನ್ನ ಹಳ್ಳ ಹಿಡಿಸುವುದು ಬಹಳ ಸುಲಭದ ಕೆಲಸ. ಚೀನಾ ಅದನ್ನ ಶ್ರದ್ದೆಯಿಂದ ಮಾಡಿಕೊಂಡು ಬರುತ್ತಿದೆ. ಆದರೆ ಭಾರತ ಮಾತ್ರ ತನ್ನ ಕೈಲಾದ ಸಹಾಯವನ್ನ ಮಾಡುತ್ತಾ ಬಂದಿದೆ. 23/02/2022 ರಂದು ಭಾರತದ ವಿದೇಶ ಮಂತ್ರಿ ಜೈಶಂಕರ್ ಅವರು ಭಾರತ ಶ್ರೀಲಂಕಾ ದೇಶದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿಕೆಯನ್ನ ನೀಡಿದ್ದಾರೆ. ಶ್ರೀಲಂಕಾ ತನ್ನ ದೇಶದಿಂದ ಹೊರಡುವ ಶಿಪ್ಗಳಿಗೆ ತೈಲ ತುಂಬಿಸಲು ಕೂಡ ಹಣವಿಲ್ಲದ ಸ್ಥಿತಿಯಲ್ಲಿದೆ. ಶ್ರೀಲಂಕಾ ದೇಶದ ಇಂತಹ ಹಣಕಾಸು ಬಿಕ್ಕಟ್ಟನ್ನ ಸರಿಪಡಿಸುವುದಾಗಿ ಜೈಶಂಕರ್ ಹೇಳಿದ್ದಾರೆ. ಚೀನಾದಿಂದ ದೂರವಾಗುವ ಶ್ರೀಲಂಕಾಕ್ಕೆ ಭಾರತದ ಆಸರೆ ಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇದು ಇನ್ನೊಂದು ಹೊಸ ತಿರುವಿಗೆ ದಾರಿ ಕೂಡ ಆಗಬಹುದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com