ಬೆಲ್ಸ್ ಪಾಲ್ಸಿ- ಮುಖದ ಪಾರ್ಶ್ವವಾಯು (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿ
ಇತ್ತೀಚಿನ ದಿನಗಳಲ್ಲಿ ಜನರ ಆಹಾರ, ವಿಹಾರ ಮತ್ತು ಆಚಾರಗಳು ತೀವ್ರವಾಗಿ ಬದಲಾವಣೆಗಳು ಆಗಿರುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಅವುಗಳಲ್ಲಿ ಒಂದು ಬೆಲ್ ಪಾಲ್ಸಿ ಅಥವಾ ಮುಖದ ಪಾರ್ಶ್ವವಾಯು.
Published: 26th February 2022 10:41 AM | Last Updated: 26th February 2022 02:00 PM | A+A A-

ಬೆಲ್ಸ್ ಪಾಲ್ಸಿ
ಇತ್ತೀಚಿನ ದಿನಗಳಲ್ಲಿ ಜನರ ಆಹಾರ, ವಿಹಾರ ಮತ್ತು ಆಚಾರಗಳು ತೀವ್ರವಾಗಿ ಬದಲಾವಣೆಗಳು ಆಗಿರುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಅವುಗಳಲ್ಲಿ ಒಂದು ಬೆಲ್ ಪಾಲ್ಸಿ ಅಥವಾ ಮುಖದ ಪಾರ್ಶ್ವವಾಯು. ಇದು ಮೆದುಳಿನ ಮಾಂಸಖಂಡಗಳಿಗೆ/ನರಗಳಿಗೆ ಸಂಬಂಧಪಟ್ಟ ಒಂದು ಸಮಸ್ಯೆ.
ಬೆಲ್ಸ್ ಪಾಲ್ಸಿ ಎಂದರೇನು?
ಬೆಲ್ಸ್ ಪಾಲ್ಸಿ (ಮುಖದ ಪಾರ್ಶ್ವವಾಯು) ಅಥವಾ ಮುಖದ ಒಂದು ಭಾಗ - ಎಡ ಅಥವಾ ಬಲ ಭಾಗದ - ಮಾಂಸ ಖಂಡಗಳು/ನರಗಳ ಬಲ ಕಳೆದುಕೊಳ್ಳುವಿಕೆ ಎಂದರ್ಥ. ಸಾಮಾನ್ಯವಾಗಿ ಜನರು ಬೆಲ್ಸ್ ಪಾಲ್ಸಿ ಹಾಗೂ ಲಕ್ವ (ಮೆದುಳಿನ ಆಘಾತ) ಒಂದೇ ಎಂದು ಪರಿಗಣಿಸುತ್ತಾರೆ. ಇದು ಸರಿಯಲ್ಲ. ಇವೆರಡೂ ಬೇರೆ ಬೇರೆಯೇ ಆದ ತೊಂದರೆಗಳು. ಬೆಲ್ಸ್ ಪಾಲ್ಸಿ ಯಲ್ಲಿ (ಮುಖದ ಪಾರ್ಶ್ವವಾಯು) ವೈರಸ್ ಸೋಂಕಿನಿಂದ ಮುಖದ ಮಾಂಸಖಂಡಗಳು ಹಾಗೂ ನರಗಳಿಗೆ ನಂಜುಂಟಾಗಿ ತೊಂದರೆಗೀಡಾಗುತ್ತವೆ. ಆದರೆ ಲಕ್ವದಿಂದ ಮೆದುಳಿನ ನರಗಳಿಗೆ ಆಘಾತವಾಗಿ ದೇಹದ ಒಂದು ಪಾರ್ಶ್ವ ಬಲಹೀನಗೊಂಡು ಮೆದುಳಿನಿಂದ ನಿಯಂತ್ರಣ ಕಳೆದುಕೊಳ್ಳುವುದು.
ಬೆಲ್ಸ್ ಪಾಲ್ಸಿ ಲಕ್ಷಣಗಳು
ಮುಖದ ಒಂದು ಪಾರ್ಶ್ವ ಬಲ ಕಳೆದುಕೊಂಡಂತಹ ಅನುಭವವಾಗುವುದು, ಕಣ್ಣಿನ ರೆಪ್ಪೆ ಮುಚ್ಚಲು ಹಾಗೂ ತೆರೆಯದಿರಲು ಕಷ್ಟವಾಗುವುದು, ಬಾಯಿರುಚಿ ಕಳೆದುಕೊಂಡ ಅನುಭವವಾಗುವುದು, ಕಿವಿ ಒಳಗಡೆ ಅಥವಾ ಹಿಂಬದಿಯಲ್ಲಿ ನೋವಾಗುವುದು, ಕಿವಿ ಒಳಗಡೆ ಅಥವಾ ಹಿಂಬದಿಯಲ್ಲಿ ನೋವಾಗುವುದು, ಮುಖವನ್ನು ಮುಟ್ಟಿದರೆ ಜಡವಸ್ತು ಮುಟ್ಟಿದ ಅನುಭವವಾಗುವುದು ಮತ್ತು ಊಟಮಾಡುವಾಗ ಆಹಾರವನ್ನು ಜಗಿಯಲು ಕಷ್ಟವಾಗುವುದು ಇಂತಹ ಲಕ್ಷಣಗಳಿದ್ದರೆ ನರರೋಗ ತಜ್ಞರನ್ನು ತಕ್ಷಣದಲ್ಲಿ ಸಂಪರ್ಕಿಸುವುದು ಸೂಕ್ತ. ಅವರು ರೋಗಿಯನ್ನು ಈ ಸೂಚನೆಗಳಿಂದ ಪರೀಕ್ಷೆ ಮಾಡಿ ಇದು ಮುಖದ ಪಾರ್ಶ್ವವಾಯು ಸಮಸ್ಯೆಯೋ ಅಲ್ಲವೋ ಎಂದು ನಿರ್ಧರಿಸುವರು. ಒಂದು ವೇಳೆ ಇತರೆ ಅನುಮಾನಗಳಿದ್ದಲ್ಲಿ ಸಿಟಿ ಸ್ಕ್ಯಾನ್, ಎಂಆರ್ಐ ಹಾಗೂ ರಕ್ತಪರೀಕ್ಷೆಗಳ ಮುಖಾಂತರ ಸಮಸ್ಯೆಗೆ ಸರಿಯಾದ ಕಾರಣಗಳನ್ನು ತಿಳಿಯುವರು. ಅದಕ್ಕೆ ತಕ್ಕಂತಹ ಔಷಧೋಪಚಾರಗಳನ್ನು ಕೂಡ ರೋಗಿಗಳಿಗೆ ತಿಳಿಸುವರು.
ಬೆಲ್ಸ್ ಪಾಲ್ಸಿ ಯಾರಿಗೆ ಬರಬಹುದು?
ಮುಖದ ಅಂದಗೆಡಿಸುವ ಕಾಯಿಲೆ ಇದು. ಮಹಿಳೆ, ಪುರುಷ ಎನ್ನುವ ಲಿಂಗಭೇದ ತಾರತಮ್ಯ ಈ ರೋಗಕ್ಕಿಲ್ಲ. ಅತಿಯಾದ ಶೀತಕ್ಕೆ ದೇಹವನ್ನು ಒಡ್ಡಿದಾಗ, ಕಿವಿಯಲ್ಲಿ ಸೋಂಕು ಉಂಟಾದಾಗ, ಕಿವಿ ಸೋರುತ್ತಿದ್ದಾಗ, ವೈರಸ್ ಸೋಂಕುಗಳಾದ ಹರ್ಪಿಸ್ ಸಿಂಪ್ಲೆಕ್ಸ್, ಹರ್ಪಿಸ್ ಜೋಸ್ಟರ್ ಮುತ್ತಿಗೆ ಹಾಕಿದಾಗ, ತಲೆಗೆ ಏಟು ಬಿದ್ದಾಗ ಈ ಸಮಸ್ಯೆ ಉಂಟಾಗಬಹುದು. ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ತೀವ್ರವಾದಾಗ ಇದು ಕಾಣಿಸಿಕೊಳ್ಳಬಹುದು. ಇಷ್ಟೆಲ್ಲಾ ಇದ್ದರೂ ಈ ಸಮಸ್ಯೆಗೆ ಇಂತಹುದೇ ನಿರ್ದಿಷ್ಟ ಕಾರಣ ಎಂದು ಹೇಳಲಾಗುವುದಿಲ್ಲ. ಮಧ್ಯವಯಸ್ಸಿನವರಿಗೆ ಮತ್ತು ವಯಸ್ಸಾದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವೈರಸ್ ಸೋಂಕು ಉಂಟಾದಾಗ ಮುಖದ ನರಗಳ/ಮಾಂಸಖಂಡಗಳ ಮೇಲೆ ಅದು ಪರಿಣಾಮ ಬೀರಿದಾಗ ಅವುಗಳು ದುರ್ಬಲವಾಗಿ ಈ ಸಮಸ್ಯೆ ಬರುತ್ತದೆ ಎಂದು ಸಾಮಾನ್ಯವಾಗಿ ಹೇಳಬಹುದು.
ಬೆಲ್ಸ್ ಪಾಲ್ಸಿ ವರ್ಸಸ್ ಲಕ್ವ
ಬೆಲ್ಸ್ ಪಾಲ್ಸಿ ಹಾಗೂ ಲಕ್ವದ ಲಕ್ಷಣಗಳು ಬೇರೆ ಬೇರೆ. ಬೆಲ್ಸ್ ಪಾಲ್ಸಿ ಯಲ್ಲಿ ರೋಗಿಗೆ ಕೇವಲ ಮುಖದ ಅಂಗಗಳು ಮಾತ್ರ ತೊಂದರೆಗೀಡಾಗುತ್ತವೆ. ಉದಾಹರಣೆಗೆ ಕಣ್ಣಿನ ರೆಪ್ಪೆ ಮುಚ್ಚಲು ಹಾಗೂ ತೆರೆಯಲು ಕಷ್ಟವಾಗುವುದು, ಮುಖ ಜೋಲು ಬಿದ್ದಂತಹ ಅನುಭವ, ಆಹಾರ ಜಗಿಯಲು ಕಷ್ಟವಾಗುವುದು, ಊಟದ ರುಚಿ ಅರಿಯದಿರುವುದು, ಕಿವಿಯಲ್ಲಿ ಗುಂಯ್ ಗುಡುವ ನಿರಂತರ ಶಬ್ಧದ ಅನುಭವ, ದವಡೆ ಹಲ್ಲಿನ ನೋವು, ಆದರೆ ಲಕ್ವದಲ್ಲಿ ರೋಗಿಗೆ ಮೆದುಳಿನ ರಕ್ತಸಂಚಾರದಲ್ಲಿ ಹಠಾತ್ ವ್ಯತ್ಯಾಸದಿಂದ ಮೆದುಳಿನ ಯಾವುದೋ ಒಂದುಭಾಗ ಹಾನಿಗೂಳಗಾಗಿ ದೇಹದ ಒಂದು ಪಾಶ್ರ್ವ (ಮುಖದಿಂದ ಕಾಲಿನವರೆಗೆ) ಚಲಿಸಲು ಆಗದಿರುವುದು. ಹೀಗಾದಾಗ ಸಾಕಷ್ಟು ರೋಗಿಗಳು ಸರಿಯಾದ ಚಿಕಿತ್ಸಾ ಮಾರ್ಗ ಅನುಸರಿಸದೇ ಆರ್ಥಿಕ ಹಾಗು ಮಾನಸಿಕ ಸಂಕಷ್ಟಕ್ಕೀಡಾಗುವರು. ಇದರಿಂದ ಸಮಯವೂ ವ್ಯರ್ಥ ಹಾಗು ಹಣವೂ ಹಾಳು.
ಈ ಸಮಸ್ಯೆ ಜನರ ಮೇಲೆ ವಿವಿಧ ರೀತಿಗಳಲ್ಲಿ ಪರಿಣಾಮ ಬೀರಬಹುದು. ಮುಖದ ಅಭಿವ್ಯಕ್ತಿ, ದೃಷ್ಟಿ, ಮಾತನಾಡುವ ರೀತಿ, ಆಹಾರ ಸೇವಿಸುವ ರೀತಿಗಳಲ್ಲಿ ಬದಲಾವಣೆ ತರುತ್ತದೆ. ಕೆಲವೊಮ್ಮೆ ದೈಹಿಕ ಅಸ್ವಸ್ಥತೆ ಮತ್ತು ನೋವನ್ನು ಕೂಡ ಉಂಟುಮಾಡಬಹುದು. ಇದರಿಂದ ಬೇರೆಯವರು ಅವರನ್ನು ಸರಿಯಾಗಿ ನೋಡದೇ ಇರಬಹುದು. ಹೀಗಾಗಿ ಅವರು ಕಳಂಕಕ್ಕೆ ಗುರಿಯಾಗುತ್ತಾರೆ. ಇದರಿಂದ ಅನಗತ್ಯ ಮಾನಸಿಕ ಕಿರಿಕಿರಿ, ಖಿನ್ನತೆ ಮತ್ತು ಹತಾಶೆಗಳು ಎದುರಾಗಬಹುದು. ಆಗ ಅವರಿಗೆ ಮಾನಸಿಕ ಚಿಕಿತ್ಸೆ/ಆಪ್ತ ಸಲಹೆಯೂ ಬೇಕಾಗಬಹುದು.
ಬೆಲ್ಸ್ ಪಾಲ್ಸಿಗೆ ಪರಿಹಾರ
ಈ ಸಮಸ್ಯೆಗೀಡಾದ ಬಹುತೇಕ ರೋಗಿಗಳು ಯಾವುದೇ ಔಷಧೋಪಚಾರಗಳಿಲ್ಲದೆ ಒಂದೆರಡು ವಾರಗಳಲ್ಲಿ ಗುಣವಾಗುತ್ತಾರೆ. ಆದರೆ ಮಾತ್ರೆ, ಇತರೆ ಔಷಧೋಪಚಾರಗಳಿಂದ ಸಂಭಾವ್ಯ ತೊಂದರೆಗಳು ಕಡಿಮೆಯಾಗುವುವು. ಈ ಸಮಯದಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಹೆಚ್ಚು ಸೂಕ್ತ. ಫಿಸಿಯೋಥೆರಪಿಸ್ಟ್ಗಳು ಮುಖದ ಮಾಂಸ ಖಂಡಗಳಿಗೆ ವ್ಯಾಯಾಮ ಹಾಗು ಎಲೆಕ್ಟ್ರಿಕಲ್ ಸ್ಟಿಮ್ಯುಲೇಷನ್ ಚಿಕಿತ್ಸೆಯಿಂದ ರೋಗಿಯ ಮುಖವನ್ನು ಮತ್ತೆ ಮೊದಲಿನ ರೀತಿಯಲ್ಲಿ ತರುವಲ್ಲಿ ಪ್ರಮುಖ ಪಾತ್ರವಹಿಸುವರು.
ಆಯುರ್ವೇದದಲ್ಲಿಯೂ ಈ ಸಮಸ್ಯೆಗೆ ಉತ್ತಮ ಪರಿಹಾರವಿದೆ. ಔಷಧಿ ಉಪಚಾರದ ಜೊತೆಗೆ ಪಂಚಕರ್ಮದ ಅಭ್ಯಂಗ, ಸ್ವೇದನ ನಶ್ಯ ಮತ್ತು ಶಿರೋಧಾರಾ ಚಿಕಿತ್ಸೆಗಳು ಮುಖದ ಪಾರ್ಶ್ವವಾಯುವನ್ನು ಹೋಗಲಾಡಿಸಲು ಸಹಾಯಕವಾಗಿವೆ. ಆಹಾರದಲ್ಲಿ ಉತ್ತಮ ಪೋಷಕಾಂಶಗಳುಳ್ಳ ಹಣ್ಣು, ತರಕಾರಿಗಳು ಮತ್ತು ಹಸಿರು ಸೊಪ್ಪುಗಳ ಸೇವನೆ ಬಹಳ ಮುಖ್ಯ. ಇಂತಹ ಸಮಸ್ಯೆ ಕಂಡುಬಂದಾಗ ಆಯುರ್ವೇದ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477