ಆಕರ ಕೋಶ ಚಿಕಿತ್ಸೆ ಎಂದರೇನು? stem cell therapy ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು... (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿ
ಆಕರ ಕೋಶಗಳು (stem cell) ನಮ್ಮ ದೇಹದ ಮೂಲ (ಕಚ್ಚಾ) ಕೋಶಗಳು. ಹೃದಯಬಡಿತ, ಉಸಿರಾಟ, ತ್ಯಾಜ್ಯ ವಿಸರ್ಜನೆಯಂತಹ ವಿಶೇಷ ಕಾರ್ಯಗಳನ್ನು ಹೊಂದಿರುವ ಎಲ್ಲಾ ಇತರ ಜೀವಕೋಶಗಳು ಈ ಆಕರ ಕೋಶಗಳಿಂದಲೇ ಉತ್ಪತ್ತಿಯಾಗುತ್ತವೆ.
Published: 01st January 2022 04:20 PM | Last Updated: 01st January 2022 07:53 PM | A+A A-

ಸ್ಟೆಮ್ ಸೆಲ್ ಥೆರೆಪಿ (ಸಾಂಕೇತಿಕ ಚಿತ್ರ)
ಆಕರ ಕೋಶಗಳು (stem cell) ನಮ್ಮ ದೇಹದ ಮೂಲ (ಕಚ್ಚಾ) ಕೋಶಗಳು. ಹೃದಯಬಡಿತ, ಉಸಿರಾಟ, ತ್ಯಾಜ್ಯ ವಿಸರ್ಜನೆಯಂತಹ ವಿಶೇಷ ಕಾರ್ಯಗಳನ್ನು ಹೊಂದಿರುವ ಎಲ್ಲಾ ಇತರ ಜೀವಕೋಶಗಳು ಈ ಆಕರ ಕೋಶಗಳಿಂದಲೇ ಉತ್ಪತ್ತಿಯಾಗುತ್ತವೆ. ಮೂಲತ: ಆಕರ ಕೋಶಗಳು ವಿಭಜನೆಗೊಂಡು ಅನೇಕಾನೇಕ ಜೀವಕೋಶಗಳನ್ನು ಸೃಷ್ಟಿಸುತ್ತವೆ. ಈ ಜೀವಕೋಶಗಳು ಹೊಸ ಆಕರಕೋಶಗಳಾಗಿ (ಸ್ವಯಂ-ನವೀಕರಣ) ಆಗುತ್ತವೆ ಅಥವಾ ರಕ್ತ ಕಣಗಳು, ಮಿದುಳಿನ ಜೀವಕೋಶಗಳು, ಹೃದಯ ಸ್ನಾಯುವಿನ ಜೀವಕೋಶಗಳು ಅಥವಾ ಮೂಳೆ ಕೋಶಗಳಂತಹ ಹೆಚ್ಚು ನಿರ್ದಿಷ್ಟ ಕಾರ್ಯದೊಂದಿಗೆ ವಿಶೇಷ ಕೋಶಗಳಾಗುತ್ತವೆ. ಆಕರ ಕೋಶಗಳ ಹೊರತಾಗಿ ದೇಹದ ಯಾವುದೇ ಕೋಶವು ಹೊಸ ಕೋಶಗಳನ್ನು ಉತ್ಪಾದಿಸುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಆಕರ ಕೋಶ ಯಾವುದೇ ವಿಶೇಷ ಕೋಶವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.
ಮಾನವ ಭ್ರೂಣದಲ್ಲಿ ಆಕರ ಕೋಶಗಳಿವೆ. ಮೂರರಿಂದ ಐದು ದಿನಗಳ ಭ್ರೂಣದಲ್ಲಿ ಇರುವ ಆಕರ ಕೋಶಗಳು ಬಹಳ ಮಹತ್ವದ್ದಾಗಿದೆ. ಈ ಕೋಶಗಳೇ ಹೃದಯದ ಕೋಶ-ಅಂಗಾಂಶ, ಶ್ವಾಸಕೋಶದ ಕೋಶ-ಅಂಗಾಂಶ ಹೀಗೆ ವಿಶೇಷ ಕಾರ್ಯಗಳ ಅಂಗಾಂಗಗಳಾಗಿ ಬೆಳೆಯುತ್ತವೆ.
ಇವು ಬಹುಕಾರ್ಯದ ಆಕರ ಕೋಶಗಳಾಗಿ ವಿಭಜನೆಗೊಳ್ಳುತ್ತವೆ. ವಿಭಜನೆಗೊಂಡ ದೇಹದಲ್ಲಿ ಯಾವುದೇ ರೀತಿಯ ಕೋಶವಾಗಬಹುದು. ಈ ಬಹುಮುಖತೆಯು ಭ್ರೂಣದ ಕಾಂಡಕೋಶಗಳನ್ನು ರೋಗಗ್ರಸ್ತ ಅಂಗಾಂಶ ಮತ್ತು ಅಂಗಗಳನ್ನು ಪುನರುತ್ಪಾದಿಸಲು ಅಥವಾ ಸರಿಪಡಿಸಲು ಬಳಸಬಹುದು. ಇದಲ್ಲದೇ ವಯಸ್ಕ ಆಕರ ಕೋಶಗಳು ಅಸ್ಥಿ (ಮೂಳೆ) ಮಜ್ಜೆ ಅಥವಾ ಕೊಬ್ಬಿನಂತಹ ಹೆಚ್ಚಿನ ವಯಸ್ಕ ಅಂಗಾಂಶಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಭ್ರೂಣದ ಕಾಂಡಕೋಶಗಳೊಂದಿಗೆ ಹೋಲಿಸಿದರೆ, ವಯಸ್ಕ ಕಾಂಡಕೋಶಗಳು ದೇಹದ ವಿವಿಧ ಜೀವಕೋಶಗಳನ್ನು ಹುಟ್ಟುಹಾಕಲು ಹೆಚ್ಚು ಸೀಮಿತ ಸಾಮರ್ಥ್ಯವನ್ನು ಹೊಂದಿವೆ. ಮೂಲ ಭ್ರೂಣದ ಆಕರ ಕೋಶಗಳಂತೆಯೇ ಇದ್ದರೂ ಅವುಗಳಂತೆ ಇವು ಬಹುಕಾರ್ಯಕ್ಷಮತೆ ಹೊಂದಿಲ್ಲ. ಉದಾಹರಣೆಗೆ ಹೇಳುವುದಾದರೆ ಈ ಮೂಳೆ ಮಜ್ಜೆಯ ಕಾಂಡಕೋಶಗಳು ಮೂಳೆ ಅಥವಾ ಹೃದಯ ಸ್ನಾಯುವಿನ ಜೀವಕೋಶಗಳನ್ನು ರಚಿಸಲು ಸಾಧ್ಯವಾಗುತ್ತದೆ. ಆದರೆ ಭ್ರೂಣದ ಆಕರ ಕೋಶಗಳಿಂದ ಯಾವ ಅಂಗ, ಸ್ನಾಯುಗಳನ್ನಾದರೂ ರಚಿಸಬಹುದು. ಜೊತೆಗೆ ಸಂಶೋಧಕರು ಗರ್ಭಿಣಿಯರ ಹೊಟ್ಟೆಯಲ್ಲಿ ಮಗುವನ್ನು ಸುತ್ತುವರೆದಿರುವ ಆಮ್ನಿಯೋಟಿಕ್ ದ್ರವ (Amniotic Fluid) ಮತ್ತು ಹೊಕ್ಕುಳಬಳ್ಳಿಯ ರಕ್ತದಲ್ಲಿ ಆಕರ ಕೋಶಗಳನ್ನು ಕಂಡುಹಿಡಿದಿದ್ದಾರೆ. ಈ ಆಕರ ಕೋಶಗಳು ವಿಶೇಷ ಕೋಶಗಳಾಗಿ ಬದಲಾಗುವ ಸಾಮರ್ಥ್ಯವನ್ನು ಹೊಂದಿವೆ. ಈ ಆಕರ ಕೋಶಗಳನ್ನು ಮನುಕುಲವನ್ನು ಕಾಡುತ್ತಿರುವ ಕಾಯಿಲೆಗಳನ್ನು ಸರಿಪಡಿಸಲು ಆಥವಾ ಹೋಗಲಾಡಿಸಲು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಶೋಧನೆಗಳು ಸಾಗಿವೆ. ಈಗಾಗಲೇ ಇಲಿಯ ಹಾಗೂ ಮಾನವರ ಆಕರ ಕೋಶಗಳ ಬಗೆಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ.
ಬಹುತೇಕ ಅಂಗಾಂಶಗಳನ್ನು ಚರ್ಮ ಮತ್ತು ಮೃದ್ವಸ್ಥಿಗಳಂತೆ ಕೃತಕವಾಗಿ ಮರುಸೃಷ್ಟಿಸಲು ಆಗುವುದಿಲ್ಲ. ಹೃದಯದ ಸ್ನಾಯುಗಳ ಅಥವಾ ನರಕೋಶಗಳನ್ನು ಉತ್ಪಾದಿಸಲು ಆಕರ ಕೋಶಗಳನ್ನು ಬಳಸಲಾಗುತ್ತದೆ. ದೇಹದ ಎಲ್ಲಾ ಅಂಗಾಂಶಗಳು ಆಕರ ಕೋಶಗಳನ್ನು ಹೊಂದಿವೆ ಮತ್ತು ಇವುಗಳ ಕಾರ್ಯ ಬದಲಿ ಕೋಶಗಳನ್ನು ಸೃಷ್ಟಿಸುವುದೇ ಆಗಿದೆ. ಇಂತಹ ವಯಸ್ಕ ಆಕರ ಕೋಶಗಳ ಸಂಶೋಧನೆಯು ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಸೈದ್ಧಾಂತಿಕವಾಗಿ ಇದರಿಂದ ಯಾವುದೇ ಬಗೆಯ ಅಂಗಾಂಶವನ್ನು ಸೃಷ್ಟಿಸಲು ಬಳಸಬಹುದು.
ಆದರೆ ಇದಕ್ಕೆ ಬೇಕಾದ ಕೋಶಗಳನ್ನು ಬೆಳೆಸಬಲ್ಲ ತಂತ್ರಜ್ಞಾನ ಇನ್ನು ಪರಿಪೂರ್ಣವಾಗಿಲ್ಲ. ಆಕರ ಕೋಶಗಳಿಂದ ಹೃದಯಾಘಾತದಿಂದ ಹಾನಿಗೊಳಗಾದ ಹೃದಯದ ಅಂಗಾಂಶವನ್ನು ಬೆಳೆಸಲು ತೀವ್ರತರ ಪ್ರಯತ್ನಗಳು ಸಾಗಿವೆ. ಅಸ್ಥಿಮಜ್ಜೆಯಿಂದ ಪಡೆದು ಹೃದಯಕ್ಕೆ ಜೋಡಿಸಿದ ಅಕರ ಕೋಶಗಳಿಂದ ರೋಗಿಗಳ ಹೃದಯದ ಕಾರ್ಯ ಉತ್ತಮಗೊಂಡಿರುವುದು ಅಧ್ಯಯನಗಳಿಂದ ಕಂಡುಬಂದಿದೆ. ಮೆದುಳಿನಲ್ಲಿ ಸತ್ತ ಕೋಶಗಳ ಬದಲಿಗೆ ನರಗಳ ಆಕರ ಕೋಶಗಳನ್ನು ಬಳಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂತಹ ಕೋಶ ಚಿಕಿತ್ಸೆಯಿಂದ (Cell Therapy) ಪಾರ್ಕಿನ್ಸನ್ಸ್ ಮತ್ತು ಆಲ್ಜೀಮರ್ಸ್ (alzheimer's) ರೋಗಗಳಿಗೆ ಪರಿಹಾರ ಸಿಗಬಹುದು.
ಈವರೆಗೆ ಯಶಸ್ವಿಯಾಗಿರುವ ಒಂದೇ ಆಕರ ಕೋಶ ಚಿಕಿತ್ಸೆಯೆಂದರೆ ಕ್ಯಾನ್ಸರ್ನಲ್ಲಿ ಬಳಸಿರುವ ಅಸ್ಥಿಮಜ್ಜೆ ಚಿಕಿತ್ಸೆ. ಅಸ್ಥಿಮಜ್ಜೆಯಲ್ಲಿ ಕ್ಯಾನ್ಸರ್ನಿಂದಾಗಿ ನಾಶವಾಗಿರುವ ಕೋಶಗಳ ಬದಲಿಗೆ ಸೂಕ್ತ ದಾನಿ ಆಕರ ಕೋಶಗಳನ್ನು ಬಳಸಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆಕರ ಕೋಶಗಳ ಚಿಕಿತ್ಸೆಯಲ್ಲಿ ವಯಸ್ಕ ಮತ್ತು ಭ್ರೂಣಗಳ ಆಕರ ಕೋಶಗಳನ್ನು ಬಳಸಲಾಗುತ್ತದೆ. ಕೆಲವೇ ದಿನಗಳ ಭ್ರೂಣಗಳ ಆಕರ ಕೋಶಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಏಕೆಂದರೆ ಈ ಆಕರಕೋಶಗಳು ಬೇಗನೇ ಹೆಚ್ಚಾಗುತ್ತವೆ ಮತ್ತು ಇವು ಯಾವುದೇ ಕೋಶಗಳಾಗಿ ಬೆಳೆಯಬಲ್ಲವು. ಆದರೆ ದೇಹದ ರೋಗನಿರೋಧಕ ವ್ಯವಸ್ಥೆಯು ಇವುಗಳನ್ನು ಬೇರೆಯ ಕೋಶಗಳು ಎಂದು ಗುರುತಿಸಿ ತಿರಸ್ಕರಿಸಬಹುದು ಮತ್ತು ಇವು ನಂತರ ಗಡ್ಡೆಗಳಾಗಿ ಬೆಳೆಯಬಲ್ಲವು ಎಂಬ ಆತಂಕವಿದೆ. ಇದಲ್ಲದೆ ಈ ರೀತಿಯಲ್ಲಿ ಆಕರ ಕೋಶಗಳನ್ನು ಪ್ರಕೃತಿಗೆ ವಿರುದ್ಧವಾಗಿ ಬಳಸಿಕೊಳ್ಳಬಹುದೇ ಮತ್ತು ಈ ಸಂಶೋಧನೆಗಳಿಗೆ ನೈತಿಕತೆ ಇಲ್ಲವೇ ಎಂಬೆಲ್ಲಾ ಪ್ರಶ್ನೆಗಳು ಎದ್ದಿವೆ.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477