ಅಯೋಧ್ಯ-ಕಾಶಿ ಜಾರಿ ಹೈ, ಮಥುರಾ ಕಿ ತಯಾರಿ ಹೈ: ಯು.ಪಿ ಚುನಾವಣೆಗೆ ಬಿಜೆಪಿ, ಯೋಗಿಯ ಹೊಸ ಮಂತ್ರ! (ಅಂತಃಪುರದ ಸುದ್ದಿಗಳು)
ಸ್ವಾತಿ ಚಂದ್ರಶೇಖರ್
ರಾಮನ ಜೊತೆ ಕೃಷ್ಣನ ನಂಟು ಬಿಡಿದಲಾದೀತೆ? ಎಂದು, ನಮ್ಮ ಇತಿಹಾಸ ಕಂಡ ಅದ್ಭುತ ರಾಜಕಾರಣಿ ಕೃಷ್ಣನನ್ನು ಪ್ರಜಾಪ್ರಭುತ್ವದ ಚುನಾವಣೆಗೂ ಎಳೆದುತಂದಾಗಿದೆ!
Published: 05th January 2022 02:08 PM | Last Updated: 05th January 2022 02:08 PM | A+A A-

ಮಥುರಾ-ಯೋಗಿ ಆದಿತ್ಯನಾಥ್-ರಾಮ ಮಂದಿರ (ಸಾಂಕೇತಿಕ ಚಿತ್ರ)
90 ರ ದಶಕದಿಂದ ಬಿಜೆಪಿಗೆ ಶ್ರೀರಕ್ಷೆಯೇ ಶ್ರೀರಾಮ, ಅವನ ಮಂದಿರ ನಿರ್ಮಾಣಕ್ಕಾಗಿ ಎಷ್ಟೋ ಕರಸೇವರು ಜೀವ-ಜೀವನಗಳನ್ನು ಪಣವಾಗಿಟ್ಟು ಹೊರಾಡಿದ್ದರು. ಮೂರು ದಶಕಗಳ ಹೋರಾಟಕ್ಕೆ ಜಯ ಸಂದಿದ್ದು ನವೆಂಬರ್ 9, 2019ರಲ್ಲಿ. ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಕೊಟ್ಟ ಆದೇಶ ಒಂದು ಕಡೆ ಆದರೆ, ಇಲ್ಲೇ ಮಂದಿರ ನಿರ್ಮಾಣವಾಗಲಿ ನಾವು ತಡೆಯುವುದಿಲ್ಲ ಎಂದು ವಕ್ಫ್ ಬೋರ್ಡ್ ದಶಕದ ಹಿಂದೆಯೇ ರಾಜಿ ಆಗಿತ್ತು, ಇರಲಿ ಎಲ್ಲಾ ಗೊಂದಲ, ಅಸಮಾಧಾನಗಳೂ ಮುಗಿದು ಈಗ ಮಂದಿರ ನಿರ್ಮಾಣ ಕಾಮಗಾರಿ ನಿರಾತಂಕವಾಗಿ ಸಾಗುತ್ತಿದೆ. ಅದೇ ರೀತಿ ವಕ್ಫ್ ಬೋರ್ಡ್ ಗೆ ಒಂದಿಷ್ಟು ಜಾಗವೂ ಸೇರುತ್ತಿದೆ. ಬೇಕೋ ಬೇಡವೋ ಮರ್ಯಾದಾ ಪುರುಷ ರಾಮನನ್ನು ರಾಜಕೀಯ ದಾಳವಾಗಿ ಬಳಸಲು ಆರಂಭಿಸಿ ದಶಕಗಳೇ ಕಳೆಯಿತು. ಆದರೆ ಈಗ ಮಂದಿರದ ನಂತರ ಮುಂದೇನು ಎಂದು ಯೋಚಿಸುವುದರಲ್ಲೇ ಕಾಶಿಯನ್ನು ನವೀಕರಿಸಿಸುತ್ತಿದ್ದೀವಿ ಎಂದು ಮೂರು ವರ್ಷದ ಹಿಂದೆ ಅಂದರೆ 2019 ರಲ್ಲೇ ಕೆಲಸ ಆರಂಭಿಸಿಯಾಗಿತ್ತು. ಇನ್ನು ಹೀಗೆ ಹೇಳುತ್ತಲೇ 2021ರ ಅಂತ್ಯಕ್ಕೆ ಕಾಶಿ ಬೃಹತ್ ಕಾರಿಡಾರ್ ಉದ್ಘಾಟನೆಯೂ ಆಯಿತು.
ಇಷ್ಟೆಲ್ಲಾ ಆದರೂ “ಅಯೋಧ್ಯಾ ತೋ ಝಾಂಕಿ ಹೈ, ಮಥುರಾ ಬಾಕಿ ಹೈ” (ಅಯೋಧ್ಯೆ ಕೇವಲ ಆರಂಭ, ಕಾಶಿ ಮಥುರಾ ಬಾಕಿ ಇದೆ), ಅಯೋಧ್ಯ-ಕಾಶಿ ಜಾರಿ ಹೈ, ಮಥುರಾ ಕಿ ತಯಾರಿ ಹೈ (ಅಯೋಧ್ಯೆ-ಕಾಶಿ ಜಾರಿಯಾಯಿತು, ಮಥುರಾ ಬಾಕಿ ಉಳಿಯಿತು) ಎಂಬ ಹಿಂದಿನಿಂದಲೂ ಜೀವಂತವಾಗಿರಿಸಿಕೊಂಡು ಬಂದಿದ್ದ ಘೋಷಣೆಗಳನ್ನು ಮರೆಯಲು ಸಾಧ್ಯವೇ? ರಾಮನ ಜೊತೆ ಕೃಷ್ಣನ ನಂಟು ಬಿಡಿದಲಾದೀತೆ? ಎಂದು, ನಮ್ಮ ಇತಿಹಾಸ ಕಂಡ ಅದ್ಭುತ ರಾಜಕಾರಣಿ ಕೃಷ್ಣನನ್ನು ಪ್ರಜಾಪ್ರಭುತ್ವದ ಚುನಾವಣೆಗೂ ಎಳೆದುತಂದಾಗಿದೆ!.
ಇಷ್ಟಕ್ಕೂ ಈ ಮೇಲ್ಕಂಡ ಸಾಲುಗಳಲ್ಲಿ ಅರ್ಧ ಭಾಗ ಯುಪಿಯ ರಾಲಿಯಲ್ಲಿ ಯೋಗಿಯ ಮಾತುಗಳು.
ರಾಮಜನ್ಮಭೂಮಿ ಬಾಬ್ರಿ ಮಸೀದಿಯ ವಿವಾದದಲ್ಲಿ ಸಿಲುಕಿದಂತೆ, ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮಸ್ಥಾನ ಈದ್ಗಾ ಮಸೀದಿಯ ವಿವಾದದಲ್ಲಿ ಸಿಲುಕಿಕೊಂಡಿದೆ. ಮೊಘಲ್ ದೊರೆ ಬಾಬರ್ ಆಳ್ವಿಕೆಯಲ್ಲಿ ರಾಮ ಜನ್ಮಭೂಮಿಯಲ್ಲಿರುವ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿ, ಕೃಷ್ಣ ಜನ್ಮಸ್ಥಾನ ಮಥುರಾ ದೇವಾಲಯದ ಮೇಲೆ ಹಲವಾರು ಬಾರಿ ದಾಳಿ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ.
ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಕೊನೆಯ ದಾಳಿ 1670 ರಲ್ಲಿ ನಡೆಯಿತು. ಅವನ ಆಳ್ವಿಕೆಯಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಯಿತು. ರಾಮಜನ್ಮಭೂಮಿ ವಿವಾದದಂತೆಯೇ ಇಲ್ಲಿಯೂ ಶ್ರೀಕೃಷ್ಣ ಜನ್ಮಭೂಮಿ ವಿವಾದ ನ್ಯಾಯಾಲಯದಲ್ಲಿದೆ.
ಕೃಷ್ಣನ ಮಥುರಾ ವರವೋ ಶಾಪವೋ..?
ಬಿಜೆಪಿ ರಾಮನಿಗೆ ಕೊಟ್ಟ ಅದ್ಯತೆಯನ್ನು ಕೃಷನಿಗೆ ನೀಡಿಲ್ಲ ಎನ್ನುವ ಯಾದವರನ್ನು ಇದರಿಂದಾದರೂ ತಮ್ಮ ಕಡೆ ಸೆಳೆಯಬಹುದೇ ಎನ್ನುವ ಲೆಕ್ಕಾಚಾರ ಉತ್ತರಪ್ರದೇಶ ಬಿಜೆಪಿಯದ್ದಾಗಿದೆ. 24 ಕೋಟಿ ಜನಸಂಖ್ಯೆ ಇರುವ ಯು.ಪಿಯಲ್ಲಿ 4 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಯಾದವರು ಇದ್ದಾರೆ. ಅವರನ್ನು ತನ್ನತ್ತ ಸೆಳೆಯುವ ಪ್ರಯತ್ನ ಒಂದೆಡೆ ನಡೆದರೆ, ಬಿಜೆಪಿ ತ್ಯಜಿಸಿ ಹೋಗುತ್ತಿರುವ ಬ್ರಾಹ್ಮಣರನ್ನು ಪಕ್ಷದ ಜೊತೆ ಇರಿಸಿಕೊಳ್ಳುವ ಪ್ರಯತ್ನ ಮತ್ತೊಂದೆಡೆ.
ಒಟ್ಟಿನಲ್ಲಿ ಬೆಲೆ ಏರಿಕೆ, ಅಭಿವೃದ್ಧಿ, ದೇಶದ ಪ್ರಗತಿ ಎಲ್ಲದರ ಮುಂದೆ ಮಠ ಮಂದಿರಗಳೇ ಚುನಾವಣೆಯೇ ವಿಷಯ ಆಗುವುದು ಎಂಬುದೇ ವಿಪರ್ಯಾಸ!
ಬಿಜೆಪಿಗೆ ಜೈಲು ಆರೆಸೆಸ್ ಗೆ ಬೈಲು
ತೆಲಂಗಾಣದಲ್ಲಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಸರ್ಕಾರಿ ನೌಕರರನ್ನು ಬೆಂಬಲಿಸಿಲು ನಿಂತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ರನ್ನು ತೆಲಂಗಾಣ ಸರ್ಕಾರ ಬಂಧಿಸಿದೆ.
ತೆಲಂಗಾಣ ಸರ್ಕಾರ, 317 ಕಲಂ ಅಡಿಯಲ್ಲಿ ಸರ್ಕಾರಿ ನೌಕರರ, ಶಿಕ್ಷಕರ ನೇಮಕಾತಿಯನ್ನು, ಬಡ್ತಿಯನ್ನು, ವರ್ಗಾವಣೆಯನ್ನು ಆಯಾ ಜಿಲ್ಲೆಗೆ ಸೀಮಿತಗೊಳಿಸಿ, ಜಿಲ್ಲಾಧಿಕಾರಿಗಳಿಗೆ ಇದರ ನೇತೃತ್ವವನ್ನು ವಹಿಸುವಂತೆ ಅದೇಶಿಸಿತು. ಇದನ್ನು ವಿರೋಧಿಸಿ ಡಿಸೆಂಬರ್ 28 ರಂದು ಸರ್ಕಾರಿ ಅಧ್ಯಾಪಕರ ಹೋರಾಟದಲ್ಲಿ ಮತ್ತು ತನ್ನ ಸ್ವಸಂಸದೀಯ ಕ್ಷೇತ್ರ ಕರೀಂ ನಗರದಲ್ಲಿ ಹೋರಾಟ ನಡೆಯಿತು. ಇದನ್ನು ತಡೆಯುವ ನಿಟ್ಟಿನಲ್ಲಿ 14 ದಿನದ ಕಾರಾಗೃಹ ಬಂಧನಕ್ಕೆ ಒಳಪಟ್ಟಿರುವ ಬಂಡಿ ಸಂಜಯ್ ರನ್ನು ಬೆಂಬಲಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತೆಲಂಗಾಣದಲ್ಲಿ ರ್ಯಾಲಿ ಹಮ್ಮಿಕೊಂಡರು. ಆದರೆ ಇತ್ತ ಬಿಜೆಪಿಗೆ ಅವಕಾಶ ನೀಡದ ಸರ್ಕಾರ ಆರ್ ಎಸ್ಎಸ್ ಬೈಠಕ್ ಗೆ ಅವಕಾಶ ನೀಡಿತು.
ಮೂರು ದಿನ ನಡೆಯುವ ಆರ್ ಎಸ್ಎಸ್ ಬೈಠಕ್ ನಲ್ಲಿ ಹರಡದ ಕೊರೋನಾ, ಆತಂಕಗಳು ಬಿಜೆಪಿ ರ್ಯಾಲಿಯಲ್ಲಿ ಹರಡುತ್ತದೆ ಎಂಬುದು ತೆಲಂಗಾಣ ಸರ್ಕಾರದ ಕಾಳಜಿ. ಇನ್ನು ತೆಲಂಗಾಣದಲ್ಲಿ ನಮ್ಮನ್ನು ತಡೆಯಲು ಕೋವಿಡ್ ಕಾರಣ ನೀಡುತ್ತಿದ್ದಾರೆ ಎನ್ನುವ ನಡ್ಡಾ, ಅದೇ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ ಇದೇ ಕೋವಿಡ್-19 ಹರಾಡುವುದರ ಕಾರಣ ನೀಡಿ ಕಾಂಗ್ರೆಸ್ ನ ಮೇಕೆದಾಟು ರ್ಯಾಲಿಯನ್ನು ತಡೆದಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುವರು? ಸನ್ನಿವೇಶಗಳು ಒಂದೇ ಆಗಿದ್ದರೂ ಸರ್ಕಾರ ಯಾರದ್ದಿರುತ್ತದೆ ಎಂಬುದರ ಮೇಲೆ ಸಮರ್ಥನೆಗಳು, ಆರೋಪಗಳು ಆಧರಿತವಾಗಿರುತ್ತವೆ! ಏನೋ ಕೆಲವೊಮ್ಮೆ ಈ ರಾಜಕರಣವೇ ಹೀಗೆ ಅರ್ಥಾನೆ ಆಗುವುದಿಲ್ಲ....
ಸ್ವಾತಿ ಚಂದ್ರಶೇಖರ್
swathichandrashekar92@gmail.com