ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು ಇಲ್ಲಿವೆ! (ಹಣಕ್ಲಾಸು)

ಹಣಕ್ಲಾಸು-290

-ರಂಗಸ್ವಾಮಿ ಮೂಕನಹಳ್ಳಿ

Published: 06th January 2022 12:30 AM  |   Last Updated: 06th January 2022 12:15 AM   |  A+A-


Investment options for Senior Citizens (File pic)

ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಆಯ್ಕೆಗಳು (ಸಾಂಕೇತಿಕ ಚಿತ್ರ)

ಮೊನ್ನೆ, ಅಂದರೆ 04/01/2022 ರಂದು ಆರ್ ಬಿಐ ತನ್ನ ಹೇಳಿಕೆಯಲ್ಲಿ, "ಸದ್ಯದ ಪಾಂಡೆಮಿಕ್ ಸ್ಥಿತಿ ನಿಲ್ಲುವ ಹಂತಕ್ಕೆ ಬಾರದ ಕಾರಣ ಬಡ್ಡಿ ದರಗಳಲ್ಲಿ ಹೆಚ್ಚಿನ ವ್ಯತ್ಯಾಸ ಮಾಡುವುದಿಲ್ಲ" ಎನ್ನುವ ಹೇಳಿಕೆಯನ್ನ ನೀಡಿದೆ. ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಹಣದುಬ್ಬರ ಏರಿಕೆಯನ್ನ ಕಾಣುತ್ತಿದೆ. ಜನರ ಬದುಕು ಅದರಲ್ಲೂ ಹಿರಿಯ ನಾಗರಿಕರು ಮತ್ತು ನಿಶ್ಚಿತ ಠೇವಣಿಯ ಮೇಲಿನ ಆದಾಯವನ್ನ ನಂಬಿ ಬದುಕುವ ಕೋಟ್ಯಂತರ ಜನರ ಬದುಕು ಮತ್ತೆ ಅನಿಶ್ಚಿತತೆಯತ್ತ ಸಾಗುತ್ತಿದೆ. ಈ ವರ್ಷ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ ವರ್ಷದ ಪ್ರಾರಂಭದಲ್ಲೇ ಆರ್ ಬಿಐ ಹೇಳಿಕೆ ಸದ್ಯದ ಮಟ್ಟಿಗೆ ಅಂದರೆ ಕನಿಷ್ಠ ಇನ್ನೊಂದು 6 ತಿಂಗಳು ಬಡ್ಡಿ ದರಗಳು ಏರಿಕೆಯಾಗುವುದಿಲ್ಲ ಎನ್ನುವುದನ್ನ ಸಾರುತ್ತಿದೆ. ಈ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಮತ್ತು ಇದ್ದುದ್ದರಲ್ಲೇ ಪರವಾಗಿಲ್ಲ ಎನ್ನುವ ಮಟ್ಟದ ಬಡ್ಡಿ ನೀಡುವ ಹೂಡಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ.

  1. ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ಸಂಸ್ಥೆ ಕೇಂದ್ರ ಸರಕಾರದ ಸಹಕಾರದೊಂದಿಗೆ ಈ ಒಂದು ಯೋಜನೆಯನ್ನ ಪ್ರಾರಂಭಿಸಿದೆ. ಮೊದಲಿಗೆ ಇದರಲ್ಲಿನ ಹೂಡಿಕೆಯ ಮೇಲೆ ನಿಗದಿತ ಬಡ್ಡಿಯನ್ನ ನೀಡಲಾಗುತ್ತಿತ್ತು. ಇದೀಗ ಪ್ರತಿ ವರ್ಷ ಏಪ್ರಿಲ್ 1 ರಂದು ಹೊಸ ಬಡ್ಡಿ ದರವನ್ನ ಘೋಷಿಸಲಾಗುತ್ತದೆ. ಮುಂದಿನ 1 ವರ್ಷ ಈ ಬಡ್ಡಿ ಚಾಲ್ತಿಯಲ್ಲಿರುತ್ತದೆ. ಸದ್ಯದ ಮಟ್ಟಿಗೆ ಇದು 7.4 ಪ್ರತಿಶತ ಬಡ್ಡಿಯನ್ನ ನೀಡುತ್ತದೆ. ಈ ಬಡ್ಡಿ ಹಣವನ್ನ ವರ್ಷಕೊಮ್ಮೆ ನೀಡಲಾಗುತ್ತದೆ, ಹೀಗಾಗಿ ಇದರಿಂದ ಬರುವ ಬಡ್ಡಿ 7.66 ಪ್ರತಿಶತಕ್ಕೆ ಸಮವಾಗುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ ಒಂದೂವರೆ ಲಕ್ಷವಾಗಿದ್ದು, ಗರಿಷ್ಟ ಹಣ 15 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಇಲ್ಲಿನ ಹೂಡಿಕೆಯನ್ನ 10 ವರ್ಷಗಳ ಕಾಲ ಮುಟ್ಟುವ ಹಾಗಿಲ್ಲ. 3 ವರ್ಷದ ನಂತರ ಹೂಡಿಕೆಯ ಮೇಲೆ 75 ಪ್ರತಿಶತ ಸಾಲವನ್ನ ಪಡೆಯುವ ಅವಕಾಶ ಕೂಡ ಇದೆ. ಸದ್ಯದ ಮಟ್ಟಿಗೆ ಹಣದ ಅವಶ್ಯಕತೆ ಇಲ್ಲದೆ, ನಿಖರ ಮೊತ್ತವನ್ನ ಬಯಸುವ ಹಿರಿಯ ನಾಗರಿಕರಿಗೆ ಇದು ಪೆನ್ಷನ್ ರೀತಿಯಲ್ಲಿ ಕೆಲಸ ಮಾಡುತ್ತದೆ.
  2. ಪೋಸ್ಟ್ ಆಫೀಸ್ Monthly ಇನ್ಕಮ್ ಸ್ಕೀಮ್: ಗಮನಿಸಿ ಇದರಲ್ಲಿ ಕೂಡ ಐದು ವರ್ಷಗಳ ಲಾಕ್ ಇನ್ ಪಿರಿಯಡ್ ಇರುತ್ತದೆ. ಅಂದರೆ 5 ವರ್ಷಗಳ ಕಾಲ ಈ ಹಣವನ್ನ ವಾಪಸ್ಸು ಪಡೆಯುವಂತಿಲ್ಲ, ಸಂಕಷ್ಟದ ಸಮಯದಲ್ಲಿ ಒಂದು ವರ್ಷದ ನಂತರ ತೆಗೆಯುವ ಅವಕಾಶವಿದೆ ಆದರೆ ಅದಕ್ಕೆ ಪೆನಾಲ್ಟಿ ಇರುತ್ತದೆ. ಕನಿಷ್ಠ ಸಾವಿರ ರೂಪಾಯಿ ಮತ್ತು ಗರಿಷ್ಟ ನಾಲ್ಕೂವರೆ ಲಕ್ಷ ಇಲ್ಲಿ ಹೂಡಿಕೆ ಮಾಡಬಹುದು. ಜಾಯಿಂಟ್ ಅಕೌಂಟ್ ಇದ್ದಾಗ ಈ ಹಣವನ್ನ 9 ಲಕ್ಷದ ವರೆಗೆ ಏರಿಕೆ ಮಾಡಲಾಗುತ್ತದೆ. ಸದ್ಯದ ಹೂಡಿಕೆ 6.6 ಪ್ರತಿಶತ ಬಡ್ಡಿಯನ್ನ ನೀಡುತ್ತದೆ. ಇದರ ಜೊತೆಗೆ ಪೋಸ್ಟ್ ಆಫೀಸ್ ನಲ್ಲಿ ವೇಳೆ ಆಧಾರಿತ ಇತರ ಠೇವಣಿ ಸ್ಕೀಮ್ ಗಳು ಕೂಡ ಲಭ್ಯವಿದೆ. ಇವುಗಳು ಸುರಕ್ಷತೆ ದೃಷ್ಟಿಯಿಂದ ಉತ್ತಮ, ಹಾಗೂ ಮಾರುಕಟ್ಟೆಯಲ್ಲಿನ ಇಂದಿನ ಸ್ಥಿತಿ ಪ್ರಕಾರ ಸಿಗುವ ಬಡ್ಡಿ ದರವೂ ಕಡಿಮೆಯೇನಲ್ಲ.
  3. ಹಿರಿಯ ನಾಗರಿಕ ನಿಶ್ಚಿತ ಸಮಯ ಠೇವಣಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಸಮಯಕ್ಕೆ ಇಡುವ ಹಣದ ಮೇಲೆ 6.2 ಪ್ರತಿಶತ ಬಡ್ಡಿಯನ್ನ ನೀಡಲಾಗುತ್ತಿದೆ. ಇಲ್ಲಿ ಬಡ್ಡಿಯನ್ನ ತಿಂಗಳಿಗೆ, 3 ತಿಂಗಳಿಗೆ ಅಥವಾ 6 ತಿಂಗಳಿಗೆ ಹೀಗೆ ನಮಗೆ ಬೇಕಾದ ಅವಧಿಯಲ್ಲಿ ಪಡೆಯುವ ಅನುಕೂಲವಿದೆ.
  4. ಟ್ಯಾಕ್ಸ್ ಫ್ರೀ ಬಾಂಡ್ಸ್: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ, ಎನ್ಟಿಪಿಸಿ, ಇಂಡಿಯನ್ ರೈಲ್ವೇಸ್, ಹೌಸಿಂಗ್ ಡೆವಲಪ್ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹೀಗೆ ಅನೇಕೆ ಸಂಸ್ಥೆಗಳು ಹೊರಡಿಸುವ ಬಾಂಡ್ ಗಳು 5.5 ರಿಂದ 6.5 ಪ್ರತಿಶತ ಬಡ್ಡಿಯನ್ನ ನೀಡುತ್ತವೆ. ಇಲ್ಲಿ ಬಡ್ಡಿಯನ್ನ ವರ್ಷಕೊಮ್ಮೆ ನೀಡಲಾಗುತ್ತದೆ. ಹೂಡಿಕೆಯ ಮೇಲಿನ ಈ ಬಡ್ಡಿ ಹಣಕ್ಕೆ ತೆರಿಗೆ ಕಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಬಾಂಡ್ ಗಳು ಸರಕಾರದ ಅಭಯವನ್ನ ಹೊಂದಿರುತ್ತವೆ, ಹೀಗಾಗಿ ಇದರ ಮೇಲಿನ ಹೂಡಿಕೆ ಬಹಳ ಸೇಫ್.
  5. ಆರ್ ಬಿ ಐ ಬಾಂಡ್ ಅಥವಾ ಗವರ್ನಮೆಂಟ್ ಆಫ್ ಇಂಡಿಯಾ ಬಾಂಡ್ (GOI -ಬಾಂಡ್): ಇದರ ಮೇಲೆ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಅಂದರೆ ಇದರ ಮೇಲೆ ಕನಿಷ್ಠ ಮತ್ತು ಗರಿಷ್ಠ ಹಣದ ಹೂಡಿಕೆಯ ಮಿತಿಯಿಲ್ಲ. ಹೀಗಾಗಿ ಬಹಳಷ್ಟು ಹಣ ಇದ್ದು ಭದ್ರತೆ ಬಯಸುವರು ಇಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ ಇಲ್ಲಿನ ಹೂಡಿಕೆ 7.5 ಪ್ರತಿಶತ ಬಡ್ಡಿಯನ್ನ ನೀಡಲಾಗುತ್ತದೆ. ಈ ಬಡ್ಡಿಯನ್ನ ವಾರ್ಷಿಕ ಲೆಕ್ಕದಲ್ಲಿ ನಿರ್ಧಾರ ಮಾಡಲಾಗುತ್ತದೆ. ಆದರೆ ಇದನ್ನ ಆರು ತಿಂಗಳಿಗೊಮ್ಮೆ ನೀಡುತ್ತಾರೆ. ಇಂತಹ ಹಣದ ಹೂಡಿಕೆಯನ್ನ 7 ವರ್ಷಗಳ ಕಾಲ ಕಡ್ಡಾಯವಾಗಿ ಇರಿಸಬೇಕಾಗುತ್ತದೆ. ಅಂದರೆ 60 ವರ್ಷದ  ಒಳಗಿರುವರಿಗೆ ಈ ಹಣವನ್ನ 7 ವರ್ಷಗಳ ಕಾಲ ತೆಗೆಯಲು ಬರುವುದಿಲ್ಲ. 60-70 ವಯಸ್ಸಿನ ನಡುವಿನಲ್ಲಿರುವ ಹೂಡಿಕೆದಾರರು 5 ವರ್ಷದ ನಂತರ ಈ ಹಣವನ್ನ ತೆಗೆಯಬಹುದು. 70-80 ವರ್ಷದಲ್ಲಿರುವ ಹೂಡಿಕೆದಾರರು 4 ವರ್ಷದ ನಂತರ ಹೂಡಿಕೆಯನ್ನ ಹಿಂಪಡೆಯುವ ಅವಕಾಶವಿದೆ. ಗಮನಿಸಿ ಇದರ ಮೇಲಿನ ಬಡ್ಡಿ ದರ ಪ್ರತಿ 6 ತಿಂಗಳಿಗೆ ಪರಿಷ್ಕರಣೆಗೆ ಒಳಗಾಗುತ್ತದೆ. ನ್ಯಾಷನಲ್ ಸೇವಿಂಗ್ ಸ್ಕೀಮ್ ಮೇಲಿನ ಬಡ್ಡಿ ದರ ಏನಿರುತ್ತದೆ ಅದರ ಮೇಲೆ 0.35 ಪ್ರತಿಶತ ಹೆಚ್ಚು ಬಡ್ಡಿಯನ್ನ ಇಲ್ಲಿ ನೀಡಲಾಗುತ್ತದೆ. ಈ ವರ್ಷ ಅಂದರೆ ಜನವರಿ 2022 ರಿಂದ ಜೂನ್ 2022ರ ವರೆಗೆ ಇದನ್ನ 7.15 ಎಂದು ನಿಗದಿಪಡಿಸಲಾಗಿದೆ. ಇದನ್ನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆಯಬಹುದು. ಜೊತೆಗೆ ಐಸಿಐಸಿಐ, ಹೆಚ್ ಡಿಎಫ್ ಸಿ, ಎಕ್ಸಿಸ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳಲ್ಲಿ ಕೂಡ ಖರೀದಿಸಬಹುದು . ಪೆನ್ಷನ್ ಇಲ್ಲದ, ನಿವೃತ್ತರಿಗೆ ಮತ್ತು ಹೆಚ್ಚು ಹಣವಿದ್ದು ರಿಸ್ಕ್ ಬೇಡ ಎನ್ನುವಂತವರಿಗೆ ಈ ಸಮಯದಲ್ಲಿ  ಇದು ಹೇಳಿ ಮಾಡಿಸಿದಂತಹ ಹೂಡಿಕೆಯಿದು. ಇದು ಭಾರತ ಸರಕಾರದ ಬಾಂಡ್ ಆಗಿರುವುದರಿಂದ ಇದರಲ್ಲಿ ರಿಸ್ಕ್  ಎಕ್ಷ್ಪೋಷರ್ ಬಹಳ ಕಡಿಮೆ. ಜೊತೆಗೆ ಎಷ್ಟು ದೊಡ್ಡ ಮೊತ್ತವನ್ನಾದರೂ ಇಲ್ಲಿ ತೊಡಗಿಸಬಹುದು ಇದು ಬಹಳ ಆಕರ್ಷಕವಾಗಿದೆ. ಇದರಲ್ಲಿರುವ ಎರಡು ನೂನ್ಯತೆಗಳು ಇವೆ. ಮೊದಲನೆಯದು 7 ವರ್ಷಗಳ ಕಾಲ ಲಾಕ್ ಇನ್ ಇದೆ. ಎರಡನೆಯದು ಬಡ್ಡಿ ನೀಡುವಾಗ ತೆರಿಗೆಯನ್ನ ಕತ್ತರಿಸಿ ನೀಡುತ್ತಾರೆ. ಅಂದರೆ TDS ಮಾಡಿ ಕೊಡುತ್ತಾರೆ. ಗಮನಿಸಿ ನೋಡಿದರೆ ಎರಡೂ ನ್ಯೂನತೆಗಳು ಕೂಡ ದೊಡ್ಡವಲ್ಲ. ಹೀಗಾಗಿ ಇದು ರಿಸ್ಕ್ ಬಯಸದ ಫಿಕ್ಸೆಡ್ ವರಮಾನ ಬಯಸುವ ಮಧ್ಯಮವರ್ಗದ ಜನರಿಗೆ ಬಹಳ ಹೆಚ್ಚಿನ ಸೂಕ್ತ.
  6. ಗೋಲ್ಡ್ ಬಾಂಡ್ಸ್: ಹೆಚ್ಚೆಚ್ಚು ಗೋಲ್ಡ್ ಬಾಂಡ್ ಖರೀದಿ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಮುಖ್ಯವಾಗಿ ಇದು  ಷೇರು ಮಾರುಕಟ್ಟೆಯಲ್ಲಿ ‘ಟ್ರೇಡೆಬಲ್’  ಅಂದರೆ ನಿಮಗೆ ಬೇಡ ಅನಿಸಿದರೆ ಇದನ್ನ ಷೇರು ಮಾರಿದಂತೆ ಡಿಮ್ಯಾಟ್ ಖಾತೆಯ ಮೂಲಕ ಮಾರಿಬಿಡಬಹುದು. ನಿಮ್ಮ ಬಾಂಡ್ ವಿತರಣೆಯಾದ ದಿನಾಂಕದಿಂದ ಹದಿನೈದು ದಿನದ ನಂತರ ಇದನ್ನ ನೀವು ಷೇರು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಬಹುದು. ಮಾರಲು ಇಚ್ಛಿಸದೆ ಇರುವ ಹೂಡಿಕೆದಾರ ಅಕಸ್ಮಾತ್ ಹಣದ ಅವಶ್ಯಕತೆ ಬಿದ್ದರೆ ಇದನ್ನ ಅಡವಿಟ್ಟು ಸಾಲ ಪಡೆಯುವ ಅವಕಾಶ ಕೂಡ ಇದೆ. ಇದು ಪೇಪರ್ ನಲ್ಲಿ ಇರುವ ಚಿನ್ನ ಹಾಗಾಗಿ ಸಾಂಪ್ರದಾಯಿಕವಾಗಿ ಚಿನ್ನದ ಖರೀದಿಯಲ್ಲಿ ಆಗುವ ಚಿನ್ನದ ಸುರಕ್ಷತೆಯ ಚಿಂತೆ ಇರುವುದಿಲ್ಲ. ಹೂಡಿಕೆದಾರ ಹೂಡಿಕೆಯ ಪೂರ್ಣಾವಧಿ 8 ವರ್ಷ ಪೂರೈಸಿದರೆ ‘ಕ್ಯಾಪಿಟಲ್ ಗೈನ್‘ ಟ್ಯಾಕ್ಸ್ ನಿಂದ ವಿನಾಯಿತಿ ಪಡೆಯಬಹುದು. 5 ವರ್ಷದ ನಂತರ ಹೂಡಿಕೆಯನ್ನ ಹಿಂತೆಗೆಯುವ ಅವಕಾಶ ಕೂಡ ಇದೆ. ಸಾಂಪ್ರದಾಯಿಕ ಚಿನ್ನದ ಮೇಲಿನ ಹೂಡಿಕೆ ಬಡ್ಡಿ ನೀಡುವುದಿಲ್ಲ ಮಾರುವ ಸಮಯದಲ್ಲಿ ಹೆಚ್ಚಿರುವ ಬೆಲೆ ಮಾತ್ರವೇ ಇಲ್ಲಿನ ಲಾಭ. ಗೋಲ್ಡ್ ಬಾಂಡ್ ಮೂಲ ಹೂಡಿಕೆಯ ಮೇಲೆ 2.5 ಪ್ರತಿಶತ ಬಡ್ಡಿ ಪ್ರತಿ ಆರು ತಿಂಗಳಿಗೆ ಒಮ್ಮೆ ನೀಡುತ್ತದೆ. 1 ಗ್ರಾಮ್ ನಿಂದ 4 ಕೆ.ಜಿ ತನಕ ಒಬ್ಬ ವ್ಯಕ್ತಿ ಹೂಡಿಕೆ ಮಾಡಬಹುದು. ಪೂರ್ಣ ಹೂಡಿಕೆ ಅವಧಿ ಪೂರೈಸಿದ್ದೆ ಆದರೆ ಹೂಡಿಕೆಯ ಮೇಲೆ 20 ರಿಂದ 25 ಪ್ರತಿಶತ ಲಾಭಾಂಶ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಸಾಂಪ್ರದಾಯಿಕ ಫಿಸಿಕಲ್ ಚಿನ್ನಕ್ಕಿಂತ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ ಸುರಕ್ಷಿತ. ಸರಕಾರದ ಅಭಯ ಬೇರೆ ಇದೆ. ಹೀಗಾಗಿ ಭೌತಿಕ ಚಿನ್ನದ ಮೇಲಿನ ಹೂಡಿಕೆಗಿಂತ ಬಾಂಡ್ ಮೇಲಿನ ಹೂಡಿಕೆ ಎಲ್ಲಾ ತರದಲ್ಲೂ ಸೂಕ್ತ. ಶುಭ ಸಮಾರಂಭವಿದ್ದು ಆಭರಣ ಮಾಡಿಸಿಕೊಳ್ಳುವ ತುರ್ತು ಇಲ್ಲದಿದ್ದರೆ ಇದು ಖಂಡಿತ ಲಾಭದಾಯಕ. ಹಾಗೊಮ್ಮೆ ಹೆಚ್ಚಿನ ಲಾಭ ತರುವಲ್ಲಿ ವಿಫಲವಾದರೂ ಕನಿಷ್ಠ ಹಣದುಬ್ಬರದ ಜೊತೆ ಜೊತೆಯಾಗಿ ನಡೆಯಲು ಚಿನ್ನದ ಮೇಲಿನ ಹೂಡಿಕೆ ಎಲ್ಲಾ ತರದಲ್ಲೂ ಸೂಕ್ತ.
  7. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS): ಇಲ್ಲಿ ಹೂಡಿಕೆ ಮಾಡಲು 60 ವರ್ಷ ಮೇಲ್ಪಟ್ಟ  ನಾಗರಿಕರು ಹೂಡಿಕೆಗೆ ಅರ್ಹರು. ಸ್ವಯಂ ನಿವೃತ್ತಿ ತೆಗೆದುಕೊಂಡ 55-60 ವರ್ಷದ ಒಳಗಿನ ನಾಗರಿಕರೂ ಕೂಡ ಹೂಡಿಕೆ ಮಾಡಬಹುದು. ನಿವೃತ್ತಿ ಹಣ ಪಡೆದ ಪಡೆದ ಒಂದು ತಿಂಗಳಲ್ಲಿ ಹೂಡಿಕೆ ಮಾಡಬೇಕು. ಗರಿಷ್ಟ ಮಿತಿ 15 ಲಕ್ಷ ರೂಪಾಯಿ ಹಣ ಮಾತ್ರ. ಬಡ್ಡಿ ದರ 7.4 ಪ್ರತಿಶತವಿದ್ದು. ಈ ಹೂಡಿಕೆ ಯಾವುದೇ ರೀತಿಯ ರಿಸ್ಕ್ ಹೊಂದಿಲ್ಲ. ಇದು ಭಾರತದ ಕೇಂದ್ರ ಸರಕಾರದ ಅಭಯವನ್ನ ಹೊಂದಿದೆ. 5 ವರ್ಷಗಳ ಲಾಕ್ ಇನ್ ಇರುತ್ತದೆ. ಆಕಸ್ಮಾತ್ ಹೂಡಿಕೆದಾರನ ಮರಣವಾದರೆ ಯಾವುದೇ ರೀತಿಯ ಹಣವನ್ನ ಕಡಿತಗೊಳಿಸದೆ ನಾಮಿನಿಗೆ ಹಣವನ್ನ ನೀಡಲಾಗುವುದು. ಇದನ್ನ ಕೂಡ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಖರೀದಿಸಬಹುದು.

ಕೊನೆಮಾತು: ಇದರ ಜೊತೆಗೆ ಆಯ್ದ ಷೇರುಗಳು, ಮತ್ತು ಮ್ಯೂಚುಯಲ್ ಫಂಡ್ ಗಳಲ್ಲಿ ಕೂಡ ಹೂಡಿಕೆ ಮಾಡುವುದು ಉತ್ತಮ. ಇಂತಹ ಆಯ್ದ ಹೂಡಿಕೆಗಳು ಹತ್ತರಿಂದ ಹನ್ನೆರೆಡು ಪ್ರತಿಶತ ಲಾಭವನ್ನ ತಂದು ಕೊಡುತ್ತವೆ. ಹೀಗಾಗಿ ಇರುವ ಎಲ್ಲಾ ಹಣವನ್ನ ಮೇಲೆ ಹೇಳಿದ ಹೆಚ್ಚು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡದೆ ಕನಿಷ್ಠ 20 ರಿಂದ 30 ಪ್ರತಿಶತ ಹಣವನ್ನ ಇಲ್ಲೂ ಹೂಡಿಕೆ ಮಾಡುವುದು ಉತ್ತಮ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp