
ಸಂಗೀತ ಚಿಕಿತ್ಸೆ (ಸಾಂಕೇತಿಕ ಚಿತ್ರ)
ಮಧುರವಾದ ಸಂಗೀತಕ್ಕೆ ಮನಸೋಲದವರಿಲ್ಲ, ಕರ್ಣಾನಂದಕರ ಸಂಗೀತವನ್ನು ಆಲಿಸಿದಾಗ ಮನಸ್ಸಿನ ದುಃಖ, ದುಗುಡ, ಬೇಸರ ,ಆತಂಕಗಳು, ಕಡಿಮೆಯಾಗುತ್ತವೆ. ನಾವು ನವೋಲ್ಲಾಸವನ್ನು ಪಡೆಯುತ್ತೇವೆ. ಜೋಗುಳ ಹಾಡಿನಿಂದ ಮಕ್ಕಳು ನಿದ್ರೆಗೆ ಜಾರುತ್ತವೆ, ಅಳುವ ಮಕ್ಕಳು ಅಳುವನ್ನು ನಿಲ್ಲಿಸುತ್ತಾರೆ, ಕೃಷ್ಣನ ವೇಣುನಾದಕ್ಕೆ ಗೋಪಿಕಾ ಸ್ತ್ರೀಯರಷ್ಟೇ ಅಲ್ಲ, ಪಶುಪಕ್ಷಿಗಳು ಆಕರ್ಷಿತರಾಗಿದ್ದರು.
ಗೋವುಗಳು ಮೇವನ್ನು ಮರೆತು ಆನಂದಿಸುತ್ತಿದ್ದೆವು ಎಂಬ ವರ್ಣನೆಯನ್ನು ನಾವೆಲ್ಲ ಕೇಳಿದ್ದೇವೆ. ಸಂಗೀತ ಮೈ ಮನಸ್ಸನ್ನು ವಿರಮಿಸುತ್ತದೆ ಎಂಬುದು ಎಲ್ಲರ ಅನುಭವ. ಸಂಗೀತದ ಯಾವ ಪ್ರಕಾರವೇ ಆಗಲಿ, ಶಾಸ್ತ್ರೀಯ, ಅರೆ ಶಾಸ್ತ್ರೀಯ, ಜಾನಪದ, ವ್ಯಕ್ತಿಯ ಅಭಿರುಚಿಗೆ ಅನುಗುಣವಾಗಿ ಪಾಸಿಟಿವ್ ಭಾವನೆಗಳನ್ನು ತರುತ್ತದೆ. ಭಾರತೀಯ ಸಂಗೀತದಲ್ಲಿ ಭಾವ, ಭಾವ- ರಸಾಸ್ವಾದನೆಗೆ ಪ್ರಾಮುಖ್ಯತೆ ಇದೆ ನವರಸಗಳ ನವ ಸ್ಥಾಯಿ ಭಾವಗಳನ್ನು ವಿವರಿಸಲಾಗಿದೆ.
ಸ್ಥಾಯಿಭಾವ | ರಸ |
ರತಿ | ಪ್ರೀತಿ ಶೃಂಗಾರ |
ಹಾಸ್ಯ | ಹಾಸ್ಯ |
ಶೋಕ | ಕರುಣ |
ಕ್ರೋಧ | ರೌದ್ರ |
ಉತ್ಸಾಹ | ವೀರ |
ಭಯ | ಭಯಾನಕ |
ಜಿಗುಪ್ಸೆ | ಭೀಭತ್ಸ |
ವಿಸ್ಮಯ | ಅದ್ಭುತ |
ಭಕ್ತಿ | ಭಕ್ತಿ |
ನವರಸಗಳ ಅಭಿವ್ಯಕ್ತಿಗೆ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸುವ ಪ್ರವೃತ್ತಿ ನೃತ್ಯ-ನಾಟಕ - ಚಲನಚಿತ್ರಗಳಲ್ಲಿ ಕಂಡುಬರುತ್ತದೆ. ಸಂಗೀತವನ್ನು, ಮನರಂಜನೆಗಾಗಿ, ಧಾರ್ಮಿಕ ಆಚರಣೆಗಳಲ್ಲಿ, ಯಾವುದೇ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ನಾವು ಬಳಸುತ್ತೇವೆ. ವೈಯಕ್ತಿಕವಾಗಿ, ಸಾಮೂಹಿಕವಾಗಿ, ಸಂಗೀತ ನಮ್ಮ ಜೀವನದ ಹಾಸುಹೊಕ್ಕಾಗಿದೆ. ನವರಸಗಳ ಆಸ್ವಾದನೆಗೆ ಸಂಗೀತ ಸಹಾಯಮಾಡುತ್ತದೆ. ಭಕ್ತಿಯೋಗದಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ದೇವರನಾಮ, ಕೀರ್ತನೆ, ಭಜನೆಗಳಿಂದ, ದೇವರ ಕೃಪೆಗೆ ಪಾತ್ರರಾಗಬಹುದೆಂಬ ನಂಬಿಕೆ ನಮ್ಮಲ್ಲಿದೆ.
ಸಂಗೀತ ಚಿಕಿತ್ಸೆ ಎಷ್ಟು ಪರಿಣಾಮಕಾರಿ?
ರೋಗಚಿಕಿತ್ಸೆಯಲ್ಲಿ ಮತ್ತು ಆರೋಗ್ಯ ವರ್ಧನೆಯಲ್ಲಿ ಸಂಗೀತವು ಉಪಯುಕ್ತ ಎಂಬುದು ಈಗ ಜಗತ್ತಿನಾದ್ಯಂತ ಜನರ ಅರಿವಿಗೆ ಬಂದಿದೆ. ಅನೇಕ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳಿಗೆ, ಸಂಗೀತ ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಸಂಶೋಧನೆಗಳು ನಮ್ಮ ದೇಶವೂ ಸೇರಿದಂತೆ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಜಪಾನ್, ಇತ್ಯಾದಿ ದೇಶಗಳಲ್ಲಿ ನಡೆದಿವೆ. ಸಂಗೀತ ಚಿಕಿತ್ಸೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಅಮೆರಿಕದಲ್ಲಿ ಸಂಗೀತ ಚಿಕಿತ್ಸೆ ಮಾಡಲು ತರಪೇತಿ ಕೊಡುವ 65 ಕಾಲೇಜುಗಳಿವೆ. ಹೆರಿಗೆಯ ಸಮಯದಲ್ಲಿ, ಶಸ್ತ್ರಕ್ರಿಯೆ ನಡೆಸುವಾಗ, ಚೇತರಿಕೆ ವಾರ್ಡ್ ಗಳಲ್ಲಿ ಸಂಗೀತ ಕೇಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಾನಸಿಕ ಒತ್ತಡ ಕಾಯಿಲೆಗಳಾದ ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಥೈರಾಯಿಡ್, ಕೀಲು ಭಾದೆ, ಕ್ಯಾನ್ಸರ್, ಖಿನ್ನತೆ ,ಆತಂಕ ಹಾಗೂ ಮಿದುಳು ಮನಸ್ಸಿನ ಕಾಯಿಲೆಗಳು ಸ್ಕಿಜೊಫ್ರೇನಿಯಾ, ಬೈಪೋಲಾರ್, ಡೆಮೆನ್ಶಿಯಾ, ಪಾರ್ಕಿನ್ ಸನ್ ಕಾಯಿಲೆ, ಆಟಿಸಂ, ಬುದ್ಧಿಮಾಂದತೆಯ ಚಿಕಿತ್ಸೆಯಲ್ಲೂ ಸಂಗೀತ ಚಿಕಿತ್ಸೆ ಪರಿಣಾಮಕಾರಿ ಎಂದು ಸಾಬೀತಾಗಿದೆ.
ನಮ್ಮ ದೇಶದಲ್ಲಿ ಕೂಡ ಸಂಗೀತ ಚಿಕಿತ್ಸೆಗೆ 2000 ವರ್ಷಗಳ ಇತಿಹಾಸವಿದೆ. ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ರಾಗ ಚಿಕಿತ್ಸೆ ಎಂಬ ಪುರಾತನ ಗ್ರಂಥವಿದೆ. ಕೆಲವು ರೋಗಗಳಿಗೆ ನಿರ್ದಿಷ್ಟ ರಾಗಗಳ ಸಂಗೀತವು ಗುಣಕಾರಿ ಎಂಬ ಉಲ್ಲೇಖವಿದೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯರು ಮತ್ತು ಸಂಗೀತ ವಿದ್ವಾಂಸರು ಸೇರಿ, ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವುದು ಹಾಗೂ 2019ರಲ್ಲಿ ಅಖಿಲ ಭಾರತ ಮಟ್ಟದ ವಿಭಾಗ ಸಂಕೀರ್ಣವು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಅನೇಕ ತೂಕದ ವೈಜ್ಞಾನಿಕ ಪ್ರಬಂಧಗಳು ಮಂಡಿಸಲ್ಪಟ್ಟವು.
ಸಂಗೀತ ಚಿಕಿತ್ಸೆಯ ವಿಧಗಳು:
1. ಮುದ್ರಿತ ಸಂಗೀತವನ್ನು ಕೇಳಿಸುವುದು.
2. ಸಂಗೀತ ಚಿಕಿತ್ಸಕನು ನೇರವಾಗಿ ಹಾಡು ಮತ್ತು ವಾದ್ಯವನ್ನು ನುಡಿಸುವುದು.
3. ರೋಗಿಯು ಸಂಗೀತವನ್ನು ಹಾಡುವಂತೆ/ ವಾದ್ಯವನ್ನು ನುಡಿಸುವಂತೆ ಮಾಡುವುದು.
4. ಸಾಮೂಹಿಕವಾಗಿ ಎಲ್ಲರೂ ಒಟ್ಟಾಗಿ ಹಾಡುವುದು.
ಸಂಗೀತ ಚಿಕಿತ್ಸೆಯ ಅವಧಿ:
ಒಂದು ಸೆಷನ್ ಒಂದು ಗಂಟೆಯ ಅವಧಿ. ವಾರಕ್ಕೆ ಒಂದು ಅಥವಾ ಎರಡು ಅಥವಾ ಮೂರು ಸಲ, ಹತ್ತರಿಂದ ಹದಿನೈದು ಸೆಷನ್ ನಲ್ಲಿ ಚಿಕಿತ್ಸೆ ನೀಡುವುದು. ಅವಧಿ ರೋಗಿಯಿಂದ ರೋಗಿಗೆ, ಕಾಯಿಲೆಯಿಂದ ಕಾಯಿಲೆಗೆ ಭಿನ್ನವಾಗಿರುತ್ತದೆ. ಅದನ್ನು ಸಂಗೀತ ಚಿಕಿತ್ಸೆ ಕೊಡುವವರು ನಿರ್ಧರಿಸುತ್ತಾರೆ. ಬೆಂಗಳೂರಿನ ಮೀರಾ ಸಂಗೀತ ಚಿಕಿತ್ಸಾ ಶಾಲೆಯ, ಡಾ ಮೀನಾಕ್ಷಿ ರವಿ ಅವರು ಈ ಕೆಳಕಂಡ ರಾಗಗಳನ್ನು ಚಿಕಿತ್ಸೆಗೆ ಬಳಸುತ್ತಾರೆ.
ರಾಗ | ಉದ್ದೇಶ |
ಕಾನಡಾ | ಮನಸ್ಸನ್ನು ಶಾಂತಗೊಳಿಸುವುದು, ವಿರಮಿಸುವುದು |
ಸಾಮ | ಆತಂಕವನ್ನು /ಒತ್ತಡವನ್ನು ತಗ್ಗಿಸುವುದು. |
ವಕುಳಾ ಬರಣ | |
ಬಿಂದುಮಾಲಿನಿ | |
ಮಲಯಮಾರುತ |
ಮೋಹನ | ಸಂತೋಷ / ಆನಂದವನ್ನುಂಟು ಮಾಡುವುದು |
ಬೇಹಾಗ್ | |
ಅಭೇರಿ | |
ನಾಟ ಕುರಂಜಿ |
ವಾದ್ಯಗಳು |
ಫ್ಲೂಟ್ - ಕೊಳಲು |
ಪಿಟೀಲು |
ವೀಣಾ ಮೃದಂಗ |
ಸಂಗೀತ ಚಿಕಿತ್ಸೆ ಉಪಯುಕ್ತ, ಪರಿಣಾಮಕಾರಿ. ಔಷಧಿ, ಆಪ್ತಸಮಾಲೋಚನೆ, ಜೊತೆಗೆ ಸಂಗೀತವು ಸೇರಿದರೆ ಆರೋಗ್ಯ ಮರಳಿ ಬರುತ್ತದೆ/ ವೃದ್ಧಿಸುತ್ತದೆ .
ಒತ್ತಡ ನಿವಾರಣೆ /ಭಯ-ಆತಂಕದ ನಿವಾರಣೆ/ ದಣಿವಿನ ನಿವಾರಣೆ
ದಿನವೂ ಕನಿಷ್ಠ 30 ನಿಮಿಷಗಳ ಕಾಲ ನಿಮಗಿಷ್ಟವಾದ ಸಂಗೀತವನ್ನು ಆಲಿಸಿ. ನಿಮಗೆ ಹಾಡಲು ಬಂದರೆ ಹಾಡಿಕೊಳ್ಳಿ, ಭಜನೆ, ಗಾಯನದಲ್ಲಿ ಭಾಗವಹಿಸಿ. ಅಪ್ರಕಟಿತ, ಅದುಮಿಟ್ಟ ಭಾವನೆಗಳು ಹೊರಬಂದು ಮನಸ್ಸು ಹಗುರವಾಗುತ್ತದೆ. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಸಂಗೀತವನ್ನು ಆಲಿಸಲು, ಕಲಿಯಲು ಪ್ರೋತ್ಸಾಹಿಸಿ. ಅವರ ಏಕಾಗ್ರತೆ, ಕಲಿಯುವ ವೇಗ, ನೆನಪಿನ ಶಕ್ತಿ, ಭಾವನೆಗಳ ಮೇಲೆ ಹಿಡಿತ ಹೆಚ್ಚುತ್ತದೆ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ, ಅವರು ಸದಾ ಶಾಂತ ಚಿತ್ತರಾಗಿರುತ್ತಾರೆ. ಅವರಲ್ಲಿ ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ ಸಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ.
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com
+919845605615