
ಕಣ್ಣಿನ ಕೆಳಗಿನ ಊತ
ವಯಸ್ಸಾಗುತ್ತಿದ್ದಂತೆಯೆ ಕಣ್ಣಿನ ಕೆಳಗೆ ಸಣ್ಣಗೆ ಊದಿಕೊಳ್ಳುವುದು (Drooping Eye) ಪ್ರಾರಂಭವಾಗುವುದನ್ನು ಗಮನಿಸಿರಬಹುದು. ಕಣ್ಣಿನ ಸುತ್ತ ಇರುವ ಅಂಗಾಂಶ (Tissue) ಗಳು, ಕಣ್ಣು ರೆಪ್ಪೆಗಳಿಗೆ, ಸಹಾಯಕವಾದ ಸ್ನಾಯುಗಳು ನಿಶ್ಯಕ್ತವಾಗುತ್ತ ಹೋಗುತ್ತವೆ. ಕಣ್ಣಿಗೆ ಬೆಂಬಲವಾಗಿದ್ದ ಸಾಮಾನ್ಯಕೊಬ್ಬು ಕೆಳಕ್ಕೆ ಇಳಿದು. ಕಣ್ಣಿನ ಕೆಳಭಾಗದಲ್ಲಿ ಊದಿಕೊಂಡಂತೆ ಕಾಣುತ್ತವೆ. ಅಲ್ಲಿ ಅಲ್ಪ ಸ್ವಲ್ಪ ದ್ರವ ಪದಾರ್ಥವೂ ಸಂಗ್ರಹವಾಗುವ ಸಾಧ್ಯತೆ ಇರುತ್ತದೆ.
ಕಣ್ಣಿನ ಕೆಳಗಿನ ಊತಕ್ಕೆ ಕಾರಣಗಳು
- ಹವಾಮಾನ ವೈಪರೀತ್ಯದಿಂದ (ಉದಾ: ತುಂಬಾ ಸೆಕೆ, ತೇವಾಂಶ ಇರುವುದು), ಹಾರ್ಮೋನ್ಗಳ ಮಟ್ಟ ಅಥವಾ ಉಪ್ಪು ಹೆಚ್ಚಾಗಿರುವ ಪದಾರ್ಥಗಳ ಸೇವನೆ.
- ಸಾಕಷ್ಟು ನಿದ್ರೆ ಇಲ್ಲದಿರುವಿಕೆ
- ಚರ್ಮದ ಅಲರ್ಜಿ, ಊತವು ಕೆಂಪು ಬಣ್ಣದಿಂದಿದ್ದು ಕಡಿತ ಉಂಟಾಗುತ್ತಿದ್ದರೆ ಅಲರ್ಜಿ ಇರಬಹುದು.
- ಆನುವಂಶಿಕ
- ಈ ಊತವು ಗಂಭೀರವಾಗಿದ್ದು ಹೆಚ್ಚಾಗುತ್ತಿದ್ದರೆ, ಊದಿದ ಭಾಗವು ಕೆಂಪಾಗಿ ಕಡಿತ ಉಂಟಾದರೆ ಅಥವಾ ನೋವಿದ್ದರೆ, ನಿಮ್ಮ ಶರೀರದ ಬೇರೆ ಭಾಗಗಳಿಗೆ ಉದಾ:- ನಿಮ್ಮ ಕಾಲುಗಳಲ್ಲಿ ಏನಾದರೂ ಊತ ಕಂಡುಬಂದರೆ...ಇಂಥಾ ಊತ ಉಂಟಾಗಲು ವ್ಯಕ್ತಿಯ ಕಿಡ್ನಿ ಅಥವಾ ಥೈರಾಯಿಡ್ ಸಮಸ್ಯೆ ಇರಬಹುದೇ, ಸೋಂಕಿಗೆ ಒಳಗಾಗಿರಬಹುದೇ ಅಥವಾ ಅಲರ್ಜಿ ಏನಾದರೂ ಆಗಿದೆಯೇ ಎಂಬ ತಪಾಸಣೆಯನ್ನು ವೈದ್ಯರು ಮಾಡಿ ಸೂಕ್ತ ಸಲಹೆ ನೀಡುತ್ತಾರೆ. ಮುಖದ ಅಂದವನ್ನೇ ಇದು ಕಸಿದುಬಿಡುವುದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸುವುದು ಒಳ್ಳೆಯದು.
ನೀವೇ ಮಾಡಿಕೊಳ್ಳಬಹುದಾದ ಚಿಕಿತ್ಸೆ
- ಶುದ್ಧವಾದ, ತೆಳುವಾದ ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ, ಕಣ್ಣಿನ ಕೆಳಗಿನ ಭಾಗಕ್ಕೆ ಮೃದುವಾಗಿ ಒತ್ತಿ ಕೆಲವು ನಿಮಿಷಗಳ ಕಾಲ ಹಿಡಿದುಕೊಳ್ಳಿ.
- ಬಹುಪಾಲು ಜನ ವಯಸ್ಕರಿಗೆ ಏಳರಿಂದ ಎಂಟು ಗಂಟೆಗಳ ನಿದ್ರೆ ಅತ್ಯಗತ್ಯವಾಗುತ್ತದೆ. ಅಷ್ಟು ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿದ್ರಾಹೀನತೆಯಿದ್ದರೆ ಕಾಲಕ್ರಮೇಣ ಶರೀರದ ಇತರ ತೊಂದರೆಗಳಿಗೂ ಕಾರಣವಾಗುತ್ತದೆ.
- ನಿಮ್ಮ ತಲೆಯನ್ನು ಸ್ವಲ್ಪ ಎತ್ತರದಲ್ಲಿರಿಸಿಕೊಂಡು ನಿದ್ರಿಸಿ. ಇನ್ನೊಂದು ದಿಂಬನ್ನು ತಲೆಯ ಕೆಳಗೆ ಇರಿಸಿಕೊಳ್ಳಿ. ಇದರಿಂದ ನೀವು ಮಲಗಿದ್ದಾಗ ಕಣ್ಣಿನ ಕೆಳಗೆ ದ್ರವಪದಾರ್ಥ ಸಂಗ್ರಹವಾಗಿ ಜೋಲು ಬೀಳುವುದು ಕಡಿಮೆಯಾಗುತ್ತದೆ.
- ಅಲರ್ಜಿಯಾಗದಂತೆ ನೋಡಿಕೊಳ್ಳಿ. ಅಲರ್ಜಿಯಾದಾಗ ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ವೈದ್ಯರ ಶಿಫಾರಸಿನಂತೆ ಸೇವಿಸಿ
- ಕೆಲವು ವೇಳೆ ಶೃಂಗಾರ ಸಾಧನಗಳನ್ನು ಬಳಸುವುದರಿಂದ ಈ ರೀತಿ ಆಗುವುದನ್ನು ಗಮನಿಸಿ. ಹೇರ್ಡೈಗಳು, ಕೆಲವು ಬಗೆಯ ಸಾಬೂನುಗಳು, ಪ್ರಸಾಧನಗಳನ್ನು ಬಳಸಿದಾಗ ಇಂಥಾ ತೊಂದರೆ ಕಾಣಿಸಿದರೆ ಜಾಗ್ರತೆ ವಹಿಸಿರಿ.
- ಕಣ್ಣಿನ ಕೆಳಗಿನ ಈ ನೆರಿಗೆಯಿಂದಾಗಿ ಮುಖದ ಅಂದವೇ ಕೆಡುವ, ವ್ಯಕ್ತಿಗಳು ಖಿನ್ನರಾಗಿ ಬಿಡುವ ಸಂದರ್ಭ ಇರುತ್ತದೆ.
ನೆರಿಗೆಯ ಶಸ್ತ್ರಚಿಕಿತ್ಸೆ: ಕಣ್ಣಿನ ಕೆಳ ಭಾಗದ ಈ ನೆರಿಗೆ (wrinkles) ಯನ್ನು ಚರ್ಮ ವೈದ್ಯರು ಚಿಕಿತ್ಸೆ ಮಾಡಬಲ್ಲರು. ಲೇಸರ್ ರೀರ್ಸೆಸಿಂಗ್ ಅಥವಾಕೆಮಿಕಲ್ ಪೀಲಿಂಗ್ ಮೂಲಕ ಕಣ್ಣಿನ ಕೆಳಗಿನ ಜೋತುಬಿದ್ದ ಚರ್ಮವನ್ನು ಬಿಗಿಗೊಳಿಸುವ ಪ್ರಯತ್ನ ಮಾಡುತ್ತಾರೆ. ಅಲ್ಲಿ ಚರ್ಮದ ಬಣ್ಣ ವ್ಯತ್ಯಯವಾಗುವ, ಮೊದಲಿಗಿಂತ ಸುಧಾರಿಸಿರುವುದು ಕಾಣುತ್ತದೆ. ಕಣ್ಣಿನ ಕೆಳಗಿನ ಈ ನೆರಿಗೆಯ ಶಸ್ತ್ರಚಿಕಿತ್ಸೆ (blepharoplasty)ಯನ್ನೂ ಮಾಡುತ್ತಾರೆ. ಆ ಪ್ರದೇಶದಲ್ಲಿ ಸಂಗ್ರಹವಾಗಿರುವ ಹೆಚ್ಚಿನ ಕೊಬ್ಬನ್ನು ಜೋತಾಡುತ್ತಿರುವ ಚರ್ಮವನ್ನೂ ತೆಗೆಯುತ್ತಾರೆ. ಇಂಥಾ ಶಸ್ತ್ರಚಿಕಿತ್ಸೆಯಿಂದ ಮೇಲಿನ ಕಣ್ಣಿನ ರೆಪ್ಪೆಯಲ್ಲಿರಬಹುದಾದ ಊತಕ್ಕೆ, ನೆರಿಗೆಯ ಚಿಕಿತ್ಸೆ, ದೃಷ್ಟಿಗೆ ತೊಂದರೆಯಾಗುತ್ತಿರಬಹುದಾದ ಹೆಚ್ಚಿನ ಚಿಕಿತ್ಸೆ ಮಾಡುತ್ತಾರೆ.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477