ಹೊಸ ವೈಖರಿ, ಇನ್ನು ಮುಂದೆ ಬಹುತೇಕ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಓಲೈಸುವುದಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಒಂದೇ ವೇದಿಕೆ!
ಅಂತಃಪುರದ ಸುದ್ದಿಗಳು- ಸ್ವಾತಿ ಚಂದ್ರಶೇಖರ್
ಅರೇ ಇದೇನಿದು ಇಷ್ಟು ತೀಕ್ಷ್ಣವಾದ ತಲೆಬರಹ ಅಂದು ಕೊಂಡರ...? ಇಷ್ಟೇ ಮೊನಚಾಗಿ ಹೇಳಿದ್ದು ಉತ್ತರ ಪ್ರದೇಶದ, ಪ್ರಾದೇಶಿಕ ಪಕ್ಷದ ಓರ್ವ ಧೀಮಂತ ನಾಯಕ.
Published: 12th January 2022 04:36 PM | Last Updated: 14th January 2022 04:57 PM | A+A A-

ಅಖಿಲೇಶ್ ಯಾದವ್
ಅರೇ ಇದೇನಿದು ಇಷ್ಟು ತೀಕ್ಷ್ಣವಾದ ತಲೆಬರಹ ಅಂದು ಕೊಂಡರ...? ಇಷ್ಟೇ ಮೊನಚಾಗಿ ಹೇಳಿದ್ದು ಉತ್ತರ ಪ್ರದೇಶದ, ಪ್ರಾದೇಶಿಕ ಪಕ್ಷದ ಓರ್ವ ಧೀಮಂತ ನಾಯಕ. ಇನ್ನು ಮುಂದೆ ಸ.ಪ ಮುಸ್ಲಿಂರನ್ನು ಓಲೈಸಲು ಅವರ ಪರ ಬಹಿರಂಗವಾಗಿ ನಿಲ್ಲಲು ಯತ್ನಿಸುವುದಿಲ್ಲ. ಏನಿದ್ದರೂ ಸಾಫ್ ಔರ್ ಸೇಫ್ ಗೇಮ್ ಅಷ್ಟೇ.
ಅದೇ ರೀತಿ ತನ್ನ ಚುನಾವಣೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವ ಎಸ್ಪಿ, ಇದೇ 2012 ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 73 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರಲ್ಲಿ 40 ಅಭ್ಯರ್ಥಿಗಳು ಗೆದ್ದಿದ್ದರು. ಇನ್ನು ಬೇರೆ ಪಕ್ಷದ ಮುಸ್ಲಿಂ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿದರೆ ಒಟ್ಟು 64 ಜನ ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದು ಸ್ವಾತಂತ್ರ್ಯ ನಂತರದಲ್ಲಿ ಇದೇ ಮೊದಲ ಬಾರಿ.
ಉತ್ತರ ಪ್ರದೇಶ ಯಾವ ರಾಜಕೀಯ ಪಕ್ಷವೂ ಕಡೆಗಣಿಸಲು ಆಗದ ಒಳಸುಳಿ, 2011 ರ ಅಂಕಿ ಅಂಶಗಳ ಪ್ರಕಾರ 20 ಕೋಟಿ ಜನಸಂಖ್ಯೆಯಲ್ಲಿ ಸುಮಾರು 4 ಕೋಟಿ ಅಂದರೆ ಶೇಕಡ 20 ರಷ್ಟು ಜನ ಮುಸ್ಲಿಂ ಮಂದಿ ಇದ್ದಾರೆ. ಒಟ್ಟು ಇರುವ 403 ಕ್ಷೇತ್ರದಲ್ಲಿ 82 ಅಂದರೆ ಸುಮಾರು ಶೇ.20 ರಷ್ಟು ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಒಂದರಲ್ಲಿ ಮೂರನೇ ಭಾಗದಷ್ಟು ಪ್ರಾಬಲ್ಯ ಹೊಂದಿದ್ದಾರೆ. ಇನ್ನು ಮತ್ತೊಂದು ವಿಶೇಷತೆ, 2017ರಲ್ಲಿ ಮುಸ್ಲಿಂ ಪ್ರಾಬಲ್ಯ ಹೊಂದಿರುವ 82 ಕ್ಷೇತ್ರಗಳಲ್ಲಿ 62 ಬಿಜೆಪಿಯ ಪಾಲಾಗಿತ್ತು. ಉಳಿದ 20 ರಲ್ಲಿ ಸಮಜವಾದಿ ಪಕ್ಷ 17ನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆಶ್ಚರ್ಯ ಎಂದರೆ 403 ಕ್ಷೇತ್ರದಲ್ಲಿ ಓರ್ವ ಮುಸ್ಲಿಂ ಅಭ್ಯರ್ಥಿಯನ್ನೂ ಬಿಜೆಪಿ ಕಣಕ್ಕೆ ಇಳಿಸಿರಲಿಲ್ಲ. ಮುಸ್ಲಿಂ ಮಹಿಳೆಯರ ಮತವನ್ನು ತನ್ನತ್ತ ಸೆಳೆದ ಬಿಜೆಪಿಯ ತಂತ್ರವನ್ನು ಹಿಡಿಯಲು ವಿಪಕ್ಷಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಇನ್ನು ಈ ಬಾರಿ 82 ಕ್ಷೇತ್ರಗಳನ್ನು ಬಹಿರಂಗವಾಗಿ ಓಲೈಸದೆ ದೇವಸ್ಥಾನ ಮತ್ತು ಹಿಂದೂ ಮತಗಳಿಗೆ ಜೋತು ಬಿದ್ದ ಸಮಾಜವಾದಿ ಪಕ್ಷವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಇನ್ನು ಸದ್ಯಕ್ಕೆ ಕಾಂಗ್ರೆಸ್ಸ್ ನಿಂದ ಸಮಾಜವಾದಿ ಪಕ್ಷಕ್ಕೆ ಬಂದ ಕಾಂಗ್ರೆಸ್ಸ್ ನ ಮುಸ್ಲಿಂ ಸ್ಟಾಲ್ವರ್ಟ್ ಮಸೂದ್ರನ್ನು ಕಣಕ್ಕೆ ಇಳಿಸದೆ ಮುಸ್ಲಿಂ ಯುವಕರನ್ನು ಒಟ್ಟು ಗೂಡಿಸುವಂತೆ ಸ.ಪ ಆದೇಶಿಸಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ಹಿಂದೂ ಮುಸ್ಲಿಂ ವಿಚಾರಗಳಿಗೆ ಚುನಾವಣೆ ಸಾಗದಂತೆ ಅಭಿವೃದ್ಧಿ ವಿಚಾರಗಳನ್ನೇ ಜನರ ಮುಂದೆ ಇಡಲು ಶತಾಯಗತಾಯ ಪ್ರಯತ್ನಿಸುತ್ತಿರುವ ಸ.ಪ ಒಂದು ವೇಳೆ 180 ರ ಗಡಿ ದಾಟಿದರೆ, ಬಹುತೇಕ ಪ್ರಾದೇಶಿಕ ಪಕ್ಷಗಳು ಮುಂದೆ ಇದೇ ಅಸ್ತ್ರವನ್ನು ಉಪಯೋಗಿಸುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಹಿಂದೂ ಓಲೈಕೆ ಪಕ್ಷ, ಕಾಂಗ್ರೆಸ್ಸ್ ಮುಸ್ಲಿಂ ಓಲೈಸುವ ಪಕ್ಷ ಎಂದು ಸದ್ಯಕ್ಕೆ ಸಾರುವ ಬಿಜೆಪಿಗೆ ಇದೂ ಒಂದು ಹೊಡೆತವೇ...
ಅಂದು ಬ್ರಾಹ್ಮಣರನ್ನು ಸಲಹಲಿಲ್ಲ ಇಂದು ಮರುಗಿದರೆ ಏನು ಪ್ರಯೋಜನ?
ಇಡೀ ಉತ್ತರ ಪ್ರದೇಶದ 20 ಕೋಟಿಗೂ ಹೆಚ್ಚು ಜನರಲ್ಲಿ ಶೇ.19 ರಷ್ಟು ಮೇಲ್ಜಾತಿ ಜನರು ಇರುತ್ತಾರೆ. ಅದರಲ್ಲಿ ಶೇ.12 ರಷ್ಟು ಬ್ರಾಹ್ಮಣರೇ, ಶೇ.70 ರಷ್ಟು ಬ್ರಾಹ್ಮಣ ಮತಗಳು 2017 ರಲ್ಲಿ ಬಿಜೆಪಿಗೆ ಬಂದಿತ್ತು. ಇನ್ನು 2007 ರಲ್ಲಿ ಇದೆ ಬ್ರಾಹ್ಮಣ ಮತಗಳು ಶೇ.50 ರಷ್ಟು ಹೋಗಿದ್ದು ಮಾಯಾವತಿಗೆ. ಇತಿಹಾಸದಲ್ಲೇ ಬ್ರಾಹ್ಮಣ ಮತ್ತು ದಲಿತ ಸಮುದಾಯ ಒಂದಾಗಿದ್ದು ಉತ್ತರ ಪ್ರದೇಶದ 2007 ರ ಚುನಾವಣೆಗೆ. ಬ್ರಾಹ್ಮಣ ದಲಿತ ಸಮುದಾಯದ ಸಂಘರ್ಷ ಅಧಿಕಾರಕ್ಕೆ ಅಂತ್ಯಗೊಂಡು ಮಾಯಾವತಿಯನ್ನು ಅಧಿಕಾರಕ್ಕೆ ತಂದಿದ್ದರು. ಈಗ ಅದೇ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಸಮಾಜವಾದಿ ಪಕ್ಷ ಸುಮಾರು ಒಂದು ವರ್ಷದಿಂದಲೇ ತಯಾರಿ ನಡೆಸಿದೆ. ಆದರೆ ಇದರಲ್ಲಿ ಬಿಜೆಪಿ ಹಿಂದೆ ಉಳಿದಿದ್ದು ಮಾತ್ರ ಯಾಕೆ ಎಂಬುದೇ ಪ್ರಶ್ನೆ.
ಠಾಕೂರ್ ಸಮುದಾಯಕ್ಕೆ ಸೇರಿರುವ ಯೋಗಿ ಆದಿತ್ಯನಾಥ್ ಬಿಜೆಪಿ ನಾಯಕರು ಎಷ್ಟೇ ಹೇಳಿದರೂ ಬ್ರಾಹ್ಮಣರ ವಿರುದ್ಧವೇ ಇದ್ದರು, ಠಾಕೂರ್ ಗಳನ್ನ ಅಕ್ಕಪಕ್ಕದಲ್ಲಿ ಇರಿಸಿಕೊಂಡ ಯೋಗಿಗೆ ಬ್ರಾಹ್ಮಣ ಸಮುದಾಯದ ಆಕ್ರೋಶ ಕಾಣಲಿಲ್ಲ, ಈಗ ಸಮಾಜವಾದಿ ಪಕ್ಷದ ಜೊತೆ ನಿಂತಿರುವ ಕೆಲ ಬ್ರಾಹ್ಮಣ ನಾಯಕರನ್ನು ಬಿಜೆಪಿ ತೆಕ್ಕೆಗೆ ಬೀಳಿಸಲು ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಬ್ರಾಹ್ಮಣರ ಸೆಲ್ ಮಾಡಿದ್ದಾರೆ ಆದರೆ "ಇದು ಚುನಾವಣೆ ಮುನ್ನ ಮತ ಸೆಳೆಯಲು ಮಾಡಿರುವ ತಂತ್ರ ಅಷ್ಟೇ ಇದರಲ್ಲಿ ನಮಗೆ ನಂಬಿಕೆ ಇಲ್ಲ" ಎಂದ ಬಹುತೇಕ ಬ್ರಾಹ್ಮಣರು ಯಾದವರ ಜೊತೆ ಹೋಗುವ ಮೂಲಕ ಮತ್ತೇ ಇತಿಹಾಸ ರಚಿಸುವರೇ? ಕಾದು ನೋಡೋಣ
ವಾರಾಣಾಸಿ, ಅಯೋಧ್ಯೆ, ಬೃಂದಾವನದಲ್ಲಿರುವ ಬ್ರಾಹ್ಮಣರು ಮೋದಿಗೆ ಜೈ ಎನ್ನಬಹುದು, ನೆನಪಿರಲಿ ಕೇವಲ ಈ 3 ಭಾಗಗಳನ್ನು ಮುಂದಿಟ್ಟುಕೊಂಡು, ಬ್ರಾಹ್ಮಣರು ಬಿಜೆಪಿ ಪರವಾಗಿದ್ದಾರೆ ಎಂದು ಸಾರುತ್ತಿದ್ದಾರೆ ರಾಷ್ಟ್ರೀಯ ಮಾಧ್ಯಮಗಳ ವಿಶ್ಲೇಷಣೆ ಈ ಬಾರಿ ಬಹುಶಃ ಸತ್ಯಕ್ಕೆ ದೂರವಾದದ್ದು ಎನಿಸುತ್ತದೆ.
ಕೋವಿಡ್ ಕಾರಣದಿಂದ ಆದರೂ ರೆಸ್ಟ್ ಸಿಗುತ್ತಿದೆ ಎಂದ ಪಿಎಂ
ಕೋವಿಡ್ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಯೋಗ ಕ್ಷೇಮ ವಿಚಾರಿಸಿಕೊಳ್ಳಲು ಕರೆ ಮಾಡಿದ ಪ್ರಧಾನಿ ಸುಮಾರು 4 ನಿಮಿಷಗಳ ಕಾಲ ಮಾತಾಡಿದರು. ಕೋವಿಡ್ ಹೆಚ್ಚಾಗುತ್ತಿರುವ ಮತ್ತು ರಾಜ್ಯ ಸರ್ಕಾರ ಅದಕ್ಕೆ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಪಿಎಂ ಜೊತೆ ಮಾತಾಡಿದ ಸಿಎo, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದನ್ನು ನೋಡೇ ಇದ್ದೀರಿ. ಕರ್ನಾಟಕದಲ್ಲಿ ಜನವರಿ19 ಕ್ಕೆ ಹೊಸ ಸಿಎಂ ಎಂದು ಹಬ್ಬಿಸಿದ ಗುಲ್ಲು ನಿಂತಂತಿದೆ. ಮಂಡಿ ನೋವಿನಿಂದ ಬಳಲುತ್ತಿರುವ ಬೊಮ್ಮಾಯಿ ಅವರಿಗೆ ತಮ್ಮ ನೋವನ್ನು ಪರಿಹರಿಸಿಕೊಳ್ಳಲೂ ಇದೆ ಸೂಕ್ತ ಸಮಯ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಕನಿಷ್ಠ 15 -20 ದಿನ ಬೆಡ್ ರೆಸ್ಟ್ ಬೇಕು ಎಂದು ವೈದ್ಯರು ಹೇಳಿದಾಗ, ಬೊಮ್ಮಾಯಿ, "ಸಾಧ್ಯವೇ ಇಲ್ಲ, ಕುಂಟುತ್ತಲೇ ಅವಧಿಯನ್ನು ಮುಗಿಸುತ್ತೇನೆ, ಆದರೆ ಖುರ್ಚಿ ಬಿಟ್ಟು ವಿಶ್ರಮಿಸುವುದಿಲ್ಲ" ಎಂದಿದ್ದರಂತೆ. ಅದೇ ಸಂದರ್ಭದಲ್ಲಿ ಏನು ಮಾಡುವುದು ಎಂದು ದಿಕ್ಕು ತೋಚದಂತಾದಗ ಅವರ ಕೆಲ ಆಪ್ತ ರಾಜಕೀಯ ಸ್ನೇಹಿತರು ಕೋಲಾರ ಮೂಲದ ನಾಟಿ ವೈದ್ಯ ಲೋಕೇಶ್ ರನ್ನು ಫಿಸಿಯೋಥೆರೆಪಿ ಮಾಡಲು ನೇಮಿಸಿದ್ದರು. ಆದರೆ ಈಗ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಅದೇ ಎಂಬಂತೆ, ಕೋವಿಡ್ ಕಾರಣ ಸದ್ಯಕ್ಕೆ ಮನೆಯಿಂದ ಹೊರ ಬಾರದ ಬೊಮ್ಮಾಯಿಗೆ ತಮ್ಮ ನೋವನ್ನು ಪರಿಹರಿಸಿಕೊಳ್ಳಲು ಇದೊಂದೇ ಉತ್ತಮ ಅವಕಾಶ ಸಿಕ್ಕಿದೆ. ಇದನ್ನೇ ಪ್ರಧಾನಿಯೂ ಪರೋಕ್ಷವಾಗಿ ಹೇಳಿದಂತಿದೆ. ಬೇಗ ಗುಣಮುಖರಾಗಲಿ ಎಂದು ನಾವು ಆಶಿಸೋಣ.
ಸ್ವಾತಿ ಚಂದ್ರಶೇಖರ್
swathichandrashekar92@gmail.com