ಯಾವ ಸಂಸ್ಥೆ ಷೇರು ಕೊಳ್ಳಲಿ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ!

ಹಣಕ್ಲಾಸು-291

-ರಂಗಸ್ವಾಮಿ ಮೂಕನಹಳ್ಳಿ

Published: 13th January 2022 01:13 AM  |   Last Updated: 13th January 2022 02:01 PM   |  A+A-


Hanaclassu: Investment

ಹೂಡಿಕೆ (ಸಾಂಕೇತಿಕ ಚಿತ್ರ)

ಯಾವ ಸಂಸ್ಥೆ ಷೇರು ಕೊಳ್ಳಲಿ ಎನ್ನುವುದು ನಿತ್ಯವೂ ಬೆಳಿಗ್ಗೆ ಎದ್ದು ಏನು ತಿಂಡಿ ಮಾಡಲಿ? ಎಂದು ಗೃಹಿಣಿಯರು ಕೇಳುವ ಪ್ರಶ್ನೆ ಇದ್ದಹಾಗೆ. ಮನೆಯಲ್ಲಿ ಒಬ್ಬಬ್ಬರಿಗೆ ಒಂದೊಂದು ತಿಂಡಿ ಇಷ್ಟ , ಹಾಗೆಯೇ ಪ್ರತಿ ಸಂಸ್ಥೆಯ ಷೇರುಗಳಲ್ಲಿ ಒಂದು ಸರಿ ಎನಿಸಿದರೆ, ಇನ್ನೊಂದು ತಪ್ಪು ಎನ್ನಿಸುತ್ತದೆ. ಪರಿಪೂರ್ಣವಾಗಿ ಮನಸ್ಸಿಗೆ ಒಪ್ಪುವ ಷೇರು ಹುಡುಕುವುದು ಅತ್ಯಂತ ಕಠಿಣದ ಕೆಲಸ. 

ಕೆಲವೊಮ್ಮೆ ಜನ ಸಾಮಾನ್ಯರು ಹೆಚ್ಚು ಚಿಂತಿಸದೆ ಹೂಡಿಕೆ ಮಾಡಿರುತ್ತಾರೆ. ಅದು ಅವರು ಯೋಚಿಸಿದಕ್ಕಿಂತ ನೂರಾರು ಪಟ್ಟು ಲಾಭವನ್ನ ಕೂಡ ತಂದು ಕೊಟ್ಟಿರುತ್ತದೆ. ಅದು ಅದೃಷ್ಟ ಎನ್ನಬಹುದು. ಪ್ರತಿ ಬಾರಿಯೂ ಅದೃಷ್ಟಶಾಲಿಯಾಗಲು ಸಾಧ್ಯವಿಲ್ಲ. ಹೀಗಾಗಿ ಯಾವ ಸಂಸ್ಥೆಯ ಷೇರು ಕೊಳ್ಳಲಿ ಎನ್ನುವುದಕ್ಕೆ ಒಂದಷ್ಟು ಅಧ್ಯಯನದ ಅವಶ್ಯಕತೆಯಿದೆ.

ಎಲ್ಲಕ್ಕೂ ಮೊದಲು ಷೇರು ಎಂದರೇನು? ಎನ್ನುವುದನ್ನ ತಿಳಿದುಕೊಳ್ಳೋಣ. ಷೇರು ಎನ್ನುವುದು ಕೇವಲ ಒಂದು ಸರ್ಟಿಫಿಕೇಟ್ ಅಲ್ಲ, ನೀವು ಹಣ ಹೂಡಿಕೆ ಮಾಡಿರುವುದಕ್ಕೆ ನೀಡಿರುವ ಒಂದು ರಸೀತಿಯೂ ಅಲ್ಲ. ಷೇರು ಎಂದರೆ ಯಾವ ಸಂಸ್ಥೆಗೆ ಸಂಬಧಿಸಿರುತ್ತದೆ ಆ ಸಂಸ್ಥೆಯ ನಿಗದಿತ ಮೌಲ್ಯದ ಪಾಲುದಾರಿಕೆ ಎಂದರ್ಥ. ಅಂದರೆ ಸಂಸ್ಥೆಯ ಒಟ್ಟು ಮೌಲ್ಯ ಸಾವಿರ ರೂಪಾಯಿ ಇದ್ದು, ನಿಮ್ಮ ಬಳಿ ಸಂಸ್ಥೆಯ ನೂರು ರೂಪಾಯಿ ಷೇರು ಇದ್ದರೆ, ಅಲ್ಲಿಗೆ ನೀವು ಆ ಸಂಸ್ಥೆಯಲ್ಲಿ 10 ಪ್ರತಿಶತ ಪಾಲುದಾರಿಕೆ ಹೊಂದಿದ್ದೀರಿ ಎಂದರ್ಥ. ಅಷ್ಟು ಹಣದ ಒಡೆತನ ನಿಮಗೆ ಸೇರಿದ್ದು. ದಿನ ನಿತ್ಯದ ಆಡಳಿತದಲ್ಲಿ, ಕೆಲಸ ಕಾರ್ಯದಲ್ಲಿ ನೀವು ಪಾಲ್ಗೊಳ್ಳುವಿರಾ ಅಥವಾ ಇಲ್ಲವೇ? ಎನ್ನುವುದು ಬೇರೆ ವಿಚಾರ. ಒಟ್ಟಿನಲ್ಲಿ ನಿಗದಿತ ಮೌಲ್ಯದ ಪಾಲುದಾರಿಕೆ ನಿಮ್ಮದು ಎನ್ನುವುದನ್ನ ಸೂಚಿಸುವ ಪತ್ರವನ್ನ ಷೇರು ಎನ್ನಲು ಅಡ್ಡಿಯಿಲ್ಲ.

ಯಾವ ಸಂಸ್ಥೆಯ ಷೇರು ಕೊಳ್ಳುವುದು ಎನ್ನುವುದು ಎಲ್ಲರಲ್ಲೂ ಮೂಡುವ ಸಹಜ ಪ್ರಶ್ನೆ. ಇದಕ್ಕೆ ಉತ್ತರ ಬಹಳ ಸರಳವಾಗಿದಿದ್ದರೆ ಮುಕ್ಕಾಲು ಪಾಲು ಜನರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನ ಮಾಡಿರುತ್ತಿದ್ದರು. ಇದಕ್ಕೆ ಉತ್ತರ ಸರಳವಲ್ಲ, ಹಾಗೆಂದು ಇದೇನು ಕಬ್ಬಿಣದ ಕಡಲೆಯೂ ಅಲ್ಲ. ಮೊದಲೇ ಹೇಳಿದಂತೆ ಒಂದಷ್ಟು ಅಧ್ಯಯನ ಇಲ್ಲಿನ ಅನೇಕ ಸಂಶಯಗಳಿಗೆ ಉತ್ತರವನ್ನ ನೀಡುತ್ತದೆ.

ಮುಂಬರುವ ದಿನಗಳಲ್ಲಿ ನಾವು ಹೂಡಿದ ಹಣ ದುಪ್ಪಟ್ಟು , ಮೂರ್ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಹಣವಾಗಿ ಮಾರ್ಪಾಟಾಗುತ್ತದೆಯೇ? ಎನ್ನುವುದು ಎಲ್ಲರೂ ಒಂದು ಸಂಸ್ಥೆಯಲ್ಲಿ ನೋಡುವ ಪ್ರಮುಖ ಅಂಶ. ಸಾಮಾನ್ಯ ಹೂಡಿಕೆದಾರನಿಂದ ಹಿಡಿದು, ವೃತ್ತಿಪರ ಹೂಡಿಕೆದಾರರವರೆಗೆ ಎಲ್ಲರೂ ನೋಡುವುದು ಇದನ್ನೇ, ಇದನ್ನ ನಾವು ಮ್ಯಾಕ್ರೋ ಅಥವಾ ಸ್ಥೂಲ ಚಿತ್ರಣ ಎನ್ನಬಹುದು. ಇಂತಹ ಸಂಸ್ಥೆ ಬೆಳೆಯುತ್ತದೆ, ಇಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಸಾಮಾನ್ಯ ಹೂಡಿಕೆದಾರನಿಗೆ ತಿಳಿಯುವುದು ಬಹಳ ಕಷ್ಟ. ವೃತ್ತಿಪರ ಹೂಡಿಕೆದಾರರು ಕೂಡ ಬಹಳಷ್ಟು ಬಾರಿ ಎಡವುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬಾರದು. ಹೀಗಾಗಿ ಇದು ತೀರಾ ಸಂಕೀರ್ಣ ನಿರ್ಧಾರ. ಜಗತ್ತಿನ ಕೆಲವೇ ಕೆಲವು ಜನರಿಗೆ ಇದನ್ನ ವಿಮರ್ಶಿಸುವ ಮತ್ತು ಅದರ ಆಧಾರದ ಮೇಲೆ ಹೂಡಿಕೆ ಮಾಡುವ ತಿಳುವಳಿಕೆ ಇರುತ್ತದೆ.

ಹಾಗಾದರೆ ಜನ ಸಾಮಾನ್ಯ ಅಥವಾ ಸಾಮಾನ್ಯ ಹೂಡಿಕೆದಾರನ ಕಥೆಯೇನು? ನಮಗೆ ಉತ್ತಮ ಸಂಸ್ಥೆಯ ಷೇರು ಗುರುತಿಸಲು ಮತ್ತು ಅಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಅದಕ್ಕೆ ನಾವು ಮೈಕ್ರೋ ಅಥವಾ ಅತಿ ಸೂಕ್ಷ್ಮ ವಿಷಯಗಳನ್ನ, ಮಾಹಿತಿಗಳನ್ನ ಕಲೆಹಾಕಬೇಕಾಗುತ್ತದೆ, ಹೀಗೆ ಒಗ್ಗೂಡಿಸಿದ ಮಾಹಿತಿಯನ್ನ ಪರಾಮರ್ಶೆಗೆ ಒಡ್ಡಬೇಕಾಗುತ್ತದೆ. ಹೀಗೆ ಒಗ್ಗೂಡಿಸಿದ ಮಾಹಿತಿಯಲ್ಲಿ 70% ಪ್ರತಿಶತಕ್ಕೂ ಹೆಚ್ಚು ಧನಾತ್ಮಕವಾಗಿದೆ ಎನ್ನಿಸಿದರೆ ಆಗ ಆ ಸಂಸ್ಥೆಯ ಷೇರುಗಳು ಕೊಳ್ಳಲು ಯೋಗ್ಯ ಎನ್ನಬಹುದು.

ಇಂತಹ ಸೂಕ್ಷ್ಮವಾಗಿ ವಿಶ್ಲೇಷಣೆಗೆ ಒಳಪಡಿಸಬೇಕಾದ ಅಂಶಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

  1. ಷೇರು ಕೊಳ್ಳಲು ಇಚ್ಛಿಸಿದ ಸಂಸ್ಥೆಯ ಉದ್ದೇಶ ತಿಳಿದುಕೊಳ್ಳಬೇಕು: ನಾವು ಯಾವ ಸಂಸ್ಥೆಯ ಷೇರು ಕೊಳ್ಳಲು ಬಯಸುತ್ತೇವೆ ಆ ಸಂಸ್ಥೆಯ ಅಲ್ಪಕಾಲಿಕ ಉದ್ದೇಶ ಮತ್ತು ದೀರ್ಘಕಾಲಿಕ ಉದ್ದೇಶ ಎರಡನ್ನೂ ನಾವು ತಿಳಿದುಕೊಳ್ಳಬೇಕು. ಸಂಸ್ಥೆಯ ಉದ್ದೇಶ ಘನವಾಗಿದ್ದರೆ ಮತ್ತು ದೀರ್ಘಕಾಲದಲ್ಲಿ ಮಾರುಕಟ್ಟೆಯ ಅಧಿಪತ್ಯವನ್ನ ಹೊಂದುವ ಇಚ್ಛೆಯುಳ್ಳದ್ದಾಗಿದ್ದರೆ ಮತ್ತು ಅಲ್ಪಕಾಲದಲ್ಲಿ ಅಂತಹ ಲಾಭ ತಂದುಕೊಡದಿದ್ದರೂ ಅಲ್ಲಿ ಹೂಡಿಕೆ ಮಾಡುವುದು ಉತ್ತಮ. ಕೆಲವೊಂದು ಸಂಸ್ಥೆಗಳು ಅಲ್ಪಕಾಲದಲ್ಲಿ ಹೆಚ್ಚಿನ ಲಾಭವನ್ನ ಗಳಿಸುವ ಉದ್ದೇಶ ಹೊಂದಿರುತ್ತವೆ, ಆದರೆ ದೀರ್ಘಕಾಲದ ಬಗ್ಗೆ ಅವಕ್ಕೆ ಯಾವುದೇ ಹೆಚ್ಚಿನ ಪ್ಲಾನಿಂಗ್ ಇರುವುದಿಲ್ಲ. ಇಂತಹ ಸಂಸ್ಥೆಗಳ ಮೇಲಿನ ಹೂಡಿಕೆಯನ್ನ ಅಳೆದು ತೂಗಿ ಮಾಡಬೇಕಾಗುತ್ತದೆ. ಅಲ್ಲದೆ ಇವುಗಳ ನಡುವಿನ ಅಂತರ ತಿಳಿದುಕೊಂಡು ಹೂಡಿಕೆ ಮಾಡಲು ನಾವು ಯಾವ ರೀತಿಯ ಹೂಡಿಕೆದಾರ ಎನ್ನುವುದನ್ನ ಕೂಡ ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ ಕೆಲವರಿಗೆ ಅಲ್ಪಕಾಲದ ಲಾಭ ಸಾಕು ಎನ್ನಿಸುತ್ತದೆ, ಒಂದಷ್ಟು ಲಾಭ ಮಾಡಿಕೊಂಡು ಷೇರು ಮಾರಿ ಮುಂದಕ್ಕೆ ಹೋಗುವರಿರುತ್ತಾರೆ. ಇನ್ನು ಕೆಲವರಿಗೆ ಅದು ಕೇವಲ ಹೂಡಿಕೆಯಲ್ಲ, ಅದು ಪಾಲುದಾರಿಕೆ, ದೀರ್ಘಕಾಲದ ಉದ್ದೇಶ ಪೂರ್ಣಗೊಳಿಸುವುದು ಆತ್ಮತೃಪಿಯ ಕೆಲಸ. ಹೀಗಾಗಿ ನಾವು ಯಾವ ವರ್ಗಕ್ಕೆ ಸೇರಿದವರು ಎನ್ನುವ ವರ್ಗೀಕರಣ ಕೂಡ ಅವಶ್ಯಕವಾಗುತ್ತದೆ.
  2. ಸಂಸ್ಥೆ ನೀಡುವ ಸೇವೆ ಅಥವಾ ಸರಕು 'ಏನು'? ಎನ್ನುವುದರ ಬಗ್ಗೆ ಮಾಹಿತಿ ಇರಲಿ:  ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕೆದಾರ ವಾರೆನ್ ಬಫೆಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಅದಕ್ಕೆ ಅವರು ನೀಡುವ ಸರಳ ಕಾರಣ "ಅವರೇನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಾಗುವುದಿಲ್ಲ", ನನಗೆ ಗೊತ್ತಿಲ್ಲದ ವಿಷಯದಲ್ಲಿ ನಾನು ಹೂಡಿಕೆ ಮಾಡುವುದಿಲ್ಲ ಎನ್ನುತ್ತಾರೆ. ಇದರ ಅರ್ಥ ಇಷ್ಟೇ, ಯಾವುದೋ ಒಂದು ಸಂಸ್ಥೆ ನೀಡುವ ಸೇವೆ ಅಥವಾ ತಯಾರಿಸುವ ಪದಾರ್ಥ ಕುರಿತು ನಮಗೆ ಮಾಹಿತಿ ಇರಬೇಕು. ಅದರ ಬಗ್ಗೆ ಏನೂ ತಿಳಿಯದೆ ಅಲ್ಲಿ ಹೂಡಿಕೆ ಮಾಡುವುದಾದರೂ ಹೇಗೆ? ನಿಮಗೆ ಎಳ್ಳಷ್ಟೂ ತಿಳಿಯದ ವ್ಯಾಪಾರವನ್ನ ನೀವು ಶುರು ಮಾಡುವಿರಾ? ನೀವು ಕಷ್ಟಪಟ್ಟು ಗಳಿಸಿದ ಹಣವನ್ನ ಹೀಗೆ ತಿಳಿಯದ ವ್ಯಾಪಾರದಲ್ಲಿ ನೀವು ಹಾಕುವುದಿಲ್ಲ ಎಂದ ಮೇಲೆ ತಿಳಿಯದ ಸಂಸ್ಥೆಯ ಷೇರಿನ ಮೇಲೆ ಹೇಗೆ ಹಾಕುತ್ತಿರಿ? ಇನ್ನೊಂದು ವಿಷಯವನ್ನ ಸಹ ಇಲ್ಲಿ ಪ್ರಸ್ತಾಪಿಸುವೆ ಕೆಲವೊಮ್ಮೆ ನಮ್ಮ ಗುಣಕ್ಕೆ ಕೆಲವು ಸೇವೆ ಅಥವಾ ಪದಾರ್ಥಗಳು ಹೊಂದುವುದಿಲ್ಲ ಅಂತಹ ಸಂದರ್ಭದಲ್ಲಿ ಸಹ ಅಲ್ಲಿ ಹೂಡಿಕೆ ಮಾಡಲು ಆಗದು. ಉದಾಹರಣೆಗೆ ರಿಲಯನ್ಸ್ ಸಂಸ್ಥೆ ಮ್ಯಾಕ್ ಡೊನಾಲ್ಡ್ ಸಂಸ್ಥೆಯೊಂದಿಗೆ ಒಪ್ಪಂದವನ್ನ ಮಾಡಿಕೊಳ್ಳಲು ಅಡ್ಡಿಯಾಗಿದ್ದು ಮ್ಯಾಕ್ ಮಾಂಸಾಹಾರ ಮಾರುತ್ತಾರೆ ಎನ್ನುವ ಕಾರಣಕ್ಕೆ, ರಿಲಯನ್ಸ್ ಸಂಸ್ಥೆ ಕೇವಲ ಸಸ್ಯಾಹಾರವನ್ನ ಪ್ರಮೋಟ್ ಮಾಡುವ ಸಂಸ್ಥೆ. ಹೀಗಾಗಿ ಇಲ್ಲಿ ಎರಡು ಅಂಶ ಮುಖ್ಯವಾಗುತ್ತದೆ, ಒಂದು ಸಂಸ್ಥೆ ಯಾವ ಸೇವೆ ಅಥವಾ ಪದಾರ್ಥ ನೀಡುತ್ತಿದೆ, ಅದು ನಮ್ಮ ಎಥಿಕ್ಸ್ ಗೆ ಹೊಂದಿಕೆಯಾಗುತ್ತದೆಯೇ ಎನ್ನುವುದು. ಇದರ ಜೊತೆಗೆ ಸೇವೆ ಅಥವಾ ಪದಾರ್ಥ ನಮ್ಮ ಅರಿವಿಗೆ ನಿಲುಕುವುದಾಗಿರಬೇಕು.
  3. ನಾವು ಹೂಡಿಕೆ ಮಾಡಲು ಇಚ್ಛಿಸಿರುವ ಸಂಸ್ಥೆಯ ಪ್ರತಿಸ್ಪರ್ಧಿಗಳ ಕುರಿತು ತಿಳುವಳಿಕೆ ಬೇಕು: ನಾವು ಷೇರು ಕೊಳ್ಳಲು ಇಚ್ಛೆ ಪಟ್ಟ ಸಂಸ್ಥೆಯ ಎದುರಾಳಿ ಅಥವಾ ಪ್ರತಿಸ್ಪರ್ಧಿ ಸಂಸ್ಥೆಗಳ ಕುರಿತು ಮಾಹಿತಿ ಪಡೆಯಬೇಕು. ಅವರು ನೀಡುವ ಸೇವೆ ಅಥವಾ ಸರಕು ಹೇಗಿದೆ? ಅವರು ಮಾರುಕಟ್ಟೆಯಲ್ಲಿ ಎಷ್ಟು ವರ್ಷದಿಂದ ಇದ್ದಾರೆ? ಅವರ ಮಾರುಕಟ್ಟೆಯ ಮೇಲಿನ ಹಿಡಿತ ಎಷ್ಟು? ಅವರು ನಾವು ಷೇರು ಕೊಳ್ಳಲು ಇಚ್ಛಿಸಿದ ಸಂಸ್ಥೆಗಿಂತ ಯಾವ ರೀತಿಯಲ್ಲಿ ಭಿನ್ನ? ಭವಿಷ್ಯದಲ್ಲಿ ಅವರ ಮಾರುಕಟ ಮೌಲ್ಯ ಹೇಗಿರಬಹುದು? ಇಂದಿನ ಅವರ ಪರಿಸ್ಥಿತಿಯೇನು? ಹೀಗೆ ಹತ್ತಾರು ಪ್ರಶ್ನೆಗಳನ್ನ ಕೇಳುವುದರ ಮೂಲಕ ಹೂಡಿಕೆ ಮಾಡಬೇಕೆ? ಅಥವಾ ಬೇಡವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ನೆನಪಿರಲಿ ಹಣ ನಮ್ಮ ಕೈಲಿರುವ ವರೆಗೆ ಮಾತ್ರ ನಮ್ಮದು. ಒಮ್ಮೆ ಹೂಡಿಕೆ ಮಾಡಿದ ಮೇಲೆ ಅದು ನಮ್ಮದಲ್ಲ.
  4. ಸಂಸ್ಥೆಯನ್ನ ಸೃಷ್ಟಿಸಿದವರ ಅಂದರೆ ಪ್ರಮೋಟರ್ಸ್, ಆಡಳಿತ ಮಂಡಳಿ, ವ್ಯವಸ್ಥಾಪಕ ಮಂಡಳಿಯಲ್ಲಿ ಇರುವ ವ್ಯಕ್ತಿಗಳ ಬಗ್ಗೆ ತಿಳಿದಿರಲಿ: ಇವತ್ತಿಗೆ ಬಿಲ್ ಗೇಟ್ಸ್, ಎಲಾನ್ ಮಸ್ಕ್, ನಾರಾಯಣ ಮೂರ್ತಿ ಅಥವಾ ನಿಲೇಕಣಿ ಅವರು ಪ್ರಾರಂಭಿಸಿರುವ ಸಂಸ್ಥೆ ಅಥವಾ ಅವರು ಪ್ರಮೋಟರ್ಸ್ ಎಂದರೆ ಜನ ಹೆಚ್ಚಿನ ವಿಮರ್ಶೆ ಮಾಡದೆ ಅಲ್ಲಿ ಹೂಡಿಕೆ ಮಾಡುತ್ತಾರೆ. ಏಕೆಂದರೆ ಇವರುಗಳು ಸಮಾಜದಲ್ಲಿ ಆ ಮಟ್ಟದ ಒಂದು ಹೆಸರನ್ನ, ಘನತೆಯನ್ನ ಪಡೆದುಕೊಂಡಿದ್ದಾರೆ. ಇಂತಹವರು ಇದ್ದಾರೆ ಎಂದರೆ ಮೋಸ ಆಗುವುದಿಲ್ಲ ಎನ್ನುವುದು ನಂಬಿಕೆ. ಕೆಲವರ ಉದ್ದೇಶ ಹಣವನ್ನ ಪಡೆದುಕೊಂಡು ಕೆಲವು ವರ್ಷಗಳಲ್ಲಿ ಸಂಸ್ಥೆ ನಷ್ಟಕ್ಕೆ ಒಳಗಾಯಿತು ಎಂದು ಹೇಳುವುದಾಗಿರುತ್ತದೆ. ಹೀಗಾಗಿ ಸಂಸ್ಥೆಯ ಮುಂದಾಳು ಯಾರು ಎನ್ನುವುದು ಅತಿ ಮುಖ್ಯವಾಗುತ್ತದೆ. ಸಮಾಜದಲ್ಲಿ ಅವರ ಬಗ್ಗೆ ಯಾವ ಅಭಿಪ್ರಾಯವಿದೆ ಎನ್ನುವುದು ಕೂಡ ಮುಖ್ಯ.
  5. ಸಂಸ್ಥೆಯ ಕಾರ್ಯಕ್ಷೇತ್ರ ವ್ಯಾಪ್ತಿಯ ಬಗ್ಗೆ ನಿಗಾ ಇರಲಿ: ಕೆಲವೊಂದು ಪದಾರ್ಥಗಳು ಲೋಕಲ್ ಮಾರುಕಟ್ಟೆ ಬಿಟ್ಟು ಬೇರೆಡೆ ಮಾರಲು ಸಾಧ್ಯವಿಲ್ಲ, ಅದೇ ಕೆಲವು ಪದಾರ್ಥಗಳು ವಿಶ್ವದಾಂದ್ಯಂತ ಮಾರಬಹುದು. ಇದರರ್ಥ ನಮ್ಮ ಪದಾರ್ಥ ಒಂದು ಜನಾಂಗ, ಒಂದು ಪ್ರದೇಶಕ್ಕೆ ಸೀಮಿತವೇ ಅಲ್ಲವೇ? ಎನ್ನುವುದನ್ನ ತಿಳಿದುಕೊಳ್ಳಬೇಕು ಎನ್ನುವುದು. ಕೇವಲ ಒಂದು ಪ್ರದೇಶಕ್ಕೆ ಅಥವಾ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗುವ ಪದಾರ್ಥ ಹೆಚ್ಚು ದಿನ ಮಾರುಕಟ್ಟೆಯಲ್ಲಿ ಇರಲು ಸಾಧ್ಯವಿಲ್ಲ, ಇದ್ದರೂ ಅದು ಮಾರುಕಟ್ಟೆಯಲ್ಲಿ ಪಾರುಪತ್ಯ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವ್ಯಾಪ್ತಿ ಕೂಡ ಹೂಡಿಕೆಗೆ ಮುನ್ನಾ ಎಚ್ಚರಿಕೆಯಿಂದ ಪರಿಶೀಲಿಸಬೇಕಾದ ಅಂಶ.
  6. ಮಾರುಕಟ್ಟೆ ಪಾಲು: ನಾವು ಹೂಡಿಕೆ ಮಾಡಲು ಇಚ್ಛಿಸಿರುವ ಸಂಸ್ಥೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದರೆ, ಆ ಕಾರ್ಯ ಕ್ಷೇತ್ರದಲ್ಲಿ ಅದರ ಮಾರುಕಟ್ಟೆ ಪಾಲೆಷ್ಟು ಎನ್ನುವುದನ್ನ ತಿಳಿದು ಕೊಳ್ಳಬೇಕು. ಆ ನಿಗದಿತ ಮಾರುಕಟ್ಟೆಯ ನಾಯಕನಾರು? ನಾವು ಹೂಡಿಕೆ ಮಾಡಲು ಇಚ್ಛೆ ಪಟ್ಟಿರುವ ಸಂಸ್ಥೆಯ ಸ್ಥಾನವೇನು? ಮುಂಬರುವ ದಿನದಲ್ಲಿ ಇದಕ್ಕಿರುವ ಅವಕಾಶಗಳೇನು? ಹೀಗೆ ಹಲವಾರು ವಿಷಯಗಳನ್ನ ಪರಿಶೀಲನೆ ಮಾಡಬೇಕು.
  7. ಯಾವ ಸಂಸ್ಥೆಯ ಷೇರು ಖರೀದಿಸಲು ಇಚ್ಛಿಸಿದ್ದೇವೆ ಆ ಕಂಪನಿ ಹೆಚ್ಚಿನ ಬಂಡವಾಳ ಮತ್ತು ಮೆಷಿನರಿ ಬೇಡುತ್ತದೆಯೇ?: ಈ ಪ್ರಶ್ನೆ ಹಿಂದಿನ ದಿನಗಳಿಗಿಂತ ಇಂದಿನ ದಿನದಲ್ಲಿ ಹೆಚ್ಚು ಪ್ರಸ್ತುತ. ಏಕೆಂದರೆ ಇವತ್ತಿನ ದಿನದಲ್ಲಿ ಹೆಚ್ಚು ಬಂಡವಾಳ ಹೂಡುವುದು, ಬೃಹತ್ ಯಂತ್ರೋಪಕರಣ ಖರೀದಿಗೆ ಯಾರೂ ಇಷ್ಟಪಡುವುದಿಲ್ಲ. ಇವತ್ತೇನಿದ್ದರೂ ಓಯೋ, ಓಲಾ ರೀತಿಯ ವ್ಯಾಪಾರಕ್ಕೆ ಮನ್ನಣೆ. ವೇಗವಾಗಿ ಸಂಸ್ಥೆಯ ಮೌಲ್ಯವರ್ಧನೆಯಾಗಬೇಕು ಎನ್ನುವುದು ಇವತ್ತಿನ ಟ್ರೆಂಡ್. ನೆನಪಿರಲಿ ಹೆಚ್ಚು ಬಂಡವಾಳ ಬೇಡುವ ಸಂಸ್ಥೆಗಳ ಮೌಲ್ಯವರ್ಧನೆಗೆ ಸಮಯ ಬೇಕಾಗುತ್ತದೆ.
  8. ಸಾಲವಿಲ್ಲದ ಸಂಸ್ಥೆಗಳ ಮೇಲಿನ ಹೂಡಿಕೆ ಬೆಸ್ಟ್: ಇವತ್ತು ಸಾಲವಿಲ್ಲದ ಸಂಸ್ಥೆಗಳೇ ಇಲ್ಲ ಎನ್ನುವ ಮಟ್ಟಕ್ಕೆ ಮಾರುಕಟ್ಟೆ ಬದಲಾಗಿದೆ, ಆದರೂ ಬೆರಳೆಣಿಕೆಯಷ್ಟು ಕಂಪನಿಗಳು ಋಣಮುಕ್ತವಾಗಿವೆ. ಹೀಗೆ ಸಾಲವಿಲ್ಲದ ಕಂಪನಿಗಳ ಮೇಲಿನ ಹೂಡಿಕೆ ಬೆಸ್ಟ್. ಯಾವ ಸಂಸ್ಥೆಯಲ್ಲಿ ರಿಸರ್ವ್ಸ್ ಅಥವಾ ಮೀಸಲು ನಿಧಿ ಹೆಚ್ಚಾಗಿರುತ್ತದೆ ಅಂತಹ ಕಂಪನಿಗಳು ಆರ್ಥಿಕವಾಗಿ ಭದ್ರವಾಗಿವೆ ಎಂದರ್ಥ. ಇಂತಹ ಸಂಸ್ಥೆಯಲ್ಲಿ ಷೇರುಗಳನ್ನ ಕೊಂಡರೆ ಹೆಚ್ಚಿನ ಡಿವಿಡೆಂಡ್, ಬೋನಸ್ ಶೇರ್ ಸಿಗುವ ಅವಕಾಶಗಳು ಹೇರಳ. ಅಲ್ಪಸ್ವಲ್ಪ ಸಾಲವಿದ್ದ ಸಂಸ್ಥೆಯಲ್ಲೂ ಹೂಡಿಕೆ ಮಾಡಬಹುದು, ವರ್ಷ ಅಥವಾ ಎರೆಡು ವರ್ಷದಲ್ಲಿ ತೀರಿಸುವ ಗುರಿಯನ್ನ ಹೊಂದಿರುವ ಸಂಸ್ಥೆಗಳ ಮೇಲಿನ ಹೂಡಿಕೆ ಕೂಡ ಉತ್ತಮ. ಅಳತೆ ಮೀರಿದ ಸಾಲ ಹೊಂದಿರುವ ಸಂಸ್ಥೆ ಎಷ್ಟೇ ಉತ್ತಮ ಪದಾರ್ಥ ಅಥವಾ ಸೇವೆ ನೀಡುತ್ತಿದ್ದರೂ ಅಲ್ಲಿನ ಹೂಡಿಕೆ ಅಷ್ಟು ಒಳಿತಲ್ಲ.
  9. ತನ್ನ ಷೇರುಗಳನ್ನ ಮಾರುಕಟ್ಟೆಯಿಂದ ವಾಪಸ್ಸು ಖರೀದಿಸುವ ಸಂಸ್ಥೆಗಳು: ಗಮನಿಸಿ ಕೆಲವು ಸಂಸ್ಥೆಗಳು ತಮ್ಮದೇ ಕಂಪನಿಯ ಶೇರನ್ನ ಮಾರುಕಟ್ಟೆಯಿಂದ ಖರಿದಿಸುತ್ತವೆ, ಇದರರ್ಥ ಈ ಕಂಪನಿ ಆರ್ಥಿಕವಾಗಿ ಬಹಳ ಸಬಲವಾಗಿದೆ ಎನ್ನುವುದಾಗಿದೆ. ಹೀಗೆ ಆರ್ಥಿಕವಾಗಿ ಸಬಲವಾಗಿರುವ ಸಂಸ್ಥೆಗಳು ಯಾವಾಗಲಾದರೂ ಸಂಸ್ಥೆಯನ್ನ ಇನ್ನಷ್ಟು ಬೆಳಸುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಮತ್ತೆ ಷೇರನ್ನ ಬಿಡುಗಡೆ ಮಾಡುತ್ತಾರೆ. ಇಂತಹ ಸಮಯದಲ್ಲಿ ಹೆಚ್ಚು ವಿಮರ್ಶೆ ಮಾಡುವ ಅವಶ್ಯಕತೆಯಿಲ್ಲ, ಷೇರನ್ನ ಕೊಳ್ಳುವುದು ಉತ್ತಮ.
  10. ರಿಸರ್ಚ್ ಮತ್ತು ಡೆವೆಲಪಮೆಂಟ್ ಗೆ ಹಣ ಖರ್ಚು ಮಾಡುವ, ಭವಿಷ್ಯದ ಬಗ್ಗೆ ಕಣ್ಣಿಟ್ಟಿರುವ ಸಂಸ್ಥೆಗಳ ಶೇರನ್ನ ಖರೀದಿಸುವುದು ಜಾಣತನ: ಇವತ್ತು ಇದ್ದ ಟ್ರೆಂಡ್ ನಾಳೆ ಇರುವುದಿಲ್ಲ, ಮಾರುಕಟ್ಟೆ, ವ್ಯಾಪಾರ ಎಲ್ಲವೂ ಇಂದು ಬಹಳ ಡೈನಾಮಿಕ್ ಆಗಿ ಮಾರ್ಪಾಟಾಗಿವೆ. ಮುಂದಿನ ದಿನಗಳ ಅವಶ್ಯಕತೆಯನ್ನ ಊಹಿಸಿ ಅಂದಿನ ದಿನಕ್ಕೆ ಸಿದ್ಧವಾಗಲು ಮಾಡುವ ಖರ್ಚು ಒಳ್ಳೆಯ ಖರ್ಚು. ಹೀಗೆ ಭವಿಷ್ಯದ ಮೇಲೆ ಕಣ್ಣಿಟ್ಟಿರುವ ಸಂಸ್ಥೆಗಳ ಷೇರನ್ನ ಕೊಳ್ಳುವುದು ಉತ್ತಮ.

ಕೊನೆ ಮಾತು: ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ ಎಲ್ಲಿ? ಅಂದರೆ ಯಾವ ಸಂಸ್ಥೆಯ ಷೇರಿನಲ್ಲಿ ಹೂಡಿಕೆ ಮಾಡಲಿ ಎನ್ನುವುದಾಗಿರುತ್ತದೆ. ಅದಕ್ಕೆ ಉತ್ತರವನ್ನ ನಾವು ಬಿಡುಬೀಸಾಗಿ ಹೇಳಲು ಬಾರದು. ಮ್ಯಾಕ್ರೋ ಚಿತ್ರಣದಲ್ಲಿ ಹೂಡಿಕೆ ಮಾಡಲು ಆಗದ ಅಗಾಧ ಜನರು ಮೈಕ್ರೋ ವಿಧಾನವನ್ನ ಅನುಸರಿಸಬೇಕಾಗುತ್ತದೆ. ಮೇಲೆ ಹೇಳಿದ ಹತ್ತು ಪ್ರಶ್ನೆಗಳಷ್ಟೇ ಅಲ್ಲದೆ ಆಯಾ ಸಮಯಕ್ಕೆ, ಪರಿಸ್ಥಿತಿಗೆ ಅನುಗುಣವಾಗಿ ಮರು ವಿಮರ್ಶೆಗೆ ಒಳಪಡಿಸಬೇಕಾಗುತ್ತದೆ. ಹೀಗೆ ಪರಿಶೀಲನೆ, ಮರು ಪರಿಶೀಲನೆಗಳಲ್ಲಿ ಸರಿ ಎನ್ನಿಸಿದರೆ ಆ ಸಂಸ್ಥೆಯ ಷೇರನ್ನ ಕೊಳ್ಳಬಹುದು. ನೆನಪಿರಲಿ ಇವೆಲ್ಲವೂ ತಾಳ್ಮೆ ಬೇಡುವ, ಕಲಿಕೆ ಬೇಡುವ ಕೆಲಸಗಳು. ಆತುರದಲ್ಲಿ ಮಧ್ಯವರ್ತಿಗಳ ಸಹಾಯದಿಂದ ಮಾಡುವ ಹೂಡಿಕೆ ಎಲ್ಲಾ ಸಮಯದಲ್ಲೂ ಸರಿಯಾಗುವುದಿಲ್ಲ. ಹೀಗಾಗಿ ಯಾರೆಷ್ಟೇ ಹೇಳಿದರೂ ನೀವು ಕಲಿಯದೇ, ಪರಾಮರ್ಶಿಸದೆ ಹೂಡಿಕೆ ಮಾಡುವುದು ತರವಲ್ಲ.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp