ಸಂಕ್ರಾಂತಿ ಹಾಗೂ ಆರೋಗ್ಯ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ಸಂಕ್ರಾಂತಿ ಸುಗ್ಗಿಯ ಹಬ್ಬ, ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿ ಪ್ರವೇಶಿಸುವ ಕಾಲ. ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿ ಪ್ರವೇಶಿಸುತ್ತಾನೆ.

Published: 15th January 2022 11:29 AM  |   Last Updated: 15th January 2022 06:30 PM   |  A+A-


Sankranti

ಸಂಕ್ರಾಂತಿ

ಸಂಕ್ರಾಂತಿ ಸುಗ್ಗಿಯ ಹಬ್ಬ, ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿ ಪ್ರವೇಶಿಸುವ ಕಾಲ. ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿ ಪ್ರವೇಶಿಸುತ್ತಾನೆ. ಅಂದು ಉತ್ತರಾಯಣ ಆರಂಭ. ಆದ್ದರಿಂದ ಉತ್ತರಾಯಣ ಪುಣ್ಯಕಾಲ ಎಂದೂ ಹೆಸರಿದೆ. ಮಕರ ಸಂಕ್ರಾಂತಿಗೂ ಸೂರ್ಯನ ಆರಾಧನೆಗೂ ಹತ್ತಿರದ ನಂಟು. ಅಲ್ಲದೇ ಸಂಕ್ರಾಂತಿಯಂದು ಮಕ್ಕಳಿಗೆ ಆರತಿ ಬೆಳಗಿ ಸಂತೋಷಪಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ ಸಂಕ್ರಾಂತಿ ಆಚರಣೆಯಲ್ಲಿದೆ. ಎಳ್ಳು ಬೀರುವುದು ಒಂದು ಮುಖ್ಯ ಆಚರಣೆಯಾಗಿ ಬೆಳೆದುಬಂದಿದೆ ಗೋಪೂಜೆ ಕೂಡ ಮಾಡುತ್ತಾರೆ. ಕೆಲವು ಕಡೆ ಸಂಕ್ರಾಂತಿಯ ಹಿಂದಿನ ದಿನ ಪತ್ರೆ ಮುಡಿಸುವ ಸಂಪ್ರದಾಯವಿದೆ.

ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡೋಣ
ಮಾವಿನ ಸೊಪ್ಪು, ನೇರಳೆ ಸೊಪ್ಪು. ಉತ್ತರಾಣಿ ಕಡ್ಡಿಗಳನ್ನು ತಂದು ಮನೆಯ ಮಾಡುಗಳಿಗೆ ಸಿಕ್ಕಿಸುತ್ತಾರೆ. ಇದಕ್ಕೆ ಪತ್ರೆ ಮುಡಿಸುವುದು ಎಂದು ಹೆಸರು. ಮೂರು ಬಗೆಯ ಹಸಿರು ಸೊಪ್ಪು ಸಿಕ್ಕಿಸುವುದು ಸಮೃದ್ದಿಯ ಸಂಕೇತ. ಹುಡುಗಿಯರು ಎಳ್ಳು ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಸಕ್ಕರೆ ಅಚ್ಚು ಮುಂತಾದವುಗಳನ್ನು ಬಂಧುಗಳಿಗೆ, ನೆರೆಹೊರೆಯವರಿಗೆ ಬೀರುತ್ತಾರೆ. ಎಲ್ಲರೂ ಪರಸ್ಪರ ‘ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡೋಣ’ ಎಂದು ಶುಭ ಹಾರೈಸುತ್ತಾರೆ.

ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ, ಎಳ್ಳು ದಾನ ಮಾಡಬೇಕು. ಎಳ್ಳೆಣ್ಣೆಯ ದೀಪ ಹಚ್ಚಬೇಕು. ತಮಿಳುನಾಡಿನಲ್ಲಿ ‘ಪೊಂಗಲ್’ ಎಂದು ಸಂಕ್ರಾಂತಿ ಪ್ರಸಿದ್ದಿ ಪಡೆದಿದೆ. ಪೊಂಗಲ್ ಎಂದರೆ ಅಕ್ಕಿ, ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ತಯಾರಿಸಿದ ಸಿಹಿ ಖಾದ್ಯ. ಈ ಕಾಲದಲ್ಲಿ ರಾತ್ರಿ ದೊಡ್ಡದು. ಹಗಲು ಕಡಿಮೆ ಇರುವುದರಿಂದ ಬೆಳಿಗ್ಗೆ ಬೇಗನೇ ಹಸಿವಾಗುವ ಕಾರಣದಿಂದ ಹುಗ್ಗಿಯ ಉಪಯೋಗ ರೂಢಿಯಲ್ಲಿದೆ. ಹುಗ್ಗಿಯಲ್ಲಿ ಬಳಸುವ ಆಹಾರ ಪದಾರ್ಥಗಳು ಕಫ ನಾಶಕವಾಗಿವೆ. ಎಳ್ಳೆಣ್ಣೆಯಂತಹ ವಾತನಾಶಕ ತೈಲಗಳಿಂದ ತಲೆ, ಮೈ, ಕೈಗಳಿಗೆ ಹಚ್ಚಿಕೊಂಡು ಅಭ್ಯಂಗ ಮಾಡುವುದೂ ಶೀತವನ್ನು ತಗ್ಗಿಸುತ್ತದೆ. ಪ್ರಾಚೀನ ಗ್ರೀಕರು ಸಂತಾನ ವೃದ್ಧಿಯ ಸಲುವಾಗಿ ಎಳ್ಳಿನ ಪಕ್ವಾನ್ನ ಮಾಡಿಕೊಡುತ್ತಿದ್ದರು.

ಚಳಿಯ ವಾತಾವರಣ, ಆರೋಗ್ಯ ವರ್ಧಕ ಆಹಾರಗಳು
ಉತ್ತರಾಯಣದ ಮೊದಲ ಋತು ಶಿಶಿರ. ಈ ಋತುವಿನಲ್ಲಿ ಚಳಿ ಹೆಚ್ಚು. ಶಿಶಿರದಲ್ಲಿ ಮನುಷ್ಯನ ಬಲ ಹೆಚ್ಚು. ಚಳಿಯ ಜೊತೆಗೆ ವಾತಾವರಣದಲ್ಲಿ ತೇವಾಂಶ ಕಡಿಮೆ ಇರುತ್ತದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಿಹಿ, ಉಪ್ಪು, ಹುಳಿ ರಸದಿಂದ ಕೂಡಿದ ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆ ಮಾಡಬೇಕು. ‘ಸುಗ್ಗಿಲಿ ಹುಗ್ಗಿಗೆ ಬರವೆ!’ ಎಂಬ ಗಾದೆ ಮಾತೂ ಕೇಳಿದ್ದೇವೆ. ಹುಗ್ಗಿಯ ಸೇವನೆಯೂ ಹಿತಕರ. ಹೆಸರು ಬೇಳೆಯಿಂದ ತಯಾರಿಸಿದ ಹುಗ್ಗಿ ಬಲ, ಪುಷ್ಟಿ ಹೆಚ್ಚಿಸುವುದಲ್ಲದೇ ಜೀರ್ಣಕ್ಕೆ ಜಡವಾಗಿರುತ್ತದೆ. ವೀರ್ಯವೃದ್ದಿಯನ್ನೂ ಮಾಡುತ್ತದೆ. ಚರ್ಮವು ಒಡೆಯುವುದರಿಂದ ತೇವಾಂಶ ಕಾಪಾಡಿಕೊಳ್ಳಲು ಎಳ್ಳು, ಕಡಲೆಕಾಯಿ, ಕೊಬ್ಬರಿ ಸೇವನೆ ಒಳ್ಳೆಯದು. ಇವುಗಳಲ್ಲಿ ಪಿಷ್ಟ, ಕೊಬ್ಬಿನಂಶ ಇರುವುದರಿಂದ ದೇಹದ ಉಷ್ಣತೆಯನ್ನು ಕಾಪಾಡುತ್ತದಲ್ಲದೇ ಚಳಿಯನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ.

ಚರ್ಮದ ರಕ್ಷಣೆಗೆ ಅವಶ್ಯಕವೆನಿಸುವ ವಿಟಮಿನ್ A, D, K, Cಗಳನ್ನು ದೇಹ ಗ್ರಹಿಸಿಕೊಳ್ಳಲು ಕೊಬ್ಬು ಸಹಕಾರಿಯಾಗಿದೆ. ಬಾಳೆಹಣ್ಣು, ಕಿತ್ತಲೆಗಳ ಜೊತೆಗೆ ಎಲಚಿ (ಬೋರೆ) ಹಣ್ಣು ಕೂಡ ಶಿಶಿರದಲ್ಲಿ ಲಭ್ಯ. ಎಲಚಿ ಹಣ್ಣು, ಹುಳಿ, ಸಿಹಿ, ಒಗರು ರುಚಿ ಹೊಂದಿದೆ. ಇದು ಹೃದಯದ ಆರೋಗ್ಯ ರಕ್ಷಣೆಗೆ ಒಳ್ಳೆಯದು. ರಥಸಪ್ತಮಿಯಂದು ಚಿಕ್ಕಮಕ್ಕಳಿಗೆ ಎಲಚಿ ಹಣ್ಣುಗಳನ್ನು ಎರೆಯುತ್ತಾರೆ. ಅವರ ಆರೋಗ್ಯ ಚೆನ್ನಾಗಿರಲಿ. ಮನೆ ಸಮೃದ್ಧವಾಗಿರಲಿ ಎಂದು ಈ ಆಚರಣೆ ರೂಢಿಯಲ್ಲಿ ಬಂದಿದೆ. ಎಲಚಿಯ ತಿರುಳಿಗೆ ಉಪ್ಪು, ಒಣಮೆಣಸಿನಕಾಯಿ ಪುಡಿ ಬೆರೆಸಿ ರುಬ್ಬಿ (ನೀರು ಹಾಕುವುದು) ಚಿಕ್ಕಚಿಕ್ಕ ಹಪ್ಪಳದ ಆಕಾರದಲ್ಲಿ ಒತ್ತಿ ಒಣಗಿಸಬೇಕು. ಹೊಟ್ಟೆಯುಬ್ಬರ, ಅಜೀರ್ಣವಾದಾಗ ಇದನ್ನು ಸೇವಿಸಿದರೆ ಒಳ್ಳೆಯದು.

ಎಳ್ಳು
ಸಂಸ್ಕೃತದಲ್ಲಿ ತಿಲ, ಸ್ನೇಹಫಲ ಎಂದು ಕರೆಯಲ್ಪಡುವ ಇದನ್ನು ವೈಜ್ಞಾನಿಕವಾಗಿ ಸೆಸಾಮಮ್ ಓರಿಯಂಟಲ್ ಎನ್ನುತ್ತಾರೆ. ಇದೊಂದು ಚಿಕ್ಕಗಿಡವಾಗಿದ್ದು ಭಾರತದೆಲ್ಲೆಡೆ ಉಷ್ಣವಲಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮೂರು ವಿಧದ ಎಳ್ಳು ದೊರೆಯುತ್ತದೆ. ಕಪ್ಪು, ಬಿಳಿ ಮತ್ತು ಕಂದು ಅಥವಾ ಕೆಂಪು. ಕಪ್ಪು ಬಣ್ಣದ ಎಳ್ಳು ಎಣ್ಣೆ ತೆಗೆಯಲು ಅತ್ಯುತ್ತಮವಾದದ್ದು ಮತ್ತು ಔಷಧೀಯ ಉಪಯೋಗಗಳಿಗೂ ಕೂಡ ಸೂಕ್ತವಾದುದು. ಆದರೆ ಬಿಳಿಯದರದಲ್ಲಿ ಎಣ್ಣೆ ಅಧಿಕವಾಗಿರುತ್ತದೆ. ಬೀಜ ಮತ್ತು ಎಣ್ಣೆ ಔಷಧಿಗೆ ಉಪಯುಕ್ತ. ಎಳ್ಳಿನಲ್ಲಿ ಪ್ರೊಟಿನ್, ಕಾರ್ಬೋಹೈಡ್ರೇಟ್, ನಾರಿನಂಶವೂ ಇರುತ್ತದೆ. ಎಣ್ಣೆಯಲ್ಲಿ ಒಲಿಕ್ ಮತ್ತು ಲಿನೊಲಿಕ್ ಆಮ್ಲಗಳು ಇರುತ್ತವೆ. ಉಪ್ಪಿನಕಾಯಿಯಲ್ಲಿ ಮತ್ತು ಅಡುಗೆಯಲ್ಲಿಯೂ ಈ ಎಣ್ಣೆ ಬಳಸಲಾಗುತ್ತದೆ.

ಉಪಯೋಗಗಳು:
1.ಮೂಲವ್ಯಾಧಿಯಲ್ಲಿ ಮತ್ತು ಮಲಬದ್ಧತೆಯ ತೊಂದರೆಯಿಂದ ಬಳಲುವವರ ಎಳ್ಳು, ಬೆಲ್ಲ ಕುಟ್ಟಿ ಉಂಡೆಯ ಹಾಗೆ ಮಾಡಿಕೊಂಡು ಸೇವಿಸಬೇಕು. ರಕ್ತ ಮೂಲವ್ಯಾಧಿಯಲ್ಲಿ ಎಳ್ಳನ್ನು ನೀರಿನಲ್ಲಿ ಅರೆದು ಪೇಸ್ಟ್ ಮಾಡಿಕೊಂಡು ಬೆಣ್ಣೆಯೊಂದಿಗೆ ಬೆರೆಸಿ ಕೊಡಬೇಕು.
2.ಎಳ್ಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ ಗರ್ಭಪಾತವಾಗುವ ಸಾಧ್ಯತೆಯಿರುತ್ತಾದ್ದರಿಂದ ಗರ್ಭಿಣಿಯರು ಅಧಿಕ ಸೇವನೆ ಮಾಡಬಾರದು.
3.ಮುಟ್ಟು ಅನಿಯಮಿತವಾಗಿರುವವರಲ್ಲಿ ಎಳ್ಳನ್ನು ಕುಟ್ಟಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಕೊಡಬಹುದು. ಮುಟ್ಟಿನ ಹೊಟ್ಟೆನೋವಿನಿಂದ ಬಳಲುವವರಿಗೂ ಇದು ಸೂಕ್ತ. ಎಳ್ಳನ್ನು ಹಾಕಿ ಕಾಯಿಸಿದ ನೀರಿನಿಂದ (ಹಿಪ್ ಬಾತ್) ಕಟಿ ಸ್ನಾನ ತೆಗೆದುಕೊಳ್ಳಬಹುದು.
4. ಎರಡು-ಮೂರು ತಿಂಗಳು ಮುಟ್ಟು ತಡವಾಗಿದ್ದಲ್ಲಿ ಕರಿ ಎಳ್ಳು, ಒಣಶುಂಠಿ ಕರಿಮೆಣಸು, ಹಿಪ್ಪಲಿ, ಭಾರಂಗಿ ಮತ್ತು ಬೆಲ್ಲ ಸಮಭಾಗ ತೆಗೆದುಕೊಂಡು ಕಷಾಯ ತಯಾರಿಸಿಕೊಳ್ಳಬೇಕು. 15 ದಿವಸಗಳ ಕಾಲ ಇದನ್ನು ಸೇವಿಸಬೇಕು.
5.ಸುಟ್ಟ ಗಾಯಗಳಿಗೆ, ಹುಣ್ಣುಗಳಿಗೆ ಎಳ್ಳನ್ನು ನೀರಿನಲ್ಲಿ ಅರೆದು ಪೇಸ್ಟ್ ಲೇಪಿಸಬೇಕು.
6.ಕೂದಲುದುರುವುದು: ತಲೆಯ ಕೂದಲಿಗೆ ಎಳ್ಳೆಣ್ಣೆ ತುಂಬ ಉಪಯುಕ್ತ. ಕೂದಲಿನ ಬೆಳವಣಿಗೆ ಸಹಕಾರಿಯಾಗುವದಲ್ಲದೇ ಕಪ್ಪಗೆ ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ. ಯಾವುದೇ ಔಷಧೀಯ ಎಣ್ಣೆ ತಯಾರಿಕೆಯಲ್ಲಿ ಇದೇ ಮುಖ್ಯ ಆಗಿರುತ್ತದೆ. ಭೃಂಗರಾಜ, ಬ್ರಾಹ್ಮಿ, ಆಮಲಕಿ (ನೆಲ್ಲಿಕಾಯಿ) ಇವುಗಳನ್ನೆಲ್ಲ ಹಾಕಿ ಎಳ್ಳೆಣ್ಣೆಯೊಂದಿಗೆ ಬೆರೆಸಿ  ತೈಲ ತಯಾರಿಸಿ ತಲೆಕೂದಲಿಗೆ ಬಳಸಬಹುದು. ಎಳ್ಳೆಣ್ಣೆಗ ಒಂದು ವಿಧದ ವಾಸನೆ ಇರುತ್ತವಾದ್ದರಿಂದ ಅದು ಕೆಲವರಿಗೆ ಇಷ್ಟವಾಗದಿದ್ದಲ್ಲಿ ಮಲ್ಲಿಗೆ, ಕೇದಿಗೆಗಳನು ಪದರವಾಗಿ ಹಾಕಿ ಮಧ್ಯೆ ಎಳ್ಳನ್ನು ಇಟ್ಟು ನಂತರ ಎಣ್ಣೆ ತಯಾರಿಸಿದ್ದಲ್ಲಿ ಆ ಎಣ್ಣೆಗೆ ಮಲ್ಲಿಗೆ ಅಥವಾ ಕೇದಿಗೆಯ ವಾಸನೆಯೂ ಬರುತ್ತದೆ.
7.ಕುಷ್ಟ ಮತ್ತು ಇತರ ಚರ್ಮರೋಗಗಳಲ್ಲಿ ಎಳ್ಳೆಣ್ಣೆಯ ಲೇಪನ ಒಳ್ಳೆಯದು. 
8.ತಲೆನೋವಿಗೆ ಎಳ್ಳೆಣ್ಣೆಯಲ್ಲಿ ಶ್ರೀಗಂಧದ ತೈಲ, ಲವಂಗದ ತೈಲ ಮತ್ತು ಕರ್ಪೂರ ಬೆರೆಸಿ ಎರ್ಣಣೆ ತಯಾರಿಸಿಕೊಂಡು ಲೇಪಿಸಿಕೊಳ್ಳುತ್ತಿದ್ದರೆ ನೋವು ಕಡಿಮೆಯಾಗುತ್ತದೆ.
9.ಕಣ್ಣುರಿ: ಕಣ್ಣುರೆಪ್ಪೆಯ ಮೇಲೆ ಎಳ್ಳೆಣ್ಣೆ ಸವರಿ ಹಗುರವಾಗಿ ಮಸಾಜ್ ಮಾಡಿಕೊಳ್ಳಬೇಕು. ಶುದ್ಧವಾಗಿದ್ದಲ್ಲಿ ಕಣ್ಣಿನಲ್ಲಿ ಹಾಕಿಕೊಳ್ಳಬಹುದು.
10.ತಲೆ ತೊಳೆದುಕೊಳ್ಳಲು: ಎಳ್ಳಿನ ಗಿಡದ ಎಲೆ ಮತ್ತು ಬೇರು ಕುಟ್ಟಿ ಕಷಾಯ ತಯಾರಿಸಿ ಆದರಿಮದ ತಲೆ ತೊಳೆದುಕೊಳ್ಳುವುದರಿಂದ ಕೂದಲು ಸ್ವಚ್ಛವಾಗುತ್ತದೆ. ಕೂದಲು ಬೆಳವಣಿಗೆಗೂ ಇದು ಸಹಕಾರಿಯಾಗುತ್ತದೆ.
11.ಅಭ್ಯಂಗ: ಚಿಕ್ಕಮಕ್ಕಳಿಂದ ವಯಸ್ಕರವರೆಗೂ ತಾವು ಸುಂದರವಾಗಿ ಕಾಣಬೇಕೆಂದು ಬಗೆಬಗೆಯ ಕ್ರೀಂ, ಸೋಪು, ದುಬಾರಿ ಲೋಶನ್‍ಗಳನ್ನು ಬಳಸುತ್ತಾರೆ. ಆದರೆ ಇವರೆಲ್ಲ ಮರೆತಿರುವುದು ಒಂದೇ ಸಂಗತಿಯೆಂದರೆ ಅಭ್ಯಂಗ ಅಂದರೆ ಎಣ್ಣೆಸ್ನಾನ ನಿಜವಾದ ಆರೋಗ್ಯ ಮತ್ತು ಸೌಂದರ್ಯದ ಒಳಗುಟ್ಟು ಅಭ್ಯಂಗ! ಅಭ್ಯಂಗವನ್ನು ನಿಯಮಿತವಾಗಿ ಆಚರಿಸುವುದರಿಂದ ಅಕಾಲ ಮುಪ್ಪು, ಅಕಾಲದಲ್ಲಿ ಕೂದಲು ಬೆಳ್ಳಗಾಗುವುದು, ಮೈಕೈ ನೋವು ಇರುವುದಿಲ್ಲ.
12.ಪಾದಾಭ್ಯಂಗ: ಪ್ರತಿದಿನ ಅಂದರೆ ಅಂಗಾಲುಗಳಿಗೆ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ದೇಹದಲ್ಲಿ ಬಲ ಹೆಚ್ಚುವುದರಿಂದ ಅಂಗಾಲು ಉರಿ, ಹಿಮ್ಮುಡಿ ಒಡೆಯುವುದು ಇರುವುದಿಲ್ಲ. ನಿದ್ರೆಯೂ ಚೆನ್ನಾಗಿ ಬರುತ್ತದೆ. ಎಳ್ಳೆಣ್ಣೆಯಿಂದ ಶಿರೋಭ್ಯಂಗ ಮಾಡುವುದರಿಂದ ಕೂದಲು ಕಪ್ಪಗೆ, ಸೊಂಪಾಗಿ ಬೆಳೆಯುತ್ತದೆ. ಚರ್ಮಕ್ಕೆ ಮೃದುತ್ವ ಹೊಳಪು ಬರುತ್ತದೆ.

ಇತರೆ
⦁ ಚೈನಾದಲ್ಲಿ ಬ್ರೆಡ್ ಮತ್ತು ಕೇಕ್‍ಗಳಿಗೆ ರುಚಿ ಬರಲು ಇದನ್ನು ಬಳಸುತ್ತಾರೆ. ಯುರೋಪ್‍ನಲ್ಲಿ ಆಲಿವ್ ಎಣ್ಣೆಯ ಬದಲಾಗಿ ಎಳ್ಳೆಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಜಪಾನ್‍ನಲ್ಲಿ ಅಡುಗೆಯಲ್ಲಿ ಬೆಣ್ಣೆಯ ಬದಲು ಎಳ್ಳೆಣ್ಣೆಯನ್ನು ಬಳಸುತ್ತಾರೆ.
⦁ ತುಪ್ಪದ ತಯಾರಿಕೆಯಲ್ಲಿ ಎಳ್ಳೆಣ್ಣೆ ಬೆರೆಸಿ ಮಾರಾಟ ಮಾಡಲಾಗುತ್ತದೆ. ಅದಕ್ಕೆ ಶುದ್ಧ ತುಪ್ಪವೆಂದೂ ಎಷ್ಟೋ ಸಾರಿ ಎಳ್ಳೆಣ್ಣೆ ಬೆರೆತಿದ್ದನ್ನು ಕೊಂಡಿರುತ್ತೇವೆ.
 ಬಾಣಂತಿ: ಬಾಣಂತಿಯರಿಗೆ ಎಳ್ಳುಂಡೆ ಕೊಟ್ಟು ಹಾಲು ಕುಡಿಯಲು ಕೊಡಬೇಕು. ಇದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.
 ಮಂಡಿ ನೋವು: ದೇಹದ ಯಾವುದೇ ಭಾಗದಲ್ಲಿ ನೋವಿದ್ದಲ್ಲಿ ಎಳ್ಳೆಣ್ಣೆಯನ್ನು ಬಿಸಿ ಮಾಡಿ ನಂತರ ಹಚ್ಚಿ ನೀವಿಕೊಳ್ಳುವುದರಿಂದ ನೋವು ಶಮನವಾಗುತ್ತದೆ.


ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477‌


Stay up to date on all the latest ಅಂಕಣಗಳು news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp