
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ ಪ್ರವೇಶಿಸಲು ಬಹಳ ಜನ ಹೆದರುತ್ತಾರೆ. ಅದಕ್ಕೆ ಕಾರಣ ಹಾಕಿದ ಮೂಲ ಬಂಡವಾಳವೇ ಮುಳುಗಿ ಹೋದರೆ ಎನ್ನುವ ಭಯ. ಗಮನಿಸಿ ನೋಡಿ ಯಾವಾಗ ವಸ್ತು ಅಥವಾ ವಿಷಯದ ಬಗ್ಗೆ ಮಾಹಿತಿಯ ಕೊರತೆ ಇರುತ್ತದೆ ಆಗೆಲ್ಲಾ ಆ ವಸ್ತು ಅಥವಾ ವಿಷಯದ ಬಗ್ಗೆ ಸಂಶಯ ಶುರುವಾಗುತ್ತದೆ. ಸಂಶಯ ಭಯವಾಗಿ ಮಾರ್ಪಾಡಾಗಳು ಹೆಚ್ಚು ಸಮಯ ಬೇಕಿಲ್ಲ. ಇದರ ಅರ್ಥ ಬಹಳ ಸರಳ, ಬಹುತೇಕರಿಗೆ ಷೇರು ಮಾರುಕಟ್ಟೆ ಪ್ರವೇಶಿಸಬೇಕು ಎನ್ನುವ ಹಂಬಲವಿರುತ್ತದೆ. ಆದರೆ ಅದರ ಬಗ್ಗೆ ಒಂದು ಅವ್ಯಕ್ತ ಭಯ ಅವರನ್ನ ಇದರಿಂದ ದೂರವಿಡುತ್ತದೆ. ಇದಕ್ಕೆ ಸುಲಭ ಪರಿಹಾರ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು. ನಿಮಗೆಲ್ಲ ಒಂದು ಮಾತು ಗೊತ್ತೇ ಇರುತ್ತದೆ. ಕಾಣದ ದೈವಕ್ಕಿಂತ ಕಂಡ ದೆವ್ವವೇ ವಾಸಿ ಎನ್ನುವುದು ಆ ಮಾತು. ಅಂದರೆ ಸಮಯ ಕಳೆಯುತ್ತಾ, ಹೆಚ್ಚು ಹೆಚ್ಚು ವಿಷಯ ಗ್ರಹಿಕೆ ಮಾಡಿಕೊಳ್ಳುತ್ತಾ ಹೋದಂತೆಲ್ಲ ಅರೆರೇ ಇದು ಇಷ್ಟೇ ಎನ್ನುವ ಭಾವನೆ ಬೆಳೆಯುತ್ತ ಹೋಗುತ್ತದೆ. ನಿಧಾನವಾಗಿ ಅದರ ಬಗ್ಗೆ ಒಂದು ನಂಬಿಕೆ, ಮನಸ್ಸಿನಲ್ಲಿ ಸ್ಥಿರತೆ ಹೆಚ್ಚುತ್ತಾ ಹೋಗುತ್ತದೆ. ಆ ನಂತರದ ದಿನಗಳಲ್ಲಿ ಚೂರು ಏರುಪೇರಾದರೂ ಭದ್ರ ನಂಬಿಕೆಯ ಬುನಾದಿ ಅಲುಗಾಡುವುದಿಲ್ಲ. ನೆನಪಿರಲಿ ನಡೆಯುವ ಕಾಲು ಎಡವುದು ಸಹಜ. ಎಡವುತ್ತೇವೆ ಎನ್ನುವ ಕಾರಣಕ್ಕೆ ನಡೆಯಲು ಬಿಡಲು ಸಾಧ್ಯವಿಲ್ಲ ಅಲ್ಲವೇ? ಇರಲಿ.
ಸ್ನೇಹಿತ ಹೇಳಿದ ಎಂದೋ ಅಥವಾ ಯಾರೋ ಬಂಧುವೊಬ್ಬರು ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಿದೆ ಎನ್ನುವ ಬಣ್ಣದ ಮಾತು ಹೇಳಿದರು ಎಂದೋ ಷೇರು ಮಾರುಕಟ್ಟೆ ಪ್ರವೇಶಿಸಬೇಡಿ. ಅದು ತಪ್ಪು. ಮೊದಲಿಗೆ ಷೇರು ಮಾರುಕಟ್ಟೆಯ ಬಗ್ಗೆ ಒಲವು ಇರಬೇಕು. ಯಾವುದೇ ವ್ಯಾಪಾರ ಮಾಡಿದರೂ ಗೆಲುವು ಅಥವಾ ಸೋಲಿನ ಸಾಧ್ಯತೆಗಳು ಎಷ್ಟಿರುತ್ತದೆ ಅಷ್ಟೇ ಸಾಧ್ಯತೆ ಇಲ್ಲೂ ಇರುತ್ತದೆ ಎನ್ನುವ ಸಾಮಾನ್ಯಜ್ಞಾನ ನಿಮ್ಮದಾಗಿರಬೇಕು, ಜೊತೆಗೆ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಂದಷ್ಟು ಅಧ್ಯಯನ ಮಾಡಬೇಕು. ನೀವು ಹಣಕಾಸು ಸಲಹೆಗಾರರ ಸಲಹೆಯನ್ನ ಪಡೆದೇ ಹೂಡಿಕೆ ಮಾಡುವ ಇಚ್ಛೆ ಇದ್ದರೂ ಕೂಡ ಒಂದಷ್ಟು ಮೂಲಭೂತ ವಿಷಯಗಳ ತಿಳುವಳಿಕೆ ಇರುವುದು ಎಲ್ಲಾ ರೀತಿಯಲ್ಲೂ ಉತ್ತಮ.
ಹೀಗಾಗಿ ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನಾ ಮಾಡಿಕೊಳ್ಳಬೇಕಾದ ಸಿದ್ಧತೆಗಳು ಅಥವಾ ಕಲಿಕೆಗಳು ಏನು ಎನ್ನುವುದರತ್ತ ನೋಡೋಣ.
ಪ್ರಾಯೋಗಿಕವಾಗಿ ಷೇರು ಮಾರುಕಟ್ಟೆಗೆ ಧುಮುಕುವ ಮುನ್ನ ಒಂದಷ್ಟು ಷೇರು ಮಾರುಕಟ್ಟೆ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳಬೇಕು. ಷೇರು ಮಾರುಕಟ್ಟೆ ಎಂದರೇನು ಎನ್ನುವುದರಿಂದ ಹಿಡಿದು, ಅದರ ಕಾರ್ಯನಿರ್ವಹಣೆ ಹೇಗೆ ಆಗುತ್ತದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ಗ್ರಾಹಕನಿಗೆ ಉತ್ತಮ ಸೇವೆ ನೀಡುವ ದಲ್ಲಾಳಿ ಸಂಸ್ಥೆ ಯಾವುದು? ಅವರು ಯಾವ ಮಟ್ಟದಲ್ಲಿ ಕಮಿಷನ್ ಪಡೆಯುತ್ತಾರೆ? ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಹಣಕ್ಕೆ ತೆರಿಗೆ ಉಂಟೆ? ಇದ್ದರೆ ಅದೆಷ್ಟು ಪ್ರತಿಶತ? ಯಾವ ಸಂಸ್ಥೆಯ ಷೇರಿನ ಮೇಲೆ ಹೂಡಿಕೆ ಮಾಡಬೇಕು? ಷೇರು ಎಂದರೇನು? ಡೆಟ್ ಮತ್ತು ಈಕ್ವಿಟಿ ಎಂದರೇನು? ಕಂಪನಿ ಎಂದರೇನು? ಪ್ರೈವೇಟ್ ಲಿಮಿಟೆಡ್ ಎಂದರೇನು? ಲಿಮಿಟೆಡ್ ಕಂಪನಿ ಎಂದರೇನು? ಇವುಗಳ ಜೊತೆಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾತನಾಡುವ ಬುಲ್ ಮತ್ತು ಬೇರ್ಸ್ ಎಂದರೇನು ಎನ್ನುವುದನ್ನ ಕೂಡ ತಿಳಿದುಕೊಳ್ಳುವ ಅವಶ್ಯತೆಯಿದೆ.
ಇದಿಷ್ಟು ತೀರಾ ಅತ್ಯವಶ್ಯಕವಾಗಿ ತಿಳಿದುಕೊಳ್ಳಲೇ ಬೇಕಾದ ಅಂಶಗಳು, ಸರಿ ಇವುಗಳನ್ನ ಹೇಗೆ ತಿಳಿದುಕೊಳ್ಳುವುದು? ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹಲವಾರು ಪತ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅವುಗಳಲ್ಲಿ ಪ್ರಮುಖವಾದವುಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇನೆ. ಇವುಗಳನ್ನ ನಿರಂತರ ಓದುವುದರಿಂದ ನಮ್ಮಲ್ಲಿ ಯಾವುದು ಉತ್ತಮ? ಯಾವುದು ಅಲ್ಲ ಎನ್ನುವ ತೀರ್ಮಾನ ಮಾಡುವ ಕ್ಷಮತೆ ಬೆಳೆಯುತ್ತ ಹೋಗುತ್ತದೆ. ನೆನಪಿರಲಿ ಇದು ಒಂದು ದಿನ, ವಾರ ಅಥವಾ ತಿಂಗಳುಗಳಲ್ಲಿ ಆಗುವ ಕೆಲಸವಲ್ಲ. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ.
ಕನ್ನಡದಲ್ಲಿ ಈ ವಿಷಯದ ಬಗ್ಗೆ ಹೇಳಿಕೊಳ್ಳುವ ಯಾವ ಪುಸ್ತಕವೂ ಇಲ್ಲ. ಹೀಗಾಗಿ ಕೆಳಗೆ ನಮೂದಿಸಿರುವ ಇಂಗ್ಲಿಷ್ ಪತ್ರಿಕೆಗಳ ಸಹಾಯ ಪಡೆಯುವುದು ಲೇಸು.
- ದಿ ಎಕನಾಮಿಸ್ಟ್
- ಕ್ಯಾಪಿಟಲ್ ಮಾರ್ಕೆಟ್
- ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಜರ್ನಲ್
- ಔಟ್ಲುಕ್ ಮನಿ
- ಬ್ಯುಸಿನೆಸ್ ಟುಡೇ
- ಬ್ಯುಸಿನೆಸ್ ವರ್ಲ್ಡ್
- ಫೋರ್ಬ್ಸ್ ಇಂಡಿಯಾ
- ಫಾರ್ಚ್ಯೂನ್ ಇಂಡಿಯಾ
- ಬ್ಯುಸಿನೆಸ್ ಇಂಡಿಯಾ
- ಬ್ಲೂಮ್ಬರ್ಗ್
- ಫಾಸ್ಟ್ ಕಂಪನಿ
- ಆಡ್ ವೀಕ್
ಇವೆಲ್ಲವೂ ಪ್ರಿಂಟ್ ಮತ್ತು ಆನ್ಲೈನ್ ನಲ್ಲಿ ಲಭ್ಯವಿದೆ. ಕೆಲವೊಂದಕ್ಕೆ ಚಂದಾದಾರರಾಗಬೇಕಾದ ಅವಶ್ಯಕತೆ ಇದೆ. ಕೆಲವು ಆನ್ಲೈನ್ ನಲ್ಲಿ ಪುಕ್ಕಟೆ ಲಭ್ಯವಿವೆ. ಕನ್ನಡದಲ್ಲೇ ಬೇಕು ಎನ್ನುವುದಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಪುಸ್ತಕಗಳನ್ನ ಓದುವುದು ತಕ್ಕ ಮಟ್ಟಿನ ಜ್ಞಾನವನ್ನ ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಜೊತೆಗೆ ಟಿವಿ ಮಾಧ್ಯಮದ ಮೂಲಕ ಕೂಡ ಷೇರು ಮಾರುಕಟ್ಟೆಯ ವಿಶ್ಲೇಷಣೆಯನ್ನ ತಿಳಿಯಬಹುದು. ಭಾರತದಲ್ಲಿ ಕೆಳಕಂಡ ಚಾನಲ್ ಮೂಲಕ ಷೇರು ಮಾರುಕಟ್ಟೆಯ ಜ್ಞಾನವನ್ನ ವೃದ್ಧಿಸಿಕೊಳ್ಳಬಹುದು.
- CNN-News18
- ET NOW
- CNBC TV18
- TIMES NOW
- NDTV PROFIT
- CNBC AWAAZ ·
- EURONEWS ·
- ZEE BUSINESS
ಇಂದು ಮಾಹಿತಿಗೆ ಕೊರತೆಯಿಲ್ಲ ಎಲ್ಲಾ ರೀತಿಯಲ್ಲೂ ಮಾಹಿತಿ ಲಭ್ಯವಿದೆ. ಆದರೆ ಆ ಮಾಹಿತಿಯನ್ನ ವಿಶ್ಲೇಷಣೆ ಮಾಡುವುದು ಮತ್ತು ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನಿಸುವುದು ದೊಡ್ಡ ನಿರ್ಧಾರವಾಗುತ್ತದೆ. ಆ ನಿಟ್ಟಿನಲ್ಲಿ ಒಂದಷ್ಟು ಯೌಟ್ಯೂಬ್ ಚಾನಲ್ಗಳು ನಿಜಕ್ಕೂ ಉತ್ತಮ ಸೇವೆಯನ್ನ ನೀಡುತ್ತಿವೆ. ಅವುಗಳಲ್ಲಿ ಪ್ರಮುಖವಾದ ಒಂದಷ್ಟು ಚಾನಲ್ ಗಳನ್ನ ಇಲ್ಲಿ ಉಲ್ಲೇಖಿಸುವೆ. ಇಷ್ಟವಿದ್ದವರು ಈ ಮೂಲಕ ಕೂಡ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನವನ್ನ ವೃದ್ಧಿಸಿಕೊಳ್ಳುವ ಕೆಲಸವನ್ನ ಮಾಡಬಹುದು.
- Super Trader Lakshya
- Market Maestroo
- Kritika Yadav
- Nitin Bhatia
- Deepak Bajaj
- B Wealthy
- Neeraj Arora
- Trend Trader Karan
- Investaru Official
- Trading Chanakya
- Smart Trader
- Fund Guruji
ಈ ಎಲ್ಲಾ ಮಾಧ್ಯಮಗಳ ಮೂಲಕ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳಬೇಕು. ಒಂದೆರೆಡು ತಿಂಗಳು ಸುಮ್ಮನೆ ಲೇಖನವನ್ನ ಓದುವುದು, ವಿಶ್ಲೇಷಣೆಗಳನ್ನ ಕೇಳುವುದು, ಅವರ ವಿಶ್ಲೇಷಣೆ ಅದೆಷ್ಟು ಸರಿ ಎನ್ನುವುದನ್ನ ನೈಜ ಮಾರುಕಟ್ಟೆಯಲ್ಲಿ ಪರೀಕ್ಷಿಸಿ ನೋಡುವುದು ಮಾಡಬೇಕು. ಇದರ ಜೊತೆಗೆ ನಮ್ಮದೇ ಆದ ಒಂದಷ್ಟು ನಿಲುವು, ವಿಶ್ಲೇಷಣೆ ಮಾಡುವುದು ಕೂಡ ಕಲಿಯಬೇಕು. ಮಾರುಕಟ್ಟೆಯಲ್ಲಿ ಅದು ಹೇಗೆ ಪ್ರತಿಕ್ರಿಯೆಗೆ ಸಿಕ್ಕಿದೆ ಎನ್ನುವುದರ ಆಧಾರದ ಮೇಲೆ ನಮ್ಮ ನಿರ್ಧಾರದ ವಿಶ್ಲೇಷಣೆ ಕೂಡ ಮಾಡಿಕೊಳ್ಳಬೇಕು. ಇಷ್ಟಲ್ಲಾ ಆದ ಮೇಲೆ ಮಾರುಕಟ್ಟೆಯನ್ನ ಪ್ರವೇಶಿಸುವುದು ಎನ್ನುವ ನಿರ್ಧಾರಕ್ಕೆ ಬಂದರೆ, ಆಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೇವೆ ನೀಡುವ ದಲ್ಲಾಳಿ ಸಂಸ್ಥೆಗಳು ಯಾವುದು ಎನ್ನುವುದನ್ನ ತಿಳಿದಿಕೊಳ್ಳಬೇಕು.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕೆಳಕಂಡ ಸರ್ವಿಸ್ ಪ್ರೊವೈಡರ್ಸ್ ಗಳು ಇದ್ದಾರೆ. ಇದರಲ್ಲಿ ಯಾವುದಾದರೊಂದು ಸಂಸ್ಥೆಯಲ್ಲಿ ಡಿಮ್ಯಾಟ್ ಅಕೌಂಟ್ ತೆಗೆಯುವುದರ ಮೂಲಕ ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಬಹುದು.
- Zerodha
- Upstox
- Angel Broking
- Groww
- ICICIdirect
- 5paisa
- Kotak Securities
- HDFC Securities
- IIFL Securities
- Motilal Oswal
- Sharekhan
- SBI Securities
- AxisDirect
- Paytm Money
- Geojit
- Edelweiss
- Religare
- SMC Global
- Choice Broking
- Alice Blue
ಹಿಂದೆ ಷೇರು ಕೊಳ್ಳುವುದು ದಿನಗಳ ಕೆಲಸವಾಗಿತ್ತು, ಇಂದು ಎಲ್ಲಾವೂ ಬೆರಳ ತುದಿಯಲ್ಲೇ ಇದೆ. ನೀವು ನಿಮಗೆ ಸೇವೆ ನೀಡುವ ಬ್ಯಾಂಕ್ ನಲ್ಲಿ ಕೂಡ ಡಿಮ್ಯಾಟ್ ಖಾತೆಯನ್ನ ತೆರೆಯಬಹುದು. ಸೇವಿಂಗ್ ಅಕೌಂಟ್ ತಗೆಯುವಾಗ ಅದರ ಜೊತೆಯಲ್ಲೇ ಡಿಮ್ಯಾಟ್ ಖಾತೆಯನ್ನ ಕೂಡ ಹಲವು ಬ್ಯಾಂಕು ಗಳಲ್ಲಿ ತೆರೆದು ನೀಡುವ ಸೌಲಭ್ಯವಿದೆ.
ಈಗ ನೀವು ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶಿಸಲು ಅರ್ಹತೆಯನ್ನ ಪಡೆದುಕೊಂಡಿದ್ದೀರಿ. ಮುಂದಿನ ಪ್ರಶ್ನೆ ಎಷ್ಟು ಹಣವನ್ನ ಮಾರುಕಟ್ಟೆಯಲ್ಲಿ ತೊಡಗಿಸಬೇಕು ಎನ್ನುವುದು. ಈ ಪ್ರಶ್ನೆಗೆ ಮಾತ್ರ ಉತ್ತರವನ್ನ ಪ್ರತಿಯೊಬ್ಬರೂ ಅವರೇ ಕಂಡುಕೊಳ್ಳಬೇಕು. ಅವರವರ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಇದಕ್ಕೆ ಉತ್ತರವನ್ನ ಕಂಡುಕೊಳ್ಳಬೇಕು. ಇಲ್ಲಿ ಒಂದು ಮಾತನ್ನ ಮಾತ್ರ ಸೇರಿಸಲು ಬಯಸುತ್ತೇನೆ. ಸಾಲ ಮಾಡಿ ಷೇರು ಮಾರುಕಟ್ಟೆಯನ್ನ ಪ್ರವೇಶಿಸಬಾರದು. ಏಕೆಂದರೆ ಸಾಲ ಮಾಡಿ ಮಾಡಿದ ಹೂಡಿಕೆ ಎಂದಿಗೂ ಹೂಡಿಕೆ ಎನ್ನಿಸಿಕೊಳ್ಳುವುದಿಲ್ಲ.
ಮಾರುಕಟ್ಟೆಯಲ್ಲಿ ಷೇರು ಕೊಳ್ಳುವ ಕ್ರಿಯೆಯನ್ನ ಎರಡು ವಿಧಾನದಲ್ಲಿ ಮಾಡಬಹುದು.
1.ಇಂಟ್ರಾ ಡೇ ಟ್ರೇಡಿಂಗ್
2. ಡೆಲಿವರಿ ಟ್ರೇಡಿಂಗ್
ಇಂಟ್ರಾ ಡೇ ಟ್ರೇಡಿಂಗ್ ನಲ್ಲಿ ಅಂದು ಕೊಂಡ ಷೇರನ್ನ ಅಂದೇ ಮಾರುತ್ತಾರೆ. ಹೀಗೆ ಷೇರು ಕೊಳ್ಳುವ ಉದ್ದೇಶ ಅಂದಿನ ದಿನದಲ್ಲಿ ಎಷ್ಟು ಸಾಧ್ಯ ಅಷ್ಟು ಲಾಭವನ್ನ ಮಾಡಿಕೊಳ್ಳುವುದಾಗಿರುತ್ತದೆ. ಇದು ಹೂಡಿಕೆಯ ಲೆಕ್ಕಕ್ಕೆ ಬರುವುದಿಲ್ಲ. ಇದನ್ನ ಕೇವಲ ಟ್ರೇಡಿಂಗ್ ಎನ್ನಬಹುದು. ಇದರಿಂದ ಮಾರುಕಟ್ಟೆ ಮುಂದಿನ ದಿನದಲ್ಲಿ ಏನಾಗುತ್ತದೆ ಎಂದು ತಲೆಕೆಡಿಸಕೊಳ್ಳುವ ಗೋಜಿಲ್ಲ. ಸಣ್ಣ ಮೊತ್ತದ ಹಣ ಬಂಡವಾಳವಿದ್ದರೆ ಸಾಕು. ಬಂಡವಾಳ ಹೆಚ್ಚು ದಿನ ಒಂದೆಡೆ ಉಳಿದುಕೊಳ್ಳುವುದಿಲ್ಲ. ಆದರೆ ಇದರಲ್ಲಿ ಟ್ರೇಡ್ ಮಾಡುವ ವ್ಯಕ್ತಿ ಸದಾ ಜಾಗೃತ ಅವಸ್ಥೆಯಲ್ಲಿ ಇರಬೇಕಾಗುತ್ತದೆ. ಲಾಭದ ಜೊತೆಗೆ ನಷ್ಟ ಕೂಡ ಅಷ್ಟೇ ವೇಗದಲ್ಲಿ ಆಗುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.
ಡೆಲಿವರಿ ಟ್ರೇಡಿಂಗ್ ನಲ್ಲಿ ಷೇರನ್ನ ಖರೀದಿ ಮಾಡಿ ಮುಂದಿನ ದಿನಗಳಲ್ಲಿ ಲಾಭ ಬಂದಾಗ ಮಾರಲು ಇಟ್ಟುಕೊಳ್ಳುತ್ತಾರೆ. ಇದಕ್ಕೆ ಸಮಯ ಮಿತಿ ಇರುವುದಿಲ್ಲ ಅಂದರೆ ಇದನ್ನ ಕೊಂಡ ದಿನವೇ ಮಾರಬೇಕು ಅಥವಾ ಇಷ್ಟು ದಿನದಲ್ಲಿ ಮಾರಬೇಕು ಎನ್ನುವ ಯಾವ ಕಿರಿಕಿರಿ ಇಲ್ಲ . ಖರೀದಿದಾರ ಯಾವಾಗ ಬಯಸುತ್ತಾನೆ ಆಗ ಮಾರುವ ಅವಕಾಶವಿದೆ. ಮಾರದೆ ಉಳಿಸಿಕೊಂಡ ಷೇರು ಗಳ ಮೇಲೆ ಎಲ್ಲರಿಗೆ ಸಿಕ್ಕಹಾಗೆ ಡಿವಿಡೆಂಡ್ ಕೂಡ ಸಿಗುತ್ತದೆ. ಇಂತಹ ಖರೀದಿಯನ್ನ ಇನ್ವೆಸ್ಟ್ಮೆಂಟ್ ಅಥವಾ ಹೂಡಿಕೆ ಎಂದು ಕರೆಯಬಹುದು.
ಹೀಗೆ ಷೇರು ಖರೀದಿಯಲ್ಲಿ ಷೇರಿನ ಮಾಲೀಕರಾಗುವ ಅಥವಾ ಮಾಲೀಕರಾಗದೆ ನಿಗದಿತ ಸಮಯದಲ್ಲಿ ಷೇರನ್ನ ಮಾರುವ ಅಧಿಕಾರವನ್ನ ಕೂಡ ಪಡೆದುಕೊಳ್ಳಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಅದರದೇ ಆದ ವ್ಯವಹರಿಸುವ ರೀತಿಯೂ ಇದೆ. ಹೀಗಾಗಿ ಮಾರುಕಟ್ಟೆಯನ್ನ 1. ಕ್ಯಾಶ್ ಮಾರುಕಟ್ಟೆ 2. ಆಪ್ಷನ್ ಮಾರುಕಟ್ಟೆ ಮತ್ತು 3. ಫ್ಯೂಚರ್ ಮಾರುಕಟ್ಟೆ ಎಂದು ಮೂರು ವಿಭಾಗಗಳನ್ನಾಗಿ ವಿಗಂಡಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆತನ ಹಣಕಾಸು ಮತ್ತು ವಿಶ್ಲೇಷಣೆಗೆ ಅನುಗುಣವಾಗಿ ಬೇಕಾದ ಮಾರುಕಟ್ಟೆಯಲ್ಲಿ ಬೇಕಾದ ರೀತಿಯಲ್ಲಿ ಹೂಡಿಕೆಯನ್ನ ಮಾಡಬಹುದು.
ಕ್ಯಾಶ್ ಮಾರುಕಟ್ಟೆ ಎಂದರೇನು?
ಇದನ್ನ ಡೆಲಿವರಿ ಟ್ರೇಡಿಂಗ್ ಗೆ ಹೋಲಿಸಬಹುದು. ಅಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ನಮಗಿಷ್ಟವಾಗ ಷೇರನ್ನ ನಾವು ಹಣ ಕೊಟ್ಟು ಖರೀದಿಸಬಹುದು. ಒಂದೆರಡು ದಿನದಲ್ಲಿ ಇದು ನಮ್ಮ ಡಿಮ್ಯಾಟ್ ಖಾತೆಗೆ ಜಮಾ ಆಗುತ್ತದೆ. ಅಂದಿನ ದಿನದಿಂದ ಆ ಷೇರಿನ ಮಾಲೀಕತ್ವ ಕೊಡುವರದ್ದಾಗುತ್ತದೆ. ಇದನ್ನ ಯಾವುದೇ ಸಮಯದಲ್ಲಿ ಬೇಕಾದರೂ ಮಾರಬಹುದು. ಮಾರದೆ ಇಟ್ಟು ಕೊಂಡಿದ್ದರೆ ಡಿವಿಡೆಂಡ್ ನೀಡುವ ಸಮಯದಲ್ಲಿ ಡಿವಿಡೆಂಡ್ ಕೂಡ ಸಿಗುತ್ತದೆ. ಇದನ್ನ ಮಾರದೆ ಜಿವಿತಾವಧಿಗೆ ಕೂಡ ಇಟ್ಟುಕೊಳ್ಳಬಹದು.
ಆಪ್ಷನ್ ಮಾರುಕಟ್ಟೆ ಎಂದರೇನು ?
ಆಪ್ಷನ್ ಎನ್ನುವುದು ಒಂದು ಒಪ್ಪಂದ. ಇದರ ಪ್ರಕಾರ ನಿಗದಿ ಪಡಿಸಿದ ಸಮಯದಲ್ಲಿ ಷೇರನ್ನ ಕೊಳ್ಳುವ ಅಥವಾ ಮಾರುವ ಅಧಿಕಾರವನ್ನ ನೀಡುತ್ತದೆ. ಆದರೆ ಕೊಳ್ಳಲೇ ಬೇಕು ಅಥವಾ ಮಾರಲೇ ಬೇಕು ಎನ್ನುವ ಬಾಧ್ಯತೆ ಇರುವುದಿಲ್ಲ. ಆದರೆ ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವುದರ ಮೇಲೆ ಕೂಡ ಇದು ನಿರ್ಧಾರವಾಗುತ್ತದೆ. ಆಪ್ಷನ್ ಖರೀದಿ ಮಾಡುವ ದಿನದಂದು ನಿರ್ದಿಷ್ಟ ಮೊತ್ತವನ್ನ ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಸ್ಟ್ರೈಕ್ ರೇಟ್ ಎನ್ನುತ್ತಾರೆ. ನಿಗದಿತ ದಿನಾಂಕದ ದಿನ ಖರೀದಿದಾರ ನಿಜಕ್ಕೂ ಖರೀದಿ ಮಾಡಲು ಬಯಸಿದರೆ ಅದಕ್ಕೆ 'ಕಾಲ್ ಆಪ್ಷನ್ ' ಎನ್ನುತ್ತಾರೆ. ಅದೇ ಮಾರಟಗಾರ ಇದನ್ನ ಕೊಂಡುಕೊಳ್ಳುವಂತೆ ಖರೀದಿದಾರನಿಗೆ ತಾಕೀತು ಮಾಡಿದರೆ ಅದನ್ನ 'ಪುಟ್ ಆಪ್ಷನ್' ಎನ್ನುತ್ತಾರೆ. ಒಟ್ಟಿನಲ್ಲಿ ಸರಳವಾಗಿ ಹೇಳಬೇಕೆಂದರೆ ಇಲ್ಲಿ ಷೇರಿನ ಮಾಲೀಕತ್ವ ಖರೀದಿದಾರನ ಬಳಿ ತಕ್ಷಣ ಇರುವುದಿಲ್ಲ. ನಿಗದಿತ ಸಮಯದ ನಂತರ ಕೂಡ ಮಾಲೀಕತ್ವ ಹೊಂದುವುದು ಅಥವಾ ಬಿಡುವುದು ಕೂಡ ಒಪ್ಪಂದದ ಮೇಲೆ ನಿಗದಿಯಾಗುತ್ತದೆ.
ಫ್ಯೂಚರ್ ಮಾತುಕಟ್ಟೆ: ಇದು ಕೂಡ ಮುಂದಿನ ದಿನಾಂಕದಲ್ಲಿ ಸೂಚಿತವಾಗಿರುವ ನಿಗದಿತ ಮೌಲ್ಯದ ಷೇರನ್ನ ಖರೀದಿಸುವ ಒಪ್ಪಂದ. ಇದರಲ್ಲಿ ಕೂಡ ಖರೀದಿದಾರ ಷೇರಿನ ಮಾಲೀಕತ್ವ ಪಡೆಯುವುದಿಲ್ಲ. ಹೀಗಾಗಿ ಎಂದೆಂದಿಗೂ ಡಿವಿಡೆಂಡ್ ಸಿಗುವುದಿಲ್ಲ. ಇಲ್ಲಿ ಕನಿಷ್ಠ ಇಷ್ಟು ಎಂದು ಸಂಖ್ಯೆ ನಿಗದಿಯಾಗಿರುತ್ತದೆ. ಅದಕ್ಕೆ ಕಡಿಮೆ ಷೇರನ್ನ ಕೊಳ್ಳುವ ಹಾಗಿಲ್ಲ. ಮೂರು ತಿಂಗಳ ಒಳಗೆ ಒಪ್ಪಂದದ ಪ್ರಕಾರ ಕೊಳ್ಳುವ /ಮಾರುವ ಅಥವಾ ಅದನ್ನ ಮಾಡದೆ ನಷ್ಟ ಅಥವಾ ಲಾಭವನ್ನ ಮಾತ್ರ ಭರಿಸುವ ಅವಕಾಶವಿರುತ್ತದೆ.
ಹೀಗಾಗಿ ಆಪ್ಷನ್ ಮತ್ತು ಫ್ಯೂಚರ್ ಮಾರುಕಟ್ಟೆಯನ್ನ ಒಂದು ರೀತಿಯಲ್ಲಿ ಜೂಜು ಎನ್ನಬಹುದು. ಕ್ಯಾಶ್ ಮಾರುಕಟ್ಟೆಯಲ್ಲಿನ ಹೂಡಿಕೆ ಮಾತ್ರ ಇನ್ವೆಸ್ಟ್ಮೆಂಟ್ ಎನ್ನಿಸಿಕೊಳ್ಳುತ್ತದೆ. ಮೂರರಲ್ಲೂ ಲಾಭವೇ ಮುಖ್ಯವಾದರೂ ಆಪ್ಷನ್ ಮತ್ತು ಫ್ಯೂಚರ್ ನಲ್ಲಿ ಮಾಲೀಕತ್ವ ಪಡೆಯದೇ ಕೇವಲ ಲಾಭದ ಉದ್ದೇಶದಿಂದ ಮಾಡುವ ಸ್ಪೆಕ್ಯುಲೇಷನ್ ಎನ್ನಿಸಿಕೊಳ್ಳುತ್ತದೆ. ಗಟ್ಟಿಯಾಗಿ ಮಾರುಕಟ್ಟೆಯಲ್ಲಿ ಬೆಳೆಯಬೇಕು ಎನ್ನುವ ಉದ್ದೇಶವಿದ್ದವರು ಕ್ಯಾಶ್ ಮಾರುಕಟ್ಟೆಯನ್ನ ಪ್ರವೇಶಿಸುವುದು ಉತ್ತಮ.
ಇಂಟ್ರಾ ಡೇ ಟ್ರೇಡಿಂಗ್, ಆಪ್ಷನ್ ಮತ್ತು ಫ್ಯೂಚರ್ ಟ್ರೇಡಿಂಗ್ ಗಳು ಹೆಚ್ಚಿನ ಹಣವನ್ನ ತಂದು ಕೊಡತ್ತದೆ ಅಥವಾ ಹಾಗೆಯೇ ಹೆಚ್ಚಿನ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಒಬ್ಬ ವೃತ್ತಿಪರ ಹೂಡಿಕೆದಾರ ಇಂತಹ ಗಿಮಿಕ್ಗಳಿಗೆ ಎಂದೂ ಬಲಿಯಾಗುವುದಿಲ್ಲ.
ಕೊನೆಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಮಾಹಿತಿಯ ಕೊರತೆ ಜನರಲ್ಲಿ ಭಯವನ್ನ ಹುಟ್ಟುಹಾಕುತ್ತದೆ. ಹೀಗಾಗಿ ಇಂದಿಗೂ ಭಾರತದಂತಹ ಜನಭರಿತ ದೇಶದಲ್ಲಿ ಕೂಡ ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹಾಗೆ ನೋಡಲು ಹೋದರೆ ಇಂದಿಗೆ ಸಮಾಜದಲ್ಲಿ ಮಾಹಿತಿ ಕೂಡ ಬಹಳಷ್ಟು ಲಭ್ಯವಿದೆ. ಕನ್ನಡಲ್ಲಿ ಕಡಿಮೆ ಎನ್ನಬಹುದು. ಆದರೆ ಮಾಹಿತಿ ಲಭ್ಯವಿದೆ. ಆದರೆ ಅದರ ವಿಶ್ಲೇಷಣೆ , ನೈಜವಾಗಿ ಇದದ್ದನ್ನು ಇದ್ದ ಹಾಗೆ ಹೇಳುವ ಮಾಹಿತಿಯ ಕೊರತೆ ಖಂಡಿತ ಇದೆ. ಹೀಗಾಗಿ ಅದೆಷ್ಟೇ ಚಾನಲ್ಗಳು ಇರಲಿ, ಅದೆಷ್ಟೇ ಸಲಹೆಗಾರರು ಏನೇ ಹೇಳಲಿ, ನಮ್ಮ ವಿಶ್ಲೇಷಣೆ , ನಮ್ಮ ವಿವೇಚನೆ ನಮ್ಮದಾಗಿರಲಿ. ಇದು ನಿರಂತರ ಕಲಿಕೆಯಿಂದ ಸಾಧ್ಯ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com