ಶ್ರವಣ ಸಮಸ್ಯೆ: ಕಿವುಡುತನ ಮತ್ತು ಜಾಗ್ರತೆ (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿ
ಅನೇಕ ಜನರನ್ನು ಮಾತನಾಡಿಸಿ ನೋಡಿ. ಅವರು ತಮ್ಮಕತ್ತನ್ನು ನಮ್ಮತ್ತ ತಿರುಗಿಸಿ ‘ಆಂ’ ಎನ್ನುತ್ತಾರೆ. ಎರಡು ಮೂರು ಬಾರಿ ನಾವು ಹೇಳಿದ್ದನ್ನೇ ಹೇಳಬೇಕು.
Published: 22nd January 2022 09:59 AM | Last Updated: 22nd January 2022 03:43 PM | A+A A-

(ಸಾಂಕೇತಿಕ ಚಿತ್ರ)
ಅನೇಕ ಜನರನ್ನು ಮಾತನಾಡಿಸಿ ನೋಡಿ. ಅವರು ತಮ್ಮಕತ್ತನ್ನು ನಮ್ಮತ್ತ ತಿರುಗಿಸಿ ‘ಆಂ’ ಎನ್ನುತ್ತಾರೆ. ಎರಡು ಮೂರು ಬಾರಿ ನಾವು ಹೇಳಿದ್ದನ್ನೇ ಹೇಳಬೇಕು. ನಮ್ಮ ಬಲಗಡೆ ಕುಳಿತಿರುತ್ತಾರೆ. ಅವರ ಎಡಗಿವಿ ಕೇಳಿಸುತ್ತಿರುವುದಿಲ್ಲ. ಅವರ ಬಲಗಿವಿಗೆ ಕೇಳುವಂತೆ ಹೇಗೆ ಮಾತನಾಡುವುದು? ಕಿವಿ ಕೇಳಿಸದವರಿಗಿಂತ ಅವರೊಡನೆ ಮಾತನಾಡುವ ಕಿವಿ ಸರಿಯಾಗಿ ಕೇಳಿಸುವವರಿಗೇ ಕಸಿವಿಸಿಯಾಗುತ್ತದೆ. ಕಿವಿ ತುಂಬ ಸೂಕ್ಷ್ಮಾಂಗ, ಕಿವಿಯೊಳಗಿನ ಯಾವುದೇ ಭಾಗಕ್ಕೆ ಪೆಟ್ಟು ಬಿದ್ದು ಕಾಲಾನುಕ್ರಮದಲ್ಲಿ ಕಿವುಡಾಗುವ ಸಂಭವ ಇರಬಹುದು.
ಕಿವುಡುತನಕ್ಕೆ ಕಾರಣಗಳು
- ಸದಾ ಕಿವಿಯಲ್ಲಿ ಸೋರುವುದು ಮತ್ತು ಕಿವಿಗೆ ತಗಲುವ ಸೋಂಕು ಮುಂದೆ ಕಿವುಡುತನವನ್ನು ತರಬಹುದು.
- ಕೋಪದ ಭರದಲ್ಲಿ ಕೆನ್ನೆಗೆ ಬಾರಿಸಿ ಬಿಡುವವರಿರುತ್ತಾರೆ. ಹಾಗೆ ಬಾರಿಸುವಾಗ ಕಿವಿಗೆ ಸೇರಿಸಿ ಹೊಡೆಯಬಹುದು. ಇದರಿಂದ ಶಾಶ್ವತ ಕಿವುಡುತನ ಆಗುವ ಸಾಧ್ಯತೆ ಇರುತ್ತದೆ.
- ಬೆಂಕಿಕಡ್ಡಿ, ಹೇರ್‍ಪಿನ್, ಪೆನ್ಸಿಲ್‍ಗಳಿಂದ ಕಿವಿಗಳನ್ನು ಶುಚಿ ಮಾಡಿಕೊಳ್ಳುವವರಿದ್ದಾರೆ. ಇದರಿಂದಾಗಿ ನಿಮ್ಮ ಕಿವಿಯತಮಟೆಗೆ ಪೆಟ್ಟುಬಿದ್ದು ಅದು ಒಡೆಯಬಹುದು ಅಥವಾ ಕಿವಿಯ ನಾಲೆಯ ಅಪಾಯವಾಗಬಹುದು.
- ಪಟಾಕಿ ಗನ್ ಪಾಟ್‍ಗಳು ಇದ್ದಕ್ಕಿದ್ದಂತೆ ಸಿಡಿದಾಗ ಅವುಗಳ ಶಬ್ದ ನಿಮ್ಮ ಕಿವಿಯನ್ನು ಹಾಳು ಮಾಡಬಹುದು.
ಎಚ್ಚರಿಕೆ ವಹಿಸಿ
- ಅತಿಯಾದ ಶಬ್ಧ ಹೊರಹೊಮ್ಮುವ ಕೆಲವು ಕಾರ್ಖಾನೆಗಳಿಂದ ನಿಮ್ಮ ಕಿವಿಗಳ ರಕ್ಷಣೆ ಮಾಡಲು ‘ಇಯರ್ ಪ್ರೊಟೆಕ್ಟರ್’ಗಳ ಬಳಕೆ ಮಾಡಬಹುದು.
- ಅಶುದ್ಧ ನೀರಿನಲ್ಲಿ ಸ್ನಾನ ಮಾಡುವುದು ಬೇಡ.
- ಕಿವಿಯೊಳಕ್ಕೆ ಎಣ್ಣೆ ಮುಂತಾದ ಯಾವುದೇ ದ್ರವ ಪದಾರ್ಥವನ್ನು ಹಾಕಬೇಡಿ, ಕಿವಿ ಯಾವಾಗಲೂ ಒಣಗಿರಲಿ.
- ರಸ್ತೆ ಬದಿಯಲ್ಲಿ ಕಿವಿ ಕ್ಲೀನ್ ಮಾಡುವವರನ್ನು ಉತ್ತೇಜಿಸಬೇಡಿ. ಕಾಟನ್ ಬಡ್‍ನಿಂದ ಕ್ಲೀನ್ ಮಾಡಿ.
- ಒಬ್ಬರು ಉಪಯೋಗಿಸಿದ ಪಿಲ್ಲೋಕವರ್, ಟವಲ್‍ಗಳನ್ನು ಇನ್ನೊಬ್ಬರು ಬಳಸಬಾರದು.
- ಮಗುವಿಗೆ ತಾಯಿ, ಎದೆಹಾಲು ಕುಡಿಸುವಾಗ ಮಗುವಿನ ತಲೆ ಮೇಲಕ್ಕೆತ್ತಿರುವಂತೆ ನೋಡಿಕೊಳ್ಳಿ. ಮೂಗು, ಗಂಟಲುಗಳ ಸೋಂಕಿನಿಂದ ಸಹಾ ಕಿವಿನೋವು ಬರಬಹುದು ಮತ್ತು ಅದು ಮುಂದೆ ಶಾಶ್ವತವಾದ ಕಿವುಡುತನ ಆದೀತು. ಕಿವಿಯನ್ನು ಶುಚಿಯಾಗಿ ಇರಿಸಿಕೊಳ್ಳಿ.
ನಿಮ್ಮ ಮಗುವಿಗೆ ಸರಿಯಾಗಿ ಕಿವಿ ಕೇಳಿಸುತ್ತದೆಯೇ?
ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಕೇಳಿಸುವಂತೆ ನಿಮ್ಮ ಮಗುವಿಗೂ ಕಿವಿ ಕೇಳಿಸುತ್ತಿದೆಯೇ? ಕಿವಿಯಲ್ಲಿ ಏನಾದರೂ ಸಮಸ್ಯೆ, ಡ್ಯಾಮೇಜ್ ಆಗಿದ್ದರೆ, ಸಂವಹನ, ಸಾಮಾಜಿಕವಾಗಿ ಒಡನಾಟ, ಮುಂತಾದವುಗಳಿಗೆಲ್ಲ ಧಕ್ಕೆಯಾಗುತ್ತದೆ. ಅನೇಕ ಕಾರಣಗಳಿಂದ ಕಿವಿಗೆ ತೊಂದರೆಯಾಗುತ್ತದೆ.
ಹುಟ್ಟುವುದಕ್ಕೆ ಮುಂಚೆಯೇ ಕಿವುಡುತನ
- ಮಕ್ಕಳಲ್ಲೇ ಕಿವುಡುತನ ಉಂಟಾಗುವುದು ನಿಮ್ಮ ಕುಟುಂಬದಲ್ಲಿ ಆನುವಂಶೀಯವಾಗಿದ್ದರೆ
- ಸೋದರ ಸಂಬಂಧದಲ್ಲಿ ಮದುವೆಯಾಗಿದ್ದರೆ
- ಗರ್ಭಿಣಿ ಸ್ತ್ರೀಗೆ ಸೋಂಕು ರೋಗಗಳಾಗಿದ್ದರೆ
- ಅತಿಯಾದ ಮಧ್ಯಪಾನ ಅಥವಾ ನಿಕೋಟಿನ್ ಸೇವನೆ ಅಭ್ಯಾಸ
- ಹೆಚ್ಚಿನ ಆಂಟಿಬಯಾಟಿಕ್ಸ್ ಗಳ ಸೇವನೆ
- ಎಕ್ಸ್ ರೇಗಳಿಗೆ ಹೆಚ್ಚು ಒಳಗಾಗಿದ್ದರೆ
- ಜನನ ಸಮಯದಲ್ಲಿ ಅವಧಿಗೆ ಮುಂಚೆ ಶಿಶುಜನನ, ಹೆರಿಗೆ ಸಮಯದಲ್ಲಿ ಸಾಕಷ್ಟು ಆಮ್ಲಜನಕ ದೊರೆಯದೆ ಇರುವುದು
- ಹುಟ್ಟಿದ ಕೂಡಲೇ ತುಂಬ ಕ್ಷೀಣವಾಗಿ ಅಳುವುದು
- ಶಿಶು ಹುಟ್ಟಿದಾಗ 1200 ಗ್ರಾಂಗಿಂತ ಕಡಿಮೆ ತೂಕ ಇದ್ದರೆ.
- ತಜ್ಞ ವೈದ್ಯರ ನೆರವಿಲ್ಲದೇ ಮನೆಯಲ್ಲಿ ಹೆರಿಕೆಗೆಯಾದಾಗ
ಜನನದ ನಂತರ ಕಿವುಡುತನ
- ಕಿವಿ, ಮೂಗು, ಮುಖ, ಗಂಟಲಿನ ತೊಂದರೆ
- ಹುಟ್ಟಿದ ತಕ್ಷಣ ಬರುವ ಜಾಂಡೀಸ್, ಜ್ವರ, ಫಿಟ್ಸ್
- ನಾಯಿ ಕೆಮ್ಮು, ದಡಾರ, ಸಿಫಿಲಿಸ್, ಮೆನಿಂಜೈಟಿಸ್, ವೈರಲ್‍ಜ್ವರ, ಟಿ.ಬಿ.
- ತಲೆಗೆ ಪೆಟ್ಟು, ಕಿವಿ ಸೋರುವುದನ್ನು ಚಿಕಿತ್ಸೆ ಮಾಡಿಸದೆ ಇದ್ದರೆ
- ಕಿವಿಯಲ್ಲಿ ಟ್ಯೂಮರ್ (ಗಡ್ಡೆ), ಅತಿಯಾದ ಶಬ್ದಕ್ಕೆ ಕಿವಿ ಕೊಟ್ಟಿರುವುದು
- ಆನುವಂಶೀಯ ರಕ್ತದ ಒತ್ತಡ, ಮಧುಮೇಹ.
ತಡೆಗಟ್ಟಲು ಹೀಗೆ ಮಾಡಿ
- ತಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕು. ಜರ್ಮನ್ ಮೀಸಲ್ಸ್‍ತಡೆಗಟ್ಟುವ ವ್ಯಾಕ್ಸಿನೇಷನ್ ಹಾಕಿಸಿರಬೇಕು.
- ಕಾಲಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಸೋದರ ಸಂಬಂಧದಲ್ಲಿ ವಿವಾಹ ಮಾಡಬೇಡಿ.
- ಹೆಚ್ಚಿನ ವಿವರಗಳಿಗೆ ನಿಮ್ಮ ಇ.ಎನ್.ಟಿ ಸರ್ಜನ್‍ರನ್ನು ಸಂಪರ್ಕಿಸಿ.
ಮಗುವಿಗೆ ಶ್ರವಣ ಚಿಕಿತ್ಸೆ
ನಿಮ್ಮ ಮಗುವಿಗೆ ಅತಿ ಸಣ್ಣ ಶಬ್ದವೂ ಸರಿಯಾಗಿ ಕೇಳಿಸುತ್ತದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಒಂದು ಸರಳ ಚಿಕಿತ್ಸೆಯನ್ನು ವಾಕ್ ಶ್ರವಣ ತಜ್ಞರು ಮಾಡುತ್ತಾರೆ. ಮಗುವಿನ ಕಿವಿಯ ಮೇಲೆ ಹೆಡ್-ಫೋನ್ ಇರಿಸಿ ಅದರ ಮೂಲಕ ಶಬ್ದವನ್ನು ಕೇಳಿಸುತ್ತಾರೆ. ‘ಶಬ್ದ ಕೇಳಿಸಿದಾಗಲೆಲ್ಲ ನಿನ್ನ ಬೆರಳನ್ನು ತೋರಿಸಬೇಕು. ಮರೀ...’ ಎಂದು ಮಗುವಿಗೆ ತಿಳಿಸುತ್ತಾರೆ. ಈ ಪರೀಕ್ಷೆಯ ವರದಿಯನ್ನು ನೋಡಿ ಆಡಿಯಾಲಜಿಸ್ಟ್ ಎಂಬ ತಜ್ಞರು ಮಗುವಿಗೆ ಯಾವ ರೀತಿಯ ಸಹಾಯ ಬೇಕು ಎಂಬುದನ್ನು ತಿಳಿಸುತ್ತಾರೆ. ಮಗು ಈ ಚಿಕಿತ್ಸೆಯಲ್ಲಿ ಸರಿಯಾಗಿ ಸ್ಪಂದಿಸಿದಾಗ ಕರಾರುವಾಕ್ಕಾದ ವರದಿ ಸಾಧ್ಯ.
ಶ್ರವಣ ಚಿಕಿತ್ಸೆಗಾಗಿ ನೀವು ಮಗುವನ್ನು ಹೇಗೆ ತಯಾರು ಮಾಡಬೇಕು?
ಮನೆಯಲ್ಲಿರುವ ಸುಲಭವಾಗಿ ಶಬ್ಧವಾಗುವ ಗಂಟೆ, ಚಮಚ, ಲೋಹದತಟ್ಟೆ ಮತ್ತು ಕಡ್ಡಿ ಆಟಿಕೆ, ಮುಂತಾದವುಗಳಿಂದ ಶಬ್ದಮಾಡಿ ಶಬ್ಧ ಸುಮಾರಾಗಿ ಜೋರಾಗಿ ಕೇಳಿಸುವಂತಿರಲಿ. ನಿಮ್ಮ ಮಗುವಿನ ಮುಂದೆ ದಪ್ಪನೆಯ ಬೀಜಗಳು ಗೋಲಿ ಅಥವಾ ಮಣಿಗಳನ್ನು ಇಡಿ. ಪಕ್ಕದಲೊಂದು ಸಣ್ಣ ಡಬ್ಬ ಇರಲಿ. ಒಂದು ಗೋಲಿಯನ್ನು ನಿಮ್ಮ ಕಿವಿಯ ಬಳಿ ಹಿಡಿದುಕೊಳ್ಳಿ. ಮಗುವೂ ಹಾಗೆಯೇ ಮಾಡುವಂತೆ ಹೇಳಿ ಆ ಮೇಲೆ ನೀವು ಡಬ್ಬತಟ್ಟೆ ಮುಂತಾದವುಗಳಿಂದ ಶಬ್ಧ ಮಾಡಿ ಒಮ್ಮೆ ನೀವು ಶಬ್ಧ ಮಾಡಿದರೆ ಮಗುವೂ ಒಂದು ಗೋಲಿಯನ್ನು ಡಬ್ಬದೊಳಕ್ಕೆ ಹಾಕುವಂತೆ ತೋರಿಸಿಕೊಡಿ. ಇದನ್ನು ಪದೇ ಪದೇ ಮಾಡಿ ಮುಂದೆ ಇದೇ ಶಬ್ಧವನ್ನು ಮಗುವಿನ ಬೆನ್ನ ಹಿಂದೆ ಮಾಡಿ. ಆಗಲೂ ಮಗುವಿಗೆ ಕೇಳಿಸುತ್ತದೆಯೇ ಗಮನಿಸಿ. ಶಬ್ಧ ಮಾಡುವಾಗ ಮಗುವಿಗೆ ನೀವು ಕಾಣಿಸದಂತೆ ನೋಡಿಕೊಳ್ಳಿ ನಿಮ್ಮ ನೆರಳು ಸಹಾ ಕಾಣದಿರಲಿ. ಶಬ್ಧ ಮಾಡುವಾಗ ಮಗುವನ್ನು ಮುಟ್ಟಬೇಡಿ. ಮಗುವಿನ ಹಿಂದೆ 2-3 ಅಡಿ ದೂರದಿಂದ ಶಬ್ಧ ಮಾಡಿ. ಈ ರೀತಿಯ ಆಟದಿಂದ ಮಗು ಮುಂದೆ ತಜ್ಞರ ಬಳಿ ಹೋದಾಗ, ಅವರು ಮಾಡುವ ಟೆಸ್ಟ್‍ಗಳಿಗೆ ಸ್ಪಂದಿಸುತ್ತದೆ. Audiologist ರವರು ಸೂಕ್ತ ಸಹಾಯ ಮಾಡುತ್ತಾರೆ.
ಡಾ. ವಸುಂಧರಾ ಭೂಪತಿ,
ಇ-ಮೇಲ್: bhupathivasundhara@gmail.com
ಫೋನ್: 9986840477