ಕಟ್ಟುವೆವು ನಾವು ಹೊಸ ನಾಡೊಂದನು, ಗೊಂದಲದ ಗೂಡೊಂದನು, ವಿದ್ಯೆ ಸಿಗದ ಬೀಡೊಂದನು: ಗಣರಾಜ್ಯೋತ್ಸವದ ಶುಭಾಶಯಗಳು ಶಿಕ್ಷಣ ಸಚಿವರೇ..!
- ಸ್ವಾತಿ ಚಂದ್ರಶೇಖರ್ (ಅಂತಃಪುರದ ಸುದ್ದಿಗಳು)
ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿಯಿಡುತ್ತಿರುವ ಕೊರೋನ. ಮಾನ್ಯ ಮುಖ್ಯಮಂತ್ರಿಗಳೆ, ಮಂತ್ರಿಗಳೇ ಸರ್ಕಾರಿ ಶಾಲೆ ತೆರೆಯಿರಿ.
Published: 26th January 2022 01:53 PM | Last Updated: 27th January 2022 02:23 PM | A+A A-

ಶಾಲಾ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಳ್ಳಿಯಿಡುತ್ತಿರುವ ಕೊರೋನ. ಮಾನ್ಯ ಮುಖ್ಯಮಂತ್ರಿಗಳೆ, ಮಂತ್ರಿಗಳೇ ಸರ್ಕಾರಿ ಶಾಲೆ ತೆರೆಯಿರಿ.
ಕೊರೋನ ಎಂಬ ಸಣ್ಣ ವೈರಾಣುವಿನಿಂದ ಇಡೀ ಜಗತ್ತು ತತ್ತರಿಸಿ ಹೋಗಿರುವುದು ಎಲ್ಲರಿಗೂ ತಿಳಿದ ವಿಷಯ. ಕಳೆದ 2 ವರ್ಷಗಳಿಂದ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ. ಇಡೀ ಪ್ರಪಂಚದಲ್ಲಾದ ಸಾವು-ನೋವುಗಳಿಗೆ ಲೆಕ್ಕವೇ ಇಲ್ಲ. ಜನರ ಪ್ರಾಣ ಉಳಿದರೆ ಸಾಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ಅನಿವಾರ್ಯವಾಗಿ ಎಲ್ಲಾ ವ್ಯಾಪಾರ ವ್ಯವಹಾರ, ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಬೇಕಾದ ಸಂದರ್ಭ ಬಂದೊದಗಿತ್ತು. ಇದರಿಂದ ಜನ ಸಾಮಾನ್ಯರಿಗಾದ ನಷ್ಟ-ಕಷ್ಟ ಅಷ್ಟಿಷ್ಟಲ್ಲ. ಪ್ರವಾಸಗಳನ್ನೇ ನಂಬಿಕೊಂಡ ಪ್ರವಾಸಿ ತಾಣಗಳಲ್ಲಿನ ವ್ಯಾಪಾರಿಗಳ, ಪ್ರಯಾಣಿಕರನ್ನೇ ನಂಬಿಕೊಂಡಿದ್ದ ಆಟೋ, ಟ್ಯಾಕ್ಸಿ ಚಾಲಕರ, ಗ್ರಾಹಕರನ್ನೇ ನಂಬಿಕೊಂಡ ವ್ಯಾಪಾರಿಗಳ, ಹೋಟೆಲ್ ಮಾಲಿಕರ ಕಷ್ಟ ಹೇಳತೀರದು. ಆದರೆ ಇಂತಹ ಸಂಕಟದ ಸಮಯದಲ್ಲೂ ಜನರ ಅಸಹಾಯಕತೆಯನ್ನೇ ಬಂಡವಾಳವಾಗಿರಿಸಿಕೊಂಡು ಹೇರಳ ಹಣ ಮಾಡಿದವರು ಆಸ್ಪತ್ರೆಗಳು ಹಾಗೂ ತಮ್ಮ ವಾಹಿನಿಯ TRP ಹೆಚ್ಚಿಸಿಕೊಂಡ ಸುದ್ದಿ ಸಂಸ್ಥೆಗಳು ಇಗೋ ಇಲ್ಲಿ ಉತ್ತರ ನೀಡಿ.
ಕೊರೋನಾ ಅವಧಿಯಲ್ಲಿ ಶಾಲೆಯ ಮುಖವೇ ನೋಡದ ಮಕ್ಕಳು ಒಂದು ಕಡೆ ಆದರೆ, ಶಾಲೆಗೆ ಹೋಗಿಯೂ ಶಾಲೆಯನ್ನು ಮರೆತು ಹೋದ ಮಕ್ಕಳು ಮತ್ತೊಂದೆಡೆ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳು.
ಹಾಗೂ ಹೀಗೂ online ತರಗತಿಗಳ ಮೂಲಕ ಖಾಸಗಿ ಶಾಲೆಯ ಮಕ್ಕಳು ಸ್ವಲ್ಪವಾದರೂ ಕಲಿಯುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯ ಮಕ್ಕಳ ಗೋಳನ್ನು ಕೇಳುವವರಾರು?
ಮೊದಲೇ ಸರಕಾರಿ ಶಾಲಾ ಶಿಕ್ಷಕರು online ತರಗತಿಗಳನ್ನು ಮಾಡುವುದೇ ವಿರಳ. ಮಾಡಿದರೂ ವಿದ್ಯಾರ್ಥಿಗಳ ಮನೆಗಳಲ್ಲಿ ಅದಕ್ಕೆ ಬೇಕಾದ ಮೊಬೈಲ್ ಆಗಲಿ, ಕಂಪ್ಯೂಟರ್ ಆಗಲಿ ಅಥವಾ ಇಂಟರ್ನೆಟ್ ಮುಂತಾದ ಸೌಲಭ್ಯ ಇರುವುದಿಲ್ಲ. ಮನೆಯಲ್ಲಿ 2-3 ಓದುವ ಮಕ್ಕಳಿದ್ದರೆ, ಪೋಷಕರ ಬಳಿ ಅಷ್ಟು ಮೊಬೈಲ್ ಗಳನ್ನು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ಹೀಗಾಗಿ ಎರಡು ವರ್ಷಗಳಿಂದ ಈ ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು, ಎಷ್ಟೋ ಹಳ್ಳಿಗಳಲ್ಲಿ ತಂದೆತಾಯಿಗಳು ಬಾಲ್ಯವಿವಾಹದಂತಹ ಘೋರ ಅಪರಾಧಗಳನ್ನು ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳನ್ನು ಕೂಲಿ ಕೆಲಸ ಮತ್ತು ಮನೆ ಕೆಲಸಗಳಿಗೆ ಹಚ್ಚುತ್ತಿದ್ದಾರೆ. ಆ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಕೇಂದ್ರ ಕೇಳುತ್ತಿಲ್ಲ ರಾಜ್ಯ ಮಾಡುತ್ತಿಲ್ಲ!!
"ಶಾಲೆ ಉದ್ಯಮ" ನಿಮ್ಮ ವಿಷಯ ಎಂದು ಬಿಟ್ಟಿರುವ ಕೇಂದ್ರ, ನಾವು ಯಾಕೆ ಸಿಕ್ಕಿ ಹಾಕೋಳೋಣ ಎನ್ನುವ ರಾಜ್ಯ. ಕೇಂದ್ರ ಸರ್ಕಾರ ಸರ್ಕಾರಿ ಶಾಲೆಗಳ ತೆರೆಯುವಿಕೆ ಬಗ್ಗೆ ಕೊಂಚವೂ ಗಮನ ನೀಡಿದೆ ಇರುವುದು ಶೋಚನೀಯ. ಇದೇ ಬಿಜೆಪಿ ಸರ್ಕಾರ ಸರ್ವ ಶಿಕ್ಷಣ ಅಭಿಯಾನವನ್ನು ಆರಂಭಿಸಿ ಸೈ ಎನಿಸಿಕೊಂಡಿರುವ ಸಂಗತಿಯನ್ನು ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನರಿಗೆ ನೆನಪಿಸುವ ಅಗತ್ಯವಿದೆ. ಇನ್ನು ರಾಜ್ಯದಲ್ಲಿ ಸರ್ಕಾರಿ ಶಾಲೆ ಇದೆ ಎನ್ನುವುದನ್ನು ಶಿಕ್ಷಣ ಮಂತ್ರಿ ಬಿ.ಸಿ ನಾಗೇಶ್ ರವರು ಮರೆತಂತೆ ಇದೆ. ಆನ್ಲೈನ್ ತರಗತಿ ಸಾಧ್ಯವಿಲ್ಲ, offline ತೆರೆಯೋಲ್ಲ. ಹೀಗೆಯೇ ಮುಂದುವರೆದರೆ ಇನ್ನು ನಮ್ಮ ದೇಶಕ್ಕೆ ಭವಿಷ್ಯ ಇಲ್ಲ!
ಈಗಲಾದರೂ ಸರ್ಕಾರ ಮತ್ತು ಜನನಾಯಕರು ಎಚ್ಚೆತ್ತುಕೊಳ್ಳದಿದ್ದರೆ, ಬಡ ವಿದ್ಯಾರ್ಥಿಗಳ ಜೀವನ ಹಾಳಾಗಿ ಹೋಗುತ್ತದೆ. ಅದರೊಂದಿಗೆ ನಮ್ಮ ದೇಶದ ಭವಿಷ್ಯವೂ ನಾಶವಾಗುತ್ತದೆ. ಕೊರೋನದ ಮೊದಲೆರಡು ಅಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಸಾಕಷ್ಟು ಸಾವು-ನೋವುಗಳಾದವು. ಆ ಸಮಯದಲ್ಲಿ ಶಾಲೆಗಳನ್ನು ಮುಚ್ಚುವ, ಲಾಕ್ ಡೌನ್ ಮಾಡುವ ಸರ್ಕಾರದ ನಿರ್ಧಾರ ಆ ಸಂದರ್ಭಕ್ಕೆ ಸರಿಯಾದ ನಿರ್ಣಯವಾಗಿತ್ತು. ಆದರೆ ಈಗ ಮೂರನೇ ಅಲೆಯಲ್ಲಿ ಪರಿಸ್ಥಿತಿ ಅಷ್ಟು ಗಂಭೀರವಾಗಿಲ್ಲ. ಸಾಕಷ್ಟು ಜನರು ಲಸಿಕೆ ಪಡೆದಿದ್ದಾರೆ. ಸಾವುನೋವುಗಳ ಸಂಖ್ಯೆಯೂ ಕಡಿಮೆ. ಅದರಲ್ಲೂ ಮಕ್ಕಳಿಗೆ ಸೋಂಕು ತಗಲಿ ಸಾವು ಸಂಭವಿಸಿರುವುದು ಬಹಳ ಕಡಿಮೆ.
ಈಗಾಗಲೇ ಸಾಕಷ್ಟು ಖಾಸಗಿ ಶಾಲೆ ಮಕ್ಕಳು ಆನ್ಲೈನ್ ತರಗತಿಗಳ ಹೆಸರಿನಲ್ಲಿ ಮೊಬೈಲ್ ದಾಸರಾಗಿದ್ದಾರೆ. ಶಾಲೆಗೆ ಹೋಗುವ ಅನಿವಾರ್ಯತೆ ಇಲ್ಲದಿರುವುದರಿಂದ ತಡವಾಗಿ ಏಳುವುದು, ಕ್ರಮ ತಪ್ಪಿರುವ ದಿನಚರಿ, ಆಹಾರ ಸೇವನೆ ಹೀಗೆ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತೇ ಇಲ್ಲದಾಗಿದೆ. ಮತ್ತು ಸ್ನೇಹಿತರೊಡನೆ ಬೆರೆಯುವುದು, ಮೈದಾನದಲ್ಲಿ ಆಟವಾಡುವುದು ಮರೆತೇ ಹೋಗಿದೆ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಬಹಳ ಅಡ್ಡ ಪರಿಣಾಮ ಉಂಟಾಗುತ್ತಿದೆ. ಮಕ್ಕಳಿಗೆ ಓದಿನ ಮೇಲೆ ಆಸಕ್ತಿಯೇ ಇಲ್ಲದಾಗಿದೆ. ಇದೆಲ್ಲವೂ ಸರ್ಕಾರದ ಹೊಣೆ ಎಂದು ಹೇಳುವುದಿಲ್ಲ ಆದರೆ ಸರ್ಕಾರ ಮನಸ್ಸು ಮಾಡಿದರೆ ಜವಾಬ್ದಾರಿ ನಿಭಾಯಿಸುವುದು ಕಷ್ಟವಲ್ಲ.
ಎಚ್ಚೆತ್ತುಕೊಳ್ಳಿ ಮೂರು ವರುಷದ ಶಿಕ್ಷಣ ತೊಡುಕು, ಮೂರು ದಶಕ ಶ್ರಮಿಸಿದರೂ ತೀರಿಸಲು ಆಗದು. ಸರ್ಕಾರಿ ಶಾಲೆಯನ್ನು ಶೇ.50 ರಂತೆ ಎರಡು ದಿನಕ್ಕೆ ಒಮ್ಮೆಯಂತೆ ತೆರೆಯಿರಿ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯತಂತ್ರ ರೂಪಿಸಿ ಸೈ ಎನಿಸಿಕೊಳ್ಳಿ 73 ನೆ ಗಣರಾಜ್ಯೋತ್ಸವ ಅರ್ಥಪೂರ್ಣವಾಗಲಿ.
ಸಾಮಾನ್ಯವಾಗಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗಲು ಹೊರಡುವ ಪ್ರತಿ ನಾಯಕ ಈ ಸವಾಲು ಎದುರಿಸಲೇಬೇಕು
ನೆಹರೂಯಿಂದ ಅಂಬೇಡ್ಕರ್ ವರೆಗೆ, ದೇವೇಗೌಡರಿಂದ ಸಿದ್ದರಾಮಯ್ಯವರೆಗೆ, ಲೋಹಿಯಾಯಿಂದ ವಾಜಪೇಯಿವರೆಗೆ, ಜಯಲಲಿತಾಯಿಂದ ಮಮತಾವರೆಗೆ, ಮೋದಿಯಿಂದ ಯೋಗಿ ವರೆಗೆ, ರಾಹುಲ್ ಗಾಂಧಿಯಿಂದ ಅಖಿಲೇಶ್ ವರೆಗೆ ಎಲ್ಲರದ್ದು ಇದೇ ಪ್ರಶ್ನೆ. ಅದು ಯಾವ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ರಾಜ್ಯದ ಅಥವಾ ದೇಶದ ಅಷ್ಟು ಭಾಗಕ್ಕೆ ಪ್ರಭಾವ ಬೀರಬಹುದು..? ಎಂಬುದಾಗಿದೆ.
ಸದ್ಯ ಯೋಗಿ, ಅಖಿಲೇಶ್, ಪ್ರಿಯಾಂಕಾಗೂ ಕಾಡುತ್ತಿರುವುದು ಅದೇ ಪ್ರಶ್ನೆ!
ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಹಾದಿ ಹಿಡಿದಿರುವ ಅಖಿಲೇಶ್, ಯಾದವ ಪ್ರಾಬಲ್ಯ ಹೊಂದಿರುವ ಕುಂಚಿಕೋಟ, ಸದ್ಯಕ್ಕೆ ಸೇಫ್ ಕ್ಷೇತ್ರ ಹಾಗಾಗಿ ಇಲ್ಲಿಂದಲೇ ಕಣಕ್ಕೆ ಇಳಿಯುತ್ತಿದ್ದಾರೆ. ಅವರನ್ನು ಇವರನ್ನು ಸೋಲಿಸುವೆ ಎಂದು ಹೋದಲೆಲ್ಲಾ ಇಲ್ಲಿ ಸ್ಪರ್ಧಿಸುವೆ ಎಂದಿದ್ದ ಅಖಿಲೇಶ್ ಈಗ ಗೆಲ್ಲುವ ಕುದುರೆ ಆರಿಸಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ವಿಚಾರದಲ್ಲೂ ಇದೇ ರೀತಿಯ ಚರ್ಚೆ ನಡೆದಿತ್ತು, ಹಿಂದೂ ಮತಗಳನ್ನು ಒಗ್ಗೂಡಿಸುವ ಸಲುವಾಗಿ ರಾಮಮಂದಿರ ಘೋಷಣೆಯನ್ನು ನನಸು ಮಾಡುವ ‘ಅಯೋಧ್ಯೆ’ಯಿಂದ ಸ್ಪರ್ಧಿಸುತ್ತಾರೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು, ಇಲ್ಲವಾದಲ್ಲಿ ತೀವ್ರ ಪೈಪೋಟಿ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಪಶ್ಚಿಮ ಯುಪಿಯ ‘ಮಥುರಾ’ದಿಂದ ಕಣಕ್ಕೆ ಇಳಿದು ವೇಗ ಪಡೆಯುತ್ತಾರೆ ಎಂಬ ಮಾತು ಕೇಳಿಬಂತು. ಆದರೆ ಈ ಊಹಾಪೋಹಗಳಿಗೆ ಪೂರ್ಣವಿರಾಮ ಹಾಕಿರುವ ಯೋಗಿ ತಮ್ಮ ತವರು ಕ್ಷೇತ್ರ ‘ಗೋರಖ್ಪುರ ಸದಾರ್’ನಿಂದ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು. ಚುನಾವಣಾ ಪ್ರಚಾರದ ವೇಳೆ ರಾಜ್ಯಾದ್ಯಂತ ಸಂಚರಿಸಬೇಕಾಗಿದ್ದು, ಬೇರೆ ಕಡೆ ಸ್ಪರ್ಧಿಸಿ ಪ್ರಯೋಗಕ್ಕೆ ಕುಳಿತರೆ ರಾಜ್ಯದ ಉಳಿದ ಕ್ಷೇತ್ರಗಳತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ.
ಒಟ್ಟಿನಲ್ಲಿ ಯೋಗಿ, ಅಖಿಲೇಶ್ ಇಬ್ಬರೂ ಸೇಫ್ ಸೀಟ್ ನಿಂದ ಕಣಕ್ಕಿಳಿದು ಆಟ ಶುರು ಮಾಡಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಗೋರಖ್ಪುರ ಸದಾರ್ನಿಂದ ಸ್ಪರ್ಧಿಸುತ್ತಾರೆ ಎಂದು ತಿಳಿದ ತಕ್ಷಣ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಬಿಜೆಪಿಯು ಯೋಗಿಯನ್ನು ಮನೆಗೆ ಕಳುಹಿಸಿದೆ ಅಂತ ಟೀಕಿಸಿದ್ದರು, ಅನಿವಾರ್ಯವಾಗಿ ಅಖಿಲೇಶ್ ಕೂಡ ಯೋಗಿ ಹಾದಿ ಹಿಡಿಯಬೇಕಾಯಿತು.
ಕರ್ಹಾಲ್ ಕಂಚುಕೋಟದಲ್ಲಿ
ಕಳೆದ ಕೆಲವು ದಶಕಗಳಿಂದ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದ್ದ ಕರ್ಹಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕ್ಷೇತ್ರವು ಅಖಿಲೇಶ್ ತವರು ಸೈಫಿಯಿಂದ ಕೇವಲ 5 ಕಿ.ಮೀ. ದೂರದಲ್ಲಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅಲೆ ಮಧ್ಯೆಯೂ ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಶೋಭರಣ್ ಯಾದವ್, ಬಿಜೆಪಿ ಅಭ್ಯರ್ಥಿ ರಾಮ ಶಾಕ್ಯ, ವಿರುದ್ಧ 38 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಯಾದವರ ಪ್ರಾಬಲ್ಯವಿರುವ ಕರ್ಹಾಲ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು 1993 ರಿಂದ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ. ಒಮ್ಮೆಯೂ ಆ ಪಕ್ಷ ಇಲ್ಲಿ ಸೋತಿಲ್ಲ.
ಈ ಕ್ರಮದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಖಿಲೇಶ್ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿದೆ, ಇದನ್ನು ದೃಢಪಡಿಸುವಂತೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ಅಧಿಕೃತ ಹೇಳಿಕೆ ನೀಡಿದ್ದಾರೆ. ಅಖಿಲೇಶ್ ಹತ್ತಿರದ ಸಂಬಂಧಿ ತೇಜ್ ಪ್ರತಾಪ್ ಸಿಂಗ್ ಗೆ ಕ್ಷೇತ್ರದ ಪ್ರಚಾರದ ಜವಾಬ್ದಾರಿ ನೀಡಲಾಗಿದೆ. ಫೆ.20ರಂದು ಇಲ್ಲಿ ಮತದಾನ ನಡೆಯಲಿದೆ.
ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆ ಎದುರಿಸಿದ್ದಾರೆಯೇ ಹೊರತು ಇದುವರೆಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ತಿನಲ್ಲಿ ಪ್ರತಿನಿಧಿಸಿದ್ದು ಬಿಟ್ಟರೆ ಎಂದೂ ವಿಧಾನಸಭೆಗೆ ಸ್ಪರ್ಧಿಸಿಲ್ಲ. ಪ್ರಸ್ತುತ ಅಜಂಗಢದಿಂದ ಸಂಸದರಾಗಿ ಮುಂದುವರಿದಿದ್ದಾರೆ. ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು ನಿರ್ಧರಿಸಿದ ನಂತರ, ಅಜಂಗಢದ ಗೋಪಾಲ್ಪುರ ಕ್ಷೇತ್ರ ಮತ್ತು ಬದೌನ್ನ ಗುನ್ನೌರ್ ಕ್ಷೇತ್ರವು ಪರಿಶೀಲನೆಗೆ ಒಳಗಾಯಿತು. ಆದರೆ, ಕರ್ಹಾಲ್ ನಲ್ಲಿ ಸ್ಪರ್ಧಿಸುವುದು ಸುರಕ್ಷಿತ ಎಂದು ಅಂತಿಮವಾಗಿ ನಿರ್ಧರಿಸಲಾಯಿತು.
ಗೋರಖ್ಪುರ ಪ್ರದೇಶವು ಕಳೆದ ಕೆಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. 1989 ರಿಂದ ಬಹುತೇಕ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಈ ಪ್ರದೇಶದಲ್ಲಿ ಗೋರಖನಾಥ ದೇವಸ್ಥಾನ ಮತ್ತು ಮಠದ ಪ್ರಭಾವ ಹೆಚ್ಚಿದ್ದು, ಹಿಂದುತ್ವ ಸಿದ್ಧಾಂತ ಇಲ್ಲಿ ಬಿಜೆಪಿಗೆ ನಿರ್ವಿವಾದವಾಗಿ ಧನಾತ್ಮಕವಾಗಿದೆ. 2002 ರಿಂದ ಗೋರಖ್ಪುರ ಸದಾರ್ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ್ ಅವರ ಆಪ್ತ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಪ್ರತಿನಿಧಿಸಿದ್ದಾರೆ. 2007 ರಲ್ಲಿ ಬಹುಜನ ಸಮಾಜ ಪಕ್ಷ ಮತ್ತು 2012 ರಲ್ಲಿ ಸಮಾಜವಾದಿ ಪಕ್ಷವು ಈ ಸ್ಥಾನವನ್ನು ಗೆದ್ದಿದ್ದರೂ, ಹಿಂದುತ್ವ ಶಕ್ತಿಗಳು ಈ ಪ್ರದೇಶದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದವು. 2018 ರಲ್ಲಿ ಗೋರಖ್ಪುರ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ, ನಿಶಾದ್ ಪಕ್ಷದ ನಾಯಕ ಪ್ರವೀಣ್ ನಿಶಾದ್ ಸಮಾಜವಾದಿ ಪಕ್ಷದ ಚಿಹ್ನೆಯ ಮೇಲೆ ಗೆದ್ದರು. ಇದಾದ ಕೆಲವೇ ದಿನಗಳಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸಿತು. ಬಿಜೆಪಿ ಮತ್ತು ಅದರ ಅಂಗವಾಗಿರುವ ಹಿಂದೂ ಸಮುದಾಯಗಳ ಜೊತೆಗೆ, ಯೋಗಿ ಆದಿತ್ಯನಾಥ್ ಇಲ್ಲಿ ತಮ್ಮದೇ ಆದ ಬಲವನ್ನು ಹೊಂದಿದ್ದಾರೆ. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ, ಹಿಂದೂ ಯುವ ವಾಹಿನಿಯ ಮೂಲಕ ಯೋಗಿ ತಮ್ಮ ಹಿಡಿತವನ್ನು ಮುಂದುವರೆಸಿದ್ದಾರೆ.
ಅಯೋಧ್ಯೆ ಮತ್ತು ಮಥುರಾ ಹಾಗಲ್ಲ ಯೋಗಿ ಆದಿತ್ಯನಾಥ್ ಗೋರಖ್ಪುರ ಪ್ರದೇಶದೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ. ಅಯೋಧ್ಯೆಯ ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಅಷ್ಟೊಂದು ಸಕಾರಾತ್ಮಕವಾಗಿಲ್ಲ ಎಂಬುದು ಯೋಗಿಗೆ ಗೊತ್ತಿತ್ತು. ಈ ಕ್ರಮದಲ್ಲಿ ಗೋರಖ್ಪುರ್ ಸದರ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಣಕ್ಕೆ ಇಳಿದಿದ್ದಾರೆ. ಯೋಗಿ ವಿರುದ್ಧ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನೀಲ್ ಶಾಸ್ತ್ರಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ರಣತಂತ್ರ ರೂಪಿಸುತ್ತಿದೆ. ಸುನೀಲ್ ಶಾಸ್ತ್ರಿ 1980 ಮತ್ತು 1985 ರ ಚುನಾವಣೆಯಲ್ಲಿ ಗೆದ್ದ ಇತಿಹಾಸವನ್ನೂ ಹೊಂದಿದ್ದಾರೆ. ಎದುರಾಳಿಗಳು ಎಷ್ಟೇ ಬಲಿಷ್ಠರಾಗಿದ್ದರೂ ಗೋರಖ್ ಪುರ ಸದಾರ್ ನಲ್ಲಿ ಯೋಗಿ ಹಾಗೂ ಕರ್ಹಾಲ್ ನಲ್ಲಿ ಅಖಿಲೇಶ್ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸದ್ಯದ ವಿಶ್ಲೇಷಣೆ.
ಸಂಕಷ್ಟದಲ್ಲಿ ಪ್ರಿಯಾಂಕಾ
ಯುಪಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಅಂತಿಮಗೊಳಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಯುಪಿ ಯುವ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಪರೋಕ್ಷವಾಗಿ ತನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದರೂ, ಸದ್ಯಕ್ಕೆ ಕ್ಷೇತ್ರ ಇಲ್ಲದೆ ಕಂಗಾಲಾಗಿದ್ದಾರೆ, ಯೋಗಿ ಮತ್ತು ಅಖಿಲೇಶ್ ಅವರಂತೆ ಕಾಂಗ್ರೆಸ್ ಪಕ್ಷಕ್ಕೆ ಕಂಚುಕೋಟಾ, ಗೊರಖ್ ಪುರದ ತರಹ 403 ಕ್ಷೇತ್ರಗಳಲ್ಲಿ ಒಂದೂ ಸುರಕ್ಷಿತ ಕ್ಷೇತ್ರ ಕಾಣುತ್ತಿಲ್ಲ.
1989 ರಿಂದ ಯುಪಿಯಲ್ಲಿ ಅಧಿಕಾರದಲ್ಲಿರದ ಕಾಂಗ್ರೆಸ್ ಪಕ್ಷವು ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ವರ್ಷಗಳ ಕಾಲ ಭದ್ರಕೋಟೆಯನ್ನಾಗಿಸಿಕೊಂಡಿತ್ತು. ಏಕೆಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಕ್ಕಪಕ್ಕದಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ 2019ರ ವೇಳೆಗೆ ಆ ಪರಿಸ್ಥಿತಿಯೂ ವ್ಯತಿರಿಕ್ತವಾಯಿತು. ಸೋನಿಯಾ ಗಾಂಧಿ ಹೇಗಾದರೂ ಗೆದ್ದು ಬೀಗಿದರು, ರಾಹುಲ್ ಗಾಂಧಿ ಹೀನಾಯ ಸೋಲನ್ನು ಅನುಭವಿಸಬೇಕಾಯಿತು. ಅಮೇಥಿಯಲ್ಲಿಯೂ ಬಿಜೆಪಿ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬಹುದು, ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಮತ್ತು ಹರಚಂದ್ರಾಪುರ ಶಾಸಕ ರಾಕೇಶ್ ಸಿಂಗ್ ಪ್ರಸ್ತುತ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಿಂದ ಸ್ಪರ್ಧಿಸುವುದು ಅನುಮಾನ. ಪ್ರಿಯಾಂಕಾ ರ್ಯಾಲಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರೂ, ಪಕ್ಷದ ಈಗಿನ ಬಲಾಬಲವನ್ನು ಗಮನಿಸಿದರೆ ರ್ಯಾಲಿ ಸಂಖ್ಯೆ ಎಷ್ಟು ಮಟ್ಟಿಗೆ ಮತವನ್ನಾಗಿ ಪರಿವರ್ತಿಸಬಹುದು ಎಂಬ ಅನುಮಾನವಿದೆ.
ಇದುವರೆಗೆ ಯಾವುದೇ ಚುನಾವಣೆಗೆ ಸ್ಪರ್ಧಿಸದ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಾರಾ? ಸ್ಪರ್ಧಿಸಿದರೂ, ವಿರೋಧ ಪಕ್ಷದಲ್ಲಿ ಸ್ವಂತವಾಗಿ ಕೂರಲು ಸಿದ್ಧರಾಗುತ್ತಾರೆಯೇ ಎಂಬ ಪ್ರಶ್ನೆಗಳು ಸದ್ಯಕ್ಕೆ ಪ್ರಿಯಾಂಕಾರ ನಿದ್ದೆ ಕೆಡಿಸಿದೆ. ಒಟ್ಟಿನಲ್ಲಿ ರಾಹುಲ್ ಗೆ ಜನ ಮನ್ನಣೆ ಇಲ್ಲ, ಪ್ರಿಯಾಂಕಾಗೆ ಸಿದ್ಧಿ ಇದ್ದರೂ ಅದನ್ನು ಸಾಧಿಸಲು ಆಗುತ್ತಿಲ್ಲ!
ಸ್ವಾತಿ ಚಂದ್ರಶೇಖರ್
swathichandrashekar92@gmail.com