ಮ್ಯೂಚುಯಲ್ ಫಂಡ್ ನಲ್ಲಿ ಎಷ್ಟು ವಿಧ? ಇಲ್ಲಿನ ಹೂಡಿಕೆಯ ಲಾಭವೇನು?

ಹಣಕ್ಲಾಸು-293

-ರಂಗಸ್ವಾಮಿ ಮೂಕನಹಳ್ಳಿ

Published: 27th January 2022 12:00 AM  |   Last Updated: 27th January 2022 02:21 PM   |  A+A-


Hanaclasu: what to know before buying mutual funds

ಸಾಂದರ್ಭಿಕ ಚಿತ್ರ

ಹಣವನ್ನ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಮ್ಯೂಚುಯಲ್ ಫಂಡ್ ಎಂದರೇನು? ಅವುಗಳಲ್ಲಿ ಮುಖ್ಯವಾದವು ಯಾವುವು? ಎನ್ನುವ  ಮಾಹಿತಿಯನ್ನ ತಿಳಿದುಕೊಳ್ಳುವುದು ಅತ್ಯವಶ್ಯಕ. 

ಹೂಡಿಕೆಯ ಮೌಲ್ಯ ಮತ್ತು ಸ್ವರೂಪ ಹೇಗೆ ಇರಲಿ ಮೂಲಭೂತ ಮಾಹಿತಿಗಳನ್ನ ತಿಳಿದುಕೊಂಡಿರುವುದು ಎಲ್ಲಾ ರೀತಿಯಲ್ಲೂ ಲಾಭದಾಯಕ.

ಮ್ಯೂಚುಯಲ್ ಫಂಡ್ ಎಂದರೇನು?

ಮ್ಯೂಚುಯಲ್ ಫಂಡ್ ಎನ್ನುವುದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಒಂದು ಮಾಧ್ಯಮ. ಇಲ್ಲಿ ಸಾಮಾನ್ಯ ಗುರಿಯನ್ನ ಹೊಂದಿರುವ ಅನೇಕ ಹೂಡಿಕೆದಾರರ ಹಣವನ್ನ ಒಂದೆಡೆ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹವಾದ ಹಣವನ್ನ ಅನೇಕ ಸಂಸ್ಥೆಗಳಲ್ಲಿ, ಬೇರೆ ಬೇರೆ ವಲಯಗಳಲ್ಲಿ ವೈಜ್ಞಾನಿಕ ತಳಹದಿಯ ವಿಶ್ಲೇಷಣೆಯ ಮೂಲಕ ಹೂಡಿಕೆಯನ್ನ ಮಾಡಲಾಗುತ್ತದೆ. 

ಹೀಗೆ ಹಲವಾರು ಜನರ ಹಣದ ನಿರ್ವಹಣೆಗೆ ಒಬ್ಬ ಫಂಡ್ ಮ್ಯಾನೇಜರ್ ಕೂಡ ನೇಮಿಸಲಾಗಿರುತ್ತದೆ. ಷೇರು ಮಾರುಕಟ್ಟೆಯ ಪರಿಪೂರ್ಣ ಜ್ಞಾನವಿಲ್ಲದಿದ್ದರೂ ಆದಾಯ ವೃದ್ಧಿ ಅಥವಾ ವೆಲ್ತ್ ಕ್ರಿಯೇಷನ್ ಗೆ ಇದು ಸುಲಭ ಮಾರ್ಗ. ಹಣವನ್ನ ಸಂಸ್ಥೆಗಳ ಸ್ಟಾಕ್ಸ್, ಷೇರುಗಳು , ಬಾಂಡ್ ಹೀಗೆ ಹಲವಾರು ಇನ್ಸ್ಟ್ರುಮೆಂಟ್ ಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ.

ಮ್ಯೂಚುಯಲ್ ಫಂಡ್ ಅನೇಕ ಜನರ ಹಣ ಒಂದೆಡೆ ಸೇರಿ ಸೃಷ್ಟಿಯಾದ ಹಣ. ಹೀಗಾಗಿ ಇದರ ತಪ್ಪು ಬಳಕೆಯಾಗಬಾರದು ಎನ್ನುವ ಉದ್ದೇಶದಿಂದ ಇದನ್ನ ಸ್ಟಾಕ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಗರಾಣಿಯಲ್ಲಿ ಸೇರಿಸಲಾಗಿದೆ. ಸಮಯಕ್ಕೆ ತಕ್ಕಂತೆ ಈ ಸಂಸ್ಥೆ ಹೇಳುವ ರೂಪುರೇಷೆಗಳ ಅಡಿಯಲ್ಲಿ ಮ್ಯೂಚುಯಲ್ ಫಂಡ್ ಕಾರ್ಯ ನಿರ್ವಹಿಸಬೇಕಾಗುತ್ತದೆ. 

ಇದರ ಮೂಲ ಉದ್ದೇಶ ಹಣವನ್ನ ಹೂಡಿದ ಹೂಡಿಕೆದಾರನ ಹಿತವನ್ನ ಕಾಯುವುದಾಗಿದೆ. ಹೀಗಾಗಿ ಮ್ಯೂಚುಯಲ್ ಫಂಡ್ ಸೇವೆ ನೀಡುವ ಯಾವುದೇ ಸಂಸ್ಥೆಗಳು ಮೋಸದಾಟದಲ್ಲಿ ತೊಡಗಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಮ್ಯೂಚುಯಲ್ ಫಂಡ್ ಗಳಲ್ಲಿ ಎಷ್ಟು ವಿಧ?

ಮ್ಯೂಚುಯಲ್ ಫಂಡ್ ಗಳಲ್ಲಿ ಸಾವಿರಾರು ವಿಧವಿದೆ. ಆದರೆ ಅವುಗಳ ಮುಖ್ಯ ಗುಣ ವಿಶೇಷತೆಗಳ ಆಧಾರದ ಮೇಲೆ ಸ್ಥೂಲವಾಗಿ ನಾಲ್ಕು ವಿಭಾಗ ಮಾಡಬಹುದು .

 1. ಅಸೆಟ್ ಕ್ಲಾಸ್
 2. ರಚನೆ ಅಥವಾ ಸ್ಟ್ರಕ್ಚರ್
 3. ಹೂಡಿಕೆಯ ಉದ್ದೇಶ
 4. ಹೂಡಿಕೆಯ ಮೇಲಿನ ಅಪಾಯ
 5. ವಿಶೇಷ ಮ್ಯೂಚುಯಲ್ ಫಂಡ್ ಗಳು

ಅಸೆಟ್ ಕ್ಲಾಸ್: ಒಂದು ಸಂಸ್ಥೆಯಲ್ಲಿ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹುದು. ಒಂದೇ ರೀತಿಯಲ್ಲಿ ಹಣ ತೊಡಗಿಸುವುದು ಹೆಚ್ಚು ಅಪಾಯಕಾರಿ, ಹೀಗಾಗಿ ಫಂಡ್ ಮ್ಯಾನೇಜರ್ ಗಳು ವಿವಿಧ ಆಸೆಟ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಈಕ್ವಿಟಿ, ಡೆಟ್, ಮನಿ ಮಾರ್ಕೆಟ್ ಹೀಗೆ ಇವುಗಳಲ್ಲಿ ಕೂಡ ಹಲವು ವಿಧ. ಇದರ ಆಧಾರದ ಮೇಲೆ  ಯಾವುದರಲ್ಲಿ ಹಣ ಹೂಡಿಕೆ ಮಾಡುತೇವೆ ಅದನ್ನ ಅಸೆಟ್ ಕ್ಲಾಸ್ ಹೂಡಿಕೆ ಎನ್ನುತ್ತೇವೆ. ಇವುಗಳಲ್ಲಿ ಮುಖ್ಯವಾಗಿ:

 • ಈಕ್ವಿಟಿ ಫಂಡ್ಸ್: ಇದು ಸಂಸ್ಥೆಯ ಸಾಮಾನ್ಯ ಷೇರು. ಇದರ ಮೂಲಕ ಮಾಡಿದ ಹೂಡಿಕೆ ಸಂಸ್ಥೆಯ ಏರಿಳಿತಗಳಲ್ಲಿ ನೇರವಾಗಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚು ಅಪಾಯವಿರುತ್ತದೆ. ಅದೇ ಸಮಯಕ್ಕೆ ಲಾಭವಾದ ಪಕ್ಷದಲ್ಲಿ ಅತಿ ಹೆಚ್ಚು ಲಾಭ ಕೂಡ ಪಡೆದುಕೊಳ್ಳುವ ಸಾಧ್ಯತೆಯಿದೆ. ಮ್ಯೂಚುಯಲ್ ಫಂಡ್ ಗಳ ಹೆಚ್ಚುಗಾರಿಕೆ ಎಂದರೆ ಎಲ್ಲಾ ಹಣವನ್ನ ಒಂದೇ ಕಡೆ ಹಾಕುವುದಿಲ್ಲ ಹೀಗಾಗಿ ಅಪಾಯದ ಅಂಶವು ಕೂಡ ಕಡಿಮೆಯಾಗುತ್ತದೆ. ಬಹುತೇಕ ಹೂಡಿಕೆದಾರರು ಈಕ್ವಿಟಿಯನ್ನ ಬಯಸುತ್ತಾರೆ.
 • ಡೆಟ್ ಫಂಡ್ಸ್: ಡೆಟ್ ಎಂದರೆ ಸಾಲ. ಅಂದರೆ ನಿಮ್ಮ ಹೂಡಿಕೆ ಪಾಲುದಾರಿಕೆಯ ರೂಪದಲ್ಲಿ ಇರುವುದಿಲ್ಲ. ಅದು ಸಾಲದ ರೂಪದಲ್ಲಿ ಇರುತ್ತದೆ. ಇವುಗಳಲ್ಲಿ ಅಪಾಯ ಕಡಿಮೆ. ಏಕೆಂದರೆ ಇವುಗಳನ್ನ ನಿಗದಿತ ಸಮಯಕ್ಕೆ, ನಿಗದಿತ ಬಡ್ಡಿ ದರದೊಂದಿಗೆ ಇಶ್ಯೂ ಮಾಡಲಾಗಿರುತ್ತದೆ. ಹೀಗಾಗಿ ಯಾರೂ ಹೆಚ್ಚಿನ ಅಪಾಯ ಬಯಸುವುದಿಲ್ಲ ಮತ್ತು ಫಿಕ್ಸೆಡ್ ಇನ್ಕಮ್ ಬಯಸುತ್ತಾರೆ ಅಂತಹವರಿಗೆ ಅತ್ಯಂತ ಸೂಕ್ತವಾಗಿದೆ.
 • ಮನಿ ಮಾರ್ಕೆಟ್ ಫಂಡ್ಸ್: ಇವುಗಳು ಸಾಮಾನ್ಯವಾಗಿ ಅಲ್ಪಾವಧಿ ಹೂಡಿಕೆಯ ಪರಿಧಿಯಲ್ಲಿ ಬರುತ್ತದೆ. ನಗದು ಅಥವಾ ನಗದಿಗೆ ಅತ್ಯಂತ ಸಮೀಪದಲ್ಲಿರುವ ಸೆಕ್ಯುರಿಟೀಸ್ ಮೇಲಿನ ಹೂಡಿಕೆ ಮನಿ ಮಾರ್ಕೆಟ್ ಫಂಡ್ ಎನ್ನಿಸಿಕೊಳ್ಳುತ್ತದೆ. ಇದರಲ್ಲಿ ನಿಗದಿತ ಸಮಯಕ್ಕೆ ನಿಗದಿತ ಡಿವಿಡೆಂಡ್ ನೀಡಲಾಗುತ್ತದೆ. ಹೀಗಾಗಿ ಇಲ್ಲಿನ ಹೂಡಿಕೆ ಕೂಡ ಕಡಿಮೆ ಅಪಾಯಕಾರಿ ಎನ್ನಿಸಿಕೊಂಡಿದೆ.
 • ಹೈಬ್ರಿಡ್ ಅಥವಾ ಸಮತೋಲಿತ ಫಂಡ್ ಗಳು: ಹೆಸರೇ ಹೇಳುವಂತೆ ಇಲ್ಲಿನ ಹೂಡಿಕೆ ಈಕ್ವಿಟಿ , ಡೆಟ್ ಮತ್ತು ಸೆಕ್ಯುರಿಟೀಸ್ ಎಲ್ಲವುಗಳಲ್ಲಿ ಬ್ಯಾಲೆನ್ಸ್ ಮಾಡಲಾಗುತ್ತದೆ. ಕೆಲವೊಂದು ಹೆಚ್ಚು ಅಪಾಯಕರ , ಕೆಲವೊಂದು ಕಡಿಮೆ ಅಪಾಯಕಾರಿ , ಹೀಗಾಗಿ ಹಣವನ್ನ ಅಳೆದು ತೊಗಿ ,ಹೂಡಿಕೆದಾರನ ರಿಸ್ಕ್ ತೆಗೆದುಕೊಳ್ಳುವ ಶಕ್ತಿಗೆ ಅನುಗುಣವಾಗಿ ವಿಭಜಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ಅಥವಾ ಹೆಚ್ಚು ನಷ್ಟಗಳನ್ನ ಇದು ಬ್ಯಾಲೆನ್ಸ್ ಮಾಡುತ್ತದೆ. ಇದೊಂದು ರೀತಿ ಮಧ್ಯಮ ಮಾರ್ಗ.

ರಚನೆ ಅಥವಾ ಸ್ಟ್ರಕ್ಚರ್:

 • ಕೆಲವೊಂದು ಫಂಡ್ ಗಳನ್ನ ನಿರ್ವಹಿಸಲು ಕೆಲವೊಂದು ರಚನೆ ಅಥವಾ ಸ್ಟ್ರಕ್ಚರ್ ಮುಖವಾಗುತ್ತದೆ. ಭಾರತದಲ್ಲಿ ಇದು ಮೂರು ಪದರಗಳ ಅಥವಾ ಮೂರು ಹಂತದ ಫಂಡ್ ಆಗಿದೆ. ಮೊದಲಿಗೆ ಸ್ಪಾನ್ಸರರ್ ಅಥವಾ ಫಂಡ್ ಸೃಷ್ಟಿಕರ್ತ , ಎರಡನೆಯದಾಗಿ ಟ್ರಸ್ಟೀ ಅಂದರೆ ಯಾರು ಈ ಮೊತ್ತಕ್ಕೆ ಹೊಣೆಗಾರಿಕೆಯನ್ನ ಹೊರುತ್ತಾರೆ ಅವರು ಮತ್ತು ಫಂಡ್ ಮ್ಯಾನೇಜರ್ ಗಳು , ಅಂದರೆ ಯಾರು ಈ ಹಣದ ನಿರ್ವಹಣೆಯ ಜವಾಬ್ಧಾರಿಯನ್ನ ತೆಗೆದುಕೊಳ್ಳುತ್ತಾರೆ ಅವರು. ಹೀಗೆ ಮೂರು ಹಂತದ ಜನರಿಂದ ನಿರ್ವಹಿಸಲ್ಪಡುವ ಫಂಡ್ ಸ್ಟ್ರಕ್ಚರ್ ಫಂಡ್ ಎನ್ನಿಸಿಕೊಳ್ಳುತ್ತದೆ. ಇವುಗಳಲ್ಲಿ ಕೂಡ ಮೂರು ವಿಧಗಳನ್ನ ಕಾಣಬಹುದು .
 • ಓಪನ್ ಎಂಡೆಡ್ ಮ್ಯೂಚುಯಲ್ ಫಂಡ್: ಮುಕ್ತವಾದ ನಿಯಮವನ್ನ ಹೊಂದಿರುವ ಫಂಡ್ ಗಳನ್ನ ಓಪನ್ ಎಂಡೆಡ್ ಎನ್ನಲಾಗಿದೆ. ಅಂದರೆ ಇಲ್ಲಿ ಹೂಡಿಕೆದಾರ ಇಷ್ಟೇ ಯೂನಿಟ್ ಮಾರಬೇಕು ಎನ್ನುವ ಇದೆ ಸಮಯದಲ್ಲಿ ಮಾರಬೇಕು ಎನ್ನುವ ಯಾವುದೇ ನಿಬಂಧನೆಗಳು ಇರುವುದಿಲ್ಲ. ಹೂಡಿಕೆದಾರ ತನ್ನಿಷ್ಟದ ಸಮಯದಲ್ಲಿ ಪೂರ್ಣವಾಗಿ ಅಥವಾ ಪಾರ್ಶಿಯಲ್ ಆಗಿ ಹೊರಹೋಗುವ ಮುಕ್ತವಾದ ಅವಕಾಶವಿರುತ್ತದೆ.
 • ಕ್ಲೋಸ್ ಎಂಡೆಡ್ ಮ್ಯೂಚುಯಲ್ ಫಂಡ್: ಓಪನ್ ಎಂಡೆಡ್ ಗೆ ವಿರುದ್ಧವಾದ ಮ್ಯೂಚುಯಲ್ ಫಂಡ್ನನ್ನ ಕ್ಲೋಸ್ ಎಂಡೆಡ್ ಮ್ಯೂಚುಯಲ್ ಫಂಡ್ ಎನ್ನಬಹುದು. ಅಂದರೆ ಇಲ್ಲಿ ಯೂನಿಟ್ ಮಾರಾಟವನ್ನ ನಿಗದಿ ಮಾಡಲಾಗಿರುತ್ತದೆ. ಮಾರಾಟದ ಸಮಯ ಕೂಡ ಹೆಚ್ಚು ಕಡಿಮೆ ಫಿಕ್ಸ್ ಮಾಡಿರುತ್ತಾರೆ. ಹೀಗಾಗಿ ಇಲ್ಲಿ ಹೂಡಿಕೆದಾರ ತನ್ನಿಚ್ಚೆಗೆ ಬಂದ ಸಮಯದಲ್ಲಿ ತನಗಿಷ್ಟ ಬಂದಷ್ಟು ಯೂನಿಟ್ ಮಾರುವ ಸ್ವಾತಂತ್ರ್ಯದಿಂದ ವಂಚಿತನಾಗಿರುತ್ತಾನೆ.
 • ಇಂಟರ್ವಲ್ ಫಂಡ್ಸ್: ಇಲ್ಲಿನ ಹೂಡಿಕೆ ಕೂಡ ಸಮಯಾಧಾರಿತ , ಕೊಳ್ಳುವುದು ಮತ್ತು ಮಾರುವುದನ್ನ ನಿಗದಿತ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಅಂದರೆ ನಿಗದಿತ ಇಂಟರ್ವಲ್ ನಲ್ಲಿ ಮಾತ್ರ ವಹಿವಾಟು ನಡೆಯುತ್ತದೆ. ಸಾಮಾನ್ಯವಾಗಿ ಇದು ಎರಡು ವರ್ಷದ ಅವಧಿಯಲ್ಲಿರುತ್ತದೆ.

ಹೂಡಿಕೆಯ ಉದ್ದೇಶ:

ಹೂಡಿಕೆದಾರನ ಹೂಡಿಕೆಯ ಮೂಲ ಉದ್ದೇಶವೇನು? ಎನ್ನುವುದನ್ನ ಅರಿತು ಮಾಡುವ ಹೂಡಿಕೆಯನ್ನ ಇನ್ವೆಸ್ಟ್ಮೆಂಟ್ ಅಬ್ಜೆಕ್ಟಿವ್ಸ್ ಫಂಡ್ಸ್ ಎಂದು ಕರೆಯುತ್ತಾರೆ. ಅಂದರೆ ಹೂಡಿಕೆದಾರ ತನ್ನ ಹೂಡಿಕೆಯಿಂದ, ಬೆಳವಣಿಗೆ ಬಯಸುತ್ತಾನೆಯೇ ಅಥವಾ ಇನ್ಕಮ್ ಅಥವಾ ಲಿಕ್ವಿಡಿಟಿ ಅಥವಾ ತೆರಿಗೆ ಉಳಿಸಲು ಬಯಸುತ್ತಾನೆಯೇ? ಹೀಗೆ ಯಾವ ಉದ್ದೇಶವಿದೆ ಅದರ ಆಧಾರದ ಮೇಲೆ ಹೂಡಿಕೆ ಮಾಡುವ ಫಂಡ್ ಗಳಿವು. ಇವುಗಳಲ್ಲಿ ಕೂಡ ಹಲವಾರು ವಿಧಗಳಿವೆ ಅವುಗಳಲ್ಲಿ ಮುಖ್ಯವಾದವು ಹೀಗಿವೆ:

 • ಗ್ರೋಥ್ ಫಂಡ್ಸ್: ಯಾವ ವಲಯದಲ್ಲಿ ಹೂಡಿಕೆ ಮಾಡುತ್ತಾರೆ ಆ ವಲಯದ ಅವರೇಜ್ ಬೆಳವಣಿಗೆಯ ಮಟ್ಟಕ್ಕಿಂತ ಹೆಚ್ಚು ಬೆಳವಣಿಗೆ ಇರುವ ಸಂಸ್ಥೆಯ ಷೇರಿನ ಮೇಲೆ ಮಾಡುವ ಹೂಡಿಕೆಯನ್ನ ಗ್ರೋಥ್ ಫಂಡ್ ಎನ್ನಲಾಗುತ್ತದೆ. ಲಾಭ ಮತ್ತು ಅಪಾಯ ಎರಡೂ ಇಲ್ಲಿ ಹೆಚ್ಚಾಗಿರುತ್ತದೆ.
 • ಇನ್ಕಮ್ ಫಂಡ್ಸ್: ಬೇರೆ ಬೇರೆ ವಲಯಗಲ್ಲಿ ಹೆಚ್ಚು ಬಡ್ಡಿ ಅಥವಾ ಡಿವಿಡೆಂಡ್ ನೀಡುವ ಷೇರು ಅಥವಾ ಬಾಂಡ್ ಗಳ ಮೇಲಿನ ಹೂಡಿಕೆಯನ್ನ ಇನ್ಕಮ್ ಫಂಡ್ ಎನ್ನಲಾಗುತ್ತದೆ. ಇಂತಹ ಹೂಡಿಕೆಯ ಮೂಲ ಉದ್ದೇಶ ಹೂಡಿಕೆದಾರನಿಗೆ ಹೆಚ್ಚು ಹಣವನ್ನ ಮರಳಿ ನೀಡಿಸುವುದಾಗಿರುತ್ತದೆ. ಕನಿಷ್ಠ ಎರಡು ವರ್ಷಗಳ ಅವಧಿಯ ಹೂಡಿಕೆಯನ್ನ ಇದು ಬೇಡುತ್ತದೆ.
 • ಲಿಕ್ವಿಡ್ ಫಂಡ್ಸ್: ಕೆಲವು ಹೂಡಿಕೆದಾರರಿಗೆ ಹೆಚ್ಚಿನ ಸಮಯ ಹಣವನ್ನ ತೊಡಗಿಸಲು ಸಾಧ್ಯವಿರುವುದಿಲ್ಲ , ಹೀಗಾಗಿ ಮನಿ ಮಾರ್ಕೆಟ್ನಲ್ಲಿ ಅಥವಾ ಡೆಟ್ ಸೆಕ್ಯುರಿಟೀಸ್ ನಲ್ಲಿ ಮಾಡುವ ಹೂಡಿಕೆಯನ್ನ ಲಿಕ್ವಿಡ್ ಫಂಡ್ಸ್ ಎನ್ನಲಾಗುತ್ತದೆ. ಇದು ಸಾಮಾನ್ಯವಾಗಿ 91 ದಿನಗಳ ವರೆಗೆ ವಿಸ್ತರಿಸುತ್ತದೆ. ಇಂತಹ ಫಂಡ್ಸ್ ಹೂಡಿಕೆ ಹತ್ತು ಲಕ್ಷ ರೂಪಾಯಿ ಮೀರುವುದಿಲ್ಲ.
 • ಟ್ಯಾಕ್ಸ್ ಸೇವಿಂಗ್ ಬಾಂಡ್ಸ್:  ELSS  ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ .ಇದರ ವಿಶೇಷತೆ ಏನೆಂದರೆ ಇನ್ಕಮ್ ಟ್ಯಾಕ್ಸ್ ಸೆಕ್ಷನ್ ೮೦ ಸಿ  ಪ್ರಕಾರ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ತನಕ ಇದರ ಮೇಲೆ ಮಾಡಿದ ಹೂಡಿಕೆ ಮೇಲೆ ತೆರಿಗೆ ವಿನಾಯ್ತಿ ಸಿಗಲಿದೆ . ಇದರಲ್ಲಿ ಬಂದ  ಆದಾಯ ಕೂಡ ತೆರಿಗೆ ವಿನಾಯ್ತಿ ಹೊಂದಿದೆ. ಮಾರ್ಚ್ ತಿಂಗಳು ಸನಿಹವಾದಂತೆ ತೆರಿಗೆ ಉಳಿಸುವ ಇಂತಹ ಸ್ಕೀಮ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತದೆ . ಅದರ ಪೂರ್ಣ ಜಾತಕ ತಿಳಿದು ಕೊಳ್ಳದೆ ಹೂಡಿಕೆ ಮಾಡುವುದು ತರವಲ್ಲ . ಅಲ್ಲದೆ ತೆರಿಗೆ ವಿನಾಯತಿ ಪಡೆಯಲು ಹೂಡಿಕೆ ಮಾಡುವುದು ಎರಡು ಬೇರೆ ಬೇರೆ ವಿಷಯಗಳನ್ನ ಬೆರೆಸಿದಂತೆ . ಹೂಡಿಕೆ ಮುಂಬರುವ ವರ್ಷಗಳಲ್ಲಿ ಹಣ ವೃದ್ಧಿಸಲು ಮಾಡುವ ಕ್ರಿಯೆ . ಅಲ್ಲಿ ಹಣ ವೃದ್ದಿಯಷ್ಟೇ ಮುಖ್ಯವಾಗಿರಬೇಕು . ಮಧ್ಯದಲ್ಲಿ ತೆರಿಗೆಯೂ ಉಳಿಸಬೇಕು ಎಂದರೆ ವೃದ್ಧಿಯಲ್ಲಿ ಕುಂಠಿತವಾಗದೆ ?  ಅಲ್ಲದೆ ಈ ಹೂಡಿಕೆ ಈಕ್ವಿಟಿಯಲ್ಲಿ ಹಣ ಹೂಡುತ್ತದೆ . ಇದರ ಲಾಭ ಅಥವಾ ನಷ್ಟ ಮಾರುಕಟ್ಟೆಯ ಏರುಪೇರಿನ ಮೇಲೆ ನಿರ್ಧಾರವಾಗುತ್ತದೆ . ಹೀಗೆ ಹೂಡಿಕೆ ಮಾಡಿದ ಹಣವನ್ನ ಕನಿಷ್ಠ 3 ವರ್ಷಗಳ ಕಾಲ ಹಿಂಪಡೆಯಲು ಬರುವುದಿಲ್ಲ . ಅಂದರೆ ಇದು 3 ವರ್ಷದ ಲಾಕ್ ಇನ್ ಪಿರಿಯಡ್ ಹೊಂದಿರುವ ಹೂಡಿಕೆ . ವ್ಯಕ್ತಿಯೊಬ್ಬನಿಗೆ ಮುಂದಿನ ವರ್ಷ ಹಣದ ಅವಶ್ಯಕತೆ ಇದ್ದರೆ ಇಂತಹ ಹೂಡಿಕೆ ಮಾಡುವುದು ಸರಿಯಲ್ಲ .
 • ಅಗ್ಗ್ರೆಸಿವ್ ಗ್ರೋಥ್ ಫಂಡ್ಸ್: ಇವುಗಳು ಗ್ರೋಥ್ ಫಂಡ್ ಇದ್ದಂತೆ ಆದರೆ ಹೆಚ್ಚಿನ ಆಕ್ರಮಣಕಾರಿ ರೀತಿಯವು. ಅಂದರೆ ಅತಿ ಹೆಚ್ಚು ರಿಸ್ಕ್ ತೆಗೆದುಕೊಂಡಾದರು ಸರಿಯೇ ರಿಟರ್ನ್ಸ್ ಮತ್ತು ಅಭಿವೃದ್ಧಿ ಎರಡೂ ಆಗಬೇಕು ಎನ್ನುವ ಅಗ್ರೆಸ್ಸಿವ್ ಮನಸ್ಥಿತಿಯ ಹೂಡಿಕೆದಾರರಿಗೆ ಹೇಳಿ ಮಾಡಿಸಿದ ಫಂಡ್ ಇದಾಗಿದೆ. ಮೊದಲೇ ಹೇಳಿದಂತೆ ಇವುಗಳ ಗಳಿಕೆ ಹೆಚ್ಚಿರುತ್ತದೆ. ಸೋತಾಗ ನಷ್ಟವೂ ಕೂಡ ದೊಡ್ಡದೇ ಆಗಿರುತ್ತದೆ.
 • ಕ್ಯಾಪಿಟಲ್ ಪ್ರೊಟೆಕ್ಷನ್ ಅಥವಾ ಬಂಡವಾಳ ಸುರಕ್ಷತೆ ಫಂಡ್: ಹೆಸರಿನಲ್ಲೇ ಎಲ್ಲವನ್ನೂ ಹೇಳುತ್ತಿದೆ ಈ ಫಂಡ್ , ಅಂದರೆ ಮೂಲ ಬಂಡವಾಳದ ಸುರಕ್ಷತೆಗೆ ಇಲ್ಲಿ ಆದ್ಯತೆಯನ್ನ ನೀಡಲಾಗುತ್ತದೆ. ಹೀಗಾಗಿ ಬಹಳಷ್ಟು ಹಣವನ್ನ ಡೆಟ್ ಸೆಕ್ಯುರಿಟೀಸ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ , ಸ್ವಲ್ಪ ಹಣವನ್ನ ಮಾತ್ರ ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಇಲ್ಲಿ ಬರುವ ಆದಾಯ ಕಡಿಮೆ ಇರುತ್ತದೆ , ಆದರೆ ಹೆಚ್ಚು ಸುರಕ್ಷಿತವಾದ ಹೂಡಿಕೆಯಿದು . ಕನಿಷ್ಠ ಮೂರು ವರ್ಷಗಳ ಕಾಲ ಹೂಡಿಕೆಯನ್ನ ಕಾಯ್ದುಕೊಳ್ಳಬೇಕಾಗಿರುತ್ತದೆ.
 • ಪೆನ್ಷನ್ ಫಂಡ್ಸ್ : ನಿವೃತ್ತಿಯ ನಂತರದ ಆದಾಯದ ಮೂಲವಾಗಿ ಮಾಡುವ ಇಂತಹ ಹೂಡಿಕೆಗಳು ನಿವೃತ್ತಿ ವೇತನ ಇಲ್ಲದವರಿಗೆ ಹೇಳಿ ಮಾಡಿಸಿದಂತಿದೆ , ಇದನ್ನ ಅನಿರೀಕ್ಷಿತ ಖರ್ಚಿನ ಸಂದರ್ಭದಲ್ಲಿ , ಮಗ/ಮಗಳ ಮದುವೆ ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೀಗೆ ಸಂದರ್ಭಕ್ಕೆ ತಕ್ಕಹಾಗೆ ಉಪಯೋಗಿಸಿಕೊಳ್ಳಬಹುದು. ರೆಗ್ಯುಲರ್ ಇನ್ಕಮ್ ಇರುವುದರಿಂದ ಈ ಹೂಡಿಕೆ ದೀರ್ಘಾವಧಿಯನ್ನ ಬೇಡುತ್ತದೆ.
 • ಫಿಕ್ಸೆಡ್ ಮೆಚುರಿಟಿ ಫಂಡ್ಸ್ : ಇವುಗಳನ್ನ ಕ್ಲೋಸ್ ಎಂಡೆಡ್ ಫಂಡ್ಸ್ ಎಂದು ಕರೆಯಬಹುದು . ಸಾಮಾನ್ಯವಾಗಿ ಇಂತಹ ಫಂಡ್ ಗಳು ಹೂಡಿಕೆಯನ್ನ ಮನಿ ಮಾರ್ಕೆಟ್ , ಸೆಕ್ಯುರಿಟಿಸ್ , ಬಾಂಡ್ಸ್ ಗಳಲ್ಲಿ ಮಾಡಲಾಗುತ್ತದೆ. ಹೆಸರೇ ಹೇಳುವಂತೆ ಇದು ಸಮಯಾಧಾರಿತ , ಒಂದು ತಿಂಗಳಿಂದ ಐದು ವರ್ಷದ ವರಗೆ ಇಲ್ಲಿ ಹೂಡಿಕೆಗೆ ಅವಕಾಶವಿದೆ. ನಿಗದಿತ ಸಮಯದ ನಂತರ ಹೇಳಿದ ಮೊತ್ತ ಪಾವತಿಯಾಗುತ್ತದೆ.

ಹೂಡಿಕೆಯ ಮೇಲಿನ ಅಪಾಯ:

ಈ ವೇಳೆಗೆ ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಒಂದಷ್ಟು ಜ್ಞಾನ ಬಂದೆ ಇರುತ್ತದೆ. ಇಲ್ಲಿನ ಹೂಡಿಕೆಗಳಲ್ಲಿ ಕೆಲವು ಸುರಕ್ಷಿತ ಕೆಲವು ಅಪಾಯಕಾರಿ ಹೀಗಾಗಿ ಯಾವುದು ಎಷ್ಟು ಸೇಫ್ ಅಥವಾ ಎಷ್ಟು ರಿಸ್ಕ್ ಎನ್ನುವುದರ ಆಧಾರದ ಮೇಲೆ ಮಾಡಿದ ಹೂಡಿಕೆಯ ಫಂಡ್ ಗಳು ರಿಸ್ಕ್ ಬೇಸ್ಡ್ ಇನ್ವೆಸ್ಟ್ಮೆಂಟ್ ಗಳು ಅಥವಾ ಫಂಡ್ಗಳು ಎನ್ನಿಸಿಕೊಳ್ಳುತ್ತವೆ .

ಇದರಲ್ಲಿ ಪ್ರಮುಖವಾಗಿ ನಾಲ್ಕು ವಿಧ

 • ಹೈರಿಸ್ಕ್: ಅತಿ ಅಪಾಯಕಾರಿ ಫಂಡ್ ಗಳು: ಇವು ಅತ್ಯಂತ ಏರಿಳಿತ ಕಾಣುವ ಷೇರುಗಳ ಮೇಲಿನ ಹೂಡಿಕೆ ಹೀಗಾಗಿ ಇದನ್ನ ನಿತ್ಯ ನಿರ್ವಹಿಸಲು ವೃತ್ತಿಪರರ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಪಾಯ ಹೆಚ್ಚಾಗಿರುವುದರಿಂದ ಇದು ಲಾಭವನ್ನ ಕೂಡ ಹೆಚ್ಚಾಗೇ ತಂದು ಕೊಡುತ್ತದೆ. ಇದು ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಏರಿಳಿತ ಕಾಣುತ್ತದೆ. ಇಲ್ಲಿ ಎಲ್ಲಾ ಹಣವನ್ನ ಹೂಡಿಕೆ ಮಾಡುವುದು ಜಾಣತನವಲ್ಲ , ಹೆಚ್ಚು ರಿಸ್ಕ್ ತೆಗೆದಿಕೊಳ್ಳುವ ಗುಣವಿದ್ದವರೂ ಕೂಡ 30 ಅಥವಾ 40 ಪ್ರತಿಶತಕ್ಕಿಂತ ಹೆಚ್ಚಿನ ಹಣವನ್ನ ಇಲ್ಲಿ ತೊಡಗಿಸಬಾರದು.
 • ಮೀಡಿಯಂ ಅಥವಾ ಮಧ್ಯಮ ಅಪಾಯಕಾರಿ ಫಂಡ್ ಗಳು: ಇಲ್ಲಿಯೂ ಅಪಾಯ ತಪ್ಪಿದ್ದಲ್ಲ ಆದರೆ ಮೊದಲ ಫಂಡ್ ನಂತೆ ಹೆಚ್ಚಿನ ರಿಸ್ಕ್ ಇರುವುದಿಲ್ಲ , ಇಲ್ಲಿ ಡೆಟ್ ಮತ್ತು ಈಕ್ವಿಟಿಯಲ್ಲಿ ಹಣವನ್ನ ಹಂಚಿರುತ್ತಾರೆ ಹೀಗಾಗಿ ಕಡಿಮೆ ರಿಸ್ಕ್ ಇರುತ್ತದೆ. ಇಲ್ಲಿನ ಹೂಡಿಕೆ ಮೊದಲಿನ ಹೂಡಿಕೆಯಷ್ಟು ಲಾಭವನ್ನ ತಂದು ಕೊಡುವುದಿಲ್ಲ , ಆದರೂ ಇಂದಿನ ದಿನಗಳಲ್ಲಿ 9 ರಿಂದ 12 ಪ್ರತಿಶತ ರಿಟರ್ನ್ಸ್ ಈ ಹೂಡಿಕೆಯ ಮೂಲಕ ನಿರೀಕ್ಷಿಸಬಹುದು.
 • ಲೊ ರಿಸ್ಕ್ ಫಂಡ್ಸ್: ಇಲ್ಲಿನ ಫಂಡ್ಗಳನ್ನ ಅಲ್ಟ್ರಾ ಆರ್ಬಿಟ್ರೇಜ್ , ಅಲ್ಟ್ರಾ ಶಾರ್ಟ್ ಟರ್ಮ್ , ಮತ್ತು ಲಿಕ್ವಿಡ್ ಫಂಡ್ ಗಳಲ್ಲಿ  ಹೂಡಿಕೆ ಮಾಡಲಾಗಿರುತ್ತದೆ. ಹೀಗಾಗಿ ಇಲ್ಲಿ ರಿಸ್ಕ್ ಕಡಿಮೆ ಹಾಗೆಯೇ ಗಳಿಕೆ ಕೂಡ ಕಡಿಮೆ ಇರುತ್ತದೆ.
 • ಅತಿ ಕಡಿಮೆ ಅಪಾಯಕಾರಿ ಫಂಡ್: ತಿಂಗಳು ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ ಮೆಚುರಿಟಿಯಾಗುವ ಮತ್ತು ಅಲ್ಟ್ರಾ ಸೆಕ್ಯೂರ್ಡ್ ಸೆಕ್ಯುರಿಟೀಸ್ ಮತ್ತು ಲಿಕ್ವಿಡ್ ಫಂಡ್ ಗಳಲ್ಲಿನ ಹೂಡಿಕೆಯಲ್ಲಿ ರಿಸ್ಕ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿರುತ್ತದೆ , ಇಂತಹ ಫಂಡ್ ಗಳ ಮೇಲಿನ ಹೂಡಿಕೆಯನ್ನ ವೆರಿ ಲೋ ರಿಸ್ಕ್ ಅಥವಾ ಅತಿ ಕಡಿಮೆ ಅಪಾಯಕಾರಿ ಫಂಡ್ ಎಂದು ಹೇಳಾಗುತ್ತದೆ. ಇದರಲ್ಲಿನ ಆದಾಯದ ಕೂಡ ಬ್ಯಾಂಕಿನ ಬಡ್ಡಿ ದರಕ್ಕೆ ಸಮನಾಗಿರುತ್ತದೆ.

ವಿಶೇಷ ಮ್ಯೂಚುಯಲ್ ಫಂಡ್ ಗಳು:

 • ಸ್ಪೆಷಲೈಸ್ಡ್ ಅಥವಾ ವಿಶೇಷ ಮ್ಯೂಚುಯಲ್ ಫಂಡ್ಗಳು ಗುರುತಿಸಲ್ಪಟ್ಟ ಅಂದರೆ ಸ್ಪೆಸಿಫಿಕ್ ಇಂಡಸ್ಟ್ರಿಯಲ್ಲಿನ ವಸ್ತುಗಳ ಮೇಲೆ , ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತು ಉಳಿದ ಯಾವುದೇ ಸಿಗ್ಮೆಂಟ್ ನಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ. ಹೆಸರೇ ಹೇಳುವಂತೆ ಇದು ವಿಶೇಷವಾದದ್ದು ಏಕೆಂದರೆ ಇದು ಸ್ಟ್ರಕ್ಚರಲ್ , ಬ್ಯಾಲೆನ್ಸ್ಡ್ , ಅಸೆಟ್ , ಏನಾದರು ಆಗಿರಬಹುದು. ಇದರ ಮೂಲಕ ರಿಯಲ್ ಎಸ್ಟೇಟ್ , ಫಾರ್ಮಾ , ಕೆಮಿಕಲ್ , ಟೆಲಿ ಕಮ್ಯುನಿಕೇಷನ್ ಹೀಗೆ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ಕೂಡ ಹೂಡಿಕೆ ಮಾಡುವ ಅವಕಾಶ ಇಲ್ಲಿರುತ್ತದೆ. ಇವುಗಲ್ಲಿ ಪ್ರಮುಖವಾಗಿ ಹನ್ನೊಂದು ವಿಧಗಳಿವೆ ಅವುಗಳೆಂದರೆ :
 • ಸೂಚ್ಯಂಕ ಅಥವಾ ಇಂಡೆಕ್ಸ್ ಫಂಡ್ಸ್: ಸೂಚ್ಯಂಕ ಅಥವಾ ಇಂಡೆಕ್ಸ್ ಎಂದರೆ ಷೇರು ಮಾರುಕಟ್ಟೆಯ ಒಟ್ಟಾರೆ ಏರಿಕೆ , ಇಳಿಕೆ ಜೊತೆಗೆ ಮಾರುಕಟ್ಟೆಯ ಮೌಲ್ಯವನ್ನ ತಿಳಿಸುವ ಒಂದು ಸಂಖ್ಯೆ. ಈ ಸಂಖ್ಯೆ ಏರಿಕೆ ಕಂಡರೆ ಮಾರುಕಟ್ಟೆ ಮೇಲೇರುತ್ತಿದೆ ಎಂದರ್ಥ. ಇಳಿಕೆ ಕಂಡರೆ ಒಟ್ಟಾರೆ ಮಾರುಕಟ್ಟೆ ಕುಸಿತ ಕಂಡಿದೆ ಎಂದರ್ಥ. ಅಂದಿನ ಸಂಖ್ಯೆ ಮಾರುಕಟ್ಟೆಯ ಒಟ್ಟಾರೆ ಇರುವ ಸ್ಥಿತಿಯನ್ನ ಸೂಚಿಸುತ್ತದೆ. ಮಾರುಕಟ್ಟೆ ಸೂಚ್ಯಂಕ ಕುಸಿದಿದ್ದರೂ ಕೆಲವೊಂದು ವಲಯದಲ್ಲಿ ಏರಿಕೆಯಾಗಿರಬಹುದು , ಹೀಗಾಗಿ ಸೂಚ್ಯಂಕ ಒಟ್ಟಾರೆ ಮಾರುಕಟ್ಟೆ ಚಿತ್ರಣ ನೀಡುತ್ತದೆಯೇ ಹೊರತು ನಿರ್ದಿಷ್ಟ ಸಂಸ್ಥೆ ಅಥವಾ ವಲಯದಲ್ಲ . ಹೀಗಾಗಿ ಇಲ್ಲಿನ ಹೂಡಿಕೆಯಲ್ಲಿ ಸೂಚ್ಯಂಕ ಏರಿಕೆ ಕಂಡರೆ ಲಾಭವೂ ಏರಿಕೆ ಕಾಣುತ್ತದೆ. ಸೂಚ್ಯಂಕ ಇಳಿಕೆ ಕಂಡರೆ ಲಾಭವೂ ಇಳಿಕೆಯಾಗುತ್ತದೆ.
 • ಸೆಕ್ಟರ್ ಫಂಡ್ಸ್ ಅಥವಾ ವಲಯವಾರು ಫಂಡ್ಸ್: ನಿರ್ದಿಷ್ಟ ವಲಯದಲ್ಲಿ ಮಾತ್ರ ಇಲ್ಲಿ ಹೂಡಿಕೆ ಮಾಡಲಾಗುತ್ತದೆ. ಇವು ಥೀಮ್ ಬೇಸ್ಡ್ ಆಗಿರುತ್ತದೆ. ಕೆಲವು ಥೀಮ್ ಗಳು ಗೆಲ್ಲುತ್ತವೆ , ಕೆಲವು ಇಲ್ಲ.  ಇದನ್ನ ಊಹಿಸುವುದು ಬಹಳ ಕಷ್ಟ ಹೀಗಾಗಿ ಇದು ಹೈ ರಿಸ್ಕ್ ವರ್ಗಿಕರಣದಲ್ಲಿ ಬರುತ್ತದೆ.
 • ಫಂಡ್ಸ್ ಆಫ್ ಫಂಡ್ಸ್: ಕೆಲವೊಮ್ಮೆ ಫಂಡ್ ಮ್ಯಾನೇಜರ್ ಹಲವಾರು ವಲಯದಲ್ಲಿ ಹೂಡಿಕೆ ಮಾಡುವ ಫಂಡ್ ಗಳ ಮೇಲೆ ಹೂಡಿಕೆ ಮಾಡುತ್ತಾರೆ ಇದನ್ನ ಫಂಡ್ಸ್ ಆಫ್ ಫಂಡ್ಸ್ ಎನ್ನುತ್ತಾರೆ, ನೇರವಾಗಿ ಹೂಡಿಕೆ ಮಾಡುವುದರ ಬದಲು ಹೀಗೆ ಹೂಡಿಕೆ ಮಾಡುವ ಇತರ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಕೂಡ ಒಂದು ವಿಧಾನವಾಗಿದೆ.
 • ವಿದೇಶಿ ಅಥವಾ ಅಂತರರಾಷ್ಟ್ರೀಯ ಫಂಡ್ಸ್: ಹೂಡಿಕೆದಾರನ ಮೂಲ ದೇಶವನ್ನ ಬಿಟ್ಟು ಬೇರೆ ದೇಶದ ಫಂಡ್ ಗಳಲ್ಲಿ ಮಾಡುವ ಹೂಡಿಕೆಯನ್ನ ವಿದೇಶಿ ಅಥವಾ ಇಂಟರ್ನ್ಯಾಷನಲ್ ಫಂಡ್ಸ್ ಎಂದು ಕರೆಯಲಾಗುತ್ತದೆ. ಯಾವ ದೇಶದ ಫಂಡ್ ಎಂದು ತಿಳಿಯದೆ ಮಾಡುವ ಹೂಡಿಕೆ ತರವಲ್ಲ. ಇಲ್ಲಿ ರಿಸ್ಕ್ ಹೆಚ್ಚಾಗಿರುತ್ತದೆ.
 • ಗ್ಲೋಬಲ್ ಫಂಡ್ಸ್: ಇದರಲ್ಲಿ ಹೂಡಿಕೆದಾರನ ಮೂಲ ದೇಶದ ಜೊತೆಗೆ ಜಗತ್ತಿನ ಒಂದಕ್ಕಿಂತ ಹೆಚ್ಚು ದೇಶಗಳ ಫಂಡ್ ಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ. ಹೀಗೆ ಹತ್ತಾರು ದೇಶಗಳು ಇಲ್ಲಿ ಬರುವುದರಿಂದ ಇದು ಹೆಚ್ಚು ಅಪಾಯದ ಹೂಡಿಕೆಯಾಗಿರುತ್ತದೆ. ಆಯಾ ದೇಶದ ಪರಿಸ್ಥಿತಿ ಜೊತೆಗೆ ವಿನಿಮಯ ದರದ ಏರಿಳಿತಗಳನ್ನ ಕೂಡ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
 • ಎಮರ್ಜಿಂಗ್ ಮಾರ್ಕೆಟ್ ಫಂಡ್ಸ್: ಮುಂದುವರೆಯುತ್ತಿರುವ ದೇಶಗಳು ಅಥವಾ ಈ ಹಿಂದೆ ಡೆವಲಪಿಂಗ್ ಮಾರ್ಕೆಟ್ ಎಂದು ಯಾವ ದೇಶಗಳನ್ನ ಕರೆಯಲಾಗುತ್ತಿತ್ತು ಅದಕ್ಕೆ ಮರು ನಾಮಕರಣ ಮಾಡಿ ಎಮರ್ಜಿಂಗ್ ಮಾರ್ಕೆಟ್ ಎಂದು ಹೇಳಲಾಗಿದೆ. ಬ್ರೆಝಿಲ್, ಇಂಡಿಯಾ, ಸೌತ್ ಆಫ್ರಿಕಾ ಹೀಗೆ ಹಲವಾರು ದೇಶಗಳನ್ನ ಎಮರ್ಜಿಂಗ್ ಅಥವಾ ಉದಯಿಸುತ್ತಿರುವ ಎಕಾನಮಿ ಅಥವಾ ಮಾರ್ಕೆಟ್ ಎನ್ನಲಾಗಿದೆ . ಇಲ್ಲಿನ ಹೂಡಿಕೆ ಕೂಡ ಆಯಾ ದೇಶದ ಮಾರುಕಟ್ಟೆ ಏರಿಳಿತಕ್ಕೆ ತಕ್ಕಂತೆ ವರ್ತಿಸುತ್ತವೆ. ಇದು ಕೂಡ ಅಪಾಯಕಾರಿ ಹೂಡಿಕೆಯಾಗಿದೆ.
 • ರಿಯಲ್ ಎಸ್ಟೇಟ್ ಫಂಡ್ಸ್: ರಿಯಲ್ ಎಸ್ಟೇಟ್ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಅದೂ ಉತ್ತಮ ಗುಣಮಟ್ಟದ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ , ಇದು ಸಾಧಾರಣವಾಗಿ ದೀರ್ಘಕಾಲೀನ ಹೂಡಿಕೆ ಹೀಗಾಗಿ ಇಲ್ಲಿನ ಲಾಭ ನಷ್ಟ ಕೂಡ ತಕ್ಷಣಕ್ಕೆ ತಿಳಿಯುವುದಿಲ್ಲ ಹೀಗಾಗಿ ಅನಿಶ್ಚಿತತೆ ಇದನ್ನ ಅಪಾಯಕಾರಿ ಹೂಡಿಕೆಯ ಪಟ್ಟಿಯಲ್ಲಿ ಸೇರಿಸುವಂತಾಗಿದೆ.
 • ಮಾರ್ಕೆಟ್ ನ್ಯೂಟ್ರಲ್ ಫಂಡ್ಸ್ : ಮಾರುಕಟ್ಟೆಯಲ್ಲಿ ಕುಸಿತವಾದಾಗ ಹೆಚ್ಚಿನ ನಷ್ಟವಾಗದಂತೆ ತಡೆಯುವ ಇದರ ಜೊತೆಗೆ ದಿನ ನಿತ್ಯದ ಏರಿಳಿತಗಳಿಗೆ ತಡೆಗೋಡೆಯಂತೆ ನಿಲ್ಲುವ ಫಂಡ್ ಗಳ ಮೇಲಿನ ಹೂಡಿಕೆ ಮಾರ್ಕೆಟ್ ನ್ಯೂಟ್ರಲ್ ಫಂಡ್ಸ್ ಎನ್ನಿಸ್ಕೊಳ್ಳುತ್ತದೆ. ಜೊತೆಗೆ ಅರೋಗ್ಯಕರ ಲಾಭ ಕೂಡ ಸಿಗುತ್ತದೆ.
 • ಅಸೆಟ್ ಅಲೊಕೇಶನ್ ಫಂಡ್ಸ್ : ಅಸೆಟ್ ಕ್ಲಾಸ್ ನಲ್ಲಿ ವರ್ಗಿಕರಿಸಿ ಮಾಡಿದ ಹೂಡಿಕೆ ಅಂದರೆ ಡೆಟ್ , ಈಕ್ವಿಟಿ ಜೊತೆಗೆ ಗೋಲ್ಡ್ ಮೇಲೆ ಕೂಡ ಹೂಡಿಕೆ ಮಾಡಲಾಗುತ್ತದೆ , ಜೊತೆಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅದನ್ನ ಬದಲಾಯಿಸುವ ಅಥವಾ ಅಲೋಕೇಟ್ ಮಾಡುವ ಹೂಡಿಕೆಯನ್ನ ಆಸೆಟ್ ಅಲೋಕೇಷನ್ ಫಂಡ್ಸ್ ಎನ್ನುತ್ತಾರೆ.
 • ಗಿಫ್ಟ್ ಫಂಡ್ಸ್: ಹೂಡಿಕೆದಾರ ತನ್ನ ಪರಿವಾರದ ಜನಕ್ಕೆ ವರ್ಗಾಯಿಸಬಹುದಾದ ಹೂಡಿಕೆ ಇದಾಗಿರುತ್ತದೆ. ತನ್ನ ಪರಿವಾರದ ಸದಸ್ಯರ ಭವಿಷ್ಯವನ್ನ ಭದ್ರವಾಗಿಸಲು ಇಂತಹ ಹೂಡಿಕೆಯನ್ನ ಮಾಡಬಹುದು. ಆದರೆ ಇದನ್ನ ಪೂರ್ಣವಾಗಿ ಹೊಸ ಖರೀದಿ ಅಥವಾ ಹೂಡಿಕೆಗೆ ಬಳಸುವಂತಿಲ್ಲ , ಅಲ್ಪ ಭಾಗವನ್ನ ಬೇಕಾದ ಹಾಗೆ ಬಳಸಿಕೊಳ್ಳಬಹುದು.
 • ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ : ನಿಗದಿತ ವಲಯದ ವಿದೇಶಿ ಮಾರುಕಟ್ಟೆಗೆ ಇದನ್ನ ಲಿಂಕ್ ಮಾಡಲಾಗುತ್ತದೆ. ಭಾರತದಲ್ಲಿ ಇದನ್ನ ಟ್ರೇಡ್ ಮಾಡಿದಾಗ ಇದು ಬೇರೆ ದೇಶದ ಮಾರುಕಟ್ಟೆಯ ಏರಿಳಿತಕ್ಕೆ ಸಮವಾಗಿ ಏರಿಳಿತ ಕಾಣುತ್ತದೆ. ಇದು ರಿಯಲ್ ಟೈಮ್ ಆಗಿರುವುದರಿಂದ ಸದಾ ಏರಿಳಿತ ಕಾಣುತ್ತಿರುತ್ತದೆ.

ಇಲ್ಲಿ ಏಕೆ ಹೂಡಿಕೆ ಮಾಡಬೇಕು? ಇದರಿಂದ ಆಗುವ ಲಾಭಗಳೇನು?

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಅನುಭವ ಇಲ್ಲದವರು ,ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವವರು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯ ಆಳ ಅಗಲದ ಅರಿವಾಗುತ್ತದೆ. ಯಾವುದೇ ತೆರನಾದ ಸೇಫ್ಟಿ ನೆಟ್ ಇಲ್ಲದೆ ಧುಮುವುದು ಹೆಚ್ಚು ಅಪಾಯಕಾರಿ ಈ ನಿಟ್ಟಿನಲ್ಲಿ ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ . ಇದರಿಂದ ಅನೇಕ ಲಾಭಗಳಿವೆ ಅವುಗಳಲ್ಲಿ ಪ್ರಮುಖವಾದವು ಹೀಗಿವೆ :

 1. ಲಿಕ್ವಿಡಿಟಿ: ಇಲ್ಲಿನ ಹೂಡಿಕೆಯನ್ನ ನಮಗೆ ಬೇಕಾದ ಸಮಯದಲ್ಲಿ ಹೊರತೆಗೆದುಕೊಳ್ಳುವ ಅವಕಾಶವಿದೆ. ಗಮನಿಸಿ ಹೂಡಿಕೆಯ ಸಮಯದಲ್ಲೇ ನಮಗೆ ಎಷ್ಟು ಸಮಯ ಹಣ ಬೇಡ , ಯಾವಾಗ ಬೇಕಾಗುತ್ತದೆ ಎನ್ನುವುದನ್ನ ತಿಳಿಸಿ ಹೂಡಿಕೆ ಮಾಡಬಹುದು. ಮಧ್ಯದಲ್ಲಿ ತೆಗೆದು ಕೊಂಡರೆ ಯಾವುದೇ ಶುಲ್ಕವಿಲ್ಲ , ಆದರೆ ಅಂದಿನ ಮಾರುಕಟ್ಟೆ ಮೌಲ್ಯ ದಕ್ಕು
 2. ವೃತ್ತಿಪರರ ನೆರವು ಸಿಗುತ್ತದೆ : ಮಾರುಕಟ್ಟೆಯಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವ ಎರಡೂ ಇರುವ ಪ್ರೊಫೆಷನಲ್ ಗಳ ನೆರವು ಸಿಗುತ್ತದೆ. ಹೀಗಾಗಿ ಏನೂ ತಿಳಿಯದೆ ನೇರವಾಗಿ ಮಾರುಕಟ್ಟೆಗೆ ಧುಮುಕಿದಾಗ ಆಗುತ್ತಿದ್ದ ನಷ್ಟ ತಪ್ಪುತ್ತದೆ. ಹೆಚ್ಚಿನ ಜ್ಞಾನವಿಲ್ಲದೆ ಸಂಪತ್ತಿನ ವೃದ್ಧಿಗೆ ಸರಳ ಮಾರ್ಗ ಇದಾಗಿದೆ.
 3. ಡೈವರ್ಸಿಫಿಕೇಷನ್: ನಾವು ನಮ್ಮ ಬಳಿ ಇದ್ದ ಹಣವನ್ನ ನಿಗದಿತ ಸಂಸ್ಥೆ ಅಥವಾ ಷೇರಿನ ಮೇಲೆ ಹೂಡಿಕೆ ಮಾಡುತ್ತೇವೆ , ಆದರೆ ಮ್ಯೂಚುಯಲ್ ಫಂಡ್ ನಲ್ಲಿ ಬಹಳಷ್ಟು ವಲಯದ ವಿವಿಧ ಸಂಸ್ಥೆಯ ಷೇರುಗಳ ಮೇಲೆ ಹೂಡಿಕೆಯನ್ನ ಮಾಡಲಾಗುತ್ತದೆ. ಹೀಗಾಗಿ ಅಪಾಯ ವಿತರಣೆಯಾಗುತ್ತದೆ. ಒಂಟಿಯಾಗಿ ಮಾಡುವ ಹೂಡಿಕೆಗಿಂತ ಸಾಂಘಿಕ ಹೂಡಿಕೆಯಲ್ಲಿ ಹೆಚ್ಚು ಬಲವಿದೆ.
 4. ಸಾಮೂಹಿಕ ಮತ್ತು ಹೆಚ್ಚಿನ ಖರೀದಿಯಲ್ಲಿ ಉಳಿತಾಯ ಹೆಚ್ಚು: ಅರ್ಥ ಖರೀದಿ ಸಮಯದಲ್ಲಿ ಆಗುವ ಖರ್ಚು ಹೆಚ್ಚು ಖರೀದಿ ಮಾಡುವುದರಿಂದ ಕಡಿಮೆಯಾಗುತ್ತದೆ. ಇದನ್ನ ಲೊ ಕಾಸ್ಟ್ ಆಫ್ ಪರ್ಚೆಸ್ ಎನ್ನುತ್ತಾರೆ. ಕಮಿಷನ್ ಚಾರ್ಜಸ್ , ಪ್ರೋಸೆಸ್ ಫೀಸ್ ಇವುಗಳಲ್ಲಿ ಭಾರಿ ಉಳಿತಾಯವಾಗುತ್ತದೆ.
 5. ಸಿಪ್ - ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಸ್: ಒಮ್ಮೆಲೇ ಹೂಡಿಕೆ ಮಾಡಲು ಹಣವಿಲ್ಲದವರು ಪ್ರತಿ ತಿಂಗಳು ಇಷ್ಟು ಎಂದು ತಮ್ಮಿಷ್ಟದ ಫಂಡ್ ನಲ್ಲಿ ಹೂಡಿಕೆ ಮಾಡುತ್ತಾ ಹೋಗಬಹುದು. ಇದು ಎಲ್ಲರನ್ನೂ ಮಾರುಕಟ್ಟೆಗೆ ಕರೆತರುವುದರಲ್ಲಿ ಮತ್ತು ಕಡಿಮೆ ಹಣದಲ್ಲಿ ಮಾರುಕಟ್ಟೆಯ ಅನುಭವ ಪಡೆಯಲು ಸಹಾಯ ಮಾಡುತ್ತದೆ. ಕೇವಲ ಐನೂರು ರೂಪಾಯಿ ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ ನೀವು ಖಾತೆ ತೆರೆಯಬಹುದು.
 6. ಕೆಲವೊಂದು ಹೂಡಿಕೆಗಳು ತೆರಿಗೆಯನ್ನ ಉಳಿಸಲು ಕೂಡ ಸಹಕಾರಿಯಾಗಿವೆ.
 7. ಸುರಕ್ಷತೆ: ಮ್ಯೂಚುಯಲ್ ಫಂಡ್ ಗಳು ಹೆಚ್ಚು ಸುರಕ್ಷಿತವಲ್ಲ ಎನ್ನುವುದು ಜನ ಸಾಮಾನ್ಯರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿಬಿಟ್ಟಿದೆ. ಆದರೆ ಗಮನಿಸಿ ಇದು ನಮ್ಮ ಸೆಬಿ ಯ ರೂಪುರೇಶೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹೂಡಿಕೆ ಮಾಡುವ ಮುನ್ನ ನಾವು ಸೇವೆ ಪಡೆಯುತ್ತಿರುವ ಫಂಡ್ ಹೌಸ್ ಯಾವುದು , ಫಂಡ್ ಮ್ಯಾನೇಜರ್ ಯಾರು ಅವರ ಹಿಂದಿನ ಟ್ರ್ಯಾಕ್ ರೆಕಾರ್ಡ್ ನೋಡಿ ಹೂಡಿಕೆ ಮಾಡಿದರೆ , ಇಲ್ಲಿಯೂ ಬ್ಯಾಂಕ್ ನಲ್ಲಿ ಇಟ್ಟ ಹಣದ ಸುರಕ್ಷತೆ ಸಿಗುತ್ತದೆ.
 8. ಸ್ವಂತಂತ್ರ ಹೂಡಿಕೆದಾರರಾಗಲು ಸಹಕಾರಿ: ಆರಂಭಿಕ ಹೂಡಿಕೆದಾರನಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಮೂಲಕ ಮಾರುಕಟ್ಟೆಯಲ್ಲಿ ಸ್ವಂತಂತ್ರ ಹೂಡಿಕೆದಾರನಾಗಲು ಇದು ಚಿಮ್ಮು ಹಲಗೆಯಂತೆ ಸಹಾಯ ಮಾಡುತ್ತದೆ.

ಕೊನೆ ಮಾತು: ನಿಮಗೆಲ್ಲಾ ತಿಳಿದಿರಲಿ , ಯಾರಿಗೆ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳಲು ಸಮಯವಿರುವುದಿಲ್ಲ ಅಂತಹ ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಒಂದು ವರದಾನವಾಗಿದೆ. ಯಾರಿಗೆ ವೇಳೆಯಿದೆ ಆದರೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಪ್ರಾಕ್ಟಿಕಲ್ ಅನುಭವವಿಲ್ಲ ಅಂತಹವರೂ ಕೂಡ ಪ್ರಾರಂಭಿಕ ಹಂತದಲ್ಲಿ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಮಾರುಕಟ್ಟೆ ಹೇಗೆ ನಡೆಯುತ್ತದೆ , ಬದಲಾಗುತ್ತದೆ ಇತ್ಯಾದಿಗಳ ಸ್ಥೂಲ ಚಿತ್ರಣ ಇದರಿಂದ ಸಿಗುತ್ತದೆ. ಒಮ್ಮೆ ಮಾರುಕಟ್ಟೆಯ ನಾಡಿ ಮಿಡಿತ ತಿಳಿದ ನಂತರ ಸ್ವತಂತ್ರವಾಗಿ ಕೂಡ ಹೂಡಿಕೆ ಮಾಡಬಹುದು.


-ರಂಗಸ್ವಾಮಿ ಮೂಕನಹಳ್ಳಿ

muraram@yahoo.com


Stay up to date on all the latest ಅಂಕಣಗಳು news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp